ನವೆಂಬರ್ 21, 2016, ಬೆಂಗಳೂರು.
ಸ್ಪಷ್ಟೀಕರಣ
ಕಳೆದ ಅಕ್ಟೋಬರ್ 28, 2016 ರಂದು ಬೆಂಗಳೂರಿನಲ್ಲಿ ನಾನು ತೆಗೆದುಕೊಂಡ ಪತ್ರಿಕಾಗೋಷ್ಠಿಯ ನಂತರ ಶ್ರೀರಾಮಚಂದ್ರಾಪುರ ಮಠದ ಭಕ್ತರಲ್ಲಿ ಉಂಟಾದ ಗೊಂದಲ-ಸಂದೇಹಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ –
ಕಳೆದ 2 ವರ್ಷಗಳ ಹಿಂದೆ ತುಮಕೂರಿನಲ್ಲಿ ವಿಶ್ವ ಹಿಂದು ಪರಿಷದ್ ಆಯೋಜಿಸಿದ್ದ ‘ಕರ್ನಾಟಕ ರಾಜ್ಯ ಸಂತ ಸಮ್ಮೇಳನ’ದಲ್ಲಿ 400ಕ್ಕೂ ಹೆಚ್ಚು ಸಂತರು,ಮಠಾಧಿಪತಿಗಳು ಪಾಲ್ಗೊಂಡಿದ್ದರು. ಅಲ್ಲಿನ ಗೋಷ್ಠಿಯೊಂದರಲ್ಲಿ ಸಂತರೊಬ್ಬರು ಸಂಘದ ಸರಸಂಘಚಾಲಕರನ್ನು ‘ಮಠಗಳು ಸಂಕಷ್ಟಕ್ಕೆ ಎದುರಾದಾಗ ಸಂಘವುಮಠಗಳ ಬೆಂಬಲಕ್ಕೆ ನಿಲ್ಲುವುದೇ?’ ಎಂದು ಪ್ರಶ್ನಿಸಿದ್ದರು.
ಆಗ ಸರಸಂಘಚಾಲಕ ಶ್ರೀ ಮೋಹನ್‌ಜೀ ಭಾಗವತರು ಉತ್ತರ ನೀಡುತ್ತ ಸಂಘವು ಅವಶ್ಯವಾಗಿ ಬೆಂಬಲ ನೀಡುತ್ತದೆ. ಸಮಾಜ ವಿರೋಧಿ ಶಕ್ತಿಗಳಿಂದ, ಸಮಸ್ಯೆ ಎದುರಾದಲ್ಲಿ ಸ್ವಯಂಸೇವಕರು ಮಠದ ಸಹಕಾರಕ್ಕೆ ಬರುತ್ತಾರೆ. ಆದರೆ ಈ ಮೂರು ಸಂದರ್ಭಗಳಲ್ಲಿ –
(1) ಮಠದ ಭಕ್ತಾದಿಗಳಲ್ಲಿ ಉತ್ತರಾಧಿಕಾರಿ ಮುಂತಾದ ವಿಷಯಗಳಲ್ಲಿ ಗುಂಪುಗಳಾಗಿ ವಿವಾದ ತಲೆದೋರಿದಾಗ.
(2) ಭೂಮಿ-ಚಾರಿತ್ರ್ಯ-ಹಣದಂತಹ ವಿಷಯಗಳಲ್ಲಿ ಮಠವು ವಿವಾದಕ್ಕೆ ಒಳಗಾದಾಗ.
(3) ಸಂವಿಧಾನ ಉಲ್ಲಂಘನೆಯ ಆರೋಪ ಬಂದಾಗ
ಸಂಘವು ‘ತಟಸ್ಥ ನೀತಿ‘ಯನ್ನು ಅನುಸರಿಸುತ್ತದೆ ಎಂದು ಸಂಘದ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದರು.
ಏಕೆಂದರೆ ಇಂಥ ಆರೋಪಗಳ ಬಗ್ಗೆ ತೀರ್ಮಾನ ನೀಡುವುದು ಸಂಘದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಬಹಳಷ್ಟು ಬಾರಿ ನ್ಯಾಯಾಲಯದ ತೀರ್ಮಾನವೇ ಇಂತಹ ವಿಷಯಗಳಲ್ಲಿ ಅಂತಿಮವಾಗುತ್ತದೆ. ಹಾಗಾಗಿ, ತೀರ್ಮಾನ ಆಗುವವರೆಗೂ ತಟಸ್ಥವಾಗಿಯೇ ಉಳಿಯುತ್ತದೆ.
ದೇಶದ ಬೇರೆ ಬೇರೆ ಭಾಗಗಳಲ್ಲಿ ಮಠ-ಮಂದಿರಗಳು ಈ ರೀತಿ ವಿಷಯಗಳಲ್ಲಿ ವಿವಾದಕ್ಕೆ ಒಳಗಾದಾಗಲೂ ಸಂಘವು ಇದೇ ತಟಸ್ಥ ನಿಲುಮೆಯನ್ನುಅನುಸರಿಸಿದೆ. ಶ್ರೀರಾಮಚಂದ್ರಾಪುರ ಮಠದ ವಿಷಯದಲ್ಲೂ ಸಂಘದ್ದು ಇದೇ ‘ತಟಸ್ಥ ನೀತಿ’.
ಮಠದ ಬಗ್ಗೆ ಸಂಘಕ್ಕೆ ಗೌರವ-ಶ್ರದ್ಧೆಗಳು ಇದ್ದೇ ಇದೆ. ಮಠದ ಧಾರ್ಮಿಕ-ಸಾಮಾಜಿಕ-ಸಾಂಸ್ಕೃತಿಕ ಭಾವಜಾಗೃತಿಯ ಕಾರ್ಯಕ್ರಮ-ಅಭಿಯಾನಗಳಲ್ಲಿ ಸಂಘದ ಸ್ವಯಂಸೇವಕರು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸುತ್ತಲೇ ಬಂದಿದ್ದಾರೆ. ವಿಶ್ವ ಗೋ ಸಮ್ಮೇಳನದಲ್ಲಿ ಅಂದಿನ ಸರಸಂಘಚಾಲಕ ಶ್ರೀಕು.ಸೀ.ಸುದರ್ಶನಜೀಯವರು ಭಾಗವಹಿಸಿದ್ದಷ್ಟೇ ಅಲ್ಲ; ಅನೇಕ ಸಂಘದ ಕಾರ್‍ಯಕರ್ತರು ಅಲ್ಲಿನ ವ್ಯವಸ್ಥಾ ವಿಭಾಗಗಳಲ್ಲಿ ಹೊಣೆ ಹೊತ್ತು ಪರಿಶ್ರಮಗೈದಿದ್ದಾರೆ. ವಿಶ್ವ ಮಂಗಲ ಗೋಗ್ರಾಮ ಯಾತ್ರೆಯನ್ನು ಭಾರತದಾದ್ಯಂತ ನಡೆಸಿ ಯಶಸ್ವಿಗೊಳಿಸುವಲ್ಲಿ ಸಂಘದ ಹಲವಾರು ಕಾರ್ಯಕರ್ತರು ಮಹತ್ವದ ಭೂಮಿಕೆಯನ್ನು ನಿಭಾಯಿಸಿದ್ದಾರೆ. ಇಂಥ ಕಾರ್ಯಗಳಿಗೆ ಸ್ವಯಂಸೇವಕರ ಸಹಕಾರ ಎಂದಿನಂತೆ ಮುಂದುವರಿಯುವುದರಲ್ಲಿ ಯಾವುದೇ ಸಂಶಯಬೇಡ.
ಒಟ್ಟಿನಲ್ಲಿ ಸಂಘದ ನಿಲುವನ್ನು ಸ್ವಷ್ಟಮಾಡಿದ್ದೇನೆ. ನನ್ನ ಮಾತಿನಿಂದ ಯಾರಿಗಾದರೂ ತಪ್ಪು ತಿಳುವಳಿಕೆ ಉಂಟಾಗಿದ್ದಲ್ಲಿ, ನೋವುಂಟಾಗಿದ್ದಲ್ಲಿ ನಾನು ವಿಷಾದ ವ್ಯಕ್ತಪಡಿಸುತ್ತಿದ್ದೇನೆ.
ಇತಿ ನಿಮ್ಮವ,
ವಿ. ನಾಗರಾಜ್
ಕ್ಷೇತ್ರ ಸಂಘಚಾಲಕ್, ಆರೆಸ್ಸೆಸ್
ನವೆಂಬರ್ 21, 2016, ಬೆಂಗಳೂರು