
ವೀರಸೈನಿಕ ಹನುಂತಪ್ಪ ಕೊಪ್ಪದ ಜನಿಸಿದ ನಾಡಿದು ; ಸಾಹಿತ್ಯ ಸಂಭ್ರಮ ಹೆಸರಲ್ಲಿ ವಿಕೃತಿ ಸಲ್ಲದು: ಬಿ.ಎಲ್.ಸಂತೋಷ
೨೦ ಜನವರಿ, ೨೦೧೯, ಧಾರವಾಡ: ಭಾನುವಾರ ಜೆ.ಎಸ್.ಎಸ್ ಮೈದಾನದಲ್ಲಿ ಆರೆಸ್ಸೆಸ್ ಜಿಲ್ಲಾ ಸಾಂಘಿಕ್ ನಡೆಯಿತು. ಸಾಂಘಿಕ್ನಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಭಾಜಪದ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಹನುಂತಪ್ಪ ಕೊಪ್ಪದ ವೀರಸೈನಿಕ ಜನಿಸಿದ ಧಾರವಾಡದ ನೆಲದಲ್ಲಿ ಸಾಹಿತ್ಯ ಸಂಭ್ರಮದ ಹೆಸರಿನಲ್ಲಿ ಸೈನಿಕರನ್ನು ರೇಪಿಸ್ಟರು, ಗೋಮೂತ್ರ ಹಂದಿ ಮೂತ್ರದ ಹೋಲಿಕೆ ಇವೆಲ್ಲವೂ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿವೆ. ಸಾಹಿತ್ಯ ಸಂಭ್ರಮದ ಚಟುವಟಿಕೆ ಸಾಹಿತ್ಯಕ್ಕೆ ಸೀಮಿತಗೊಳಿಸುವಂತೆ ಆಗ್ರಹಿಸಿದರು.
ಹನುಮಂತ ಕೊಪ್ಪದ ೫೨ ಸೆಂಟಿ ಗ್ರೇಡ್ನಲ್ಲಿರುವ ಸಿಯಾಚಿನ್ ಹಿಮದ ಪ್ರವಾಹದಲ್ಲಿ ಹೂತು ಹೋಗಿ, ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದವನನ್ನು ಉಳಿಸಿಕೊಳ್ಳಲು ಇಡೀ ದೇಶವೇ ಪ್ರಾರ್ಥಿಸಿದೆ. ಅಂತಹ ಸೈನಿಕನ್ನು ಯಾವ ಧಾರವಾಡವು ನೋಡಿದೆಯೋ, ಓರ್ವ ಲೇಖಕ ಸಾಹಿತ್ಯ ಸಂಭ್ರಮ ಎಂಬ ವಿಕೃತ ಲೋಕದಲ್ಲಿ ಸೈನಿಕರನ್ನು ರೇಪಿಸ್ಟರು ಎಂದು ಸಂಬೋಧಿಸಿದ್ದನ್ನು ಖಂಡಿಸಿದರು. ಸೈನಿಕರಿಗೆ, ಸ್ವಯಂಸೇವಕರಿಗೆ ಹಾಸ್ಯ ಮಾಡಿದರೆ ಒಪ್ಪಬಹುದು. ಏಕೆಂದರೆ ನಗುವುದರಿಂದ ಆರೋಗ್ಯ ವೃದ್ಧಿಯೂ ಆಗುತ್ತಿದೆ. ಅವರೊಂದಿಗೆ ನಾವೂ ನಗತ್ತೇವೆ. ಆದರೆ, ಅವಮಾನ ಆಗುವಂತ ಸಂಗತಿ ಸಹಿಸುವುದಿಲ್ಲ. ಸಾಹಿತ್ಯ ಸಂಭ್ರಮದ ಆಯೋಜಕರು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತಿದೆ ಎಂದು ಎಚ್ಚರಿಸಿದರು.
ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಉದಾರತೆ ಹೆಸರಲ್ಲಿ ಸರ್ಕಾರಿ ಹಣದಲ್ಲಿ ಜೀವನ ನಡೆಸುವ ವಿಶಿಷ್ಟ ವರ್ಗ ದೇಶ ವಿರೋಧದ ಕೃತ್ಯದಲ್ಲಿ ತೊಡಗಿದೆ. ಇವುಗಳನ್ನು ನೆಪವಾಗಿಟ್ಟುಕೊಂಡು ಸಾಹಿತ್ಯ ಸಂಭ್ರಮದ ಹೆಸರಲ್ಲಿ ಸಮಾಜದಲ್ಲಿ ಹೊಲಸು ನಿರ್ಮಿಸುತ್ತಿದ್ದಾರೆ. ದೇಶದ ಗೌರವ, ಸಮಾಜದ ವ್ಯವಸ್ಥೆ, ಹಿಂದು ಎಂಬ ಸ್ವಾಭಿಮಾನ ಕಾಪಾಡಲು ಸಂಘದ ಸ್ವಯಂಸೇವಕರಿದ್ದಾರೆ. ಸವಾಲುಗಳಿಗೆ ಉತ್ತರ ಕೊಡುವ ಸಾಮರ್ಥ್ಯ ಸಂಘದ ಸ್ವಯಂಸೇವಕರಲ್ಲಿದೆ ಎಂದು ಹೇಳಿದರು.
ಮೂಲಭೂತ ಸ್ವಾತಂತ್ರ್ಯಕ್ಕೆ ಸಾಮಾಜಿಕ ಹಿತದ ಚೌಕಟ್ಟಿದೆ. ಮೂಲಭೂತ ಸ್ವಾತಂತ್ರ್ಯ ಅಂದರೆ ಮನಸ್ಸಿಗೆ ಬಂದಂತೆ ಬೇಕಾದ್ದು ಮಾಡಬಹದು. ಮಾತನಾಡಬಹುದೇ? ವ್ಯಕ್ತಿ-ಸಮಾಜದ ಭಾವನೆ ಘಾಸಿ ಮಾಡಬಹುದೇ?
ಹಂದಿಮೂತ್ರ ಗೋಮೂತ್ರಕ್ಕೆ ಹೋಲಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯವೇ? ಸೈನಿಕರು ರೇಪಿಸ್ಟರೇ? ಆಯೋಜಕರು ಇದಕ್ಕೆ ಹೊಣೆಗಾರರಲ್ಲವೇ? ಎಂದು ಪ್ರಶ್ನಿಸಿದರು. ಈ ದೇಶದಲ್ಲಿ ಸೈನಿಕರನ್ನು ದೇವರು ಎಂದು ನಂಬಿದ ಲಕ್ಷಾಂತರ ನಾಗರಿಕರು, ಜನರು, ಸ್ವಯಂಸೇವಕರು, ಹಿಂದು ಸಮಾಜ ಸೈನಿಕರ ಗೌರವ ಎತ್ತಿ ಹಿಡಿಯಲಿದೆ ಎಂದು ಹೇಳಿದರು. ವಿದೇಶಿ ಶಿಕ್ಷಣ ಪಡೆದು, ವಿದೇಶಿ ಮಾನಸಿಕತೆ ಅಳವಡಿಕೆ, ವಿದೇಶ ಜೀವನವೇ ಶ್ರೇಷ್ಠ ಎನ್ನುವ ಅಧಿಕಾರಿಗಳು, ಜನರು ನ್ಯಾಯಾಂಗದಲ್ಲಿ, ಪತ್ರಿಕಾರಂಗ, ಎಲ್ಲ ಕಡೆಗಳಲ್ಲಿ ಇದ್ದಾರೆ. ಗೋಮೂತ್ರ ಹಂದಿ ಮೂತ್ರಕ್ಕೆ ಹೋಲಿಕೆ, ಸೈನಿಕರನ್ನು ರೇಪಿಸ್ಟರೆಂದು ಕರೆಯುವುದು ಅಭಿವ್ಯಕ್ತಿ ಸ್ವಾತಂತ್ರ್ಯವಾದರೆ ಅಂತಹ ಅಭಿವ್ಯಕ್ತಿ ಸ್ವಾತಂತ್ರ್ಯವೇ ಬೇಡ. ಅವಶ್ಯಕತೆಯೂ ಇಲ್ಲ ಎಂದರು.
ಪೊಲೀಸ್ ಅಧಿಕಾರಿ ಕೊಲೆ, ರುದ್ರೇಶ್, ಪ್ರವೀಣ ಪೂಜಾರಿ, ಪರೇಶ ಮೇಸ್ತ, ಶರತ್, ಪ್ರಶಾಂತ ಪೂಜಾರಿ, ಹರೀಶ್ ಕೊಲೆ ವೇಳೆ ದೇಶದ ಕಾನೂನು ನೆನಪಿಗೆ ಬರಲಿಲ್ಲವೇ? ಇವೆಲ್ಲವೂ ವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ಅಲ್ಲವೇ? ಇನ್ಯಾರದೋ ಸೈದ್ಧಾಂತಿಕ ಕೊಲೆಗೆ ಬೋರ್ಡ್ ಹಾಕಿಕೊಂಡು ಕಣ್ಣೀರು ಸುರಿಸಿದವರು, ಮಾನವೀಯತೆಯ ದೃಷ್ಟಿಯಿಂದ ರುದ್ರೇಶರ ಹತ್ಯೆಗೂ ಕಣ್ಣೀರು ಹಾಕಲಿ ಎಂದರು.
ಸಂಘದ ಆಳವನ್ನು ಅರ್ಥೈಯಿಸಿಕೊಂಡವರಿಗೆ ೯೪ ವರ್ಷದ ಇತಿಹಾಸ ನೋಡಿದಾಗಾಗಲೇ ಇತಿಹಾದ ಪಾಠಗಳ ಮೂಲಕ ವರ್ತಮಾನಕ್ಕೆ ಪರಿವರ್ತನೆ ತಂದುಕೊಡುತ್ತಿದೆ ಎನ್ನುವುದು ಹೆಮ್ಮೆಯ ಸಂಗತಿ ಎಂದರು.
೧೦ ದಿನ ಸಂಘದ ಶಾಖೆಗೆ ಹೋದರೆ, ಕಬ್ಬಡ್ಡಿ ಆಡಿದರೆ, ಸಮಾಜ ಬದಲಾವಣೆಯಾಗುತ್ತದೆಯೇ ಎಂದು ಕುಹಕ ಆಡಿದವರೇ ಹೆಚ್ಚು. ಹೀಗೆ ಬಂದವರಿಂದ ಸಮಾಜದಲ್ಲಿ ಸಣ್ಣ-ಸಣ್ಣ ಪರಿವರ್ತನೆ ಆಗಿವೆ. ಸ್ಥಾಪಿಸಿರುವಂತಹ ಶಿಕ್ಷಣ ಸಂಸ್ಥೆಗಳು ಕ್ರಾಂತಿ ಮಾಡಿವೆ. ಹುಟ್ಟು ಹಾಕಿದ ಆಂದೋಲನಗಳು ಚರಿತ್ರೆ ನಿರ್ಮಿಸಿವೆ. ಭೂಕಂಪ, ಸುನಾಮಿ, ಜಲಪ್ರಳಯ ಇತ್ಯಾದಿ ಪ್ರಕೃತಿ ವಿಕೋಪದ ಒಡ್ಡಿದ ಸವಾಲಿಗೆ ಸಂಘ ಸ್ವಯಸೇವಕರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಹಿಂದುಗಳ ಒಟ್ಟಾಗಿರಿಸಲು, ಒಳ್ಳೆಯತನದ ರಕ್ಷಣೆ-ಕೆಟ್ಟತನದ ನಿವಾರಣೆ ಬಗ್ಗೆ ಸ್ವಯಂಸೇವಕರಿಗೆ ಚನ್ನಾಗಿ ಅರಿವಿದೆ. ಇದಕ್ಕಾಗಿ ಲಕ್ಷಾಂತರ ಜನ ಸಂಘ ಬೆಂಬಲಿಸಿ ದುಡಿಯುತ್ತಿದ್ದಾರೆಂದು ತಿಳಿಸಿದರು. ಆರೋಗ್ಯ, ಶಿಕ್ಷಣ, ಸುರಕ್ಷತೆ ದೃಷ್ಟಿಯಿಂದ ಭಯೋತ್ಪಾದನೆ, ಉಗ್ರರು ಇರುವ ಜಾಗಗಳಲ್ಲಿಯೇ ಪ್ರಾಣದ ಹಂಗು ತೊರೆದು ಸಂಘದ ಕಾರ್ಯಕರ್ತರು ದೇಶಕ್ಕೆ ದುಡಿಯುತ್ತಿದ್ದಾರೆ. ರಾಷ್ಟ್ರೀಯವಾದಿ ಕಾರ್ಮಿಕ ಚಳುವಳಿ ಹುಟ್ಟು ಹಾಕಿದೆ. ಭಾಷೆ, ಪ್ರದೇಶದ ಭಾವನೆ ಬಿಟ್ಟು ಹಿಂದುತ್ವದ ಮೇಲೆ ಒಂದಿಷ್ಟು ಹಾದಿಯನ್ನು ಕ್ರಮಿಸಿದ್ದೇವೆ ಎಂದು ಹೇಳಿದರು.
ಸಾರ್ವಜನಿಕ ಸಭೆಯ ಅಧ್ಯಕ್ಷರಾದ ಎಸ್ಡಿಎಂ ಕಾರ್ಯದರ್ಶಿ ಜೀವನ ಕುಮಾರ, ತಮಗೆ ೭೦ ವರ್ಷ ವಯಸ್ಸಾದರೂ, ಸಂಘದ ಚಟುವಟಿಕೆ ಕುರಿತು ಅರಿವಿಲ್ಲ. ಕೆಲವರಿಂದ ಕೇಳಿ ತಿಳಿದುಕೊಂಡಿದ್ದೇನೆ. ಸಂಘದ ಸಿದ್ಧಾಂತ ಒಪ್ಪದೆ ಇರುವ ಜನ ಸಾಕಷ್ಟಿರಬಹುದು. ನಂಬಿರುವ ಸಿದ್ಧಾಂತ ಸ್ವಯಂಸೇವಕರು ಕೈಬಿಡಬಾರದು. ಯಾವುದೇ ಸ್ವಾರ್ಥವಿಲ್ಲದೇ, ನಿಷ್ಠೆಯಿಂದ ದುಡಿಯುವ ಸ್ವಯಂಸೇವಕರ ಕಾರ್ಯ ಶ್ಲಾಘಿಸಿದರು.
ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಪ್ರಾಂಥ ಸಹಕಾರ್ಯವಾಹ ಶ್ರೀಧರ ನಾಡಿಗೇರ, ಪ್ರಾಂತ ಪ್ರಚಾರಕರಾದ ಶ್ರೀ ಸುಧಾಕರ, ಕಿರಣ ಗುಡ್ಡದಕೇರಿ, ವಿಜಯಮಹಾಂತೇಶ, ನಿಂಗಪ್ಪ ಮಡಿವಾಳರ, ವೆಂಕಟೇಶ ಕರಿಕಲ್ ಮತ್ತು ಕಲ್ಲನಗೌಡ ಪಾಟೀಲ ಮತ್ತಿತರು ಉಪಸ್ಥಿತರಿದ್ದರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಗಣವೇಷಧಾರಿಗಳಿಂದ ಶಾರೀರಕ ಪ್ರದರ್ಶನ ನಡೆಯಿತು.