ಇಂದಿಗೆ ಸರಿಯಾಗಿ 37 ವರ್ಷಗಳ ಹಿಂದೆ, ಅಂದರೆ 1975ರ ಜೂನ್ 25ರಂದು ಆಗ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಆಂತರಿಕ ತುರ್ತುಪರಿಸ್ಥಿತಿಯನ್ನು ಸಾರಿ ಮೂಲಭೂತ ಸ್ವಾತಂತ್ರ್ಯಗಳನ್ನು ಹೊಸಗಿ ಹಾಕಿದ್ದರು ಎನ್ನುವುದು ಈಗ ಇತಿಹಾಸ. ಆ ತುರ್ತು ಪರಿಸ್ಥಿತಿ 1975 ರ ಜೂನ್ 25 ರ ಮಧ್ಯರಾತ್ರಿಯಿಂದ ಜಾರಿಯಾಗಿ 1977ರ ಮಾರ್ಚ್ 21ರ ಬೆಳಿಗ್ಗೆ ಮುಕ್ತಾಯಗೊಂಡಿತ್ತು. ಆ ಅವಧಿಯಲ್ಲಿ ಪ್ರಜಾತಂತ್ರದ ಉಳಿವಿಗಾಗಿ ನಡೆದದ್ದು ನಿಜವಾಗಿ 2ನೇ ಸ್ವಾತಂತ್ರ್ಯ ಹೋರಾಟ. ಅಂದು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದಟಛಿ ಹೋರಾಡಿದ್ದರೆ, 1975 ರಲ್ಲಿ ಸ್ವಾತಂತ್ರ್ಯಕ್ಕಾಗಿ ನಮ್ಮವರ ವಿರುದಟಛಿವೇ ಹೋರಾಡಬೇಕಾಯಿತೆನ್ನುವುದು ವಿಪರ್ಯಾಸದ ಸಂಗತಿ. ತುರ್ತು ಪರಿಸ್ಥಿತಿಯ ವಿರುದಟಛಿ ಆಗ ಎಂತಹ ಹೋರಾಟ ನಡೆಯಿತು, ತುರ್ತುಪರಿಸ್ಥಿತಿ ಸಾರಿ ದೇಶವನ್ನು ಸರ್ವಾಧಿಕಾರದ ಕಪಿಮುಷ್ಟಿ ಯಲ್ಲಿ ಹಿಡಿದಿಟ್ಟಿದ್ದ ಇಂದಿರಾ ಗಾಂಧಿ ಮತ್ತವರ ಅನುಚರರು ಹೇಗೆ ಸೋತು ಮೂಲೆಪಾಲಾದರು ಎನ್ನುವುದೂ ಈಗ ಇತಿಹಾಸ.
37 ವರ್ಷಗಳ ಹಿಂದಿನ ತುರ್ತುಪರಿಸ್ಥಿತಿಯ ಬಗ್ಗೆ ಈಗ ವಿಶ್ಲೇಷಣೆ ನಡೆಸುವುದು ಪ್ರಸ್ತುತವಾಗಲಾರದಾದರೂ ಕೆಲವು ಸಂಗತಿಗಳ ಬಗ್ಗೆ ಮೆಲುಕು ಹಾಕುವುದು ತಪ್ಪಲ್ಲವೆನಿಸುತ್ತದೆ. ಏಕೆಂದರೆ ಮೂಲಭೂತ ಸ್ವಾತಂತ್ರ್ಯಗಳಿಗೆ ಧಕ್ಕೆ ಒದಗಿದ ಆ ಸಂದರ್ಭದಲ್ಲಿ ಜನರು, ದೇಶದ ರಾಜಕೀಯ ನಾಯಕರು, ಗಣ್ಯರು, ಬುದಿಟಛಿಜೀವಿಗಳು, ನಿಜವಾದ ಹೋರಾಟಗಾರರು ಹೇಗೆ ನಡೆದುಕೊಂಡರು, ತುರ್ತುಸ್ಥಿತಿಯ ಕರಾಳ ದಿನಗಳನ್ನು ಹೇಗೆ ಸ್ವೀಕರಿಸಿದರು ಎನ್ನುವುದು ಈಗಲೂ ಚರ್ಚಾರ್ಹ.
ತುರ್ತುಪರಿಸ್ಥಿತಿ ವಿರುದಟಛಿದ ಹೋರಾಟವನ್ನು ದಾಖಲಿಸುವ ಅಥವಾ ಆ ಇತಿಹಾಸವನ್ನು ಮತ್ತೆ ಕೆದಕುವ ಲೇಖನ ಇದಲ್ಲ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜರುಗಿದ ಕೆಲವು ಸ್ವಾರಸ್ಯಕರ ಘಟನೆಗಳಿಗೆ ಕನ್ನಡಿ ಹಿಡಿಯುವುದಷ್ಟೇ ಈ ಲೇಖನದ ಉದ್ದೇಶ.
…………..
ತುರ್ತುಪರಿಸ್ಥಿತಿ ಹೋರಾಟದ ಕುರಿತು 1977 ರಲ್ಲಿ ರಾಷ್ಟ್ರೋತ್ಥಾನ ಪರಿಷತ್ತು ‘ಭುಗಿಲು’ ಎಂಬ ಬೃಹತ್ ಕೃತಿಯೊಂದನ್ನು ರಚಿಸುವ ಸಿದಟಛಿತೆ ನಡೆಸಿತ್ತು. ನಾವು ಕೆಲವರು ಪ್ರಧಾನ ಸಂಪಾದಕರಾದ ಹೊ.ವೆ.ಶೇಷಾದ್ರಿ ಅವರ ನೇತೃತ್ವದಲ್ಲಿ ಕೃತಿ ರಚನೆಯ ಕಾರ್ಯದಲ್ಲಿ ತೊಡಗಿದ್ದೆವು. ಸಂಪಾದಕೀಯ ಬಳಗದಲ್ಲಿದ್ದ ದತ್ತಾತ್ರೇಯ ಹೊಸಬಾಳೆ (ಈಗ ಸಂಘದ ಸಹ ಸರಕಾರ್ಯವಾಹರು) ಪತ್ರಕರ್ತ ಲಂಕೇಶ್ ಅವರನ್ನು ಭೇಟಿ ಮಾಡಿ, ತುರ್ತುಸ್ಥಿತಿಯ ವಿರುದಟಛಿ ನೀವೇನಾದರೂ ಹೋರಾಟ ನಡೆಸಿದ ಅನುಭವಗಳಿದ್ದರೆ ತಿಳಿಸಿ ಎಂದು ಕೋರಿದಾಗ ಲಂಕೇಶ್ ‘ಅಯ್ಯೋ ದತ್ತ, ಹೋರಾಡುವ ಮಾತು ಹಾಗಿರಲಿ, ನಾವೆಲ್ಲ ಆಗ ಹೆದರಿ ಹೇಡಿಗಳಾಗಿದ್ದೆವು’ ಎಂದರಂತೆ. ಆಗ ದತ್ತಾತ್ರೇಯ ಅವರು, ‘ನಮ್ಮ ಭುಗಿಲು ಕೃತಿಯಲ್ಲಿ ಇದನ್ನೇ ಉಲ್ಲೇಖಿಸ ಬಹುದಾ ಸಾರ್?’ ಎಂದು ತಮಾಷೆಗೆ ಕೇಳಿದಾಗ, ಲಂಕೇಶ್ ಗಾಬರಿಯಾಗಿ ‘ಹಾಗೆಲ್ಲ ಮಾಡ್ಬಿಟ್ಟೀರಾ ಹುಷಾರ್’ ಎಂದು ಎಚ್ಚರಿಕೆ ನೀಡಿದ್ದರು ! ಸಂಸ್ಕೃತದಲ್ಲಿ ಶ್ಲೋಕವೊಂದಿದೆ. ಕಾಗೆ ಯಾವುದು ಕೋಗಿಲೆ ಯಾವುದು ಎಂಬುದು ನಿಚ್ಚಳವಾಗಿ ಗೊತ್ತಾಗುವುದು ವಸಂತಕಾಲ ಪ್ರಾಪ್ತವಾದಾಗಲೇ ಎಂಬುದು ಅದರ ಸಾರಾಂಶ. ತುರ್ತುಪರಿಸ್ಥಿತಿ ಬರುವುದಕ್ಕೆ ಮುನ್ನ ಹಲವು ಕಾಗೆಗಳು ನ್ಯಾಯಕ್ಕಾಗಿ ಹೋರಾಟ, ಮಾನವಹಕ್ಕು, ಪ್ರಜಾತಂತ್ರ ರಕ್ಷಣೆ ಇತ್ಯಾದಿ ಬೊಬ್ಬೆ ಹಾಕಿ ಕರ್ಕಶವಾಗಿ ಕೂಗಿದ್ದವು. ಆದರೆ ತುರ್ತುಪರಿಸ್ಥಿತಿ ಬಂದೆರಗಿದಾಗ ಈ ಕಾಗೆಗಳು ಎಲ್ಲಿ ಹೋದವೋ ಗೊತ್ತಿಲ್ಲ. ಆಗ ಮಾತ್ರ ಕೋಗಿಲೆಗಳದೇ ಕುಹು ಕುಹೂ ರಾಗಾಲಾಪನೆ. ಸ್ವಾತಂತ್ರ್ಯದ ಕುಳಿರ್ಗಾಳಿ ಬೀಸುವಂತೆ ಮಾಡಲು ಅವುಗಳದ್ದು ಇನ್ನಿಲ್ಲದ ಯಾತನೆ. ತುರ್ತುಪರಿಸ್ಥಿತಿ ಇಲ್ಲದ ಈ ಸ್ವಚ್ಛಂದ ಹೊತ್ತಿನಲ್ಲಿ ಮತ್ತೆ ಕಾಗೆಗಳದೇ ಕರ್ಕಶ ಸಾಮ್ರಾಜ್ಯ. ಮೌಲ್ಯಗಳನ್ನು ರಕ್ಷಿಸುವ ನೆಪದಲ್ಲಿ ಅಬ್ಬರ, ಅಟ್ಟಹಾಸ. ಕೋಗಿಲೆಗಳ ಇಂಚರ ಕೇಳಿಬರಬೇಕಾದರೆ ಮತ್ತೆ ’ವಸಂತಕಾಲ’ ಪ್ರಾಪ್ತವಾಗುವವರೆಗೆ ನಾವೆಲ್ಲಾ ಕಾಯಬೇಕೇನೋ !
* * *
ಆರೆಸ್ಸೆಸ್‌ನ ಹಿರಿಯ ಮುಖಂಡರಾದ ಯಾದವರಾವ್ ಜೋಶಿಯವರು ಬಂಧಿತರಾಗಿ ಬೆಂಗಳೂರು ಕಾರಾಗೃಹದಲ್ಲಿದ್ದರು. ಅವರ ಬಿಡುಗಡೆ ಯಾವಾಗ ಎಂಬುದು ಅನಿಶ್ಚಿತವಾಗಿತ್ತು. ‘ಮೀಸಾ’ ಬಂಧನದಲ್ಲಿದ್ದ ಅವರ ಬಿಡುಗಡೆಯ ಬಗ್ಗೆ ಯಾವ ಭರವಸೆಯೂ ಇರಲಿಲ್ಲ. ಅವರು ಕಾರಾಗೃಹದಲ್ಲಿರುವಾಗಲೇ ನಾಗಪುರದಲ್ಲಿದ್ದ ಅವರ ತಂದೆಯವರಿಗೆ ಖಾಯಿಲೆ ವಿಷಮಿಸಿತು. ವೈದ್ಯರು ಅವರು ಬದುಕುವ ಬಗ್ಗೆ ಭರವಸೆ ನೀಡಲಿಲ್ಲ. ತಂದೆಗೆ ಒಬ್ಬರೇ ಮಗ ಯಾದವರಾಯರು. ಅವರು ಪೆರೋಲ್ ಮೇಲೆ ಕೂಡಲೇ ನಾಗಪುರಕ್ಕೆ ಬರಬೇಕೆಂದು ಅಲ್ಲಿಂದ ಟೆಲಿಗ್ರಾಂ ಬಂತು. ಅದಕ್ಕೆ ಯಾದವರಾಯರು ಉತ್ತರವಾಗಿ ತಂದೆಯ ಹೆಸರಿಗೆ ಮರುಟೆಲಿಗ್ರಾಂ ಕಳಿಸಿದರು. ಆ ಟೆಲಿಗ್ರಾಂ ಹೀಗಿತ್ತು : ‘ನಿಮ್ಮ ದೇಹ ಸ್ಥಿತಿ ವಿಷಮಿಸಿರುವುದು ತಿಳಿದು ಮನಸ್ಸಿಗೆ ಅಪಾರವಾಗಿ ವ್ಯಥೆಯಾಗಿದೆ. ನಾನು ಸ್ವತಂತ್ರ ವ್ಯಕ್ತಿಯಾಗಿದ್ದಿದ್ದರೆ ನಿಮ್ಮ ಪಾದಸೇವೆಗಾಗಿ ಧಾವಿಸಿ ಬರುತ್ತಿದ್ದೆ. ಆದರೆ ನಾನೀಗ ಪರತಂತ್ರ. ದಾಸ್ಯದಲ್ಲಿರುತ್ತ ನಿಮ್ಮ ಪಾದಸ್ಪರ್ಶ ಮಾಡಲು ನನಗೆ ಮನಸ್ಸಾಗುತ್ತಿಲ್ಲ. ನನ್ನ ಕಣ್ಣೀರು ತುಂಬಿದ ಪ್ರಣಾಮಗಳನ್ನು ದಯಮಾಡಿ ಸ್ವೀಕರಿಸಿ. ನಾನೀಗ ತಾಯ್ನಾಡಿಗೆ ಸಲ್ಲಿಸುತ್ತಿರುವ ಅಲ್ಪಸ್ವಲ್ಪ ಸೇವೆ ತಮ್ಮ ಆಶೀರ್ವಾದದ ಫಲ. ಇದೇ ಪುಣ್ಯಪಥದಲ್ಲಿ ನಾನು ಮುಂದುವರೆಯುವಂತೆ ಹರಸಿ…’ ತಂದೆಯ ಖಾಯಿಲೆ ಉಲ್ಬಣಿಸಿದ್ದರೂ ಪೆರೋಲ್ ಮೇಲೆ ಬಿಡುಗಡೆಯಾಗಲು ಬಯಸದ ಯಾದವರಾಯರದು ಅದೆಂತಹ ದೃಢ ಸಂಕಲ್ಪ ! ವೈಯಕ್ತಿಕ ಕಾರಣಕ್ಕಾಗಿ ಬಂಧನದಿಂದ ಬಿಡುಗಡೆಯಾಗಲಾರೆ. ಹಾಗೆ ಬಿಡುಗಡೆಯಾಗುವುದಾದರೆ ಅದು ತನ್ನನ್ನು ಬಂಧಿಸಿದ ಸರ್ಕಾರವೇ ಬೇಕಿದ್ದರೆ ಬಿಡುಗಡೆ ಮಾಡಲಿ ಎಂಬ ದಿಟ್ಟತನ ಇಂತಹ ದೇಶಪ್ರೇಮಿಗಳಿಗೆ ಮಾತ್ರ ಬರಲು ಸಾಧ್ಯ.
* * *
ಮಡಿವಂತ ಮಠವೊಂದರ ಪೀಠಾಧೀಶರಾಗಿ ಮಠದ ಎಲ್ಲಾ ಕರ್ಮಠ ಸಂಪ್ರದಾಯಗಳನ್ನು ಪಾಲಿಸುತ್ತಾ ಸಾಮಾಜಿಕ ಸುಧಾರಣೆಯ ಕೈಂಕರ್ಯಗಳಿಗೆ ತುಡಿಯುತ್ತಿರುವ ಹಿರಿಯ ಜೀವ ಪೇಜಾವರ ಶ್ರೀಗಳು. ಸಾಮಾಜಿಕ ಸುಧಾರಣೆ, ಪ್ರಜಾತಂತ್ರ ರಕ್ಷಣೆ, ಪರಿಸರ ಪ್ರೇಮ, ಅಸ್ಪೃಶ್ಯತಾ ನಿವಾರಣೆ… ಇತ್ಯಾದಿ ಸಂಗತಿಗಳ ಬಗ್ಗೆ ಈಗ ಅವರ ಕಾಳಜಿ ಹೇಗಿದೆಯೋ ತುರ್ತುಪರಿಸ್ಥಿತಿ ಕಾಲದಲ್ಲೂ ಹಾಗೆಯೇ ಇತ್ತು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಅವರು ಆಗಿನ ಪ್ರಧಾನಿ ಇಂದಿರಾಗಾಂಧಿಯವರಿಗೆ ಎರಡು ಪತ್ರಗಳನ್ನು ಬರೆದಿದ್ದರು. ಆ ಪತ್ರಗಳಲ್ಲಿ ಸರ್ವಾಧಿಕಾರ ಹೇಗೆ ಪ್ರಜಾತಂತ್ರ ವ್ಯವಸ್ಥೆಗೆ ಅಪಾಯಕಾರಿ ಎಂಬುದನ್ನು ನಿರ್ಭಿಡೆಯಿಂದ ವಿಶ್ಲೇಷಿಸಿದ್ದರು.
ಇಂದಿರಾಗಾಂಧಿಗೆ ಅವರು ಬರೆದ ಎರಡನೇ ಪತ್ರ ಹೀಗಿದೆ : ‘ಜುಲೈ 12 ರಂದು ಬರೆದ ನಮ್ಮ ಪತ್ರಕ್ಕೆ ಈವರೆಗೆ ಉತ್ತರಬಾರದಿರುವುದು ವಿಷಾದಕರ. ತಮ್ಮ ಬಗ್ಗೆ ನಮಗಿರುವ ಅಭಿಮಾನ ಗೌರವಗಳಿಂದಲೂ ರಾಷ್ಟ್ರಪ್ರೇಮದಿಂದಲೂ ಪ್ರೇರಿತರಾಗಿ ನಾವು ಕೆಲವು ಸಲಹೆಗಳನ್ನು ನೀಡಿದ್ದೆವು. ದೇಶದಲ್ಲಿ ಪ್ರಜಾಪ್ರಭುತ್ವ ಸುರಕ್ಷಿತವಾಗಿದೆಯೆಂದು ನೀವು ಪದೇ ಪದೇ ಸಾರುತ್ತಿದ್ದೀರಿ. ಆ ಹೇಳಿಕೆ ಕೇಳಿ ನಗಬೇಕೋ ಅಳಬೇಕೋ ತಿಳಿಯದೆ ಜನ ದಿಗ್ಭ್ರಾಂತರಾಗಿದ್ದಾರೆ. ಪತ್ರಿಕೆಗಳಿಗೆ ಪೂರ್ತಿ ಬಾಯಿ ಕಟ್ಟಿದೆ. ಸಂಸತ್ತಿನ ನಡವಳಿಗಳ ಸಮಗ್ರ ವರದಿಯೂ ಜನತೆಗೆ ಅಲಭ್ಯವಾಗಿದೆ. ಸರ್ಕಾರದ ಧೋರಣೆಯನ್ನು ಟೀಕಿಸುವ ಸ್ವಾತಂತ್ರ್ಯ ಯಾರಿಗೂ ಇಲ್ಲ. ಆದರೆ ಬೇರೆಯವರ ಬಗೆಗೆ ನೀವು ಮಾಡುವ ಟೀಕೆಗೆ ಮಾತ್ರ ಅತ್ಯಧಿಕ ಪ್ರಚಾರ ದೊರೆಯುತ್ತಿದೆ. ನಮ್ಮ ಕಳಕಳಿಯ ಬೇಡಿಕೆ ಇದು : ಈವರೆಗೆ ನಡೆದದ್ದನ್ನೆಲ್ಲಾ ಮರೆಯೋಣ. ಪ್ರಜಾಪ್ರಭುತ್ವದ ವಿಡಂಬಣೆಯನ್ನು ಈಗಲಾದರೂ ಅಂತ್ಯಗೊಳಿಸಿ. ನೀವು ಚಲಾಯಿಸುತ್ತಿರುವಷ್ಟೇ ಸ್ವಾತಂತ್ರ್ಯ ಎಲ್ಲಾ ಜನರಿಗೂ ಲಭ್ಯವಾಗಲಿ. ಸರ್ಕಾರವನ್ನು ಟೀಕಿಸುವ ಸಾಂವಿಧಾನಿಕ ಹಕ್ಕನ್ನು ಜನರಿಂದ ಕಿತ್ತುಕೊಳ್ಳುವುದರಿಂದ ಶಾಸನವಿರೋಧಿಯಾದ ಹಿಂಸಾತ್ಮಕ ಕ್ರಮಗಳಿಗೆ ದಾರಿ ಮಾಡಿದಂತಾಗುತ್ತದೆ…. ನಾನು ಸನ್ಯಾಸಿ. ಪಕ್ಷಪಾತವಿಲ್ಲದವನು. ನಿಮ್ಮ ಬಗೆಗೂ ದೇಶದ ಬಗೆಗೂ ನನಗೆ ತುಂಬಾ ಅಭಿಮಾನವಿದೆ. ನಿಮ್ಮ ಕಿವಿಗೆ ಕಟುವೆನಿಸಿದರೂ ಕರ್ತವ್ಯಬುದಿಟಛಿಯಿಂದ ಈ ಮಾತುಗಳನ್ನು ಆಡಿದ್ದೇನೆ. ಭಗವಂತ ನಿಮ್ಮನ್ನು ಅನುಗ್ರಹಿಸಲಿ.’ ಆದರೆ ಪೇಜಾವರಶ್ರೀಗಳ ಈ ಎರಡನೆಯ ಪತ್ರಕ್ಕೂ ಇಂದಿರಾಗಾಂಧಿ ಉತ್ತರಿಸಲಿಲ್ಲ. ಆಗ ಇಂದಿರಾಗಾಂಧಿ ಇಂತಹ ಪತ್ರಗಳಿಗೆ ಉತ್ತರಿಸುವ ಗೋಜಿಗೇ ಹೋಗುತ್ತಿರಲಿಲ್ಲ. ತಮ್ಮನ್ನು ವಿರೋಧಿಸುವ ಯಾರೇ ಆಗಲಿ, ಅವರನ್ನು ಬಂಧಿಸಿ ಜೈಲಿಗೆ ತಳ್ಳುವುದೊಂದೇ ಅವರ ಉತ್ತರವಾಗಿತ್ತು. ಪೇಜಾವರ ಶ್ರೀಗಳ ಪತ್ರ ಇಂದಿರಾಗಾಂಧಿಯವರಿಗೆ ಕೋಪ ತರಿಸಿರಲೇಬೇಕು. ಆದರೆ ಅವರನ್ನು ಬಂಧಿಸುವ ದುಸ್ಸಾಹಸಕ್ಕೆ ಇಂದಿರಾಗಾಂಧಿ ಇಳಿಯಲಿಲ್ಲ.
ಪೇಜಾವರ ಶ್ರೀಗಳು ಮಾತ್ರ ತುರ್ತುಪರಿಸ್ಥಿತಿಯ ಅವಧಿ ಯಲ್ಲಿ ಕೈಕಟ್ಟಿ ಕೂತಿರಲಿಲ್ಲ. ಬಂಧನದ ಭೀತಿ ಇದ್ದರೂ ತಾವು ಹೋದಲ್ಲೆಲ್ಲ ತಮ್ಮ ಪ್ರವಚನಗಳಲ್ಲಿ ತುರ್ತುಪರಿಸ್ಥಿತಿ ವಿರುದಟಛಿ ಹೋರಾಡಲು ಜನರಿಗೆ ಕರೆನೀಡುತ್ತಿದ್ದರು. ಆದರೆ ಅದಕ್ಕೆ ಅವರದೇ ಆದ ತಂತ್ರಗಳನ್ನು ಬಳಸುತ್ತಿದ್ದರು. ಜನರಿಗೆ ಮಾತ್ರ ಅದು ಸ್ಪಷ್ಟವಾಗಿ ಅರ್ಥವಾಗುತ್ತಿತ್ತು. ಪೇಜಾವರ ಶ್ರೀಗಳು ಆಗ ಪ್ರವಚನಗಳಲ್ಲಿ ಹೇಳುತ್ತಿದ್ದ ಮಾತು ಈಗಲೂ ಕಿವಿಯಲ್ಲಿ ಅನುರಣಿಸುತ್ತಿದೆ : ‘ಈಗಿನ ಸಮಾಜದಲ್ಲಿ ರಾವಣ ಸಂತತಿಯ ದುಷ್ಕಾರ್ಯಗಳು ಹೆಚ್ಚಾಗುತ್ತಿವೆ. ಇದನ್ನು ನೋಡಿಯೂ ಹೇಡಿ ಸಮಾಜ ಕುಂಭಕರ್ಣನಂತೆ ನಿದ್ದೆ ಮಾಡುತ್ತಿದೆ. ಆದ್ದರಿಂದ ಈಗ ನಮಗೆ ಬೇಕಾಗಿರುವುದು ಅಧರ್ಮದ ವಿರುದಟಛಿ ಹೋರಾಡುವ ವಿಭೀಷಣ ಸಂತತಿ. ನಾವೆಲ್ಲರೂ ವಿಭೀಷಣರಾಗೋಣ’. ಇಲ್ಲಿ ರಾವಣ ಸಂತತಿ ಎಂದರೆ ಯಾರು, ಕುಂಭಕರ್ಣ ಯಾರು ಎಂಬುದು ಅವರ ಪ್ರವಚನ ಕೇಳಿದವರಿಗೆ ಸ್ಪಷ್ಟಾತಿಸ್ಪಷ್ಟವಾಗುತ್ತಿತ್ತು. ವಿಭೀಷಣರಾಗಬೇಕೆಂಬ ಶ್ರೀಗಳ ಕರೆ ಜನರೆದೆಯಲ್ಲಿ ಅದಮ್ಯ ಧೈರ್ಯೋತ್ಸಾಹಗಳನ್ನು ತುಂಬುತ್ತಿತ್ತು.
* * *
ತುರ್ತುಪರಿಸ್ಥಿತಿ ವಿರೋಧಿಸಿ ಪತ್ರಿಕೆಗಳಲ್ಲಿ ಲೇಖನ ಬರೆಯುವಂತಿರಲಿಲ್ಲ. ಸಭೆಗಳಲ್ಲಿ ಭಾಷಣ ಮಾಡುವಂತಿರಲಿಲ್ಲ. ಹಾಗೇನಾದರೂ ಭಂಡ ಧೈರ್ಯ ತೋರಿದರೆ ಮರುದಿನವೇ ಜೈಲು ಪಾಲಾಗಬೇಕಿತ್ತು. ಆದರೆ ಅಂತಹ ಭಯಭೀತ ದಿನಗಳಲ್ಲೂ ತುರ್ತುಪರಿಸ್ಥಿತಿ ವಿರೋಧಿಸಿ ಪತ್ರಿಕೆಗಳಿಗೆ ಬರೆಯುವ ಕೆಲವು ಧೈರ್ಯಶಾಲಿಗಳುಇದ್ದರೆಂದರೆ ನಿಮಗೆ ಆಶ್ಚರ್ಯವಾಗಬಹುದು. ಅಂಥವರಲ್ಲಿ ಗೋಪಾಲಕೃಷ್ಣ ಅಡಿಗ, ಏರ್ಯಲಕ್ಷ್ಮಿನಾರಾಯಣ ಆಳ್ವ ಪ್ರಮುಖರು. ಅಡಿಗರ ‘ನಿನ್ನ ಗದ್ದೆಗೆ ನೀರು’ ಎಂಬ ಕವನವೊಂದು ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. ಇಂದಿರಾಗಾಂಧಿಯ ಸರ್ವಾಧಿಕಾರವನ್ನು ಆ ಕವನದಲ್ಲಿ ಲೇವಡಿ ಮಾಡಲಾಗಿತ್ತು. ಅದರ ಕೆಲವು ಸಾಲುಗಳು :
……………………….
ಬೆನ್ಮೂಳೆ ಮುರಿದು ಬಳಿಕ ಬಡಕೊಳ್ಳುತ್ತೇನೆ ಬಾನುಲಿ;
ಎರಡು ಕಾಲಿನ ಮೇಲೆ ನಿಲ್ಲಲೇಬೇಕೆಂಬ ತೊದಲುಲಿ
ಜನತಾ ವಿರೋಧಿದಳಗಳ ಪಿತೂರಿ.
ಕಾನೂನು ಮನ್ನಿಸುವ ಜನ ನಾಲ್ಕೂ ಕಾಲಲ್ಲಿ ನಡೆದರೇ
ಚಂದ, ಬೀಳುವಪಾಯ ಕಮ್ಮಿ.
ಸರ್ವದಾ ಸಾಷ್ಟಾಂಗ ಪ್ರಣಾಮದ್ದೇ ಭಂಗಿ.
ಹೇಳಿದ ಹಾಗೆ ಕೇಳಿ ಬಾಲ
ಮುದುರಿ ಕುಳಿತರೇನೇ ಲಾಭ;
ಹೊಟ್ಟೆಗಷ್ಟು ಹಿಟ್ಟು ಜುಟ್ಟಿಗೆ ಪ್ಲಾಸ್ಟಿಕ್ ಮಲ್ಲಿಗೆ
ಸಿಗುತ್ತದೆ ಹೆದರಬೇಡಿ ನಾಳೆಗೆ…
ಏರ್ಯ ಲಕ್ಷ್ಮಿನಾರಾಯಣ ಆಳ್ವರ ‘ಕತ್ತೆ ಸತ್ತು ಹೋಯಿತು’ ಎಂಬ ಕವನ ಉದಯವಾಣಿಯಲ್ಲಿ ಪ್ರಕಟವಾಯಿತು. ಆ ಕವನದ ಕೆಲವು ಸಾಲುಗಳು :
ಮಗೂ ! ತಂದೆಯೂ ಮಗನೂ ಹೊತ್ತು ತಂದ
ಕತ್ತೆ ಸತ್ತು ಹೋಯಿತು.
ಮಗೂ ! ನೀನು ಪುಸ್ತಕದಲ್ಲಷ್ಟೇ ಓದಿದೆ.
ನಾನೋ – ಕಣ್ಣಾರೆ ಕಂಡಿದ್ದೆ,
ತಂದೆ ಮಗ ಕತ್ತೆ ಹೊತ್ತು ತರುವುದನು.
ದೂರದ ಪಯಣ, ಅರಿಯದ ಹಾದಿ,
ಕಲ್ಲುಮುಳ್ಳಿನ ನಡೆ, ಬನ್ನ ಬವಣೆಯ ದಿನ.
ಇಳಿವ ಬೆವರು, ಸುರಿವ ರಕುತ.
ಬಾಗಲಿಲ್ಲ ದೇಹ, ಸೋಲಲಿಲ್ಲ ಜೀವ.
ತಂದೆ ಮಗ ಹೊತ್ತು ಹೊತ್ತು ತಂದಿದ್ದರು ಕತ್ತೆ.
……………………………………..
ಆಳ್ವರು ಪ್ರಜಾತಂತ್ರವನ್ನು ಇಲ್ಲಿ ಕತ್ತೆಗೆ ಹೋಲಿಸಿ ಕವನ ಬರೆದಿದ್ದರು. ಉದಯವಾಣಿಯಲ್ಲಿ ಆ ಕವನ ಪ್ರಕಟವಾದಾಗ ಅದು ಅಷ್ಟಾಗಿ ಹಲವರಿಗೆ ಅರ್ಥವಾಗಿರಲಿಲ್ಲ. ಸರ್ಕಾರದ ಸೆನ್ಸಾರ್ ಅಧಿಕಾರಿಗಳಿಗೆ ಅದರಲ್ಲೇನೂ ವಿಶೇಷ ಕಾಣಿಸಲಿಲ್ಲ. ಸ್ವತಃ ಉದಯವಾಣಿ ಸಂಪಾದಕೀಯ ಬಳಗಕ್ಕೂ ಆ ಕವನದ ಒಳಾರ್ಥ ತಿಳಿದಿರಲಿಲ್ಲ ! ಆದರೆ ಅದೇ ಕವನ ಸಂಘಪರಿವಾರ ನಡೆಸುತ್ತಿದ್ದ ಭೂಗತ ಪತ್ರಿಕೆ ‘ಕಹಳೆ’ಯಲ್ಲಿ ಪ್ರಕಟವಾದಾಗ ಸೆನ್ಸಾರ್ ಅಧಿಕಾರಿಗಳು ಜಾಗೃತರಾದರು. ಅದರ ಅರ್ಥವೇನೆಂದು ತಿಳಿಯಲು ತಿಣುಕಾಡಿದರು. ಅರ್ಥ ಗೊತ್ತಾದಾಗ ಬೆಚ್ಚಿಬಿದ್ದರು!
* * *
ದೇಶದೆಲ್ಲೆಡೆ ತುರ್ತುಪರಿಸ್ಥಿತಿ ವಿರೋಧಿಸಿದ ರಾಜಕೀಯ ಮುಖಂಡರನ್ನು ಬಂಧಿಸಿ ಸೆರೆಮನೆಗೆ ಕಳುಹಿಸಲಾಗಿತ್ತು. ಜನರ ಸ್ವಾತಂತ್ರ್ಯ ಕಿತ್ತುಕೊಂಡಿದ್ದರ ಬಗ್ಗೆ ಎಲ್ಲ ಕಡೆ ಅಸಮಾಧಾನದ ಹೊಗೆ ಹರಡಿತ್ತು. ಅದಕ್ಕಾಗಿ ಎಲ್ಲೆಡೆ ಪ್ರತಿಭಟನೆ ಸಿಡಿದಿತ್ತು.ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ರಾಮಕೃಷ್ಣ ಹೆಗಡೆ, ಲಾಲ್‌ಕೃಷ್ಣ ಆಡ್ವಾಣಿ, ಜೆ.ಹೆಚ್.ಪಟೇಲ್ ಮುಂತಾದವರನ್ನು ಬಂಧಿಸಿ ಇಡಲಾಗಿತ್ತು. ಅಂದಿನ ಮುಖ್ಯಮಂತ್ರಿ ದೇವರಾಜ ಅರಸರು ಖಾಯಿಲೆಯಿಂದ ಬಳಲುತ್ತಿದ್ದ ತಮ್ಮ ತಾಯಿಯವರನ್ನು ನೋಡಲು ಹರಿಖೋಡೆ ಜೊತೆಗೆ ಆಸ್ಪತ್ರೆಗೆ ಬಂದಿದ್ದರು. ತಮ್ಮ ತಾಯಿಯನ್ನು ನೋಡಿಕೊಂಡು ಹೊರಹೋಗುವಾಗ ಕೋಣೆಯೊಂದರ ಹೊರಗೆ ಪೊಲೀಸ್ ಗನ್‌ಮ್ಯಾನ್ ನಿಂತಿರುವುದನ್ನು ಗಮನಿಸಿ ವಿಚಾರಿಸಿದಾಗ ಅಲ್ಲಿ ಜೆ.ಹೆಚ್. ಪಟೇಲರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವುದು ತಿಳಿದುಬಂತು. ಹೋಗಿ ಮಾತಾಡಿಸೋಣವೆಂದು ಅರಸು ಅವರ ಕೊಠಡಿಗೆ ಹೋದರು. ಪುಸ್ತಕವನ್ನು ಓದುತ್ತಿದ್ದ ಪಟೇಲರು ಮುಖ್ಯಮಂತ್ರಿ ಬಂದಿದ್ದು ಅರಿವಿಗೆ ಬಂದರೂ ಅವರಿಗೆ ಯಾವ ಗೌರವವನ್ನೂ ಸೂಚಿಸದೆ, ಕಾಲುಮೇಲೆ ಕಾಲುಹಾಕಿ ಓದುವುದರಲ್ಲಿ ಮಗ್ನರಾಗಿದ್ದರು. ತುರ್ತುಪರಿಸ್ಥಿತಿಯ ಬೆಂಬಲಕ್ಕೆ ನಿಂತ ಮುಖ್ಯಮಂತ್ರಿಗೆ ಏಕೆ ಗೌರವ ತೋರಿಸಬೇಕೆಂಬ ಭಾವನೆ ಅವರಲ್ಲಿ ಮನೆಮಾಡಿತ್ತು. ನೋಡಿದರೂ ನೋಡದ ಹಾಗೆ ಕುಳಿತಿದ್ದ ಪಟೇಲರನ್ನು ದೇವರಾಜ ಅರಸರೇ ಆತ್ಮೀಯವಾಗಿ ಮಾತನಾಡಿಸಿ, ಅವರ ಆರೋಗ್ಯವನ್ನು ವಿಚಾರಿಸಿದರು. ಒಂದು ಪೆರೋಲ್ ಪತ್ರವನ್ನು ನೀಡಿದಲ್ಲಿ ಜೈಲಿನಿಂದ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು. ಅದುವರೆಗೆ ಶಾಂತಚಿತ್ತರಾಗಿದ್ದ ಪಟೇಲರಿಗೆ ಅರಸರ ಈ ಮಾತು ಕೇಳಿ ಪಿತ್ತ ನೆತ್ತಿಗೇರಿತು. ಸಿಟ್ಟಿನಿಂದ ಜೋರಾಗಿ, ‘ಗೆಟ್ ಔಟ್’ ಎಂದು ಕಿರುಚಿದರು. ಜನರ ಸ್ವಾತಂತ್ರ್ಯ ಕಿತ್ತುಕೊಂಡು ದೌರ್ಜನ್ಯ ಎಸಗಿದ್ದೀರಿ. ನೀವೆಸಗಿದ ಈ ಅನ್ಯಾಯಕ್ಕೆ ತಕ್ಕ ಪಾಠವನ್ನು ಜನ ಕಲಿಸುತ್ತಾರೆ, ನೋಡ್ತಾ ಇರಿ ಎಂದು ರೇಗಿದರು. ಪಟೇಲರ ಈ ರೌದ್ರಾವತಾರವನ್ನು ನೋಡಿದ ಅರಸರು ಮರುಮಾತಿಲ್ಲದೆ ಕೋಣೆಯಿಂದ ಹೊರನಡೆದರು. ಅನಂತರ ತಮ್ಮ ಕಾರಿನಲ್ಲಿ ಕುಳಿತ ಮೇಲೆ ಹರಿಖೋಡೆಯವರಿಗೆ ಅವರು ಹೇಳಿದ್ದು : ‘ಈ ಮನುಷ್ಯ ಒಂದು ದಿನ ದೊಡ್ಡ ನಾಯಕನಾಗುತ್ತಾನೆ. ಆತನ ಬದಟಛಿತೆ ಮತ್ತು ದಾರ್ಷ್ಟ್ಯ ನೋಡಿ ನನಗೆ ಸಂತೋಷವಾಗಿದೆ. ಐ ರಿಯಲಿ ಅಪ್ರಿಶಿಯೇಟ್ ಹಿಮ್’. ಮುಂದೆ ಪಟೇಲರು ರಾಜ್ಯದ ಮುಖ್ಯಮಂತ್ರಿಯಾಗಿ ದೇವರಾಜ ಅರಸರ ಮಾತನ್ನು ನಿಜ ಮಾಡಿದ್ದು ಈಗ ಇತಿಹಾಸ.
* * *
ಭೂಗತ ಪತ್ರಿಕೆ ‘ಕಹಳೆ’ಯ ಕೆಲಸಕಾರ್ಯಗಳಲ್ಲಿ ತೊಡಗಿದ್ದಾಗ ಪೊಲೀಸರು ಏಕಾಏಕಿ ನಡೆಸಿದ ದಾಳಿಯಿಂದಾಗಿ ನಾನು ಬಂಧಿತನಾಗಿ ಮಡಿಕೇರಿ ಜೈಲಿಗೆ ಹೋಗಬೇಕಾಯಿತು. ಅಲ್ಲಿ 3 ತಿಂಗಳ ಸೆರೆವಾಸ. ಕೊಡಗಿನ ೬೦ಕ್ಕೂ ಹೆಚ್ಚು ಕಾರ್ಯಕರ್ತರು ಅಲ್ಲಿದ್ದರು. ಒಮ್ಮೆ ಆಗ ಐಜಿ (ಪ್ರಿಸನ್)ಯಾಗಿದ್ದ ಮಲ್ಲಯ್ಯ ಸೆರೆಮನೆಯ ವೀಕ್ಷಣೆಗೆ ಬಂದಿದ್ದರು. ಆಗ ತಾನೆ ಊಟ ಮುಗಿಸಿ ನಾವೆಲ್ಲರೂ ಜೈಲಿನ ಬ್ಯಾರಕ್‌ನಲ್ಲಿ ಸಾಲಾಗಿ ಮಲಗಿದ್ದೆವು. ಜೈಲರ್ ವಿಠಲ್ ಚೌಟ ನಮ್ಮ ಕೊಠಡಿಗೆ ಬಂದು, ಈಗ ಐಜಿ ಮಲ್ಲಯ್ಯ ವೀಕ್ಷಣೆಗೆ ಬರುತ್ತಿದ್ದಾರೆ ಎಂದು ಮುನ್ಸೂಚನೆ ನೀಡಿದರು. ಅವರ ಹಿಂದೆಯೇ ಮಲ್ಲಯ್ಯ ಬಂದರು. ಆದರೆ ನಾವ್ಯಾರೂ ಮಲಗಿದಲ್ಲಿಂದ ಎದ್ದು ಅವರಿಗೆ ಗೌರವ ತೋರಲಿಲ್ಲ. ನಮ್ಮ ಈ ವರ್ತನೆ ಅವರಿಗೆ ಸಿಟ್ಟು ತರಿಸಿತು. ಒಬ್ಬೊಬ್ಬರ ಬಳಿ ಬಂದು ‘ಮಲಗಿಯೇ ಇರಲು ನಿಮಗೇನಾಗಿದೆ?’ ಎಂದು ವಿಚಾರಿಸತೊಡಗಿದರು. ಒಬ್ಬರು ತನಗೆ ಹೊಟ್ಟೆನೋವು ಎಂದರೆ, ಇನ್ನೊಬ್ಬರು ತಲೆನೋವೆಂದು ಸುಳ್ಳು ಹೇಳಿದರು. ಹೀಗೆ ಒಬ್ಬೊಬ್ಬರದೂ ಒಂದೊಂದು ಪಿಳ್ಳೆ ನೆವ ! ನಿಮ್ಮನ್ನೆಲ್ಲ ಜೈಲಿಗೆ ಹಾಕುತ್ತೇನೆ, ಹುಷಾರ್ ಎಂದು ಮಲ್ಲಯ್ಯ ಸಿಟ್ಟು ತಾಳಲಾರದೆ ಅಬ್ಬರಿಸಿದರು. ಆಗ ನಾವೆಲ್ಲ ಒಟ್ಟಿಗೆ ‘ಸಾರ್, ಈಗ ನಾವೆಲ್ಲ ಜೈಲಿನಲ್ಲೇ ಇದ್ದೇವಲ್ಲ. ಹಾಗಿರುವಾಗಮತ್ತೆ ನೀವು ನಮ್ಮನ್ನು ಜೈಲಿಗೆ ಹಾಕುವುದು ಹೇಗೆ?’ ಎಂದು ಕೇಳಿದಾಗ ಮಲ್ಲಯ್ಯ ಸುಸ್ತೋ ಸುಸ್ತು. ಸಿಟ್ಟಿನಿಂದ ಬುಸುಗುಡುತ್ತ ಆಚೆ ಹೋಗದೆ ಅವರಿಗೆ ವಿಧಿ ಇರಲಿಲ್ಲ. ನಮಗೆ ಮಾತ್ರ, ಉನ್ನತ ಜೈಲು ಅಧಿಕಾರಿಗೆ ಸೆಡ್ಡು ಹೊಡೆದು ಜಯ ಸಾಧಿಸಿದಸಂತಸ!
* * *
ತುರ್ತುಸ್ಥಿತಿ ವಿರೋಧಿಸಿ ಹೀಗೆ ಕೆಲವರು ದಿಟ್ಟತನ ತೋರಿದ್ದರೂ ಇನ್ನು ಹಲವರು ಹೆದರಿ ಹೇಡಿಗಳಾಗಿದ್ದರು. ಅಂಥವರಲ್ಲಿ ಗಣ್ಯರು, ಸಾಹಿತಿಗಳು, ಬುದಿಟಛಿಜೀವಿಗಳು ಇದ್ದರು ಎಂಬುದು ವಿಷಾದನೀಯ. ತುರ್ತುಪರಿಸ್ಥಿತಿ ಕುರಿತು ಅಭಿಪ್ರಾಯ ಸಂಗ್ರಹಿಸಲು ನಾವು ಕೆಲವರು ಮಣಿಪಾಲದ ಮುಖ್ಯಸ್ಥರಾಗಿದ್ದ ಟಿ.ಎಂ.ಎ.ಪೈ ಅವರ ಬಳಿ ಹೋಗಿದ್ದೆವು. ‘ತುರ್ತುಪರಿಸ್ಥಿತಿಯ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ’ ಎಂದಾಗ, ಪೈಗಳು ಹೇಳಿದ್ದು : ‘ತುರ್ತುಪರಿಸ್ಥಿತಿಯಿಂದ ಒಳ್ಳೆಯದೇ ಆಗಿದೆ. ರೈಲು ವೇಳೆಗೆ ಸರಿಯಾಗಿ ಬರುತ್ತಿದೆ. ಮಳೆ ಬೆಳೆ ಚೆನ್ನಾಗಿ ಆಗುತ್ತಿದೆ… ಆದರೆ ಆ ಆಚಾರ್ಯನಿಗೆ (ಡಾ.ವಿ.ಎಸ್. ಆಚಾರ್ಯ ಆಗ ಮೀಸಾ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದರು) ಮಾತ್ರ ಬುದಿಟಛಿಯಿಲ್ಲ. ಸುಮ್ಮನೆ ಕ್ಲಿನಿಕ್ ನಡೆಸಿಕೊಂಡು ಹೋಗುವುದನ್ನು ಬಿಟ್ಟು ತುರ್ತುಸ್ಥಿತಿ ವಿರೋಧಿಸಿ ಜೈಲು ಸೇರಿದ್ದಾನೆ’. ರೈಲು ಸರಿಯಾಗಿ ಬರುವುದಕ್ಕೂ, ಮಳೆ ಬೆಳೆ ಚೆನ್ನಾಗಿ ಆಗುವುದಕ್ಕೂ ತುರ್ತುಪರಿಸ್ಥಿತಿಗೂ ಏನು ಸಂಬಂಧ? ನಮಗಂತೂ ಪೈಗಳ ಮಾತುಕೇಳಿ ಅವರ ಅಭಿಪ್ರಾಯವೇನೆಂದು ತಿಳಿಯಿತು.
ಸಾಹಿತಿ ಹಾಗೂ ಪ್ರವಚನಕಾರ ಬನ್ನಂಜೆ ಗೋವಿಂದಾಚಾರ್ಯರನ್ನು ಸಂದರ್ಶಿಸಲು ಹೋದಾಗ ಅವರು ವಿಷಯ ತಿಳಿದು ಅದೂ ಇದೂ ಮಾತನಾಡಿ ನಮ್ಮನ್ನು ಹಾಗೆಯೇ ಸಾಗಹಾಕಿದರು. ನೀವು ಈ ಬಗ್ಗೆ ನನಗಿಂತಲೂ ದೊಡ್ಡವರನ್ನು ಕೇಳಿ ಎಂಬ ಉಚಿತ ಸಲಹೆಯನ್ನು ನೀಡಿದರು !. ಮೀಸಾ ಬಂಧಿಗಳ ಬಿಡುಗಡೆ ಕೋರಿ ನಾಡಿನ ಗಣ್ಯರ ಸಹಿ ಸಂಗ್ರಹವನ್ನು ಕೆಲವು ಕಾರ್ಯಕರ್ತರು ಮಾಡುತ್ತಿದ್ದರು. ಖ್ಯಾತ ಕವಿ ಕುವೆಂಪು ಅವರ ಬಳಿ ಇದೇ ಉದ್ದೇಶಕ್ಕಾಗಿ ಕೆಲವರು ಹೋಗಿದ್ದರು. ಮೀಸಾ ಬಂಧಿಗಳ ಬಿಡುಗಡೆಯ ಮನವಿ ಪತ್ರಕ್ಕೆ ಸಹಿಹಾಕಲು ಕೋರಿದರು. ಆದರೆ ಕುವೆಂಪು ಮಾತ್ರ ಸಹಿ ಹಾಕಲಿಲ್ಲ. ಮೀಸಾ ಬಂಧಿಗಳಲ್ಲಿ ಆರೆಸ್ಸೆಸ್‌ನವರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಅವರನ್ನು ಹೀಗೆ ಮಾಡುವಂತೆ ಪ್ರೇರಿಸಿತ್ತೆ? ಗೊತ್ತಿಲ್ಲ.
* * *
ತುರ್ತುಪರಿಸ್ಥಿತಿ ಹೋರಾಟದ ಕುರಿತು 1977 ರಲ್ಲಿ ರಾಷ್ಟ್ರೋತ್ಥಾನ ಪರಿಷತ್ತು ‘ಭುಗಿಲು’ ಎಂಬ ಬೃಹತ್ ಕೃತಿಯೊಂದನ್ನು ರಚಿಸುವ ಸಿದಟಛಿತೆ ನಡೆಸಿತ್ತು. ನಾವು ಕೆಲವರು ಪ್ರಧಾನ ಸಂಪಾದಕರಾದ ಹೊ.ವೆ.ಶೇಷಾದ್ರಿ ಅವರ ನೇತೃತ್ವದಲ್ಲಿ ಕೃತಿ ರಚನೆಯ ಕಾರ್ಯದಲ್ಲಿ ತೊಡಗಿದ್ದೆವು. ಸಂಪಾದಕೀಯ ಬಳಗದಲ್ಲಿದ್ದ ದತ್ತಾತ್ರೇಯ ಹೊಸಬಾಳೆ (ಈಗ ಸಂಘದ ಸಹ ಸರಕಾರ್ಯವಾಹರು) ಪತ್ರಕರ್ತ ಲಂಕೇಶ್ ಅವರನ್ನು ಭೇಟಿ ಮಾಡಿ, ತುರ್ತುಸ್ಥಿತಿಯ ವಿರುದಟಛಿ ನೀವೇನಾದರೂ ಹೋರಾಟ ನಡೆಸಿದ ಅನುಭವಗಳಿದ್ದರೆ ತಿಳಿಸಿ ಎಂದು ಕೋರಿದಾಗ ಲಂಕೇಶ್ ‘ಅಯ್ಯೋ ದತ್ತ, ಹೋರಾಡುವ ಮಾತು ಹಾಗಿರಲಿ, ನಾವೆಲ್ಲ ಆಗ ಹೆದರಿ ಹೇಡಿಗಳಾಗಿದ್ದೆವು’ ಎಂದರಂತೆ. ಆಗ ದತ್ತಾತ್ರೇಯ ಅವರು, ‘ನಮ್ಮ ಭುಗಿಲು ಕೃತಿಯಲ್ಲಿ ಇದನ್ನೇ ಉಲ್ಲೇಖಿಸ ಬಹುದಾ ಸಾರ್?’ ಎಂದು ತಮಾಷೆಗೆ ಕೇಳಿದಾಗ, ಲಂಕೇಶ್ ಗಾಬರಿಯಾಗಿ ‘ಹಾಗೆಲ್ಲ ಮಾಡ್ಬಿಟ್ಟೀರಾ ಹುಷಾರ್’ ಎಂದು ಎಚ್ಚರಿಕೆ ನೀಡಿದ್ದರು !
ಸಂಸ್ಕೃತದಲ್ಲಿ ಶ್ಲೋಕವೊಂದಿದೆ. ಕಾಗೆ ಯಾವುದು ಕೋಗಿಲೆ ಯಾವುದು ಎಂಬುದು ನಿಚ್ಚಳವಾಗಿ ಗೊತ್ತಾಗುವುದು ವಸಂತಕಾಲ ಪ್ರಾಪ್ತವಾದಾಗಲೇ ಎಂಬುದು ಅದರ ಸಾರಾಂಶ. ತುರ್ತುಪರಿಸ್ಥಿತಿ ಬರುವುದಕ್ಕೆ ಮುನ್ನ ಹಲವು ಕಾಗೆಗಳು ನ್ಯಾಯಕ್ಕಾಗಿ ಹೋರಾಟ, ಮಾನವಹಕ್ಕು, ಪ್ರಜಾತಂತ್ರ ರಕ್ಷಣೆ ಇತ್ಯಾದಿ ಬೊಬ್ಬೆ ಹಾಕಿ ಕರ್ಕಶವಾಗಿ ಕೂಗಿದ್ದವು. ಆದರೆ ತುರ್ತುಪರಿಸ್ಥಿತಿ ಬಂದೆರಗಿದಾಗ ಈ ಕಾಗೆಗಳು ಎಲ್ಲಿ ಹೋದವೋ ಗೊತ್ತಿಲ್ಲ. ಆಗ ಮಾತ್ರ ಕೋಗಿಲೆಗಳದೇ ಕುಹು ಕುಹೂ ರಾಗಾಲಾಪನೆ. ಸ್ವಾತಂತ್ರ್ಯದ ಕುಳಿರ್ಗಾಳಿ ಬೀಸುವಂತೆ ಮಾಡಲು ಅವುಗಳದ್ದು ಇನ್ನಿಲ್ಲದ ಯಾತನೆ. ತುರ್ತುಪರಿಸ್ಥಿತಿ ಇಲ್ಲದ ಈ ಸ್ವಚ್ಛಂದ ಹೊತ್ತಿನಲ್ಲಿ ಮತ್ತೆ ಕಾಗೆಗಳದೇ ಕರ್ಕಶ ಸಾಮ್ರಾಜ್ಯ. ಮೌಲ್ಯಗಳನ್ನು ರಕ್ಷಿಸುವ ನೆಪದಲ್ಲಿ ಅಬ್ಬರ, ಅಟ್ಟಹಾಸ. ಕೋಗಿಲೆಗಳ ಇಂಚರ ಕೇಳಿಬರಬೇಕಾದರೆ ಮತ್ತೆ ’ವಸಂತಕಾಲ’ ಪ್ರಾಪ್ತವಾಗುವವರೆಗೆ ನಾವೆಲ್ಲಾ ಕಾಯಬೇಕೇನೋ !