ಜಾರ್ಖಂಡ, ಬಿಹಾರ ರಾಜ್ಯಗಳ ಪೂರ್ವ ರಾಜ್ಯಪಾಲರಾಗಿದ್ದ, ಕರ್ನಾಟಕದ ಶಿವಮೊಗ್ಗ ಜಿಲ್ಲೆಯವರಾದ ಎಂ ರಾಮಾ ಜೋಯಿಸ್ ಇಂದು ನಿಧನರಾಗಿದ್ದಾರೆ. ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದ ರಾಮಾಜೋಯಿಸರು ರಾಜ್ಯ ಸಭಾ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದವರು. ಅವರಿಗೆ ೯೦ ವರ್ಷ ವಯಸ್ಸಾಗಿತ್ತು.
೧೯೩೧ ರಲ್ಲಿ ಜನಿಸಿದ ಎಂ (ಮಂಡಗದ್ದೆ) ರಾಮಾ ಜೋಯಿಸ್ ಅವರು ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ತಮ್ಮ ಓದು ಮುಗಿಸಿ, ಬಿಎ ಬಿಎಲ್ ಪದವಿಗಳಿಸಿದರು. ರಾಮಾ ಜೋಯಿಸರು ವಿದ್ಯಾರ್ಥಿ ದೆಸೆಯಲ್ಲೇ ಆರೆಸ್ಸೆಸ್ ನ ಸ್ವಯಂಸೇವಕರಾದರು. ಬಡತನದ ಕಾರಣದಿಂದಾಗಿ ಹೆಚ್ಚು ಓದಲು ಆಗದಿದ್ದ ಸಂದರ್ಭದಲ್ಲಿ, ಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಬೇಕೆಂದು ಗುರಿಹೊಂದಿದ್ದ ರಾಮಾಜೋಯಿಸರು ಆರೆಸ್ಸೆಸ್ ನ ಯಾದವ ರಾವ್ ಜೋಶಿಯವರ ಸಂಪರ್ಕಕ್ಕೆ ಬಂದನಂತರದಲ್ಲಿ, ಅವರ ಪ್ರೇರಣೆಯಿಂದಾಗಿ ಕಾನೂನು ಪದವಿ ಪಡೆದರು. ಆ ಸಮಯದಲ್ಲಿ ವಿಕ್ರಮ ವಾರ ಪತ್ರಿಕೆಯ ಸಹ ಸಂಪಾದಕರಾಗಿ ಕಾರ್ಯ ನಿರ್ವಹಿಸಿ ಸಂಜೆಯ ಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ೧೯೭೫ರಲ್ಲಿ ಅಂದಿನ ಪ್ರಧಾನಿ, ಶ್ರೀಮತಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿ ರಾಮಾ ಜೋಯಿಸ್ ಅವರು ಬಂಧನದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅದ್ವಾಣಿ ಅವರನ್ನು ಬಿಡುಗಡೆಗೊಳಿಸಬೇಕು ಎಂದು ನ್ಯಾಯಾಲಯದಲ್ಲಿ ವಾದ ಮಾಡಿದ್ದರಿಂದ, ಅವರನ್ನು ಬೆಂಗಳೂರಿನ ಕಾರಾಗೃಹದಲ್ಲಿ ಬಂಧಿಸಿಡಲಾಗಿತ್ತು. ನ್ಯಾಯ, ಧರ್ಮ, ಇತಿಹಾಸದ ವಿಷಯವಾಗಿ ಹಲವಾರು ಪುಸ್ತಕಗಳನ್ನು ಇವರು ಬರೆದಿದ್ದಾರೆ.
ಶಿವಮೊಗ್ಗದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂದಿನ ಕಾರ್ಯಕರ್ತರಾಗಿದ್ದಂತಹ ಶ್ರೀ ಕ. ನಾಗರಾಜರಾವ್ ಮತ್ತು ಶ್ರೀ ರಾಮಾಜೋಯಿಸ್ ರವರು, ಕ.ನಾಗರಾಜ ಹೆಸರಿನ ಉತ್ತರಾರ್ಧವನ್ನು ಮತ್ತು ರಾಮಾಜೋಯಿಸ್ ಹೆಸರಿನ ಪೂರ್ವಾರ್ಧವನ್ನು ಸೇರಿಸಿ “ರಾಜಾರಾಮ್ ಬುಕ್ ಹೌಸ್” ಪ್ರಾರಂಭ ಮಾಡಿದರು. ಹೀಗೆ ಶಿವಮೊಗ್ಗದ ಮೊದಲ ಪುಸ್ತಕದ ಅಂಗಡಿಯಾಗಿ ಪ್ರಾರಂಭವಾದದ್ದು, ಕಳೆದ 65 ವರ್ಷಗಳಿಂದ ಶಿವಮೊಗ್ಗದ ಸಾಹಿತ್ಯಾಸಕ್ತರ, ಓದುಗರ ನೆಚ್ಚಿನ ಮೆಚ್ಚಿನ ಆಕರವಾಗಿ ಇಂದಿಗೂ ತನ್ನ ಸೇವೆಯನ್ನು ಸಲ್ಲಿಸುತ್ತಲೇ ಇದೆ. ಹೆಚ್ಚು ಓದಿ
ನ್ಯಾ. ರಾಮಾ ಜೋಯಿಸರ ನಿಧನಕ್ಕೆ ಆರೆಸ್ಸೆಸ್ ಸಹಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ತೀವ್ರ ಸಂತಾಪ ಸೂಚಿಸಿದ್ದಾರೆ. “ಒಬ್ಬ ಧೀಮಂತ ನ್ಯಾಯಾಧೀಶರೂ ರಾಷ್ಟ್ರೀಯತೆಯ ಪ್ರಖರ ಆರಾಧಕರೂ ಸಾಮಾಜಿಕ ಸಂವೇದನಾಶೀಲರೂ ಹಿಂದುತ್ವದರ್ಶನದ ವ್ಯಾಖ್ಯಾನಕಾರರೂ ಆಗಿದ್ದ ಡಾ। ಎಂ. ರಾಮಾಜೋಯಿಸರು ಅತ್ಯಂತ ಸರಳ ಜೀವನಕ್ಕೆ ದ್ಯೋತಕವಾಗಿದ್ದವರು. ಹಲವು ವಿಚಾರಪೂರ್ಣ ಗ್ರಂಥಗಳ ಲೇಖಕರಾಗಿಯೂ ಅವರು ರಾಷ್ಟ್ರಸೇವೆಗೈದ ಆದರ್ಶ ಸ್ವಯಂಸೇವಕರು.
ಅವರ ನಿಧನ ತುಂಬಲಾರದ ತೆರವನ್ನುಂಟುಮಾಡಿದೆ. ಸಾರ್ಥಕ ಬಾಳಿನ ಈ ತಪಸ್ವಿಗೆ ಚಿರವಿದಾಯ ಹೇಳುತ್ತಾ ಅವರು ನನಗೆ ನೀಡಿದ ಪ್ರೇರಣೆ-ಮಾರ್ಗದರ್ಶನಗಳಿಗಾಗಿ ನಾನು ಋಣಿ ಎಂದು ಅವರ ಸ್ಮೃತಿಗೆ ಶಿರಬಾಗುತ್ತೇನೆ. ರಾಮಾಜೋಯಿಸರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು. ದಿವಂಗತ ಆತ್ಮವನ್ನು ಪರಮಾತ್ಮ ತನ್ನಲ್ಲಿ ಲೀನಗೊಳಿಸಲಿ” ಎಂದು ತಮ್ಮ ಸಂದೇಶದಲ್ಲಿ ಶ್ರೀ ದತ್ತಾತ್ರೇಯ ಹೊಸಬಾಳೆಯವರು ತಿಳಿಸಿದ್ದಾರೆ.
ಮಾನ್ಯ ರಾಮಾಜೊಯಿಸರು ನಮ್ಮ ರಾಷ್ಟ್ರ ಕಂಡ ಅಪರೂಪದ ನ್ಯಾಯಮೂರ್ತಿಗಳು. ತಪಸ್ವಿಯಂತೆ ಸಾರ್ಥಕ ಬದುಕನ್ನು ನಡೆಸಿದವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶ್ರದ್ಧಾವಂತ ಸ್ವಯಂಸೇವಕರು. ಅವರಿಗೆ ಸಂಘದ ಶ್ರದ್ಧಾಪೂರ್ವಕ ನಮನಗಳು. ಎಂದು ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳನ್ನೊಳಗೊಂಡ ಆರೆಸ್ಸೆಸ್ ದಕ್ಷಿಣ ಮಧ್ಯ ಕ್ಷೇತ್ರದ ಮಾನ್ಯ ಸಂಘಚಾಲಕರಾದ ಶ್ರೀ ವಿ ನಾಗರಾಜ ತಮ್ಮ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.
ಇಂದು ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಂಜೆ 4:30 ಕ್ಕೆ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.