ಬೆಂಗಳೂರು: ಸಿನಿಮಾ ಎಂಬುದು ಸಮಾಜದ ಕನ್ನಡಿ ಇದ್ದ ಹಾಗೆ. ಸಮಾಜ ಸಿನಿಮಾವನ್ನು ಪ್ರತಿಬಿಂಬಿಸಿದರೆ, ಸಿನಿಮಾ ಸಮಾಜವನ್ನು ಪ್ರತಿಬಿಂಬಿಸುತ್ತದೆ. ಸಿನಿಮಾ ಮೂಲಕ ಸಾಮಾಜಿಕ ಸಂದೇಶಗಳನ್ನು ಸಮಾಜದಲ್ಲಿ ನೀಡಿದಾಗ ಜನರಲ್ಲಿ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತದೆ ಎಂದು 2021-22 ನೇ ಸಾಲಿನ ರಾಜ್ಯಪ್ರಶಸ್ತಿ ವಿಜೇತ ಚಿತ್ರ ಮ್ಯೂಟ್ ನ ನಿರ್ದೇಶಕ ಪ್ರಶಾಂತ್ ಚಂದ್ರ ಹೇಳಿದರು.

ಮಂಥನ ಬೆಂಗಳೂರು ಹಾಗೂ ರಸಗ್ರಹಣದ ಸಹಯೋಗದಲ್ಲಿ ಜಯನಗರದ ರಾಷ್ಟ್ರೋತ್ಥಾನ ಫಿಟ್ನೆಸ್ ಸೆಂಟರ್ ನಲ್ಲಿ ಆಯೋಜಿಸಲಾದ “ಸಿನೆಮಾ ಮತ್ತು ಸಮಾಜ” ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

ಸಿನಿಮಾ ಎಂಬುದು ವಾಣಿಜ್ಯ ಕಲೆಯಾಗಿದೆ. ಇದರಲ್ಲಿ ಮನರಂಜನೆ, ಸಾಮಾಜಿಕ ಸಂದೇಶ, ಭಾವನಾತ್ಮಕತೆ ಎಲ್ಲವನ್ನೂ ಕಾಣಬಹುದು. ನಾವು ಸಾಮಾಜಿಕ ಸಂದೇಶ ಹಾಗೂ ವಾಣಿಜ್ಯ ಕಲೆ ಇವೆರಡನ್ನೂ ಸಮತೋಲನದಲ್ಲಿ ಇರಿಸಿಕೊಳ್ಳಬೇಕು. ಏಕೆಂದರೆ ಸಿನಿಮಾ ಮಾಡುವುದು ಎಷ್ಟು ಮುಖ್ಯವಾಗಿರುತ್ತದೆಯೋ ಹಾಗೆಯೇ ಸಮಾಜದಲ್ಲಿನ ಜನರಿಗೆ ಆ ಸಿನಿಮಾವನ್ನು ತಲುಪಿಸುವುದು ಅಷ್ಟೇ ಮುಖ್ಯವಾಗಿರುತ್ತದೆ. ಸಮಾಜವಿಲ್ಲದೆ ಸಿನಿಮಾ ಇಲ್ಲ, ಸಿನಿಮಾ ಇಲ್ಲದೆ ಸಮಾಜವಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕೆ.ಜಿ.ಎಫ್ ಖ್ಯಾತಿಯ ಹಾಗೂ ಮ್ಯೂಟ್ ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾದ ನಟಿ ಅರ್ಚನಾ ಜೋಯಿಸ್ ಮಾತನಾಡಿ, ಸಿನಿಮಾ ಮತ್ತು ಸಮಾಜ ಎಂಬುದು ಒಂದೇ ನಾಣ್ಯದ ಎರಡು ಮುಖಗಳಿದ್ದ ಹಾಗೆ. ಹಾಗಾಗಿಯೇ ಸಿನೆಮಾ ಇಂದು ಸಮಾಜದಲ್ಲಿ ಜಾಗೃತಿಯ ಮೂಲಕ ಬದಲಾವಣೆಯನ್ನು ತರಬಲ್ಲದು. ಅದರಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಎರಡೂ ಅಂಶಗಳು ಇರುತ್ತವೆ. ಆದರೆ ಜನರಿಗೆ ಹೆಚ್ಚಾಗಿ ಸಿನಿಮಾ ಮೂಲಕ ಸಕಾರಾತ್ಮಕ ಗುಣಗಳು ತಲುಪಬೇಕು. ಏಕೆಂದರೆ ಸಿನಿಮಾದಲ್ಲಿ ಹಲವು ರೀತಿಯ ಭಾವನೆಗಳು ಒಳಗೊಂಡಿವೆ, ಅದರಲ್ಲಿ ನಮ್ಮ ಮೇಲೆ ಪ್ರಭಾವ ಬೀರಿ ಆಳವಾಗಿ ಉಳಿಯುವುದು ಕೆಲವು ದೃಶ್ಯಗಳು ಮಾತ್ರ ಎಂದು ಹೇಳಿದರು.

ಒಂದು ಪುಸ್ತಕವನ್ನು ಓದಿ ಅದರ ಸ್ವಾರಸ್ಯವನ್ನು ಅರ್ಥೈಸಿಕೊಳ್ಳುವವರ ಸಂಖ್ಯೆ ಈಗ ಬಹಳ ಕಡಿಮೆಯಾಗಿರಬಹುದು. ಆದರೆ ಪ್ರಸ್ತುತ ದಿನಗಳಲ್ಲಿ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಏಕೆಂದರೆ ದೃಶ್ಯಾವಳಿಗಳನ್ನು ಹೊಂದಿರುವುದರಿಂದ ಜನರ ಮೇಲೆ ಹೆಚ್ಚಾಗಿ ಪ್ರಭಾವ ಬೀರಿ ತಮ್ಮೊಳಗಿನ ಭಾವನೆಗಳನ್ನು ಹೊರಹಾಕುವಂತೆ ಮಾಡುತ್ತದೆ. ಹಾಗಾಗಿ ಸಿನಿಮಾ ಮಾಡುವ ಜವಾಬ್ದಾರಿ ಹೆಚ್ಚಾಗಿರಬೇಕು ಜೊತೆಗೆ ನೋಡುಗರು ಯಾರೆಂಬುದನ್ನು ಅರಿತು ಅವರನ್ನು ತಲುಪುವ ಹಾಗೆ ಸಿನಿಮಾವನ್ನು ನಿರ್ಮಿಸಬೇಕು ಎಂದು ಅಭಿಪ್ರಾಯಪಟ್ಟರು.

ನಮ್ಮಲ್ಲಿ ನಾನಾ ರೀತಿಯ ಭಾಷೆಗಳು, ಸಂಸ್ಕೃತಿ, ಆಚಾರಗಳು ಇರುವುದರಿಂದ ಅತ್ಯಂತ ಶ್ರೀಮಂತವಾದ ಸಮಾಜ ನಮ್ಮದು. ನಮ್ಮ ಸಮಾಜದ ಶ್ರೀಮಂತಿಕೆಯನ್ನು ನಾವು ಸಿನಿಮಾದಲ್ಲಿ ಅಳವಡಿಸಿಕೊಳ್ಳಬಹುದು. ಒಂದು ಸಿನಿಮಾವನ್ನು ನೋಡುಗರು ಹೇಗೆ ಅರ್ಥೈಸಿಕೊಳ್ಳುತ್ತಾರೋ ಅದು ನಟಿಸುವರ ಮೇಲೆ ಹೆಚ್ಚಾಗಿ ಪ್ರಭಾವ ಬೀರುತ್ತದೆ. ಜೊತೆಗೆ ಸಿನಿಮಾದಲ್ಲಿನ ಪಾತ್ರಗಳು ತಮ್ಮದೇ ಆದ ರೀತಿಯಲ್ಲಿ ಕಥೆಯನ್ನು ಅಳವಡಿಕೆ ಮಾಡಿಕೊಂಡು ಜನರಲ್ಲಿ ಗೌರವ ಮೂಡಿಸುತ್ತದೆ ಎಂದರು.

ಸಂವಾದವನ್ನು ರಸಗ್ರಹಣ ತಂಡದ ಸದಸ್ಯರಾದ ವಿನೀತ್ ಚಿಮ್ಮಳಗಿ, ವಿನಯಕೃಷ್ಣ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸಿನೆಮಾ ಆಯಾಮದ ಸಹ ಸಂಯೋಜಕ ಶೈಲೇಶ್ ಕುಲಕರ್ಣಿ ಉಪಸ್ಥಿತರಿದ್ದರು. ಸಿನೆಮಾ ಮತ್ರು ಕಿರುತರೆಯ ಕಲಾವಿದರು, ಸಿನೆಮಾ ರಸಗ್ರಾಹಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.