ಇಂದು ಪುಣ್ಯಸ್ಮರಣೆ
ಡಾ. ಮುರಿಗೆಪ್ಪ ಚನ್ನವೀರಪ್ಪ ಮೋದಿ ಅವರು ಭಾರತ ಪ್ರಖ್ಯಾತ ನೇತ್ರತಜ್ಞರಲ್ಲೊಬ್ಬರು. ಇವರು ಸುಮಾರು 7 ಲಕ್ಷಕ್ಕಿಂತ ಹೆಚ್ಚು ಜನರಿಗೆ ನೇತ್ರ ಶಸ್ತ್ರಚಿಕಿತ್ಸೆ ಮಾಡಿ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಹಳ್ಳಿ ಹಳ್ಳಿಗಳಿಗೆ ಹೋಗಿ ಉಚಿತ ಚಿಕಿತ್ಸೆ ನೀಡುತ್ತಿದ್ದರು. ಇಂದು ಅವರ ಪುಣ್ಯಸ್ಮರಣೆ.
ಪರಿಚಯ
ಡಾ.ಮುರಿಗೆಪ್ಪ ಚನ್ನವೀರಪ್ಪ ಮೋದಿ ಅವರು ಅಕ್ಟೋಬರ್ 4,1916ರಲ್ಲಿ ಬಾಗಲಕೋಟೆಯ ಬೀಳಗಿ ಜನಿಸಿದರು.ತಂದೆ ಚನ್ನವೀರಪ್ಪ, ತಾಯಿ ದುಂಡಮ್ಮ. ಎಂ.ಸಿ ಮೋದಿ ಅವರು ಪ್ರಾಥಮಿಕ ಶಿಕ್ಷಣವನ್ನು ಜಮಖಂಡಿಯ ಪಿ ಬಿ ಪ್ರೌಢಶಾಲೆಯಲ್ಲಿ ಮುಗಿಸಿದರು. ಬೆಳಗಾವಿ ಆಯುರ್ವೇದ ರಾಮವಾಡಿ ಕಣ್ಣಿನ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದರು.
ಡಾ. ಮುರಿಗೆಪ್ಪ ಚನ್ನವೀರಪ್ಪ ಮೋದಿ ಅವರು ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ 1942ರಲ್ಲಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯ ವೃತ್ತಿಯನ್ನು ಪ್ರಾರಂಭಿಸಿದರು. ಸ್ವಲ್ಪ ಸಮಯದ ಬಳಿಕ ಬೆಳಗಾವಿಗೆ ಬಂದು ವೃತ್ತಿಯನ್ನು ಮುಂದುವರಿಸಿದ್ದು, ದಾವಣೆಯಲ್ಲಿ ನೆಲೆಸಿದ್ದರು.
1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ ಮಹಾತ್ಮ ಗಾಂಧಿಯವರ ಭಾಷಣದಿಂದ ಪ್ರೇರಿತರಾಗಿ ಕೆಲವೇ ಸ್ವಯಂಸೇವಕರ ಜತೆ ಹಳ್ಳಿಗಳಿಗೆ ಹೋಗಿ ರೋಗಿಗಳಿಂದ ಹಣ ಪಡೆಯದೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು. ಭಾರತದಲ್ಲಿ ವ್ಯಾಪಕವಾಗಿ ಕಾಡುವ ಅಂಧತ್ವದ ನಿವಾರಣೆ ಇವರ ಬದುಕಿನ ಗುರಿಯಾಯಿತು. ಸಮಾಜದ ಒಳಿತಿಗಾಗಿ ದುಡಿಯಲು ತಮ್ಮನ್ನು ತಾವು ಅರ್ಪಿಸಿಕೊಂಡರು. ವೈಯಕ್ತಿಕ ಸುಖ ಸಂತೋಷ ತ್ಯಜಿಸಿ, ತಮ್ಮ ಪ್ರತಿಭೆ ಮತ್ತು ಪರಿಣತಿಯನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಕಣ್ಣಿಲ್ಲದವರಿಗೆ ಮೋದಿ ಬೆಳಕಾದರು.
ಅಂಧತ್ವ ನಿವಾರಣೆಗೆ ಇವರು ಹಮ್ಮಿಕೊಂಡ ಆಂದೋಲನದಲ್ಲಿ 1993ರವರೆಗೆ 6,10,564 ಜನರ ಕಣ್ಣುಗಳ ಶಸ್ತ್ರ ಚಿಕಿತ್ಸೆಯನ್ನೂ, 1,21,18,630ಕ್ಕೂ ಹೆಚ್ಚಿನ ರೋಗಿಗಳ ಕಣ್ಣು ತಪಾಸಣೆಯನ್ನು ಇವರು ಮಾಡಿದ್ದಾರೆ.ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿ ಉಚಿತ ತಪಾಸಣೆ ಚಿಕಿತ್ಸೆ ಮಾಡುತ್ತಿದ್ದರು.ಡಾ.ಮೋದಿಯವರು ಪ್ರತಿ ಗ್ರಾಮದಲ್ಲೂ ಶಾಲೆ, ಕಾಲೇಜುಗಳಿಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದರು.ರಷ್ಯಾ ಮತ್ತು ಅಮೇರಿಕ ಸೇರಿದಂತೆ ಹಲವಾರು ದೇಶದಲ್ಲಿ ಸೇವೆ ಸಲ್ಲಿಸಿದರು. ದಾವಣಗೆರೆ, ಬೆಂಗಳೂರು ಮತ್ತು ಬೆಳಗಾವಿಗಳಲ್ಲಿ ನೇತ್ರಾಲಯವನ್ನು ಸ್ಥಾಪಿಸಿದ ಅವರು ಬಡವರಿಗೆ ಉಚಿತ ಸೇವೆ ಒದಗಿಸುತ್ತಿದ್ದರು.
ಗಿನ್ನಿಸ್ ದಾಖಲೆ
ಮೋದಿಯವರು ತಿರುಪತಿಯಲ್ಲಿ ಒಂದೇ ದಿನ 833 ಶಸ್ತ್ರಚಿಕಿತ್ಸೆ ಮಾಡಿ ವಿಶ್ವ ದಾಖಲೆ ಸ್ಥಾಪಿಸಿದರು.ಡಾ. ಮೋದಿಯವರು ತಮ್ಮ ಜೀವಿತಾವಧಿಯಲ್ಲಿ ಕಣ್ಣಿನ ರೋಗಿಗಳನ್ನು ತಪಾಸಣೆ ಮಾಡಲು 46,120 ಹಳ್ಳಿಗಳಿಗೆ ಭೇಟಿ ನೀಡಿದ್ದರು. ಮೋದಿಯವರು ಕೆಲಕಾಲ ಕರ್ನಾಟಕ ವಿಧಾನ ಮಂಡಲದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.
ಪ್ರಶಸ್ತಿ
ಡಾ.ಎಂ.ಸಿ ಮೋದಿ ಅವರ ಸಾಧನೆಗೆ ಹಲವು ಪ್ರಶಸ್ತಿಗಳು ಬಂದಿವೆ. ಮೈಸೂರು, ಕರ್ನಾಟಕ ಮತ್ತು ಪುಣೆ ವಿಶ್ವವಿದ್ಯಾಲಯಗಳು ಶ್ರೀಯುತರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಭಾರತ ಸರ್ಕಾರ 1956ರಲ್ಲಿ ಪದ್ಮಶ್ರೀ ಹಾಗೂ 1968ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಡಾ.ಎಂ.ಸಿ.ಮೋದಿಯವರು ನವೆಂಬರ್ 11, 2005 ರಂದು ನಿಧನರಾದರು. ಅವರ ನಿಧನದ ನಂತರ ಅವರ ಎರಡೂ ಕಣ್ಣುಗಳನ್ನು ಅಂಧರಿಗೆ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದರು. .