ಬೆಂಗಳೂರು: ಹಿರಿಯ ವಿದ್ವಾಂಸ-ಲೇಖಕ, ನಾಡೋಜ, ರಾಷ್ಟ್ರೋತ್ಥಾನ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ। ಎಸ್. ಆರ್. ರಾಮಸ್ವಾಮಿ (88 ವರ್ಷಗಳು) ಇಂದು ಬೆಳಗ್ಗೆ ಶಂಕರಪುರಂನ ರಂಗರಾವ್ ರಸ್ತೆಯ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ.

ಇಂದು ಬೆಳಗ್ಗೆ 10.30 ರಿಂದ 12.00 ಗಂಟೆಗೆಯ ವರೆಗೆ ಚಾಮರಾಜಪೇಟೆ ಕೆಂಪೇಗೌಡನಗರದ ರಾಷ್ಟ್ರೋತ್ಥಾನ ಪರಿಷತ್ತಿನ ಕೇಶವಶಿಲ್ಪಾದಲ್ಲಿ ಅಂತಿಮದರ್ಶನದ ವ್ಯವಸ್ಥೆ ಮಾಡಲಾಗಿದೆ. 12.00ರ ನಂತರ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಪರಿಚಯ: ಐದು ದಶಕಗಳ ಕಾಲ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಡಾ|| ಎಸ್.ಆರ್. ರಾಮಸ್ವಾಮಿ ಅವರು ಕಳೆದ 35 ವರ್ಷಗಳಿಂದ (1979) ‘ಉತ್ಥಾನ’ ಮಾಸಪತ್ರಿಕೆಯ ಮತ್ತು ‘ರಾಷ್ಟ್ರೋತ್ಥಾನ ಸಾಹಿತ್ಯ’ ಪ್ರಕಾಶನದ ಪ್ರಧಾನ ಸಂಪಾದಕರಾಗಿದ್ದಾರೆ. 1972-1979ರ ಅವಧಿಯಲ್ಲಿ ‘ಸುಧಾ’ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

ಸುಭಾಷಚಂದ್ರ ಬೋಸ್ ಅವರ ಸಮಗ್ರ ಜೀವನಚರಿತ್ರೆ ‘ಕೋಲ್ಮಿಂಚು’ (1996), ಜಯಪ್ರಕಾಶ್ ನಾರಾಯಣ್ (2000), ವಲ್ಲಭಭಾಯಿ ಪಟೇಲ್ (2000), ಮೋಕ್ಷಗುಂಡA ವಿಶ್ವೇಶ್ವರಯ್ಯ (2000) ಮೊದಲಾದ ಹನ್ನೆರಡು ಜೀವಚರಿತ್ರೆಗಳೂ ಸೇರಿದಂತೆ ಸುಮಾರು 55 ಗ್ರಂಥಗಳನ್ನು ಬರೆದಿದ್ದಾರೆ. ‘ಭಾರತದಲ್ಲಿ ಸಮಾಜಕಾರ್ಯ’ (1992), ‘ಸ್ವಾತಂತ್ರೋದಯದ ಮೈಲಿಗಲ್ಲುಗಳು’ (1997) ಮೊದಲಾದ ಹಲವಾರು ಪ್ರತಿಷ್ಠಿತ ಕೃತಿಗಳಿಗೆ ವಿಸ್ತೃತ ಸ್ವತಂತ್ರ ಅವಲೋಕನ ಪ್ರಬಂಧಗಳನ್ನು ಬರೆದು ಸಂಪಾದನೆ ಮಾಡಿದ್ದಾರೆ. ಅಭ್ಯುದಯ ಅರ್ಥಶಾಸ್ತ್ರದಲ್ಲಿ ಆಳವಾದ ಪರಿಶ್ರಮ ಮಾಡಿರುವ ಇವರು ಜಾಗತೀಕರಣದ ಹಿನ್ನೆಲೆಯಲ್ಲಿ ಬರೆದ ‘ಆರ್ಥಿಕತೆಯ ಎರಡು ಧ್ರುವ’ (1994) ಅರ್ಥಶಾಸ್ತ್ರ ಕ್ಷೇತ್ರದ ಒಂದು ಉನ್ನತ ಕೃತಿಯೆಂದು ಪರಿಗಣಿತವಾಗಿದೆ. ಸ್ವಾತಂತ್ರೋತ್ತರ ಭಾರತದ ಆರ್ಥಿಕ ಯೋಜನೆಗಳನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿರುವ ರಾಮಸ್ವಾಮಿಯವರ ‘ಶತಮಾನದ ತಿರುವಿನಲ್ಲಿ ಭಾರತ’ (1989) ಸಮಾಜವಿಜ್ಞಾನ ಕ್ಷೇತ್ರದ ಆ ವರ್ಷದ ಶ್ರೇಷ್ಠ ಕೃತಿಯೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿದೆ. ಬ್ರಿಟಿಷ್-ಪೂರ್ವ ಭಾರತದ ಉನ್ನತ ಸ್ಥಿತಿ ಕುರಿತು ಖ್ಯಾತ ಸಂಶೋಧಕ ಧರ್ಮಪಾಲ್ ಅವರ ಕೃತಿಗಳನ್ನು ಇವರು ಕನ್ನಡಕ್ಕೆ ತಂದಿದ್ದಾರೆ.

ಅನೇಕ ಹಿರಿಯ ಸಾಹಿತಿಗಳ ಒಡನಾಟದಲ್ಲಿದ್ದ ರಾಮಸ್ವಾಮಿಯವರು ಡಿ.ವಿ. ಗುಂಡಪ್ಪ, ವಿ. ಸೀತಾರಾಮಯ್ಯ, ರಾಳ್ಲಪಲ್ಲಿ ಅನಂತಕೃಷ್ಣಶರ್ಮ, ವೀರಕೇಸರಿ ಸೀತಾರಾಮಶಾಸ್ತ್ರೀ ಮೊದಲಾದ ಧೀಮಂತರನ್ನು ಕುರಿತು ಬರೆದ ವ್ಯಕ್ತಿಚಿತ್ರಮಾಲೆ ‘ದೀವಟಿಗೆಗಳು’ (1998) ಒಂದು ಅನುಪಮ ಕೃತಿಯೆನಿಸಿದೆ. ಈಗಿನ ಜಗದ್‌ವ್ಯಾಪಿ ತುಮುಲಗಳ ಬೇರುಗಳಿರುವುದು ಎರಡು ಭಿನ್ನ ಜೀವನದೃಷ್ಟಿಗಳಲ್ಲಿ – ಎಂದು ಅವರ ‘ನಾಗರಿಕತೆಗಳ ಸಂಘರ್ಷ’ ಕೃತಿ (೨೦೦೯) ಪ್ರತಿಪಾದಿಸಿದೆ.

ಅವರ ಇತ್ತೀಚಿನ ಕೃತಿ ‘ಕೆಲವು ಇತಿಹಾಸ-ಪರ್ವಗಳು’ (2011) ಮೈಲಿಗಲ್ಲುಗಳೆಂದು ಅಂಕಿತಗೊಂಡಿರುವ ಕೆಲವು ಇತಿಹಾಸ ಘಟನಾಸರಣಿಗಳ ಪರಾಮರ್ಶನೆಯಾಗಿದೆ. ಇತ್ತೀಚಿನ (2012) ‘ದೀಪ್ತಿಮಂತರು’ ವ್ಯಕ್ತಿಚಿತ್ರ ಸಂಕಲನದಲ್ಲಿ ಧೀಮಂತ ಪತ್ರಕರ್ತ ತಿ.ತಾ. ಶರ್ಮ, ‘ತೋಟಗಾರಿಕೆ ಋಷಿ’ ಎಂ.ಎಚ್. ಮರಿಗೌಡ ಮೊದಲಾದ ಆರು ಮಂದಿ ಸಾಧಕರನ್ನು ಪರಿಚಯಿಸಿದ್ದಾರೆ. ಈಗ್ಗೆ ಕೆಲವೇ ತಿಂಗಳ ಹಿಂದೆ ಪ್ರಕಟವಾದ ರಾಮಸ್ವಾಮಿಯವರ ಸಾಹಿತ್ಯ ಪ್ರಾಸಂಗಿಕಗಳ ಸಂಕಲನ ‘ಕವಳಿಗೆ’ ಒಂದು ಅನುಪಮ ಕೊಡುಗೆಯಾಗಿದೆ.
ರಾಮಸ್ವಾಮಿಯವರು ಕಳೆದ ಐವತ್ತು ವರ್ಷಗಳಲ್ಲಿ ವಿವಿಧ ಪತ್ರಿಕೆಗಳಲ್ಲಿ 1000ಕ್ಕೂ ಹೆಚ್ಚು ಅಧ್ಯಯನಪೂರ್ಣ ಲೇಖನಗಳನ್ನು ಬರೆದಿದ್ದಾರೆ. ಸೋಲಿಗರನ್ನು ಕುರಿತು ಇವರು ಬರೆದ ಲೇಖನಕ್ಕೂ (1983), ಭೂಸುಧಾರಣೆ ಕುರಿತ ಲೇಖನಕ್ಕೂ (1984) ಗ್ರಾಮೀಣ ಬರಹ ಪುರಸ್ಕಾರ ಯೋಜನೆಯಲ್ಲಿ ಕೆನರಾ ಬ್ಯಾಂಕಿನಿಂದ ಪ್ರಥಮ ಬಹುಮಾನ ದೊರೆತಿದೆ.

ಪತ್ರಿಕೋದ್ಯಮ ಸೇವೆಗಾಗಿ 2006ರಲ್ಲಿ ಇವರಿಗೆ ‘ಆರ್ಯಭಟ ಪ್ರಶಸ್ತಿ’ ದೊರೆತಿದೆ. ಸಾಹಿತ್ಯಸೇವೆಗಾಗಿ 2008ರ ಕರ್ನಾಟಕ ರಾಜ್ಯ ಪ್ರಶಸ್ತಿಯೂ ಇವರಿಗೆ ದೊರೆತಿದೆ. 2011ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಇವರ ಸುದೀರ್ಘ ಸಾಹಿತ್ಯಸೇವೆಗಾಗಿ ಗೌರವಾರ್ಥ ಡಾಕ್ಟರೇಟ್ ನೀಡಿದೆ.

2009ರಲ್ಲಿ ಮಿಥಿಕ್ ಸೊಸೈಟಿ ಶತಮಾನೋತ್ಸವ ಪ್ರಶಸ್ತಿ ದೊರೆತಿದೆ. ಅರ್ಧಶತಮಾನದ ದೀರ್ಘ ಪತ್ರಿಕೋದ್ಯಮ ಸೇವೆಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ 2011ರಲ್ಲಿ ‘ವರ್ಷದ ವ್ಯಕ್ತಿ’ ವಿಶೇಷ ಪ್ರಶಸ್ತಿ ದೊರೆತಿದೆ.

ರಾಮಸ್ವಾಮಿಯವರು ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಕ್ಕೆ ನೀಡಿದ ಅನುಪಮ ಕೊಡುಗೆಯನ್ನು ಪರಿಗಣಿಸಿ, ಹಂಪೆಯ ಕನ್ನಡ ವಿಶ್ವವಿದ್ಯಾನಿಲಯ 2015ರಲ್ಲಿ ಪ್ರತಿಷ್ಠಿತ ‘ನಾಡೋಜ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಹತ್ತಾರು ರಾಷ್ಟ್ರಮಟ್ಟದ ಮತ್ತು ಅಂತರರಾಷ್ಟ್ರೀಯ ಗೋಷ್ಠಿಗಳಲ್ಲಿ ಜನಪರ ಆರ್ಥಿಕ-ಸಾಮಾಜಿಕ ನಿಲವನ್ನೂ ಪರಿಸರಸ್ವಾಸ್ಥ್ಯಪೋಷಕ ಚಿಂತನೆಯನ್ನೂ ಪ್ರತಿಪಾದಿಸಿರುವುದಲ್ಲದೆ ರಾಮಸ್ವಾಮಿಯವರು ಈ ಕ್ಷೇತ್ರಗಳ ಆಂದೋಲನಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ತಮ್ಮ ಲೇಖನಶಕ್ತಿಯನ್ನು ಸದಾ ಸಮಾಜಾಭಿಮುಖ ದಿಶೆಯಲ್ಲಿ ವಿನಿಯೋಗಿಸುತ್ತ ಬಂದಿರುವ ಚಿಂತಕರು, ಎಸ್. ಆರ್. ರಾಮಸ್ವಾಮಿ.

ಸಂತಾಪ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹಸರಕಾರ್ಯವಾಹ ಮುಕುಂದ ಸಿ ಆರ್, ಕ್ಷೇತ್ರೀಯ ಸಂಘಚಾಲಕ ಡಾ‌. ಪಿ. ವಾಮನ್ ಶೆಣೈ, ಕ್ಷೇತ್ರೀಯ ಕಾರ್ಯವಾಹ ನಾ.‌ತಿಪ್ಪೇಸ್ವಾಮಿ, ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಜಿ. ಎಸ್‌. ಉಮಾಪತಿ, ಪ್ರಾಂತ ಕಾರ್ಯವಾಹ ಡಾ. ಎಂ. ಜಯಪ್ರಕಾಶ್ ಸೇರಿದಂತೆ ಅನೇಕ ಗಣ್ಯರು ಡಾ. ಎಸ್ ಆರ್ ರಾಮಸ್ವಾಮಿ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published.

This site uses Akismet to reduce spam. Learn how your comment data is processed.