ಬೆಂಗಳೂರು: ಚಂದ್ರಯಾನ-3 ಭಾರತದ ಹೆಮ್ಮೆಯ ಬಾಹ್ಯಾಕಾಶ ಯೋಜನೆ. ಜಗತ್ತಿನ ಕೆಲವು ರಾಷ್ಟ್ರಗಳು ಸಹ ಚಂದ್ರನ ಹೆಚ್ಚಿನ ಅಧ್ಯಯನಕ್ಕೆ ಮುಂದಾಗಿರುವ ಹೊತ್ತಿನಲ್ಲಿ ಭಾರತವೂ ಈ ನಿಟ್ಟಿನಲ್ಲಿ ತನ್ನ ಹೆಜ್ಜೆಯನ್ನಿರಿಸಿದೆ. ಚಂದ್ರಯಾನ-2 ಪ್ರಯತ್ನದಿಂದ ಕಲಿತ ಪಾಠದ ಫಲವಾಗಿ ಚಂದ್ರಯಾನ-3 ತಯಾರಾಗಿದೆ ಎಂದು ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ್ ಹೇಳಿದರು.
ದಿಶಾಭಾರತ್ ಸಂಸ್ಥೆಯ ‘ನನ್ನ ಭಾರತ’ ಅಭಿಯಾನದ ಭಾಗವಾಗಿ ಆಯೋಜಿಸಲಾದ ತಜ್ಞರ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ “ಚಂದ್ರಯಾನ-3: ಭಾರತದ ಹೆಮ್ಮೆಯ ಬಾಹ್ಯಾಕಾಶ ಯೋಜನೆ” ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಚಂದ್ರಯಾನ-3 ನಂತಹ ವೈಜ್ಞಾನಿಕ ಸಂಶೋಧನೆಗಳು ಭವಿಷ್ಯವನ್ನು ಕಣ್ಣಮುಂದಿರಿಸಿಕೊಂಡು ಕೈಗೊಳ್ಳುವ ಪ್ರಯತ್ನಗಳು. ಸಮಾಜದ ಮೇಲೆ ವೈಜ್ಞಾನಿಕ ಸಂಶೋಧನೆಗಳ ಪ್ರತಿಫಲವನ್ನು ಆಯಾ ಸಂಶೋಧನೆಯ ಆರಂಭಿಕ ಹಂತದಲ್ಲೇ ಹೇಳುವುದು ಬಹಳ ಕ್ಲಿಷ್ಟಕರ ಸಂಗತಿ. ಏಕೆಂದರೆ ಪ್ರತಿ ವೈಜ್ಞಾನಿಕ ಸಂಶೋಧನೆಯ ಉಪಯುಕ್ತತೆಯನ್ನು ಅರಿಯಲು ಸಮಯ ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಒಬ್ಬ ವಿಜ್ಞಾನಿ ತನ್ನ ಅಂತರಾತ್ಮದ ಕುರಿತು ಅರಿತು ಕೊಳ್ಳುವ ಪ್ರಕ್ರಿಯೆ ತಪ್ಪಲ್ಲ. ಭಾರತದಲ್ಲಿ ಜನಿಸಿದ ನಮಗೆ ಅಧ್ಯಾತ್ಮದೆಡೆಗಿನ ಒಲವು ಸಹಜವಾಗಿಯೇ ಇರುತ್ತದೆ. ಒಬ್ಬ ಅಧ್ಯಾತ್ಮಿಕ ಆಸಕ್ತಿಯುಳ್ಳ ವ್ಯಕ್ತಿಗೆ ತನ್ನನ್ನು ಕಾಡುವ ಅನೇಕ ಪ್ರಶ್ನೆಗಳಿಗೆ ಉತ್ತರಗಳಿದ್ದರೂ ಅದರ ಅನುಭವವನ್ನು ಪಡೆಯುವುದು ಮುಖ್ಯವಾಗುತ್ತದೆ. ನಾವು ಅನುಭವಿಸದೆ ಕೇಳಿರುವ ಸಂಗತಿಗಳು ನಂಬಿಕೆ ಎನಿಸುತ್ತವೆ. ಹಾಗೆಯೇ ವಿಜ್ಞಾನದಲ್ಲೂ ನಾವು ಹಲವು ಸಂಗತಿಗಳ ಕುರಿತು ತಿಳಿದಿದ್ದೇವೆ. ಆದರೆ ನಮ್ಮ ನಂಬಿಕೆಯನ್ನು ಸಂಶೋಧನೆಯ ಮೂಲಕ ಅನುಭವವನ್ನಾಗಿಸಿಕೊಳ್ಳಲು ಮುಂದಾಗುತ್ತೇವೆ. ಹಾಗಾಗಿ ವಿಜ್ಞಾನ ಮತ್ತು ಅಧ್ಯಾತ್ಮ ಎರಡೂ ಅಸ್ತಿತ್ವದಲ್ಲಿದೆ ಎಂದರು.
ಪ್ರಸ್ತುತ ಅಪ್ಲೈಡ್ ಕೋರ್ಸ್ಗಳು ಮತ್ತು ಹೆಚ್ಚು ಉದ್ಯೋಗಾವಕಾಶವನ್ನು ಸೃಜಿಸಬಲ್ಲಿ ವಿಭಾಗಗಳಿಗೆ ವಿದ್ಯಾರ್ಥಿಗಳು ಸಹಜವಾಗಿಯೇ ಆಸಕ್ತಿ ವಹಿಸುತ್ತಿದ್ದಾರೆ. ಇದರಲ್ಲಿ ಕೇವಲ ವಿದ್ಯಾರ್ಥಿಗಳ ಆಸಕ್ತಿಯನ್ನು ಪ್ರಶ್ನಿಸದೇ, ಅವರ ಆಸಕ್ತಿಗೆ ಅನುಕೂಲವಾದ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸುವಲ್ಲಿ ಮತ್ತು ವಿಜ್ಞಾನದಲ್ಲಿ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆಯೇ ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕಿದೆ. ಇದಕ್ಕೆ ಪರಿಹಾರವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಸಂಶೋಧನೆ ಮತ್ತು ಅಭಿವೃದ್ಧಿಯ ಕುರಿತಾಗಿ ಪ್ರೇರೇಪಿಸುವ ಆಯಾಮಗಳ ಸೃಷ್ಟಿಯಾಗಬೇಕಿದೆ ಎಂದರು.