ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕರಾದ ವಿ.ನಾಗರಾಜರವರು ಕನ್ನಡದ ಹಿರಿಯ ಕವಿ ಚೆನ್ನವೀರ ಕಣವಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಕನ್ನಡನಾಡು ಕಂಡ ಶ್ರೇಷ್ಠ ಕವಿಗಳು ಹಾಗೂ ಹಿರಿಯ ಸಾಹಿತಿಗಳಾದ ಶ್ರೀ ಚನ್ನವೀರ ಕಣವಿಯವರ ನಿಧನದಿಂದಾಗಿ ಕನ್ನಡ ಸಾಹಿತ್ಯ ಲೋಕವು ಅಮೂಲ್ಯ ರತ್ನವೊಂದನ್ನು ಕಳೆದುಕೊಂಡಂತಾಗಿದೆ.
‘ಸಮನ್ವಯ ಕವಿ’ ಎಂದೇ ಕರೆಯಲ್ಪಡುತ್ತಿದ್ದ ಶ್ರೀ ಚನ್ನವೀರ ಕಣವಿಯರು ಮೃದುಮಾತಿನ, ಸ್ನೇಹಭಾವದ, ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರು. ತಮ್ಮ ಕವನ – ಲೇಖನ – ಭಾಷಣಗಳಲ್ಲಿ ಅವರ ಸಾಮಾಜಿಕ ಕಳಕಳಿ, ರಾಷ್ಟ್ರೀಯ ವಿಚಾರಗಳ ವಿಶ್ಲೇಷಣೆ, ಸಮಾಜ ಹಿತದ ಆಶಯಗಳು ವ್ಯಕ್ತವಾಗುತ್ತಿತ್ತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ ಸೇರಿದಂತೆ ನಾಡಿನ ವಿವಿಧ ಪ್ರಶಸ್ತಿ ಪುರಸ್ಕೃತರಾಗಿದ್ದ ಕಣವಿಯವರು ಅನೇಕ ಯುವ ಬರಹಗಾರರಿಗೆ ಸದಾ ಸ್ಫೂರ್ತಿ, ಮಾರ್ಗದರ್ಶಕರು.
ರಾಷ್ಟ್ರೀಯ ಸ್ವಯಸೇವಕ ಸಂಘದೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದ ಶ್ರೀ ಚನ್ನವೀರ ಕಣವಿಯವರು ನಮ್ಮ ಸ್ವಯಂಸೇವಕರಿಗೆ ಪ್ರೋತ್ಸಾಹ – ಸಹಕಾರ ನೀಡುತ್ತಿದ್ದರು.
ಅವರ ನಿಧನ ನಮಗೆಲ್ಲರಿಗೂ ಶೋಕ ತಂದಿದೆ. ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಾ, ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ ಪ್ರಾರ್ಥಿಸುತ್ತೇನೆ.
ವಿ. ನಾಗರಾಜ
ಕ್ಷೇತ್ರೀಯ ಸಂಘಚಾಲಕರು
ರಾಷ್ಟ್ರೀಯ ಸ್ವಯಂಸೇವಕ ಸಂಘ
ಬೆಂಗಳೂರು
16-02-2022