ಇಂದು ಜಯಂತಿ

ಗ್ರಾಂಡ್‌ ಓಲ್ಡ್‌ ಮ್ಯಾನ್‌ ಆಫ್‌ ಇಂಡಿಯಾ ಎಂದು ಕರೆಯಲ್ಪಡುವ ದಾದಾಭಾಯಿ ನವರೋಜಿ ಅವರು ಭಾರತೀಯ ಸ್ವಾತಂತ್ರ ಚಳುವಳಿ ಹಾಗೂ ರಾಜಕೀಯದಲ್ಲಿ ಪ್ರಮುಖ ಪಾತ್ರವಹಿಸಿದರು. ಇವರು ರಾಜಕೀಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಸ್ವಾತಂತ್ರ್ಯದ ಜವಾಬ್ದಾರಿಯನ್ನು ಮುನ್ನಡೆಸುವ ಗುರಿಯನ್ನು ದಾದಾಭಾಯಿ ನವರೋಜಿ ಹೊಂದಿದ್ದರು. ಅವರು ಸಾಮಾಜಿಕ ನಾಯಕ, ಶಿಕ್ಷಣತಜ್ಞರಾಗಿ ಸೇವೆ ಸಲ್ಲಿಸಿದರು. ಇಂದು ಅವರ ಜಯಂತಿ.


ಪರಿಚಯ
ದಾದಾಭಾಯಿ ನವರೋಜಿ ಅವರು ಸೆಪ್ಟೆಂಬರ್ 4, 1825ರಂದು ಬಾಂಬೆಯಲ್ಲಿ ಜನಿಸಿದರು. ಇವರು ಬಾಂಬೆಯಲ್ಲಿ ಆರಂಭಿಕ ಶಿಕ್ಷಣವನ್ನು ಮುಗಿಸಿದರು. ನಂತರ ಉನ್ನತ ಶಿಕ್ಷಣಕ್ಕಾಗಿ ಪ್ರತಿಷ್ಠಿತ ಎಲ್ಫಿನ್‌ಸ್ಟೋನ್ ಇನ್‌ಸ್ಟಿಟ್ಯೂಟ್ ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಪಡೆದರು. ದಾದಾಭಾಯಿ ನವರೋಜಿ ಅವರು ಆಳವಾದ ಧಾರ್ಮಿಕ ನಂಬಿಕೆಯನ್ನು ಹೊಂದಿದ್ದರು.


1845 ರಲ್ಲಿ ಪದವಿ ಪಡೆದ ಕೂಡಲೇ ಅವರು ಎಲ್ಫಿನ್ ಸ್ಟನ್ ನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ನಂತರ ಅವರು ಲಂಡನ್ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. 1851ರಲ್ಲಿ ಅವರು ಝೋರಾಸ್ಟ್ರಿಯನ್ ಧರ್ಮವನ್ನು ಉತ್ತೇಜಿಸಲು ರಹ್ನುಮಾಯಿ ಮಜ್ದಯಾಸ್ನಾನ್ ಸಭಾವನ್ನು ಸ್ಥಾಪಿಸಿದರು.1856ರಲ್ಲಿ ಅವರು ಭಾರತೀಯ ಸಾಮಾಜಿಕ, ಸಾಹಿತ್ಯ ಮತ್ತು ರಾಜಕೀಯ ವಿಭಾಗಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಲಂಡನ್ ಇಂಡಿಯನ್ ಸೊಸೈಟಿಯನ್ನು ಸ್ಥಾಪಿಸಿದರು. 1858 ರಲ್ಲಿ ಅವರು ಅನೇಕ ಪತ್ರಿಕೆಗಳು ಮತ್ತು ಭಾಷಣಗಳಲ್ಲಿ ತಮ್ಮ ಡ್ರೈನ್ (ಆರ್ಥಿಕ ಸಾಮ್ರಾಜ್ಯಶಾಹಿ)ಸಿದ್ಧಾಂತವನ್ನು ತಿಳಿಸಿದರು. 1867ರಲ್ಲಿ ಬ್ರಿಟಿಷರಿಗೆ ಭಾರತೀಯ ಅಂಶಗಳ ಕುರಿತು ತಿಳಿಸುವುದಕ್ಕಾಗಿ ಈಸ್ಟ್ ಇಂಡಿಯನ್ ಅಸೋಸಿಯೇಷನ್ ಅನ್ನು ಸ್ಥಾಪಿಸಿದರು.


ರಾಜಕೀಯ ಜೀವನ
ದಾದಾಭಾಯಿ ನವರೋಜಿ ಅವರು 1874ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು. ಅವರು ಬರೋಡಾದ ಮಹಾರಾಜರ ದಿವಾನರಾಗಿ ಕಾರ್ಯನಿರ್ವಹಿಸಿದರು. 1885ರಲ್ಲಿ ಮುಂಬೈನ ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯರಾಗಿದ್ದರು. ಅವರು ಬಾಂಬೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಗೆ ಕೆಲವು ವರ್ಷಗಳ ಮೊದಲು ಕೊಲ್ಕತ್ತಾದಿಂದ ಸರ್‌ ಸುರೇಂದ್ರನಾಥ್‌ ಬ್ಯಾನರ್ಜಿಯವರು ಸ್ಥಾಪಿಸಿದ ಭಾರತೀಯ ರಾಷ್ಟ್ರೀಯ ಸಂಘದ ಸದಸ್ಯರಾಗಿದ್ದರು. 1886ರಲ್ಲಿ ನವರೋಜಿ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. 1892ರ ಸಾರ್ವತ್ರಿಕ ಚುನಾವಣೆಯಲ್ಲಿ ಫಿನ್ಸ್‌ಬರಿ ಸೆಂಟ್ರಲ್‌ ನಲ್ಲಿ ಲಿಬರಲ್‌ ಪಕ್ಷದಲ್ಲಿ ಸೇವೆ ಸಲ್ಲಿಸಿದರು. 1896 ರಲ್ಲಿ ರಾಯಲ್ ಆಯೋಗವನ್ನು ಸ್ಥಾಪಿಸಲಾಯಿತು. ಅವರು ಆಯೋಗದ ಸದಸ್ಯರಾದರು ಮತ್ತು ಭಾರತದ ಆರ್ಥಿಕ ಜವಾಬ್ದಾರಿಯನ್ನು ವಹಿಸಿಕೊಂಡರು. ದಾದಾಬಾಯಿ ನವರೋಜಿ ಅವರು ಮತ್ತೆ 1906ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಭಾರತದಲ್ಲಿ ಬ್ರಿಟಿಷ್ ನೀತಿಗಳ ಆಕ್ಷೇಪಣೆಯ ಬಗ್ಗೆ ಬಲವಾದ ಧ್ವನಿಯೆತ್ತಿದ್ದರು. ಅವರಿಗೆ ಗೋಪಾಲ ಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ್ ಮತ್ತು ಮಹಾತ್ಮ ಗಾಂಧಿ ಮಾರ್ಗದರ್ಶಕರಾಗಿದ್ದರು.

ಗೌರವ
ಮುಂಬೈನಲ್ಲಿ ದಾದಾಭಾಯಿ ಎಂದು ರಸ್ತೆ ಹೆಸರಿಡಲಾಯಿತು. ಪಾಕಿಸ್ತಾನದ ಕರಾಚಿ ಮತ್ತು ಲಂಡನ್‌ ನ ಫಿನ್ಸ್‌ ಬರಿ ರಸ್ತೆಗಳಿಗೆ ದಾದಾಭಾಯಿ ನವರೋಜಿ ಎಂದು ಹೆಸರಿಡಲಾಯಿತು. ದೆಹಲಿಯ ಕೇಂದ್ರ ಸರ್ಕಾರಿ ನೌಕರರಿರುವ ವಸತಿ ಕಾಲೋನಿಗೆ ನವರೋಜಿ ನಗರವೆಂದು ಹೆಸರು ಇಟ್ಟು ಅವರಿಗೆ ಗೌರವ ಸಲ್ಲಿಸಲಾಗಿದೆ.
ದಾದಾಭಾಯಿ ನವರೋಜಿ ಅವರು ಜೂನ್ 30, 1917ರಂದು ತಮ್ಮ 91ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.