ಲೇಖನ: ದೀಕ್ಷಿತ್ ನಾಯರ್ ಮಂಡ್ಯ
“ಶಿವರಾಮ ಕಾರಂತರನ್ನು ನಿಮಗೆ ಪರಿಚಯ ಮಾಡಿಕೊಡುವುದು ಒಂದೇ, ನೇಸರನನ್ನು ಸೊಡರಿನಿಂದ ತೋರಿಸುವುದು ಒಂದೇ” ಎಂದವರು ನವ್ಯ ಕಾಲದ ಮಹತ್ವದ ಕವಿ ಗೋಪಾಲಕೃಷ್ಣ ಅಡಿಗರು. ಶಿವರಾಮ ಕಾರಂತರು ಒಂದಿಡೀ ತಲೆಮಾರನ್ನು ಇಡಿಯಾಗಿ ಆವರಿಸಿಕೊಂಡ ಮಹಾ ವಿಸ್ಮಯ. ಅವರು ತಮ್ಮ ತೆರೆದ ಮನಸ್ಸಿನ ಪ್ರಯೋಗಶೀಲ ಬದುಕಿನೊಂದಿಗೆ ಸದಾ ತರುಣನಂತೆ ಚಿಮ್ಮುತ್ತಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ಕೊಟ್ಟ ಕೊಡುಗೆ ಸದಾ ಅವಿಸ್ಮರಣೀಯ. ಅದರಲ್ಲೂ ಅವರು ಹತ್ತಿಸಿದ ಓದಿನ ಹುಚ್ಚಿಗೆ ಅಸಂಖ್ಯಾತ ಕನ್ನಡದ ಓದುಗರು ಈಗಲೂ ಋಣಿಯಾಗಿದ್ದಾರೆ.

ಕನ್ನಡದ ಕಾದಂಬರಿಗಳು ಎಂದೊಡನೆ ಥಟ್ಟನೆ ಶಿವರಾಮ ಕಾರಂತರು ನೆನಪಾಗುತ್ತಾರೆ. ಹೌದು.ಕಾದಂಬರಿ ಪ್ರಕಾರಕ್ಕೆ ಸಾಣೆ ಹಿಡಿಯುವ ಮೂಲಕ ಹೊಸ ರೂಪ ಕೊಟ್ಟು ಕನ್ನಡಿಗರು ಕಾದಂಬರಿ ಓದಿನಲ್ಲಿಯೇ ಅಂತರ್ಗತವಾಗುವಂತೆ ಮಾಡಿದವರು ಶಿವರಾಮ ಕಾರಂತ. ಕಾರಂತರ ಕಾದಂಬರಿಗಳನ್ನು ಓದುತ್ತಾ ತಮ್ಮ ಬದುಕನ್ನು ಶ್ರೀಮಂತ ಗೊಳಿಸಿಕೊಂಡವರಿದ್ದಾರೆ. ತಮ್ಮ ಬದುಕಿನುದ್ದಕ್ಕೂ ಕಾರಂತರ ಕಾದಂಬರಿಗಳನ್ನೇ ಧ್ಯಾನಿಸಿದವರಿದ್ದಾರೆ. ಈ ಕ್ಷಣಕ್ಕೂ ಕಾರಂತರ ಬರೆಹದ ಮೋಡಿಗೆ ಬೆರಗಾಗಿ ಅದೆಷ್ಟೋ ಓದುಗರು ಅವರ ಪ್ರಭಾವಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಅಷ್ಟರಮಟ್ಟಿಗೆ ಶಿವರಾಮ ಕಾರಂತರು ನಮ್ಮನ್ನು ಬರ ಸೆಳೆದು ಅಪ್ಪಿಕೊಂಡಿದ್ದಾರೆ.
ಅವರಿಲ್ಲದಿದ್ದರೂ ಅವರ ಮಾಂತ್ರಿಕ ಬರೆಹಗಳು, ಅವರು ಇರಿಸಿದ ಸಾಹಸದ ಹೆಜ್ಜೆ ಗುರುತುಗಳು, ಮಾಡಿದ ಹೋರಾಟ ಸರ್ವಕಾಲಕ್ಕೂ ಆದರ್ಶಪ್ರಾಯ.
ನಡೆದಾಡುವ ವಿಶ್ವಕೋಶ ಕಾರಂತರ ಕಿರು ಪರಿಚಯ

ಕನ್ನಡ ಸಾಹಿತ್ಯ ಲೋಕದ ಬೆರಗು ಮತ್ತು ಕನ್ನಡಾಂಬೆಗೆ ಚಿನ್ನದ ಬಳೆ ತೊಡಿಸಿದ ಶಿವರಾಮ ಕಾರಂತರು ಜನಿಸಿದ್ದು ಅಕ್ಟೋಬರ್ 10 1902 ರಲ್ಲಿ. ಉಡುಪಿಯ ಸಾಲಿಗ್ರಾಮ ಅವರ ಜನ್ಮಸ್ಥಳ. ಕೂಡು ಕುಟುಂಬದಲ್ಲಿ ಜನಿಸಿದ ಕಾರಂತರು ಹುಟ್ಟೂರಿನಲ್ಲಿಯೇ ತಮ್ಮ ಶಿಕ್ಷಣವನ್ನು ಮುಗಿಸಿದರು. ಕನ್ನಡಾಂಬೆಯ ಅದೃಷ್ಟವೆಂಬಂತೆ ಕವಿಯಾಗಿ, ಕಾದಂಬರಿಕಾರರಾಗಿ ಮತ್ತು ನಾಟಕಕಾರರಾಗಿ ಕನ್ನಡ ಸಾಹಿತ್ಯ ಲೋಕಕ್ಕೆಂದೇ ತಮ್ಮನ್ನು ಅರ್ಪಿಸಿಕೊಂಡರು. ಕಾರಂತರು ಬರಹಗಾರರಾಗಿ ಅಷ್ಟೇ ಅಲ್ಲದೆ ಅಪ್ಪಟ ಪರಿಸರ ಪ್ರೇಮಿಯಾಗಿ ಹೊಸ ಪ್ರಯೋಗಗಳಿಗೆ ನಾಂದಿ ಹಾಡಿದವರು. ಯಕ್ಷಗಾನ, ನಾಟಕ,ಬಯಲಾಟ ಕಲೆಗಳಲ್ಲೂ ಕಾರಂತರು ಪರಿಣಿತಿಯನ್ನು ಹೊಂದಿದ್ದರು. ಅಷ್ಟೇ ಅಲ್ಲ ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ಕಾರಂತರು ಮುಂಚೂಣಿಯಲ್ಲಿದ್ದು ಸ್ವಾತಂತ್ರ್ಯದ ಕಿಡಿಯನ್ನು ದೇಶ ಬಾಂಧವರಲ್ಲಿ ಹೊತ್ತಿಸಿದ್ದರು. ಕಾರಂತರು “ಆಡು ಮುಟ್ಟದ ಸೊಪ್ಪಿಲ್ಲ” ಎಂಬ ಮಾತಿಗೆ ಅನ್ವರ್ಥವಾಗಿಯೇ ಬದುಕಿದವರು. ‘ನಡೆದಾಡುವ ವಿಶ್ವಕೋಶ’ ಎಂಬ ಬಿರುದು ಅವರಿಗೆ ಮಾತ್ರ ಒಪ್ಪುವಂತದ್ದು.
ಶಿವರಾಮ ಕಾರಂತರ ಮಹತ್ವದ ಕೃತಿಗಳು

ಢಮ್ ಢಮ್ ಎಂದು ದುಡಿಯನ್ನು ಬಾರಿಸುತ್ತಲೇ ನೆಲಕ್ಕೊರಗಿ ಕಣ್ಣು ಮುಚ್ಚುವ ಚೋಮನ ಪಾತ್ರವನ್ನು ( ಚೋಮನ ದುಡಿ ಕೃತಿ) ಕನ್ನಡ ಸಾಹಿತ್ಯ ಲೋಕದ ಯಾವ ಓದುಗರೂ ಮರೆಯುವುದಿಲ್ಲ. ಇನ್ನು ಬೆಟ್ಟದ ಜೀವ ಕೃತಿ ಉಂಟು ಮಾಡಿದ ಪುಳಕ ಅಲ್ಲಿ ಕಂಡುಬರುವ ಕುಮಾರಧಾರ ಪರ್ವತ, ಕಳಂಜಿಮಲೆ ಬೆಟ್ಟದ ಸಾಲುಗಳು ಮತ್ತು ನೀರಿನ ಝಳ ಝಳ ಸದ್ದು ಎಂಥವರನ್ನೂ ಹಿಡಿದು ಕೂರಿಸಿಬಿಡುತ್ತದೆ.ಅಷ್ಟೇ ಅಲ್ಲ. ಮೂಕಜ್ಜಿಯ ಕನಸುಗಳು ಕೃತಿಯಲ್ಲಿನ ಮುಗ್ಧ ಹುಡುಗ ಸುಬ್ರಾಯ ಮತ್ತು ಮೂಕಜ್ಜಿಯ ಪಾತ್ರಗಳು ಕೊಟ್ಟ ಸಂತಸವನ್ನು ಪ್ರತಿಯೊಬ್ಬ ಓದುಗನೂ ತನ್ನ ಮನಸ್ಸಿನ ಅಲಮಾರಿನಲ್ಲಿ ಭದ್ರವಾಗಿ ಇಟ್ಟುಕೊಂಡಿದ್ದಾನೆ. ಕಾರಂತರು ರಚಿಸಿದ ಪ್ರತಿಯೊಂದು ಕಾದಂಬರಿಯಲ್ಲಿಯೂ ಜೀವಂತಿಕೆ ಇದೆ.ಎಲ್ಲರನ್ನು ಆಕರ್ಷಿಸುವ ಚುಂಬಕ ಶಕ್ತಿ ಇದೆ. ಗಾಢವಾದದ್ದನ್ನು ಎದೆಗೆ ದಾಟಿಸುವ ಚಮತ್ಕಾರಿಕೆಯನ್ನೂ ಕಾರಂತರು ಒಲಿಸಿಕೊಂಡಿದ್ದರು. ಸರಸಮ್ಮನ ಸಮಾಧಿ, ಗೊಂಡಾರಣ್ಯ, ಮೂಜನ್ಮ, ಅಳಿದ ಮೇಲೆ, ಹೆತ್ತಾಳಾ ತಾಯಿ, ಕರುಳಿನ ಕರೆ ಹೀಗೆ ಸದಾ ಕಾಡುವ ಅಸಂಖ್ಯಾತ ಕಾದಂಬರಿಗಳನ್ನು ಕಾರಂತರು ರಚಿಸಿದ್ದರು. ಹಾಗೆ ಅವರು ರಚಿಸಿದ ಕಥೆ, ನಾಟಕ, ಪ್ರವಾಸ ಕಥನ ಸೇರಿದಂತೆ ಇನ್ನು ಹತ್ತು ಹಲವು ಸಾಹಿತ್ಯ ಪ್ರಕಾರಗಳು ಕನ್ನಡ ಸಾಹಿತ್ಯ ಲೋಕವನ್ನು ಉನ್ನತದತ್ತ ಕರೆದೊಯ್ದಿದೆ. ಅದರಲ್ಲೂ ಶಿವರಾಮ ಕಾರಂತರ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಆತ್ಮಕಥೆ ಪ್ರತಿಯೊಬ್ಬರ ಕೈ ಬೆರಳನ್ನು ಹಿಡಿದು ನಡೆಸಿಕೊಂಡು ಹೋಗುತ್ತದೆ.

ಕಾರಂತರಿಗೆ ಒಲಿದ ಪ್ರಶಸ್ತಿಗಳು
ಅಭಿಜಾತ ಪ್ರತಿಭೆ ಶಿವರಾಮ ಕಾರಂತರು ಪ್ರಶಸ್ತಿಯನ್ನು ಮೀರಿ ಬೆಳೆದಿದ್ದವರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿನ ಅವರ ಉತ್ಕೃಷ್ಟ ಸಾಧನೆಗಾಗಿ ಜ್ಞಾನಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಸಾಕಷ್ಟು ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿ ಗೌರವಿಸಿವೆ. ಜಗತ್ತಿನ ಯಾವುದೇ ಸರ್ವ ಶ್ರೇಷ್ಠ ಪ್ರಶಸ್ತಿಯನ್ನು ಕೊಟ್ಟರೂ ಅದು ಕಾರಂತರ ಪ್ರತಿಭೆಯನ್ನು ತೂಗುವುದಿಲ್ಲ.

ಕಾರಂತ ಅಜ್ಜನ ಬಗ್ಗೆ ಇನ್ನಷ್ಟು
ಅಪ್ರತಿಮ ಸಾಹಸಿಗನಂತೆಯೇ ಬದುಕಿದ ಕಾರಂತರು ಹೊಸತನಕ್ಕೆ ತುಡಿಯುತ್ತಿದ್ದವರು. ಬಾಲವನ ಅವರ ವಿಶಿಷ್ಟ ಪ್ರಯೋಗ. ಸುಮ್ಮನಿರದ ಕಾರಂತರು ರಾಜಕೀಯ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದರು. ಪರಿಸರ ಮತ್ತು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಅವರು ಮಾಡಿದ ಕೆಲಸಗಳು ನಿಜಕ್ಕೂ ಶ್ಲಾಘನೀಯ.
ಇರುವ ಕಾಲಕ್ಕೂ ಪವಾಡ ಪುರುಷನಂತೆಯೇ ಬದುಕಿದ ಶಿವರಾಮ ಕಾರಂತರು ತಮ್ಮ 95ನೇ ವಯಸ್ಸಿನಲ್ಲಿ ಅಂದರೆ ಡಿಸೆಂಬರ್ 9 1997ರಲ್ಲಿ ಉಡುಪಿಯ ಮಣಿಪಾಲ್ ನಲ್ಲಿ ತೀರಿ ಹೋದರು. ವೃದ್ಧಾಪ್ಯದಲ್ಲೂ ಕಾರಂತರ ಹುಮ್ಮಸ್ಸು ತಗ್ಗಿರಲಿಲ್ಲ.ಈಗಲೂ ಕಾರಂತರ ಬೊಚ್ಚು ಬಾಯಿಯ ನಿಷ್ಕಪಟ ನಗು ಮತ್ತು ಗಾಳಿಗೆ ಹಾರಾಡುತ್ತಿದ್ದ ಅವರ ತಲೆಯ ಬಿಳಿ ಕೂದಲುಗಳು ನೆನಪಾಗುತ್ತವೆ.
ಸಾಧನೆಗೆ ನಿರ್ದಿಷ್ಟ ನಿಲ್ದಾಣವಿಲ್ಲ ಎಂದು ತೋರಿಸಿಕೊಟ್ಟ ‘ಕಾರಂತ ನೀ ಸದಾ ಜೀವಂತ!…