– ಪಂಚಮಿ ಬಾಕಿಲಪದವು, ಪತ್ರಿಕೋದ್ಯಮ ವಿದ್ಯಾರ್ಥಿನಿ, ಅಂಬಿಕಾ ಮಹಾವಿದ್ಯಾಲಯ, ಪುತ್ತೂರು
ಭಾರತೀಯ ಸಂಸ್ಕ್ರತಿಯಲ್ಲಿ ಸದ್ಗುಣಗಳಿಗೆ ಅಪ್ರತಿಮವಾದ ಸ್ಥಾನವಿದೆ. ಅಪ್ರತಿಮವಾದ ಗುಣಗಳೆಲ್ಲವೂ ಕೂಡಾ ಒಂದು ಶರೀರದಲ್ಲಿ ಸೇರಿ ವ್ಯಕ್ತಿಯ ರೂಪವನ್ನು ಪಡೆದರೆ ಅದು ಮಹಾನ್ ವ್ಯಕ್ತಿಯಾಗುತ್ತದೆ. ಅಂತಹ ಸದ್ಗುಣಗಳ ಮೂರ್ತರೂಪವಾಗಿರುವಂತಹರೇ ಮಾಜಿ ರಾಷ್ಟ್ರಪತಿಗಳಾಗಿದ್ದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು.
“ಹರವಿದಾ ಹರದಾರಿ ಏರದೇ ಇರುವಗೆ
ರಾಮೇಶ್ವರದ ತೀರ, ಬಣ್ಣ ಬಣ್ಣದ ದೂರ
ಉದ್ದುದ್ದದಾ ದಾರಿ ಕ್ರಮಿಸುವುದಿಂಟೆ?
ಅದರಾಂತರ್ಯವನು ಶೋಧಿಸುವುದು ಉಂಟೇ?”
ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಅವರು ತಮಿಳುನಾಡಿನ ರಾಮೇಶ್ವರಂನಲ್ಲಿ ಅಕ್ಟೋಬರ್ 15, 1931 ರಂದು ಜೈನುಲಬ್ದೀನ್ ಹಾಗೂ ಅಶಿಮಾ ಅವರ ಮಗನಾಗಿ ಜನಿಸಿದರು. ಕಲಾಂ ಅವರ ತಂದೆ, ಈಗ ನಿರ್ನಾಮವಾದ ಧನುಷ್ಕೋಡಿಯಿಂದ ರಾಮೇಶ್ವರಕ್ಕೆ ತಮ್ಮ ದೋಣಿಯಲ್ಲಿ ಹಿಂದು ಭಕ್ತಾದಿಗಳನ್ನು ಕರೆದೊಯ್ಯುತ್ತಿದ್ದರು. ಕಲಾಂ ಅವರು ಮನೆಯಲ್ಲಿ ತಾಂಡವವಾಡುತ್ತಿದ್ದ ಬಡತನವನ್ನು ಹೋಗಿಸುವ ಸಲುವಾಗಿ, ಶಾಲೆಗೆ ಹೋಗುವ ಮುನ್ನ ಸುದ್ದಿಪತ್ರಿಕೆಗಳನ್ನು ಮಾರಾಟ ಮಾಡಲಾರಂಭಿಸಿದರು. ಹೀಗೆ ಎಳವೆಯಲ್ಲಿಯೇ ಸಮಸ್ಯೆಗಳನ್ನು ಹೇಗೆ ಪರಿಹರಿಸುವುದು ಎಂಬುದನ್ನು ಕಲಿತುಕೊಂಡಿದ್ದ ಕಲಾಂ ಕಷ್ಟಗಳನ್ನು ಸಾಧಿಸಲು ಸಹಕರಿಸುವ ಮೆಟ್ಟಿಲಾಗಿ ಪರಿವರ್ತಿಸಿಕೊಂಡಿದ್ದರು.
ಕ್ಷಿಪಣಿಗಳ ಜನಕ
1960ರಲ್ಲಿ ಮದ್ರಾಸ್ ತಾಂತ್ರಿಕ ಮಹಾವಿದ್ಯಾಲಯದಿಂದ ಪದವಿ ಪಡೆದ ನಂತರ ಕಲಾಂ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಅರ್.ಡಿ.ಓ) ನ ವಾಯುಯಾನವಿಜ್ಞಾನ ಅಭಿವೃದ್ಧಿ ವಿಭಾಗಕ್ಕೆ ಒಬ್ಬ ವಿಜ್ಞಾನಿಯಾಗಿ ಸೇರಿಕೊಂಡರು. ಅಲ್ಲಿ ಅವರು ತಮ್ಮ ವೃತ್ತಿ ಜೀವನದ ಪ್ರಾರಂಭದಲ್ಲಿ ಭಾರತದ ಭೂ ಸೇನೆಗೆ ಸಣ್ಣ ಹೆಲಿಕಾಪ್ಟರ್ ಗಳನ್ನು ವಿನ್ಯಾಸ ಮಾಡುತ್ತಿದ್ದರು. ತದ ನಂತರ, ಕಲಾಂ ಅವರು ಹೆಸರಾಂತ ಬಾಹ್ಯಾಕಾಶ ವಿಜ್ಞಾನಿ ವಿಕ್ರಂ ಸಾರಾಭಾಯ್ ಅವರ ಅಡಿಯಲ್ಲಿದ್ದ ಇನ್ಕೋಸ್ಪಾರ್ ಸಮಿತಿಯ ಸದಸ್ಯರಾದರು. 1969ರಲ್ಲಿ ಕಲಾಂ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಗೆ ವರ್ಗಾವಣೆ ಮಾಡಲಾಯಿತು. ಹೀಗೆ 1980ರಲ್ಲಿ ರೋಹಿಣಿ ಉಪಗ್ರಹವನ್ನು ಭೂಮಿಯ ಕಕ್ಷೆಗೆ ಸೇರಿಸಿದರು. ಮಾತ್ರವಲ್ಲದೆ, ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನ (ಎಸ್.ಎಲ್.ವಿ-3) ರ ಯೋಜನ ನಿರ್ದೇಶಕರಾದರು.1965ರಲ್ಲಿಯೇ ಕಲಾಂ ಅವರು ವಿಸ್ತರಿಸಬಲ್ಲ ರಾಕೆಟ್ ಯೋಜನೆಯನ್ನು ಪ್ರತ್ಯೇಕವಾಗಿ ಆರಂಭಿಸಿದರು. ಹೀಗೆ ಅಪಾರ ಸಾಧನೆಗೈದ ಇವರನ್ನು ಭಾರತದ ಅಣುಬಾಂಬು ಹಾಗೂ ಕ್ಷಿಪಣಿಗಳ ಜನಕ ಎಂದೇ ಜನರು ಕೊಂಡಾಡತೊಡಗಿದರು.
ರಾಷ್ಟ್ರಪತಿಯಾಗಿ ಕಲಾಂ
ಕಲಾಂರವರ ಸಾಧನೆಯು ವಿಜ್ಞಾನ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಹಲವಾರು ಕ್ಷೇತ್ರಗಳಲ್ಲಿ ವಿಸ್ತರಿಸಿತ್ತು. ಅವರು ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. 2002ರ ರಾಷ್ಟ್ರಪತಿ ಲಕ್ಷ್ಮೀ ಸೆಹೆಗಲ್ ವಿರುದ್ಧ 1,07,366 ಮತಗಳ ಮುನ್ನಡೆಯಲ್ಲಿ ಗೆದ್ದರು. 22 ಜುಲೈ 2002ರಿಂದ 22 ಜುಲೈ 2007ರವರೆಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಸರಳತೆ, ಪ್ರಾಮಾಣಿಕತೆ, ಮತ್ತು ಮೇಧಾವಿತನದ ಸಾಕಾರದಂತಿರುವ ಕಲಾಂ ಅವರು ರಾಷ್ಟ್ರಪತಿ ಹುದ್ದೆಯ ಘನತೆಯನ್ನು ಹೆಚ್ಚಿಸಿದರು. ಜನಸಾಮಾನ್ಯರ ರಾಷ್ಟ್ರಪತಿ ಎಂಬ ಕೀರ್ತಿಗೆ ಪಾತ್ರರಾದರು.
ಅಧ್ಯಯನಶೀಲ ಕಲಾಂ
ಅಬ್ದುಲ್ ಕಲಾಂ ಪ್ರಚಂಡ ಅಧ್ಯಯನಶೀಲರೂ ಹೌದು, ಚಿಂತನಶೀಲರೂ ಹೌದು. ಅವರು “ಆನೋಭದ್ರಾ ಕೃತವೋ ಯಂತು ವಿಶ್ವತಃ” ಅಂದರೆ ದೊಡ್ಡ ಆಲೋಚನೆಗಳು ನಿಮ್ಮ ಮನಸ್ಸನ್ನು ಎಲ್ಲ ದಿಕ್ಕುಗಳಿಂದ ಪ್ರವೇಶಿಸಲಿ ಎಂಬ ಮಾತನ್ನು ಸದಾ ನುಡಿಯುತ್ತಿದ್ದರು. ಅಂತಹ ಉನ್ನತವಾದ ಆಲೋಚನೆಗಳಿಂದಲೇ ಕಲಾಂ ಅವರ ವ್ಯಕ್ತಿತ್ವ ಉತ್ಕೃಷ್ಟ ಮಟ್ಟಕ್ಕೇರಿದೆ ಎನ್ನುವುದರಲ್ಲಿ ಸಂಶಯವಿಲ್ಲ.
ಮಾದರಿ ಜೀವನಶೈಲಿ
ಕಲಾಂ ಅವರ ಜೀವನ ಶೈಲಿ ವಿಭಿನ್ನವಾದುದು. ಅದನ್ನು ಅವರು ತಮ್ಮ ಆತ್ಮ ಕಥೆಯಲ್ಲಿ ಹೀಗೆ ಬರೆಯುತ್ತಾರೆ: “ನನ್ನ ಮುಂಜಾನೆ ದಿನಚರಿ ವಾಸ ಸ್ಥಳದಿಂದ 2 ಕಿ.ಮೀ ಸುತ್ತು ಹೊಡೆಯುವುದು. ಬೆಳಗ್ಗಿನ ಈ ವಾಯು ವಿಹಾರದಲ್ಲಿ ಆ ದಿನ ಮಾಡಲೇ ಬೇಕಾದ ವಿಚಾರದ ನಿಷ್ಕರ್ಷೆ, ಮಾನಸಿಕ ಕಾರ್ಯಸೂಚಿ ಸಿದ್ಧಪಡಿಸುತ್ತಿದ್ದೆ. ನಂತರ ಆಫೀಸಿಗೆ ಬಂದು, ಟೇಬಲನ್ನು ಚೊಕ್ಕವಾಗಿಡುತ್ತಿದ್ದೆ. ಆ ಬಳಿಕ ಹತ್ತು ನಿಮಿಷದೊಳಗಾಗಿ ಎಲ್ಲಾ ಕಡತಗಳನ್ನು ನೋಡಿ ಅವುಗಳನ್ನು ವಿವಿಧ ಹಂತಗಳ ಪರಿಶೀಲನೆಗಾಗಿ ವಿಂಗಡಿಸುತ್ತಿದ್ದೆ. ಅತ್ಯಂತ ಪ್ರಮುಖವಾದದ್ದು ಬಿಟ್ಟು ಟೇಬಲ್ ಮೇಲೆ ಯಾವುದೂ ಎದುರಿಗಿರಬಾರದು” ಇದು ಅಬ್ದುಲ್ ಕಲಾಂ ಅವರ ಅಚ್ಚುಕಟ್ಟುತನವನ್ನು ತೋರಿಸುತ್ತದೆ.
ಮಕ್ಕಳ ಪ್ರೀತಿಯ ಮಾರ್ಗದರ್ಶಕ
ಅಬ್ದುಲ್ ಕಲಾಂ ಅವರು ಮಕ್ಕಳೇ ಭಾರತದ ಭವಿಷ್ಯ ಹಾಗೂ ಅವರ ಮನಸ್ಸನ್ನು ಪ್ರಜ್ವಲನಗೊಳಿಸಬೇಕು ಎಂಬ ತತ್ತ್ವವನ್ನು ಜೀವನದುದ್ದಕ್ಕೂ ಪ್ರೀತಿಯಿಂದ ಅನುಸರಿಸಿದ್ದರು. ಕೇಂದ್ರ ಸರ್ಕಾರದಲ್ಲಿದ್ದ ತಮ್ಮ ಹುದ್ದೆಯನ್ನು ತ್ಯಜಿಸಿ ದೇಶದ ಉದ್ದಗಲಕ್ಕೂ ಪ್ರವಾಸ ಕೈಗೊಂಡು ಶಾಲಾ ಮಕ್ಕಳ ಜೊತೆ ಸಂವಾದ ನಡೆಸ ತೊಡಗಿದರು. ಮಕ್ಕಳೊಂದಿಗೆ ಮಗುವಾಗಿ, ಕುತೂಹಲಭರಿತ ಪ್ರಶ್ನೆಗಳಿಗೆಲ್ಲ ಸಾವಧಾನದಿಂದ ಉತ್ತರಿಸುತ್ತಿದ್ದರು. ಒಮ್ಮೆ ಒಬ್ಬ ವಿದ್ಯಾರ್ಥಿ, ತಾನು ವಿಜ್ಞಾನಿಯಾಗಲು ಏನು ಮಾಡಬೇಕು ಎಂದು ಪ್ರಶ್ನೆಯನ್ನು ಕೇಳಿದನು. ಆಗ ಕಲಾಂ ಅವರು, “ಮಕ್ಕಳೇ, ನೀವು ಯಾವಾಗಲೂ ಪ್ರಶ್ನಿಸುತ್ತಲೇ ಇರಬೇಕು. ವಿಜ್ಞಾನಿಯೂ ನಿರಂತರವಾಗಿ ಪ್ರಶ್ನಿಸಿಕೊಳ್ಳುತ್ತಾನೆ. ಹಾಗಾಗಿ ಪ್ರಶ್ನಿಸುವ ಅಭ್ಯಾಸವನ್ನು ಬೆಳೆಸಿಕೊಂಡರೆ ನೀವೂ ವಿಜ್ಞಾನಿಯಾಗಬಹುದು” ಎಂದು ಹೇಳಿದರು. ಹೀಗೆ ಸರಳವಾದ ರೀತಿಯಲ್ಲಿ, ಉತ್ತಮ ಸಂದೇಶವನ್ನು ಕಲಾಂ ಅವರು ನೀಡುತ್ತಿದ್ದರು.
ಕಲಾಂ ಜೀವನವೇ ಆದರ್ಶ
ಕಲಾಂ ಅವರ ಬದುಕು ನಿಜಕ್ಕೂ ಆದರ್ಶನೀಯವಾದುದು. ಬಡತನದಲ್ಲಿ ಬೇಯುತ್ತಿದ್ದ ರಾಮೇಶ್ವರಂನ ಹುಡುಗ ರಾಷ್ಟ್ರಪತಿಯಾಗಿ, ವಿಜ್ಞಾನಿಯಾದದ್ದು ಸಾಮಾನ್ಯ ವಿಷಯವೇ? ಅದನ್ನೇ ಅವರು ತಮ್ಮ ಜೀವನ ಚರಿತ್ರೆಯಲ್ಲಿ ಹೀಗೆ ಬರೆಯುತ್ತಾರೆ: “ನನ್ನ ಜೀವನ ಯಾರಿಗಾದರೂ ಆದರ್ಶವಾದೀತು ಎಂದು ಹೇಳಲಾಗುವುದಿಲ್ಲ. ಆದರೆ ದೇಶದ ಯಾವುದೋ ಒಂದಿ ಮೂಲೆಯಲ್ಲಿ, ಹಿಂದುಳಿದ ಸಾಮಾಜಿಕ ಪರಿಸರದಲ್ಲಿ ಜೀವಿಸುವ ಒಂದು ಬಡ ಮಗು, ನನ್ನ ಅದೃಷ್ಟವನ್ನು ರೂಪಿಸಿದ ರೀತಿಯನ್ನು ಕಂಡು ಕಿಂಚಿತ್ತಾದರೂ ಸಮಾಧಾನಪಟ್ಟುಕೊಳ್ಳಬಹುದು. ದೇವರು ಅವರೊಂದಿಗಿದ್ದಾನೆ ಎಂಬುದನ್ನು ಅರಿತುಕೊಳ್ಳಬಹುದು. ದೇವರು ಅವರೊಂದಿಗಿದ್ದರೆ, ಇನ್ನಾರು ಅವರಿಗೆ ವಿರುದ್ಧ ಹೋದಾರು!” ಎಂದು ತಮ್ಮ ಬದುಕಿನ ಮೂಲಕ ಹಲವು ಎಳೆಮಕ್ಕಳಿಗೆ ಆದರ್ಶಪ್ರಾಯರಾಗುತ್ತಾರೆ.
–
ತೃತೀಯ ಬಿ.ಎ
ಅಂಬಿಕಾ ಮಹಾವಿದ್ಯಾಲಯ, ಬಪ್ಪಳಿಗೆ, ಪುತ್ತೂರು