
ಬ್ರಹ್ಮಾಪುರ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಅವರು ಬ್ರಹ್ಮಪುರ (ಬರ್ಹಾನ್ಪುರ)ದ ಪ್ರವಾಸದಲ್ಲಿದ್ದು ಡಾ.ಹೆಡ್ಗೆವಾರ್ ಸ್ಮಾರಕ ಸಮಿತಿಯ ವತಿಯಿಂದ ನಿರ್ಮಾಣಗೊಂಡ ಹೊಸ ಕಾರ್ಯಾಲಯವನ್ನು ಲೋಕಾರ್ಪಣೆಗೊಳಿಸಿದರು. ಅವರು ನೆರೆದಿದ್ದ ಸಮಾಜಜನರನ್ನು ಮತ್ತು ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿ “ಸಂಘವು ಇಡಿಯ ಸಮಾಜವನ್ನು ತನ್ನದೆಂದು ಭಾವಿಸುತ್ತದೆ. ಸಂಘ ದೊಡ್ಡದಾಗುತ್ತಾ ಸಮಾಜದ ರೂಪ ತಳೆಯುತ್ತದೆ, ಆಗ ಸಂಘ ಎಂಬ ಹೆಸರು ಅಳಿಸಿ ಹೋಗುತ್ತದೆ. ಇಡಿಯ ಹಿಂದೂ ಸಮಾಜವೇ ಸಂಘಮಯವಾಗುತ್ತದೆ. ಹಾಗಾಗಿ ಇದು ಸಮಾಜದ ಸಹಯೋಗದಿಂದ ನಿರ್ಮಾಣಗೊಂಡಿರುವುದು ಮತ್ತು ಸಮಾಜಕ್ಕೇ ಸಮರ್ಪಣೆಗೊಳ್ಳುತ್ತದೆ” ಎಂದರು.

ಅವರು ಮುಂದುವರೆದು ಮಾತನಾಡುತ್ತಾ “ಕಾರ್ಯಾಲಯವು ನಮ್ಮ ಸಂಘಕಾರ್ಯದಲ್ಲಿ ಹೆಚ್ಚಿನ ಸವಲತ್ತು ನೀಡುವುದಲ್ಲದೆ ಯಾರೇ ಹೊಸ ವ್ಯಕ್ತಿ ಸಂಘದ ಜೊತೆ ಜೋಡಿಸಿಕೊಂಡರೂ ಸಂಘದ ವಿಶೇಷತೆಗಳ ಅನುಭವ ಈ ಭವನದಲ್ಲಿ ಆಗಬೇಕಿದೆ. ಸಂಘದ ಕಾತಗಯ ಸ್ವಾರ್ಥ ಅಥವಾ ಭಯದಿಂದ ನಡೆಯುವುದಿಲ್ಲ. ಆತ್ಮೀಯತೆಯಿಂದ ಮಾತ್ರ ನಡೆಯಲು ಸಾಧ್ಯ. ಯಾಕೆಂದರೆ ಸ್ವಾರ್ಥ ಮತ್ತು ಭಯ ಸ್ಥಾಯಿಯಲ್ಲ. ಹಾಗಾಗಿ ಕಾರ್ಯಾಲು ಬರುವಂತಹ ಪ್ರತಿಯೊಬ್ಬ ವ್ಯಕ್ತಿಗೂ ಆತ್ಮೀಯತೆಯ ಅನುಭವ ನೀಡಬೇಕು ಜೊತೆಗೆ ಕಾರ್ಯಾಲಯದ ಶಿಸ್ತನ್ನೂ ಪಾಲಿಸಬೇಕು” ಎಂದರು.
ಸರಸಂಘಚಾಲಕರು ಮಾತನಾಡುತ್ತಾ “ಸಂಘದ ಕಾರ್ಯ ಲೋಕ ಸಂಗ್ರಹದ ಕಾರ್ಯ,ಸಂಘದ ಕಾರ್ಯ ಈಶ್ವರೀಯ ಕಾರ್ಯ ಮತ್ತು ಈಶ್ವರೀಯ ಕಾರ್ಯ ಭಗವಂತನೇ ಮಾಡುತ್ತಾನೆ, ಆದರೆ ಅವುಗಳ ನಿಮಿತ್ತಗಳಷ್ಟೇ ನಾವು. ಹಾಗಾಗಿ ಶಾಖೆ ನಡೆಯುತ್ತದೆ. ನಮ್ಮ ಈಶ್ವರೀಯ ಮತ್ತು ಪವಿತ್ರ ಕಾರ್ಯದ ಅನುಭವ ಕಾರ್ಯಾಲಯದ ವಾತಾವರಣದಲ್ಲೂ ಅನುಭವಕ್ಕೆ ಬರಬೇಕಿದೆ. ಸಮಾಜದ ಈ ಸಂಘಟಿತ ಶಕ್ತಿಯಿಂದ ಒಳ್ಳೆಯ ಕಾರ್ಯಗಳು ನಡೆಯಬೇಕಿದೆ. ಇಂತಹ ಶಕ್ತಿಯಿಂದ ಸಜ್ಜನರ ಸುರಕ್ಷೆಯಾಗುತ್ತದೆ ಮತ್ತು ಧರ್ಮ ರಕ್ಷಣೆಯ ಶಕ್ತಿಯೂ ಉತ್ಪನ್ನವಾಗುತ್ತದೆ, ಅಷ್ಟಲ್ಲದೆ ದುರ್ಜನರ ಎದೆಯಲ್ಲೂ ಒಮ್ಮೆ ಭಯ ಮೂಡುತ್ತದೆ” ಎಂದರು.
“ಇಂದು ಸಂಘಕಾರ್ಯ ಹೆಚ್ಚುತ್ತಿದೆ,ಸಂಘದ ಹಿತೈಷಿಗಳು ಹೆಚ್ಚಾಗುತ್ತಿದ್ದಾರೆ. ಹಾಗಾಗಿ ಎಲ್ಲ ಜಾಗಗಳಲ್ಲೂ ಕಾರ್ಯಾಲಯಗಳು ನಿರ್ಮಾಣವಾಗುತ್ತಿದೆ. ಆದರೆ ಯಾವಾಗ ಕಾರ್ಯಾಲಯ ಇರಲಿಲ್ಲವೋ ಆಗಲೂ ಸಂಘ ಇತ್ತು. ಹಾಗಾಗಿ ಸವಲತ್ತುಗಳ ಕಾರಣದಿಂದ ಸಂಘದ ಕ್ಷಮತೆ ಹೆಚ್ಚಾಗಬೇಕೇ ಹೊರತು ಕಡಿಮೆಯಾಗಬಾರದು.”



ಸರಸಂಘಚಾಲಕರು ಮಾತನಾಡುತ್ತಾ “ಪೂರ್ಣ ಸಮಾಜ ಸಂಘಟಿತವಾಗಿ ನಮ್ಮ ದೇಶಕ್ಕಾಗಿ ಜೀವಿಸುವ ಹುತಾತ್ಮರಾಗಲು ತತ್ಪರರಾಗಿ, ಒಗ್ಗಟ್ಟಾಗಿ ಭೇದ ಮತ್ತು ಸ್ವಾರ್ಥವನ್ನು ಮರೆತು ಜೀವಿಸಬೇಕಿದೆ. ಆಗ ಮಾತ್ರ ದೇಶ ಮುಂದುವರೆಯಲು ಸಾಧ್ಯ. ದೇಶವನ್ನು ಮುನ್ನಡೆಸಲು ಯಾರಿಗೂ ಗುತ್ತಿಗೆ ನೀಡಲು ಸಾಧ್ಯವಿಲ್ಲ. ಸಂಘಕ್ಕೂ ನೀಡಲು ಸಾಧ್ಯವಿಲ್ಲ. ಪೂರ್ತಿ 130ಕೋಟಿ ಜನರ ಸಮಾಜ ಸಂಘಟಿತವಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ” ಎಂದರು.