ನೇರ ನೋಟ by Du Gu Lakshman
ರಾಜ್ಯದ ಪ್ರಮುಖ ರಾಜಕಾರಣಿಗಳು ಹಾಗೂ ಮಾಧ್ಯಮವಲಯದ ಪ್ರಮುಖರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧಿಸಲಾಗಿದ್ದ ಪತ್ರಕರ್ತ ಮುತಿವುರ್ ರೆಹಮಾನ್ ಸಿದ್ದಿಕಿಯನ್ನು ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣದಿಂದ ಆರೋಪ ಪಟ್ಟಿಯಿಂದ ಕೈಬಿಡಲಾಗಿದೆ. ಆದರೆ ಸಾಧ್ವಿ ಪ್ರಜ್ಞಾಸಿಂಗ್ ವಿರುದ್ಧ ಯಾವುದೇ ಆರೋಪ ಸಾಬೀತಾಗದಿದ್ದರೂ ಆಕೆಯನ್ನು ಕಳೆದೈದು ವರ್ಷಗಳಿಂದ ಬಂಧನದಲ್ಲಿಟ್ಟು ಚಿತ್ರಹಿಂಸೆ ನೀಡಲಾಗಿದೆ. ಸಿದ್ದಿಕಿಗೊಂದು ನ್ಯಾಯ, ಸಾಧ್ವಿಗೊಂದು ನ್ಯಾಯ! ಹೀಗೇಕೆ?
‘ಸಾಧ್ವಿ ಜೈಲಿನಿಂದ ಹೊರಗೆ ಬರಬೇಕೆ? (ನೇರನೋಟ – ಫೆ.18) ಎಂಬ ನನ್ನ ಅಂಕಣ ಲೇಖನಕ್ಕೆ ದೊರಕಿರುವ ಪ್ರತಿಕ್ರಿಯೆಗಳು ಗಾಬರಿ ಹುಟ್ಟಿಸುವಂತಿವೆ. ಫೆ.18ರ ಬೆಳಿಗ್ಗೆ 8 ಗಂಟೆಯಿಂದ ಹಿಡಿದು ಒಂದು ವಾರದವರೆಗೂ ಈ ಲೇಖನಕ್ಕೆ ನಿರಂತರ ಪ್ರತಿಕ್ರಿಯೆಗಳು ಬರುತ್ತಲೇ ಇವೆ. ಕುಂದಾಪುರದ ಮಿತ್ರರೊಬ್ಬರು ‘ಲೇಖನ ಓದಿದ ಬಳಿಕ ನನ್ನ ರಕ್ತ ಕುದಿಯಿತು. ಸರ್ಕಾರ ಹಿಂದುಗಳಿಗೊಂದು ಮುಸ್ಲಿಮರಿಗೊಂದು ರೀತಿಯ ತಾರತಮ್ಯ ನೀತಿ ಅನುಸರಿಸುತ್ತಿದೆ. ಆರೋಪಗಳನ್ನು ಸಾಬೀತುಪಡಿಸಲಾಗದಿದ್ದರೆ ಸಾಧ್ವಿಯನ್ನು ಏಕೆ ಹೊರಗೆ ಬಿಡುತ್ತಿಲ್ಲ?’ ಎಂದು ಆಕ್ರೋಶವ್ಯಕ್ತಪಡಿಸಿದರೆ ಬೆಂಗಳೂರಿನ ಒಬ್ಬ ಮಹಿಳಾ ಓದುಗರು ‘ಲೇಖನ ಓದಿ ನನಗೆ ತಡೆದುಕೊಳ್ಳಲಾಗದೆ ಗಳಗಳ ಅತ್ತೆ. ಇಂತಹ ಗತಿ ಯಾವ ಹೆಣ್ಣಿಗೂ ಬರಬಾರದು’ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಪುತ್ತೂರಿನ ಬಜರಂಗದಳದ ಒಬ್ಬ ಕಾರ್ಯಕರ್ತರಂತೂ ‘ಸಾಧ್ವಿ ಬಿಡುಗಡೆಗಾಗಿ ನಾವು ಎಂತಹ ಹೋರಾಟಕ್ಕೂ ಸಿದ್ಧರಾಗಿದ್ದೇವೆ. ಯಾವುದೇ ಆಂದೋಲನ ನಡೆಸಲು ನಾವು ರೆಡಿ. ಏನು ಮಾಡಬೇಕೆಂದು ತಿಳಿಸಿ’ ಎಂದು ನೇರವಾಗಿಯೇ ಕೇಳಿದರು. ಗಂಗಾವತಿಯ ಮಿತ್ರರೊಬ್ಬರು ಮಾತ್ರ ಸಾಧ್ವಿಗೆ ಜೈಲಿನಲ್ಲಿ ಈ ಪರಿಯ ಹಿಂಸಾಚಾರ ನೀಡುವುದಕ್ಕೆ ಕಾನೂನು ಅನುಮತಿ ನೀಡುವುದಿಲ್ಲವಲ್ಲ. ಪೊಲೀಸರಿಗೆ ಹೇಳುವವರು ಕೇಳುವವರು ಯಾರೂ ಇಲ್ಲವೆ?’ ಎಂದು ಸಂಶಯ ವ್ಯಕ್ತಪಡಿಸಿದರು. ಹೀಗೆ ಈ ಲೇಖನ ಓದಿದ ಬಳಿಕ ಆಕ್ರೋಶ, ಕೋಪತಾಪ, ಕಣ್ಣೀರು, ದುಃಖ, ವಿಷಾದ ಭಾವನೆಗಳ ಪ್ರವಾಹವೇ ಓದುಗರಲ್ಲಿ ಹರಿದಿದೆ. ಅನೇಕರು ಏನು ಮಾಡಬೇಕೆಂದು ತೋಚದೆ ದಿಙ್ಮೂಢರಾಗಿದ್ದಾರೆ. ಸುತ್ತೂರು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬರು ಮಾತ್ರ ‘ಇಂತಹ ಲೇಖನ ಓದಿದಾಗ ಯುವಕರು ಕ್ರುದ್ಧರಾಗುತ್ತಾರೆ. ಅವರ ನೆತ್ತರು ಬಿಸಿಯಾಗುತ್ತದೆ. ಆದರೆ ಆ ಭಾವಾವೇಶವೆಲ್ಲ ಕ್ಷಣಿಕ. ಸ್ವಲ್ಪ ಹೊತ್ತಿನ ಬಳಿಕ ಎಲ್ಲವನ್ನೂ ಮರೆತು ಮತ್ತೆ ಯಥಾಪ್ರಕಾರ ತಮ್ಮದೇ ಲೋಕದಲ್ಲಿ ವಿಹರಿಸುತ್ತಾರೆ. ಯುವಶಕ್ತಿ ಇಂತಹ ಘಟನೆಗಳ ಬಗ್ಗೆ ಏನಾದರೂ ರಚನಾತ್ಮಕವಾದ ಕಾರ್ಯ ನಡೆಸಬೇಕು. ಅನ್ಯಾಯದ ವಿರುದ್ಧ ರಚನಾತ್ಮಕ ಹೋರಾಟ ಕೈಗೊಳ್ಳುವ ನಿರ್ಧಾರ ಅವರದಾಗಬೇಕು. ಅಂತಹ ಮಾನಸಿಕತೆ ಯುವಕರಲ್ಲಿ ಮೂಡಿಸುವುದು ಹೇಗೆ?’ ಎಂದು ನನ್ನನ್ನೇ ಪ್ರಶ್ನಿಸಿದರು. ಅವರ ಮಾತಿನಲ್ಲಿ ಸಾಮಾಜಿಕ ಕಾಳಜಿಯ ಜೊತೆಗೆ ಕಟು ವಾಸ್ತವದ ಅರಿವು ಕೂಡ ಇತ್ತು. ಅವರ ಮಾತು ಉತ್ಪ್ರೇಕ್ಷೆಯದಲ್ಲ. ಸಾರ್ವಜನಿಕ ನೆನಪೇ ಅಂತಹದು. ಅದಕ್ಕೇ Public memory is short ಎಂದು ಇಂಗ್ಲಿಷ್‌ನಲ್ಲಿ ಲೋಕೋಕ್ತಿ ಹುಟ್ಟಿಕೊಂಡಿರಬಹುದು. ಎಂತಹದೇ ಘಟನೆ ನಡೆದರೂ ಅದರ ತೀವ್ರತೆಯ ಪರಿಣಾಮ ಸಾರ್ವಜನಿಕರ ಮೇಲೆ ಶಾಶ್ವತವಾಗಿರುವುದಿಲ್ಲ. ಕೆಲವೇ ದಿನಗಳಲ್ಲಿ ಅದನ್ನು ಮರೆತು ಬಿಡುತ್ತಾರೆ. ಅಷ್ಟರೊಳಗೆ ಅದಕ್ಕಿಂತಲೂ ತೀವ್ರತರವಾದ ಇನ್ನೊಂದು ಘಟನೆ ನಡೆದಿರುವುದೇ ಮೊದಲನೆಯ ತೀವ್ರತರದ ಘಟನೆಯನ್ನು ಮರೆತುಬಿಡಲು ಕಾರಣವಾಗಿರಬಹುದು ಅಥವಾ ನಮಗ್ಯಾಕೆ ಇದರ ಉಸಾಬರಿ ಎಂಬ ಬೇಜವಾಬ್ದಾರಿತನ ಕೂಡ ಆಗಿರಬಹುದು.
ಸಾಧ್ವಿ ಪ್ರಜ್ಞಾಸಿಂಗ್ ಮೇಲಿನ ಯಾವುದೇ ಆರೋಪವನ್ನು ಇದುವರೆಗೂ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಆದರೂ ಕಳೆದ 5 ವರ್ಷಗಳಿಂದ ಆಕೆಯನ್ನು ಜೈಲಿನಲ್ಲೇ ಕೊಳೆಹಾಕಲಾಗಿದೆ. ಈ ನಡುವೆ ಪೊಲೀಸರು ನೀಡಿದ ಶಾರೀರಿಕ, ಮಾನಸಿಕ ಹಿಂಸೆಯಿಂದಾಗಿ ಆಕೆ ತೀವ್ರ ಅನಾರೋಗ್ಯಕ್ಕೀಡಾಗಿ ಆಗಲೋ ಈಗಲೋ ಎಂಬ ಸ್ಥಿತಿಗೆ ತಲುಪಿರುವುದಕ್ಕೆ ಸಾಧ್ವಿ ನ್ಯಾಯಾಧೀಶರಿಗೆ ಬರೆದ ಪತ್ರವೇ ನಿದರ್ಶನ. ತೀವ್ರ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿರುವ ಸಾಧ್ವಿ ಇಂತಹ ಸನ್ನಿವೇಶದಲ್ಲಿ ಹೇಗಾದರೂ ಬಿಡುಗಡೆಯಾಗಲೆಂದು ತನ್ನ ಆರೋಗ್ಯಸ್ಥಿತಿಯ ಬಗ್ಗೆ ಖಂಡಿತ ಸುಳ್ಳು ಬರೆದಿರಲಾರರು. ಆಕೆಯನ್ನು ಪ್ರತ್ಯಕ್ಷ ನೋಡಿದವರಿಗೂ ಆಕೆ ಅನುಭವಿಸುತ್ತಿರುವ ಯಾತನೆ ಯಾರಿಗೂ ಬರದಿರಲಿ ಎಂದೇ ಅನಿಸುತ್ತಿದೆ. ಇಷ್ಟೆಲ್ಲ ಇದ್ದರೂ ಆಕೆಯನ್ನು ಜಾಮೀನಿನ ಮೇಲೆ ನ್ಯಾಯಾಲಯ ಏಕೆ ಬಿಡುಗಡೆ ಮಾಡುತ್ತಿಲ್ಲ? ಇದು ಮಾತ್ರ ಒಂದು ಯಕ್ಷ ಪ್ರಶ್ನೆ. ಕಾನೂನಿನ ವ್ಯಾಪ್ತಿಯಲ್ಲಿ ಆಕೆಯ ಬಿಡುಗಡೆಗೆ ಹಾಗಿದ್ದರೆ ಅವಕಾಶವೇ ಇಲ್ಲವೆ? ಇದೇ ಪ್ರಶ್ನೆಯನ್ನು ಸಾಧ್ವಿಯ ಪರ ವಾದಿಸುತ್ತಿರುವ ವಕೀಲ ಜಗದೀಶ್ ರಾಣಾ ಅವರನ್ನು ಸ್ವತಃ ನಾನೇ ದೂರವಾಣಿ ಮೂಲಕ ಪ್ರಶ್ನಿಸಿದಾಗ ಅವರು ‘ನ್ಯಾಯಾಲಯ ಈ ಪ್ರಶ್ನೆಗೆ ಉತ್ತರಿಸಬೇಕಷ್ಟೆ. ಎಲ್ಲವೂ ನ್ಯಾಯಾಲಯದ ನಿರ್ಧಾರಕ್ಕೆ ಬಿಟ್ಟಿದೆ’ ಎಂದು ತಣ್ಣಗೆ ಉತ್ತರಿಸಿದರು. ನ್ಯಾಯಾಲಯ ಏಕೆ ಸಾಧ್ವಿಗೆ ಜಾಮೀನು ನೀಡುತ್ತಿಲ್ಲ? ಈ ನೋವಿನ ಪ್ರಶ್ನೆ ಮಾತ್ರ ಕೋಟಿ ಕೋಟಿ ಮನಸ್ಸುಗಳನ್ನು ಇರಿಯುತ್ತಲೇ ಇದೆ.
ಯಾವುದೇ ಮೊಕದ್ದಮೆಯೊಂದರಲ್ಲಿ ಬಂಧನಕ್ಕೊಳಗಾದ ಬಳಿಕ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದಿದ್ದರೆ ಅಂತಹ ವ್ಯಕ್ತಿಯನ್ನು ಬಿಡುಗಡೆ ಮಾಡಲು ಕಾನೂನಿನ ಯಾವ ಅಡ್ಡಿಯೂ ಇರುವುದಿಲ್ಲ. ಇದಕ್ಕೆ ನಿದರ್ಶನಗಳು ಸಾಕಷ್ಟು. ಉದಾಹರಣೆಗೆ ರಾಜ್ಯದ ಪ್ರಮುಖ ರಾಜಕಾರಣಿಗಳು ಹಾಗೂ ಮಾಧ್ಯಮ ವಲಯದ ಪ್ರಮುಖರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧಿಸಲಾಗಿದ್ದ ಪತ್ರಕರ್ತ ಮುತಿವುರ್ ರೆಹಮಾನ್ ಸಿದ್ದಿಕಿ ಮತ್ತು ಆತನ ಜೊತೆಗಿದ್ದ ಸೈಯದ್ ಯೂಸುಫ್ ನಲಬಂದ್ ವಿರುದ್ಧ ಸರಿಯಾದ ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣದಿಂದ ರಾಷ್ಟ್ರೀಯ ತನಿಖಾದಳ (ಎನ್‌ಐಎ) ಆರೋಪಪಟ್ಟಿಯಿಂದ ಈ ಇಬ್ಬರ ಹೆಸರನ್ನು ಕೈಬಿಟ್ಟಿದೆ. ಸಿದ್ದಿಕಿ ಮತ್ತು ಯೂಸುಫ್ ವಿರುದ್ಧ ಆರೋಪ ಸಾಬೀತುಪಡಿಸುವ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಇಬ್ಬರ ಬಗ್ಗೆಯೂ ಸಮಗ್ರ ತನಿಖೆ ನಡೆಸಲಾಗಿದ್ದು ಇವರು ಪ್ರಕರಣದಲ್ಲಿ ಭಾಗಿಗಳಾಗಿರುವ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂಬುದು ತನಿಖಾಧಿಕಾರಿಗಳ ಹೇಳಿಕೆ. ಸಿದ್ದಿಕಿ ಮತ್ತು ಯೂಸುಫ್ ರಾಜ್ಯದ ಪ್ರಮುಖ ರಾಜಕಾರಣಿಗಳು ಹಾಗೂ ಮಾಧ್ಯಮ ವಲಯದ ಪ್ರಮುಖರ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಅವರನ್ನು ಬಂಧಿಸಿದ ಪೊಲೀಸ್ ತನಿಖಾ ತಂಡವೇ ಹೇಳಿಕೆ ನೀಡಿತ್ತು. ಹೀಗೆ ಹೇಳಿಕೆ ನೀಡಬೇಕಾದರೆ ತನಿಖಾ ತಂಡಕ್ಕೆ ಇವರಿಬ್ಬರ ವಿರುದ್ಧ ಒಂದಿಷ್ಟು ಸುಳಿವುಗಳು ಸಿಕ್ಕಿರಲೇಬೇಕು. ಆದರೆ ಅಷ್ಟರಲ್ಲಿ ಏನಾಯಿತೋ… ಕಾಣದ ಯಾವ ಕೈಗಳು ಏನು ಮಾಡಿದವೋ… ಯಾರ ಪ್ರಭಾವ, ಒತ್ತಡಕ್ಕೆ ತನಿಖಾಧಿಕಾರಿಗಳು ಬಗ್ಗಿದರೋ ಒಟ್ಟಾರೆ ಆರೋಪ ಪಟ್ಟಿಯಿಂದ ಸಿದ್ದಿಕಿ ಎಂಬ ಪತ್ರಕರ್ತನ ಹೆಸರನ್ನು ಕೈಬಿಡಲಾಗಿದೆ. ಆತನೀಗ ತನ್ನ ಮೇಲಿನ ಆರೋಪದಿಂದ ಸಂಪೂರ್ಣ ಮುಕ್ತ. ಸಾಧ್ವಿ ಪ್ರಜ್ಞಾಸಿಂಗ್ ಅವರನ್ನು ಬಂಧಿಸಿದಾಗಲೂ ಆಕೆಯ ಮೇಲೆ ಮಾಲೆಗಾಂವ್ ಸ್ಫೋಟದ ಆರೋಪ ಹೊರಿಸಲಾಗಿತ್ತು. ಆದರೆ ಬಂಧಿಸಿ 5 ವರ್ಷಗಳಾದರೂ ಆಕೆಯ ಮೇಲಿನ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳು ದೊರಕಿಲ್ಲ. ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಆದರೂ ಆಕೆಗೆ ಬಿಡುಗಡೆಯ ಭಾಗ್ಯವಿಲ್ಲ. ಮುತಿವುರ್ ರೆಹಮಾನ್ ಸಿದ್ದಿಕಿಗೆ ದೊರೆತ ಅದೃಷ್ಟ ಆಕೆಗಿಲ್ಲ. ಇವೆರಡೂ ಘಟನೆಗಳ ಸಂದೇಶವಾದರೂ ಏನು? ಸಾಧ್ವಿ ಬಹುಸಂಖ್ಯಾತ ಹಿಂದೂ ಸಮುದಾಯಕ್ಕೆ ಸೇರಿದ ಮಹಿಳೆ. ಸಿದ್ದಿಕಿಯಾದರೊ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿ. ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಅನ್ಯಾಯವಾದರೂ ಚಿಂತೆಯಿಲ್ಲ. ಆದರೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿಯ ಕೂದಲು ಕೂಡ ಕೊಂಕಬಾರದು ಎಂಬುದೇ ಸರ್ಕಾರದ ಓಲೈಕೆಯ ನೀತಿ. ಒಂದು ಕಣ್ಣಿಗೆ ಸುಣ್ಣ , ಒಂದು ಕಣ್ಣಿಗೆ ಬೆಣ್ಣೆ ಎಂದು ಹೇಳುವುದು ಇದಕ್ಕೇ ಅಲ್ಲವೆ?
ನ್ಯಾಯಾಲಯಗಳಲ್ಲಿ ಯಾವುದೇ ಮೊಕದ್ದಮೆ ಇತ್ಯರ್ಥವಾಗುವುದು ಸಾಕ್ಷ್ಯಾಧಾರಗಳ ಬಲದ ಮೇಲೆಯೇ. ಕೊಲೆ ಆರೋಪಿಯೊಬ್ಬ ನಿಜವಾಗಿ ಕೊಲೆ ಮಾಡಿದ್ದರೂ ಸೂಕ್ತ ಸಾಕ್ಷ್ಯಾಧಾರಗಳು ದೊರಕದಿದ್ದರೆ ಆತನ ಮೇಲಿನ ಕೊಲೆ ಆರೋಪ ಖುಲಾಸೆಯಾಗುವ ಸಾಧ್ಯತೆಯೇ ಹೆಚ್ಚು. ಅನೇಕ ಬಾರಿ ಎಫ್‌ಐಆರ್ ಸಲ್ಲಿಸುವ ಪೊಲೀಸರ ನಿರ್ಲಕ್ಷ್ಯದಿಂದಲೋ, ಆರೋಪಿಪರ ವಕಾಲತು ವಹಿಸಿರುವ ವಕೀಲರ ತಿಳಿವಳಿಕೆಯ ಕೊರತೆಯಿಂದಲೋ ಅಥವಾ ನ್ಯಾಯಾಧೀಶರು ಸಂಬಂಧಪಟ್ಟ ಮೊಕದ್ದಮೆಯ ಹೂರಣವನ್ನು ಸೂಕ್ತವಾಗಿ ಅರ್ಥಮಾಡಿಕೊಳ್ಳದಿರುವ ಕಾರಣದಿಂದಲೋ ಅಂತಹದೊಂದು ಮೊಕದ್ದಮೆ ಸೂಕ್ತ ರೀತಿಯಲ್ಲಿ ಇತ್ಯರ್ಥವಾಗದಿರುವ ಸಂದರ್ಭಗಳು ಸಾಕಷ್ಟಿವೆ. ಅತ್ಯಾಚಾರಕ್ಕೀಡಾಗುವ ಮಹಿಳೆಯರ ಮೇಲಿನ ಮೊಕದ್ದಮೆಗಳ ಪಾಡು ಇದೇ ರೀತಿ ಹಳ್ಳಹತ್ತಿದ ನಿದರ್ಶನಗಳು ಅನೇಕ. ಅಮಾಯಕ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದ್ದಕ್ಕೆ ಪ್ರಬಲ ಸಾಕ್ಷ್ಯಾಧಾರಗಳು ದೊರಕುವುದಾದರೂ ಹೇಗೆ? ಒಂದು ವೇಳೆ ಅತ್ಯಾಚಾರಕ್ಕೀಡಾದ ಆ ನಿರ್ಭಾಗಿನಿ ನ್ಯಾಯಾಲಯದಲ್ಲಿ ಸತ್ಯ ಹೇಳಿದರೂ ಅದನ್ನು ನಂಬುವವರಾರು? ಏಕೆಂದರೆ ನ್ಯಾಯಾಲಯಕ್ಕೆ ಬೇಕಿರುವುದು ಸಾಕ್ಷ್ಯಾಧಾರಗಳು. ನೊಂದ ಆ ಹತಭಾಗ್ಯೆ ಸಾಕ್ಷ್ಯಾಧಾರಗಳನ್ನು ಒದಗಿಸುವುದಾದರೂ ಎಲ್ಲಿಂದ? ಆಕೆ ದುಃಖದಿಂದ ಸುರಿಸುವ ಕಣ್ಣೀರಿಗೆ ನ್ಯಾಯದೇವತೆ ಕರಗುವುದಿಲ್ಲ. ಕಣ್ಣಿಗೆ ಕಟ್ಟಿದ ಕಪ್ಪು ಬಟ್ಟೆಯನ್ನು ಬಿಚ್ಚುವುದೇ ಇಲ್ಲ. ಭಯೋತ್ಪಾದನೆಯಂತಹ ಮೊಕದ್ದಮೆಗಳಲ್ಲೂ ಇದೇ ಪಾಡು. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವಲ್ಲಿ ಪೊಲೀಸರ ನಿಷ್ಕ್ರಿಯತೆ ಅಥವಾ ತಪ್ಪು ತಿಳಿವಳಿಕೆ ಮುಂತಾದ ಕಾರಣಗಳಿಂದಾಗಿ ಭಯೋತ್ಪಾದನೆಯ ರೂವಾರಿಗಳು ತಪ್ಪಿಸಿಕೊಂಡು ಯಾರೋ ಅಮಾಯಕರು ಸಿಕ್ಕಿ ಹಾಕಿಕೊಂಡು ನರಳಬೇಕಾಗುತ್ತದೆ.
ಮೊನ್ನೆ ಮೊನ್ನೆ ಹೈದರಾಬಾದಿನಲ್ಲಿ ಸಂಭವಿಸಿದ ಸರಣಿ ಸ್ಫೋಟದ ಸಾಕ್ಷ್ಯಗಳು ನಾಶವಾಗಿರುವ ಸಾಧ್ಯತೆ ಇದೆ ಎಂದು ಆಂಧ್ರದ ಐಜಿಪಿಯವರೇ ಸ್ವತಃ ಕಳವಳ ವ್ಯಕ್ತಪಡಿಸಿದ್ದಾರೆ. ಸ್ಫೋಟ ನಡೆದ ಸ್ಥಳವನ್ನು ಪೊಲೀಸರು ಸುತ್ತುವರಿದು ತೆರವುಗೊಳಿಸುವ ಮುನ್ನವೇ ಹಲವು ಜನ ಓಡಾಡಿರುವುದರಿಂದ ಸ್ಫೋಟದ ಸಂಚಿನ ಸುಳಿವು ನೀಡಬಹುದಾಗಿದ್ದ ಸಾಕ್ಷ್ಯಗಳು ನಾಶವಾಗಿರುವ ಸಾಧ್ಯತೆಯಿದೆ ಎಂಬುದು ಐಜಿಪಿ ಹೇಳಿಕೆ. ಮುಖ್ಯಮಂತ್ರಿಗಳು ಸೇರಿದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಗಣ್ಯರು, ಪತ್ರಕರ್ತರು ಹಾಗೂ ಕುತೂಹಲದಿಂದ ಅಲ್ಲಿಗೆ ಧಾವಿಸುತ್ತಿದ್ದ ಜನರಿಂದಾಗಿ ಸಾಕ್ಷ್ಯಗಳು ಕಾಲಿನಡಿಗೆ ಸಿಕ್ಕಿ ನಾಶವಾಗಿರುವ ಸಾಧ್ಯತೆ ಇದೆ ಎಂಬುದು ಅವರ ಅಭಿಮತ. ಆದರೆ ಸ್ಥಳೀಯ ಕೆಲವು ಗಣ್ಯರು ಹೇಳುವ ಅಭಿಪ್ರಾಯವೇ ಬೇರೆ. ಹೈದರಾಬಾದಿನ ಸಾಪ್ತಾಹಿಕವೊಂದರ ಸಂಪಾದಕರು ಹೇಳುವಂತೆ, ಘಟನೆ ನಡೆದ ಬಳಿಕ ಘಟನಾ ಸ್ಥಳಕ್ಕೆ ಯಾರೂ ಬರದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಘಟನೆ ನಡೆದ ಸ್ಥಳದ 1 ಕಿ.ಮೀ. ಸುತ್ತಳತೆಯಲ್ಲಿ ಈಗಲೂ ಯಾರೂ ತಿರುಗಾಡುವಂತಿಲ್ಲವೆಂದು ಅವರು ಹೇಳುತ್ತಾರೆ. ಸ್ಫೋಟಕೃತ್ಯದ ಸಾಕ್ಷ್ಯಗಳನ್ನು ಕಲೆಹಾಕಲು ಪೊಲೀಸರು ಇಷ್ಟೆಲ್ಲ ಸೂಕ್ತ ಬಂದೋ ಬಸ್ತ್ ಮಾಡಿಯೇ ಇರುತ್ತಾರೆ. ಆದರೂ ಸಾಕ್ಷ್ಯಗಳು ನಾಶವಾಗಿರುವ ಸಾಧ್ಯತೆಯಿದೆ ಎಂದು ಐಜಿಪಿ ತಿಪ್ಪೇಸಾರಿಸುತ್ತಿರುವುದೇಕೆ? ಸ್ಫೋಟಕೃತ್ಯಕ್ಕೆ ಕಾರಣರಾದ ಸ್ಥಳೀಯ ಉಗ್ರರನ್ನು ರಕ್ಷಿಸುವ ಹುನ್ನಾರವೆ ಇದು? ಒಟ್ಟಾರೆ ಪೊಲೀಸರು, ವಕೀಲರು, ನ್ಯಾಯಾಧೀಶರು ಯಾವುದೇ ಘಟನೆಯನ್ನು ತಲಸ್ಪರ್ಶಿಯಾಗಿ ಗಮನಿಸದೇ ಹೋದರೆ, ಘಟನೆಯ ಹಿಂದಿನ ಸತ್ಯಾಸತ್ಯತೆಯನ್ನು ಹೊರಹಾಕಲೇಬೇಕೆಂಬ ಇಚ್ಛಾಶಕ್ತಿ ಪ್ರದರ್ಶಿಸದೇ ಇದ್ದರೆ ಅನ್ಯಾಯಕ್ಕೀಡಾಗುವವರು ಮಾತ್ರ ಯಾರೋ ಅಮಾಯಕರು. ಸಾಧ್ವಿಯ ವಿಷಯದಲ್ಲೂ ಹೀಗೆಯೇ ಆಗಿರಬಹುದು ಎಂಬ ಹಲವರ ಶಂಕೆಗೆ ಸಮಾಧಾನ ಹೇಳುವವರಾರು?
***
ನ್ಯಾಯಾಧೀಶರಂತಹ ನಂಬಿಕೆ, ಭರವಸೆಯ ಉನ್ನತ ಹುದ್ದೆ ಅಲಂಕರಿಸಿದ ವ್ಯಕ್ತಿಗಳೂ ವಿವಾದಾಸ್ಪದವಾಗಿ ಬರೆದರೆ, ಹೇಳಿಕೆ ನೀಡಿದರೆ ಸಾರ್ವಜನಿಕರು ನ್ಯಾಯಾಲಯಗಳ ಮೇಲೆ, ನ್ಯಾಯಾಧೀಶರ ಮೇಲೆ ನಂಬಿಕೆ ಇಡುವುದಾದರೂ ಹೇಗೆ? ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷ ನ್ಯಾ.ಮಾರ್ಕಂಡೇಯ ಕಾಟ್ಜೂ ತಮ್ಮ ಎಡಬಿಡಂಗಿ ಹೇಳಿಕೆಗಳ ಮೂಲಕ ನ್ಯಾಯಾಧೀಶರ ಬಗೆಗೆ ಸಾರ್ವಜನಿಕರಿಗಿರುವ ಗೌರವ, ಘನತೆಯನ್ನೇ ಹರಾಜಿಗಿಟ್ಟಿದ್ದಾರೆ. ‘ಗೋಧ್ರಾ ಗಲಭೆಯಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿಯವರ ನಿಗೂಢ ಪಾತ್ರದ ಬಗ್ಗೆ ಇದ್ದ ಅನುಮಾನ ಪರಿಹಾರವಾಗದಿರುವುದರಿಂದ ಅವರನ್ನು ಪ್ರಧಾನಿ ಹುದ್ದೆಗೆ ಹೆಸರಿಸುವುದು ಸರಿಯಲ್ಲ ಎಂಬರ್ಥದ ವಿವಾದಾಸ್ಪದ ಲೇಖನ ಬರೆದು ಚರ್ಚೆಗೆ ಗ್ರಾಸವಾಗಿದ್ದಾರೆ. ಬಿಜೆಪಿಯ ಅರುಣ್ ಜೇಟ್ಲಿಯವರು ಇದಕ್ಕೆ ಖಾರವಾದ ಪ್ರತಿಕ್ರಿಯೆ ನೀಡಿ ‘ಮೂಲ ಕಾಂಗ್ರೆಸ್ಸಿಗರಿಗಿಂತಲೂ ಕಾಟ್ಜೂ ಅವರೇ ಕಾಂಗ್ರೆಸ್‌ಗೆ ಹೆಚ್ಚು ನಿಷ್ಠರಾಗಿದ್ದಾರೆ’ ಎಂದಿದ್ದರೆ, ಯಶವಂತ ಸಿನ್ಹಾ ‘ಈ ದೇಶದ ಪ್ರಧಾನಿ ಯಾರಾಗಬೇಕು? ಎಂಬುದನ್ನು ನಿರ್ಧರಿಸುವುದು ಪತ್ರಿಕಾ ಮಂಡಳಿ ಅಧ್ಯಕ್ಷರ ಕೆಲಸವಲ್ಲ’ ಎಂದು ರೇಗಿದ್ದಾರೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಕಾಟ್ಜೂ ಅವರು ಮಾಡಿರುವ ಟೀಕೆ ಸರಿಯೇ ಇರಬಹುದು. ಕೆಲವರು ಸಮಾನಮನಸ್ಕರು ಅದನ್ನು ಬೆಂಬಲಿಸಲೂಬಹುದು. ಆದರೆ, ಪತ್ರಿಕಾ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿ ನಿಂತು ಇಂತಹ ಹೇಳಿಕೆ ನೀಡುವುದು ಸಮರ್ಥನೀಯವೆನಿಸುವುದಿಲ್ಲ. ಪತ್ರಿಕಾ ಮಂಡಳಿ ಎಂಬ ಶಾಸನಬದ್ಧ ಸಂಸ್ಥೆಯನ್ನು ರಾಜಕೀಯ ವೇದಿಕೆಯಾಗಿ ಬಳಸುವುದು ನ್ಯಾಯ ಸಮ್ಮತವೆನಿಸುವುದಿಲ್ಲ. ಹಿಂದೊಮ್ಮೆ ಶೇ.90ರಷ್ಟು ಭಾರತೀಯರು ಮೂರ್ಖರು ಎಂದು ಹೇಳಿ ಕಾಟ್ಜೂ ವಿವಾದ ಸೃಷ್ಟಿಸಿದ್ದರು. ಮತೊಮ್ಮೆ ಬಹುಪಾಲು ಪತ್ರಕರ್ತರು ಅವಿದ್ಯಾವಂತರು ಎಂದು ಅವರು ಅಪ್ಪಣೆ ಕೊಡಿಸಿದ್ದರು. ಕಾಟ್ಜೂ ಅವರಿಗೆ ರಾಜಕೀಯವಾಗಿ ಆಗಲಿ, ವೈಯಕ್ತಿಕವಾಗಿ ಆಗಲಿ ಅಭಿಪ್ರಾಯ ವ್ಯಕ್ತಪಡಿಸುವ ಎಲ್ಲ ಸ್ವಾತಂತ್ರ್ಯವಿದೆ. ಆದರೆ ಸಾರ್ವಜನಿಕವಾಗಿ ಅದನ್ನು ಅಭಿವ್ಯಕ್ತಪಡಿಸುವಾಗ ಅರೆ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ತನ್ನ ಸ್ಥಾನದ ಘನತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅವರ ಕಾರ್ಯ ವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಹೊಂದಿರುವ ಶಾಸನಬದ್ಧ ಹುದ್ದೆಗೆ ಅವರು ನ್ಯಾಯ ಒದಗಿಸಿದಂತೆ ಕಾಣುವುದಿಲ್ಲ. ತನ್ನ ವ್ಯಾಪ್ತಿಗೆ ಸೇರಿರದ ಕ್ಷೇತ್ರಗಳತ್ತಲೇ ಕಣ್ಣು ಹಾಯಿಸಿ ವಿವಾದ ಸೃಷ್ಟಿಸುವ ಚಪಲ ಅವರದು. ನ್ಯಾಯಾಧೀಶ ಹುದ್ದೆಯನ್ನಲಂಕರಿಸಿದ ವ್ಯಕ್ತಿಗಳೇ ವಿವಾದ ಸೃಷ್ಟಿಸುವ ಈ ಮಟ್ಟಕ್ಕೆ ಇಳಿದರೆ ನಂಬುವುದು ಯಾರನ್ನು? ನ್ಯಾಯಾಧೀಶರಾದವರು ಕೂಡ ಮನುಷ್ಯರೇ. ಅವರಲ್ಲೂ ದೌರ್ಬಲ್ಯಗಳಿರುತ್ತವೆ ಎಂಬುದು ಅರ್ಥವಾಗುವ ಸಂಗತಿಯಾದರೂ ನ್ಯಾಯಾಧೀಶ ಹುದ್ದೆ ಎಂಬುದು ಇತರ ಹುದ್ದೆಗಳಂತಲ್ಲ. ಅದಕ್ಕೆ ಅದರದೇ ಆದ ಘನತೆ, ಗೌರವಗಳಿವೆ. (ಉಳಿದ ಉನ್ನತ ಹುದ್ದೆಗಳಿಗೆ ಯಾವುದೇ ಘನತೆ, ಗೌರವ ಇಲ್ಲವೆಂದು ಇದರರ್ಥವಲ್ಲ.) ತಣ್ಣೀರಾದರೂ ತಣಿಸಿ ಕುಡಿಯಬೇಕು ಎಂಬ ಗಾದೆಯ ಮಾತಿನಂತೆ, ಯಾವುದೇ ವಿಚಾರವಾದರೂ ಅದರ ಕೂಲಂಕಷ ಪರಿಶೀಲನೆ ನಡೆಸಿಯೇ ಆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ಉನ್ನತ ಹುದ್ದೆಯಲ್ಲಿರುವವರ, ಅದರಲ್ಲೂ ನ್ಯಾಯಾಧೀಶರ ಕರ್ತವ್ಯವೆಂಬುದನ್ನು ಮರೆಯುವಂತಿಲ್ಲ. ನ್ಯಾ. ಕಾಟ್ಜೂ ಅವರ ವಿವಾದಾಸ್ಪದ ಹೇಳಿಕೆಗೆ ಪ್ರಮುಖ ರಾಜಕಾರಣಿಗಳು ಖಾರವಾದ ಪ್ರತಿಕ್ರಿಯೆ ನೀಡಿರುವುದರಿಂದ ಕುಬ್ಜವಾಗಿರುವುದು ಕಾಟ್ಜೂ ಅವರ ವ್ಯಕ್ತಿತ್ವವೇ ಹೊರತು ಅವರ ಟೀಕೆಗೊಳಗಾಗಿರುವ ರಾಜಕಾರಣಿಗಳದ್ದಲ್ಲ.
***
ಮುತ್ತಿನ ನಗರಿ ಹೈದಾರಾಬಾದ್‌ನಲ್ಲಿ ನಡೆದ ಅವಳಿ ಸ್ಫೋಟಕ್ಕೆ ಬಲಿಯಾಗಿರುವವರ ಸಂಖ್ಯೆ ಈಗ ದಿನೇದಿನೇ ಹೆಚ್ಚುತ್ತಲೇ ಇದೆ. ಮೊದಲ ದಿನ 13 ಎಂದಿದ್ದದ್ದು ಇದೀಗ 22ಕ್ಕೂ ಹೆಚ್ಚಾಗಿದೆ. 84ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾದರೆ ಆಶ್ಚರ್ಯವಿಲ್ಲ. ಆದರೆ ಇಲ್ಲಿ ಆಶ್ಚರ್ಯವೆನಿಸುವ ಸಂಗತಿಯೆಂದರೆ ಇಂತಹ ಬಾಂಬ್ ಸ್ಫೋಟಗಳನ್ನು ಶಾಶ್ವತವಾಗಿ ನಿಗ್ರಹಿಸಲು ನಮ್ಮ ಸರ್ಕಾರಕ್ಕೇಕೆ ಸಾಧ್ಯವಾಗುತ್ತಿಲ್ಲ ಎಂಬುದು. ಹೈದರಾಬಾದಿನಲ್ಲಿ ಉಗ್ರರ ಬಾಂಬ್ ಸ್ಫೋಟ ಇದೇ ಮೊದಲಲ್ಲ. 2002ರ ನ. 21ರಂದು ಇದೇ ದಿಲ್‌ಸುಖ್ ನಗರದ ಸಾಯಿಬಾಬಾ ಮಂದಿರದ ಬಳಿ ಬಾಂಬ್ ಸಿಡಿದು ಇಬ್ಬರು ಮೃತಪಟ್ಟಿದ್ದರು. 2005 ಅ.12ರಂದು ಬೇಗಂ ಪೇಟೆಯ ಕಮಿಷನರ್ ಅವರ ಟಾಸ್ಕ್ ಫೋರ್ಸ್ ಕಚೇರಿ ಬಳಿ ಸ್ಫೋಟ ಸಂಭವಿಸಿ ಇಬ್ಬರ ಸಾವು. 2007ರ ಮೇ 18ರಂದು ನಡೆದ ಮೆಕ್ಕಾ ಮಸೀದಿಯ ಸ್ಫೋಟದಲ್ಲಿ 9 ಮಂದಿ ಸಾವು. 2007ರ ಆ. 25ರಂದು ಲುಂಬಿಣಿ ಪಾರ್ಕ್ ಬಳಿ ಸಂಭವಿಸಿದ ಸ್ಫೋಟದಲ್ಲಿ 44 ಮಂದಿ ಸಾವು. ಹೈದರಾಬಾದ್ ನಗರವೊಂದರಲ್ಲೇ ಇಷ್ಟೊಂದು ಬಾರಿ ಬಾಂಬ್ ಸ್ಫೋಟ ಸಂಭವಿಸಿದರೂ ಅದನ್ನು ನಿಗ್ರಹಿಸಲಾಗುತ್ತಿಲ್ಲವೆಂದರೆ ಏನರ್ಥ? 2001ರ ಸೆ. 11ರಂದು ಅಮೆರಿಕದ ಅವಳಿ ಕಟ್ಟಡಗಳ ಮೇಲೆ ಲಾಡೆನ್ ದಾಳಿ ನಡೆಸಿ 3 ಸಾವಿರ ಜನರನ್ನು ಕೊಂದು ಹಾಕಿದಾಗ ಆ ಘಟನೆಯನ್ನು ಅಮೆರಿಕ ಸರ್ಕಾರ ಇದುವರೆಗೂ ಮರೆತಿಲ್ಲ. ಅದಾಗಿ ಹತ್ತು ವರ್ಷಗಳ ಬಳಿಕ, ಅಂದರೆ 2011 ಮೇ 2ರಂದು ಪಾಕಿಸ್ಥಾನದ ಅಬೊಟಾಬಾದ್‌ನಲ್ಲಿ ಅಡಗಿ ಕುಳಿತಿದ್ದ ಲಾಡೆನ್‌ನನ್ನು ಹುಡುಕಿ ಕೊಂದಿದ್ದಲ್ಲದೆ ಆತನ ಹೆಣವನ್ನು ಸಮುದ್ರಕ್ಕೆಸೆದು ಅಮೆರಿಕ ಸೇಡು ತೀರಿಸಿಕೊಂಡಿತು. ಕಳೆದ 12 ವರ್ಷಗಳಿಂದ ಅಮೆರಿಕದಲ್ಲಿ ಒಂದೇ ಒಂದು ಭಯೋತ್ಪಾದನಾ ಕೃತ್ಯ ನಡೆದಿಲ್ಲ. ಭಾರತದಲ್ಲಿ ಮಾತ್ರ ಭಯೋತ್ಪಾದನೆಯ ‘ನಿತ್ಯೋತ್ಸವ’ ನಡೆಯುತ್ತಲೇ ಇದೆ ! ಸರ್ಕಾರ ಹಾಗೂ ಜನರು ಇದಕ್ಕೆ ಒಗ್ಗಿ ಹೋಗಿದ್ದಾರೆ. ಅಕಸ್ಮಾತ್ ಕೆಲವು ದಿನ ಎಲ್ಲೂ ಸ್ಫೋಟಕೃತ್ಯ ಸಂಭವಿಸದಿದ್ದರೆ ಜನರಿಗೆ ಆಶ್ಚರ್ಯವೇ ಆಗಬಹುದು ! ಮೇರಾ ಭಾರತ್ ಮಹಾನ್ ಎಂದು ದೇಶವನ್ನು ಕೆಲವರು ಹೊಗಳುವುದು ಇದಕ್ಕೇನಾ?