ದೀನದಯಾಳ್ ಉಪಾಧ್ಯಾಯ 108 ನೇ ಜಯಂತಿ ನಿಮಿತ್ತ ಸಂಸ್ಮರಣೆ ಕಾರ್ಯಕ್ರಮ
ಬೆಂಗಳೂರು: ದೀನದಯಾಳ ಉಪಾಧ್ಯಾಯರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದವರು. ರಾಷ್ಟ್ರಕಾರ್ಯವೇ ಜೀವನಕಾರ್ಯ ಎಂದು ಸ್ವೀಕರಿಸಿ ಜೀವನಪೂರ್ತಿ ವ್ರತದಂತೆ ಪಾಲಿಸಿದವರು. ಒಬ್ಬ ಪ್ರಚಾರಕರಾಗಿ, ಸ್ವಯಂಸೇವಕನಾಗಿ, ರಾಜನೀತಿ ಕ್ಷೇತ್ರದ ಕಾರ್ಯಕರ್ತರಾಗಿ ಉಜ್ವಲ ಮೇಲ್ಪಂಕ್ತಿಯನ್ನು ಮೆರೆದವರು. ಭಾರತಕ್ಕೊಂದು ಹೊಸ ದರ್ಶನ ಶಾಸ್ತ್ರವನ್ನು ಕೊಟ್ಟವರು. ಯುವಪೀಳಿಗೆಗೆ ಅವರ ಪರಿಚಯವಾಗಬೇಕು, ಅವರ ವಿಶಿಷ್ಟ ವಾರಸಿಕೆಯನ್ನು ಮುಂದುವರೆಸುವುದೇ ಸಂಸ್ಮರಣಾ ಕಾರ್ಯಕ್ರಮದ ಅಂತರಾರ್ಥ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಪ್ರಚಾರಕ್ ಸುಧೀರ್ ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಗಳೂರು ಮಹಾನಗರದ ವತಿಯಿಂದ ಜೆಪಿನಗರದ ಡೆಂಟಲ್ ಕಾಲೇಜಿನಲ್ಲಿ ಆಯೋಜಿಸಲಾದ ದೀನದಯಾಳ್ ಉಪಾಧ್ಯಾಯ ಅವರ 108ನೇ ಜಯಂತಿಯ ನಿಮಿತ್ತ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೀನದಯಾಳರು ಎರಡು ವರ್ಷದ ಮಗುವಾಗಿದ್ದಾಗ ತಂದೆಯನ್ನು, 7 ವರ್ಷದ ಹುಡುಗನಾಗಿದ್ದಾಗ ಅಮ್ಮ ಮತ್ತು ತಮ್ಮನನ್ನು ಕಳೆದುಕೊಂಡು ತಮ್ಮ ಜೀವನದಲ್ಲಿ ಅನೇಕ ವಜ್ರಾಘಾತವನ್ನು ಎದುರಿಸಬೇಕಾಯಿತು. 1938ರಲ್ಲಿ ಭಾವೂರಾವ್ ದೇವರಸ್ ಅವರ ಮೂಲಕ ಸಂಘದ ಸಂಪರ್ಕಕ್ಕೆ ಬಂದರು. ಬದುಕಿದ 52 ವರ್ಷಗಳಲ್ಲಿ 20 ವರ್ಷ ಪ್ರಚಾರಕರಾಗಿ ಬದುಕಿದರು ಎಂದರು.
ತನ್ನ ಪ್ರಚಾರಕ ಅವಧಿಯ ಆರಂಭಿಕ 9 ವರ್ಷ ಸಂಘದ ಪ್ರಚಾರಕರಾಗಿದ್ದರು. ನಂತರದ 17 ವರ್ಷ ಭಾರತೀಯ ಜನಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ಶ್ರಮಿಸಿದರು. ಆದರೆ ಎಂದೂ ಸಹ ಅವರು ಶಾಸಕ ಅಥವಾ ಸಂಸದ ಆಗಬೇಕೆಂದು ಬಯಸಿರಲಿಲ್ಲ. ಒಮ್ಮೆ ಜನಸಂಘದ ಒತ್ತಾಯಕ್ಕೆ ಮಣಿದು ನಿಲ್ಲಲೇಬೇಕಾದ ಅನಿವಾರ್ಯತೆ ಬಂದಾಗ ರಾಜಕೀಯಕ್ಕಾಗಿ ಎಂದಿಗೂ ಸಿದ್ಧಾಂತದೊಂದಿಗೆ ರಾಜಿಯಾಗಲಿಲ್ಲ. ಸಿದ್ಧಾಂತ ಮರೆತರೆ ಜನಸಂಘವೂ ಮತ್ತೊಂದು ಕಾಂಗ್ರೇಸ್ ಆಗುತ್ತದೆ ಎಂದಿದ್ದರು.
ನಮ್ಮ ಅನೇಕ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು ಸ್ವಾತಂತ್ರ್ಯದ ನಂತರ ರಾಷ್ಟ್ರೀಯ ಪುನರುಜ್ಜೀವನವಾಗುತ್ತದೆ ಎಂಬ ಕನಸನ್ನು ಹೊಂದಿದ್ದರು. ಆದರೆ ನಮ್ಮ ನಾಯಕರು ಅದರ ಗೊಡವೆಗೆ ಹೋಗಲಿಲ್ಲ. ಜಗತ್ತು ಬಂಡವಾಳವಾದ, ಸಮಾಜವಾದದೊಂದಿಗೆ ಮುನ್ನಡೆಯುತ್ತಿದ್ದಾಗ ಭಾರತದ ನಾಯಕತ್ವ ತೊಳಲಾಟದಲ್ಲಿತ್ತು. ಭಾರತ ರಾಜಕೀಯವಾಗಿ ಯಾವ ನಿಲುವನ್ನು ಹೊಂದಬೇಕು ಎನ್ನುವುದಕ್ಕೆ ಸ್ಪಷ್ಟತೆ ಇಲ್ಲದೆ ಗೊಂದಲದಿಂದ ಶೂನ್ಯ ಆವರಿಸಿದಾಗ ದೀನದಯಾಳರು ಏಕಾತ್ಮ ಮಾನವ ದರ್ಶನವೆಂಬ ಪರಿಪೂರ್ಣ ಸಿದ್ಧಾಂತವನ್ನು ದೇಶದ ಮುಂದಿರಿಸಿದರು ಎಂದು ನುಡಿದರು.
ಹಿಂದೂ ಸಂಸ್ಕೃತಿ ಏಕಾತ್ಮವಾದದ್ದು. ಆದರೆ ಏಕಾತ್ಮ ಮಾನವ ಪದದ ಬಳಕೆ ಏಕೆ ಎನ್ನುವ ಪ್ರಶ್ನೆ ಮೂಡಿದಾಗ ಅನೇಕ ಅಪೂರ್ಣ ವಾದಗಳು ಮನುಷ್ಯನನ್ನು ಆರ್ಥಿಕ ಜೀವಿ, ಸಾಮಾಜಿಕ ಜೀವಿ, ರಾಜಕೀಯ ಜೀವಿ ಎಂದು ವಿಂಗಡಿಸಿ ಪ್ರತ್ಯೇಕವಾಗಿ ನೋಡುತ್ತಿತ್ತು. ಆದರೆ ನಾನಾ ಪಾತ್ರಗಳನ್ನು ನಿಭಾಯಿಸುವ ಒಬ್ಬ ವ್ಯಕ್ತಿಯನ್ನು ಆತ ನಿಭಾಯಿಸಿದ ಒಂದು ಪಾತ್ರದ ಮೂಲಕ ಅಳೆಯುವುದು ಅಪೂರ್ಣವಾಗುತ್ತದೆ. ಹಾಗಾಗಿ ಮನುಷ್ಯನನ್ನು ನೋಡುವ ವಿಧಾನವನ್ನೇ ಅನೇಕ ವಾದಗಳು ಮೊದಲು ಅರ್ಥೈಸಿಕೊಳ್ಳಬೇಕು. ದೀನದಯಾಳರು ಮನುಷ್ಯನನ್ನು ಸಮಗ್ರವಾಗಿ ಕಾಣಬೇಕು ಎನ್ನುವುದನ್ನು ನಮ್ಮ ಸಂಸ್ಕೃತಿಯ ಆಧಾರಿತವಾಗಿಯೇ ಹೇಳಿದರು. ಬಿಡಿ ಬಿಡಿಯಾಗಿ ನೋಡುವುದು ಪಾಶ್ಚಾತ್ಯ ಚಿಂತನೆ, ಇಡೀಯಾಗಿ ನೋಡುವುದು ಭಾರತೀಯತೆಯ ವೈಶಿಷ್ಟ್ಯ ಎಂದರು.
ದೀನದಯಾಳರು ಅನನ್ಯ ಆರಾಧಕ, ತಾಯಿ ನೆಲದ ಉಪಾಸಕ, ಪರಿಪೂರ್ಣ ಸ್ವಯಂಸೇವಕ, ಕುಶಲ ಸಂಘಟಕ, ರಾಷ್ಟ್ರಕ್ಕೆ ರಾಜಕೀಯ ದರ್ಶನವನ್ನು ಕೊಟ್ಟ ದಾರ್ಶನಿಕ. ಅವರ ಬದುಕು ನಮಗೆಲ್ಲಾ ಮಾರ್ಗದರ್ಶಕ, ಪ್ರೇರಕ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬೆಂಗಳೂರು ಮಹಾನಗರ ಸಂಘಚಾಲಕ ಮಿಲಿಂದ್ ಗೋಖಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜ್ಯೇಷ್ಠ ಕಾರ್ಯಕರ್ತರಾದ ವೈ.ಕೆ.ರಾಘವೇಂದ್ರ ರಾವ್, ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ವಿ. ನಾಗರಾಜ್, ಪ್ರಾಂತ ಪ್ರಚಾರಕ್ ಗುರುಪ್ರಸಾದ್ ಸೇರಿದಂತೆ ಅನೇಕ ಗಣ್ಯರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.