
ಬೆಂಗಳೂರು: ನಮ್ಮ ರಾಷ್ಟ್ರವನ್ನು ಜಗತ್ತಿಗೆ ಉಪಕಾರ ಮಾಡುವ ರಾಷ್ಟವನ್ನಾಗಿ ನಾವು ನಿರ್ಮಿಸಬೇಕಿದೆ. ಪ್ರತಿ ಜೀವ ಸಂಕುಲವನ್ನು ಸರ್ವಾಂಗ ಸುಂದರ ಮಾಡಲು ಪ್ರಯತ್ನಿಸಬೇಕಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಮಾತನಾಡಿದರು.

ಸ್ವಾತಂತ್ರ್ಯ ದಿನದ ಪ್ರಯುಕ್ತ ಸಮರ್ಥ ಭಾರತ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಧ್ವಜಾರೋಹಣ ಮಾಡಿ ಮಾತನಾಡಿದರು.
ಸಂಪೂರ್ಣ ವಿಶ್ವವನ್ನು ಪ್ರಕಾಶಮಾನಗೊಳಿಸುವುದಕ್ಕಾಗಿ ಭಾರತ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. ಗಳಿಸಿದ ಸ್ವಾತಂತ್ರ್ಯದಲ್ಲಿ ಸ್ವ ಎನ್ನುವುದು ನಮ್ಮ ಸಮೃದ್ಧ ಸಾಂಸ್ಕೃತಿಕ ಅಂಶವಾಗಿದೆ. ನಮ್ಮಋಷಿಮುನಿಗಳು ಮನುಕುಲಕ್ಕೆ ಉಪಯೋಗವಾಗುವಂತಹ ಅಸಂಖ್ಯಾತ ಸಂಗತಿಗಳನ್ನು ನೀಡಿದ್ದಾರೆ. ಅಂತಹ ನಾಡಿನಲ್ಲಿ ಜನಿಸಿದ ನಾವು ನಮ್ಮತನ್ನವನ್ನು ದೈನಂದಿನ ಜೀವನದಲ್ಲಿ ಮೈಗೂಡಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಬೇಕು. ನಮ್ಮ ಪ್ರಾಚೀನ ಪರಂಪರೆಯ ಕೊಡುಗೆ ಕೇವಲ ಭಾರತಕ್ಕೆ ಮಾತ್ರವಲ್ಲದೆ ಜಗತ್ತಿನಾದ್ಯಂತ ಜನರಿಗೆ ಉಪಕಾರಿಯಾಗಿದೆ. ಈ ಕಾರಣದಿಂದಾಗಿ ಭಾರತ ವಿಶ್ವಗುರುವಾಗಬೇಕು. ಅದಕ್ಕಾಗಿ ನಾವೆಲ್ಲರೂ ಶ್ರಮವಹಿಸುವುದಕ್ಕೆ ಸಿದ್ಧರಾಗಬೇಕು ಎಂದರು.

ನಮ್ಮ ರಾಷ್ಟ್ರಧ್ವಜ ನೀಡುವ ಸಾಂಕೇತಿಕ ಸಂದೇಶಗಳನ್ನು ನಾವು ಪಾಲಿಸಬೇಕು. ಇದರಿಂದಾಗಿ ಜ್ಞಾನ ಮತ್ತು ಪ್ರಕಾಶದ ಆರಾಧನೆ ಮಾಡಿದಂತಾಗುತ್ತದೆ. ಕತ್ತಲಿನಿಂದ ಬೆಳಕಿನೆಡೆಗೆ ಬರುವುದ್ಕಕ್ಕಾಗಿ ನಮ್ಮ ಜೀವನವನ್ನು ಮುನ್ನಡೆಸಬೇಕಾಗಿದೆ. ತ್ಯಾಗದಿಂದ, ನಿರಂತರ ಕ್ರಿಯಾಶೀಲತೆಯಿಂದ ಸಮಾಜದ ಕಾರ್ಯ ಮಾಡಬೇಕೆನ್ನುವುದನ್ನು ಕೇಸರಿ ಬಣ ಸೂಚಿಸುತ್ತದೆ. ಮನಸ್ಸಿನಲ್ಲಿರುವ ಸ್ವಾರ್ಥವನ್ನು ತೊಡೆದುಹಾಕಿ ನಿಷ್ಕಳಂಕವಾಗಿ ಸಮಾಜಕ್ಕಾಗಿ ಕೆಲಸ ಮಾಡಬೇಕೆನ್ನುವುದನ್ನು ಬಿಳಿಯ ಬಣ್ಣತಿಳಿಸುತ್ತದೆ. ಹೀಗೆ ಮಾಡುವುದರಿಂದ ಬೌದ್ಧಿಕವಾಗಿ, ಆಧ್ಯಾತ್ಮಿಕವಾಗಿ, ಸಮುತ್ಕರ್ಷದ ಮತ್ತು ನಿಶ್ರೇಯಸ್ಸಿನ ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎನ್ನುವುದನ್ನು ಹಸಿರು ಬಣ್ಣ ಪ್ರತಿಧ್ವನಿಸುತ್ತದೆ. ಸಂಪೂರ್ಣ ಜಗತ್ತಿಗೆ ಪ್ರಕಾಶವನ್ನು ನೀಡುವುದಕ್ಕಾಗಿ ಭಾರತಕ್ಕೆ ಸಂಪೂರ್ಣ ಸಾಮರ್ಥ್ಯವನ್ನು ತುಂಬಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸ್ವಾಧೀನತೆ ಒಂದು ದಿನದ ಸಂಭ್ರಮ, ಆದರೆ ಸ್ವಾತಂತ್ರ್ಯ ಸಂಭ್ರಮದ ನಂತರವೂ ನಿರಂತರವಾಗಿ ಪ್ರಕ್ರಿಯೆಯಲ್ಲಿ ಉಳಿಯಬೇಕಾದದ್ದು. ಈ ಪ್ರಕ್ರಿಯೆಯಲ್ಲಿ ರಾಷ್ಟ್ರಧ್ವಜದ ಆದರ್ಶದೊಂದಿಗೆ ನಾವು ಮುನ್ನುಗ್ಗಬೇಕಾಗಿದೆ. ನಾವು ನಮ್ಮ ಕಾರ್ಯಕ್ಕೆ ಸರಿಯಾಗಿ ಕಾರ್ಯಪ್ರವೃತ್ತರಾಗದೇ ಇದ್ದರೆ ನಮ್ಮನ್ನು ಒಡೆಯಬೇಕೆಂದು ಕೊಂಡಿರುವವರು ತಮ್ಮ ಕಾರ್ಯವನ್ನು ಮಾಡುತ್ತಿರುತ್ತಾರೆ. ಆದ್ದರಿಂದ ನಾವು ನಮ್ಮ ಸ್ವತ್ವದ ಆಧಾರದಲ್ಲಿ ರಾಷ್ಟ್ರ ಧ್ವಜದ ಪ್ರೇರಣೆಯನ್ನು ಅರ್ಥೈಸಿಕೊಂಡು ಕಾರ್ಯಪ್ರವೃತ್ತರಾಗಬೇಕಿದೆ ಎಂದು ತಿಳಿಸಿದರು.

