ಇಂದು ಪುಣ್ಯಸ್ಮರಣೆ

ಹಿಂದುಳಿದ ವರ್ಗಗಳ ಹರಿಕಾರ ಎಂದೇ ಖ್ಯಾತರಾಗಿರುವ ಡಿ. ದೇವರಾಜ ಅರಸ್‌ ಅವರು ಜನನಾಯಕ, ಬಡವರ ಧ್ವನಿಯಾಗಿ,  ಸಮಾಜ ಸೇವಕರಾಗಿ ಪ್ರಸಿದ್ಧರಾದವರು. ಇವರು ರಾಜಕೀಯ ಕ್ಷೇತ್ರದಲ್ಲಿ ಅಪಾರವಾದ ಕೊಡುಗೆ ನೀಡಿದ್ದಾರೆ. ಡಿ.ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಿದವರು. ಎರಡು ಬಾರಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇಂದು ಅವರ ಪುಣ್ಯಸ್ಮರಣೆ.


ಪರಿಚಯ
ಡಿ. ದೇವರಾಜ ಅರಸ್‌ ಅವರು ಆಗಸ್ಟ್ 20, 1915 ರಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ದೇವರಾಜ ಅರಸ್‌ ಮತ್ತು ತಾಯಿ ದೇವೀರ ಅಮ್ಮಣ್ಣಿ. ದೇವರಾಜ ಅರಸ್‌ ಅವರ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಮೈಸೂರಿನ ಉರ್ಸ್ ಬೋರ್ಡಿಂಗ್ ಶಾಲೆಯಲ್ಲಿ ಪಡೆದರು. ನಂತರ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಬಿಎಸ್ಸಿ ಅಧ್ಯಯನ ಮಾಡಿದರು. ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಕಲ್ಲಹಳ್ಳಿಗೆ ಹಿಂದಿರುಗಿದ ಅರಸ್ ಕೃಷಿಯಲ್ಲಿ ತೊಡಗಿದರು. ಆದರೆ ಸ್ವಭಾವತಃ ನಾಯಕತ್ವದ ಗುಣವನ್ನು ಹೊಂದಿದ್ದ ಅರಸ್ ನಂತರದ ದಿನಗಳಲ್ಲಿ ರಾಜಕೀಯಕ್ಕೆ ಪಾದರ್ಪಣೆ ಮಾಡಿದರು.


ರಾಜಕೀಯ ಜೀವನ
ದೇವರಾಜ ಅರಸ್‌ ಅವರು 1952 ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ದೇಶದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯ ಪ್ರವೇಶಿಸಿದರು. ಈ ಸಮಯದಲ್ಲಿ, ಮಹಾರಾಜರು ಇನ್ನೂ ಮೈಸೂರಿನಲ್ಲಿ ರಾಜ್ಯದ ಮುಖ್ಯಸ್ಥರಾಗಿದ್ದರು. ನಂತರ ಸತತ ಹತ್ತು ವರ್ಷ ಶಾಸಕರಾಗಿ ಆಯ್ಕೆಯಾಗಿದ್ದ ಅರಸ್ ಮಾರ್ಚ್ 20, 1972 – ಡಿಸೆಂಬರ್ 31, 1977 ಹಾಗೂ ಫೆಬ್ರವರಿ 28, 1978 – ಜನವರಿ 7, 1980 ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು.


ಸಾಮಾಜಿಕ ಸುಧಾರಣೆ
ದೇವರಾಜ ಅರಸು ಸಮಾಜ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಇವರಿಗೆ ದೇಶದಲ್ಲಿ ಬಡತನ ನಿರ್ಮೂಲನೆ ಮಾಡುವುದು ಮೊದಲ ಗುರಿಯಾಗಿತ್ತು. ರಾಜ್ಯದಲ್ಲಿ ಸುಧಾರಣೆ ತರಲು ಶೈಕ್ಷಣಿಕ ಹಾಗೂ ತಂತ್ರಜ್ಞಾನ ಹೊಂದಿದ ಮಂತ್ರಿಮಂಡಲವನ್ನು ರಚಿಸಿದರು. “ಉಳುವವನಿಗೆ ಭೂಮಿ” ಅವರ ಮತ್ತೊಂದು ಮಹತ್ತರವಾದ ಯೋಜನೆಯನ್ನು ಜಾರಿಗೆ ತಂದಿದ್ದರು. 1973ರಲ್ಲಿ ಮೈಸೂರನ್ನು ‘ಕರ್ನಾಟಕ’ ಎಂದು ನಾಮಕರಣ ಮಾಡಿದರು. ಅವರ ಕಾಲದಲ್ಲಿ 16,000 ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಒದಗಿಸಲಾಯಿತು. ಇವರ ಯೋಜನೆಗಳಿಂದಾಗಿ ಕೂಲಿ ಮಾಡುವವರು ಭೂ-ಮಾಲೀಕರಾದರು, ಬಡವರು-ಶ್ರೀಮಂತರ ನಡುವಿನ ಅಂತರ ಕಡಿಮೆಯಾಯಿತು. ಇದ್ದರಿಂದ ದೇಶದಲ್ಲಿ ಸಾಮಾಜಿಕ ಅಸಮಾನತೆಯನ್ನು ಕಡಿಮೆಗೊಲಿಸಲಾಯಿತು. ರಾಜ್ಯದಲ್ಲಿ ಅಭಿವೃದ್ದಿಯ ಹೊಸ ಶಖೆಗೆ ಕಾರಣರಾಗಿದ್ದರು. ಪ್ರತಿ ಮನೆಯಲ್ಲೂ ವಿದ್ಯುತ್ ಬಲ್ಬ್ ಹೊಂದುವ ಯೋಜನೆಯನ್ನು ಜಾರಿಗೆ ತಂದವರು. ಎಲೆಕ್ಟ್ರಾನಿಕ್ ಸಿಟಿಯನ್ನು ಅಭಿವೃದ್ಧಿಪಡಿಸಲು ದೇವರಾಜ ಅರಸ್‌ ಅವರು ಬೆಂಬಲ ಸೂಚಿಸಿದರು. 1976 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಈ ಆರಂಭಿಕ ಬೀಜ ಹೂಡಿಕೆಯು ಎಲೆಕ್ಟ್ರಾನಿಕ್ಸ್ ಸಿಟಿಗೆ ಅಡಿಪಾಯ ಹಾಕಿತು. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರಿಗೆ ಅನೇಕ ಸಹಾಯ ಮಾಡಿದ್ದರು. ಅವುಗಳಲ್ಲಿ ಒಂದಾದ ಕಾಳಿ ಯೋಜನೆಯು ಹಲವಾರು ವಲಯಗಳ ವಿರೋಧದ ನಡುವೆ ಕಾರ್ಯಗತಗೊಂಡಿತು.


ಡಿ. ದೇವರಾಜ ಅರಸ್‌ ಅವರು ಜೂನ್ 6, 1982 ತಮ್ಮ 66 ವಯಸ್ಸಿನಲ್ಲಿ ನಿಧನರಾದರು.

.

Leave a Reply

Your email address will not be published.

This site uses Akismet to reduce spam. Learn how your comment data is processed.