ಇಂದು ಪುಣ್ಯಸ್ಮರಣೆ
ಭಾರತೀಯ ಸೇನೆಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿರುವ ಹೆಸರು ಫೀಲ್ಡ್ ಮಾರ್ಷಲ್ ಕೊಂಡಂದೇರ ಮಾದಪ್ಪ ಕಾರ್ಯಪ್ಪ . ಕೆ ಎಂ ಕಾರ್ಯಪ್ಪ ಅವರು ಭಾರತೀಯ ಸೇನೆಯ ಮೊದಲ ದಂಡನಾಯಕರಾಗಿದ್ದರು. ಇವರು ಭಾರತೀಯ ಸೇನೆಗೆ ನೀಡಿದ ಕೊಡುಗೆ ಅಪಾರ. ವಸಾಹತುಶಾಹಿ ಆಡಳಿತದ ವಶದಲ್ಲಿದ್ದ ಭಾರತೀಯ ಸೇನೆಯನ್ನು ಸ್ವತಂತ್ರದ ನಂತರ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾರ್ಯಪ್ಪ ಅವರು ತಮ್ಮ ಇಡೀ ಜೀವನವನ್ನು ರಾಷ್ಟ್ರದ ಸೇವೆಗೆ ಮುಡಿಪಾಗಿಟ್ಟವರು. ಇಂದು ಅವರ ಪುಣ್ಯಸ್ಮರಣೆ.
ಪರಿಚಯ
ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ ಅವರು ಜನವರಿ 28, 1899ರಂದು ಕೊಡಗು ಜಿಲ್ಲೆಯ ಶನಿವಾರಸಂತೆಯಲ್ಲಿ ಜನಿಸಿದರು. ಇವರ ತಂದೆ ಮಾದಪ್ಪ ಹಾಗೂ ತಾಯಿ ಕಾವೇರಿ. ಕಾರ್ಯಪ್ಪ ಅವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಮಡಿಕೇರಿಯ ಸೆಂಟ್ರಲ್ ಹೈಸ್ಕೂಲ್‌ನಲ್ಲಿ ಮುಗಿಸಿದರು. ನಂತರ ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡಿದರು. ಬಾಲ್ಯದಿಂದಲೂ ಸೇನೆಗೆ ಸೇರಬೇಕೆಂಬ ಆಸಕ್ತಿ ಹೊಂದಿದ್ದರು. ಇವರು ಸೇನೆಗೆ ಅರ್ಜಿ ಸಲ್ಲಿಸಿದರು. ನಂತರ ಕಾರ್ಯಪ್ಪ ಅವರು ಇಂದೋರ್‌ನ ಡಾಲಿ ಕೆಡೆಟ್ ಕಾಲೇಜಿಗೆ ತರಬೇತಿಗೆ ಆಯ್ಕೆಯಾದರು. ಅಲ್ಲಿ ಅವರು ತರಬೇತಿಯಲ್ಲಿ ಅತ್ಯುನ್ನತ ಸಾಧನೆ ಮಾಡಿ ಏಳನೇ ಸ್ಥಾನ ಪಡೆದರು.
ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ (1914-1918) ಸೇನಾ ತರಬೇತಿಯನ್ನು ಪಡೆದ ಕಾರ್ಯಪ್ಪನವರು 1919 ರಲ್ಲಿ ಭಾರತೀಯ ನಾಯಕರ ಇಚ್ಚೆಯ ಮೇರೆಗೆ ವಿಶ್ವಯುದ್ಧದಲ್ಲಿ ಪಾಲ್ಗೊಂಡ ಭಾರತೀಯ ಸೇನೆಯ ಭಾಗವಾಗಿದ್ದರು. ಇದಕ್ಕಾಗಿ ಅವರನ್ನು ಇಂದೋರ್ ಗೆ ತರಬೇತಿಗಾಗಿ ಕಳುಹಿಸಲಾಯಿತು. ತಮ್ಮ ತರಬೇತಿಯ ನಂತರ ಬಾಂಬೆಯ ಕರ್ನಾಟಕ ಇನ್ ಫ್ಯಾಂಟ್ರಿಯಲ್ಲಿ ಜವಾಬ್ದಾರಿ ನೀಡಲಾಯಿತು.
ಕಾರ್ಯಪ್ಪ ಅವರು 1919ರಲ್ಲಿ ಕಿರಿಯ ಅಧಿಕಾರಿಯಾಗಿ ಭಾರತೀಯ ಸೇನೆಗೆ ಪಾದರ್ಪಣೆ ಮಾಡಿದರು. ನಂತರ ಅವರು 1923ರಲ್ಲಿ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸಿದರು. 1927ರಲ್ಲಿ ಕ್ಯಾಪ್ಟನ್ ಹುದ್ದೆ ಅಲಂಕರಿಸಿದ್ದರು. 1938ರಲ್ಲಿ ಮೇಜರ್ ಆಗಿ, 1942ರಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ, 1946ರಲ್ಲಿ ಬ್ರಿಗೇಡಿಯರ್ ಆಗಿ ಕಾರ್ಯನಿರ್ವಹಿಸಿದರು. ಭಾರತದ ಸ್ವಾತಂತ್ರ್ಯದ ನಂತರ ಕಾರ್ಯಪ್ಪ ಅವರನ್ನು ಮೇಜರ್ ಜನರಲ್ ಹುದ್ದೆಯೊಂದಿಗೆ ಡೆಪ್ಯೂಟಿ ಚೀಫ್ ಆಫ್ ಜನರಲ್ ಸ್ಟಾಫ್ ಆಗಿ ನೇಮಿಸಲಾಯಿತು. ಪಾಕಿಸ್ತಾನ ಯುದ್ಧದ ಸಮಯದಲ್ಲಿ ಈಸ್ಟರ್ನ್ ಆರ್ಮಿ ಕಮಾಂಡರ್ ಮತ್ತು ವೆಸ್ಟರ್ನ್ ಕಮಾಂಡ್ ಜನರಲ್ ಕಮಾಂಡಿಂಗ್ ಇನ್ ಚೀಫ್ ಆಗಿ ನೇಮಕಗೊಂಡರು. 1947ರಲ್ಲಿ ಈಸ್ಟರ್ನ್ ಆರ್ಮಿಯಲ್ಲಿ ನೇತೃತ್ವ ವಹಿಸಿಕೊಂಡು, ಪಂಜಾಬ್ ನಲ್ಲಿ ಸೇನಾ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದ್ದರು.
ಕಾರ್ಯಪ್ಪ ಅವರು 29 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ 1953 ರಲ್ಲಿ ನಿವೃತ್ತಿ ಹೊಂದಿದ್ದರು. ನಂತರ ಅವರು 1956 ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ಭಾರತೀಯ ರಾಯಭಾರಿಯಾಗಿ ಸೇವೆ ಸಲ್ಲಿಸಿದರು.
ಕಾರ್ಯಪ್ಪನವರು ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿಗೆ ಶ್ರಮಸಿದವರು. ಜನರಲ್ ತಿಮ್ಮಯ್ಯನವರೊಡನೆ ಸೇರಿ 1964ರಲ್ಲಿ ‘ಭಾರತೀಯ ಭೂತಪೂರ್ವ ಸೈನಿಕ ಸಂಘ’ವನ್ನು (Indian Ex-services League) ಸ್ಥಾಪಿಸಿದರು. “ರಕ್ಷಣಾಬಲಗಳ ಸ್ಥೈರ್ಯ ಉಳಿದು ಬರಬೇಕಾದರೆ, ನಿವೃತ್ತ ಯೋಧರ ಸ್ಥೈರ್ಯವನ್ನು ಮರೆಯಬೇಡಿರಿ,” ಎಂಬ ಕಾರ್ಯಪ್ಪನವರ ಅರ್ಥಗರ್ಭಿತ ಮಾತು ಪ್ರೇರಣೀಯ.
‘ದೇಶಕ್ಕಾಗಿ ತಾನು ಸತ್ತರೆ, ತನ್ನ ಸಂಸಾರವನ್ನು ದೇಶವು ಚೆನ್ನಾಗಿ ನೋಡಿಕೊಳ್ಳುತ್ತದೆ. ತಾನು ನಿವೃತ್ತನಾದ ನಂತರವೂ ಸರ್ಕಾರವು ತನ್ನನ್ನು ಕಡೆಗಣಿಸುವದಿಲ್ಲ’ ಎಂಬ ಭರವಸೆ ಪ್ರತಿ ಸೈನಿಕನಿಗೆ ಬರಬೇಕು. ಇದಕ್ಕೆ ಸಹಕಾರಿಯಾಗುವ ಯೋಜನೆಯನ್ನು ನಮ್ಮ ದೇಶವು ಅನುಸರಿಸುವಂತೆ ಕಾರ್ಯಪ್ಪನವರು ಸಲಹೆ ನೀಡಿದ್ದರು. ತಮ್ಮ ಸ್ನೇಹಿತರ ನೆರವಿನಿಂದ ಧನಸಂಗ್ರಹಿಸಿ ಪಾಟಿಯಾಲದ ಮಹಾರಾಜರು ದಾನವಿತ್ತ ಅರಮನೆಯನ್ನು ವೃದ್ಧ ಯೋಧರ ನಿವಾಸವನ್ನಾಗಿ ಪರಿವರ್ತಿಸಿದರು.
ಪ್ರಶಸ್ತಿ
ಕಾರ್ಯಪ್ಪ ಅವರಿಗೆ ಬ್ರಿಟಿಷ್ ಸರ್ಕಾರ ‘ಆರ್ಡರ್ ಆಫ್ ದಿ ಲೀಜನ್ ಆಫ್ ಮೆರಿಟ್ ನ ಮುಖ್ಯ ಕಮಾಂಡರ್’ ಪ್ರಶಸ್ತಿ ನೀಡಲಾಯಿತು. ಕಾರ್ಯಪ್ಪ ಅವರನ್ನು 1986ರಲ್ಲಿ ಭಾರತ ಸರ್ಕಾರ ಫೀಲ್ಡ್ ಮಾರ್ಷಲ್ ಹುದ್ದೆಗೆ ನೇಮಿಸಿ ಗೌರವಿಸಿತು. ಕೆ. ಎಂ ಕಾರ್ಯಪ್ಪ ಅವರಿಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಹೃದಯದ ಸಮಸ್ಯೆಯಿಂದ ಮೇ 15, 1993 ರಂದು ತಮ್ಮ 94ನೇ ವಯಸ್ಸಿನಲ್ಲಿ ಬೆಂಗಳೂರು ಕಮಾಂಡ್ ಆಸ್ಪತ್ರೆಯಲ್ಲಿ ನಿಧನರಾದರು.