ಇಂದು ಜಯಂತಿ
ದುರ್ಗಾಬಾಯಿ ದೇಶಮುಖ್‌ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರ್ತಿ, ವಕೀಲೆ, ಸಮಾಜ ಸೇವಕ ಮತ್ತು ರಾಜಕಾರಣಿಯಾಗಿ ಪ್ರಸಿದ್ಧಿ ಹೊಂದಿದವರು. ಇವರು ಆಂಧ್ರ ಮಹಿಳಾ ಸಭಾವನ್ನು ಸ್ಥಾಪಿಸಿದವರು. ಇವರು ಸಮಾಜದ ಸೇವೆಗಾಗಿ ಹಗಲಿರುಳು ಶ್ರಮಿಸಿದರು. ದುರ್ಗಾಬಾಯಿ ದೇಶಮುಖ್‌ ಭಾರತದ ಯೋಜನಾ ಆಯೋಗದ ಸದಸ್ಯರಾಗಿದ್ದವರು. ಇಂದು ಅವರ ಜಯಂತಿ.


ಪರಿಚಯ
ದುರ್ಗಾಬಾಯಿ ದೇಶಮುಖ್‌ ಅವರು ಜುಲೈ 15, 1909 ರಂದು ಆಂಧ್ರಪ್ರದೇಶದ ರಾಜಮಂಡ್ರಿ ಎಂಬಲ್ಲಿ ಜನಿಸಿದರು. ದುರ್ಗಾಬಾಯಿಯು 8ನೇ ವಯಸ್ಸಿನಲ್ಲಿ ಸುಬ್ಬಾ ರಾವ್ ಅವರನ್ನು ವಿವಾಹವಾದರು. ಇವರು ಆರಂಭಿಕ ಶಿಕ್ಷಣವನ್ನು ರಾಜಮಂಡ್ರಿಯಲ್ಲಿ ಮುಗಿಸಿದರು. ನಂತರ ಆಂಧ್ರ ವಿಶ್ವವಿದ್ಯಾಲಯದಲ್ಲಿ ಎಂಎ ಸ್ವಾತಕೋತ್ತರ ಪದವಿ ಪಡೆದರು. ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಕಾನೂನು ಅಧ್ಯಯನ ನಡೆಸಿ, ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲರಾಗಿ ಅಭ್ಯಾಸ ಮಾಡಲು ಪ್ರಾರಂಭಿಸಿದರು.


ಆರಂಭಿಕ ವರ್ಷಗಳಲ್ಲಿ, ದುರ್ಗಾಬಾಯಿ ಭಾರತೀಯ ರಾಜಕೀಯದೊಂದಿಗೆ ಸಂಬಂಧ ಹೊಂದಿದ್ದಳು. 12 ನೇ ವಯಸ್ಸಿನಲ್ಲಿ, ಅವರು ಇಂಗ್ಲಿಷ್-ಮಾಧ್ಯಮ ಶಿಕ್ಷಣವನ್ನು ಹೇರುವುದನ್ನು ವಿರೋಧಿಸಿ ಶಾಲೆಯನ್ನು ತೊರೆದರು. ನಂತರ ಅವರು ಬಾಲಕಿಯರಿಗೆ ಹಿಂದಿ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ರಾಜಮಂಡ್ರಿಯಲ್ಲಿ ಬಾಲಿಕಾ ಹಿಂದಿ ಪಾಠಶಾಲೆಯನ್ನು ಪ್ರಾರಂಭಿಸಿದರು. 14 ನೇ ವಯಸ್ಸಿನಲ್ಲಿ, ಅವರು ಕಾಕಿನಾಡದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಡೆಸಿದ ಸಮ್ಮೇಳನದಲ್ಲಿ ಸ್ವಯಂಸೇವಕರಾಗಿದ್ದರು.


ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪಾತ್ರ
ದುರ್ಗಾಬಾಯಿ ದೇಶಮುಖ್‌ ಅವರು ಬ್ರಿಟಿಷ್ ರಾಜ್‌ನಿಂದ ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟದಲ್ಲಿ ಭಾಗವಹಿಸಿದ್ದರು. ಮಹಾತ್ಮ ಗಾಂಧಿಯವರ ಅನುಯಾಯಿಯಾಗಿದ್ದರು. ಅವರು ನಾಗರಿಕ ಅಸಹಕಾರ ಚಳವಳಿಯ ಸಮಯದಲ್ಲಿ ಗಾಂಧಿ ನೇತೃತ್ವದ ಉಪ್ಪಿನ ಸತ್ಯಾಗ್ರಹ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು.ಈ ಚಳವಳಿಯಲ್ಲಿ ಅವರು ಮಹಿಳಾ ಸತ್ಯಾಗ್ರಹಿಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಬ್ರಿಟಿಷ್ ರಾಜ್ ಅಧಿಕಾರಿಗಳು ಅವರನ್ನು 1930 ರಲ್ಲಿ ಮೂರು ಬಾರಿ ಬಂಧಿಸಲು ಕಾರಣವಾಯಿತು. ದೇಶಮುಖ್‌ ಅವರು ಜೈಲಿನಲ್ಲಿದ್ದು ಇಂಗ್ಲಿಷ್‌ ಅಧ್ಯಯನ ನಡೆಸಿದರು. ನಂತರ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಲಾಯಿತು.


ಸಮಾಜ ಸೇವೆ
ದುರ್ಗಾಬಾಯಿ ದೇಶಮುಖ್‌ ಅವರು ಸ್ವಾತಂತ್ರ್ಯ ನಂತರ ಕೇಂದ್ರ ಸಮಾಜ ಕಲ್ಯಾಣ ಮಂಡಳಿ ಮತ್ತು ಮಹಿಳಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಮಂಡಳಿಯಂತಹ ಪ್ರಮುಖ ರಾಷ್ಟ್ರೀಯ ಸಂಸ್ಥೆಗಳನ್ನು ಸ್ಥಾಪಿಸಿದರು. 1958ರಲ್ಲಿ, ಅವರು ಹೆಣ್ಣುಮಕ್ಕಳ ಮತ್ತು ಮಹಿಳಾ ಶಿಕ್ಷಣದ ರಾಷ್ಟ್ರೀಯ ಸಮಿತಿಯ ಮುಖ್ಯಸ್ಥರಾಗಿದ್ದರು. ಅವರು ಆ ಮಂಡಳಿಯ ಮೊದಲ ಅಧ್ಯಕ್ಷೆಯಾಗಿ ಮಹಿಳೆಯರಿಗೆ ಶಿಕ್ಷಣ, ತರಬೇತಿಯನ್ನು ನೀಡಿದರು. ಜೊತೆಗೆ ಅವರು ಚೀನಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತ್ಯೇಕ ಕೌಟುಂಬಿಕ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಒತ್ತಾಯಿಸಿದ್ದರು. ಅವರು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಎಂಸಿ ಚಾಗ್ಲಾ ಮತ್ತು ನ್ಯಾಯಮೂರ್ತಿ ಪಿಬಿ ಗಜೇಂದ್ರಗಡಕರ್ ಅವರೊಂದಿಗೆ ಈ ವಿಚಾರವನ್ನು ಚರ್ಚಿಸಿದರು. ನಂತರ ಕೌಟುಂಬಿಕ ನ್ಯಾಯಾಲಯಗಳ ಕಾಯಿದೆಯನ್ನು 1984 ರಲ್ಲಿ ಜಾರಿಗೊಳಿಸಲು ಯಶಸ್ವಿಯಾದರು. ಅವರು ಭಾರತ ಸರ್ಕಾರದಿಂದ ಸ್ಥಾಪಿಸಲಾದ ಮಹಿಳಾ ಶಿಕ್ಷಣದ ರಾಷ್ಟ್ರೀಯ ಮಂಡಳಿಯ ಮೊದಲ ಅಧ್ಯಕ್ಷರಾಗಿದ್ದರು.


ಪ್ರಶಸ್ತಿ
ಭಾರತದಲ್ಲಿ ಸಾಕ್ಷರತೆಯ ಉತ್ತೇಜನಕ್ಕೆ ನೀಡಿದ ಕೊಡುಗೆಗಾಗಿ ದುರ್ಗಾಬಾಯಿ ಅವರಿಗೆ 1971 ರಲ್ಲಿ ನೆಹರು ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಯಿತು. ನಂತರ 1975 ರಲ್ಲಿ ಭಾರತ ಸರ್ಕಾರದಿಂದ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.1982ರಲ್ಲಿ ಅವರ ಸ್ಮರಣಾರ್ಥ ಅಂಚೆ ಇಲಾಖೆಯು ಅಂಚೆ ಸ್ಟ್ಯಾಂಪ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಮಹಿಳಾ ಕಲ್ಯಾಣ ಮತ್ತು ಸಬಲೀಕರಣಕ್ಕಾಗಿ ಅತ್ಯುತ್ತಮ ಕೊಡುಗೆಗಾಗಿ ಸ್ವಯಂಸೇವಾ ಸಂಸ್ಥೆಗಳನ್ನು ಗುರುತಿಸಲು ಕೇಂದ್ರ ಸಮಾಜ ಕಲ್ಯಾಣ ಮಂಡಳಿಯು ಅವರ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ.


ದುರ್ಗಾಬಾಯಿ ದೇಶಮುಖ್‌ ಅವರು ಮೇ 9, 1981ರಂದು ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.