ಸ. ಗಿರಿಜಾಶಂಕರ,ಚಿಕ್ಕಮಗಳೂರು
ಭಾವನೆಗಳ ಆಭಿವ್ಯಕ್ತಿಯೇ ಭಾಷೆ; ಹಾಗೆಯೇ ಅದು ಅವ್ಯಕ್ತ ಮನಸ್ಸಿನ ವ್ಯಕ್ತ ರೂಪ ಸಹ. ನಮ್ಮ ಚಿಂತನೆ, ಆಲೋಚನೆ, ಭಾವ, ಭಾವನೆಗಳು ವ್ಯಕ್ತವಾಗುವುದೇ ಭಾಷೆಯ ಮೂಲಕ. ಮನುಷ್ಯ ಬದುಕಿನ ವಿವಿಧ ಆಚರಣೆ, ಸಂಸ್ಕೃತಿ ಸಂವಹನಗೊಳ್ಳೋದು ಭಾಷೆಯ ಮೂಲಕ. ಭಾಷೆಗಳ ಬಳಸದೆಯೂ ಸಂವಹನ ಸಾಧ್ಯ; ಆದರೆ ಅದಕ್ಕೊಂದು ಮಿತಿ ಇದೆ. ಭಾವ, ಸಂಕೇತ, ಸಂಜ್ಞೆಗಳ ಮೂರ್ತಾಭಿವ್ಯಕ್ತಿಯೇ ಭಾಷೆ ಎನ್ನಲಾಗಿದೆ. ವಿಶ್ವದಲ್ಲಿ ಜನ ಬದುಕು ಸಾಗಿಸುವ ಎಲ್ಲೆಡೆ ಭಾಷೆ ರೂಪುಗೊಂಡಿದೆ. ಈ ಲೋಕ ಸಹಸ್ರಾರು ಭಾಷೆಗಳ ಗೂಡು. ಕೆಲವಕ್ಕೆ ಲಿಪಿಯಿದ್ದರೆ, ಇನ್ನು ಕೆಲವು ಲಿಪಿ ರಹಿತ. ಕೇವಲ ಮಾತಿನ ಮೂಲಕವೇ ಸಂವಹನ. ಭಾಷೆ ವ್ಯಾವಹಾರಿಕವೂ ಹೌದು; ಭಾವನಾತ್ಮಕವೂ ನಿಜ. ಪ್ರತಿ ಭಾಷೆಗೂ ಒಂದು ಭೌಗೋಳಿಕ ಮಿತಿ ಇರುತ್ತದೆ. ಕೆಲವು ಭಾಷೆ ಮಾತ್ರ ಅದನ್ನು ದಾಟಿ ವಿಸ್ತಾರಗೊಳ್ಳುತ್ತದೆ. ವಿಸ್ತಾರಕ್ಕೊಳಪಡದ ಭಾಷೆ ವಿಸ್ತಾರಗೊಂಡಿರುವ ಭಾಷೆಯನ್ನು ಅವಲಂಬಿಸುವುದು ಅನಿವಾರ್ಯವಾಗುತ್ತದೆ. ವಿಸ್ತಾರಗೊಳ್ಳದೆ ಆ ಭಾಷೆ ತನ್ನ ಸೀಮಿತ ವಲಯದಿಂದಾಚೆಗೆ ವ್ಯಾವಹಾರಿಕವಾಗಿ ಅದು ಮುಂದಿನ ಸಾಲಿನಲ್ಲಿ ಅಸ್ತಿತ್ವ ಪಡೆಯುವುದು ಕಷ್ಟ.
“ಸಂಸ್ಕೃತಿ ಎಂಬುದು ಬದುಕಿನ ಬೆಂಬಲ ಪಡೆದು ನಿರಂತರವಾಗಿ ಹರಿದು ಬಂದಿರುವ ಜೀವನದಿ. ವ್ಯಕ್ತಿಯ ಮನಸ್ಸನ್ನು ಅರಳಿಸಿ ಅವನ ಮಾನವೀಯ ವಿಕಾಸಕ್ಕೆ ದಾರಿಹುಡುಕುವ ಮೂಲಕ ವಿಶ್ವಮಾನವ ಪ್ರಜ್ಞೆಯನ್ನು ಬೆಳೆಸುವ ವಿಚಾರಗಳು ಮತ್ತು ಮೌಲ್ಯಗಳು” ಎನ್ನುತ್ತಾರೆ ಪ್ರಾಜ್ಞರು. ಈ ವಿಚಾರ ಮತ್ತು ಮೌಲ್ಯಗಳನ್ನು ಜನಮಾನಸದಲ್ಲಿ ಬಿತ್ತಿ ಬೆಳೆಸುವುದು ಭಾಷೆ. ಆ ಹಿನ್ನೆಲೆಯಲ್ಲೇ ಭಾಷೆ ಕ್ಷೀಣಿಸಿದರೆ ಸಂಸ್ಕೃತಿಯೂ ತೆಳುವಾಗುತ್ತದೆ. ಯಾವುದೇ ಭಾಷೆಯನ್ನು ಬಳಸುವ ಸಂಕಲ್ಪ ಆ ಸಮುದಾಯಕ್ಕೆ ಇದ್ದಾಗ ಮಾತ್ರ ಆ ಭಾಷೆ ಬೆಳೆಯುತ್ತದೆ, ಉಳಿಯುತ್ತದೆ. ಬದುಕಿಗೆ ಭಾಷೆ ಅನಿವಾರ್ಯ, ಹಾಗೆಯೇ ಭಾಷೆಗೂ ಬದುಕು ಅಗತ್ಯ. ಭಾಷೆ ನಮ್ಮ ಸಂಸ್ಕೃತಿಯ ವಾಹಕ. ಆದರೆ ಈ ಭಾಷೆಯನ್ನು ಬಳಸುವ ಮನಸ್ಸು ಜನರಲ್ಲಿರಬೇಕು. ಆ ಇರಾದೆ ಕ್ಷೀಣಗೊಂಡರೆ ಆ ಭಾಷೆಯೂ ಕ್ಷೀಣಗೊಳ್ಳುತ್ತದೆ. ಪ್ರತಿ ಭಾಷೆಗೂ ತನ್ನತನವಿರಬೇಕು. ಅದೇ ಆ ಭಾಷೆಯ ಚೈತನ್ಯ. ಭಾಷೆಯೊಂದರಲ್ಲಿ ಆ ದೇಶದ, ನಾಡಿನ ಇತಿಹಾಸ, ಸಂಸ್ಕೃತಿಗಳೂ ಒಳಗೊಂಡಿರುತ್ತದೆ. ಅವುಗಳ ಸ್ಮೃತಿಯಿಂದ ಪಲಾಯನಗೊಂಡರೆ ಭಾಷೆ ಅಷ್ಟರ ಮಟ್ಟಿಗೆ ತೆಳುವಾಗುತ್ತದೆ ಅಥವಾ ಭಾಷೆ ನಶಿಸುತ್ತಾ ಬಂದರೆ ಅವೂ ಮರೆಯಗುತ್ತವೆ.
ಭಾರತ ದೇಶವನ್ನು ಭಾಷೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತಾ ಸಾಗಿದರೆ, ಇಲ್ಲಿ ಚಕ್ಷು ಹಾಗು ಶ್ರವಣ ಭಾಷೆಗಳಿವೆ. ಈ ದೇಶದಲ್ಲಿ ಅಂದಾಜು 780 ಭಾಷೆಗಳಿವೆ; ಅದರಲ್ಲಿ 250 ಭಾಷೆಗಳು ಕ್ಷೀಣಿಸುತ್ತಾ ಬಂದು ನಶಿಸಿವೆ. 122 ಭಾಷೆಗಳನ್ನು 10,000 ಸಾವಿರಕ್ಕಿಂತ ಹೆಚ್ಚು ಜನ ಮಾತನಾಡುತ್ತಿದ್ದರೆ, ಉಳಿದ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಇನ್ನೂ ಕೆಳಗಿಳಿದಿದೆ.
ಭಾರತದಲ್ಲಿ 19,500 ವ್ಯಕ್ತಿ ವಿಶಿಷ್ಟ ಭಾಷಾ ಪ್ರಭೇದಗಳಿವೆ. ಭಾರತ ಸಂವಿಧಾನದಲ್ಲಿ ಹಿಂದಿ ಈ ದೇಶದ ಅಧಿಕೃತ ಭಾಷೆ ಎಂದು 1949ರ ಸೆ.14ರಂದು ಸ್ವೀಕರಿಸಿತಲ್ಲದೆ ಹೆಚ್ಚುವರಿಯಾಗಿ ಆಂಗ್ಲ ಭಾಷೆಯನ್ನೂ ಆಡಳಿತದ ಉದ್ದೇಶದಿಂದ ಬಳಸಬಹುದೆಂದು ತೀರ್ಮಾನಿಸಿತು. 195ರ ಭಾಷಾ ನೀತಿ 15 ವರ್ಷದ ನಂತರ 1965ರಲ್ಲಿ ಬದಲಾಗಿ ಹಿಂದಿ, ಇಂಗ್ಲೀಷ್ ಕೇಂದ್ರ ಸರ್ಕಾರದ ಅಧಿಕೃತ ಭಾಷೆಯಾದರೆ ಹಿಂದಿಯೂ ಸೇರಿದಂತೆ 14 ಭಾಷೆಗಳು ಆಯಾ ರಾಜ್ಯದ ಅಧಿಕೃತ ಭಾಷೆಗಳಾದವು. ಪ್ರಸ್ತುತ ಅದನ್ನು 22ಭಾಷೆಗಳಿಗೆ ಹೆಚ್ಚಿಸಲಾಗಿದೆ.
ಆಯಾ ರಾಜ್ಯಗಳಲ್ಲಿ ಅಂದರೆ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲೆಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಓರಿಯಾ, ಪಂಜಾಬಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಉರ್ದು, ಬೋಡೊ, ಸಂತಾಲಿ, ಮೈಥಿಲಿ ಮತ್ತು ಡೊಗ್ರಿ ಸೇರಿ 22 ಭಾಷೆಗಳನ್ನು ಅಧಿಕೃತ ಭಾಷೆಗಳೆಂದು ತೀರ್ಮಾನಿಸಲಾಗಿದೆ. ಇದರಲ್ಲಿ ಅಸ್ಸಾಮಿ,ಬೆಂಗಾಲಿ,ಗುಜರಾತಿ,ಹಿಂದಿ, ಕನ್ನಡ, ಕಾಶ್ಮೀರಿ, ಮಲೆಯಾಳಂ, ಮರಾಠಿ, ಓರಿಯಾ, ಪಂಜಾಬಿ, ಸಂಸ್ಕೃತ, ತಮಿಳು, ತೆಲುಗು ಮತ್ತು ಉರ್ದುವನ್ನು ಆಯಾ ರಾಜ್ಯದ ಭಾಷೆಗಳೆಂದು ಹೇಳಿದೆ.
ಭಾರತ ಭಾಷೆಯಲ್ಲಿ ಬಹುತ್ವವನ್ನು ಹೊಂದಿರುವ ದೇಶ. ಇಲ್ಲಿ ಯಾವ ಭಾಷೆಯನ್ನೂ ಕೇಂದ್ರ ಸರ್ಕಾರ ರಾಷ್ಟ್ರೀಯ ಭಾಷೆ ಎಂದು ಘೋಷಿಸಿಲ್ಲ. ಹಿಂದಿ ಮಾತನಾಡುವ ರಾಜ್ಯಗಳು ಸೇರಿದಂತೆ ಆಯಾ ನಾಡ ಭಾಷೆ ಅಥವ ಆ ಪ್ರಾದೇಶಿಕ ಭಾಷೆಗಳಲ್ಲಿ ಆಡಳಿತ ನಡೆಸಲು, ನ್ಯಾಯಾಲಯಗಳಲ್ಲೂ ಇಂಗ್ಲೀಷ್ ಜೊತೆಗೆ ಆಯಾ ನಾಡ ಭಾಷೆಗಳಲ್ಲಿ ನ್ಯಾಯಾಲಯದ ಕಾರ್ಯಕಲಾಪ ನಡೆಸಲು ಅವಕಾಶ ನೀಡಲಾಗಿದೆ. ಲಿಪಿ ಇರುವ, ಲಿಪಿ ಇಲ್ಲದ ಬಹುಭಾಷೆಗಳ ದೇಶ ಇದಾಗಿದೆ. ಈ ಹಿನ್ನೆಲೆಯಲ್ಲಿ ಹಿಂದಿ ಮಾತನಾಡುವ ಭಾಷಿಗರ ಸಂಖ್ಯೆ ದೇಶದಲ್ಲಿ ಶೇ.43.63 ರಷ್ಟಿದ್ದರೆ, ಉಳಿದ ಪ್ರಮುಖ ಭಾಷೆಗಳಾದ (ಶೇಕಡಾವಾರು) ಬೆಂಗಾಲಿ-8.03, ಮರಾಠಿ-6.86, ತೆಲಗು-6.70, ತಮಿಳು-5.70, ಗುಜರಾತಿ-4.19, ಕನ್ನಡ-3.61, ಉರ್ದು- 4,19 ಮತ್ತು ಇಂಗ್ಲೀಷ್-0.02 ಎಂದು 2017ರ ಜನಸಂಖ್ಯಾ ವರದಿ ಹೇಳುತ್ತದೆ.
ಈ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಪ್ರತಿ ರಾಜ್ಯದ ಭಾಷೆಯೂ ಆಯಾ ರಾಜ್ಯದ ಭೌಗೋಳಿಕ ಮಿತಿಗೆ ಒಳಪಟ್ಟರೆ ಹಿಂದಿ ಮಾತ್ರ 9 ರಾಜ್ಯಗಳಲ್ಲಿ ಪ್ರಚಲಿತವಿದೆ.ಈ ಬಹುತ್ವ ಮತ್ತು ಭೌಗೊಳಿಕ ಮಿತಿ ಅವು ವ್ಯಾವಹಾರಿಕವಾಗಿ ವಿಸ್ತಾರಗೊಂಡಿರುವ ಹಿಂದಿ ಅಥವ ಇಂಗ್ಲೀಷ್ ಭಾಷೆಯನ್ನು ಅವಲಂಬಿಸುವ ಅನಿವಾರ್ಯತೆ ಇದೆ. ಇದರ ಜೊತೆಗೆ ದಕ್ಷಿಣ ಭಾರತದಲ್ಲಿ ತಮಿಳುನಾಡು,ಆಂಧ್ರ (ತೆಲಂಗಾಣ ಸೇರಿ), ಕೇರಳ, ಮಹಾರಾಷ್ಟದಲ್ಲಿ ಅಲ್ಲಿನ ನಾಡ ಭಾಷೆ ಬಳಕೆಗೆ ಜನ ಒತ್ತು ಕೊಟ್ಟು, ತಮ್ಮ ರಾಜ್ಯದ ಭಾಷೆಯನ್ನೇ ಬಳೆಸಬೇಕೆಂಬ ದೃಢ ಸಂಕಲ್ಪ ಹೊಂದಿರುವುದರಿಂದ ಆ ರಾಜ್ಯಗಳ ಜನರಿಗೆ ಇಂಗ್ಲೀಷ್ ಒಂದು ತಮ್ಮ ಭಾಷೆ ಬೆಳವಣಿಗೆಗೆ ತೊಡಕಿನ ಭಾಷೆಯಾಗಿ ಅಷ್ಟಾಗಿ ಕಾಣುತ್ತಿಲ್ಲ. ತಮಿಳುನಾಡು ಹೊರತು, ಉಳಿದ ಈ ರಾಜ್ಯಗಳಲ್ಲಿ ಹಿಂದಿ ಬಳಕೆಯೂ ಸ್ವಲ್ಪ ಮಟ್ಟಿಗಿದೆ. ತನ್ನ ರಾಜ್ಯ ಭಾಷೆ ಬೆಳವಣಿಗೆಯಲ್ಲಿ ಗೊಂದಲ ಹಾಗು ಎಡರು ತೊಡರನ್ನೆದುರಿಸುತ್ತಿರುವ ರಾಜ್ಯವೆಂದರೆ ಕರ್ನಾಟಕ ಮಾತ್ರ.
ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರ ಇಂದಿಗೂ ಜಾರಿಯಲ್ಲಿದೆ; ಆದರೆ ಪಕ್ಕದ ತಮಿಳುನಾಡಿನಲ್ಲಿ ಇದು ಜಾರಿಯಲ್ಲಿಲ್ಲ. ತ್ರಿಭಾಷಾ ಸೂತ್ರದ ಪ್ರಕಾರ ಶಾಲಾ ವಿದ್ಯಾರ್ಥಿಗಳು ರಾಜ್ಯದ ಭಾಷೆ ಕನ್ನಡದ ಜೊತೆಗೆ ಹಿಂದಿ ಮತ್ತು ಇಂಗ್ಲೀಷನ್ನೂ ಕಲಿಯಬೇಕಾಗಿದೆ. ಪಠ್ಯಕ್ರಮದಲ್ಲೂ ಸೇರಿದೆ. ಇತ್ತೀಚಿಗೆ ಆಂಗ್ಲಮಾಧ್ಯಮ ಶಾಲೆಗಳ ಹಾವಳಿ ಹೆಚ್ಚಾದಂತೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯ ಕೊರತೆ ನಿವಾರಣೆಗೆ ಪೋಷಕರ ಒತ್ತಡವೂ ಸೇರಿ ಒಂದನೆಯ ತರಗತಿಯಿಂದಲೇ ಇಂಗ್ಲೀಷ್ ಕಲಿಕೆಯೂ ಆರಂಭವಾಗಿದೆ. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಸ್ಥಾನದಲ್ಲಿಲ್ಲ. ಕರ್ನಾಟಕ, ಆಂಧ್ರ, ತಮಿಳುನಾಡು ಮತ್ತು ಕೇರಳ, ಮಹಾರಾಷ್ಟ್ರಗಳಿಗೆ ಅಂಟಿಕೊಂಡಿರುವುದರಿಂದ, ಆ ಭಾಷಿಗರೂ ಇಲ್ಲಿ ವಾಸಿಸುವುದು,ಆ ರಾಜ್ಯಗಳೊಡನೆ ಇರುವ ಕೊಡುಕೊಳ್ಳುವಿಕೆಗಳಿಂದ ದ್ವಿಭಾಷೆ ಕಲಿಕೆ ಗಡಿಪ್ರದೇಶದಲ್ಲಿ ಅನಿವಾರ್ಯವಾದರೆ, ಆ ರಾಜ್ಯಗಳ ಜನ ತಮ್ಮ ಭಾಷೆ ಮರೆಯದೇ ಕನ್ನಡಿಗರು ತಮ್ಮ ಭಾಷೆಯನ್ನು ಕಲಿಯಲೇ ಬೇಕಾದ ಸ್ಥಿತಿಯನ್ನು ನಿರ್ಮಿಸಿದ್ದು, ಕನ್ನಡವನ್ನು ಹಿಮ್ಮೆಟ್ಟಿಸುವ ವಾತಾವರಣ ಗೋಚರಿಸುತ್ತಿದೆ. ಮತ್ತೊಂದು ಆತಂಕದ ಸಂಗತಿಯೆಂದರೆ, ಇಲ್ಲಿ ವಾಸಿಸುವ ಕನ್ನಡೇತರರು ತಮ್ಮ ಭಾಷೆ ಮತ್ತು ಕನ್ನಡ ಕಲಿತ ದ್ವಿಭಾಷಿಕರಾಗದೆ, ತಮ್ಮ ಭಾಷೆಯೊಂದಿಗೆ ಆಂಗ್ಲಭಾಷೆಯನ್ನು ಕಲಿತ ದ್ವಿಭಾಷಿಗಳಾಗುತ್ತಿರುವುದು. ಈ ಅಪಾಯ ಬಹುತೇಕ ನಗರಗಳಲ್ಲಿ ಹೆಚ್ಚಾಗಿ ಕಂಡು ಬಂದರೆ, ನಿಧಾನವಾಗಿ ಗ್ರಾಮಗಳತ್ತಲ್ಲೂ ವ್ಯಾಪಿಸುವ ದಿನಗಳು ದೂರವೆನಿಲ್ಲವೆನಿಸುತ್ತದೆ. ನಗರಗಳಲ್ಲಿ ತಾಯಿಯ ಮೊಲೆಹಾಲಿನ ಜೊತೆಯೇ ಕನ್ನಡವನ್ನು ಕಲಿಯುತ್ತಾ ಬಂದವರಲ್ಲೂ ಕನ್ನಡ ಕೇವಲ ಮನೆಯಲ್ಲಿ ಒಂದು ಸಂವಹನದ ಮಟ್ಟಿಗೆ ಸೀಮಿತವಾಗಿ, ಇಂಗ್ಲೀಷ್ ಬಳಕೆ ಹೆಚ್ಚಾಗುತ್ತಿದೆ. ನಮ್ಮ ನಿತ್ಯದ ಮಾತಿನಲ್ಲೂ ಕನ್ನಡದ ಸೂಕ್ತ ಪದಗಳಿದ್ದರೂ ಅದನ್ನು ಬಳಸದೆ, ಆಂಗ್ಲ ಪದವನ್ನು ಸೇರಿಸಿ ಮಾತಾಡುತ್ತಾ, ಕೆಲವು ಕನ್ನಡ ಪದಗಳು ಮರತೇ ಹೋಗಿ ಮರೆಯಾಗುತ್ತಿವೆ.
ಕನ್ನಡದ ‘ಅಮ್ಮ’ಪದ ಕೇಳಿದಾಕ್ಷಣ ತಾಯಿಯ ಅನಂತ ಸಾಧ್ಯತೆಗಳನ್ನು ನಮ್ಮ ಪ್ರಜ್ಞೆಗೆ ಪಕ್ಕನೆ ತರುತ್ತದೆ. ಈ ಶಕ್ತಿ ಮಮ್ಮಿ, ಮಾಮ್ಗೆ ಇರುವುದಿಲ್ಲ. ಇನ್ನು ಅಂಕಲ್-ಆಂಟಿ ಪದ ಬಳಕೆ ಮಾವ, ಚಿಕ್ಕಪ್ಪ, ದೊಡ್ಡಪ್ಪ ಈ ರೀತಿ ಸಂಬಂಧ ಸೂಚಕಗಳನ್ನೇ ನುಂಗಿಬಿಟ್ಟಿದೆ.
ಕರ್ನಾಟಕವನ್ನು ಕೇವಲ ಅದರ ಭೌಗೋಳಿಕ ನೆಲೆಯಿಂದ ಮಾತ್ರ ಗುರುತಿಸುವುದಿಲ್ಲ; ಕನ್ನಡ ಭಾಷೆ ಸಹ ಅದರ ಅಸ್ಮಿತೆಯ ಭಾಗ. ಕನ್ನಡ ಮಾತನಾಡುವ ಪ್ರದೇಶಗಳನ್ನು ಗುರುತಿಸಿ ಈ ನಾಡು ರಚನೆಯಾಗಿದೆ. ಕನ್ನಡನಾಡು ಬ್ರಿಟಿಷರ ಆಳ್ವಿಕೆಯಲ್ಲಿದ್ದಾಗ ಹೈದರಾಬಾದ್ ಕರ್ನಾಟಕ, ಮಹಾರಾಷ್ಟçದ ಗಡಿಭಾಗ, ಮದ್ರಾಸ್ ಪ್ರಸಿಡೆನ್ಸಿ, ಮೈಸೂರು ಪ್ರಾಂತ್ಯ ಈ ರೀತಿ ಗುರುತಿಸಲಾಗುತ್ತಿತ್ತು. ಇವುಗಳಲ್ಲಿ ಇಂಗ್ಲೀಷಿನ ತೀವ್ರ ಪ್ರಭಾವಕ್ಕೆ ಒಳಗಾಗಿದ್ದು, ಅಂದಿನ ಮೈಸೂರು ಪ್ರಾಂತ್ಯ ಅಥವಾ ಇಂದಿನ ಹಳೇ ಮೈಸೂರು ಪ್ರದೇಶಗಳು. ಈಗಲೂ ಕನ್ನಡದ ಬಲ, ಹೆಚ್ಚಿನ ಸಂವಹನ ಆ ಭಾಗಗಳಲ್ಲಿ ಉಳಿದುಕೊಂಡಿದೆ, ಆದರೆ ಮೈಸೂರು ಪ್ರಾಂತ್ಯದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ಕಡೆ ಕನ್ನಡ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ.
ಆಡಳಿತ ಭಾಷೆಯಾಗಿ ಕನ್ನಡ ಸರ್ಕಾರದ ಮಟ್ಟದಲ್ಲಿ ಇದೆ. ಆದರೆ ಇದು ಕನ್ನಡ ಬಳಕೆಯ ಅನಿವಾರ್ಯತೆಗೆ ಒತ್ತು ನೀಡುತ್ತಿಲ್ಲ.
ನ್ಯಾಯಾಂಗ ವ್ಯವಸ್ಥೆ ಸೇರಿದಂತೆ ವೃತ್ತಿಪರ ಕೋರ್ಸ್ಗಳಲ್ಲೂ ಕನ್ನಡ ಬಳಕೆ ತೀರಾ ಗೌಣ.ಇದಕ್ಕೆ ಕಾರಣವೂ ಇದೆ. ಬ್ರಿಟಿಷರು ಆಡಳಿತ ಹಸ್ತಾಂತರಿಸಿ ಹೋದಂತೆ, ಕನ್ನಡವನ್ನು ಬೆಳೆಸುವ ಕೆಲಸವನ್ನು ಸರ್ಕಾರ ಮಾಡಲು ಮುಂದಾಗಲಿಲ್ಲ. ಅದಕ್ಕೂ ಹೋರಾಡ ಬೇಕಾಯಿತು. ಈ ನಿಟ್ಟಿನಲ್ಲಿ ತಮಿಳುನಾಡು ಹಿಂದಿ ಮತ್ತು ಸಂಸ್ಕೃತ ಸೇರಿದಂತೆ ಪ್ರಚಲಿತವಿದ್ದ ಪದಗಳಿಗೆ ಜನಪದ ಸೇರಿದಂತೆ ಹಲವು ಮೂಲಗಳನ್ನು ತಡಕಿ ತಮಿಳುಭಾಷೆಯನ್ನು ಪರಿಪುಷ್ಟಗೊಳಿಸಿತು. ಆ ರೀತಿಯ ಗಂಭೀರ ಪ್ರಯತ್ನ ಕರ್ನಾಟಕದಲ್ಲಾಗಲಿಲ್ಲ. ಇಂದು ಕಂಪ್ಯೂಟರ್ ಬಳಕೆಯಲ್ಲಿ ಕನ್ನಡ ಬಳಕೆ ಅಭಿವೃದ್ಧಿ ಹೊಂದಿದೆ. ತಂತ್ರಾಂಶಗಳೂ ಸಿದ್ಧವಾಗಿ ಬಳಕೆಗೆ ಬಂದಿವೆ. ಆದರೆ ಕರ್ನಾಟಕದ ಕನ್ನಡ ಸಮಗ್ರ ಸೊಗಡನ್ನು ನೀಡುತ್ತಾ ಹೆಚ್ಚಿನ ಆಲೋಚನೆ ನಡೆಯದೆ ಶಿಷ್ಟ ಕನ್ನಡದ ಬಳಕೆಗದು ಸೀಮಿತವಾಗಿದೆ. ಕನ್ನಡ ಭಾಷೆಯ ವಿಸ್ತಾರತೆಯನ್ನು ಬೆಳೆಸುವಲ್ಲಿ ಸರ್ಕಾರದ ಜೊತೆಗೆ ಕನ್ನಡಿಗರೂ ಕೈಜೋಡಿಸಬೇಕಾಗಿದೆ.
ವಿಸ್ತಾರವಾಗುತ್ತಿರುವ ಮಾರುಕಟ್ಟೆ, ಹೊಸಿಲು ದಾಟಿ ಒಳ ಬಂದಿರುವ ಜಾಗತೀಕರಣದ ಪ್ರಭಾವ, ಸಾಫ್ಟ್ವೇರ್ ಸಂಸ್ಥೆಗಳ ಸಾಗರದಾಚೆಯ ನಿತ್ಯ ಸಂಪರ್ಕಕ್ಕಾಗಿ ಸಧ್ಯಕ್ಕೆ ಇಂಗ್ಗೀಷ್ ಭಾಷೆಯನ್ನಂತೂ ಉಪಯೋಗಿಸಲೇ ಬೇಕಾಗಿದೆ. ಆದರೆ ಅದಕ್ಕಾಗಿ ಮಾತೃಭಾಷೆಯನ್ನು ನಾಡಿನ ಭಾಷೆಯನ್ನು ಮರೆಯಬೇಕಾಗಿಲ್ಲ.ಕನ್ನಡ ಬಳಕೆಯ ಸಂಕಲ್ಪ ದೃಢವಾದಷ್ಟೂ ವ್ಯಾವಹಾರಿಕ ವಾಗೂ ಅನ್ಯಭಾಷೆಯ ಮಂದಿ ಸಹ ತಮ್ಮ ಆಲೋಚನೆಗಳನ್ನು ಬದಲಿಸಿಕೊಳ್ಳುತ್ತಾರೆ. ವಸಾಹತುಗಳಾಗಿದ್ದ ಅನೇಕ ದೇಶಗಳಲ್ಲಿ ದೇಶೀಯ ಅಥವಾ ಪ್ರಾದೇಶಿಕ ಭಾಷೆ ಆ ಗುರುತ್ವಾಕರ್ಷಣೆಯಿಂದ ಹೊರಬರುವ ಪ್ರಯತ್ನದಿಂದ ಸಫಲವಾಗಿದೆ. ಬಹುಭಾಷೆಗಳ, ಅದರ ಜೊತೆಗೆ ಲಿಪಿಯಿಲ್ಲದ ಉಪಭಾಷೆಗಳನ್ನು ಒಳಗೊಳಿಸಿಕೊಂಡಿರುವ ಭಾರತದಲ್ಲಿ ರಾಷ್ಟ್ರೀಯ ಭಾಷೆಯೊಂದನ್ನು ಜಾರಿಗೊಳಿಸುವುದು ಅಸಾಧ್ಯದ ಮಾತು. ಒಂದು ಭಾಷೆಯಲ್ಲಿ ಬದುಕು ಸಾಗಿಸುವ ಜನಕ್ಕೆ ಆ ಭಾಷೆ ಹೃದಯದ ಭಾಷೆ. ಅದು ಅವರ ಸಾಂಸ್ಕೃತಿಕ ಮೌಲ್ಯ; ಆ ಜನಾಂಗದ ಅಸ್ತಿಭಾರ. ಮಾತೃಭಾಷೆ ಕ್ಷೀಣಿಸಿದರೆ, ಒಂದು ಸಂಸ್ಕೃತಿಯನ್ನೇ ಕಳೆದುಕೊಂಡಂತೆ. ಭಾಷಾ ತಜ್ಞರ ಪ್ರಕಾರ ಮಾತೃಭಾಷೆ ಅದು ಅವರ ದೇಹದ ರಕ್ಷಾ ಕವಚ, ಉಸಿರಾಡುವ ಗಾಳಿ, ತನ್ನೆಲ್ಲಾ ಭಾವನೆಗಳು ಎಂದು. ಒಂದು ಭಾಷೆ ಕ್ಷೀಣಗೊಳ್ಳುತ್ತಾ ಹೋದರೆ ಆ ಭಾಷೆಯಷ್ಟೇ ದುರ್ಬಲವಾಗುವುದಿಲ್ಲ, ಅದನ್ನು ಮಾತನಾಡುವ ಜನ ಸಹ ತಮ್ಮ ಅಸ್ಮಿತೆ ಕಳೆದುಕೊಳ್ಳುತ್ತಾರೆ. ಒಂದು ಸಂಸ್ಕೃತಿ- ಪರಂಪರೆಯೇ ದುರ್ಬಲವಾಗುತ್ತಾ ಸಾಗುತ್ತದೆ. ಬ್ರಿಟಿಷರು ಭಾರತದಲ್ಲಿ ಆಳ್ವಿಕೆ ಆರಂಭಿಸಿದಾಗ, ಆಂಗ್ಲ ಶಿಕ್ಷಣ ತಜ್ಞ ಮೆಕಾಲೆ ಹೇಳಿದ್ದು ಈ ರೀತಿ ” ನಾವು ಪ್ರಸ್ತುತ ಒಂದು ವರ್ಗವನ್ನು ರೂಪಿಸಬೇಕು. ಆ ವರ್ಗ ನಮ್ಮ (ಆಂಗ್ಲರು) ಹಾಗು ನಾವು ಆಳುತ್ತಿರುವ ಲಕ್ಷಾಂತರ ಮಂದಿಯ ನಡುವ ದುಭಾಷಿಗಳಂತೆ ವರ್ತಿಸಬೇಕು. ಆ ವರ್ಗ ರಕ್ತ, ಬಣ್ಣದಲ್ಲಿ ಭಾರತೀಯರಾಗಿದ್ದು, ರುಚಿ, ಅಭಿರುಚಿಗಳಲ್ಲಿ ನೀತಿ, ಅಭಿಪ್ರಾಯದಲ್ಲಿ ಭೌದ್ದಿಕತೆಯಲ್ಲಿ ಆಂಗ್ಲರಾಗಿರಬೇಕೆಂದು”. ಮೆಕಾಲೆಯ ಈ ಹೇಳಿಕೆಯ ನಡುವೆಯೂ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಯೋರ್ವ ಪ್ರಾದೇಶಿಕ ಭಾಷೆಯ ಪರವಾಗಿ ತನ್ನ ಸ್ಪಷ್ಟ ಅಭಿಪ್ರಾಯ ಹೊರಹಾಕಿದ್ದ. ಕೆಲವು ವರ್ಷದ ನಂತರ ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಯ ಬಳಕೆ ಆರಂಭವಾಯಿತು. ಅದರೆ ಕರ್ನಾಟಕದಲ್ಲಿ ಮೆಕಾಲೆ ಮನಸ್ಥಿತಿಯಿಂದ ಪೂರ್ಣವಾಗಿ ಹೊರಬರದ ಅಧಿಕಾರಶಾಹಿ ಹಾಗು ಅಧಿಕಾರಸ್ತ ಜನಪ್ರತಿನಿಧಿಗಳು ಇನ್ನೂ ಈಗಲೂ ಇದ್ದಾರೆ. ತನ್ನ ಮಾತೃಭಾಷೆ ಅಥವಾ ನಾಡ ಭಾಷೆಯ ತಿಳುವಳಿಕೆ, ಬಳಕೆಯನ್ನು ಅರಿಯದ ಯಾವ ವ್ಯಕ್ತಿಯೇ ಆಗಲಿ ಅನ್ಯಭಾಷೆಯೊಂದನ್ನು ಅತ್ಯಂತ ಸಮರ್ಥವಾಗಿ ತನ್ನ ಭಾಷೆಯನ್ನಾಗಿ ಮಾಡಿಕೊಳ್ಳಲಾರನೆಂದು ಕೆಲವು ತಜ್ಞರು ಹೇಳಿದ್ದಾರೆ. ಪ್ರಾದೇಶಿಕ ಭಾಷೆ ಸರಿಯಾಗಿ ಮನನವಾಗದೆ ಅನ್ಯಭಾಷೆ ಮೂಲಕ ಸಮರ್ಥ ಕಲಿಕೆ ಬಹುತೇಕ ಅಸಾಧ್ಯವಾಗುತ್ತದೆ. ನಮ್ಮಲ್ಲಿ ತ್ರಿಭಾಷಾ ಸೂತ್ರ ಸೇರಿದಂತೆ ಭಾಷಾ ಮಾಧ್ಯಮದ ಗೊಂದಲದಿಂದ ಕಲಿಕಾ ಸಾಮರ್ಥ್ಯದಲ್ಲೂ ಗೊಂದಲಗಳು ತಲೆ ಎತ್ತುತ್ತಿವೆ.
ಇತ್ತೀಚೆಗೆ ರಾಜ್ಯ ಸರ್ಕಾರ ವೃತ್ತಿಪರ ಕೋರ್ಸ್ಗಳ ಪಠ್ಯಕ್ರಮವನ್ನು ಕನ್ನಡದಲ್ಲಿ ಅನುವಾದಿಸಿ ತರುವುದಾಗಿ ಹೇಳಿದೆ. ನೂತನ ಶಿಕ್ಷಣ ನೀತಿಯಲ್ಲೂ ಬೋಧನೆಗೆ ಆಯ್ದುಕೊಂಡ ಭಾಷೆ ಮಾತೃಭಾಷೆಯಾದಾಗ ಮಗುವಿಗೆ ಅರ್ಥವಾಗುತ್ತದೆ. ಜೊತೆಗೆ ಪ್ರಾದೇಶಿಕ ಹಾಗು ವಿದೇಶ ಭಾಷಾ ಕಲಿಕೆಗೂ ಅವಕಾಶವಾಗುತ್ತದೆ ಎಂದಿದೆ. ಕರ್ನಾಟಕದಲ್ಲಿ ಪೋಷಕರಿಗೂ ತಮ್ಮ ಮಗು ಇಂಗ್ಲೀಷಿನಲ್ಲಿ ಕಲಿತರೇನೇ ಅದರ ಭವಿಷ್ಯ ಎಂಬ ಬಲವಾದ ನಂಬಿಕೆ ಸಹ, ಇಂಗ್ಲೀಷ್ ಇಂದೂ ಸಹ ಒಂದು ಪ್ರಬಲ ಭಾಷೆಯಾಗಿಯೇ ಉಳಿಯಲು ಕಾರಣವಾಗಿದೆ. ಕೇಂದ್ರ ಸರ್ಕಾರ ಪ್ರಸ್ತುತ ಯಾವ ಭಾಷೆಯನ್ನೂ ರಾಷ್ಟ್ರೀಯ ಭಾಷೆಯೆಂದು ಘೋಷಿಸಿಲ್ಲ; ಆದರೆ ಸಂಸತ್ತಿನ ಶೇ.70-80ರಷ್ಟು ಚರ್ಚೆಗಳು ಹಿಂದಿ ಅಥವಾ ಇಂಗ್ಲೀಷಿನಲ್ಲೇ ನಡೆಯುತ್ತಿವೆ, ಪ್ರಾದೇಶಿಕ ಭಾಷೆಯಲ್ಲಿ ಮಾತನಾಡಬಹುದಾದರೂ ಅದರ ಬಳಕೆ ಗೌಣವಾಗಿದೆ. 1950ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆ, ಮೊದಲು 14 ನಂತರ 22 ಭಾಷೆಗಳಿಗೆ ಕೊಟ್ಟ ಅಧಿಕೃತ ಭಾಷೆಯ ಸ್ಥಾನ, 60ರ ದಶಕದಲ್ಲಿ ಹಿಂದಿ ವಿರೋಧಿ ಚಳವಳಿ ಆರಂಭವಾದರೂ,ಈಗಲೂ ಅದರ ಹೇರಿಕೆ ಅಥವ ದೇಶದ ಸಂಪರ್ಕ ಭಾಷೆಯಾಗಿ ಇಂಗ್ಲೀಷಿನ ಅಧಿಪತ್ಯವನ್ನು ಕಡೆಗಾಣಿಸುವ ಮಾತು, ಅದಕ್ಕೆ ಎದುರಾಗುತ್ತಿರುವ ವಿರೋಧಗಳನ್ನು ನೋಡಿದಾಗ ಭಾಷಾ ಗೊಂದಲ ಕರ್ನಾಟಕ ಸೇರಿದಂತೆ ದೇಶಾದ್ಯಂತ ಪೂರ್ಣವಾಗಿ ನಿವಾರಣೆಯಾಗಿಲ್ಲ. ಇಂಗ್ಲೀಷಿನ ವ್ಯಾಪಕ ಬಳಕೆ ಪ್ರಾದೇಶಿಕ ಭಾಷೆಯ ಬೆಳವಣಿಗೆಗೆ ಒಂದು ತೊಡಕು. ಇದು ನಮ್ಮ ಬೌದ್ಧಿಕ ಚಿಂತನೆಗಳ ಜೊತೆಗೆ ಸಾಂಸ್ಕೃತಿಕ ಸತ್ವ ಅರಿಯುವಿಕೆಯನ್ನು ಕುಂಠಿತಗೊಳಿಸುವ ಅಪಾಯಗಳೂ ಇವೆ.
ಭಾರತದಂತಹ ಬಹುಭಾಷೆಗಳ ಉಪಭಾಷೆಗಳನ್ನು ಹೊಂದಿರುವ ದೇಶದಲ್ಲಿ ಪರಸ್ಪರ ಕೊಡು-ಕೊಳ್ಳುವಿಕೆಗೆ ಉದ್ಯೋಗವರಸಿ ಹೋದಾಗ ಸಂವಹನಕ್ಕೆ ಒಂದು ಸಂಪರ್ಕ ಭಾಷೆಯ ಅವಶ್ಯಕತೆ ಇದೆ. ಆ ರೀತಿ ಸಂಪರ್ಕ ಭಾಷೆಯನ್ನು ಪ್ರಚಲಿತಗೊಳಿಸುವಾಗ ಆಂಗ್ಲಭಾಷೆ ಪಡೆದುಕೊಂಡ ಹಿರಿಯಣ್ಣನ ಧೋರಣೆಯನ್ನಾಗಲಿ, ಪ್ರಾದೇಶಿಕ ಭಾಷೆ ಮೂಲೆಗುಂಪಾಗುವಂತಹ ಒಳದಾರಿಗಳಿಗಾಗಲಿ ಅವಕಾಶವಿರಬಾರದು. ಯಾವುದು ಸಂಪರ್ಕ ಭಾಷೆಯಾಗುತ್ತದೊ ಅದು ಆ ಪ್ರಾದೇಶಿಕ ಭಾಷೆಗೆ ಒಳಪಡುವಂತೆ ಅದರಲ್ಲಿ ನಮ್ಮ ಪರಂಪರೆ, ಸಂಸ್ಕೃತಿ, ನಂಬಿಕೆ, ಜೀವನ ಪದ್ಧತಿಗಳು ಮೂಡಿಬರಬೇಕು.
ಯಾವುದೇ ಭಾಷೆ ಬದಲಾಗುತ್ತಿರುವ ಜಗತ್ತಿನ ವಿದ್ಯಮಾನಗಳಿಗೆ ತಕ್ಕಂತೆ ಬದಲಾಗಿ, ಅಲ್ಲಿ ಎದುರಾಗುವ ಸವಾಲುಗಳಿಗೆ ಸ್ಪಂದಿಸಲು ಆಡಳಿತದಲ್ಲಿ ಅದರ ಬಳಕೆ ಪೂರ್ಣವಾಗಿರಬೇಕು. ಶಿಕ್ಷಣದಲ್ಲೂ ಅದರ ಬಳಕೆಗೆ ಹೆಚ್ಚಿನ ಆದ್ಯತೆ ದೊರೆಯಬೇಕು. ಪ್ರತಿಭಾಷೆಯಲ್ಲೂ ಕೊಡುಕೊಳ್ಳುವಿಕೆ ಅನಿವಾರ್ಯ; ಕನ್ನಡ ಭಾಷೆಯನ್ನು ಕುರಿತು ಹೇಳುವುದಾದರೆ, ಎರಡು ಸಾವಿರಕ್ಕಿಂತಲೂ ಹಿಂದಿನ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ ಹಲವು ರೀತಿಯ ಏರಿಳಿತವನ್ನು ಕಂಡಿದೆ. ಆದರೆ ಇಂದಿಗೂ ಈ ದೇಶದ ಭಾಷೆಗಳಲ್ಲಿ ಒಂದು ಶಕ್ತ ಭಾಷೆ ಎನಿಸಿಕೊಂಡಿದೆ. ಹಲವು ಭಾಷೆಗಳ ಒತ್ತಡ, ಆಂಗ್ಲಭಾಷೆಯ ಮೇಲಾಟದ ನಡುವೆಯೂ ಕನ್ನಡ ಕುಂದಿಲ್ಲ. ಹಲವು ರೀತಿಯ ಮಾರ್ಪಾಡುಗಳಿಗೆ ಒಳಗಾಗುತ್ತಾ ಅದು ಶಕ್ತ ಭಾಷೆಯಾಗಿದೆ.
ಭಾಷೆಯೊಂದು ಮಂಕಾಗುವುದು ಅದನ್ನು ಜನ ಬಳಸದೆ ಉಪೇಕ್ಷಿಸಿದಾಗ. ಜನರಿಂದಲೇ ರೂಪುಗೊಳ್ಳುವ ಭಾಷೆ ಜನ ಬಳೆಸದೇ ಇದ್ದಾಗ ಅವಸಾನವಾಗುತ್ತದೆ. ಭಾಷೆಯೊಂದು ನಶಿಸಿತೆಂದರೆ ಅದನ್ನು ಬಳಸುವ ಸಮಾಜವೂ ನಶಿಸಿರಬೇಕು ಅಥವಾ ಆ ಭಾಷೆ ಬಳಕೆಯನ್ನೇ ಕೈಬಿಟ್ಟರಬೇಕೆಂಬುದು. ಭಾಷೆಯೊಂದು ಸಾವವನ್ನಪ್ಪಿದೆ ಎಂದರೆ ಅದನ್ನು ಬಳಸುತ್ತಿದ್ದ ಸಮಾಜ, ಅದು ರೂಢಿಸಿಕೊಂಡಿದ್ದ ಸಂಸ್ಕೃತಿ ಈ ರೀತಿ ಅಸ್ಮಿತೆಯೇ ನಶಿಸಿದಂತೆ.
ಕೆಲವೊಮ್ಮೆ ಭಾಷೆಯೊಂದು ಬಳಸದೆ ಕೇವಲ ಗ್ರಂಥಸ್ಥವಾಗಿ ಬಿಡಬಹುದು. ಕನ್ನಡ ಭಾಷೆ ಈ ಸ್ಥಿತಿ ತಲುಪುತ್ತಿಲ್ಲವಾದರೂ, ನಗರ ಪ್ರದೇಶದಲ್ಲಿ ಅದರ ಬಳಕೆ ದುರ್ಬಲವಾಗಿ ವ್ಯಾಪಕತೆ ಪಡೆದುಕೊಳ್ಳುತ್ತಿಲ್ಲ. ಎಲ್ಲಾ ರೀತಿಯ ಸಂದರ್ಭಗಳಿಗೂ ಒಗ್ಗಿಕೊಳ್ಳುವ ಕನ್ನಡ ಆಡಳಿತದಲ್ಲಿ ಅನ್ಯಭಾಷೆಗಳಿಗಿಂತ ಪ್ರಮುಖ ಸ್ಥಾನ ಪಡೆಯಬೇಕು. ಕನಿಷ್ಠ ಪೂರ್ವ ಪ್ರಾಥಮಿಕದಿಂದ ಎಂಟನೆಯ ತರಗತಿವರೆಗೆ ಅದು ಕಡ್ಡಾಯ ಶಿಕ್ಷಣ ಮಾಧ್ಯಮವಾಗಬೇಕು. ಭಾಷೆಯೊಂದು ಸರ್ಕಾರದ ನೆರವಿನಿಂದ ಮಾತ್ರ ಬದುಕುವುದಿಲ್ಲ. ಆದರೆ ಅದನ್ನಾಡುವ ಜನರ ದೃಢ ಮನಸ್ಸಿನ ಬಳಕೆಯಿಂದ ಬದುಕುತ್ತದೆ.