ಭಾರತರತ್ನವು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದ್ದು, ಜನಾಂಗ, ಉದ್ಯೋಗ, ಸ್ಥಾನ ಅಥವಾ ಲಿಂಗದ ಭೇದವಿಲ್ಲದೆ ಯಾವುದೇ ಕ್ಷೇತ್ರದಲ್ಲಿ ನಾಗರಿಕ ಸಾಧನೆಯ ಸೇವೆಯನ್ನು ಗುರುತಿಸಿ ನೀಡಲಾಗುತ್ತದೆ.
ಭಾರತ ರತ್ನ ಎಂದರೇನು?
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಭಾರತ ಸರ್ಕಾರ ನೀಡುವ ಪರಮೋಚ್ಚ ಗೌರವವೇ ಭಾರತ ರತ್ನ. ಈ ಪ್ರಶಸ್ತಿಗೆ ಆಯ್ಕೆ ಆದವರಿಗೆ ಅಶ್ವತ್ಥ ಎಲೆಯ ಆಕಾರದಲ್ಲಿರುವ ಪದಕವನ್ನು ನೀಡಿ ಗೌರವಿಸಲಾಗುತ್ತದೆ.
ಭಾರತರತ್ನದ ಆರಂಭ
ಭಾರತ ಸರ್ಕಾರ 1954ರಲ್ಲಿಯಾವುದೇ ಕ್ಷೇತ್ರದಲ್ಲಿ ಸರ್ವೋಚ್ಚ ಸಾಧನೆ ಮಾಡಿದ ಸಾಧಕ ನಾಗರಿಕರಿಗೆ ಭಾರತ ರತ್ನ ನೀಡಲು ಪ್ರಾರಂಭವಾಯಿತು. ಸ್ವಾತಂತ್ರ್ಯ ಹೋರಾಟಗಾರ ಸಿ. ರಾಜಗೋಪಾಲಾಚಾರಿ , ಶಿಕ್ಷಣ ತಜ್ಞ ಮತ್ತು ದೇಶದ ಮೊದಲ ಉಪರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣನ್ , ಭೌತವಿಜ್ಞಾನಿ ಸಿ.ವಿ ರಾಮನ್ ಮೊದಲ ಬಾರಿ ಈ ಗೌರವಕ್ಕೆ ಪಾತ್ರರಾದರು. 1954 ರಿಂದ 2024 ವರೆಗೆ ಸುಮಾರು 48 ವ್ಯಕ್ತಿಗಳಿಗೆ ಪ್ರಶಸ್ತಿ ಸಿಕ್ಕಿದೆ.
ಭಾರತರತ್ನ ನೀಡಲು ಮೊದಲು ಶುರು ಮಾಡಿದಾಗ ಮರಣೋತ್ತರವಾಗಿ ನೀಡಲು ಯಾವುದೇ ಅವಕಾಶ ಇರಲಿಲ್ಲ. ಆದರೆ 1955ರಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು ಮರಣೋತ್ತರವಾಗಿ ನೀಡಲು ಅವಕಾಶ ಕಲ್ಪಿಸಲಾಯಿತು. 1966ರಲ್ಲಿ ಮೊದಲ ಮರಣೋತ್ತರ ಪ್ರಶಸ್ತಿಯನ್ನು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ನೀಡಲಾಯಿತು.
ಈ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ ಮತ್ತು ಸಾರ್ವಜನಿಕ ಸೇವೆಗಳಲ್ಲಿನ ಸಾಧನೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಆದರೆ ಡಿಸೆಂಬರ್ 2011 ರಲ್ಲಿ ತಿದ್ದುಪಡಿ ಮಾಡಿ ಯಾವುದೇ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಅರ್ಹರು ಎಂದು ಪರಿಗಣಿಸಲು ತೀರ್ಮಾನಿಸಲಾಯಿತು.
ಪ್ರಶಸ್ತಿ ನೀಡುವುದನ್ನು ಯಾರು ನಿರ್ಧರಿಸುತ್ತಾರೆ?
ಭಾರತರತ್ನ ಪ್ರಶಸ್ತಿಯ ಶಿಫಾರಸುಗಳಲ್ಲಿ ಪ್ರಧಾನಮಂತ್ರಿಗಳು ಕೆಲವು ಹೆಸರನ್ನು ಆಯ್ಕೆ ಮಾಡಿ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುತ್ತಾರೆ. ರಾಷ್ಟ್ರಪತಿಗಳು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ.