ನೇರ ನೋಟ: ದು.ಗು.ಲಕ್ಷ್ಮಣ

WomenDiggingIndia

ಫೆ.8 ರಂದು ನಾಡಿನಾದ್ಯಂತ ಮಹಿಳಾ ದಿನಾಚರಣೆ ಸಡಗರ ಸಂಭ್ರಮದಿಂದ ಜರುಗಿತು. ಮಾಧ್ಯಮಗಳು ವಿವಿಧ ರಂಗಗಳಲ್ಲಿರುವ ಪ್ರತಿಷ್ಠಿತ ಮಹಿಳೆಯರ ಪರಿಚಯವನ್ನು ಭಾವಚಿತ್ರ ಸಹಿತ ಪ್ರಕಟಿಸಿದವು. ಕಾರ್ಪೊರೇಟ್ ರಂಗದ ಅಖಿಲಾ ಶ್ರೀನಿವಾಸನ್, ಚಂದಾ ಕೊಚ್ಚಾರ್, ಏಕ್ತಾ ಕಫೂರ್, ರಿತು ನಂದಾ, ಶಹನಾಜ್ ಹುಸೇನ್, ಶಿಖಾ ಶರ್ಮಾ ಮೊದಲಾದವರಲ್ಲದೆ ಚಿತ್ರರಂಗದ ದಿಗ್ಗಜ ಮಹಿಳೆಯರು ಹಾಗೂ ರಾಜಕೀಯ ರಂಗದ ಮುಂಚೂಣಿ ಮಹಿಳಾ ಮಣಿಗಳ ಪರಿಚಯ ಕೂಡ ಪ್ರಕಟವಾಯಿತು. ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಪ್ರಶಸ್ತಿ ಪ್ರದಾನವೂ ನಡೆಯಿತು. ಈ ನಡುವೆ ಮುಖ್ಯಮಂತ್ರಿ ಶೆಟ್ಟರ್ ಅವರ ಪತ್ನಿ ಶಿಲ್ಪಾ ಶೆಟ್ಟರ್ ಮಹಿಳಾ ದಿನಾಚರಣೆಯಂದೇ ‘ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಮಹಿಳೆಯರ ಮೇಲೆ ಎಲಲ್ಲೆಡೆ ದೌರ್ಜನ್ಯ ನಡೆಯುತ್ತಿದೆ. ಮಹಿಳೆಯರು ಒಂಟಿಯಾಗಿ ಓಡಾಡುವುದಕ್ಕೇ ಭಯಪಡುವ ಸ್ಥಿತಿ ಇದೆ. ಅತ್ಯಾಚಾರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಠಿಣ ಕಾನೂನು ಜಾರಿಗೆ ತರುವ ಅಗತ್ಯವಿದೆ…’ ಎಂದು ಸಮಾರಂಭವೊಂದರಲ್ಲಿ ಬಿಚ್ಚು ಮನಸ್ಸಿನ ಮಾತನಾಡಿದ ಪ್ರಸಂಗವೂ ನಡೆಯಿತು. ತನ್ನ ಇಂತಹ ಮಾತುಗಳು ತನ್ನ ಪತಿ ಶೆಟ್ಟರ್ ಅವರ ಆಡಳಿತಕ್ಕೆ ಹಿಡಿದ ಕನ್ನಡಿಯಾಗಲಿದೆ ಎಂಬ ಸೂಕ್ಷ್ಮತೆಯೂ ಪಾಪ ಶಿಲ್ಪಾ ಅವರಿಗೆ ಆ ಸಡಗರದ ಸಮಾರಂಭದಲ್ಲಿ ಮರೆತುಹೋಗಿರಬಹುದು! ಶಿಲ್ಪಾ ಅವರು ಹೇಳಿದ್ದರಲ್ಲಿ ಮಾತ್ರ ಯಾವ ಉತ್ಪ್ರೇಕ್ಷೆಯೂ ಇರಲಿಲ್ಲ. ರಾಜ್ಯದಲ್ಲಿ ದಿನೇ ದಿನೇ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇದೆ. ೨೦೧೨-೧೩ ರಲ್ಲಿ ದಾಖಲಾದ ಒಟ್ಟು ಮಹಿಳಾ ದೌರ್ಜನ್ಯ ಪ್ರಕರಣಗಳ ಸಂಖ್ಯೆ ೧೨, ೨೩೭. ಈ ಪೈಕಿ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಪ್ರಕರಣಗಳ ಸಂಖ್ಯೆಯೇ ೪೦೩೩. ಕಳೆದ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮಹಿಳಾ ದೌರ್ಜನ್ಯಗಳ ಪ್ರಕರಣಗಳ ಸಂಖ್ಯೆಯಲ್ಲಿ ಈಗ ತೀವ್ರ ಹೆಚ್ಚಳವಾಗಿದೆ. ೨೦೧೧ರಲ್ಲಿ ದಾಖಲಾದ ಮಹಿಳಾ ದೌರ್ಜನ್ಯ ಪ್ರಕರಣಗಳು ೯೫೯೭.

ಈ ಹಿಂದೆಯೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದವು. ಆದರೆ ಬೆಳಕಿಗೆ ಬರುತ್ತಿರಲಿಲ್ಲ. ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿರುದ್ಧ ನಡೆದ ಜನಾಂದೋಲನದ ಪರಿಣಾಮವಾಗಿ ಇದೀಗ ರಾಜ್ಯದಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರಲ್ಲಿ ಆತ್ಮಸ್ಥೈರ್ಯ ಮೂಡುವಂತಾಗಿದೆ. ಮೊದಲು ದೌರ್ಜನ್ಯ ನಡೆದಿದ್ದರೂ ಪೊಲೀಸರಿಗೆ ಅಥವಾ ಮಹಿಳಾ ಆಯೋಗಕ್ಕೆ ದೂರು ಕೊಡಲು ಹಿಂದೇಟು ಹೊಡೆಯುತ್ತಿದ್ದ ಮಹಿಳೆಯರು ಇದೀಗ ಧೈರ್ಯವಾಗಿ ದೂರು ಕೊಡಲು ಮುಂದಾಗಿರುವುದು ಒಂದು ಉತ್ತಮ ಬೆಳವಣಿಗೆ.

ದಿನಾಚರಣೆ ನಡೆದರೆ ಸಾಕೆ?

ಮಹಿಳಾ ದಿನಾಚರಣೆಯೇನೋ ಸಡಗರ ಸಂಭ್ರಮದಿಂದ ಮುಗಿದಿದೆ. ಇದು ಪ್ರತಿವರ್ಷವೂ ನಡೆಯುವ ರೀತಿ ಹೀಗೆಯೇ. ಅದೊಂದು ವಾರ್ಷಿಕ ವಿಧಿಯಂತೆ ನಡೆದು ಅನಂತರ ಮುಂದಿನ ವರ್ಷದವರೆಗೂ ಅದನ್ನು ಮರೆತೇಬಿಡುತ್ತಾರೆ. ಕನ್ನಡ ರಾಜ್ಯೋತ್ಸವ ಆಚರಿಸಿದಂತೇ ಇದು. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಶಾಶ್ವತವಾಗಿ ತಡೆಗಟ್ಟುವ ಬಗ್ಗೆಯಾಗಲೀ, ದೌರ್ಜನ್ಯ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣಕ್ರಮ ಜರುಗಿಸಬೇಕೆಂಬ ಹಕ್ಕೊತ್ತಾಯದ ಗಟ್ಟಿ ನಿರ್ಧಾರವಾಗಲೀ ಈ ಸಂದರ್ಭದಲ್ಲಿ ಕೇಳಿ ಬರುವುದೇ ಇಲ್ಲ. ಅಕಸ್ಮಾತ್ ಕೇಳಿ ಬಂದರೂ ಅದು ಕೇವಲ ವೇದಿಕೆಯ ಮೇಲಿನ ಘೋಷಣೆಗಷ್ಟೇ ಸೀಮಿತವಾಗಿರುತ್ತದೆ. ಇಷ್ಟೇ ಆದರೆ ಮಹಿಳಾ ದಿನಾಚರಣೆಗೆ ಏನರ್ಥ?

ನಿಜವಾಗಿ ಮೊನ್ನೆ ನಡೆದ ಮಹಿಳಾ ದಿನಾಚರಣೆಯಂದು ಇಬ್ಬರು ಮಹಿಳೆಯರನ್ನು ಎಲ್ಲರೂ ನೆನಪಿಸಿಕೊಳ್ಳಬೇಕಾಗಿತ್ತು. ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿ ಕಳೆದ ಐದು ವರ್ಷಗಳಿಂದ ಬಂಧನದಲ್ಲಿರುವ, ಜೈಲಿನಲ್ಲಿ ಸಾಕಷ್ಟು ಚಿತ್ರಹಿಂಸೆಗೀಡಾಗಿರುವ, ನ್ಯಾಯಾಲಯಕ್ಕೆ ಆಕೆಯ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳನ್ನು ಸಾಬೀತುಪಡಿಸಲು ಸಾಧ್ಯವಾಗದಿರುವ ಸಾಧ್ವಿ ಪ್ರಜ್ಞಾ ಸಿಂಗ್ ಎಂಬ ಮಹಿಳೆಯನ್ನು ಯಾರೂ ನೆನಪುಮಾಡಿಕೊಳ್ಳಲಿಲ್ಲ. ಅದೇ ರೀತಿ ಮಣಿಪುರದಲ್ಲಿ ಸೇನೆಗೆ ನೀಡಿರುವ ವಿಶೇಷ ಅಧಿಕಾರವನ್ನು ಹಿಂತೆಗೆದುಕೊಳ್ಳಬೇಕೆಂದು ಕಳೆದ ಹನ್ನೆರಡು ವರ್ಷಗಳಿಂದ ತೊಟ್ಟು ನೀರನ್ನೂ ಸೇವಿಸದೆ ಉಪವಾಸ ಕುಳಿತಿರುವ ಇರೋಂ ಚಾನು ಶರ್ಮಿಳಾ ಎಂಬ ನತದೃಷ್ಟ ಮಹಿಳೆಯನ್ನು ನೆನಪು ಮಾಡಿಕೊಂಡವರು ಕೂಡ ತೀರಾ ವಿರಳ. ಸಾಧ್ವಿ ಪ್ರಜ್ಞಾ ಸಿಂಗ್ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯೆಂದು ಬಂಧನದಲ್ಲಿಟ್ಟರು. ಆಕೆಯಿಂದ ತಪ್ಪೊಪ್ಪಿಗೆ ಹೇಳಿಕೆಯನ್ನು ಪಡೆಯಲು ವಿಶೇಷ ತನಿಖಾ ತಂಡ ಇನ್ನಿಲ್ಲದ ಪ್ರಯತ್ನ ನಡೆಸಿತು. ಸಾಧ್ವಿ ಮಾತ್ರ  ಜಗ್ಗಲಿಲ್ಲ. ಆಕೆಗೆ ನಾನಾ ಬಗೆಯ ದೈಹಿಕ, ಶಾರೀರಿಕ ಚಿತ್ರಹಿಂಸೆಯನ್ನೂ ನೀಡಲಾಯಿತು. ಅನೇಕ ರಾತ್ರಿಗಳ ಕಾಲ ಸಾಧ್ವಿಗೆ ನಿದ್ದೆಯನ್ನು ಮಾಡಲೂ ಬಿಡಲಿಲ್ಲ. ಸರಿಯಾದ ಆಹಾರವನ್ನೂ ಕೊಡಲಿಲ್ಲ. ಒಬ್ಬ ಆರೋಪಿಗಿರಬಹುದಾದ ಕಾನೂನಿನ ಯಾವ ಸೌಲಭ್ಯವನ್ನೂ ಆಕೆಗೆ ಒದಗಿಸಲಿಲ್ಲ. ಪರಿಣಾಮವಾಗಿ ಸಾಧ್ವಿ ಈಗ ಜೀವಚ್ಛವವಾಗಿದ್ದಾಳೆ. ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಆಗಲೋ, ಈಗಲೋ ಎಂಬ ಪರಿಸ್ಥಿತಿ. ಸಾಧ್ವಿ ತಪ್ಪಿತಸ್ಥೆ ಎನ್ನಲು ಆಕೆಯ ವಿರುದ್ಧ ಯಾವಸಾಕ್ಷ್ಯಾಧಾರಗಳೂ ತನಿಖಾ ತಂಡಕ್ಕೆ ದೊರೆತಿಲ್ಲ. ಹೀಗಿದ್ದರೂ  ನ್ಯಾಯಾಲಯ ಆಕೆಯನ್ನು ಕೊನೇಪಕ್ಷ ಜಾಮೀನಿನ ಮೇಲೆ ಬಿಡುವುದಕ್ಕೂ ತಯಾರಿಲ್ಲ. ಈ ಬಗ್ಗೆ ಸ್ವತಃ ಸಾಧ್ವಿ ಪರ ವಕಾಲತ್ತು ವಹಿಸಿರುವ ಜಗದೀಶ್ ರಾಣಾ ಎಂಬ ವಕೀಲರು ಕೂಡ ಸಾಧ್ವಿ ಬಿಡುಗಡೆ ಕುರಿತು ಏನನ್ನೂ ಹೇಳುತ್ತಿಲ್ಲ. ಅವರನ್ನು ನೇರವಾಗಿ ಸಂಪರ್ಕಿಸಿ ಕೇಳಿದರೆ ‘iಣ’s ಟeಜಿಣ ಣo ಣhe ಛಿouಡಿಣ’ ಎಂದಷ್ಟೇ ಹೇಳಿ ಪಕ್ಕಾ ವಕೀಲರ ರೀತಿಯಲ್ಲಿ ನುಣುಚಿಕೊಳ್ಳುತ್ತಾರೆ. ಸಾಧ್ವಿಯನ್ನು ವಿನಾಕಾರಣ ಹೀಗೆ ವರ್ಷಗಟ್ಟಲೆ ಬಂಧನದಲ್ಲಿಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ನನ್ನ ಪ್ರಶ್ನೆಗೆ ರಾಣಾ ಉತ್ತರಿಸದೇ ಮೌನ ತಳೆದರು. ಯಾಕೆ ಹೀಗೆ? ವಕೀಲರಾಗಿ ಅವರಿಗೇಕೆ ಹಿಂಜರಿಕೆ? ಸಾಕ್ಷ್ಯಾಧಾರಗಳೇ ಇಲ್ಲವೆಂದ ಮೇಲೆ ಆರೋಪಿಯೊಬ್ಬರನ್ನು ಬಿಡುಗಡೆ ಮಾಡುವ ಹಕ್ಕು ಕಾನೂನಿಗೆ ಇz ಇದೆಯಲ್ಲ. ಇದನ್ನೇಕೆ ಅವರು ಸಮರ್ಥಿಸಿಕೊಳ್ಳುತ್ತಿಲ್ಲ ಎನ್ನುವುದು ನನಗಂತೂ ಅರ್ಥವಾಗುತ್ತಿಲ್ಲ.

ಸಾಧ್ವಿಯನ್ನು ಅನ್ಯಾಯವಾಗಿ ಬಂಧನಕ್ಕೊಳಪಡಿಸಲಾಗಿದೆ ಎಂಬ ವಿಚಾರ ಈಗಾಗಲೇ ಇಡೀ ದೇಶಕ್ಕೆ ತಿಳಿದಿದೆ. ಹೀಗಿರುವಾಗ ಮಹಿಳೆಯರಿಗೆ ನ್ಯಾಯ ಒದಗಿಸುವ ಸಂಘಟನೆಗಳು ಆಕೆಯ ಬಿಡುಗಡೆಗಾಗಿ ಆಗ್ರಹಿಸಬೇಕಾಗಿತ್ತು. ದೊಡ್ಡ ಆಂದೋಳನವನ್ನೇ ಹಮ್ಮಿಕೊಳ್ಳಬೇಕಾಗಿತ್ತು. ಬೇರೆಯವರು ಹಾಗಿರಲಿ, ಕನಿಷ್ಠ ಹಿಂದು ಸಂಘಟನೆಗಳಾದರೂ ಸಾಧ್ವಿ ಬಿಡುಗಡೆಗಾಗಿ ಹೋರಾಟನಡೆಸಬೇಕಿತ್ತು. ಆದರೆ ಅದಾವುದೂ ಇದುವರೆಗೆ ನಡೆದಿಲ್ಲ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಈ ಬಗ್ಗೆ ಇದುವರೆಗೂ ತುಟಿಬಿಚ್ಚಿಲ್ಲ. ಸಾಧ್ವಿ ಬಗ್ಗೆ ಮಾತನಾಡಿದರೆ ಎಲ್ಲಿ ವಿವಾದ ಸುತ್ತಿಕೊಳ್ಳುವುದೋ ಎಂಬ ಭಯ ಅವರನ್ನು ಕಾಡುತ್ತಿದ್ದಿರಬಹುದು. ನಿಜವಾಗಿ ಬಿಜೆಪಿ ಬಹುಸಂಖ್ಯಾತ ಹಿಂದುಗಳ ಪರವಾದ ಪಕ್ಷ ಎನ್ನುವುದಾದಲ್ಲಿ ಸಾಧ್ವಿ ಬಿಡುಗಡೆಗಾಗಿ ದೇಶದಾದ್ಯಂತ ತೀವ್ರ ಹೋರಾಟ ಹಮ್ಮಿಕೊಳ್ಳಬೇಕಾಗಿತ್ತು.  ಚುನಾವಣೆಯ ಸಂದರ್ಭದಲ್ಲಿ ಬಿಡುಗಡೆಗೊಳಿಸುವ ಪ್ರಣಾಳಿಕೆಯಲ್ಲಿ ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ಆದ್ಯತೆ’ ಎಂದು ಪ್ರತಿಬಾರಿ ಘೋಷಿಸುವ ಬಿಜೆಪಿಗೆ ನಿಜವಾಗಿಯೂ ರಾಮಮಂದಿರ ನಿರ್ಮಾಣದ ಕಾಳಜಿ ಇಲ್ಲ. ಕೇವಲ ಹಿಂದುಗಳ ವೋಟಿನಾಸೆಗಾಗಿ ಮಾತ್ರ ಪ್ರಣಾಳಿಕೆಯಲ್ಲಿ ಈ ಭರವಸೆ ನೀಡಿದೆ ಎಂಬುದು ಈಗ ರಹಸ್ಯವಾಗಿ ಉಳಿದಿಲ್ಲ. ಇಂಥ ಮಾನಸಿಕತೆ ಹೊಂದಿರುವ ಬಿಜೆಪಿ ಸಾಧ್ವಿ ಬಿಡುಗಡೆಗೆ ಆಗ್ರಹಿಸುತ್ತದೆ ಎಂಬುದನ್ನು ಕನಸಿನಲ್ಲಿಯೂ ನಿರೀಕ್ಷಿಸಲು ಸಾಧ್ಯವೇ?

ಇನ್ನು ಇರೋಂ ಶರ್ಮಿಳಾ ಅವಳದ್ದು ಇನ್ನೊಂದು ರೀತಿಯ ಕತೆ. ಪೊಲೀಸರು ಆಕೆಯ ಮೇಲೆ ಐಪಿಸಿ ಸೆಕ್ಷನ್ ೩೦೯ರನ್ವಯ ಆತ್ಮಹತ್ಯಾ ಯತ್ನ ಆರೋಪ ಹೊರಿಸಿ ಬಂಧಿಸಿಟ್ಟಿದ್ದಾರೆ. ಸರ್ಕಾರ ಬಲವಂತವಾಗಿ ನಳಿಕೆಯ ಮೂಲಕ ಆಹಾರ ಕೊಟ್ಟು ದೆಹಲಿಯ ಜೆ.ಎನ್. ಆಸ್ಪತ್ರೆಯಲ್ಲಿರಿಸಿದೆ. ಅವಳಿರುವ ಪುಟ್ಟ ವಾರ್ಡ್ ಅನ್ನೇ ಸಬ್‌ಜೈಲ್ ಆಗಿ ಪರಿವರ್ತಿಸಲಾಗಿದೆ. ಕಳೆದ ೧೨ ವರ್ಷಗಳಿಂದ ಬಂಧನ, ಬಿಡುಗಡೆಯ ಪ್ರಹಸನ ನಡೆಯುತ್ತಲೇ ಇದೆ. ಮೊನ್ನೆ ಮಾರ್ಚ್ ೪ ರಂದು ಶರ್ಮಿಳಾ ನ್ಯಾಯಾಲಯದೆದುರು ಹಾಜರಾಗಿದ್ದಳು. ‘ನಿನ್ನದು ಆತ್ಮಹತ್ಯೆ ಯತ್ನ’ ಎಂದು ನ್ಯಾಯಾಧೀಶರು ಹೇಳಿದಾಗ ಆಕೆಯ ಪ್ರತ್ಯುತ್ತರ ಹೀಗಿತ್ತು: ‘ನಾನು ಬದುಕನ್ನು ಪ್ರೀತಿಸುವವಳು. ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಎಂದಿಗೂ ಬಂದವಳಲ್ಲ. ಸೇನೆಗೆ ನೀಡಿರುವ ವಿಶೇಷ ಅಧಿಕಾರವನ್ನು ಹಿಂದೆಪಡೆದ ಮರುಕ್ಷಣವೇ ಆಹಾರ ಸೇವಿಸುವೆ. ನನ್ನದು ಹೋರಾಟದ ಜೀವನ. ಸಾಯುವ ಮನಸ್ಸಿದ್ದರೆ ನಾನು ಇಲ್ಲಿಯವರೆಗೆ ಬದುಕುವ ಮನಸ್ಸು ಮಾಡುತ್ತಿರಲಿಲ್ಲ.’ ದಿಲ್ಲಿ ನ್ಯಾಯಾಲಯ ಆಕೆಯ ವಿರುದ್ಧ ಆತ್ಮಹತ್ಯೆ ಆರೋಪ ದಾಖಲಿಸಿಕೊಂಡಿದೆ. ಅದು ಇತ್ಯರ್ಥವಾಗುವ ಹಂತ ಕೂಡ ತಲುಪಿತ್ತು. ಆದರೆ ಶರ್ಮಿಳಾ ಆತ್ಮ ಹತ್ಯೆ ಯತ್ನದ ತಪ್ಪೊಪ್ಪಿಕೊಳ್ಳದ ಕಾರಣ ನ್ಯಾಯಾಲಯ ಮತ್ತೆ ವಿಚಾರಣೆ ಆರಂಭಿಸಿದೆ. ಈ ವಿಚಾರಣೆ ಸದ್ಯಕ್ಕೇನೂ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಬಹುಶಃ ಇನ್ನೊಂದು ಹನ್ನೆರಡು ವರ್ಷಗಳವರೆಗೆ ಈ ಪ್ರಕರಣ ಎಳೆದರೆ ಆಶ್ಚರ್ಯವೇನಿಲ್ಲ.

ಮಹಿಳೆಯೇ ಮಹಿಳೆಗೆ ಶತ್ರುವಾದರೆ…

ಕೇಂದ್ರ ಸರ್ಕಾರ ಮನಸ್ಸು ಮಾಡಿದ್ದರೆ ಮಹಿಳಾ ದಿನಾಚರಣೆಯಂದೇ ಮೇಲಿನ ಈ ಎರಡು ಪ್ರಕರಣಗಳಿಗೂ ಮಂಗಳ ಹಾಡಿ ಇಬ್ಬರು ಅಮಾಯಕ ಮಹಿಳೆಯರನ್ನು ಕಾಪಾಡಬಹುದಿತ್ತು. ಅವರ ಜೀವಿತದ ಉಳಿದ ದಿನಗಳನ್ನಾದರೂ ನೆಮ್ಮದಿಯಿಂದ ಬದುಕುವಂತೆ ಮಾಡಬಹುದಿತ್ತು. ಹೀಗೆ ಮಾಡಿದ್ದರೆ ನಿಜಕ್ಕೂ ಮಹಿಳಾ ದಿನಾಚರಣೆ ಅರ್ಥಪೂರ್ಣವಾಗುತ್ತಿತ್ತು. ಸರ್ಕಾರ ಮಾತ್ರ ಇಂಥ ದಿಟ್ಟ ನಿರ್ಧಾರ ಕೈಗೊಳ್ಳುವ ಗೋಜಿಗೇ ಹೋಗಿಲ್ಲ. ಉನ್ನತ ಮಟ್ಟದಲ್ಲಿ ಪುರುಷರೇ ಇದ್ದಿದ್ದರೆ ಇಂಥದೊಂದು ನಿರ್ಧಾರ ಕೈಗೊಳ್ಳುವುದು ಸುಲಭಸಾಧ್ಯವಲ್ಲವೆಂದು ವಾದಿಸಬಹುದಿತ್ತು. ಆದರೆ ವಾಸ್ತವ ಹಾಗಿಲ್ಲ. ಯುಪಿಎ ಸರ್ಕಾರದ ಸೂತ್ರ ಹಿಡಿದ ವ್ಯಕ್ತಿ ಸೋನಿಯಾ ಮಹಿಳೆ. ಲೋಕ ಸಭೆಯಲ್ಲಿ ವಿರೋಧ ಪಕ್ಷದ ನಾಯಕಿ ಸುಷ್ಮಾ ಕೂಡ ಮಹಿಳೆ. ಲೋಕಸಭೆಯ ಸ್ಪೀಕರ್ ಆಗಿರುವ ಮೀರಾ ಕುಮಾರ್ ಕೂಡ ಪ್ರತಿಷ್ಠಿತ ಮಹಿಳೆ. ಇತ್ತೀಚಿನವರೆಗೆ ರಾಷ್ಟ್ರಪತಿಯಾಗಿ ಮೆರೆದ ಪ್ರತಿಭಾ ಪಾಟೀಲ್ ಒಬ್ಬ ಮಹಿಳೆ. ಹೀಗೆ ಉನ್ನತ ಸ್ಥಾನದಲ್ಲಿರುವವರೆಲ್ಲರೂ ಮಹಿಳೆಯರೇ ಆಗಿರುವಾಗ  ಈ ಇಬ್ಬರು ಅಮಾಯಕ ಮಹಿಳೆಯರ ಬಗ್ಗೆ ಒಂದು ದಿಟ್ಟ ನಿರ್ಧಾರ ಕೈಗೊಳ್ಳುವುದು ಕಷ್ಟದ ಕೆಲಸವಾಗಿರಲಿಲ್ಲ. ಆದರೆ…? ಇವರಾರಿಗೂ ಪ್ರಬಲ ಇಚ್ಛಾಶಕ್ತಿಯೇ ಇಲ್ಲ. ಎಲ್ಲರಿಗೂ ಅವರವರ ಸ್ವಂತz ಚಿಂತೆ. ಮಹಿಳಾ ಪರ ಕಾಳಜಿ ಎನ್ನುವುದು ಕೇವಲ ವೇದಿಕೆಯ ಮೇಲಿನ ಭಾಷಣಕ್ಕಷ್ಟೇ ಸೀಮಿತ. ಮೊನ್ನೆ ಕೇಂದ್ರ ಬಜೆಟ್ ಮಂಡಿಸುವ ವೇಳೆ ಹಣಕಾಸು ಸಚಿವ ಚಿದಂಬರಂ ಮಹಿಳೆಯರಿಗಾಗಿ ಬ್ಯಾಂಕ್ ತೆರೆಯುವ ಘೋಷಣೆ ಮಾಡಿದ್ದಾರೆ. ಬ್ಯಾಂಕ್ ತೆರೆದ ಮಾತ್ರಕ್ಕೆ ಅದೆಷ್ಟು ಮಹಿಳೆಯರಿಗೆ ಆರ್ಥಿಕ ಸುರಕ್ಷತೆ ದೊರಕಬಹುದು? ಸಾಮಾನ್ಯ ಮಹಿಳೆಯರಿಗೆ ಅದರಿಂದಾಗುವ ಪ್ರಯೋಜನವೇನು? ಅಷ್ಟಕ್ಕೂ ಪ್ರತಿನಿತ್ಯ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳಿಗೆ ತಡೆ ಹೇಗೆ ಎಂಬ ಬಗ್ಗೆ ಚಿದಂಬರಂ ಯಾವ ವಿವರಣೆಯನ್ನೂ ನೀಡಿಲ್ಲ.

ದಿನೇ ದಿನೇ ಹೆಚ್ಚುತ್ತಿರುವ ದೌರ್ಜನ್ಯ

ಭಾರತದಲ್ಲಿ ಮಹಿಳೆಯರು ಎದುರಿಸುತ್ತಿರುವ ಪರಿಸ್ಥಿತಿ ಅವಲೋಕಿಸಿದರೆ ನಿಜಕ್ಕೂ ಗಾಬರಿಯಾಗುತ್ತದೆ. ಸಂಘಟಿಕ ಕಾರ್ಮಿಕ ವಲಯದಲ್ಲಿ ಮಹಿಳೆಯರ ಪ್ರಮಾಣ ಸ್ವಾತಂತ್ರ್ಯ ಬಂದು ೬೫ ವರ್ಷಗಳಾದರೂ ಈಗಲೂ ಕೇವಲ ಶೇ.೨೫.೬ ರಷ್ಟು ಮಾತ್ರವಿದೆ. ಮಹಿಳೆಯರ ಮೇಲಾಗುತ್ತಿರುವ ಅತ್ಯಾಚಾರ ಪ್ರಕರಣದಲ್ಲಿ ಶೇ. ೯.೨ ರಷ್ಟು ಏರಿಕೆಯಾಗಿದೆ. ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಶೇ.೭.೧ ರಷ್ಟು ಏರಿಕೆ. ವರದಕ್ಷಿಣೆ ಸಾವಿನಲ್ಲಿ ಶೇ.೨.೭ ರಷ್ಟು ಏರಿಕೆ. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಶೇ.೫.೮ ರಷ್ಟು ಏರಿಕೆ. ಶೇ.೨.೪ ರಷ್ಟು ಬಾಲಕಿಯರು (೭-೧೦ ವಯಸ್ಸಿನವರು)ಪ್ರಾಥಮಿಕ ಶಿಕ್ಷಣದಿಂದ ವಂಚಿತರು. ತಾಯಂದಿರ ಮರಣ ಪ್ರಮಾಣ ಒಂದು ಲಕ್ಷ ಜನರಿಗೆ ೨೧೨. ಇನ್ನು ಲಿಂಗಾನುಪಾತದ ವಿಷಯದಲ್ಲೂ ತಾರತಮ್ಯ. ಸಾವಿರ ಪುರುಷರಿಗೆ

೯೪೦ ಮಹಿಳೆಯರು… ಈ ಎಲ್ಲಾ ಅಂಕಿ ಅಂಶಗಳು ಯಾರಿಗಾದರೂ ಗಾಬರಿ ಹುಟ್ಟಿಸದೇ ಇರಲು ಸಾಧ್ಯವೇ? ಈ ಅಂಕಿ ಅಂಶಗಳು ಹೇಳುವುದಾದರೂ ಏನು ಎಂಬುದಕ್ಕೆ ವಿವರಣೆ ಅನಗತ್ಯ.

ರಾಜಕೀಯ ವೃತ್ತಿ ಹಾಗೂ ಉದ್ಯಮ ಕ್ಷೇತ್ರದಲ್ಲಿ ಭಾರತೀಯ ಮಹಿಳೆಯರ ಸಾಧನೆಗೆ ಸಾಟಿಯೇ ಇಲ್ಲ. ವೃತ್ತಿಯ ವೈಯಕ್ತಿಕ ಆಯ್ಕೆ ಸೇರಿದಂತೆ ಹಲವು ವಿಚಾರಗಳಲ್ಲಿ ನಗರವಾಸಿ ಮಹಿಳೆಯರು ಸ್ವತಂತ್ರ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಅದೇನೋ ನಿಜ. ಆದರೆ ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮನಾಗಿ ಬೆಳೆಯುತ್ತಿರುವ ಮಹಿಳೆಯರಿಗೆ ರಸ್ತೆ, ಕಚೇರಿ, ಮನೆ ಹಾಗೂ ತಾಯಿಯ ಗರ್ಭದಲ್ಲೂ ಅಭದ್ರತೆಯ ಭಾವ ಕಾಡುತ್ತಿರುವುದು ಮಾತ್ರ ವಿಪರ್ಯಾಸ! ದೆಹಲಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದ ಬಳಿಕ ಅಂತಹ ಪ್ರಕರಣ ಇನ್ನೆಲ್ಲೂ ನಡೆಯಲಾರದು ಎಂಬುದು ಪ್ರಜ್ಞಾವಂತರ ಎಣಿಕೆಯಾಗಿತ್ತು. ಆದರೆ ಆದzನು? ನಿಜವಾಗಿ ದೆಹಲಿ ಪ್ರಕರಣದ ವಿರುದ್ಧ ದೇಶಾದ್ಯಂತ ಸಿಡಿದ ಪ್ರತಿಭಟನೆ ಗಮನಿಸಿದರೆ ಅತ್ಯಾಚಾರಿಗಳಿಗೆ ಅದೊಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಬೇಕಿತ್ತು. ಆದರೆ ದೆಹಲಿ ಪ್ರಕರಣದ ಬಿಸಿ ಆರುವ ಮುನ್ನವೇ ಅಂತಹದೇ ಇನ್ನೂ ಹಲವು ಪ್ರಕರಣಗಳು ದೇಶದಾದ್ಯಂತ ನಡೆದಿವೆ. ನಮ್ಮ ರಾಜ್ಯದ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಇmಳ ಗ್ರಾಮದಲ್ಲೂ ಅಂತಹದೊಂದು ಘಟನೆ ನಡೆದಿರುವುದು ತಲೆತಗ್ಗಿಸುವ ಸಂಗತಿ. ಕಾಲೇಜು ಮುಗಿಸಿ ಮನೆಗೆ ವಾಪಸಾಗುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳು ಅನಂತರ ಆಕೆಯ ಮೇಲೆ ಹಲ್ಲೆ ನಡೆಸಿ, ಕೈಕಾಲು ಕಟ್ಟಿ ಪಾಳು ಬಾವಿಗೆ ತಳ್ಳಿರುವುದು ಮಾನವತೆಯೇ ನಾಚುವಂತಹ ಘಟನೆ. ಈಗೇನೋ ಅತ್ಯಾಚಾರಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಬೆಳಗಾವಿ ಪ್ರಕರಣ ನಡೆದು ಒಂದು ವಾರವಾದರೂ ಅದರ ವಿರುದ್ಧ ಯಾರೊಬ್ಬರೂ ಪ್ರತಿಭಟನೆ ನಡೆಸದೇ ಮೌನಕ್ಕೆ ಶರಣಾಗಿದ್ದು ಇನ್ನೊಂದು ದುರಂತ! ಒಂದು ವಾರದ ಬಳಿಕ ಕೆಲವು ಮಠಾಧೀಶರ ನೇತೃತ್ವದಲ್ಲಿ ಸಾರ್ವಜನಿಕರು ಪಾದಯಾತ್ರೆ ನಡೆಸಿ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿರುವುದು ಸಮಾಧಾನಕರ ಸಂಗತಿ.  ಬೆಳಾಗವಿಯ ಘಟನೆ ಹಸಿಯಾಗಿರುವಾಗಲೇ, ಆ ಘಟನೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವಾಗಲೇ ಗುಲ್ಬರ್ಗಾ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಹಸಿ ಬಾಣಂತಿಯೊಬ್ಬಳ ಮೇಲೆ ಅತ್ಯಾಚಾರ ಯತ್ನ ನಡೆದಿರುವುದಂತೂ ಇನ್ನೊಂದು ದೊಡ್ಡ ದುರಂತ. ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾತ, ಆಕೆ ಸಹಕರಿಸದಿದ್ದಾಗ ಕೈಮುರಿದು ಹೊmಗೆ ಥಳಿಸಿರುವ ಘಟನೆಯೂ ನಡೆದಿದೆ. ಕೇರಳದ ಘಟನೆಯಂತೂ ಇನ್ನಷ್ಟು ಭೀಕರ. ಮೂರುವರ್ಷದ ಹಸುಳೆಯ ಮೇಲೂ ಅಲ್ಲಿ ಅತ್ಯಾಚಾರ ನಡೆದಿದೆ.

ಅದೇ ಕೇರಳದಲ್ಲಿ ಕ್ರೀಡಾ ಸಚಿವನಾಗಿರುವ ಕೆ.ಬಿ.ಗಣೇಶ್ ಕುಮಾರ್ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿರುವ ಘಟನೆಯಂತೂ ಇನ್ನಷ್ಟು ವಿಪರ್ಯಾಸಕರ. ಸಚಿವ ಗಣೇಶ್ ಕುಮಾರ್ ಇನ್ನೊಬ್ಬ ಮಹಿಳೆಯ ಜೊತೆ ಅಕ್ರಮ ಸಂಬಂಧವಿರಿಸಿಕೊಂಡಿದ್ದನ್ನು ಪ್ರತಿಭಟಿಸಿದ್ದಕ್ಕೆ ಪತ್ನಿಯ ಮೇಲೆ ಸಚಿವರು ಹಲ್ಲೆ ನಡೆಸಿದ್ದಾರೆ. ಪತ್ನಿ ವಿಚ್ಛೇದನ ಕೋರಿ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಪರಿಣಾಮವಾಗಿ ಗಣೇಶ್ ಕುಮಾರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಉಂmಗಿದೆ.

ಹೀಗೆ ಮಹಿಳೆಯರ ಮೇಲಿನ ದೌರ್ಜನ್ಯ ದಿನೇ ದಿನೇ ಹೆಚ್ಚುತ್ತಲೇ ಇದೆ. ರಸ್ತೆ, ಕಚೇರಿ, ಕೊನೆಗೆ ಸ್ವಂತ ಮನೆ ಎಲ್ಲಿಯೂ ಮಹಿಳೆಗೆ ಭದ್ರತೆ ಇಲ್ಲ. ಮಹಿಳೆಯರನ್ನು ಮಾತೆಯೆಂದು ವೇದಿಕೆಗಳಲ್ಲಿ ಗೌರವಿಸುವ ಮಾಲೀಕರೂ ತಮ್ಮ ಕಚೇರಿಗಳಲ್ಲಿರುವ ಮಹಿಳಾ ಉದ್ಯೋಗಿಗಳ ಭದ್ರತೆ, ಸುರಕ್ಷತೆಯ ಪ್ರಶ್ನೆ ಬಂದಾಗ ಜಾರಿಕೊಳ್ಳುವ ಪ್ರಸಂಗಗಳೇ ಎದ್ದುಕಾಣುತ್ತಿದೆ. ನಿಜವಾಗಿ ಸುರಕ್ಷತೆ, ಭದ್ರತೆ ಒದಗಿಸಬೇಕಾದವರೇ ಹಾಗೆ ಮಾಡದೆ ಯಾವುದೋ ಕಾರಣಕ್ಕೆ ಅಸಹಾಯಕರಾಗಿ ಕೈಚೆಲ್ಲುವ ಪ್ರಸಂಗಗಳು ನೀಡುವ ಸಂದೇಶವಾದರೂ ಏನು? ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ ಎಂದು ಹೇಳುವ ಭಾರತದಲ್ಲೇ ಮಹಿಳೆಯರನ್ನು ಈ ಪರಿಯಾಗಿ ಶಾರೀರಿಕವಾಗಿ, ಮಾನಸಿಕವಾಗಿ ಹಿಂಸಿಸಿದರೆ ಇಂತಹ ಶ್ಲೋಕ ಅರ್ಥ ಕಳೆದುಕೊಳ್ಳದೇ ಇರುತ್ತದೆಯೇ?

ಸ್ತ್ರೀಯರಿಗೆ ಬೇಕಿರುವುದು ಅನುಕಂಪವಲ್ಲ, ಸಮಾನತೆಯ ಘನತೆಯೂ ಅಲ್ಲ. ಸಮಾನತೆ ಬೇಕೆಂಬ ತುಡಿತ ಸಹಜವೇ. ಆದರೆ ಅಷ್ಟೇ ಸಾಲದು. ಸಮಾನತೆಯ ಜೊತೆಗೆ ಸ್ತ್ರೀಯನ್ನು ಗೌರವದಿಂದ ನಡೆಸಿಕೊಳ್ಳುವ ಸೂಕ್ಷ್ಮತೆ ಇಲ್ಲದಿದ್ದರೆ ಮಹಿಳಾಪರ ಅದೆಷ್ಟು ಸುಧಾರಣೆಗಳನ್ನು ಮಾಡಿದರೂ, ಅದೆಷ್ಟು ಭಾಷಣಗಳನ್ನು ಬಿಗಿದರೂ ಅವೆಲ್ಲವೂ ವ್ಯರ್ಥ, ವ್ಯರ್ಥ , ವ್ಯರ್ಥ.

ಬ್ಲರ್ಬ್: ಸ್ತ್ರೀಯರಿಗೆ ಬೇಕಿರುವುದು ಅನುಕಂಪವಲ್ಲ, ಸಮಾನತೆಯ ಘನತೆಯೂ ಅಲ್ಲ. ಸಮಾನತೆ ಬೇಕೆಂಬ ತುಡಿತ ಸಹಜವೇ. ಆದರೆ ಅಷ್ಟೇ ಸಾಲದು. ಸಮಾನತೆಯ ಜೊತೆಗೆ ಸ್ತ್ರೀಯನ್ನು ಗೌರವದಿಂದ ನಡೆಸಿಕೊಳ್ಳುವ ಸೂಕ್ಷ್ಮತೆ ಇಲ್ಲದಿದ್ದರೆ ಮಹಿಳಾಪರ ಅದೆಷ್ಟು ಸುಧಾರಣೆಗಳನ್ನು ಮಾಡಿದರೂ, ಅದೆಷ್ಟು ಭಾಷಣಗಳನ್ನು ಬಿಗಿದರೂ ಅವೆಲ್ಲವೂ ವ್ಯರ್ಥ, ವ್ಯರ್ಥ , ವ್ಯರ್ಥ.

Leave a Reply

Your email address will not be published.

This site uses Akismet to reduce spam. Learn how your comment data is processed.