ಬೆಂಗಳೂರಿನಲ್ಲಿ ಮಾರ್ಚ 7 ರಿಂದ ಮೂರು ದಿನಗಳ ಕಾಲ ಆರೆಸ್ಸೆಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ
ಬೆಂಗಳೂರು ಮಾರ್ಚ 05: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖರಾದ ಡಾ ಮನಮೋಹನ ವೈದ್ಯರವರು ಮಾರ್ಚ 7 ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಥಣಿಸಂದ್ರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆಯಲಿರುವ ಅಖಿಲ ಭಾರತೀಯ ಪ್ರತಿನಿಧಿ ಸಭೆಯ (ABPS) ಕುರಿತು ಮಾಧ್ಯಮಕ್ಕೆ ವಿವರಿಸಿದರು.
ಮಾಧ್ಯಮದ ಪ್ರತಿನಿಧಿಗಳನ್ನು ಉದ್ಧೇಶಿಸಿ ಮಾತನಾಡುತ್ತ ’ಅಖಿಲ ಭಾರತೀಯ ಪ್ರತಿನಿಧಿ ಸಭಾ ಆರೆಸ್ಸೆಸ್ಸಿನ ವಾರ್ಷಿಕ ಅಧಿವೇಶನವಾಗಿದ್ದು ಸಂಘ ಕಾರ್ಯದ ಪ್ರಗತಿ ಮೂಲ್ಯಾಂಕನ ಮತ್ತು ಚರ್ಚೆಗಾಗಿ ಸೇರಲಾಗುತ್ತದೆ’ ಎಂದು ಡಾ. ವೈದ್ಯ ತಿಳಿಸಿದರು. ’ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿವಿಧ ಪ್ರಾಂತಗಳ ಆಯ್ದ ಪ್ರತಿನಿಧಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಂಘ ಪರಿವಾರ ಸಂಘಟನೆಗಳ ಪ್ರಮುಖರು ಸೇರಿದಂತೆ ಸುಮಾರು ೧೪೦೦ ಪ್ರತಿನಿಧಿಗಳು ಮೂರು ದಿನಗಳ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿವಾರ ಸಂಘಟನೆಗಳ ವರದಿ ಹಾಗೂ ಸಾಧನೆಗಳನ್ನೂ ಸಹ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಅವರು ನುಡಿದರು.
ಆರೆಸ್ಸೆಸ್ನ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ೪೧ ಪ್ರಾಂತಗಳ ಸಂಘಚಾಲಕರು, ಕಾರ್ಯವಾಹರು ಹಾಗೂ ಪ್ರಾಂತ ಪ್ರಚಾರಕರುಗಳನ್ನೊಳಗೊಂಡ ಅಖಿಲ ಭಾರತೀಯ ಕಾರ್ಯಕಾರಣಿ ಮಂಡಲಿಯ ಸಭೆಯು ಮಾರ್ಚ ೬ರಂದು ನಡೆಯಲಿದೆ ಎನ್ನುವ ಮಾಹಿತಿಯನ್ನು ನೀಡಿದರು. ಉಳಿದಂತೆ ಮಾರ್ಚ ೭ರಿಂದ ಪ್ರಾರಂಭವಾಗುವ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಆರೆಸ್ಸೆಸ್ಸಿನ ಶಾಖೆಗಳಿಂದ ಆಯ್ಕೆ ಮಾಡಲ್ಪಟ್ಟ ಪ್ರತಿನಿಧಿಗಳು, ಪ್ರಾಂತ ಹಾಗೂ ಕೇಂದ್ರ ಮಟ್ಟದ ಅಧಿಕಾರಿಗಳು ಹಾಗೂ ಪರಿವಾರ ಸಂಘಟನೆಗಳ ರಾಷ್ಟ್ರೀಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಡಾ. ವೈದ್ಯ ತಿಳಿಸಿದರು.
ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಯಾವುದೇ ರಾಜಕೀಯ ನಿರ್ಣಗಳಿಲ್ಲ: ಆರೆಸ್ಸೆಸ್ ಸ್ಪಷ್ಟನೆ
’ಅಖಿಲ ಭಾರತೀಯ ಪ್ರತಿನಿಧಿ ಸಭೆಯು ಸಂಘಕಾರ್ಯದ ಬಗ್ಗೆ ಚರ್ಚಿಸಲು ಮತ್ತು ಕಾರ್ಯದ ಮೂಲ್ಯಾಂಕನ ಮಾಡುವ ಸಲುವಾಗಿದ್ದು, ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಯಾವುದೇ ರಾಜಕೀಯ ನಿರ್ಣಯಗಳನ್ನು ಸ್ವೀಕರಿಸಲಾಗುವುದಿಲ್ಲ’ ಎಂದು ಡಾ. ಮನಮೋಹನ ವೈದ್ಯ ಸ್ಪಷ್ಟನೆ ನೀಡಿದರು. ’ವಿವಿಧ ಪ್ರದೇಶಗಳ ೧೪೦೦ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುವ ಈ ಸಭೆಯಲ್ಲಿ ಸಂಘಕಾರ್ಯದ ವಿಮರ್ಷೆಯ ಜೊತೆಗೆ ಪ್ರಮುಖ ರಾಷ್ಟ್ರೀಯ ವಿಷಯಗಳನ್ನು ಚರ್ಚಿಸಲಾಗುವುದು’ ಎಂದು ಅವರು ನುಡಿದರು.
ಪ್ರತಿನಿಧಿ ಸಭೆಯಲ್ಲಿ ಬಿಜೆಪಿಯ ನಾಯಕರು ಭಾಗವಹಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್ರವರು ಭಾಗವಹಿಸುತ್ತಿದ್ದು ಮಾರ್ಚ ೮ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ರವರು ಪಾಲ್ಗೊಳ್ಳಲಿದ್ದಾರೆ ಎನ್ನುವ ಮಾಹಿತಿ ನೀಡಿದರು.
ಮುಂಬರುವ ಚುನಾವಣೆಯಲ್ಲಿ ಸಂಘದ ಪಾತ್ರವನ್ನು ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ ’ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಬೇಕೆಂಬುದು ಸಂಘದ ನಿಲುವಾಗಿದೆ. ಅದಕ್ಕಾಗಿ ಮತದಾರರ ನೋಂದಣಿ ಮತ್ತು ಮತದಾನ ಮಾಡುವ ಕುರಿತು ಜನಜಾಗೃತಿ ಮೂಡಿಸುವಲ್ಲಿ ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಹೇಳಿದರು.
ಆರೆಸ್ಸೆಸ್ ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಎಮ್ ವೆಂಕಟರಾಮು, ಪ್ರಾಂತ ಪ್ರಚಾರ ಪ್ರಮುಖ ವಾದಿರಾಜ, ಬೆಂಗಳೂರು ಮಹಾನಗರ ಕಾರ್ಯವಾಹ ಕೆ ಎಸ್ ಶ್ರೀಧರ ಉಪಸ್ಥಿತರಿದ್ದರು. ವಿಶ್ವಸಂವಾದ ಕೇಂದ್ರ ಕರ್ನಾಟಕದ ಸಂಯೋಜಕ ರಾಜೇಶ್ ಪದ್ಮಾರ್ ಸ್ವಾಗತಿಸಿದರು. 2002ರ ನಂತರ ಹನ್ನೆರಡು ವರ್ಷಗಳ ತರುವಾಯ ಬೆಂಗಳೂರಿನಲ್ಲಿ ಅಖಿಲ ಭಾರತೀಯ ಪ್ರತಿನಿಧಿ ಸಭಾ ಜರುಗತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.