ಸಾಮರಸ್ಯ ಎನ್ನುವುದು ಭಾರತೀಯ ಸಮಾಜದ ಒಳನಾಡಿ. ಅವರ ಒಡಲಿನಲ್ಲಿ ಭೇದಭಾವಗಳ ಎಷ್ಟೇ ಕಹಿ ಭಾವವಿದ್ದರೂ ಸರಿಪಡಿಸಿಕೊಳ್ಳುವ, ಬಗೆಹರಿಸಿಕೊಳ್ಳುವ ‘ಎಲ್ಲರೊಂದೇ’ ಎನ್ನುವ ಭಾವವನ್ನು ಅಂತರ್ಗತಗೊಳಿಸಿಕೊಳ್ಳುವ ಶಕ್ತಿ ಅದಕ್ಕೆ ಸದಾ ಇದೆ.ಅನೇಕ ಬಾರಿ ಆ ಭಾವ ಆವರಿಸುವುದು ತಡವಾದರೂ ಸಾಮಾಜಿಕ ನ್ಯಾಯದ ವಿಚಾರ ಬಂದಾಗ ಭಾರತೀಯ ಸಮಾಜ ಇಂದಿಗೂ ತನ್ನ ತಪ್ಪನ್ನು ತಿದ್ದಿಕೊಳ್ಳುತ್ತಿರುವುದು ವಿಶೇಷ. ಇತ್ತೀಚಿನ ಘಟನೆಯೊಂದು ಇದಕ್ಕೆ ಜ್ವಲಂತ ಉದಾಹರಣೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಅಮಲೀಹಾಳ ಗ್ರಾಮದಲ್ಲಿ ದೇಗುಲದೊಳಗೆ ದಲಿತರ ಪ್ರವೇಶದಿಂದಾಗಿ ಉದ್ವಿಗ್ನ ವಾತಾವರಣಕ್ಕೆ ಸಾಕ್ಷಿಯಾಗಿ ಮೌನ ಮಡುಗಟ್ಟಿತ್ತು.ಪರಿಸ್ಥಿತಿಯಂತೂ ಬೂದಿ ಮುಚ್ಚಿದ ಕೆಂಡದಂತಿತ್ತು.ಅನೇಕ ಪೋಲೀಸರು ರಕ್ಷಣೆಗೂ ನಿಯೋಜನೆಗೊಂಡಿದ್ದರು. ಈ ವಿವಾದವಾದ ಶನಿವಾರದಿಂದ(ಮೇ 28) ಮೊನ್ನೆಯವರೆಗೂ ಆಂಜನೇಯ ದೇವಸ್ಥಾನಕ್ಕೆ ಬೀಗ ಜಡಿಯಲಾಗಿ, ಗರ್ಭಗುಡಿಯಲ್ಲಿ ಪೂಜೆ ನಡೆದಿರಲಿಲ್ಲ. ಸಾಮಾನ್ಯವಾಗಿ ಅಮವಾಸ್ಯೆಯ ದಿನದಲ್ಲಿ ನಡೆಯುವ ದೇಗುಲ ಸ್ವಚ್ಛತಾ ಕಾರ್ಯ ಹಾಗೂ ಪೂಜಾ ಕಾರ್ಯವೂ ಕೂಡ ನಡೆದಿರಲಿಲ್ಲ. ದಲಿತರು ಪ್ರವೇಶಿಸಿದ್ದರಿಂದ ಸವರ್ಣಿಯರು ದೇವಸ್ಥಾನಕ್ಕೆ ಹೋಗಲು ತಯಾರಿರಲಿಲ್ಲ.ಹಾಗು ಇದಕ್ಕೆ ಪರ್ಯಾಯವಾಗಿ ಪಟ್ಟಿ ಎತ್ತಿ (ಚಂದಾ ಸಂಗ್ರಹಿಸಿ) ಅಮಲೀಹಾಳದಲ್ಲೇ ಮತ್ತೊಂದು ದೇಗುಲ ನಿರ್ಮಾಣ ಮಾಡುವ ಬಗ್ಗೆಯೂ ಕೆಲವರು ಪ್ರಸ್ತಾಪ ಮಾಡಿರುವುದಾಗಿ ವದಂತಿ ಹರಿದಾಡುತ್ತಿತ್ತು.ಸೋಮವಾರ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ತೀರಿಹೋಗಿದ್ದರಿಂದ ಅಲ್ಲಿಗೆ ಆಗಮಿಸಿದ್ದ ಅಕ್ಕಪಕ್ಕದ ಕೆಲವರು ಹಾಗೂ ಸಂಬಂಧಿಕರು ದೇವಸ್ಥಾನದ ಆವರಣದೊಳಗೆ ವಿಶ್ರಾಂತಿ ಪಡೆಯುತ್ತಿದ್ದುದು ಮಾತ್ರವಷ್ಟೇ ಕಂಡುಬಂದಿತ್ತು. ಏತನ್ಮಧ್ಯೆ ಸೋಮವಾರದ ಹೊತ್ತಿಗೆ ಪೊಲೀಸ್ ಬಂದೋಬಸ್ತ್ ಕೊಂಚ ಸಡಿಲಿಸಲಾಗಿತ್ತಾದರೂ 144 ಸೆಕ್ಷನ್ ನಿಷೇಧಾಜ್ಞೆ ಮುಂದುವರೆದಿತ್ತು.
ಅನೇಕ ಶತಮಾನಗಳ ಹಿಂದಿನಿಂದಲೂ ಮತ್ತು ಈಗಿನ ಪೀಳಿಗೆಯವರೆಗೂ ದಲಿತರಿಗೆ ದೇವಸ್ಥಾನದ ಪೌಳಿಯವರೆಗೂ ಮಾತ್ರವೇ ಪ್ರವೇಶವಿತ್ತು.ಅಲ್ಲಿಂದಲೇ ದೇವರ ದರ್ಶನ ಪಡೆಯಬೇಕಿತ್ತು.ಆದರೆ ಗ್ರಾಮದಲ್ಲಿ ಇದನ್ನು ವಿರೋಧಿಸಿ ಕೆಲವು ದಲಿತ ಹೆಣ್ಣುಮಕ್ಕಳು ದೇವಸ್ಥಾನವನ್ನು ಪ್ರವೇಶಿಸಿದ್ದು ವಿವಾದಕ್ಕೆ ಗುರಿಯಾಗಿತ್ತು.
ಈ ಮಧ್ಯೆ ಸುರಪುರದ ಶಾಸಕ ರಾಜೂ ಗೌಡ ಅವರು ಮಧ್ಯೆ ಪ್ರವೇಶಿಸಿ ಶಾಂತಿ ಸಭೆ ನಡೆಸಿದರು. ಗ್ರಾಮಸ್ಥರೆಲ್ಲರನ್ನು ಸಮಾಧಾನದಿಂದ ಕೂರಿಸಿ ತಿಳಿಹೇಳಿ ಉಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ಕುರಿತಾದ ಬಗೆಗೆ ಅರಿವು ಮೂಡಿಸಿದ್ದಲ್ಲದೆ ಗ್ರಾಮದಲ್ಲಿ ದೇವಸ್ಥಾನವನ್ನು ಪ್ರವೇಶಿಸಿದ ದಲಿತರ ರಕ್ಷಣೆಯ ಜವಾಬ್ದಾರಿಯನ್ನು ತಾವೇ ಸ್ವತಃ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.ಅಲ್ಲದೆ ಘಟನೆ ನಡೆದ ಸ್ಥಳಕ್ಕೆ ಜಿಲ್ಲೆಯ ಎಸ್ಪಿ ಮತ್ತು ಜಿಲ್ಲಾಡಳಿತ ಕೂಡ ಶಾಸಕರೊಂದಿಗೆ ಆಗಮಿಸಿ ಸಾಂತ್ವನ ಹೇಳಿದ್ದು, ಸದ್ಯಕ್ಕೆ ಎಲ್ಲ ಘಟನೆಗಳೂ ಶಾಂತವಾಗಿದೆ.ಅಲ್ಲದೆ ಗ್ರಾಮದಲ್ಲಿ ಸೌಹಾರ್ದಯುತವಾಗಿ ಬಾಳುವ ಆಶಯವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಇದಾದ ನಂತರ ಇಡಿಯ ದಲಿತ ಸಮಾಜ ದೇವಾಲಯದ ಒಳಗೆ ಪ್ರವೇಶ ಮಾಡಿ, ಸಾಮೂಹಿಕವಾಗಿ ನಮಸ್ಕರಿಸಿ ಪುಜೆ ಸಲ್ಲಿಸಿದರು.
ಗ್ರಾಮದ ನಿವಾಸಿ ರಾಜೇಶ್ವರಿ ಅವರು ಮಾತನಾಡುತ್ತಾ ” ನಮ್ಮ ಮುತ್ತಾತನ ಕಾಲದಿಂದ ಬರೀ ಪೌಳಿಯವರೆಗು ಮಾತ್ರಹೋಗ್ತಿದ್ವಿ.ಪ್ರತಿ ಶನಿವಾರ ಗುಡಿಗೆ ಹೋಗುತ್ತಿದ್ದೇವೆ.ಇವತ್ತು ರಾಜೂಗೌಡರು ಎಲ್ಲರ ಎದುರು ಶಾಂತಿ ಸಭೆ ಮಾಡಿದ್ದಾರೆ. ಎಲ್ಲರಿಗೂ ಸಮಾನವಾದ ಹಕ್ಕು ಕೊಡಲೇಬೇಕು.ಜಾತಿ ಭೇದಗಳನ್ನು ಎಣಿಸಬಾರದು.ಈಗ ಯಾರಿಗೂ ಯಾವುದೇ ತೊಂದರೆಯಿಲ್ಲ ಎಲ್ಲವೂ ಸಹಜವಾಗಿದೆ. ಈ ನಡೆಯಿಂದ ಬಹಳ ಖುಷಿಯಾಗಿದೆ,ಧೈರ್ಯ ಬಂದಿದೆ”ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.
ಗ್ರಾಮದ ಮತ್ತೊಬ್ಬ ನಿವಾಸಿಗಳಾದ ಭೀಮರಾಯ ಅವರು ಮಾತನಾಡುತ್ತ ” ಶಾಸಕರ ಮಧ್ಯಸ್ತಿಕೆಯಿಂದ ಎಲ್ಲ ಸರಿ ಹೋಗುತ್ತಿದೆ.ಇಬ್ಬರಿಗೂ ಏನೂ ಆಗಲು ಬಿಡುವುದಿಲ್ಲ.ನೀವೆಲ್ಲರೂ ದೇವಸ್ಥಾನವನ್ನು ಪ್ರವೇಶಿಸಬಹುದು ಎನ್ನುವ ಆಶ್ವಾಸನೆ ನೀಡಿದ ಬಳಿಕ ನಾವೆಲ್ಲರೂ ಕೂಡ ಒಟ್ಟಾಗಿ ದೇವಸ್ಥಾನವನ್ನು ಪ್ರವೇಶ ಮಾಡಿದ್ದೇವೆ.ಭಕ್ತಿಯಿಂದ ನಮಸ್ಕಾರ ಮಾಡಿ ಬಂದಿದ್ದೇವೆ.ಈಗ ಭಯದ ವಾತಾವರಣ ಕಡಿಮೆಯಾಗಿದೆ.ಇನ್ನುಮುಂದೆ ಪ್ರತಿದಿನ, ಶನಿವಾರಗಳಲ್ಲಿ ಪುಜೆ ಪುನಸ್ಕಾರ ಎಲ್ಲರೂ ಕೂಡಿ ಮಾಡುತ್ತೇವೆ.ಈ ಒಂದು ಘಟನೆಯಿಂದ ಸಾಮಾಜಿಕ ನ್ಯಾಯ ಸಿಕ್ಕಿದೆ.ನಮಗೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾದರೂ ಇನ್ನೂ ಅದೇ ರೀತಿ ಬದುಕುತ್ತಿದ್ದೆವು.ಈಗ ನಾವೂ ಮನುಷ್ಯರಾಗಿ ಬದುಕು ನಡೆಸಲು ಆರಂಭಿಸಿದ್ದೇವೆ ಎನ್ನಿಸುತ್ತಿದೆ.”ಎಂದು ಹರ್ಷಿಸಿದ್ದಾರೆ.
ಒಟ್ಟಾರೆಯಾಗಿ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸಿನ ಸಮ ಸಮಾಜದ ನಿರ್ಮಾಣದ,ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಕನಸಿನ ಸಮಾನವಾದ ಹಿಂದೂ ಸಮಾಜದ ನಿರ್ಮಾಣದ ನಿಟ್ಟಿನಲ್ಲಿ ಈ ಘಟನೆ ಅತ್ಯಂತ ಮಹತ್ವ ಪೂರ್ಣವಾದ ಸಂದೇಶ ನೀಡುವಲ್ಲಿ ಯಶಸ್ವಿಯಾಗಿದೆ.