ಬೆಂಗಳೂರು: ಭಾರತದಂತಹ ಕೋಟ್ಯಾಂತರ ಆಕಾಂಕ್ಷೆಗಳುಳ್ಳ ರಾಷ್ಟ್ರದಲ್ಲಿ ಅನೇಕ ಜಟಿಲ ಸಮಸ್ಯೆಗಳಿವೆ. ಅಂತಹ ಕಠಿಣವಾದ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸರಳವಾದ ಪರಿಹಾರಗಳನ್ನು ನೀಡುವ ಮೂಲಕ ಅಭೂತಪೂರ್ವ ಬದಲಾವಣೆಯಾಗುವಂತೆ ಮಾಡಿದೆ. ನಮ್ಮ ನಿರಂತರ ಪರಿಶ್ರಮದ ಮೂಲಕ ಪ್ರಜೆಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯವಾಗುತ್ತಿದೆ. ಕಳೆದ ಒಂಭತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಮಾಡಿದ ಕೆಲಸಗಳನ್ನು ಪುರಾವೆಗಳ ಸಮೇತ ಜನರ ಮುಂದಿಟ್ಟಿರುವ ಕಾರಣ ಮುಕ್ತವಾಗಿ ಜನಸಾಮಾನ್ಯರೊಂದಿಗೆ ಮಾತನಾಡುವ ಆತ್ಮವಿಶ್ವಾಸವನ್ನು ನಮ್ಮಲ್ಲಿ ಹೆಚ್ಚಿಸಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದರು
ಥಿಂಕರ್ಸ್ ಫೋರಮ್ ಕರ್ನಾಟಕ ಇದರ ವತಿಯಿಂದ ಬೆಂಗಳೂರಿನ ಎಸ್ ಜೆ ಆರ್ ಸಿ ಕಾಲೇಜಿನಲ್ಲಿ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಶನಿವಾರ ಮಾತನಾಡಿದರು.
ಕರ್ನಾಟಕಕ್ಕೆ ಯುಪಿಎಯ ಹತ್ತು ವರ್ಷಗಳ ಅವಧಿಯಲ್ಲಿ ದೊರೆತ ಅನುದಾನಕ್ಕಿಂತ ಅಧಿಕ ಅನುದಾನ ಕಳೆದ ಒಂಭತ್ತು ವರ್ಷಗಳಲ್ಲಿ ಲಭಿಸಿದೆ. ಈ ಅನುದಾನಗಳ ಕಾರಣದಿಂದಾಗಿ ಕರ್ನಾಟಕ ಅಭಿವೃದ್ಧಿಯ ಪರ್ವವನ್ನು ಕಾಣುತ್ತಿದೆ ಎಂದರು.
ರಾಷ್ಟ್ರದ ಅಭಿವೃದ್ಧಿಯ ಕುರಿತು ಮಾತನಾಡಿದ ಅವರು ಅಭಿವೃದ್ಧಿ ಎನ್ನುವುದು ನಿರಂತರ ಪ್ರಕ್ರಿಯೆಯ ಮೂಲಕವೇ ಆಗಬೇಕಾಗಿರುವುದರಿಂದ ಎಲ್ಲಾ ಕ್ಷೇತ್ರಗಳಲ್ಲೂ ತಳಮಟ್ಟದಿಂದ ಬದಲಾವಣೆಯನ್ನು ತರಲಾಗುತ್ತಿದೆ. ಇದಕ್ಕೆ ಕೋವಿಡ್ ನಂತಹ ಬಿಕ್ಕಟ್ಟಿನ ಸಂದರ್ಭವನ್ನೂ ಸಮರ್ಥವಾಗಿ ಎದುರಿಸಿ ಭಾರತ ಐದನೇ ಬೃಹತ್ ಆರ್ಥಿಕತೆಯ ರಾಷ್ಟ್ರವಾಗಿ ಹೊರಹೊಮ್ಮಿರುವುದೇ ನಿದರ್ಶನ. ಅಷ್ಟೇಯಲ್ಲದೇ ಜನ್ಧನ್ ಹೆಸರಲ್ಲಿ ತೆರೆಯಲಾದ ೪೫ಕೋಟಿ ಹೊಸ ಬ್ಯಾಂಕ್ ಖಾತೆಗಳಲ್ಲಿ ೨೩ ಕೋಟಿ ಬ್ಯಾಂಕ್ ಖಾತೆಗಳು ಮಹಿಳೆಯರದ್ದೇಯಾಗಿದೆ ಎಂದರು.
ವಿದ್ಯಾಭ್ಯಾಸ ಮತ್ತು ಉದ್ಯಮಶೀಲತೆಯ ಕುರಿತು ಮಾತನಾಡಿದ ಅವರು ಯುವಕರಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸುವ ಕಾಯಕವನ್ನು ಸ್ಕಿಲ್ ಇಂಡಿಯಾದಂತಹ ಯೋಜನೆಗಳ ಮೂಲಕ ಕೇಂದ್ರ ಸರ್ಕಾರ ಮಾಡುತ್ತಿದೆ. ಆದರೆ ಉದ್ಯಮಶೀಲತೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ನಮ್ಮ ಜೀವನ ಕೌಶಲಗಳು ಸಹಕಾರಿಯಾಗುತ್ತದೆ. ಮುದ್ರಾ ಯೋಜನೆಯಡಿಯಲ್ಲಿ ಲೋನ್ ಪಡೆದವರಲ್ಲಿ ಬಡ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಅರ್ಯಾರೂ ಹೆಚ್ಚು ವಿದ್ಯಾಭ್ಯಾಸವನ್ನು ಪಡೆದವರಲ್ಲ, ಆದರೆ ಕೌಶಲ್ಯವುಳ್ಳವರು ಎನ್ನುವುದನ್ನು ಅರಿಯಬೇಕು ಎಂದರು.
ರಾಷ್ಟçದ ಆರ್ಥಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ತಿಳಿಸಿದ ಕೇಂದ್ರ ಸಚಿವೆ ಯುವಕರು ಮೊದಲು ಕೇಂದ್ರ ಬಜೆಟ್ಅನ್ನು ಅರಿಯುವ, ವಿಶ್ಲೇಷಿಸುವ ಮತ್ತು ಅಧ್ಯಯನದಿಂದ ಮೂಡುವ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಕೆಲಸವನ್ನು ಮಾಡಬೇಕಿದೆ. ಅಮೃತ ಮಹೋತ್ಸವದ ಪರ್ವಕಾಲದಲ್ಲಿ ಮುಂದಿನ ೨೫ ವರ್ಷಗಳ ಅಮೃತ ಕಾಲದ ಮೊದಲ ಬಜೆಟ್ ಮಂಡನೆಯಾಗಿದೆ. ಅದರ ಕುರಿತು ಅಧ್ಯಯನ ಮಾಡಿ ಯುವಕರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಾಗಿದೆ ಎಂದರು.
ಕೇಂದ್ರ ಸರ್ಕಾರ ಮಹಿಳೆಯರಿಗೆ ವಿಶೇಷ ಗಮನವನ್ನು ಕೊಟ್ಟು ಯೋಜನೆಗಳನ್ನು ರೂಪಿಸುತ್ತಿದೆ. ಮಹಿಳೆಯರ ನೈರ್ಮಲ್ಯದ ಕುರಿತು ರಾಷ್ಟ್ರವ್ಯಾಪಿ ಜಾಗೃತಿ ಮೂಡಿಸುವ ಮಾತುಗಳನ್ನಾಡಿದ ಪ್ರಥಮ ಪ್ರಧಾನಿ ನರೇಂದ್ರ ಮೋದಿಯವರು. ಮಹಿಳೆಯರಿಗೆ ಸಂಬಂಧಪಟ್ಟ ೪೦ಕ್ಕೂ ಹೆಚ್ಚು ಔಷಧಗಳನ್ನು ಜನೌಷಧಿ ಕೇಂದ್ರಗಳಲ್ಲಿ ಅತ್ಯಂತ ಕಡಿಮೆ ಬೆಲೆ ನೀಡಲಾಗುತ್ತಿದೆ. ಹಾಗೆಯೇ ೧೯೭೦ರಿಂದ ರಾಷ್ಟ್ರದಲ್ಲಿ ಜಾರಿಯಲ್ಲಿರುವ ಅಂಗನವಾಡಿಯ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲು ಮೋದಿ ನೇತೃತ್ವದ ಸರ್ಕಾರ ಪೋಷಣ್ ಯೋಜನೆ ಮೂಲಕ ಸಹಕರಿಸಿದೆ ಎಂದರು.