
ಬೆಂಗಳೂರು, ಜುಲೈ 7, 2016: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯಿಂದ ವಿಕಲಚೇತನ ಅಥವಾ ದಿವ್ಯಾಂಗರ ಸಬಲೀಕರಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಅಖಿಲ ಭಾರತೀಯ ಸಂಘಟನೆಯಾದ ‘ಸಕ್ಷಮ’ವು ’ಕಾರ್ನಿಯ ಅಂಧತ್ವ ಮುಕ್ತ ಭಾರತ ಅಭಿಯಾನ’ (CAMBA) ಎಂಬ ಬೃಹತ್ ನೇತ್ರದಾನ ಜಾಗೃತಿಯ ಅಭಿಯಾನವನ್ನು ಹಮ್ಮಿಕೊಂಡಿದೆ.
ಮುಂಬರುವ ಆಗಸ್ಟ್ 25 ರಿಂದ ಸೆಪ್ಟೆಂಬರ್ 8ರ ವರೆಗೆ ರಾಜ್ಯಾದ್ಯಂತ ರಾಷ್ಟ್ರೀಯ ನೇತ್ರದಾನ ಜಾಗೃತಿಯ ಅಂಗವಾಗಿ ನೇತ್ರದಾನ ಜಾಗೃತಿಯ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಆಗಸ್ಟ್ 28ರ ಭಾನುವಾರದಂದು ಕರ್ನಾಟಕ ರಾಜ್ಯಾದ್ಯಂತ ಆರೆಸ್ಸೆಸ್ ಸ್ವಯಂಸೇವಕರು ಆಯಾ ಜಿಲ್ಲೆಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ಕಾರ್ನಿಯ ಅಂಧತ್ವ ಹಾಗೂ ನೇತ್ರದಾನದ ಕುರಿತು ಜಾಗೃತಿ ಮೂಡಿಸಲಿದ್ದಾರೆ.
ಆಗಸ್ಟ್ 25 ರಿಂದ ಸೆಪ್ಟೆಂಬರ್ 8ರ ವರೆಗಿನ ಈ ಪಾಕ್ಷಿಕ ಅಭಿಯಾನದ ಸಂದರ್ಭದಲ್ಲಿ ನೇತ್ರಜಾಗೃತಿ ಜಾಥಾ (ಬ್ಲೈಂಡ್ ವಾಕ್), ಬೀದಿ ನಾಟಕ ಹಾಗೂ ಶಾಲಾ ಕಾಲೇಜುಗಳಲ್ಲಿ ವಿವಿಧ ಸ್ಪರ್ಧೆಗಳು, ಮಾನವ ಸರಪಳಿ ರಚನೆ, ಮನೆ-ಮನೆ ಸಂಪರ್ಕ, ಲೇಖನ ಪ್ರಕಟಣೆ, ಸಾಮಾಜಿಕ ಜಾಲತಾಣಗಳಲ್ಲಿ ಅರಿವು ಸೇರಿದಂತೆ ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 2016ರ ಮಾರ್ಚ್ 5 ರಂದು ದೆಹಲಿಯಲ್ಲಿ ಆರೆಸ್ಸೆಸ್ ಸರಕಾರ್ಯವಾಹ ಸುರೇಶ್ ಭಯ್ಯಾಜಿ ಜೋಶಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು.
ಕಾರ್ನಿಯ ಅಂಧತ್ವವು ಭಾರತ ಎದುರಿಸುತ್ತಿರುವ ಗಂಭೀರ ಆರೋಗ್ಯ ಸವಾಲುಗಳಲ್ಲೊಂದಾಗಿದೆ. ಕಾರ್ನಿಯ ಎಂಬುದು ಕಣ್ಣಿನ ಹೊರಭಾಗದಲ್ಲಿನ ಪಾರದರ್ಶಕವಾದ ಭಾಗವಾಗಿದ್ದು, ಅನೇಕ ಕಾರಣಗಳಿಂದ ಇದು ದುರ್ಬಲಗೊಂಡು ಅಂಧತ್ವಕ್ಕೆ ಕಾರಣವಾಗುತ್ತದೆ. ಈ ಅಂಧತ್ವವು ಅತ್ಯಂತ ಸುಲಭ ಶಸ್ರ್ತಚಿಕಿತ್ಸೆಯ ಮೂಲಕ ಗುಣಪಡಿಸಬಹುದಾಗಿದ್ದು, ಜೀವನಪೂರ್ತಿ ಬೆಳಕಿನ ಬದುಕು ದೊರೆಯಬಹುದು. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 2 ಲಕ್ಷದಿಂದ 20 ಲಕ್ಷ ಕಾರ್ನಿಯ ಅಂಧರಿದ್ದಾರೆ. ಇವರಲ್ಲಿ ಮಕ್ಕಳ ಸಂಖ್ಯೆಯೇ ಅಧಿಕ. ಕಾರ್ನಿಯ ಅಂಧತ್ವಕ್ಕೆ ನೇತ್ರದಾನದಿಂದ ಮಾತ್ರ ಪರಿಹಾರ ಸಾಧ್ಯ.
ಅಭಿಯಾನದ ಉದ್ದೇಶ:
- ಈಗಿರುವ ನೇತ್ರದಾನಿಗಳ ಸಂಖ್ಯೆ ಕೇವಲ 25 ಸಾವಿರ. ಈ ಸಂಖ್ಯೆಯನ್ನು 2 ರಿಂದ 4ಲಕ್ಷಕ್ಕೆ ಹೆಚ್ಚಿಸುವುದು.
- ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನೇತ್ರಬ್ಯಾಂಕ್‌ಗಳನ್ನು ಸ್ಥಾಪನೆಗೆ ಆಗ್ರಹ.
- ಕಾರ್ನಿಯ ತಜ್ಙರ ಸಂಖ್ಯೆ ಹಾಗೂ ಲಭ್ಯತೆಯನ್ನು ಹೆಚ್ಚಿಸುವ ಪ್ರಯತ್ನ.
- ನೇತ್ರದಾನದ ಕುರಿತು ಜನಸಾಮಾನ್ಯರಲ್ಲಿರುವ ತಪ್ಪು ತಿಳುವಳಿಕೆಗಳನ್ನು ನಿವಾರಿಸಿ ನೇತ್ರದಾನ ಮಾಡುವಂತೆ ಪ್ರೇರೇಪಿಸುವುದು.
ಸಾರ್ವಜನಿಕರ ಸಹಭಾಗಿತ್ವದೊಂದಿಗೆ 2020ರ ವೇಳೆಗೆ ಭಾರತವನ್ನು ಕಾರ್ನಿಯ ಅಂಧತ್ವದಿಂದ ಮುಕ್ತವಾಗಿಸುವ ಮಹತ್ವಾಕಾಂಕ್ಷೆಯ ಉದ್ದೇಶದಿಂದ ಸಕ್ಷಮವು ಈ ಬೃಹತ್ ನೇತ್ರದಾನ ಜಾಗೃತಿಯ ಅಭಿಯಾನವನ್ನು ಆಯೋಜಿಸಿದೆ.
ವಿವರಗಳಿಗಾಗಿ: ವಿನೋದ್ ಪ್ರಕಾಶ್ -9986699710