
ಸೇವಾ ಭಾರತಿ ಮಂಗಲ್ಪಾಡಿ ವತಿಯಿಂದ ಶ್ರೀ ಜನಾರ್ದನ ಪ್ರತಾಪನಗರ ಇವರ ಸ್ಮರಣಾರ್ಥ ರಕ್ತದಾನ ಶಿಬಿರ
ಉಪ್ಪಳ: ಶ್ರೀ ಜನಾರ್ದನ ಪ್ರತಾಪನಗರ ಇವರ ಸ್ಮರಣಾರ್ಥ ಸೇವಾ ಭಾರತಿ ಮಂಗಲ್ಪಾಡಿ ಹಾಗೂ ಕೆ ಎಂ ಸಿ ಹಾಗೂ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಹಾಗೂ ಆರೋಗ್ಯ ಮಾಹಿತಿ ಶಿಬಿರ ದಿನಾಂಕ. 22 ಸೆಪ್ಟೆಂಬರ್ ಆದಿತ್ಯವಾರದಂದು ಉಪ್ಪಳದ ಐಲ ಶ್ರೀ ದುರ್ಗಾಪರಮೇಶ್ವರಿ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಆರ್ ಎಸ್ ಎಸ್ ನ ಮಂಗಳೂರು ವಿಭಾಗದ ಮಾನ್ಯ ಸಂಘಚಾಲಕರಾದ ಶ್ರೀ ಗೋಪಾಲ ಚೆಟ್ಟಿಯಾರ್ ಅವರು ನಡೆಸಿ ಮಾತನಾಡುತ್ತಾ ಭಾರತ ಅತಿ ಹೆಚ್ಚು ಯುವಕರು ಇರುವ ದೇಶ. ಆದರೂ ಇತ್ತೀಚೆಗೆ ರಕ್ತದ ಅವಶ್ಯಕತೆಯೂ ಹೆಚ್ಚಾಗುತ್ತಿದೆ. ಆ ನಿಟ್ಟಿನಲ್ಲಿ ಎಲ್ಲಾ ಯುವಕರು ರಕ್ತದಾನ ಮಾಡುವಂತಾಗಬೇಕು ಎಂದರು. ರಕ್ತ ನೀಡುವುದರಿಂದ ಯಾವುದೇ ತೊಂದರೆ ಇಲ್ಲ. ಹಾಗಾಗಿ ಈ ಬಾರಿ ರಕ್ತ ನೀಡಿದವರು ಮುಂದಿನ ಬಾರಿ ಹೊಸಬರನ್ನು ರಕ್ತ ನೀಡುವಂತೆ ಪ್ರೇರೇಪಣೆ ನೀಡಬೇಕು. ಹಾಗೂ ಸೇವಾ ಭಾರತಿ ಮಂಗಲ್ಪಾಡಿ ವರ್ಷದಲ್ಲಿ ಒಂದಕ್ಕಿಂತ ಹೆಚ್ಚಿನ ಬಾರಿ ಇಂತಹ ಕಾರ್ಯಕ್ರಮ ನಡೆಸುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಯಾಂಪ್ಕೋ ಅಧ್ಯಕ್ಷರಾದ ಶ್ರೀ ಎಸ್ ಆರ್ ಸತೀಶ್ಚಂದ್ರ ಅವರು ಮಾತನಾಡುತ್ತ ಇಂದು ಆಯೋಜಿಸಲ್ಪಟ್ಟ ರಕ್ತದಾನ ಶಿಬಿರವು ಸಮಾಜಕ್ಕೋಸ್ಕರ ಬದುಕಿ ತ್ಯಾಗ ಮಾಡಿದವರ ನೆನೆಪಿನಲ್ಲಿ ನಡೆಯುತ್ತಿದೆ. ಭಾರತ ದೇಶ ಇಂದು ಇಡೀ ವಿಶ್ವದಲ್ಲಿ ಇಷ್ಟೊಂದು ಗೌರವ ಹಾಗೂ ಮಾನ್ಯತೆ ಸಿಗಲು ಶ್ರೀ ಶಂಕರಾಳ್ವ ಹಾಗೂ ಶ್ರೀ ಜನಾರ್ದನ ರಂತಹ ಸಾವಿರ ಸಾವಿರ ಕಾರ್ಯಕರ್ತರ ಪರಿಶ್ರಮ ಹಾಗೂ ತ್ಯಾಗ ಕಾರಣ. ಅಂತಹವರ ತ್ಯಾಗದ ಪ್ರೇರಣೆ ನಮಗೆ ನಿರಂತರವಾಗಿ ನಮಗೆ ಸಿಗಲು ಇಂತಹ ರಕ್ತದಾನದಂತಹ ಕಾರ್ಯಕ್ರಮ ಅವಶ್ಯಕ ಎಂಬುದಾಗಿ ಹೇಳಿದರು. ಭಾರತದಲ್ಲಿ ದಾನಕ್ಕೆ ಇರುವಷ್ಟು ಮಹತ್ವ ಬೇರೆಲ್ಲೂ ಇಲ್ಲ.ಸಮಾಜಕ್ಕೆ ಸಮರ್ಪಣೆ ನೀಡುವ ಭಾಗವಾಗಿ ರಕ್ತದಾನವೂ ಶ್ರೇಷ್ಠವಾಗಿದೆ. ಆ ಶ್ರೇಷ್ಠ ಕೆಲಸ ನಾವು ಮಾಡೋಣ ಎಂದು ಹೇಳಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಐಲ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ನಾರಾಯಣ ಹೆಗ್ಡೆ ಕೋಡಿಬೈಲು ಇವರು ವಹಿಸಿದ್ದರು. ಕೆ ಎಂ ಸಿ ಹಾಗೂ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಪ್ರತಿನಿಧಿಯಾಗಿ ಡಾ|| ರತ್ನಂ ಉಪಸ್ಥಿತರಿದ್ದರು.ಪ್ರಸ್ತಾವನೆ ಹಾಗೂ ಸ್ವಾಗತವನ್ನು ಸೇವಾ ಭಾರತಿ ಮಂಗಲ್ಪಾಡಿಯ ಕಾರ್ಯದರ್ಶಿಶ್ರೀ ಸತೀಶ ಶೆಟ್ಟಿ ಒಡ್ಡಂಬೆಟ್ಟು, ಧನ್ಯವಾದ ಶ್ರೀ ರಘು ಚೆರುಗೋಳಿ ಮತ್ತು ನಿರೂಪಣೆ ಶ್ರೀಧರ ಶೆಟ್ಟಿ ಪರಂಕಿಲ ನಡೆಸಿದರು. ಒಟ್ಟು 102 ಮಂದಿ ಈ ಕಾರ್ಯಕ್ರಮದಲ್ಲಿ ರಕ್ತದಾನವನ್ನು ಮಾಡಿದರು.




