ಅದೊಂದು ಪುಟ್ಟ ಊರು. ಆದರೆ ಮುಖ್ಯ ಮುಖ್ಯ ಊರುಗಳಿಂದ ಬರುವ ರಸ್ತೆಗಳು ಒಂದೆಡೆ ಸೇರಿ ಮುಖ್ಯಸಂಪರ್ಕದ ಊರೆನಿಸಿದೆ. ಪಕ್ಕದಲ್ಲೇ ತಾಲೂಕು ಕೇಂದ್ರವೂ ಇದೆ. ಹತ್ತನ್ನೆರಡು ಮೈಲಿಗಳ ದೂರದಲ್ಲಿ ಮತ್ತೆರಡು ದೊಡ್ಡ ಊರುಗಳೂ ಇವೆ. ಈಯೆರಡು ಊರುಗಳಲ್ಲಿಯೂ ಎರಡು ಮೈಲಿ ದೂರದಲ್ಲಿರುವ ತಾಲೂಕು ಕೇಂದ್ರದಲ್ಲಿಯೂ ಆ ತಾಲೂಕನ್ನು ನಿಭಾಯಿಸಲು ಸಾಕಾಗುವಷ್ಟು ವೈದ್ಯರೂ ಇದ್ದಾರೆ. ಹಾಗಿದ್ದೂ ದೂರದ ಊರಿನ ವ್ಯಕ್ತಿಯೊಬ್ಬರು ಆಯುರ್ವೇದ ಶಿಕ್ಷಣವನ್ನು ಪೂರೈಸಿಕೊಂಡು ಮುಂದಿನ ತಮ್ಮ ಬದುಕನ್ನು ಸಾಗಿಸುವುದಕ್ಕಾಗಿ ತಮ್ಮದೇ ಹುಟ್ಟೂರನ್ನೋ ಹೆಚ್ಚು ಸಂಪಾದನೆ ಹುಟ್ಟಬಲ್ಲ ಇನ್ನಾವುದೋ ದೊಡ್ಡ ಊರನ್ನೋ ಆಯ್ದುಕೊಳ್ಳದೆ ಈ ಪುಟ್ಟ ಊರನ್ನೇ ಆಯ್ದುಕೊಂಡು ಮನೆಬಾಡಿಗೆಗೆ ಹಿಡಿದರು.
ತರುಣ. ಊರಿಗೆ ಹೊಸಬ. ಇರುವ ವೈದ್ಯರಿಗೇ ಪೂರ್ಣ ಕೆಲಸವಿಲ್ಲ. ಈತನೇನು ಮಾಡಿಯಾನು? ಆ ಊರಿನ ಅಕ್ಕಪಕ್ಕದ ಊರಿನ ವೈದ್ಯರೆಲ್ಲ ಇಂಥ ಲೆಕ್ಕಾಚಾರದಲ್ಲೇ ಇದ್ದರು. ಆ ತರುಣ ವೈದ್ಯ, ಸೇವೆಗಾಗಿ ಗೊತ್ತುಮಾಡಿಕೊಂಡ ಜಾಗವೂ ಕಟ್ಟಡವೂ ಹಾಗೇ ಇತ್ತು. ಊರ ಕೇಂದ್ರದಿಂದ ತುಸು ದೂರದಲ್ಲಿಯ ಜಾಗ, ಹಳೆಯ ಕಟ್ಟಡ, ವೈದ್ಯಸೇವೆಗೆ ಅನನುಕೂಲವೆಂಬಂತೆ ಇದ್ದ ಕಟ್ಟಡವಿನ್ಯಾಸ ಇತ್ಯಾದಿಗಳು ಉಳಿದ ವೈದ್ಯರ ಲೆಕ್ಕಾಚಾರಕ್ಕೆ ಪೂರಕವಾಗಿಯೇ ಹೊಂದಿಕೊಳ್ಳುವಂತಿದ್ದವು.
ಸೇವೆಯ ಪರಿ
ಆದರೆ ವೈದ್ಯಸೇವೆಯನ್ನು ಆ ತರುಣವೈದ್ಯರು ನಿಜಸೇವೆಯ ಸ್ಫೂರ್ತಿಯಲ್ಲೇ ತೊಡಗಿದರು. ಕಲ್ಪಿಸಿಕೊಳ್ಳಲಾರದಷ್ಟು ಅತಿಕನಿಷ್ಠ ಶುಲ್ಕ. ಶೀತ ಕೆಮ್ಮು ಇತ್ಯಾದಿ ಮನೆಯಲ್ಲೇ ಕಷಾಯವನ್ನೋ ಮತ್ತೇನನ್ನೋ ಮಾಡಿ ನಿಭಾಯಿಸಬಹುದಾದ ಅನಾರೋಗ್ಯದ ಸಂಗತಿಗಳಿಗೆ ಇಲ್ಲಿಯ ತನಕ ಯಾಕೆ ಬಂದಿರಿ ಎಂದು ಪ್ರೀತಿಯಿಂದ ಗದರಿ ಮನೆ-ಔಷಧವನ್ನೇ ಹೇಳಿ, ಅದಕ್ಕೆಲ್ಲ ದುಡ್ಡು ಎಂತದಕ್ಕೆ ಎಂದು ಏನನ್ನೂ ತೆಗೆದುಕೊಳ್ಳದೆ ಕಳಿಸುವ ಸ್ವಭಾವವಿಶೇಷ. ಇದರಿಂದಾಗಿ ಅವರಿಗೆ ಊಟತಿಂಡಿಯನ್ನು ಮಾಡಲೂ ಸಮಯಾವಕಾಶ ಸಿಗದಂತೆ ರೋಗಿಗಳು ಮುತ್ತಿಕೊಂಡರು. ಸ್ಥಳೀಯರು ಮಾತ್ರವಲ್ಲ, ಪಕ್ಕದ ತಾಲೂಕುಗಳಿಂದಲೂ ರೋಗಿಗಳು ಅಲ್ಲಿಗೇ ಧಾವಿಸಲು ತೊಡಗಿದರು.
ಈ ವೈದ್ಯರು ದುಡ್ಡು ಮಾಡುವ ವೈದ್ಯರಲ್ಲ, ಸೇವೆಮಾಡುವ ವೈದ್ಯರು ಎಂದು ಎಲ್ಲರೂ ಮಾತಾಡುವಂತಾಯಿತು. ಜತೆಗೆ; ಈ ಒಂದೇ ವಾಕ್ಯದಲ್ಲಿ ಉಳಿದೆಲ್ಲ ವೈದ್ಯರ ಕುರಿತೂ ಒಂದು ಷರಾ ಹೇಳಿದಂತಾಯಿತು. ಅವರು ವೈದ್ಯಸೇವೆಗೆ ತೊಡಗಿದ ಕೆಲವೇ ಸಮಯದಲ್ಲಿ ಈ ಚಮತ್ಕಾರವನ್ನು ಸಾಧಿಸಿದ್ದರು. ಆಗ, ನಿರ್ಲಕ್ಷ್ಯ ತೋರಿದ್ದ ಉಳಿದ ವೈದ್ಯರು ಇವರನ್ನು ಯಾವ ಪರಿಯಲ್ಲಿ ಗಂಭೀರವಾಗಿ ಪರಿಗಣಿಸಿರಬಹುದೆಂಬುದನ್ನು ಊಹಿಸಿಕೊಳ್ಳಿ.
ಕೈಹಿಡಿದ ಕೈಗುಣ
ವಿಷಯ ಅದಲ್ಲ. ಅವರು ನೀಡುತ್ತಿದ್ದ ಔಷಧಿಯಿಂದ ರೋಗವು ನಿರೀಕ್ಷಿತ ಸಮಯಕ್ಕಿಂತ ಮೊದಲೇ ಗುಣವಾಗುತ್ತಿತ್ತು. ಅವರು ತೋರುತ್ತಿದ್ದ ಆತ್ಮೀಯತೆ, ಮಾತಿನಲ್ಲಿರುತ್ತಿದ್ದ ಆಪ್ತತೆ ಇತ್ಯಾದಿಗಳ ಜತೆಗೆ ಅವರು ನೀಡುತ್ತಿದ್ದ ಔಷಧದ ಪರಿಣಾಮಕಾರಿತ್ವದ ಬಗೆಗೆ ಎಲ್ಲರೂ ಮಾರುಹೋಗಿದ್ದರು. ಆಪ್ತತೆ, ಆತ್ಮೀಯತೆಗಳು ಬೇಕು, ಆದರೆ ಪರಿಣಾಮಕಾರಿ ಔಷಧ ಅದಕ್ಕಿಂತ ಹೆಚ್ಚು ಮುಖ್ಯ. ಕೆಲವರು ಮಿತಭಾಷಿಗಳಾಗಿ, ಕೆಲವರು ಕಟುಭಾಷಿಗಳಾಗಿ ಪರಿಣಾಮಕಾರಿ ಔಷಧಿಯನ್ನು ಕೊಡಬಲ್ಲವರಿರುತ್ತಾರೆ. ಅಂಥವರಲ್ಲಿಗೂ ರೋಗಿಗಳು ಧಾವಿಸುವುದೇ ಸೈ. ಅಂಥಲ್ಲಿ ಈ ಪುಟ್ಟ ಊರಿನ ವೈದ್ಯರು ಎಲ್ಲವನ್ನೂ ಹೊಂದಿದವರಾಗಿ ಎಲ್ಲರನ್ನೂ ಆಕರ್ಷಿಸಿದ್ದು ವಿಶೇಷವಲ್ಲ.
ಕೆಲವು ಮಂದಿ ವಿಶ್ಲೇಷಿಸುವ ಹಾಗೆ, ಅವರು ಯಾವ ಔಷಧಿ ಕೊಟ್ಟರೂ ಪರಿಣಾಮ ಆಗುತ್ತಿರುವುದಕ್ಕೆ ಕಾರಣ ಅವರ ಕೈಗುಣ. ನಿಜವಾದ ಅವರ ವಿಶೇಷತೆ ಈ ಕೈಗುಣವೇ ಆಗಿತ್ತು. ಉಳಿದೆಲ್ಲ ಸ್ವಭಾವಗುಣಗಳು ಇದಕ್ಕೆ ಪೂರಕವಿದ್ದವು, ಅಷ್ಟೆ. ವೈದ್ಯರು ಏನೇನೋ ಔಷಧವನ್ನು ಕೊಡಲು ಸಾಧ್ಯವಿಲ್ಲವೆನ್ನಿ. ನಿರ್ದಿಷ್ಟ ರೋಗಕ್ಕೆ ಸರಿಯಾದ ಔಷಧವನ್ನೇ ಕೊಟ್ಟಿರುತ್ತಾರೆ. ಮತ್ತು ಆ ಸಮ್ಯಕ್ ಔಷಧದ ಕಾರಣಕ್ಕಾಗಿಯೇ ರೋಗವೂ ಗುಣಮುಖವಾಗಿರುತ್ತದೆ. ಸಾಮಾನ್ಯವಾಗಿ ತಾರ್ಕಿಕರು ತೊಡಗುವಂಥ ಈ ತರ್ಕವು ಯಾರೇ ಆದರೂ ತರ್ಕಿಸಬಹುದಾದುದು. ಆದರೆ ಇಂಥ ತರ್ಕದಲ್ಲಿ ಸವಾಲೊಂದಿದೆ; ಅದೇ ಔಷಧವನ್ನು ಮತ್ತಾರೋ ಕೊಟ್ಟಾಗ ರೋಗವು ಅದೇ ಪರಿಯಲ್ಲಿ ಗುಣಮುಖವಾಗದಿದ್ದರೆ ಅದು ಯಾಕೆಂಬುದೇ ಎದುರಾಗುವ ಪ್ರಶ್ನೆ. ಆಗ ತರ್ಕವು ಮತ್ತೊಂದು ಬಗೆಯಲ್ಲಿ ಉಪಕ್ರಮಿಸುತ್ತದೆ.
ವಿಜ್ಞಾನದ ಗ್ರಹಿಕೆಯಿಂದಾಚೆ
ಈ ವೈದ್ಯರ ಕೈಗುಣದ ಬಗ್ಗೆ ಜನರಂತೂ ಶ್ರದ್ಧೆ – ಗೌರವಗಳಿಂದಲೇ ಮಾತಾಡುತ್ತಾರೆ. ವಿಜ್ಞಾನವು ಅದನ್ನು ಒಪ್ಪಲಾರದು. ತರ್ಕಕ್ಕೆ ಸಿಗದುದನ್ನು ಅದು ಒಪ್ಪುವುದು ಕಷ್ಟವೂ ಇದೆಯೆನ್ನಿ. ವಿಜ್ಞಾನಕ್ಕಿರುವ ತರ್ಕದ ಈ ಹಂಗು ಜನರಿಗಂತೂ ಇಲ್ಲ! ಜನ ವೈಜ್ಞಾನಿಕವಾಗಿ ಯೋಚಿಸುತ್ತಿಲ್ಲ ಎಂದು ಆಕ್ಷೇಪಿಸಬಹುದು. ವಿಜ್ಞಾನಿಯ ಬದುಕೂ ಕೂಡ ಪೂರ್ಣಪ್ರಮಾಣದಲ್ಲಿ ವೈಜ್ಞಾನಿಕವಾಗಿ ಇಲ್ಲವಲ್ಲ! ಅವನಿಗೆ ತನ್ನವರೊಂದಿಗಿರುವ ಸಂಬಂಧಗಳು, ಪ್ರೀತಿ ಮತ್ತಿತರ ಭಾವಪ್ರಪಂಚ ಇವಾವುವೂ ವೈಜ್ಞಾನಿಕವಾಗಿವೆ ಎನ್ನಲಾಗದಷ್ಟೆ.ಕೈಗುಣ ಅನ್ನುವುದೂ ಕೂಡಾ ಅಂಥದ್ದೇ ಒಂದು ತರ್ಕಾತೀತ ಸಂಗತಿ ಇರಬಾರದೇಕೆ? ತರ್ಕಕ್ಕೆ ನಿಲುಕದ ಸಂಗತಿ ಇಲ್ಲವೆಂದಾಗಲೀ ಇರಬಾರದೆಂದಾಗಲೀ ನಿರ್ಣಯವಿಲ್ಲವಷ್ಟೆ.
ವಿಜ್ಞಾನವು ತನ್ನ ಗ್ರಹಿಕೆಯ ಮಿತಿಯಿಂದ ಆಚೆ ಇರುವುದಕ್ಕೆ ಒಂದು ನಾಮಕರಣ ಮಾಡಿ ಅದರ ಕುರಿತು ಮತ್ತೆ ಅರ್ಥೈಸುವುದಕ್ಕೋ ಶೋಧಕ್ಕೋ ತೊಡಗುವುದಿದೆ. ವಿಜ್ಞಾನದ ಗ್ರಹಿಕೆಗೆ ನಿಲುಕದ ಸಂಗತಿಗಳು ನಿಸರ್ಗದಲ್ಲಿ ಎಷ್ಟೋ ಇವೆ. ಹಾಗೇ ಸಾಮಾನ್ಯನ ಗ್ರಹಿಕೆಗೆ ನಿಲುಕದ್ದು ಕೂಡಾ. ಗ್ರಹಿಕೆಗೆ ನಿಲುಕಿದ್ದಕ್ಕೂ ಒಂದು ನಾಮಕರಣ ಇದೆ, ನಿಲುಕದ್ದಕ್ಕೂ ಇದೆ. ಇದರಲ್ಲಿ ಆತನೂ ಹಿಂದೆಬಿದ್ದಿಲ್ಲ. ಹಾಗೆ; ಹೇಗೆ, ಯಾಕೆ ಇತ್ಯಾದಿ ವಿವರಗಳಲ್ಲಿ ಹೇಳಲಾಗದ, ಆದರೆ ಅನುಭವಕ್ಕೆ ದಕ್ಕುವ, ನಿರ್ದಿಷ್ಟ ವ್ಯಕ್ತಿಯಲ್ಲಿರುವ ಸ್ಥಿತಿವಿಶೇಷವೊಂದಕ್ಕೆ ಇಟ್ಟ ಹೆಸರು ಈ ಕೈಗುಣ.
ಅಡುಗೆ ರುಚಿಸುವ ಬಗೆ
ಕೈಗುಣ ಅನ್ನುವುದು ಒಂದು ವಿಶೇಷ ಅಂಗಸ್ಥಿತಿ. ಇದು ವೈದ್ಯರಿಗಷ್ಟೆ ಸೀಮಿತವಲ್ಲ. ಅಡುಗೆಮಾಡುವವರು, ವೇತನಕೊಡುವವರು, ದಾನಮಾಡುವವರು ಇತ್ಯಾದಿ ಹಲವು ಬಗೆಗಳಲ್ಲಿ ತೊಡಗುವ ವ್ಯಕ್ತಿಗಳಲ್ಲಿಯೂ ಕೈಗುಣ ಕೆಲಸಮಾಡಬಲ್ಲದು. ನಮ್ಮಲ್ಲೊಬ್ಬರು ಅಡುಗೆಯ ಅಮ್ಮ ಇದ್ದರು. ವಯಸ್ಸಾಗಿತ್ತವರಿಗೆ. ಸಹಾಯಕರ ಮೂಲಕವೇ ಎಲ್ಲವನ್ನೂ ಮಾಡಬೇಕಿತ್ತು. ಆದರೆ ಅಡುಗೆಯಲ್ಲಿ ಉಪ್ಪು ಹುಳಿ ಇತ್ಯಾದಿ ಮುಖ್ಯ ಖಾದ್ಯಪದಾರ್ಥಗಳನ್ನು ಹಾಕುವುದನ್ನು ಸಹಾಯಕರಿಗೆ ಹೇಳದೆ ಅವರೇ ಮಾಡುತ್ತಿದ್ದರು. ಅವರು ಹಾಗೆ ಮಾಡಿದ ಅಡುಗೆಯ ರುಚಿ, ರುಚಿಯೋ ರುಚಿ! ಅವರು ರಜೆಮಾಡಿದ ದಿನ ಅವರಿಗೆ ಸಹಾಯಮಾಡುತ್ತಿದ್ದವರೇ ಅಡುಗೆಮಾಡುತ್ತಿದ್ದರು. ಅಂದಿನ ಅಡುಗೆ ಅಮ್ಮನದ್ದಲ್ಲ ಎಂದು ಬಾಯಿಗಿಟ್ಟಾಕ್ಷಣವೇ ಹೇಳಬಹುದಿತ್ತು. ಆ ಅಮ್ಮನ ಕೈಗುಣದ ಬಗ್ಗೆ ಮಾತಾಡದವರಿಲ್ಲ.
ಕಾಲುಗುಣದ ಚಮತ್ಕಾರ
ಹೊಸದಾಗಿ ಮನೆಗೆ ಬಂದ ಸೊಸೆಯ ಕಾಲುಗುಣದ ಬಗ್ಗೆ ಅತ್ತೆಯಂದಿರಲ್ಲದಿದ್ದರೂ ಉಳಿದವರು ಮಾತಾಡುವುದು ಕೇಳಿಲ್ಲವೇ? ಕೆಲವು ಅತ್ತೆಯರೂ ಮಾತಾಡುತ್ತಾರೆನ್ನಿ. ಅಂಥ ಸೊಸೆ ಮನೆಗೆ ಬಂದಂದಿನಿಂದ ಆ ಮನೆಗೆ ಶುಭವೇ ಆಗಿರುವ ಅನೇಕ ಸಂಗತಿಗಳನ್ನು ಸವಿವರ ಹೇಳುವುದನ್ನು ಅಲ್ಲಿಲ್ಲಿ ಕೇಳುವುದಾಗುತ್ತದೆ. ಬರಿಯ ಸೊಸೆಯೆಂದೇನು, ಮನೆಗೋ ದೇವಳಕ್ಕೋ ಊರಿಗೋ ಒಮ್ಮೆಯಷ್ಟೆ ಬಂದುಹೋದ ಸಂತನಿಂದ ಇಲ್ಲವೇ ಸಂತನಂಥ ವ್ಯಕ್ತಿಯಿಂದ ಏನೇನು ಮಂಗಳಕರ ಸಂಗತಿಗಳು ಘಟಿಸಿದವು ಎಂಬುದನ್ನೂ ಹಲವೆಡೆಗಳಲ್ಲಿ ಕೇಳುವುದಾಗುತ್ತದೆ. ಅಂಥ ಕೆಲವರ ಕಾಲುಗುಣದಿಂದಾಗಿ ಒಂದು ಪ್ರದೇಶವು ಪುಣ್ಯಕ್ಷೇತ್ರವೇ ಆಗಿಬಿಡುವುದಿದೆ. ಕೆಲವರು ಊರಿಗೆ ಬಂದರೆ ಒಳ್ಳೆಯದಾಗುತ್ತದೆ ಎಂಬ ಮಾತೂ ಅಲ್ಲಿಲ್ಲಿ ಕಿವಿಗೆ ಬೀಳುತ್ತದಷ್ಟೆ. ಜತೆಗೆ, ಕೆಲವರು ಊರು ಬಿಟ್ಟರೆ ಒಳ್ಳೆಯದಾಗುತ್ತದೆ ಎಂಬ ಮಾತು ಕೂಡಾ! ಕೈಗುಣ ಚೆನ್ನಾಗಿದ್ದವರು ಊರಿಗೆ ಬಂದರೆ ಒಳ್ಳೆಯದಾಗುತ್ತದೆ ಎಂದೇನೂ ಇರಬೇಕಾಗಿಲ್ಲ. ಹಾಗೆಯೇ, ಕಾಲುಗುಣ ಚೆನ್ನಾಗಿದ್ದವರು ಮಾಡುವ ಅಡುಗೆಯೋ ಮತ್ತೊಂದೋ ಚೆನ್ನಾಗಿರುತ್ತದೆ ಎನ್ನಲಾಗದು.
ಸರ್ವಾಂಗಗುಣಸಂಪನ್ನ
ಪ್ರಕೃತಿಯು ಒಂದು ಅಂಗಕ್ಕೆ ಮಾತ್ರ ಕೆಲವರಲ್ಲಿ ಶಕ್ತಿಯನ್ನು ತುಂಬಿದಂತೆ ಇದೆ. ಅಪರೂಪಕ್ಕೆ, ಕೆಲವರಲ್ಲಿ ಎರಡೋ ಮೂರೋ ಅಂಗಗಳಿಗೆ ಶಕ್ತಿದುಂಬಿರಬಹುದು. ಸಕಲಗುಣಸಂಪನ್ನವಿರುವವರು ಎನ್ನಲಾಗುವವರ ಬಗೆಗೂ ಒಂದು ಮಾತು ಪ್ರಚಲಿತದಲ್ಲಿರುತ್ತದೆ, ಅದೇನೆಂದರೆ; ‘ಎಲ್ಲವೂ ಚೆನ್ನಾಗಿದೆ, ಆದರೆ.. ಇದೊಂದು ಇಲ್ಲವಾಯಿತಲ್ಲ! ಮುಖ್ಯವಾದುದೇ ಇಲ್ಲವಾಯಿತಲ್ಲ!’ಪ್ರಕೃತಿಯು ಎಲ್ಲವನ್ನೂ ಕೊಟ್ಟು ಯಾವುದೋ ಒಂದು ಮುಖ್ಯವಾದುದನ್ನೇ ಕಸಿದುಕೊಂಡಿರುತ್ತದೆ.
ಅವಯವ, ಗುಣಕ್ಕೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಒಂದೋ ಎರಡೋ ಸಂಗತಿಗಳು ಊನವಿರುತ್ತವೆ. ದೈವೀಗುಣಗಳೆನ್ನಲಾಗುವ ಕೈಗುಣ ಕಾಲುಗುಣ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಪ್ರಕೃತಿಯು ಅಪರೂಪಕ್ಕೆ ನೀಡುವುದೇ ಒಂದನ್ನು, ಅಬ್ಬಬ್ಬಾ ಎಂದರೆ ಎರಡನ್ನು. ಅಂದರೆ; ಒಂದೋ ಕೈಗುಣ ಚೆನ್ನಾಗಿರಬಹುದು, ಇಲ್ಲವೇ ನಾಲಿಗೆಗುಣ (ಮಾತು) ಚೆನ್ನಾಗಿರಬಹುದು. ಒಂದೊಮ್ಮೆ ಕೈಗುಣ ಮತ್ತು ಕಾಲುಗುಣ ಹೀಗೆ ಯಾವುದಾದರೂ ಎರಡು ಚೆನ್ನಾಗಿದ್ದರೂ ಉಳಿದದ್ದು ಯಾವುದೂ ಹಾಗಿರುವುದಿಲ್ಲ.
ಅಂಥಲ್ಲಿ; ದೈವೀಗುಣದ ದೃಷ್ಟಿಯಿಂದ ಮನಸ್ಸು ಬುದ್ಧಿ ಇತ್ಯಾದಿಗಳನ್ನೂ ಒಳಗೊಂಡ ಸರ್ವಾಂಗಗುಣಸಂಪನ್ನವಾದ ವ್ಯಕ್ತಿತ್ವವನ್ನು ಊಹಿಸಿಕೊಳ್ಳಲಾದೀತೆ? ಊಹಿಸಿಕೊಳ್ಳುವುದು ಕಷ್ಟವೇ. ಆದರೆ ರಾಮಾಯಣದಲ್ಲಿ ವಾಲ್ಮೀಕಿಗಳು ಅಂಥ ಒಂದು ಪಾತ್ರವನ್ನು ಚಿತ್ರಿಸಿದ್ದಾರೆ. ಯಾವುದದು?
ವಧೆಗಿಂತ ಭಿನ್ನವಾದ ಮೋಕ್ಷ
ಈ ಬಗೆಗೆ ಕುತೂಹಲದಿಂದ ಸಂದೇಹಿಸುವವರು ರಾಮನನ್ನಂತೂ ಪಕ್ಕಕ್ಕಿಟ್ಟೇ ಯೋಚಿಸುತ್ತಾರೆ. ಆತ ಸೀತೆಯನ್ನು ಅಗ್ನಿಪರೀಕ್ಷೆಗೆ ಒಡ್ಡಿದವನಲ್ಲವೇ? ಆಕೆಯನ್ನು ಕಾಡಿಗಟ್ಟಿದವನಲ್ಲವೇ? ವಾಲಿಯನ್ನು ಮರೆಯಲ್ಲಿ ಕೊಂದವನಲ್ಲವೇ? ಇತ್ಯಾದಿ. ಬಹುಶಃ ಭರತನಿರಬಹುದು ಎಂದು ಲೆಕ್ಕಾಚಾರಕ್ಕೆ ತೊಡಗುತ್ತಾರೆ. ಹನುಮಂತನ ಬಗೆಗೂ ತರ್ಕಿಸುತ್ತಾರೆ. ಆದರೆ ದೈವೀಗುಣದ ಆ ವ್ಯಕ್ತಿ ಬೇರಾರೂ ಅಲ್ಲ, ರಾಮನೇ. ರಾಮನಿಗೆ ಬದುಕಿನಲ್ಲಿ ಕಷ್ಟಗಳೇ ಒದಗಿರಬಹುದು, ಆತನಿಂದ ಉಳಿದವರಿಗೆ ಒದಗಿದುದು ಸುಖನೆಮ್ಮದಿಗಳೇ. ಆತ ಕಾಡಿಗೆ ಹೋದ. ರಾಕ್ಷಸರ ಉಪಟಳದಿಂದ ಅದು ಮುಕ್ತವಾಯಿತು. ಆತ ಕಿಷ್ಕೆಂದೆಗೆ ಹೋದ. ಹರಿದುಹಂಚಿಹೋಗಿದ್ದ ಕಪಿವೀರರು ಒಂದಾದರರು. ರಾಕ್ಷಸರ ವಿರುದ್ಧದ ಹೋರಾಟದಲ್ಲಿ ದೇವತೆಗಳೇ ಆದರು. ಆತ ಲಂಕೆಗೆ ಹೋದ. ಲಂಕೆ ರಾಕ್ಷಸರಿಂದ ಮುಕ್ತವಾಯಿತು. ರಾವಣನ ವಧೆಯಾಯಿತು. ಆತ ವೈಕುಂಠದ ಜಯನಲ್ಲವೇ? ಈ ಹಿನ್ನೆಲೆಯಲ್ಲಿ ನಮ್ಮ ಯಕ್ಷಗಾನದಂಥ ಕಲೆಗಳಿಗೆ ಆ ವಧೆಯನ್ನು ‘ರಾವಣಮೋಕ್ಷ’ ಎನ್ನುವುದರಲ್ಲಿಯೇ ಸಮಾಧಾನ. ಹಾಗೆಯೇ ಇಂದ್ರನ ಅಂಶಜನಾಗಿದ್ದ ವಾಲಿಯು ರಾಮಬಾಣದಿಂದ ಪಡೆದಿದ್ದು ಮೋಕ್ಷವನ್ನೇ. ಯಕ್ಷಗಾನದಲ್ಲಿ ಆ ಪ್ರಸಂಗದ ಹೆಸರೇ ‘ವಾಲಿಮೋಕ್ಷ’.
ಸುಖದ ಕಷ್ಟ
ಇನ್ನು ಸೀತೆಗೆ ಕಷ್ಟವೊದಗಿತಲ್ಲ ಎಂದು ಆಕ್ಷೇಪಿಸುವಿರಾ? ಅಗ್ನಿಪರೀಕ್ಷೆಗೆ ತನ್ನನ್ನು ಒಡ್ಡಿಕೊಂಡದ್ದು ಸೀತೆಯೇ ವಿನಾ ಅದು ರಾಮನ ಆಜ್ಞೆಯಾಗಿರಲಿಲ್ಲ. ಆದರೆ ಆಕೆ ಆ ರೀತಿ ನಿರ್ಣಯಕ್ಕೆ ಬಂದುದು ರಾಮನ ಕಠೋರ ಮಾತುಗಳನ್ನು ಕೇಳಿಯೇ. ಪರಿಣಾಮವಾಗಿ ಒಳ್ಳೆಯದೇ ಆಯಿತಲ್ಲ! ಆಕೆಯ ಪಾರಿಶುದ್ಧಿಯನ್ನು ಸಾರುವ ಅದಕ್ಕಿಂತ ದೊಡ್ಡದಾದ ಸಾಕ್ಷಿ ಇನ್ನಾವುದೂ ಇರಲಸಾಧ್ಯ.
ಪ್ರಜೆಗಳ ಮಾತು ಕೇಳಿ ಕಾಡಿಗಟ್ಟಿದ ಎಂಬುದು ಮತ್ತೊಂದು ಆಕ್ಷೇಪ. ಸೀತೆಗೇನೋ ಕಾಡೆಂದರೆ, ಅದರಲ್ಲಿಯೂ ಋಷ್ಯಾಶ್ರಮ ಎಂದರೆ ತುಂಬಾ ಇಷ್ಟ. ಆದರೆ ಅದು ರಾಮಸಹಿತವಾದ ನೆಲೆಯಲ್ಲಿ. ರಾಮನಿಂದ ಪರಿತ್ಯಕ್ತಗೊಂಡು ಅಲ್ಲ. ಅಷ್ಟರಮಟ್ಟಿಗೆ ಸೀತೆಗೆ ಅದೊಂದು ನೋವೇ. ಆಕೆ ಒಂದೊಮ್ಮೆ ರಾಮನಿಂದ ಪರಿತ್ಯಕ್ತಗೊಳ್ಳದೇ ಅಯೋಧ್ಯೆಯಲ್ಲಿಯೇ ಉಳಿಯುತ್ತಿದ್ದರೆ ಕಷ್ಟವೇ ಇರುತ್ತಿರಲಿಲ್ಲವೇ? ರಾಮನ ಕಿವಿಗೆ ಬಿದ್ದ ಆಕೆಯ ಕುರಿತಾದ ಪ್ರಜೆಗಳು ಆಡುತ್ತಿದ್ದ ಮಾತು ಆಕೆಯ ಕಿವಿಗೂ ಬೀಳಲು ಎಷ್ಟು ಸಮಯ ಬೇಕು! ಮತ್ತದು ಅಲ್ಲಿರುವಾಗ ನಿತ್ಯದ ಗೋಳು. ಆಕೆ ಸೀತೆ. ತನ್ನ ಕುರಿತಾದ ಅಂಥ ಕಠೋರಮಾತುಗಳನ್ನು ಕೇಳಿಸಿಕೊಂಡು ಹಾಯಾಗಿರಬಲ್ಲ ದಾಡಸೀತನದ ವ್ಯಕ್ತಿತ್ವದವಳಲ್ಲ. ರಾಮನ ನಿರ್ಣಯದಿಂದ ಸೀತೆ ಎಷ್ಟು ಸಂಕಟಪಡಬೇಕಾಯಿತೋ ಅದಕ್ಕಿಂತ ಹೆಚ್ಚು ಸಂಕಟವನ್ನು ಆಕೆ ಅಯೋಧ್ಯೆಯಲ್ಲಿ ಇದ್ದಿದ್ದರೆ ಪಡಬೇಕಾಗಿಬರುತ್ತಿತ್ತು. ಹಾಗಾಗಿ ಸೀತೆಗಿದ್ದ ಅಯೋಧ್ಯೆ ಮತ್ತು ವಾಲ್ಮೀಕಿ ಆಶ್ರಮ ಈಯೆರಡು ಆಯ್ಕೆಗಳಲ್ಲಿ ಹೆಚ್ಚು ಸುಖಕರವಿದ್ದುದು ಎರಡನೆಯದೇ.
ದೈವೀಗುಣ ಲಕ್ಷಣ
ತಮ್ಮ ವ್ಯಕ್ತಿತ್ವವಿಡೀ ದೈವೀಗುಣವನ್ನು ಹೊಂದಿರುವವರು ಏನು ಮಾಡಿದರೂ ಸಮಷ್ಟಿಗೆ ಒಳ್ಳೆಯದೇ ಆಗುತ್ತದೆ. ಅಂಥವರ ಕ್ರಿಯೆಯು ಕೆಲವೊಮ್ಮೆ ಕಠೋರವಿದ್ದರೂ ಪರಿಣಾಮದಲ್ಲಿ ಮಂಗಳವನ್ನುಂಟುಮಾಡುತ್ತದೆ. ದೈವೀಗುಣವನ್ನು ಉಳ್ಳವರು ಯಾರ ಬಗೆಗೂ ವೈರಭಾವವನ್ನು ತಾಳರು. ಅವರ ಬಗೆಗೆ ಕೆಲವರಿಗೆ ಅಕಾರಣವಾಗಿ ಅಂಥ ಭಾವವಿದ್ದೀತು!
ಹಾಗೆ ನೋಡಹೋದರೆ ರಾಮನನ್ನು ಕಾಡಿಗಟ್ಟಲು ಕಾರಣಳಾದ ಕೈಕೇಯಿಗೂ ಆತನ ಬಗೆಗೆ ಇದ್ದುದು ಪ್ರೀತಿಯೇ. ವಾತ್ಸಲ್ಯವೇ. ರಾಮನಿಂದ ಕೌಸಲ್ಯೆಗೆ ಎಷ್ಟು ಆನಂದವಾಗುತ್ತಿತ್ತೋ ಅದಕ್ಕಿಂತ ತುಸು ಹೆಚ್ಚೇ ಆಗುತ್ತಿದ್ದುದು ಕೈಕೇಯಿಗೆ. ಮಂಥರೆಯ ಮಾತಿಗೆ ಬಲಿಯಾಗಿ ಒಂದಷ್ಟು ಸಮಯ ಆಕೆ ತನ್ನತನವನ್ನು ಕಳಕೊಂಡಿದ್ದಳಷ್ಟೆ. ಅನಂತರ ಆಕೆ ತನ್ನ ಮೂಲಸ್ಥಿತಿಗೇ ಮರಳಿದ್ದಳು. ಮಂಥರೆಗಿದ್ದುದು ರಾಮನ ಮೇಲೆ ವಿರೋಧವಲ್ಲ, ಭವಿಷ್ಯದಲ್ಲಿ ತನ್ನ ಯಜಮಾನಿಯ ತನ್ಮೂಲಕ ತನ್ನ ಸ್ಥಾನಮಾನವನ್ನು ಗಟ್ಟಿಗೊಳಿಸುವ ಯೋಚನೆ. ತನ್ನನ್ನು ಕಾಡಿಗಟ್ಟಿದವರನ್ನೂ ಶ್ರದ್ಧೆಯಿಂದ ಕಂಡ ರಾಮನಲ್ಲಿ ದೈವೀಗುಣವು ಆಪಾದಮಸ್ತಕ ವ್ಯಾಪಿಸಿದುದು ಸಹಜವೇ ಇದೆ.
ಆಕ್ಷೇಪಿಸುವವರ ರಕ್ಷಕ
ರಾಮನ ವ್ಯಕ್ತಿತ್ವ ಯಾವ ಬಗೆಯದು ಎಂಬುದನ್ನು ಗ್ರಹಿಸಿದರೆ ಆತ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಸಂದೇಹವು ಹುಟ್ಟದು ಎನಿಸುತ್ತದೆ. ಆತ ತನ್ನ ಕುರಿತಾದ ಯಾವುದೇ ಆಕ್ಷೇಪವನ್ನು ಅಲ್ಲಗಳೆಯುವವನೂ ಅಲ್ಲ, ತನ್ನನ್ನು ಸಮರ್ಥಿಸಿಕೊಳ್ಳುವವನೂ ಅಲ್ಲ. ನಿಶ್ಚಯವಾಗಿದ್ದ ತನ್ನ ಪಟ್ಟಾಭಿಷೇಕದಂಥ ಕಾರ್ಯಕ್ರಮವನ್ನು ರದ್ದುಗೊಳಿಸಿ ಕಾಡಿನಂಥ ಕಾಡಿಗೆ ಹೋಗಬೇಕೆಂಬ ಸೂಚನೆ ಬಂದಾಗ ಅದನ್ನು ಯಾವುದೇ ರೀತಿಯಲ್ಲಿ ಪ್ರಶ್ನಿಸಿದವನಲ್ಲ. ರಾಮನನ್ನು ಕಾಡಿಗಟ್ಟಲು ಕಾರಣಳಾದವಳೆಂದು ಮಂಥರೆಯನ್ನು ಶತ್ರುಘ್ನನು ಹೊಡೆಯಹೊರಟಾಗ ಭರತನು ‘ಬೇಡ ತಮ್ಮ, ಆಕೆಯನ್ನು ಶಿಕ್ಷಿಸುವುದು ರಾಮನಿಗೆ ಹಿತವೆನಿಸದು. ರಾಮನಿಗಾಗಿ ಆಕೆಯನ್ನು ಬಿಟ್ಟುಬಿಡು’ ಎಂದು ಹೇಳುತ್ತಾನೆ. ಭರತನ ಈ ಹೇಳಿಕೆಯಲ್ಲಿ ರಾಮನ ವ್ಯಕ್ತಿತ್ವದ ಮೇರುಸ್ಥಿತಿ ವ್ಯಕ್ತವಾಗಿದೆ.
ತನ್ನ ಕುರಿತು ಯಾರದೇ ಯಾವುದೇ ಆಕ್ಷೇಪಗಳಿದ್ದರೂ ತಿಳಿಸಬೇಕು, ಹಾಗೆ ಆಕ್ಷೇಪಿಸಿದವರನ್ನು ತಾನು ಏನೂ ಮಾಡುವುದಿಲ್ಲ ಎಂದು ರಾಮ ಭರವಸೆಯನ್ನು ಕೊಟ್ಟನಂತರವೇ ಗುಪ್ತಚರರು ಸೀತೆಯ ಬಗ್ಗೆ ಜನರಾಡುತ್ತಿದ್ದ ಮಾತನ್ನು ಹೇಳಿದ್ದು. ತನ್ನನ್ನು ಆಕ್ಷೇಪಿಸುವವರನ್ನು ಆಗ್ರಹಪೂರ್ವಕವಾಗಿ ರಕ್ಷಿಸುವವ ರಾಮ, ಆಕ್ಷೇಪವು ಪರಮಸುಳ್ಳೆಂದು ಗೊತ್ತಿರುವಾಗಲೂ. ಮುಗ್ಧತೆಯೊಂದು ಇದಕ್ಕಿಂತ ಹೆಚ್ಚಿನ ಬಗೆಯಲ್ಲಿ ಅಭಿವ್ಯಕ್ತಗೊಳ್ಳುವುದು ಅಸಾಧ್ಯವೆನಿಸುತ್ತದೆ.
ಮುಗ್ಧತೆಗೆ ಸ್ಪಂದನ
ಇಂಥ ರಾಮನು ನಡೆಸುವ ರಾಜ್ಯವು ಅದೆಂಥದಿರಬಹುದು? ಅದು ರಾಮರಾಜ್ಯವೆಂದೇ ಪ್ರತೀತವಾಗಿದೆ. ಅದು ಉಳಿದವಕ್ಕಿಂತ ಹೇಗೆ ಭಿನ್ನವಾಗಿದೆ ಎನ್ನುವುದು ಕುತೂಹಲ ಹುಟ್ಟಿಸುವ ಅಂಶ. ಯಾಕೆಂದರೆ ರಾಮಾಯಣದಲ್ಲಿ ಹಲವು ರಾಜರು ಆಳಿದ ರಾಜ್ಯಗಳ ವಿವರಗಳು ಸಿಗುತ್ತವೆ. ದಶರಥನ ರಾಜ್ಯದ ಬಗ್ಗೆ ಪ್ರಾರಂಭದಲ್ಲೇ ಬರುವ ಮಾಹಿತಿಯಂತೆ ಅದು ಸ್ವರ್ಗಕ್ಕಿಂತಲೂ ಮಿಗಿಲೇ ಆಗಿತ್ತೇನೋ ಎಂದು ವರ್ಣನೆ ಸಾರುತ್ತದೆ. ಲಂಕೆಯಂತೂ ಸ್ವರ್ಣಮಯಿ. ಶ್ರೀಮಂತಿಕೆ ತುಂಬಿತುಳುಕುತ್ತಿದ್ದ ರಾಜ್ಯವಾಗಿತ್ತದು. ಕೊನೆಗೆ ಭರತ ರಾಮನಿಗೊಪ್ಪಿಸುವ ರಾಜ್ಯದ ವಿವರವೂ ಇದೆ. ಅದಂತೂ ಭರತನ ಕೈಗೆ ಬಂದಬಳಿಕ ಎಲ್ಲವೂ ದುಪ್ಪಟ್ಟು ಮುಪ್ಪಟ್ಟು ಈ ರೀತಿ ವರ್ಧನೆಯಾಗಿದೆ.
ಇವಾವುದರೊಂದಿಗೂ ಸ್ಪರ್ಧಿಸಲಾಗದು ಎಂಬಂತೆ ರಾಮರಾಜ್ಯವಿದೆ. ಅದು ಇವುಗಳೊಂದಿಗೆ ಸ್ಪರ್ಧೆಗೆ ಇಳಿಯದು ಕೂಡಾ. ವಾಲ್ಮೀಕಿಗಳಂತೂ ಕೆಲವೇ ಶಬ್ದಗಳಲ್ಲಿ ರಾಮರಾಜ್ಯದ ವರ್ಣನೆಯನ್ನು ಮುಗಿಸಿಬಿಡುತ್ತಾರೆ. ಅಲ್ಲಿ ಯಾರೂ ಅಕಾಲದಲ್ಲಿ ಮರಣವನ್ನು ಹೊಂದುತ್ತಿರಲಿಲ್ಲ, ಕಾಲಕಾಲಕ್ಕೆ ಆಯಾ ಋತುಗಳು ಯಾವುದೇ ಏರುಪೇರಿಲ್ಲದೆ ಬಂದುಹೋಗುತ್ತಿದ್ದುವು, ಮಳೆಬೆಳೆ ಎಲ್ಲವೂ ಚೆನ್ನಾಗಿ ಆಗುತ್ತಿತ್ತು! ಸರಿ. ಇದರಲ್ಲಿ ರಾಮನ ಪಾತ್ರ ಏನಿದೆ? ಇದು ನಿಜಕ್ಕೂ ತಾರ್ಕಿಕ ಪ್ರಶ್ನೆ. ಮತ್ತೆ ತರ್ಕದ ಆಚೆಗೆ ನಿಂತೇ ನೋಡಬೇಕಿದನ್ನು. ಊರಲ್ಲಿ ಯಾರಿಗೂ ಕೇಡೆನಿಸದ ಒಳ್ಳೆಯವರಿದ್ದರೆ ಅವರ ಕುರಿತಾಗಿ ಅನ್ನುವುದಿಲ್ಲವೆ; “ಅವರು ಇರುವುದರಿಂದಾಗಿ ಮಳೆಬೆಳೆ ಎಲ್ಲಾ ಚೆನ್ನಾಗಿ ಆಗುತ್ತಿದೆ.”
ರಾಮನ ಮುಗ್ಧತೆಗೆ ಪ್ರಕೃತಿಯೇ ಒಲಿದ ಬಗೆಯನ್ನು ರಾಮರಾಜ್ಯದ ವರ್ಣನೆಯು ಸೂಚಿಸುತ್ತಿದೆ. ಅದನ್ನು ಗ್ರಹಿಸುವ ಮನಸ್ಸು ಬೇಕಷ್ಟೆ. ಆ ಮುಗ್ಧತೆಯನ್ನು ಆಪಾದಮಸ್ತಕ ವ್ಯಾಪಿಸಿರುವ ದೈವೀಗುಣ ಎನ್ನೋಣವೆ! ಸಮಗ್ರವಾದ ವ್ಯಕ್ತಿಗುಣ ಎನ್ನೋಣವೆ! ಏನೇ ಅನ್ನಿ; ರಾಮನಿರುವಲ್ಲಿ ಎಲ್ಲವೂ ಮಂಗಳವೇ ಅನ್ನುವುದು ಪ್ರಕೃತಿ ಸಾರುವ ಸತ್ಯ. ದೈವೀಗುಣವು ಸಾಧಿಸಿಬಿಡುವ ಪವಾಡವದು.
(‘ಜೈ ಕನ್ನಡಮ್ಮ’ ಪತ್ರಿಕೆಯ ದೀಪಾವಳಿ ವಿಶೇಷಾಂಕಕ್ಕಾಗಿ ಬರೆದುದು)