ಚೆನ್ನೈ: ಹಿರಿಯ ಸುಪ್ರಿಂ ಕೋರ್ಟ್ ನ್ಯಾಯವಾದಿ, ಮಾಜಿ ಅಟಾರ್ನಿ ಜನರಲ್ ಹಾಗೂ ರಾಮ ಜನ್ಮಭೂಮಿ ಪ್ರಕರಣಕ್ಕೆ ತಾತ್ವಿಕ ಅಂತ್ಯ ನೀಡಿದ ರಾಮಭಕ್ತ ಕೆ. ಪರಾಶರನ್ ಅವರಿಗೆ ಶ್ರೀ ಬರ್ರಾಬಜಾರ್ ಕುಮಾರಸಭಾ ಪುಸ್ತಕಾಲಯದ ವತಿಯಿಂದ ಚೆನ್ನೈನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಡಾ.ಹೆಡಗೇವಾರ್ ಪ್ರಗ್ಯಾ ಸಮ್ಮಾನ್ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಜೋಹೋ ಕಾರ್ಪೋರೇಷನ್ ನ ಸ್ಥಾಪಕ ಮತ್ತು ಸಿಇಒ ಶ್ರೀಧರ್ ವೆಂಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ಸುರೇಶ್ ಜೋಶಿ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಉಪಸ್ಥಿತರಿದ್ದರು. ತೆರಿಗೆ ಸಲಹೆಗಾರ ಸಜ್ಜನ್ ಕೆ ಆರ್ ತುಲ್ಸ್ಯಾನ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು 500 ವರ್ಷಗಳಿಂದ ರಾಮಜನ್ಮಭೂಮಿ ಪ್ರಕರಣ ಸಾಗಿ ಬಂದ ಹಾದಿಯನ್ನು ತಿಳಿಸಿದರು. ಹಾಗೆಯೇ ರಾಮಜನ್ಮಭೂಮಿ ಪ್ರಕರಣ ದೇವಸ್ಥಾನಕ್ಕಾಗಿ ಹೋರಾಟವಲ್ಲ. ಇದರಲ್ಲಿ ದೊರೆತ ವಿಜಯ ಹಿಂದೂ ಸಂಸ್ಕೃತಿಯ ಗೆಲುವು ಮತ್ತು ಹಿಂದೂಸ್ಥಾನದ ಹೆಮ್ಮೆ ಎನ್ನುವುದನ್ನು ಅರಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಸುರೇಶ್ (ಭಯ್ಯಾಜಿ) ಜೋಶಿ ಮಾತನಾಡಿ “ಕೆ. ಪರಾಶರನ್ ಮತ್ತು ಡಾ.ಹೆಡಗೇವಾರರಲ್ಲಿರುವ ಸಾಮ್ಯತೆಯ ಬಗ್ಗೆ ತಿಳಿಸಿದರು. ಹಾಗೂ ಕೆ.ಪರಾಶರನ್ ಅವರಿಗೆ ಸಂದ ಪುರಸ್ಕಾರ ಅವರ ವಯಸ್ಸು, ವಿಧೇಯತೆ ಅಥವಾ ಹಿರಿಯ ವ್ಯಕ್ತಿ ಎಂಬ ಕಾರಣಕ್ಕೆ ಲಭಿಸಿರುವುದಲ್ಲ. ಬದಲಾಗಿ, ಹಿಂದೂ ಧರ್ಮ ಮತ್ತು ಪ್ರಭು ಶ್ರೀರಾಮಚಂದ್ರನ ಮೇಲಿರುವ ಅಪಾರ ಭಕ್ತಿಯ ಕಾರಣಕ್ಕೆ ದೊರೆತಿದೆ. ಹಿಂದೂಗಳು ಸದಾ ಕೇಶವನನ್ನು ಸ್ಮರಿಸುವಂತೆ ಕೇಶವ ಪರಾಶರನ್ ಅವರನ್ನೂ ಸ್ಮರಿಸುತ್ತಾರೆ” ಎಂದು ಅಭಿಪ್ರಾಯಪಟ್ಟರು.
“ಪರಾಶರನ್ ಅವರು ಅವಕಾಶಕ್ಕಾಗಿ ಕಾಯುವ ವ್ಯಕ್ತಿಯಲ್ಲ. ಸಮಾಜಕ್ಕೆ ತಮ್ಮ ಸಮರ್ಪಣಾ ಭಾವ, ಬದಲಾವಣೆ ತರಬೇಕೆಂಬ ಹಂಬಲ, ನಾಡಿನಲ್ಲಿ ಆತ್ಮವಿಶ್ವಾಸವನ್ನು ಪ್ರತಿಷ್ಠಾಪಿಸಬೇಕೆಂಬ ಧ್ಯೇಯದೊಂದಿಗೆ ತಮ್ಮ ಹೃದಯಾಂತರಾಳದಿಂದ ನಾಡಿಗಾಗಿ ದುಡಿಯಲು ತಯಾರಾಗಿದ್ದರು. ಅದರ ಪ್ರತಿಫಲವಾಗಿ ನಾಡಿನ ಕೀರ್ತಿಯನ್ನು ಮರು ಸ್ಥಾಪಿಸಿದರು. ಆದರೆ ಎಂದಿಗೂ ತಮ್ಮ ಯಶಸ್ಸಿನ ಗರಿಮೆಯನ್ನು ಇರಿಸಿಕೊಂಡವರಲ್ಲ” ಎಂದು ನುಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ನ್ಯಾಯವಾದಿ ಕೆ.ಪರಾಶರನ್, “ರಾಮಜನ್ಮಭೂಮಿ ಪ್ರಕರಣಕ್ಕಾಗಿ ನ್ಯಾಯಾಲಯದಲ್ಲಿ ವಾದಿಸುವ ಸಂದರ್ಭ ಚಂಪತ್ ರೈ ಅವರು ಪೋಷಕ ದಾಖಲೆಗಳನ್ನು ಒದಗಿಸಿ ನೀಡಿದ ಸಹಾಯವನ್ನು ನೆನೆದರು. ಹಾಗೆಯೇ ತನ್ನ ಕಾರ್ಯಕ್ಕಾಗಿ ಶ್ರೀರಾಮನೇ ತನಗೆ ಬೇಕಾದ ವ್ಯಕ್ತಿಗಳ ಮೂಲಕ ಕೆಲಸವನ್ನು ಮಾಡಿಸಿಕೊಂಡಿದ್ದಾನೆ. ಅವನ ಇಚ್ಛೆಯಂತೆ ಕಾರ್ಯನಿರ್ವಹಿಸಿದ ನನಗೆ ನೀವು ತೋರಿದ ಪ್ರೀತಿಗೆ ಆಭಾರಿಯಾಗಿದ್ದೇನೆ” ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೋಹೋ ಕಾರ್ಪೋರೇಷನ್ ನ ಸ್ಥಾಪಕ ಮತ್ತು ಸಿಇಒ ಶ್ರೀಧರ್ ವೆಂಬು ಮಾತನಾಡಿ ರಾಷ್ಟ್ರ ಮತ್ತು ಶ್ರೀರಾಮನ ಸೇವೆಗಾಗಿ ದುಡಿದ ಕೆ.ಪರಾಶರನ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು. ಕಾರ್ಯಕ್ರಮವು ಗೀತೆಯ ಮೂಲಕ ಪ್ರಾರಂಭಗೊಂಡು, ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು.