10/03/1826 ರಂದು ಮದ್ರಾಸ್ ಪ್ರೆಸಿಡೆನ್ಸಿಯ ಗವರ್ನರ್ ಥಾಮಸ್ ಮುನ್ರೋ ಬ್ರಿಟಿಷ್ ಸರ್ಕಾರಕ್ಕೆ ಒಂದು ರಿಪೋರ್ಟ್ ಕಳುಹಿಸುತ್ತಾರೆ. ಆಗ ಮದ್ರಾಸ್ ಪ್ರೆಸಿಡೆನ್ಸಿಯೆಂದರೆ ಒರಿಸ್ಸಾದ ಕೆಲವು ಭಾಗಗಳು ಮತ್ತು ಸಂಪೂರ್ಣ ದಕ್ಷಿಣ ಭಾರತ. ಕೃಷ್ಣದೇವರಾಯರ ಕಾಲದಲ್ಲಿದ್ದ ವಿಜಯನಗರ ಸಾಮ್ರಾಜ್ಯದಷ್ಟಿತ್ತು.

ಸುಮಾರು ನಾಲ್ಕುವರ್ಷಗಳ ಅವಧಿಯಲ್ಲಿ ಒಂದೊಂದು ಹಳ್ಳಿಗೂ ಹೋಗಿ ಸಮೀಕ್ಷೆ ನಡೆಸಿದ ಅಂದಿನ ಶಿಕ್ಷಣ ವ್ಯವಸ್ಥೆಯ ವರದಿಯದು. ಏನಿತ್ತು ಆ ವರದಿಯಲ್ಲಿ ಬ್ರಿಟಿಷ್ ಆಡಳಿತವನ್ನು ಚಕಿತಗೊಳಿಸುವಂತದ್ದು.

ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯ ಜನಸಂಖ್ಯೆ ಇದ್ದದ್ದು 1,28,50,941. ಶಾಲೆಗಳ ಸಂಖ್ಯೆ 12,498. ಮಂಗಳೂರಿನ ಅಂದಿನ ಕಲೆಕ್ಟರು ಕಾರಣಾಂತರಗಳಿಂದ ಈ ಸಮೀಕ್ಷೆಯಲ್ಲಿ ಪಾಲುಗೊಳ್ಳಲಿಲ್ಲ, ಇನ್ನು ಹಲವಾರು ಗುರುಕುಲಗಳ, ಮನೆಯಲ್ಲೇ ನಡೆಯುತ್ತಿದ್ದ ಖಾಸಗಿ ಪಾಠಶಾಲೆಗಳ ಲೆಕ್ಕವೂ ಸಿಗಲಿಲ್ಲ. ಆದರೂ ಸರಾಸರಿ ಪ್ರತಿ ಸಾವಿರ ಜನಸಂಖ್ಯೆ.. ಅಂದರೆ ಒಂದು ಹಳ್ಳಿಯ ಜನಸಂಖ್ಯೆಗೆ ಒಂದು ಶಾಲೆ ಇತ್ತು.

ಬಹುತೇಕ ಹಳ್ಳಿಗಳಲ್ಲಿ 35% ನಷ್ಟು ಜಮೀನು ದೇವಾಲಯದ ಜಮೀನಾಗಿರುತ್ತಿತ್ತು. ಇದಕ್ಕೆ ಕಂದಾಯ ಕಟ್ಟುವಂತಿರಲಿಲ್ಲ. ಇದರ ಆದಾಯದಲ್ಲಿ ದೇವಸ್ಥಾನದ, ಧರ್ಮಶಾಲೆಗಳ, ಪಾಠಶಾಲೆಗಳ, ಗುರುಕುಲಗಳ ಖರ್ಚುವೆಚ್ಚ ನಡೆಯುತ್ತಿತ್ತು.  ಇದೊಂದು ಸ್ವಯಂ ಪೋಷಿತ ವ್ಯವಸ್ಥೆ, ಯಾವ ಅನುದಾನವನ್ನು ಅವಲಂಬಿಸಿರಲಿಲ್ಲ. ಹಾಗಾಗಿ ಮೊಘಲರ ದಾಳಿಯಾಗಲೀ, ಬ್ರಿಟಿಷರ ದೌರ್ಜನ್ಯವಾಗಲೀ ಈ ವ್ಯವಸ್ಥೆಯನ್ನು ಕದಲಿಸಲಾಗಲಿಲ್ಲ. ಇದೇ ವರದಿಯನ್ನು ಮುನ್ರೋವನ್ನು  ಇಂಗ್ಲೆಂಡಿಗೂ ತಲುಪಿಸಿದ್ದು.

ಒಂದು ಚಿಕ್ಕ ಉಪಕಥೆ…ಮುನ್ರೋ ಅವರ ಬಗ್ಗೆ….

ಮಂತ್ರಾಲಯದಲ್ಲಿ ಇವರಿಗೆ ರಾಘವೇಂದ್ರ ಸ್ವಾಮಿಗಳ ದರ್ಶನವಾಗಿತ್ತಂತೆ…ಹೇಗೆ ?
ಬಳ್ಳಾರಿಯಲ್ಲಿದ್ದ ಕಲೆಕ್ಟರು ಮಂತ್ರಾಲಯದ ಮಠದ ಬಗ್ಗೆ ದೂರು ಕೊಡುತ್ತಾರೆ…ಈ ದೇವಾಲಯ ಕಪ್ಪ ಕಾಣಿಕೆ ಕೊಡುತ್ತಿಲ್ಲವೆಂದು…ನೋಡಿ ಮಠವನ್ನೂ ಬಿಡುತ್ತಿರಲಿಲ್ಲ ಈ ಖದೀಮರು. ಆಗ ಖುದ್ದು ಮನ್ರೋರವರೆ ಮಂತ್ರಾಲಯಲಕ್ಕೆ ಬರುತ್ತಾರೆ. ಹೈದರಾಲಿ ಮತ್ತು ಟಿಪ್ಪುವಿನಂತಹ ಹಿಂದೂ ದ್ವೇಷಿಯನ್ನು ಕೊಂದ ಮುನ್ರೋ ಆಗಾಗಲೇ ಹಿಂದುಗಳ ಸ್ನೇಹಿಗಳಾಗಿರುತ್ತಾರೆ. ಮಂತ್ರಾಲಯದ ಮಠದ ಗೌರವವನ್ನು ಕಾಪಾಡಿ ಒಬ್ಬರೇ ಗರ್ಭಗುಡಿಯ ಪ್ರವೇಶಿಸುತ್ತಾರೆ. ಇಲ್ಲಿ ಸ್ವಲ್ಪ ಸಮಯ ಧ್ಯಾನ ಮಾಡುತ್ತಾರೆ.  ಆಗ ಅವರಿಗೆ ರಾಘವೇಂದ್ರ ಸ್ವಾಮಿಗಳು ಪ್ರತ್ಯಕ್ಷವಾದರು..ಮತ್ತು ಈ ಮಠದ ತಂಟೆಗೆ ಬರಬೇಡಿ ಎಂದು ಆದೇಶಿಸಿದರು ಎಂದು ಮುಂದೊಂದು ದಿನ ಅವರ ಇನ್ನೊಂದು ಪುಸ್ತಕದಲ್ಲಿ ಬರೆಯುತ್ತಾರೆ.

ಇತ್ತೀಚೆಗೆ ಥಾಮಸ್ ಮುನ್ರೋರ ಐದನೇ ತಲೆಮಾರಿನ ಪೀಳಿಗೆಯವರು ರಾಯರ ದರ್ಶನಕ್ಕೆಂದೇ ಭಾರತಕ್ಕೆ ಬಂದಿದ್ದರು.

Anyway ಈಗ ವಿಷಯಕ್ಕೆ ಬರೋಣ…

ಈ ಶಾಲೆಗಳಲ್ಲಿ ಸುಮಾರು 24% ರಿಂದ 30% ನವರೆಗೂ ಬ್ರಾಹ್ಮಣ, ವೈಶ್ಯ ಮತ್ತು ಕ್ಷತ್ರಿಯರಿದ್ದರೆ ಸುಮಾರು 65% ಶೂದ್ರರಿರುತ್ತಾರೆ ಮತ್ತು 10%-14% ಇತರೆ ಜಾತಿಯವರಿರುತ್ತಾರೆ ಎಂಬುವ ಅಂಶವನ್ನು ಅಂಕಿ ಅಂಶಗಳ ಆಧಾರದೊಂದಿಗೆ ಈ ವರದಿಯಲ್ಲಿ ನಮೂದಿಸಿರುತ್ತಾರೆ. ಅಲ್ಲಿಗೆ…ಶಿಕ್ಷಣದಲ್ಲಿ ಬರೀ ಬ್ರಾಹ್ಮಣರಿಗೆ ಮಹತ್ವವಿತ್ತು ಎನ್ನುವ ಮಿಥ್ಯವನ್ನು ಬಹಿರಂಗಪಡಿಸಿದ್ದರು. ಇದು ಪ್ರಾಥಮಿಕ ಶಿಕ್ಷಣದ ವರದಿ.

ಉನ್ನತ ವಿದ್ಯಾಕೇಂದ್ರಗಳಲ್ಲಿ, ವೇದ ಉಪನಿಷತ್ತುಗಳ ವಿಶ್ವ ವಿದ್ಯಾಲಯದ ಮಟ್ಟದ ಆಧ್ಯಯನದಲ್ಲಿ ಮಾತ್ರ ಬ್ರಾಹ್ಮಣರ ಸಂಖ್ಯೆ ಹೆಚ್ಚಾಗಿತ್ತು ಎನ್ನುವ ಸಂಗತಿಯೂ ಬಯಲಾಗುತ್ತದೆ.
ಈ ಶಾಲೆಗಳು ನಡೆಯುತ್ತಿದ್ದದ್ದು ದೇವಸ್ಥಾನಗಳ ಪ್ರಾಂಗಣದಲ್ಲಿ, ಅಥವಾ ಮಠದ ಅಂಗಳದಲ್ಲಿ ,ಮರದ ಕೆಳಗೆ ಹೀಗೆ ಪ್ರಕೃತಿಯ ಮಡಿಲಿನಲ್ಲಿ, ಶುಧ್ಧಗಾಳಿಯ ವಾತಾವರಣದಲ್ಲಿ. ಮರಳಿನ ಮೇಲೆ, ಬಾಳೆಎಲೆ, ತಾಳೆಗರಿಗಳ ಮೇಲೆ ಅಕ್ಷರಾಭ್ಯಾಸ ಮತ್ತು ಸಂಖೆಗಳ ಅಭ್ಯಾಸ ನಡೆಯುತ್ತಿತ್ತು.
ಕರಕುಶಲತೆಗೆ ತುಂಬಾ ಪ್ರಾಮುಖ್ಯತೆ ಇರುತ್ತಿತ್ತು. ಆಯಾ ಪ್ರದೇಶಗಳ ಅವಶ್ಯಕತೆಗೆ ಅನುಸಾರವಾಗಿ, ಮತ್ತು ವಿಧ್ಯಾರ್ಥಿಯ ಕುಲಕಸುಬಿನ ಆಧಾರದ ಮೇಲೆ ಈ ಕೌಶಲ್ಯವನ್ನು ಕಲಿಸಲಾಗುತ್ತಿತ್ತು.

ಇದೇ ತರಹದ ಸಮೀಕ್ಷೆಗಳು ಇತರೆ ಪ್ರಾಂತ್ಯಗಳಿಂದಲೂ ಬರಲಾರಂಬಿಸಿದವು. ಬಂಗಾಳ, ಬಿಹಾರ, ಬಾಂಬೆ ಪ್ರೆಸಿಡೆನ್ಸಿ ಮತ್ತು ಪಂಜಾಬಿನಿಂದಲೂ ಹೆಚ್ಚೂ ಕಡಿಮೆ ಇದೇ ಮಾದರಿಯ ವರದಿಗಳು ಬರತೊಡಗಿದವು.
ದೇಶವನ್ನು ಕೊಳ್ಳೆ ಹೊಡೆಯಲೆಂದೇ ಬಂದ ಬ್ರಿಟಿಷರಿಗೆ ಇದೊಂದು ಅನಿರೀಕ್ಷಿತ ಸಂಗತಿ. ಸ್ವಾವಲಂಬಿಯಾಗಿ ನಡೆಯುತ್ತಿದ್ದ ಈ ಶಿಕ್ಷಣ ವ್ಯವಸ್ಥೆಯ ಮಾದರಿಯನ್ನು ಇಂಗ್ಲೆಂಡಿನಲ್ಲೂ ನಡೆಸುವ ಪ್ರಯೋಗಕ್ಕೆ ಮುಂದಾದರು.

ಅಲ್ಲಿವರೆಗೂ ಬ್ರಿಟನ್ನಿನಲ್ಲಿ ಒಂದು ದೇಶಮಟ್ಟದ ಶಿಕ್ಷಣ ನೀತಿಯೇ ಇರಲಿಲ್ಲ.
ಕಾರ್ಖಾನೆಗಳಿಗೆ ಹೋಗುತ್ತಿದ್ದ ಕಾರ್ಮಿಕರು ತಮ್ಮ ಮಕ್ಕಳನ್ನು ಫ್ಯಾಕ್ಟರಿಯ ಹೊರಗೇ ಇದ್ದ ಒಂದು ಕೋಣೆಯಲ್ಲಿ ಅಲ್ಲಿಯ ಸಿಬ್ಬಂದಿಯ ಸುಪಾರ್ದಿನಲ್ಲಿ ಬಿಟ್ಟು ಹೋಗುತ್ತಿದ್ದರು. ಈ ಕೋಣೆಗಳನ್ನು ‘ಸ್ಕೂಲ್’ ಎಂದು ಕರೆಯುತ್ತಿದ್ದರು. ಹೀಗೆ ಹುಟ್ಟಿತು ಸ್ಕೂಲ್ ಎನ್ನುವ ಪದ. ಶ್ರೀಮಂತರ ಮಕ್ಕಳಿಗೆ “ಗ್ರಾಮರ್ ಸ್ಕೂಲ್” ಎನ್ನುವ ಅತಿ ದುಬಾರಿ ಫೀಸಿನ ಸ್ಕೂಲಿನ ವ್ಯವಸ್ಥೆಯಿತ್ತು.
ಆಕ್ಸಫೆರ್ಡ್ ಮತ್ತು ಕೇಂಬ್ರಿಡ್ಜ್ ಎರಡು ವಿಶ್ವವಿದ್ಯಾಲಯದ ಕೇಂದ್ರಗಳು ಉನ್ನತ ಶಿಕ್ಷಣದ ವ್ಯವಸ್ಥೆಯನ್ನು ಬಿಟ್ಟರೆ ಅಂದಿನ ಬ್ರಿಟನ್ನಿನಲ್ಲಿ ಶಿಕ್ಷಣ ಶ್ರೀಮಂತರಿಗೆ ಮಾತ್ರ ಲಭ್ಯವಿರುವ  ಅವಕಾಶವಾಗಿತ್ತು.

ಅದೇ ಸಮಯಕ್ಕೆ ಭಾರತಕ್ಕೆ ‌ಥಾಮಸ್ ಮೆಕ್ಕಾಲೆ ಎನ್ನುವ ಖೂಳನ ಆಗಮನವಾಗುತ್ತದೆ. ಭಾರತದ ಅಪಾರ ಜನಸಂಖ್ಯೆಯನ್ನು ಹದ್ದುಬಸ್ತಿನಲ್ಲಿಟ್ಟು ಅವರಿಂದ ತೆರಿಗೆ, ಕಂದಾಯ ವಸೂಲು ಮಾಡಲು ಕೆಲವೇ ಬ್ರಿಟಿಷರ ಕೈಯಲ್ಲಿ ಸಾಧ್ಯವಾಗದ ಕೆಲಸ ಹಾಗಾಗಿ ಭಾರತೀಯರಿಗೆ ಯೂರೋಪ್ ಮಾದರಿಯ ಶಿಕ್ಷಣದ ಮೂಲಕ ಅವರನ್ನು ತಮ್ಮ ಆಡಳಿತಕ್ಕೆ ಬೇಕಾಗುವ ಗುಮಾಸ್ತರು, ಲೆಕ್ಕಿಕರು ಮತ್ತು ಸೈನಿಕರ ಹಿಂಡನ್ನು ತಯಾರಿಸಿ ತಮ್ಮ ಖರ್ಚು ಕಡಿಮೆ ಮಾಡಿಕೊಳ್ಳುವ ಹುನ್ನಾರ ನಡೆಸುತ್ತಾರೆ. ಇದರ ಕರ್ತೃವೇ ಥಾಮಸ್ ಮೆಕ್ಕಾಲೆ.

ಆದರೆ ಇದು ಫ್ರೌಡಶಾಲೆಯ ಹಂತದ ಶಿಕ್ಷಣ. ಹಾಗಾದರೆ ಪ್ರಾಥಮಿಕ ಶಿಕ್ಷಣದ ಗತಿ ಏನು. ಬ್ರಿಟಿಷರಿಗೆ ಮೊದಲೇ ಇಂತಹ ಶಿಕ್ಷಣ ವ್ಯವಸ್ಥೆಯನ್ನು ಅರಗಿಸಿ ಕೊಳ್ಳಲಾಗುತ್ತಿರಲಿಲ್ಲ. 35% ನಷ್ಟು ದೇವಸ್ಥಾನದ ಕಂದಾಯ ರಹಿತ ಆಸ್ತಿಯನ್ನು 5% ಗೆ ಇಳಿಸಿ ಬಿಟ್ಟರು ಹಾಗಾಗಿ ಕ್ರಮೇಣ ಈ ವ್ಯವಸ್ಥೆ ಮುರಿದು ಬಿತ್ತು. ಸರ್ಕಾರದ ಅನುದಾನದಲ್ಲಿ ಶುರುವಾದ ಇಂಗ್ಲೀಷ್ ಶಾಲೆಗಳು ಹತ್ತು ಹಳ್ಳಿಗಳಿಗೊಂದರಂತೆ ನಡೆಯುತ್ತಿದ್ದವು.
ಈ ಶಾಲೆಗಳ ಶುಲ್ಕವೂ ಹೆಚ್ಚಿದ್ದರಿಂದ ಬರೀ ಉಳ್ಳವರಿಗೆ ಮಾತ್ರ ಶಿಕ್ಷಣ ಎನ್ನುವಂತಾಯಿತು.
ಕೆಲವೇ ವರ್ಷಗಳಲ್ಲಿ ಶಿಕ್ಷಿತರ ಸಂಖ್ಯೆ ಪಾತಾಳಕ್ಕೆ ಕುಸಿದು ಹೋಯಿತು.

1931 ರಲ್ಲಿ ದುಂಡುಮೇಜಿನ ಪರಿಷತ್ತಿನಲ್ಲಿ ಈ ವಿಷಯವನ್ನು ಎತ್ತಿದ ಗಾಂಧೀಜಿಯವರ ಮಾತನ್ನು ಬ್ರಿಟಿಷ್ ಆಡಳಿತದ ಅಧಿಕಾರಿಗಳು ನಂಬಲೇ ಇಲ್ಲ. ನಾವು ಭಾರತೀಯರಿಗೆ ಇಂಗ್ಲೀಷ್ ಕಲಿಸಿ ಕೊಟ್ಟಿರುವೆವು ಎಂಬ ಜಂಬದಿಂದಲೇ ಮೆರೆದರು. ಆದರೆ ಮಾಡಿದ್ದೇನು ಶಿಕ್ಷಣದಲ್ಲೇ ಅಗ್ರರಾಷ್ಟ್ರವೆಂದು ಮೆರೆಯುತ್ತಿದ್ದ ದೇಶವನ್ನು ಇಂಗ್ಲೀಷ್ ಮಾತಾಡುವ ಅಶಿಕ್ಷಿತ ದೇಶವನ್ನಾಗಿ ಪರಿವರ್ತನೆ ಮಾಡಿ ಹೊರಟು ಹೋದರು ಮುಠ್ಠಾಳರು.

ಅದೇ ಸಮಯದಲ್ಲಿ ಇನ್ನೊಂದು ಅವಘಡ ನಡೆದು ಹೋಗುತ್ತದೆ. ಮುಸ್ಲಿಮರಿಗೆ ಶರಿಯಾ ಕಾನೂನಿನಂತೆ ಹಿಂದೂಗಳಿಗೂ ಒಂದು ವೈಯಕ್ತಿಕ ಕಾನೂನು ನಿರ್ಮಿಸಿದರರೆ ಏನಿದ್ದರೂ ಅವರವರೇ ನಿಭಾಯಿ‌ಸಿಕೊಳ್ಳುತ್ತಾರೆ ಎಂದು ಅರೆಬರೆ ಭಾಷಾಂತರಿಸಿದ ಮನುಸ್ಮೃತಿಯನ್ನು ಅರ್ಥ ಮಾಡಿಕೊಳ್ಳದೆ, ಅವರು ಯೂರೋಪಿನಲ್ಲಿ ಮತ್ತು ದಕ್ಷಿಣ ಅಮೆರಿಕದಲ್ಲಿ ಜಾರಿಗೊಳಿಸಿದ್ದ “Systema de Caste”ಎನ್ನುವ ಜಾತಿ ವಿಭಜನೆಯ ಪದ್ದತಿಯನ್ನು ಜಾರಿಗೊಳಿಸಿಬಿಡುತ್ತಾರೆ.  ಇದರ ಕರ್ತೃ ಸರ್ ಹೆರ್ಬರ್ಟ ಹೋಪ್ ಎನ್ನುವ ಹೋಪ್ಲೆಸ್ ಫೆಲೋ.  ನಮ್ಮವೇ ಗೋತ್ರ, ಕುಲ, ಜಾತಿ ಮತಗಳಿದ್ದರೂ ಒಂದು ಮಟ್ಟದ ಸಾಮರಸ್ಯತೆ ಇರುತ್ತಿತ್ತು. ಆದರೆ ನಮ್ಮ ಸಂಸ್ಕೃತಿಯಲ್ಲೇ ಇರದ ಈ Caste ಎನ್ನುವ ಪದ ಭಾರತೀಯರನ್ನು ಇನ್ನಿಲ್ಲದಂತೆ ಒಡೆದು ಹಾಕಿತು.ಇದರಿಂದ ಆದ ಪರಿಣಾಮ, ಅನಾಹುತವನ್ನು ಈಗಲೂ ಸರಿಪಡಿಸಲು ಅಸಾಧ್ಯವಾಗುತ್ತಿದೆ.
ಈ 1824 ರ ಈ ವರದಿಯನ್ನು  ಲಂಡನ್ನಿನ ಬ್ರಿಟಿಷ್ ಗ್ರಂಥಾಲಯದ ನೆಲಮಾಳಿಗೆಯಲ್ಲಿ ಹುದುಗಿ ಹೋಗಿದ್ದನ್ನು ಹೊರತೆಗೆದು
ಶ್ರೀ ಧರಂಪಾಲರು (1922-2006)
” Beautiful Tree” ಎನ್ನುವ ಪುಸ್ತಕವೊಂದನ್ನು ಲಂಡನ್ನಿನ ಬ್ರಿಟಿಷ್ ಗ್ರಂಥಾಲಯದಲ್ಲೇ ಕುಳಿತು ಬರೆದಿದ್ದಾರೆ. ಭಾರತದ ಸುಂದರವಾದ ಶಿಕ್ಷಣ ಪದ್ದತಿಯನ್ನು ಅರ್ಥ ಮಾಡಿಕೊಳ್ಳಲಾಗದ ಅಥವಾ ಅರಗಿಸಿಕೊಳ್ಳಲಾಗದ ಬ್ರಿಟಿಷರು ಹೇಗೆ ಅದನ್ನು ಬೇರು ಸಮೇತ ಕಿತ್ತೊಗೆದು ಅದರ ಬೇರನ್ನು ಪರೀಕ್ಷೆ ಮಾಡಲು ಹೊರಟಿದ್ದರು ಎನ್ನುವ ಕ್ರೂರ ವಿಡಂಬನೆ ಈ ಮೆಕ್ಕಾಲೆಯ ಮಕ್ಕಳಿಗೆ ಅರ್ಥವಾಗುತ್ತಿಲ್ಲವೇಕೆ?

ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು 6,38,000 ಹಳ್ಳಿಗಳು, 5000 ಪಟ್ಟಣಗಳು, 400 ನಗರಗಳಿವೆಯಂತೆ. ಕನಿಷ್ಟ ಪಕ್ಷ ಪ್ರತಿ ಹಳ್ಳಿಗೊಂದರಂತೆ ದೇವಸ್ಥಾನಗಳಿವೆ. ಸ್ವಲ್ಪ ಆಲೋಚಿಸಿ, ಪುನಃ ಮೊದಲಿನಂತೆ ಪ್ರತಿ ಹಳ್ಳಿಯ ದೇವಸ್ಥಾನಗಳಿಗೆ ಸ್ವಾಯತ್ತತೆ ನೀಡಿದರೆ ಹೇಗಿರುತ್ತದೆ?
ಧರ್ಮ, ಸಂಸ್ಕೃತಿ, ಸಂಸ್ಕಾರ, ಮೌಲ್ಯಾಧಾರಿತ ಶಿಕ್ಷಣ ಎಲ್ಲವೂ ಉಳಿಯುತ್ತದೆ. ಆದರೆ ಇಂತಹ ಕಾಮಧೇನು ಕಲ್ಪವೃಕ್ಷಗಳನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಶಕ್ತಿಗಳು ಹಾಗಾಗಲು ಬಿಡುತ್ತಾರೆಯೇ?

✍️.….ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com

Leave a Reply

Your email address will not be published.

This site uses Akismet to reduce spam. Learn how your comment data is processed.