ತುರ್ತು ಪರಿಸ್ಥಿತಿಯ ಕಹಿ ನೆನಪುಗಳು, ಕಲಿಯಬೇಕಾದ ಪಾಠಗಳು
#Emergency1975HauntsIndia
(ಆಧಾರ: ಭುಗಿಲು, ರಾಷ್ಟ್ರೋತ್ಥಾನ ಸಾಹಿತ್ಯದ 39ನೆಯ ಪ್ರಕಟಣೆ)
– ಎಸ್ ಎಸ್ ನರೇಂದ್ರ ಕುಮಾರ್, ಲೇಖಕರು
ವಿಶ್ವಸ್ತರು ವಿಶ್ವ ಸಂವಾದ ಕೇಂದ್ರ, ಕರ್ನಾಟಕ
1975ನೇ ಇಸವಿ ಜೂನ್ 26 – ಸ್ವತಂತ್ರ ಭಾರತದ ಇತಿಹಾಸದಲ್ಲೊಂದು ಕರಾಳ ದಿನ. ಭಾರತದ ಮೇಲೆ ಆಂತರಿಕ ತುರ್ತು ಪರಿಸ್ಥಿತಿ ಹೇರಲಾಯಿತು, ಜನರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಾಯಿತು, ಸ್ವಾತಂತ್ರ್ಯದ ಕತ್ತನ್ನು ಹಿಸುಕಿ ಉಸಿರುಗಟ್ಟಿಸಲಾಯಿತು. ಇತಿಹಾಸದ ಇಂತಹ ಕರಾಳ ಅಧ್ಯಾಯ ಮತ್ತೆಮತ್ತೆ ಪುನರಾವರ್ತಿತವಾಗಬಾರದೆಂದರೆ ಇತಿಹಾಸವನ್ನು ಮರೆಯಬಾರದು, ಅದನ್ನು ಮೆಲಕು ಹಾಕುತ್ತಿರಬೇಕು, ಇತಿಹಾಸದ ಪಾಠಗಳನ್ನು ಮನನ ಮಾಡುತ್ತಿರಬೇಕು. 45 ವರ್ಷಗಳ ಹಿಂದೆ ನಡೆದ ಘಟನೆಗಳನ್ನೊಮ್ಮೆ ನೆನಪಿಸಿಕೊಳ್ಳೋಣ, ಅಂದಿನ್ನೂ ಹುಟ್ಟಿರದ, ಆ ಇತಿಹಾಸದ ಕರಾಳ ಪುಠಗಳನ್ನರಿಯದ ಜನರಿಗೆ ಅದನ್ನು ತಿಳಿಸೋಣ, ಸ್ವಾತಂತ್ರ್ಯ ಜ್ಯೋತಿಯು ನಂದದಂತೆ ಕಾಪಾಡಿಕೊಳ್ಳೋಣ.
1966ರ ಜನವರಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹಠಾತ್ ನಿಧನದ ನಂತರ ಪ್ರಧಾನ ಮಂತ್ರಿಯಾದ ಇಂದಿರಾ ಗಾಂಧಿಯವರು ವರ್ಷಗಳುರುಳಿದಂತೆ ಪ್ರಬಲ ವ್ಯಕ್ತಿಯಾಗುತ್ತಾ ಹೋದರು, ಸರ್ವಾಧಿಕಾರಿಯಾದರು. 1971ರ ಬಾಂಗ್ಲಾ ಯುದ್ಧದ ಗೆಲುವು, 1971-72ರ ಸಾರ್ವತ್ರಿಕ ಚುನಾವಣೆಗಳಲ್ಲಿ ಗೆಲುವುಗಳಿಂದ ತಮ್ಮನ್ನು ಪ್ರಶ್ನಿಸುವವರಿಲ್ಲ ಎನ್ನುವ ಅಹಂಕಾರ ಅವರ ನೆತ್ತಿಗೇರಿತು. ಕಾಂಗ್ರೆಸ್ಸಿನಲ್ಲಿಯ ‘ಹಳೇ ಹುಲಿ’ಗಳನ್ನು ಹೊರಹಾಕಿ, ಬ್ಯಾಂಕ್ ರಾಷ್ಟ್ರೀಕರಣ, ರಾಜಧನ ರದ್ದು ಮೊದಲಾದ ಕ್ರಮಗಳಿಂದ, ‘ಗರೀಬೀ ಹಠಾವೋ’, ಇತ್ಯಾದಿ ಘೋಷಣೆಗಳಿಂದ ಜನಪ್ರಿಯರೂ ಆದರು. ಪಕ್ಷದಲ್ಲಿ ಅಖಿಲ ಭಾರತ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ತಮಗೆ ಬೇಕಾದವರೇ ನೇಮಕಗೊಳ್ಳುವಂತೆ ನೋಡಿಕೊಂಡರು, ಮುಖ್ಯಮಂತ್ರಿಗಳನ್ನೂ ತಾವೇ ನಿಯುಕ್ತಿಗೊಳಿಸಿದರು. ಕೇಂದ್ರ ಮಂತ್ರಿಮಂಡಲದಲ್ಲೂ ತಮ್ಮ ‘ಕೈಗೊಂಬೆ’ಗಳನ್ನೇ ತುಂಬಿಕೊಂಡರು. ಸರ್ಕಾರದ ಗೃಹಖಾತೆಯಿಂದ ಹಿಡಿದು ಗೂಢಚಾರ ವಿಭಾಗದವರೆಗೆ ಎಲ್ಲವನ್ನೂ ತಮ್ಮ ಅಡಿಯಾಳನ್ನಾಗಿ ಮಾಡಿಕೊಂಡರು. ನ್ಯಾಯಾಂಗವೂ ಸರ್ಕಾರಕ್ಕೆ ಮತ್ತು ಆಡಳಿತ ಪಕ್ಷದ ಧ್ಯೇಯಧೋರಣೆಗಳಿಗೆ ಬದ್ಧವಾಗಿರಬೇಕು ಎಂದು ಪ್ರತಿಪಾದಿಸಿದರು. ಆಕಾಶವಾಣಿ, ದೂರದರ್ಶನಗಳನ್ನೂ ತಮ್ಮ ಪ್ರಚಾರಕ್ಕೆ ಮೀಸಲಾಗಿರಿಸಿಕೊಂಡರು. ಪತ್ರಿಕೆಗಳ ಸ್ವಾತಂತ್ರ್ಯ ಹರಣಕ್ಕೆ ಕೈಹಾಕಿದರು – ತಮ್ಮ ವಿರುದ್ಧ ಬರೆಯುವ ಪತ್ರಿಕೆಗಳು ನಡೆಯುವುದೇ ಕಷ್ಟವೆನ್ನುವ ಪರಿಸ್ಥಿತಿ ಉಂಟುಮಾಡಿದರು. ದೇಶದಲ್ಲಿ ತನಗೆ ವಿರುದ್ಧವಾಗಿದೆ ಎನ್ನಿಸುವ ಎಲ್ಲ ಪಕ್ಷಗಳನ್ನೂ, ಸಂಘ-ಸಂಸ್ಥೆಗಳನ್ನೂ ನಿರ್ನಾಮಗೊಳಿಸುವ ನಿಶ್ಚಯ ಮಾಡಿದರು. ಅವರ ಪ್ರಕಾರ ರಾಷ್ಟ್ರೀಯ ಸ್ವಯಂಸೇವಕ ಸಂಘ ಆಕೆಗೆ ವಿರೋಧಿ. ರಾಜಕೀಯದಲ್ಲಿಳಿಯದೆ ಜನತೆಯಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಉದ್ದೀಪನಗೊಳಿಸುವ ಕಾರ್ಯದಲ್ಲಿ ತೊಡಗಿದ್ದ ದೇಶಭಕ್ತ ಸಂಘಟನೆ ಅದು. ತನ್ನ ಏಕಾಧಿಕಾರಕ್ಕೆ ಒಂದಲ್ಲ ಒಂದು ದಿನ ಸವಾಲಾಗಿ ಎದ್ದು ನಿಲ್ಲಬಹುದಾದ ಸ್ವತಂತ್ರ ಜನಸಂಘಟನೆ ಅದು ಎಂದು ಇಂದಿರಾಗಾಂಧಿಯವರಿಗೆ ಅನ್ನಿಸಿತ್ತು. ಹೀಗಾಗಿ, ಅದನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಮಾಡಿದರು.
ಇಂದಿರಾಗಾಂಧಿಯವರು ದಿನಗಳೆದಂತೆ ಸರ್ವಾಧಿಕಾರಿಯಾಗುವತ್ತ ಸಾಗುತ್ತಿದ್ದುದನ್ನು ನಾಡಿನ ಮಹಾಚೇತನ ಸ್ವಾತಂತ್ರ್ಯ ಹೋರಾಟಗಾರ ಜಯಪ್ರಕಾಶ್ ನಾರಾಯಣ್ ಎದ್ದು ನಿಂತರು. ನಿರಂಕುಶ ರಾಜ್ಯಶಕ್ತಿಯನ್ನು ನಿಯಂತ್ರಿಸಲು ಜನಶಕ್ತಿಯನ್ನು ಕಟ್ಟಬೇಕೆಂದು ನಿಶ್ಚಯಿಸಿ 1974ರ ಏಪ್ರಿಲ್ 14ರಂದು ‘ಪ್ರಜಾಪ್ರಭುತ್ವಕ್ಕಾಗಿ ನಾಗರಿಕರ ವೇದಿಕೆ’ ಸ್ಥಾಪಿಸಿದರು. ಇದೇ ಸಮಯದಲ್ಲಿ ದೇಶದೆಲ್ಲೆಡೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿತ್ತು. 1973ರ ಡಿಸೆಂಬರ್‍ನಲ್ಲಿ ಗುಜರಾತಿನ ವಿದ್ಯಾರ್ಥಿಗಳು ಅಲ್ಲಿನ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಂಡಾಯವೆದ್ದರು, ಗುಜರಾತಿನ ಚಿಮಣಭಾಯಿ ಪಟೇಲ್ ಸರ್ಕಾರ ರಾಜೀನಾಮೆ ನೀಡಬೇಕಾಯಿತು. ಮುಂದಿನ ಸರದಿ ಬಿಹಾರ್ ಸರ್ಕಾರದ್ದು. ಅಲ್ಲಿನ ವಿದ್ಯಾರ್ಥಿಗಳು ಜಯಪ್ರಕಾಶ್ ನಾರಾಯಣ್ ಅವರನ್ನೇ ನೇತಾರರನ್ನಾಗಿ ಮಾಡಿಕೊಂಡರು. ಕಮ್ಯುನಿಸ್ಟ್ ಪಕ್ಷವನ್ನು ಬಿಟ್ಟು ಉಳಿದೆಲ್ಲ ಪ್ರತಿಪಕ್ಷಗಳೂ ಬಿಹಾರದಲ್ಲಿ ಹೋರಾಟಕ್ಕೆ ಒಟ್ಟಾಗಿ ಧುಮುಕಿದವು. ಇಂದಿರಾಗಾಂಧಿಯವರಿಗೆ ಇದೆಲ್ಲವೂ ತನ್ನ ಅಧಿಕಾರ ಕಸಿದುಕೊಳ್ಳಲಿಕ್ಕಾಗಿಯೇ ನಡೆಯುತ್ತಿದೆ ಎನಿಸಲಾರಂಭಿಸಿತು. ಹೀಗಾಗಿ, ಬಿಹಾರ ಚಳುವಳಿಯನ್ನು ಹತ್ತಿಕ್ಕಲು ಕೊನೆಮೊದಲಿಲ್ಲದ ಪ್ರಯತ್ನ ಮಾಡಿದರು, ಪಾಶವೀ ಬಲವನ್ನೂ ಪ್ರಯೋಗಿಸಿದರು. ಪೊಲೀಸ್ ಗೋಳಿಬಾರುಗಳಲ್ಲಿ 100 ಜನ ಸತ್ತರು, 400 ಜನ ಗಾಯಗೊಂಡರು ಮತ್ತು 24,000 ಜನ ಸೆರೆಮನೆ ಸೇರಿದರು. ದಮನ ದಬ್ಬಾಳಿಕೆ ಹೆಚ್ಚಾದಂತೆ ಚಳುವಳಿ ಮತ್ತಷ್ಟು ವ್ಯಾಪಕವಾಯಿತು. ಇದೇ ಅವಧಿಯಲ್ಲಿ, ಲೋಕಸಭೆಯಲ್ಲಿ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳು ಒಂದೊಂದೇ ಹೊರಬರತೊಡಗಿದವು. ಇದಾವುದನ್ನೂ ಚರ್ಚಿಸುವ ಸ್ಥಿತಿಯಲ್ಲಿ ಇಂದಿರಾ ಗಾಂಧಿಯವರು ಇರಲಿಲ್ಲ. “ಜನ ನಮಗೆ ಓಟು ನೀಡಿ ಗೆಲ್ಲಿಸಿದ್ದಾರೆ; ನಮಗೆ ಬೇಕಾದ್ದು ಮಾಡಿಕೊಳ್ಳುತ್ತೇವೆ; ಪ್ರತಿಪಕ್ಷದವರಿಗೆ ಪ್ರಶ್ನಿಸುವ ಹಕ್ಕಿಲ್ಲ, ನಿಮಗೆ ಜನ ಓಟು ಕೊಟ್ಟಿಲ್ಲ” – ಇದು ಇಂದಿರಾ ಗಾಂಧಿಯವರ ತರ್ಕದ ದಾಟಿಯಾಗಿತ್ತು. 1975ರ ಮಾರ್ಚ್ 6ರಂದು ದೆಹಲಿಯಲ್ಲಿ ಜಯಪ್ರಕಾಶ್ ನಾರಾಯಣರ ನೇತೃತ್ವದಲ್ಲಿ ಅಭೂತಪೂರ್ವ ಜನತಾ ಪ್ರದರ್ಶನ, ಕೆಂಪುಕೋಟೆಯಿಂದ ಸಂಸತ್ತಿನವರೆಗೆ ಜನತಾ ಪ್ರವಾಹ. ಇದರಿಂದ ಇಂದಿರಾ ಗಾಂಧಿ ಬೆದರಿದರು.
1975ರ ಜೂನ್ 12 ನಿರ್ಣಾಯಕ ದಿನ, ಇಂದಿರಾ ಗಾಂಧಿಯವರ ನಿರಂಕುಶ ಅಧಿಕಾರಕ್ಕೆ ಮರ್ಮಾಘಾತ ನೀಡಿದಂತಹ ದಿನ. ಅಂದು ಬೆಳಿಗೆ 10 ಗಂಟೆಗೆ ಅಲಹಾಬಾದ್ ಉಚ್ಚನ್ಯಾಯಾಲಯವು ಈ ರೀತಿ ತೀರ್ಪು ನೀಡಿತು: “ಇಂದಿರಾಗಾಂಧಿ ಚುನಾವಣಾ ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವುದು ಸಾಬೀತಾಗಿದೆ. ಹೀಗಾಗಿ, ಅವರ ಲೋಕಸಭಾ ಸದಸ್ಯತ್ವವನ್ನು ಈಗಿಂದೀಗಲೇ ರದ್ದು ಪಡಿಸಲಾಗಿದೆ ಮತ್ತು ಮುಂದಿನ 6 ವರ್ಷಗಳವರೆಗೆ ಅವರು ಯಾವ ಚುನಾವಣೆಯಲ್ಲಿಯೂ ಸ್ಪರ್ಧಿಸುವಂತಿಲ್ಲ”. ಅಂದೇ ಸಂಜೆ ಗುಜರಾತು ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಯಿತು. ಇಂದಿರಾ ಕಾಂಗ್ರೆಸ್ಸಿಗೆ ಭಾರೀ ಸೋಲು, ಜನತಾ ಮೋರ್ಚಾಗೆ ಗೆಲುವು. ಒಂದೆಡೆ ನ್ಯಾಯಾಲಯದಿಂದ ವಜ್ರಾಘಾತ, ಮತ್ತೊಂದೆಡೆ ಜನತಾ ಜನಾರ್ಧನರಿಂದ ತಿರಸ್ಕಾರ. ಆದರೆ, ನ್ಯಾಯಾಲಯದ ನಿರ್ಣಯಕ್ಕೆ ತಲೆಬಾಗಲು ಇಂದಿರಾಗಾಂಧಿ ಸಮ್ಮತಿಸಲಿಲ್ಲ. ಇದರ ಪರಿಣಾಮವಾಗಿ, ಕಾಂಗ್ರೆಸ್ಸಿನ ಒಳಗೂ ಅಸಮಾಧಾನ ಹೊಗೆಯಾಡಲು ಆರಂಭಿಸಿತು. ಇಂದಿರಾಗಾಂಧಿಯವರು ರಾಜೀನಾಮೆ ನೀಡಬೇಕೆಂಬ ಬೇಡಿಕೆ ಗರಿಗೊಳ್ಳಲಾರಂಭಿಸಿತು. ಇದರಿಂದ ಪಾರಾಗುವುದು ಹೇಗೆ? ಇಂದಿರಾಗಾಂಧಿಯವರ ಮಗ ಸಂಜಯ್ ಗಾಂಧಿ ಮತ್ತು ಆಕೆಯ ಭಟ್ಟಂಗಿ ಬನ್ಸಿಲಾಲ್ ಹಾಗೂ ಇತರರು ಆಕೆಗೆ ಈ ರೀತಿ ಬೋಧಿಸಲಾರಂಭಿಸಿದರು: “ವಿರೋಧಿ ನಾಯಕರ ಹುಟ್ಟಡಗಿಸಿ, ಅವರನ್ನು ಸೆರೆಮನೆಗಟ್ಟಿ, ಪೊಲೀಸ್ ಬಲ ಪ್ರಯೋಗಿಸಿ. ತುರ್ತುಪರಿಸ್ಥಿತಿಯ ಬ್ರಹ್ಮಾಸ್ತ್ರ ಪ್ರಯೋಗಿಸಿ”!!
ಜೂನ್ 25, 1975ರ ಮಧ್ಯರಾತ್ರಿಗೆ ಸ್ವಲ್ಪ ಮುಂಚೆ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ಫಕ್ರುದ್ದಿನ್ ಆಲಿ ಅಹ್ಮದ್ ಅವರಿಂದ ತುರ್ತುಪರಿಸ್ಥಿತಿಯ ಆಜ್ಞೆಗೆ ಮುದ್ರೆಯೊತ್ತಿಸಿಕೊಂಡರು. ಜನರ ಎಲ್ಲ ಮೂಲಭೂತ ಹಕ್ಕುಗಳು ರದ್ದು, ಪತ್ರಿಕೆಗಳ ಬಾಯಿಗೆ ಬೀಗ, ನ್ಯಾಯಾಂಗದ ಕೈಕಾಲುಗಳಿಗೆ ಬೇಡಿ, ಸಂಘಸಂಸ್ಥೆಗಳ ಸ್ವಾತಂತ್ರ್ಯಕ್ಕೆ ಕೊಡಲಿಯೇಟು – ಇವುಗಳೇ ಆ ಆಜ್ಞೆಯ ಪರಿಣಾಮಗಳು. ದೇಶದ ಕೋಟಿಕೋಟಿ ಜನರು ಗಾಢನಿದ್ರೆಯಲ್ಲಿದ್ದಾಗ ಅವರೆಲ್ಲರ ಸ್ವಾತಂತ್ರ್ಯಹರಣವಾಗಿತ್ತು, ಅದೂ ನಮ್ಮದೇ ಸರ್ಕಾರದಿಂದ!
ಅಲ್ಲಿಂದ ಮುಂದೆ ಸರ್ಕಾರ ತೆಗೆದುಕೊಂಡ ಕ್ರಮಗಳು, ಆ ಶಾಸನದ ಕರಾಳತೆಯನ್ನು ತೋರಿಸುತ್ತಾ ಹೋಯಿತು. ಅದೇ ರಾತ್ರಿ ಎರಡು ಗಂಟೆಯ ಸುಮಾರಿಗೆ ಲೋಕನಾಯಕ ಜಯಪ್ರಕಾಶ ನಾರಾಯಣರ ನಿವಾಸಕ್ಕೆ ಪೊಲೀಸರು ಮುತ್ತಿಗೆ ಹಾಕಿದರು. ನಂತರ, ಕಾಂಗ್ರೆಸ್ಸನ್ನು ವಿಭಜಿಸಿ ಹೊರಬಂದಿದ್ದ ಮುರಾರ್ಜಿ ದೇಸಾಯಿ ಅವರನ್ನು ಬಂಧಿಸಲಾಯಿತು. ಸಮಾಜವಾದಿ ಪಕ್ಷದ ಮಧು ಲಿಮಯೆ, ಸಮರ ಗುಹ, ಭಾರತೀಯ ಲೋಕದಳದ ಚೌಧರಿ ಚರಣಸಿಂಗ್, ರಾಜನಾರಾಯಣ್, ಬಿಜೂ ಪಟ್ನಾಯಕ್, ಸಂಸ್ಥಾ ಕಾಂಗ್ರೆಸ್ಸಿನ ಅಶೋಕ ಮೆಹತಾ, ಇವರೆಲ್ಲಾ ದೆಹಲಿಯಲ್ಲೇ ಬಂಧನಕ್ಕೊಳಗಾದರು. ಜೂನ್ 26ರ ಮುಂಜಾನೆ, ಸಂಸದೀಯ ಸಮಿತಿಯ ಕಾರ್ಯಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಜನಸಂಘದ ಅಟಲಬಿಹಾರಿ ವಾಜಪೇಯಿ, ಲಾಲಕೃಷ್ಣ ಅಡ್ವಾಣಿ, ಸಮಾಜವಾದಿ ಪಕ್ಷದ ಮಧುದಂಡವತೆ, ಸಂಸ್ಥಾ ಕಾಂಗ್ರೆಸ್ಸಿನ ಶ್ಯಾಮನಂದ ಮಿಶ್ರ ಅವರನ್ನು ಬೆಂಗಳೂರಿನ ಶಾಸಕರ ಭವನದಲ್ಲಿ ಬಂಧಿಸಲಾಯಿತು. ಏಕಕಾಲಕ್ಕೆ ದೇಶಾದ್ಯಂತ ವಿರೋಧಪಕ್ಷಗಳ ಸಾವಿರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಸೆರೆಮನೆಗೆ ಹಾಕಿದರು. ಮಧ್ಯರಾತ್ರಿ ಪೊಲೀಸರು ಬಂದು ಬಾಗಿಲು ತಟ್ಟುವುದು, ಮಲಗಿದ್ದವರನ್ನು ಎಬ್ಬಿಸಿ ಪೊಲೀಸ್ ಜೀಪುಗಳಲ್ಲಿ ಹಾಕಿಕೊಂಡು ಕಣ್ಮರೆಯಾಗಿ ಹೋಗುವುದು – ಈ ಪರಿಪಾಠ ಅಂದಿನಿಂದ ಪ್ರಾರಂಭವಾಯಿತು. ದೆಹಲಿಯಲ್ಲಂತೂ ಪ್ರಮುಖ ರಾಷ್ಟ್ರೀಯ ದಿನಪತ್ರಿಕೆಗಳ ಅಚ್ಚುಕೂಟಗಳಿದ್ದ ಬಹದ್ದೂರ್ ಷಾ ಜಫರ್ ಮಾರ್ಗ ಮತ್ತು ಕಾನಾಟ್ ಪ್ಲೇಸ್ ಪ್ರದೇಶಗಳ ವಿದ್ಯುತ್ ಸರಬರಾಜನ್ನೇ ನಿಲ್ಲಿಸಲಾಯಿತು. ಮರುದಿನ ಬೆಳಗಿನ ಪತ್ರಿಕೆಗಳೆಲ್ಲವೂ ಅದೃಶ್ಯ. ದೆಹಲಿಯ ಬೇರೆ ಭಾಗಗಳಿಂದ ಮುದ್ರಣಗೊಳ್ಳುತ್ತಿದ್ದ ಪತ್ರಿಕೆಗಳು ಮಾತ್ರ ಹೊರಬಂದವು. ಅವುಗಳ ಮೂಲಕ ಕರಾಳ ಸುದ್ದಿ ಜಗತ್ತಿಗೆ ತಿಳಿಯಿತು. ಆದರೆ, ಕೆಲನಿಮಿಷಗಳಲ್ಲೇ ಆ ಪತ್ರಿಕೆಗಳನ್ನು ಹಂಚುತ್ತಿದ್ದವರನ್ನು ಬೆನ್ನುಹತ್ತಿ, ಅವರ ಬಳಿಯಿದ್ದ ಪತ್ರಿಕೆಗಳನ್ನು ಕಸಿದುಕೊಂಡು ಸುಟ್ಟುಹಾಕಲಾಯಿತು. ಸರ್ಕಾರದ ಬೆದರಿಕೆಗಳಿಗೆ ಅಂಜುವುದಿಲ್ಲ ಎಂದು ಸರ್ಕಾರಕ್ಕೆ ಖಾತರಿ ಇದ್ದ ಪತ್ರಿಕೆಗಳ ಕಛೇರಿಗಳಿಗೆ ಪೊಲೀಸರು ನುಗ್ಗಿ, ಅವುಗಳಿಗೆ ಬೀಗಮುದ್ರೆ ಜಡಿದರು.
ಜೂನ್ 30ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್ ದೇವರಸರು ದೆಹಲಿಯಿಂದ ನಾಗಪುರಕ್ಕೆ ರೈಲಿನಲ್ಲಿ ಬಂದಿಳಿಯುತ್ತಿದ್ದಂತೆಯೇ ಪೊಲೀಸರ ‘ಅತಿಥಿ’ಗಳಾದರು. ಆದರೆ, ದೇವರಸರಿಗೆ ಬರಲಿರುವ ದಿನಗಳ ಲಕ್ಷಣ 26ರಂದೇ ಗೋಚರಿಸಿತ್ತು ಮತ್ತು ಅಂತೆಯೇ ದಿನಾಂಕ 27ರಂದು ಸಂಘದ ಎಲ್ಲ ಸ್ವಯಂಸೇವಕರಿಗೆ ಎಚ್ಚರಿಕೆಯ ಮತ್ತು ಅಸಾಧಾರಣ ಪರಿಸ್ಥಿತಿಯಲ್ಲಿ ಅವರು ಮಾಡಬೇಕಾಗಲಿರುವ ಕಾರ್ಯಗಳ ಮುನ್ಸೂಚನೆಯ ಕರೆ ನೀಡಿದ್ದರು. ದೇವರಸರ ಸಂದೇಶ ಮುಂದಿನ ಎರಡು-ಮೂರು ಗಂಟೆಗೊಳಗಾಗಿ ದೇಶದ ಮೂಲೆಮೂಲೆಗಳಲ್ಲಿರುವ ಸಂಘದ ಕಾರ್ಯಾಲಯಗಳು ಮತ್ತು ಕಾರ್ಯಕರ್ತರನ್ನು ತಲುಪಿತು. ಇಂತಹ ಅಚ್ಚುಕಟ್ಟಾದ ಸಂಘಟನಾ ವ್ಯವಸ್ಥೆ ಇತ್ತೆಂದೇ ಮುಂದೆ ಬರಲಿದ್ದ ಭೀಷಣ ಬಿರುಗಾಳಿಯಲ್ಲೂ ಸಂಘದ ಕಾರ್ಯಕರ್ತರು ಯಶಃಪ್ರದವಾಗಿ ತಮ್ಮ ಪಾತ್ರ ನಿರ್ವಹಿಸಲು ಸಾಧ್ಯವಾಯಿತು. ಜುಲೈ 3ರ ಮಧ್ಯರಾತ್ರಿ ದೇಶಾದ್ಯಂತೆ 300ಕ್ಕೂ ಹೆಚ್ಚು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯಗಳ ಮೇಲೆ ಧಾಳಿಯಾಯಿತು, ಒಳಗೆ ಮಲಗಿದ್ದ ಸಾವಿರಾರು ಕಾರ್ಯಕರ್ತರನ್ನು, ಪ್ರಚಾರಕರನ್ನು ಸೆರೆಮನೆಗೆ ತಳ್ಳಲಾಯಿತು, ಕಾರ್ಯಾಲಯಗಳಿಗೆ ಬೀಗಮುದ್ರೆ ಹಾಕಲಾಯಿತು. ಸ್ವಯಂಸೇವಕರು ನಡೆಸುತ್ತಿದ್ದ ಪತ್ರಿಕೆ, ಮುದ್ರಣಾಲಯಗಳ ಮೇಲೆ ಮಾತ್ರವಲ್ಲ, ಸಂಘದ ಸ್ವಯಂಸೇವಕರು ನಡೆಸುತ್ತಿದ್ದ ಹತ್ತುಹಲವು ವಿವಿಧ ಸಾಮಾಜಿಕ ಸೇವಾಕೇಂದ್ರಗಳು, ಶಿಕ್ಷಣಕೇಂದ್ರಗಳ ಮೇಲೂ ಸರ್ಕಾರದ ಗದಾಪ್ರಹಾರವಾಯಿತು. ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿದ್ದ ಅಕ್ಷರಶಃ ಸಾವಿರಾರು ಶಿಶುವಿಹಾರಗಳನ್ನೂ ಸರ್ಕಾರ ವಶಪಡಿಸಿಕೊಂಡಿತು. ಬೆಂಗಳೂರಿನಲ್ಲಿರುವ ಪ್ರಾಂತ ಕಾರ್ಯಾಲಯ ಕೇಶವಾ ಕೃಪಾಕ್ಕೆ ಮುಂಜಾನೆ 5 ಗಂಟೆಗೆ ಪೊಲೀಸರ ಧಾಳಿ, ಕಾರ್ಯಾಲಯದೊಳಗಿದ್ದವರ ಸಾಮೂಹಿಕ ಬಂಧನ. ಕಾರ್ಯಾಲಯ ಪ್ರಮುಖರಾಗಿದ್ದ ನಾಗಭೂಷಣ್ ಬಂಧನಕ್ಕೊಳಗಾದವರಲ್ಲಿ ಪ್ರಮುಖರು. ಸುಪ್ರಸಿದ್ಧ ಲೇಖಕ ಬಾಬು ಕೃಷ್ಣಮೂರ್ತಿಯವರು ಪಕ್ಕದ ಗೋಡೆಹಾರಿ ಪೊಲೀಸರ ಕಣ್ಣುತಪ್ಪಿಸಿದರು. ಅದೇ ಮುಂಜಾನೆ ಚಾಮರಾಜಪೇಟೆಯ ‘ವಿಕ್ರಮ’ ವಾರಪತ್ರಿಕೆಯೂ ಪೊಲೀಸರ ಧಾಳಿಗೆ ಒಳಗಾಯಿತು. ಅಲ್ಲಿ ಮಲಗಿದ್ದ ಸಂಪಾದಕ ಬೆ.ಸು.ನಾ.ಮಲ್ಯರನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ಅದೇ ಸಮಯಕ್ಕೆ ಪ್ರಾಂತದ ಬೇರೆ ಬೇರೆ ಭಾಗಗಳಲ್ಲಿಯೂ ಪೊಲೀಸರ ಹಲ್ಲೆ ಸಾಗಿತ್ತು. ಒಟ್ಟು ಕರ್ನಾಟಕದ 27 ಕಾರ್ಯಾಲಯಗಳಿಗೆ ಬೀಗಮುದ್ರೆ ಜಡಿಯಲಾಗಿತ್ತು.
ಜೂನ್ 26ರ ಬೆಳಗಿನಿಂದಲೇ ಬಾನುಲಿಯಲ್ಲಿ ಇಂದಿರಾಗಾಂಧಿಯವರ ಸಂದೇಶ ಪ್ರಸಾರವಾಗಲು ಪ್ರಾರಂಭವಾಗಿತ್ತು. ತುರ್ತುಪರಿಸ್ಥಿತಿಯ ಸಮರ್ಥನೆಯೇ ಅದರ ಉದ್ದೇಶ. “ಸಾಮಾನ್ಯ ಜನತೆಯ ಹಿತಕ್ಕಾಗಿ ನಾನು ಕೈಗೊಂಡ ಪ್ರಗತಿಪರ ಕ್ರಮಗಳು. ಅವನ್ನು ಬುಡಮೇಲು ಮಾಡಲು ನಡೆದ ಆಳವಾದ ಪಿತೂರಿ. ಪ್ರಜಾಪ್ರಭುತ್ವದ ಮೇಲೆ ಎರಗಿದ ಗಂಡಾಂತರ. ಇದಕ್ಕೆ ಉತ್ತರವಾಗಿ ತೆಗೆದುಕೊಂಡಿರುವ ಧೃಡವಾದ ಕ್ರಮ” – ಇದು ಆ ಸಂದೇಶದ ಸಾರ. ಮತ್ತೊಂದೆಡೆ ಅಪಪ್ರಚಾರದ ಅಬ್ಬರವೂ ಸೇರಿಕೊಂಡಿತು. ಪತ್ರಿಕೆ, ಆಕಾಶವಾಣಿ, ದೂರದರ್ಶನ, ವಿಶೇಷ ಪ್ರಕಟಣೆಗಳು – ಇವೆಲ್ಲವೂ ಒಂದೇ ಸಮನೆ ವಿರೋಧಿಗಳ ಮೇಲೆ ಬೊಬ್ಬಿಟ್ಟವು. ವಿರೋಧಿ ನಾಯಕರ ಚಾರಿತ್ರ್ಯವಧೆಗಾಗಿ ಎಲ್ಲ ಮಾಧ್ಯಮಗಳೂ ಮೀಸಲಾದವು. ಇವೆಲ್ಲದರ ಜೊತೆಗೆ ಸಾಕ್ಷ್ಯಚಿತ್ರಗಳು – ಜಯಪ್ರಕಾಶ್, ವಾಜಪೇಯಿ, ಗೋಳವಲ್ಕರ್, ಮುಂತಾದವರು ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವ ದೃಶ್ಯಗಳು, ಅದರ ಹಿಂದೆಯೇ ಬೆಂಕಿ, ವಿಧ್ವಂಸ, ರಸ್ತೆಗಳಲ್ಲಿ ಚೆಲ್ಲಾಡಿದ ಹೆಣಗಳು. ಮತ್ತೊಂದೆಡೆ ಇಂದಿರಾಗಾಂಧಿ ಜನರನ್ನು ಸಮ್ಮೋಹಿಸುವ ತಂತ್ರವನ್ನೂ ಹೂಡಿದರು. ಜುಲೈ 1ರಂದು ಆಕೆ 20 ಅಂಶಗಳ ‘ಕ್ರಾಂತಿಕಾರಿ’ ಆರ್ಥಿಕ ಕಾರ್ಯಕ್ರಮ ಘೋಷಿಸಿದರು – ಬೆಲೆಗಳ ಇಳಿತ, ದಿನಬಳಕೆ ವಸ್ತುಗಳ ಯೋಗ್ಯ ಪೂರೈಕೆ, ಭೂಹೀನರಿಗೆ ಭೂಮಿ, ಜೀತವಿಮುಕ್ತಿ, ರೈತರ ಸಾಲಮನ್ನಾ, ಬಡವರ ಉದ್ದಾರಕ್ಕೆ ಕ್ರಮಗಳು, ಆದಾಯ ತೆರಿಗೆ ವಿನಾಯ್ತಿ, ವಿದ್ಯಾರ್ಥಿಗಳಿಗೆ ಅಗ್ಗದ ಬೆಲೆಯಲ್ಲಿ ಪುಸ್ತಕಗಳು, ಇತ್ಯಾದಿ, ಇತ್ಯಾದಿ, ದೇಶದ ಜನತೆಯ ಬಾಯಲ್ಲಿ ನೀರೂರಿಸುವ ಘೋಷಣೆಗಳೇ ಎಲ್ಲ!!
ಅಡಕತ್ತರಿಯಲ್ಲಿ ದೇಶ ಸಿಲುಕಿತ್ತು. ದಮನ ದೌರ್ಜನ್ಯ ಭೀತಿ ಬಂಧನಗಳ ಚಕ್ರ ಒಂದೆಡೆ. ಇದೆಲ್ಲ ದೇಶದ ಉದ್ಧಾರಕ್ಕಾಗಿ, ಪ್ರಜಾಪ್ರಭುತ್ವದ ಉಳಿವಿಗಾಗಿ ಎನ್ನುವ ಪ್ರಚಾರಚಕ್ರ ಮತ್ತೊಂದೆಡೆ. ಈ ಎರಡು ಚಕ್ರಗಳನ್ನು ಹೂಡಿರುವ ರಥದ ಮೇಲಿನ ಸಿಂಹಾಸನದಲ್ಲಿ ಇಂದಿರಾಗಾಂಧಿ ಸಾಕ್ಷಾತ್ ಚಕ್ರವರ್ತಿಯಂತೆ ವಿರಾಜಮಾನ. ಚಕ್ರಗಳ ಅಡಿಯಲ್ಲಿ ಸಿಕ್ಕ ಭಾರತದ ಜನತೆಗೆ ಉಸಿರುಗಟ್ಟಿದ ಸ್ಥಿತಿ. ತಾನು ಮತ್ತು ತನ್ನ ಮಗ ನಿರಾತಂತಕವಾಗಿ ರಾಜ್ಯಭಾರ ಮಾಡಬಹುದು, ತಮಗೆ ವಿರೋಧಿಗಳೇ ಇಲ್ಲ. ಅಂದಿನ ಸ್ಥಿತಿ ಅಕ್ಷರಶಃ ಹಾಗಿತ್ತು, ಪ್ರಪಂಚಕ್ಕೂ ಆ ರೀತಿಯೇ ತೋರುತ್ತಿತ್ತು!
ಯಾರಾದರೂ ಹೊರಗಿಂದ ನೋಡಿದವರಿಗೆ ಭಾರತದ ಅಂದಿನ ದಿನಗಳ ದೃಶ್ಯ ತೀರಾ ನಿರಾಶಾದಾಯಕ, ಭಯಾನಕ. ಆದರೆ, ಅದು ಹೊರನೋಟಕ್ಕೆ ಮಾತ್ರ. ವಾಸ್ತವವಾಗಿ ದೇಶ ಮೂಕವಾಗಿ ಕುಳಿತಿರಲಿಲ್ಲ. ಶರಣಾಗತಿಯನ್ನ<ತೂ ಸರ್ವಥಾ ಒಪ್ಪಿಕೊಂಡಿರಲಿಲ್ಲ. ಮೊದಲದಿನವೇ, ಜೂನ್ 26ರಿಂದಲೇ ಜನತೆಯ ಪ್ರತಿಭಟನೆಯ ಕಿಡಿ ಹಾರತೊಡಗಿತ್ತು. ಬಿಹಾರಿನಲ್ಲಿ ಅಂದಿನಿಂದಲ್ಲೇ ಬಂದ್, ಹರತಾಳ, ಸಭೆ, ಮೆರವಣಿಗೆಗಳು ಸಿಡಿದೆದ್ದವು. ಅಲಹಾಬಾದಿನ ವಕೀಲರ ಸಂಘ ತುರ್ತುಪರಿಸ್ಥಿತಿಗೆ ಧಿಕ್ಕಾರ ಹಾಕಿತು. ಉತ್ತರಪ್ರದೇಶದ ಉದ್ದಗಲಕ್ಕೂ ಅಂದು ಪ್ರಧಾನಿ ಇಂದಿರಾಗಾಂಧಿಯ ‘ಭೂತದಹನ’. ದೆಹಲಿಯಲ್ಲಿ 26ರ ಮುಂಜಾನೆಯೇ ಗೋಡೆಬರಹಗಳು ಮೆರೆದವು, ನಾಯಕರ ಬಂಧನದ ಕರಾಳ ಸುದ್ದಿಯನ್ನು ಜಗಜ್ಜಾಹೀರುಗೊಳಿಸಿದರು. ಜೂನ್ 29ರಿಂದ ಒಂದುವಾರ ಕಾಲ ಸತ್ಯಾಗ್ರಹ ನಡೆಸುವ ಘೋಷಣೆ ಹೊರಬಿತ್ತು. ಜನಸಂಘದ ಕಾರ್ಯಕರ್ತರು ತಂಡೋಪತಂಡವಾಗಿ “ತಾನಾಶಾಹಿ ನಹಿ ಚಲೇಗಿ, ನಹಿ ಚಲೇಗಿ”, “ಲೋಕತಂತ್ರ ಅಮರ್ ರಹೇ”, ಇತ್ಯಾದಿ ಘೋಷಿಸುತ್ತಾ ಮೆರವಣಿಗೆ ನಡೆಸಿದರು. ಈ ಅಪೂರ್ವ ದೃಶ್ಯಗಳನ್ನು ದೆಹಲಿಯ ಜನರು ಹೆದರಿಕೆಯಿಂದಲೇ ಸಂದುಗೊಂದುಗಳಿಂದ, ಮನೆಯ ಕಿಟಕಿಗಳಿಂದ ಇಣುಕಿ ನೋಡಿದರು. ಅಂದು ಸತ್ಯಾಗ್ರಹ ಮುಖಂಡತ್ವ ವಹಿಸಿದ್ದವರು ದೆಹಲಿಯ ಮಹಾಪೌರ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಂಘಚಾಲಕ ಹಂಸರಾಜ ಗುಪ್ತ. ಆ ನಂತರ ಅವರು “ಮೀಸಾ” ರಾಕ್ಷಸನ ಅತಿಥಿಯಾಗಬೇಕಾಯಿತು. ಅದೇ ದಿನಗಳಲ್ಲಿ ರಾಜಧಾನಿಯಲ್ಲಿ ಜನತೆಯ ಪ್ರತಿಭಟನೆಯ ಕೆಚ್ಚನ್ನು ಕೆರಳಿಸಲು ದೇಶಮಾನ್ಯ ಮಹಿಳೆಯೊಬ್ಬರು ಮುಂದಾದರು. ಆಕೆ, ಗ್ವಾಲಿಯರ್‌ನ ರಾಜಮಾತೆ ವಿಜಯರಾಜೆ ಸಿಂಧ್ಯ. ಜುಲೈ 9ರಂದು ಪಂಜಾಬಿನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ನೇತೃತ್ವದಲ್ಲಿ ಅಕಾಲಿದಳದ ಕಾರ್ಯಕರ್ತರು ಅಕಾಲಿ ತಖ್ತ್ ಎದುರಲ್ಲಿ ಸತ್ಯಾಗ್ರಹದ ರಣಗರ್ಜನೆ ಮಾಡಿ ಬಂದನಕ್ಕೆ ಒಳಗಾದರು. ಜಮ್ಮುವಿನಲ್ಲಿ 26ರಂದೇ ಎಲ್ಲ ವಿರೋಧಪಕ್ಷಗಳ ಸಂಯುಕ್ರ ಪ್ರತಿಭಟನಾ ಸಭೆ, 28ರಂದು ಜಮ್ಮು ಪ್ರಾಂತ ಬಂಧ್. ಬೆಂಗಳೂರಿನಲ್ಲಿ 26ರ ಮಧ್ಯಾಹ್ನ ಬೆಂಗಳೂರು ವಕೀಲ ಸಂಘದ ಅಧ್ಯಕ್ಷ ಗುಂಡಯ್ಯಶೆಟ್ಟರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ. ಹೀಗೆ ದೇಶದ ಎಲ್ಲೆಡೆ ಪ್ರತಿಭಟನೆಗಳಾದವು. ಭಾರತದ ಮಾಜಿ ದಂಡನಾಯಕ ಜನರಲ್ ಕಾರಿಯಪ್ಪ, ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಪಿ.ಕೋದಂಡರಾಯರು, ಉಡುಪಿಯ ಪೇಜಾವರ ಮಠಾಧಿಪತಿ ಶ್ರೀ ವಿಶ್ವೇಶತೀರ್ಥರು, ಮುಂತಾದ ಗಣ್ಯರನೇಕರು ಇಂದಿರಾಗಾಂಧಿಯವರಿಗೆ ಪತ್ರ ಬರೆದು ಅವರು ಹೊರಟಿರುವ ಅನೈತಿಕ ಹಾದಿಯ ಕುರಿತು ಎಚ್ಚರಿಸಿದರು. ಬಿಹಾರಿನ ಫಣೀಶ್ವರನಾಥ ರೇಣು ತಮಗೆ ಸರ್ಕಾರ ನೀಡಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಮಾಡಿದರು, ತಮಗೆ ಸರ್ಕಾರ ನೀಡುತ್ತಿದ್ದ ಮಾಸಿಕವೇತನವನ್ನೂ ತಿರಸ್ಕರಿಸಿದರು.
ತುರ್ತುಪರಿಸ್ಥಿತಿಗೆ ದೇಶಾದ್ಯಂತ ಅಲ್ಲಲ್ಲಿ ಪ್ರತಿಭಟನೆಗಳು ಕಿಡಿಗೆದರುತ್ತಿದ್ದಂತೆಯೇ ಅದೇ ದಿನದಿಂದಲೇ ಭೂಗತ ಸಂಘಟನೆಯೂ ಮೈದಾಳಿತು. ತುರ್ತುಪರಿಸ್ಥಿತಿ ಘೋಷಣೆಯಾದ ಹಿಂದಿನ ದಿನ, ಅಂದರೆ ಜೂನ್ 25ರಂದು ಲೋಕಸಂಘರ್ಷ ಸಮಿತಿ ಜನ್ಮತಾಳಿತ್ತು. ಅದರ ಪ್ರಧಾನ ಕಾರ್ಯದರ್ಶಿಯಾಗಿದ್ದವರು ನಾನಾಜಿ ದೇಶಮುಖ್ ಅವರು. ಅಂದು ರಾತ್ರಿಯೇ ಅವರ ಬಂಧನಕ್ಕಾಗಿ ಅವರಿದ್ದ ವಸತಿಯ ಮೇಲೆ ಪೊಲೀಸರು ಧಾಳಿ ಮಾಡಿದರು. ಆದರೆ, ಅದಕ್ಕೆ ಸ್ವಲ್ಪ ಹೊತ್ತಿಗೆ ಮುಂಚೆ ನಾನಾಜಿಯವರಿಗೆ ಪೊಲೀಸರ ಆಗಮನದ ಸುದ್ದಿ ದೂರವಾಣಿಯ ಮೂಲಕ ತಲುಪಿತ್ತು. ಪೊಲೀಸರು ಬರುವುದಕ್ಕೆ ಮುಂಚೆ ನಾನಾಜಿ ದೇಶಮುಖ್ ತಪ್ಪಿಸಿಕೊಂಡಿದ್ದರು, ಭೂಗತರಾದರು. ಬೆಳಗಿನ ಜಾಮದಲ್ಲೇ ಜನಸಂಘದ ಸುಂದರಸಿಂಗ್ ಭಂಡಾರಿ, ಸುಬ್ರಮಣ್ಯನ್ ಸ್ವಾಮಿ, ಮದನ್ ಲಾಲ್ ಖುರಾನಾ, ಕೇದಾರನಾಥ ಸಾಹ್ನಿ, ದತ್ತೋಪಂಥ ಠೇಂಗಡಿ, ಸುರೇಂದ್ರ ಮೋಹನ್, ರವೀಂದ್ರ ವರ್ಮ, ಇವರೊಡನೆ ನಾನಾಜಿಯವರ ಗುಪ್ತ ಸಭೆ ನಡೆಯಿತು. ಅತ್ತ 26ರ ಬೆಳಿಗೆ ತುರ್ತುಪರಿಸ್ಥಿತಿ ಘೋಷಣೆಯಾಗುವ ಹೊತ್ತಿಗೆ ಇತ್ತ ಭೂಗತ ಹೋರಾಟದ ಕೇಂದ್ರವೂ ಸಿದ್ಧವಾಯಿತು. ಅಲ್ಪಸಮಯದಲ್ಲಿಯೇ ದೇಶದ ಎಲ್ಲ ರಾಜ್ಯಗಳಲ್ಲಿ ಲೋಕಸಂಘರ್ಷ ಸಮಿತಿಯ ಶಾಖೆಗಳು ಸ್ಥಾಪನೆಗೊಂಡವು. ಕರ್ನಾಟಕದಲ್ಲಿ ಲೋಕಸಂಘರ್ಷ ಸಮಿತಿಯ ಅಧ್ಯಕ್ಷರಾಗಿದ್ದವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ, ಮುಂದೆ ಸರ್ಕಾರದ ಅನ್ಯಾಯದ ಕ್ರಮವನ್ನು ಪ್ರತಿಭಟಿಸಿ ರಾಜಿನಾಮೆ ನೀಡಿದ್ದ ಕೆ.ಎಸ್.ಹೆಗಡೆಯವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿರ್ಬಂಧ ಬಿದ್ದ ನಂತರವಂತೂ ಅದರ ನಿಷ್ಠಾವಂತ ಕಾರ್ಯಕರ್ತರ ಭಾರಿ ತಂಡೋಪತಂದವೇ ಲೋಕ ಸಂಘರ್ಷ ಸಮಿತಿಗೆ ಭೂಗತ ಸಂಘಟನೆಯನ್ನು ಒದಗಿಸಿಕೊಟ್ಟಿತು.
ಲೋಕ ಸಂಘರ್ಷ ಸಮಿತಿಯು ಅಖಿಲ ಭಾರತ ಮಟ್ಟದಲ್ಲಿ ವ್ಯಾಪಕವಾಗಿ ಕೈಗೊಂದ ಮೊದಲ ಹೆಜ್ಜೆ ಸಾಂಕೇತಿಕ ಸತ್ಯಾಗ್ರಹ. ಜುಲೈ 15ರಿಂದ ಜುಲೈ 25 ರವರೆಗೆ ಪ್ರತಿದಿನವೂ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಣ್ಣಸಣ್ಣ ತಂಡಗಳಲ್ಲಿ ಸತ್ಯಾಗ್ರಹ. ತುರ್ತುಪರಿಸ್ಥಿತಿ ಹೇರೆ ಒಂದು ತಿಂಗಳು ತುಂಬುವ ದಿನ, ಅಂದರೆ ಜುಲೈ 26ರಂದು ಪ್ರಜಾಪ್ರಭುತ್ವದ ‘ಮಾಸಿಕ ಶ್ರಾದ್ಧ’ ದಿನ – ಅಂದು ಸಾರ್ವಜನಿಕ ಸ್ಥಳಗಳಲ್ಲಿ ಘಂಟಾನಾದದ ಕಾರ್ಯಕ್ರಮ. ಈ ರೀತಿ ಹಂತಹಂತವಾಗಿ ಪ್ರತಿಭಟನೆ ಸಂಘಟಿಸಲಾಯಿತು. ಸೆಪ್ಟೆಂಬರ್ ಮೊದಲ ವಾರದಲ್ಲಿ ಬೃಹತ್ ಸತ್ಯಾಗ್ರಹದ ನಿರ್ಣಯ ಕೈಗೊಳ್ಳಲಾಯಿತು. ಆದರೆ, ಆ ನಿರ್ಣಯ ಕೈಗೊಳ್ಳುವ ಮೊದಲು ದೀರ್ಘವಾದ ವಿಚಾರಮಂಥನ ನಡೆಸಲಾಗಿತ್ತು. ಸತ್ಯಾಗ್ರಹ ಯಶಸ್ವಿಯಾಗಬೇಕಾದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಅದರಲ್ಲಿ ಧುಮುಕಿದಾಗ ಮಾತ್ರ ಎನ್ನುವ ಅರಿವು ಎಲ್ಲ ಪಕ್ಷದವರಿಗೂ ಮನದಟ್ಟಾಗಿತ್ತು. ಆ ಸಮಯದಲ್ಲಿ ಸರಸಂಘಚಾಲಕ ಬಾಳಾಸಾಹೇಬ ದೇವರಸ್ ಸೆರೆಮನೆಯಲ್ಲಿದ್ದರು, ಸರಕಾರ್ಯವಾಹರಾಗಿದ್ದ ಮಾಧವರಾವ್ ಮುಳೆಯವರು ಖಾಯಿಲೆ ಮಲಗಿದ್ದರು. ಹೀಗಾಗಿ, ಸಂಘದ ಭೂಗತ ಹೋರಾಟದ ನೇತೃತ್ವ ವಹಿಸಿದ್ದವರು ಮೋರೋಪಂತ ಪಿಂಗಳೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕೇಂದ್ರೀಯ ಸಭೆ ನಡೆದು ಸತ್ಯಾಗ್ರಹದ ನಿರ್ಣಯವನ್ನು ಕೈಗೊಂಡಿತು. ಕೇಂದ್ರದಿಂದ ಪ್ರಾಂತಗಳಿಗೆ, ಪ್ರಾಂತಗಳಿಂದ ಜಿಲ್ಲೆಗಳಿಗೆ, ಅಲ್ಲಿಂದ ತಾಲ್ಲೂಕು ಹಾಗೂ ನಗರ-ಗ್ರಾಮಗಳ ಮಟ್ಟದವರೆಗೂ ಸೂಚನೆಗಳು ತ್ವರಿತವಾಗಿ ಹೋದವು. ಅದಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಭೂಗತ ಕಾರ್ಯಕರ್ತರ ಅಚ್ಚುಕಟ್ಟಾದ ಸಂಪರ್ಕದ ಕೊಂಡಿಗಳು ಮೇಲಿಂದ ಕೆಳಗಿನವರೆಗೆ ಹೆಣೆದುಕೊಂಡಿದ್ದವು. ಪ್ರಚಾರದ ದೃಷ್ಟಿಯಿಂದ ಸರ್ಕಾರಕ್ಕೆ “ಭಾರತದ ಜನಕೋಟಿಯ ಆದೇಶ”ದ ಸಣ್ಣ ಕರಪತ್ರಗಳನ್ನು ಒಂದೊಂದು ಜಿಲ್ಲೆಯಲ್ಲಿಯೂ ಲಕ್ಷಾಂತರ ಸಂಖ್ಯೆಯಲ್ಲಿ ಹಂಚುವ ತಯಾರಿ ನಡೆಯಿತು. ‘ಸತ್ಯಾಗ್ರಹ ಗೀತೆ’ಯಾಗಿ ರವೀಂದ್ರನಾಥ ಠಾಕೂರರ ಸುಪ್ರಸಿದ್ಧ ಗೀತೆ “ಆ ಸ್ವತಂತ್ರ ಸ್ವರ್ಗಕೇ ನಮ್ಮ ನಾಡು ಏಳಲೇಳಲೇಳಲಿ” ಸಿದ್ಧವಾಯಿತು. ನವೆಂಬರ್ 14ರಂದು ಸತ್ಯಾಗ್ರಹ ಪ್ರಾರಂಭಿಸುವ ಐತಿಹಾಸಿಕ ಮುಹೂರ್ತ ನಿಶ್ಚಯವಾಯಿತು. ದೇಶಾದ್ಯಂತ ಸತ್ಯಾಗ್ರಹ ಸ್ಫೋಟಗೊಳ್ಳಲಿದೆ ಎನ್ನುವ ಗುಮಾನಿ ಸರ್ಕಾರಕ್ಕೆ ಸಿಕ್ಕಿತ್ತೇ ಹೊರತು, ಅದರ ದಿನಾಂಕ ರೂಪುರೇಶೆಗಳು ಕಡೆಯವರೆಗೂ ತಿಳಿಯಲೇ ಇಲ್ಲ. ಅಷ್ಟು ಗುಪ್ತವಾಗಿ, ಜಾಗರೂಕತೆಯಿಂದ ಕೆಲಸ ನಡೆಸಲಾಗಿತ್ತು. ಮುಂದೆ ಸಿಡಿಯಲಿದ್ದ ಸತ್ಯಾಗ್ರಹವನ್ನು ಮೊಳಕೆಯಲ್ಲೇ ಚಿವುಟಿಹಾಕಲು ಸರ್ಕಾರ ಸರ್ವವಿಧವಾದ ಪ್ರಯತ್ನಗಳನ್ನೂ ಮಾಡಿತು. ಲಕ್ಷಾಂತರ ಪೊಲೀಸರು, ಗುಪ್ತಚರರ ಪಡೆಯನ್ನು ಅದಕ್ಕಾಗಿ ಉಪಯೋಗಿಸಲಾಯಿತು. ಸಾವಿರಾರು ಕಾರ್ಯಕರ್ತರ ಬಂಧನ, ಪೊಲೀಸ್ ದಾಳಿಗಳು, ಬೆದರಿಕೆಗಳ ತಾಂಡವ ದೇಶಾದ್ಯಂತವೂ ನಡೆದವು. ಆದರೆ ಎಲ್ಲವೂ ವ್ಯರ್ಥ. 1975 ರ ನವೆಂಬರ್ 14 ರಂದು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕಛ್‍ನಿಂದ ಕಾಮರೂಪದವರೆಗೆ ಏಕಕಾಲಕ್ಕೆ ಸತ್ಯಾಗ್ರಹದ ಪ್ರಚಂಡ ಸ್ಫೋಟವಾಯಿತು. “ಸರ್ವಾಧಿಕಾರ ಅಳಿಯಲಿ, ಪ್ರಜಾತಂತ್ರ ಉಳಿಯಲಿ” ಎನ್ನುವ ರಣಘೋಷಣೆಗಳಿಂದ ಭಾರತದ ಗಗನಮಂಡಲ ಮರುದನಿಸಿತು. ಸಹಸ್ರಾರು ಸಂಖ್ಯೆಯಲ್ಲಿ ಸತ್ಯಾಗ್ರಹಿಗಳಿ ಘೋಷಣೆಗಳನ್ನು ಕೂಗುತ್ತಾ ಊರೂರಿನಲ್ಲೂ ಮೆರವಣಿಗೆ ಹೊರಟರು, ಸಭೆಗಳನ್ನು ನಡೆಸಿದರು, ಭಾಷಣಗಳನ್ನು ಮಾಡಿದರು. ಸತ್ಯಾಗ್ರಹದ ಕಾವು ದಿನಗಳೆದಂತೆ ಭರದಿಂದ ಏರತೊಡಗಿತು. ಭಾರತದ ಸೆರೆಮನೆಗಳು ತುಂಬಿದವು. ಸೆರೆಮನೆಯ ಒಳಗೂ ಬಂಧಿಗಳ ಮೇಲೆ ಇನ್ನಿಲ್ಲದ ದೌರ್ಜನ್ಯಗಳು ನಡೆದವು – ಸಾಮಾಜಿಕ ಹಾಗೂ ರಾಜಕೀಯ ಕಾರ್ಯಕರ್ತರಿಗೆ ಕೊಟ್ಟ ಶಾರೀರಿಕ ಮತ್ತು ಮಾನಸಿಕ ಕಿರುಕುಳ ಸೇಡಿನ ಪರಮಾವಧಿ. ಶಾಂತಿಯುತ ಸತ್ಯಾಗ್ರಹ, ಭೂಗತ ಆಂದೋಳನಗಳನ್ನು ಹೊಸಕಿಹಾಕಲು ಪೊಲೀಸರು ನಡೆಸಿದ ದೌರ್ಜನ್ಯ ಹಿಂದಿನ ಬ್ರಿಟಿಷ್ ಆಳರಸರನ್ನೂ ನಾಚಿಸುವಂತಹುದು. ಬ್ರಿಟಿಷರ ಆಳ್ವಿಕೆಯಲ್ಲಿ ಅವರು ನಡೆಸುತ್ತಿದ್ದ ದೌರ್ಜನ್ಯಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು, ಎಲ್ಲವೂ ಜನರಿಗೆ ನಿತ್ಯವೂ ತಿಳಿಯುತ್ತಿತ್ತು. ಆದರೆ, ಇಂದಿರಾ ಸರ್ಕಾರ ಮಾಡಿದ ಯಾವ ಕೃತ್ಯಗಳೂ ಹೊರಗೆ ಬರುವಂತಿಲ್ಲ. ಯಾರು ಯಾರು ಬಂಧಿತರಾಗಿದ್ದಾರೆ, ಯಾವ ಯಾವ ಸೆರೆಮನೆಯಲ್ಲಿದ್ದಾರೆ, ಒಂದೂ ಜನಕ್ಕೆ ತಿಳಿಯುವಂತಿಲ್ಲ. ಅವರು ಜೀವಂತರಾಗಿದ್ದಾರೆಯೇ, ಇಲ್ಲವೇ, ಅದೂ ಸಹ ಗೊತ್ತಾಗಲು ಅವಕಾಶವಿಲ್ಲ. ದೇಶದ ಮಹಾ ಮಹಾ ನಾಯಕರೂ – ಮೊರಾರ್ಜಿ, ಜೆ.ಪಿ, ವಾಜಪೇಯಿ, ಚರಣ್ ಸಿಂಗ್ ಮುಂತಾದವರು – ಜನಗಳ ಕಣ್ಮುಂದಿನಿಂದ ಏಕಾಕೇಕಿ ಅದೃಶ್ಯರಾಗಿ ಹೋದಂತಹ ಭೀಕರ ಶೂನ್ಯಸ್ಥಿತಿ. ಇನ್ನು ಅವರ ಹೇಳಿಕೆಗಳು, ಆರೋಗ್ಯದ ಸಮಾಚಾರಗಳು ಜನರಿಗೆ ತಿಳಿಯುವುದಂತೂ ದೂರವೇ ಉಳಿಯಿತು. ಪ್ರಮುಖ ಜನನಾಯಕರ ಬಗೆಗೇ ಈ ಸ್ಥಿತಿ ಇದ್ದಮೇಲೆ ಇನ್ನು ನಿಮ್ಮ ಸಾಮಾನ್ಯ ಕಾರ್ಯಕರ್ತರ ಪಾಡು ಹೇಗಿದ್ದಿರಬೇಕು? ಇಂತಹ ಪರಿಸ್ಥಿತಿಯಲ್ಲಿ ಹೋರಾಟ ನಡೆಯಬೇಕಾಗಿತ್ತು. ಎಲ್ಲವೂ ಕತ್ತಲಲ್ಲೇ. ಪೊಲೀಸರ ದಮನ-ದಬ್ಬಾಳಿಕೆಗಳ ದವಡೆಯಲ್ಲೇ ಮುನ್ನಡೆಯಬೇಕಾಗಿತ್ತು.
ಇಂತಹ ಕರಾಳ ಸಮಯದಲ್ಲಿ ಭೂಗತ ಸಂಘಟನೆಯನ್ನು ನಿಜವಾಗಿಯೂ ಕಟ್ಟಿ ಹೋರಾಟ ಮಾಡಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ. ಕೇಂದ್ರ ಮಟ್ಟದಿಂದ ಮೊದಲುಗೊಂಡು ಪ್ರಾಂತ, ವಿಭಾಗ, ಜಿಲ್ಲೆ, ತಾಲ್ಲೂಕು, ಊರುಗಳವರೆಗೂ ಅದರ ಭೂಗತ ಕಾರ್ಯಕರ್ತರ ತಂಡಗಳು ಹಬ್ಬಿ ಹರಡಿಕೊಂಡಿದ್ದವು. ತುರ್ತುಪರಿಸ್ಥಿತಿಯ 21 ತಿಂಗಳುಗಳೂ ಅತ್ಯಂತ ಚುರುಕಾಗಿ ಕೆಲಸ ಮಾಡುತ್ತಿದ್ದ ಭೂಗತ ವ್ಯವಸ್ಥೆಯೇ ಇದು. ಅದರ ಪ್ರಾಥಮಿಕ ಕೇಂದ್ರಗಳಲ್ಲಿ ಪಾಲ್ಗೊಳ್ಳುತ್ತಿದ್ದವರು ಹೆಚ್ಚಿನ ಮಟ್ಟಿಗೆ ಯುವಕರು. ಸತ್ಯಾಗ್ರಹದ ನಂತರವಂತೂ ಅವರ ಕ್ರಿಯಾಚೇತನಕ್ಕೆ ಪುಟ ಕೊಟ್ಟಂತೆ ಆಯಿತು. ಹೊಸಹೊಸಬರನ್ನು ಕೂಡಿಸಿಕೊಂಡು ಹೊಸ ಹೊಸ ಜಾಗಗಳಲ್ಲೂ ಕೇಂದ್ರಗಳು ತಲೆಯೆತ್ತತೊಡಗಿದವು. ಪೊಲೀಸರು ತಮ್ಮ ಸರ್ವತಂತ್ರ-ಸಾಮರ್ಥ್ಯಗಳನ್ನು ಪ್ರಯೋಗಿಸಿದ್ದುದೂ ಈ ಭೂಗತ ಜಾಲವನ್ನು ಧ್ವಂಸಗೊಳಿಸಲೆಂದೇ. ಆದರೆ, ಪೊಲೀಸರು ಮತ್ತು ಸರ್ಕಾರ ತಮ್ಮ ದುರುದ್ದೇಶದಲ್ಲಿ ಸಫಲರಾಗಲಿಲ್ಲ ಎಂದು ಬೇರೆ ಹೇಳಬೇಕಾಗಿಲ್ಲ. ಸಂಘದ ಕಾರ್ಯಕರ್ತರು ಭೂಗತ ಕಾರ್ಯದಲ್ಲಿ ಇಷ್ಟರಮಟ್ಟಿಗೆ ಯಶಸ್ವಿಯಾಗಲು ಕಾರಣ, ಅವರು ಸಮಾಜದಿಂದ ಬೇರೆಯಾಗಿ ನಿಂತು ಕೆಲಸ ಮಾಡದಿರುವುದು – ಅವರು ಸಮಾಜದೊಳಗೇ ಇದ್ದರು, ಪ್ರವಾಸ ಮಾಡುತ್ತಿದ್ದವರು ಕಾರ್ಯಕರ್ತರ ಮನೆಗಳಲ್ಲಿ ತಂಗುತ್ತಿದ್ದರು, ಆ ಮನೆಯ ಮಾಮ, ಚಿಕ್ಕಪ್ಪ, ಅಣ್ಣ, ತಮ್ಮ, ಇತ್ಯಾದಿ ಆಗಿ ಮನೆಯವರಂತೆಯೇ ಇರುತ್ತಿದ್ದರು. ಹೀಗಾಗಿ, ಇವರನ್ನು ಪತ್ತೆಹಚ್ಚುವುದು ಪೊಲೀಸರಿಗೆ, ಗುಪ್ತಚರರಿಗೆ ಅಸಾಧ್ಯವಾಗಿತ್ತು. ಮನೆಮನೆಯೂ ಭೂಗತ ಕಾರ್ಯಗಳಲ್ಲಿ ಸಹಕಾರ ನೀಡಿತು, ಮನೆಯ ಹೆಣ್ಣುಮಕ್ಕಳೂ ಭೂಗತ ಚಟುವಟಿಕೆಗಳನ್ನು ಯಶಸ್ವಿಗೊಳಿಸಲು ಕಾರಣಕರ್ತರಾದರು.
1977ರ ಜನವರಿ 18ರಂದು ರಾತ್ರಿ ಇದ್ದಕ್ಕಿದ್ದಂತೆ ಚುನಾವಣೆಯ ಘೋಷಣೆ ಮಾಡಲಾಯಿತು. ಕಳೆದ 19 ತಿಂಗಳು ವಿದೋಧ ಪಕ್ಷದ ಉಸಿರುಕಟ್ಟಿದ್ದರಿಂದ ಅವು ಮತ್ತೆ ಉಸಿರೆತ್ತಲು ಸಧ್ಯದಲ್ಲಿ ಸಾಧ್ಯವಿಲ್ಲ. ಕಚ್ಚಾಡುವ ಪ್ರತಿಪಕ್ಷಗಳು ಇಷ್ಟು ಕಡಿಮೆ ಸಮಯದಲ್ಲಿ ಒಗ್ಗೂಡಲಾರವು. ಜನರಂತೂ ಪ್ರತಿಪಕ್ಷಗಳ, ಅದರ ನಾಯಕರ ಸುದ್ದಿಯನ್ನೇ ಕಳೆದ 19 ತಿಂಗಳುಗಳಿಂದ ಕೇಳಿಲ್ಲ. ಜನರು ಅವರನ್ನು ಮರೆತು ಬಿಟ್ಟಿದ್ದಾರೆ ಮತ್ತು ಅವರಿಗೆ ಮತ ಹಾಕುವುದುಲ್ಲ. ಹೀಗಾಗಿ, ಚುನಾವಣೆಯಲ್ಲಿ ಗೆಲುವು ನನ್ನದೇ. ಮತ್ತು ಜಗತ್ತಿನ ಎದುರು ಪ್ರಜಾಪ್ರಭುತ್ವದ ಮಾದರಿಯಲ್ಲೇ ತಾನು ಚುನಾಯಿಸಿ ಆರಿಸಲ್ಪಟ್ಟಿರುವೆ ಎಂದು ತೋರಿಸಬಹುದು. ಇದು ಇಂದಿರಾಗಾಂಧಿಯವರ ಲೆಕ್ಕಾಚಾರವಾಗಿತ್ತು. ಚುನಾವಣೆ ಘೋಷಣೆಯೊಂದಿಗೇ ನಿಧಾನವಾಗಿ ತುರ್ತುಪರಿಸ್ಥಿತಿಯ ಕರಾಳ ಶಾಸನಗಳನ್ನೆಲ್ಲಾ ಒಂದೊಂದಾಗಿ ತೆಗೆಯಲಾರಂಭಿಸಿದರು. ಮತ್ತು ನಿಧಾನವಾಗಿ ಸೆರೆಮನೆಯಲ್ಲಿ ಬಂಧಿತರಾಗಿದ್ದವರ ಬಿಡುಗಡೆಯೂ ಪ್ರಾರಂಭವಾಯಿತು. ಮಾರ್ಚ್ 16ರಂದು ಚುನಾವಣೆಗಳು ನಡೆದವು ಮತ್ತು ಆ ನಂತರ ನಡೆದ ಘಟನೆಗಳು ಸುಪ್ರಸಿದ್ಧ. ಇಂದಿರಾ ಗಾಂಧಿ ಚುನಾವಣೆಯಲ್ಲಿ ಸೋತರು. ಲೋಕಸಭೆಯಲ್ಲಿ ಮೊತ್ತಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡಿತ್ತು, ಮೊರಾರ್ಜಿ ದೇಸಾಯಿ ಅವರ ನೇತೃತ್ವದಲ್ಲಿ ಜನತಾ ಪಕ್ಷ ಅಧಿಕಾರಕ್ಕೇರಿತು.
ತುರ್ತು ಪರಿಸ್ಥಿತಿಯ 21 ತಿಂಗಳ ಕರಾಳ ಅವಧಿ ನಮ್ಮ ರಾಷ್ಟ್ರಜೀವನದಲ್ಲಿ ಒಂದು ಬಹು ಕ್ರೂರವಾದ ಸಂದಿಗ್ಧ ಪರ್ವ. ಅಂತಹ ಅಗ್ನಿಪರೀಕ್ಷೆಯ ಘಳಿಗೆಯೇ ಒಂದು ರಾಷ್ಟ್ರಜೀವನದ ಸತ್ವಪರೀಕ್ಷೆಯ ಕಾಲವೂ ಹೌದು. ಆ ವಿಷಮ ಘಳಿಗೆ ನಮ್ಮ ಭಾರತೀಯರ ವಿವಿಧ ಮನೋಧರ್ಮಗಳಿಗೆ ಹಿಡಿದ ಕೈಗನ್ನಡಿ. ಒಂದು ತುದಿಯಲ್ಲಿ ಅಂದಿನ ಪರಿಸ್ಥಿತಿಯನ್ನು ಬದಲಾಯಿಸಬೇಕೆನ್ನುವ ಕೆಚ್ಚು, ಸರ್ವಾಧಿಕಾರದ ವಿರುದ್ಧ ಸಿಡಿದೆದ್ದ ಪೌರುಷ, ಉತ್ಕಟವಾದ ಸ್ವಾತಂತ್ರ್ಯಲಾಲಸೆ, ಅದರ ಸಿದ್ಧಿಗಾಗಿ ಲೆಕ್ಕವಿಲ್ಲದಷ್ಟು ಕಷ್ಟ-ಸಂಕಟಗಳನ್ನು ಸಹಿಸುವ ಮನೋಬಲ. ಇನ್ನೊಂದು ತುದಿಯಲ್ಲಿ ಅಂಜಿಕೆ, ಹೇಡಿನತ, ಭಟ್ಟಂಗಿವೃತ್ತಿ, ಸ್ವಾರ್ಥ, ಸ್ವಜನದ್ರೋಹ, ಅಧಿಕಾರ ಲಾಲಸೆ, ದೌರ್ಜನ್ಯ, ದಬ್ಬಾಳಿಕೆ, ಇತ್ಯಾದಿ, ಇಂದಿರಾಗಾಂಧಿಯವರು ಸರ್ವಾಧಿಕಾರದ ಕನಸ್ಯ್ ಕಾಣಲು ಸಾಧ್ಯವಾದದ್ದು ಇಂತಹದ ಬಲದ ಮೇಲೆಯೇ. ಪ್ರತಿಯೊಂದು ರಾಷ್ಟ್ರದಲ್ಲಿಯೂ ಈ ಎರಡು ಪ್ರವೃತ್ತಿಗಳೂ ಇರುವಂತಹುದೇ. ಆದರೆ, ರಾಷ್ಟ್ರದ ಅಳಿವು ಉಳಿವಿನ ಪ್ರಶ್ನೆ ಬಂದಾಗ ಇವೆರಡರಲ್ಲಿ ಯಾವುದು ಮೇಲುಗೈ ಪಡೆಯುತ್ತದೆ ಎನ್ನುವುದರ ಮೇಲೆ ಆ ರಾಷ್ಟ್ರದ ಭವಿತವ್ಯ ನಿಂತಿರುತ್ತದೆ. 21 ತಿಂಗಳ ಕಾಲ ಸರ್ವಾಧಿಕಾರದ ಕರಾಳ ರಾತ್ರಿಯನ್ನು ಅನುಭವಿಸಿದ ನಮ್ಮ ಜನಕ್ಕೆ ಇದಕ್ಕಿಂತ ಚೆನ್ನಾಗಿ ಕಣ್ತೆರೆಸುವ ವ್ಯತ್ಯಾಸದ ದೃಶ್ಯ ಮತ್ತೊಂದಿರಲಾರದು. ಜನತೆ ಎಚ್ಚರ ತಪ್ಪಿದರೆ ತಮ್ಮೆಲ್ಲ ಅಧಿಕಾರಗಳನ್ನೂ, ಕಡೆಗೆ ಸ್ವಾತಂತ್ರ್ಯವನ್ನೂ ಕಳೆದುಕೊಳ್ಳಬಹುದು ಎನ್ನುವುದಕ್ಕೆ “ತುರ್ತು ಪರಿಸ್ಥಿತಿ”ಯ ಘಟನೆಗಳು ಜ್ವಲಂತ ಉದಾಹರಣೆ. ತಮಗೆ ಸಿಕ್ಕಿರುವ ಸ್ವಾತಂತ್ರ್ಯವು ಬಹುಮೂಲ್ಯವಾದುದು, ಅದನ್ನು ಕಾಪಾಡಿಕೊಳ್ಳುವುದು ತಮ್ಮ ಜವಾಬ್ದಾರಿ, ಅದಕ್ಕಾಗಿ ಬೆಲೆಯನ್ನು ತೆರಬೇಕು, ಸದಾ ಎಚ್ಚರದಿಂದಿರಬೇಕು, ಸತರ್ಕರಾಗಿರಬೇಕು, ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ತಪ್ಪದೆ ಪಾಲ್ಗೊಳ್ಳಬೇಕು – ಈ ಪಾಠವನ್ನು ಎಲ್ಲರೂ ಸದಾ ನೆನಪಿಟ್ಟುಕೊಳ್ಳಬೇಕು ಮತ್ತು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.