– ದು.ಗು.ಲಕ್ಷ್ಮಣ, ಹಿರಿಯ ಪತ್ರಕರ್ತರು, ಅಂಕಣಕಾರರು
ಇದೇ ಜುಲೈ 1ರಂದು ಸಂಭ್ರಮದಿಂದ “ಪತ್ರಿಕಾ ದಿನ” ಆಚರಿಸುವ ಮಾಧ್ಯಮಮಿತ್ರರಿಗೆ 48 ವರ್ಷಗಳ ಹಿಂದೆ ಆಗಿನ ಪ್ರಧಾನಿ ಇಂದಿರಾಗಾಂಧಿ ಪತ್ರಿಕಾ ಸ್ವಾತಂತ್ರ್ಯವನ್ನು ಹೇಗೆ ನಿರ್ದಯವಾಗಿ ಬಗ್ಗುಬಡಿದಿದ್ದರು,ಪ್ರಜಾತಂತ್ರದ ನಾಲ್ಕನೇ ಆಧಾರಸ್ತಂಭ ವನ್ನು ಹೇಗೆ ಪುಡಿಪುಡಿ ಮಾಡಿದ್ದರು ಎಂಬ ವಿವರಗಳು ಅಷ್ಟಾಗಿ ಗೊತ್ತಿಲ್ಲವೆಂದೇ ಹೇಳಬಹುದು.1977ರ ನಂತರ ಜನಿಸಿದವರಿಗಂತೂ ಇದು ತಿಳಿಯಲು ಸಾಧ್ಯವೇ ಇಲ್ಲ,ಬಿಡಿ.1975ರ ಜೂನ್ 25ರಂದು ತುರ್ತುಪರಿಸ್ಥಿತಿಯ ಘೋಷಣೆಯ ಜತೆಜತೆಗೇ ಪತ್ರಿಕಾ ನಿರ್ಬಂಧವನ್ನೂ ಇಂದಿರಾಗಾಂಧಿ ಜಾರಿಗೆ ತಂದ ಉದ್ದೇಶ-ಸರ್ಕಾರದ ವಿರುದ್ಧ ಯಾವ ಸುದ್ದಿಗಳೂ ಟೀಕೆಟಿಪ್ಪಣಿಗಳೂ ಪ್ರಕಟವಾಗಕೂಡದು ಎಂಬ ಏಕೈಕ ಕಾರಣಕ್ಕೆ.ಹಾಗೇನಾದರೂ ಪ್ರಕಟವಾದಲ್ಲಿ ತನ್ನ ಅಧಿಕಾರಕ್ಕೆ ಕುತ್ತು ಖಂಡಿತ ಎಂಬ ಭೀತಿ ಆಕೆಗೆ ಇದ್ದೇ ಇತ್ತು.
ಆಗ ಕೇಂದ್ರ ವಾರ್ತಾ ಮಂತ್ರಿಯಾಗಿದ್ದ ವಿದ್ಯಾಚರಣ ಶುಕ್ಲಾ ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳನ್ನು ಅ) ಸರ್ಕಾರಕ್ಕೆ ಅನುಕೂಲ ಆ)ತಟಸ್ಥ ಇ)ಪ್ರತಿಕೂಲ-ಹೀಗೆ ಮೂರು ವಿಭಾಗಗಳಾಗಿ ವಿಂಗಡಿಸಿ,ಪ್ರತಿಕೂಲ ಇರುವವರನ್ನೆಲ್ಲ ಬಂಧಿಸಿ ಜೈಲಿಗಟ್ಟಿದರು.ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಹರಣ ಮಾಡಲಾಗಿದ್ದರೂ ಇಂದಿರಾಗಾಂಧಿ ಜಾರಿಗೆ ತಂದ ಪತ್ರಿಕಾ ನಿರ್ಬಂಧ ಸದುದ್ದೇಶದ್ದೆಂದು ನಂಬಿದ ಭಟ್ಟಂಗಿ ಪತ್ರಕರ್ತರಿಗೇನೂ ಕೊರತೆ ಇರಲಿಲ್ಲ.ಸೆನ್ಸಾರ್ಶಿಪ್ ಜಾರಿಗೆ ತಂದ ಆರಂಭದಲ್ಲಿ ಪ್ರಮುಖ ಹಿಂದಿ ಪತ್ರಿಕೆಗಳ 47 ಮಂದಿ ಸಂಪಾದಕರ ನಿಯೋಗವೊಂದು ಇಂದಿರಾ ಅವರನ್ನು ಭೇಟಿ ಮಾಡಿ ತಮ್ಮ ಬೆಂಬಲ ಸೂಚಿಸಿದ್ದು ಇದಕ್ಕೊಂದು ನಿದರ್ಶನ.
ಸುದ್ದಿ ನಿಯಂತ್ರಣಕ್ಕಾಗಿ ಇಂದಿರಾ ಸರ್ಕಾರ ಆಗ ಬಳಸಿದ ಅಸ್ತ್ರಗಳು ಹಲವಾರು.ಸೆನ್ಸಾರ್ ಅಧಿಕಾರಿಗಳ ಮೂಲಕ ಪತ್ರಿಕೆಗಳ ಬಾಯಿಗೆ ಬೀಗ ಹಾಕಿದ್ದರ ಜೊತೆಗೆ ಸರ್ಕಾರ ಕೈಗೊಂಡ ಇತರ ಕ್ರಮಗಳೆಂದರೆ:ಪತ್ರಿಕೋದ್ಯಮಿಗಳಿಗೂ ಅವರ ಕುಟುಂಬದವರಿಗೂ ಪೊಲೀಸರ ಮೂಲಕ ಕಿರುಕುಳ;ಕ್ಷುದ್ರ ಕಾರಣಗಳಿಗೂ ಮೀಸಾ ,ಡಿ ಐ ಆರ್ ಕಾಯ್ದೆಗಳ ಪ್ರಯೋಗ;ಪತ್ರಿಕಾ ವರದಿಗಾರರಿಗಿದ್ದ ಸೌಲಭ್ಯಗಳಿಗೆ ಅರ್ಧಚಂದ್ರ;ಪತ್ರಿಕಾ ಪ್ರಕಟಣೆಗೆ ನೀಡಲಾಗಿದ್ದ ಪರವಾನಗಿ ರದ್ದು;ಸರ್ಕಾರಿ ಜಾಹೀರಾತುಗಳಿಗೆ ಕತ್ತರಿ;ಸರ್ಕಾರಕ್ಕೆ ಪ್ರತಿಕೂಲರಾದ ಪತ್ರಕರ್ತರನ್ನು ಉದ್ಯೋಗದಿಂದ ಉಚ್ಛಾಟಿಸುವಂತೆ ಮಾಲೀಕರ ಮೇಲೆ ಒತ್ತಡ; ನ್ಯೂಸ್ ಪ್ರಿಂಟ್ ಹಂಚಿಕೆಯಲ್ಲಿ ವಿಪರೀತ ತಾರತಮ್ಯ ಇತ್ಯಾದಿ.
ಇಂಥ ಯಾವ ಒತ್ತಡ ಕ್ಕೂ ಮಣಿಯದೆ ಕೊನೆಯವರೆಗೂ ದಿಟ್ಟತನದಿಂದ ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತವರೆಂದರೆ “ಇಂಡಿಯನ್ ಎಕ್ಸ್ ಪ್ರೆಸ್”ನ ರಾಮನಾಥ ಗೋಯಂಕಾ ಮತ್ತು “ಸ್ಟೇಟ್ಸ್ ಮನ್”ಪತ್ರಿಕೆಯ ಸಿ. ಆರ್. ಇರಾನಿ.ಅದರಲ್ಲೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಮೇಲೆ ದಮನ ದಬ್ಬಾಳಿಕೆ ಅಷ್ಟಿಷ್ಟಾಗಿರಲಿಲ್ಲ.150ಕ್ಕೂ ಹೆಚ್ಚು ವಿವಿಧ ಬಗೆಯ ಮೊಕದ್ದಮೆಗಳನ್ನು ಆ ಪತ್ರಿಕೆ ಎದುರಿಸಬೇಕಾಯಿತು.ಅಂತಹ ಭಯಾನಕ ದಿನಗಳಲ್ಲೂ ಸರ್ಕಾರದ ವಿರುದ್ಧ ಉಗ್ರ ಲೇಖನ,ವ್ಯಂಗ್ಯ ಚಿತ್ರಗಳ ಮೂಲಕ ಆ ಪತ್ರಿಕೆ ಹೋರಾಡಿದ್ದು ಸ್ಮರಣಾರ್ಹ. ಖ್ಯಾತ ವ್ಯಂಗ್ಯಚಿತ್ರಕಾರ ಅಬು ಅಬ್ರಹಾಂ ಅವರ ವ್ಯಂಗ್ಯಚಿತ್ರವೊಂದು ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಆಗ ಪ್ರಕಟವಾಗಿದ್ದುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.ಜೊತೆಗೆ ಇಂದಿರಾ ಸರ್ವಾಧಿಕಾರವನ್ನು ಅಣಕಿಸುವಂತಿತ್ತು.ಆ ವ್ಯಂಗ್ಯಚಿತ್ರದ ಸಾರಾಂಶವಿಷ್ಟೇ:ಆಗಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಸ್ನಾನದ ಕೋಣೆಯ ಬಾತ್ ಟಬ್ ನಲ್ಲಿ ಕುಳಿತಿದ್ದಾಗ ಕೂಡ ಪ್ರಧಾನಿ ಇಂದಿರಾ ಕಳಿಸಿದ ಆದೇಶ ಪತ್ರಗಳಿಗೆ ಸಹಿ ಹಾಕಿ,ಅನಂತರ”If there are any more ordinances, just ask them to wait” ಎಂದು ಹೇಳುತ್ತಿರುವ ವ್ಯಂಗ್ಯಚಿತ್ರ ಅದಾಗಿತ್ತು!ರಾಷ್ಟ್ರಪತಿ ಹೇಗೆ ಸಂಪೂರ್ಣ rubber stamp ಆಗಿಬಿಟ್ಟಿದ್ದರು ಎಂಬ ಸಂದೇಶವೂ ಈ ವ್ಯಂಗ್ಯಚಿತ್ರದಲ್ಲಡಗಿತ್ತು!
ಖ್ಯಾತ ಗಾಯಕರಾಗಿದ್ದ ಕಿಶೋರ್ ಕುಮಾರ್ ಸಿನೆಮಾ ಹಾಡುಗಳಲ್ಲದೆ ಹಲವು ದೇಶಭಕ್ತಿ ಗೀತೆಗಳನ್ನೂ ಸುಶ್ರಾವ್ಯವಾಗಿ ಹಾಡಿದ್ದಾರೆ.ಆದರೆ ಅಂಥ ಹಾಡುಗಳನ್ನೂ ಇಂದಿರಾ ಸರ್ಕಾರಕ್ಕೆ ಸಹಿಸಲಾಗಲಿಲ್ಲ.ಆಕಾಶವಾಣಿ, ದೂರದರ್ಶನ ಗಳಲ್ಲಿ ಪ್ರಸಾರವಾಗುತ್ತಿದ್ದ ಅಂತಹ ಹಾಡುಗಳಿಗೆ ನಿಷೇಧ ಹೇರಲಾಯಿತು.”ಕಿಸ್ಸಾ ಕುರ್ಸಿ ಕಾ”ಎಂಬ ತುರ್ತುಪರಿಸ್ಥಿತಿಯನ್ನು ಲೇವಡಿ ಮಾಡುವ ಚಲನಚಿತ್ರದ ಮೂಲ ಪ್ರತಿಯನ್ನು ನಾಶ ಮಾಡಲಾಯಿತು. ಆಂಧೀಆಂದೋಲನ್ ಚಿತ್ರಗಳೂ ವಿರೂಪಗೊಂಡವು. ವಾಟರ್ ಗೇಟ್ ಹಗರಣವನ್ನಾಧರಿಸಿದ “ಆಲ್ ದಿ ಪ್ರಸಿಡೆಂಟ್ಸ್ ಮೆನ್”ಎಂಬ ಚಲನಚಿತ್ರಕ್ಕೂ ಸರ್ಕಾರದ ನಿರ್ಬಂಧ. ಸಂತಾನಹರಣ ಚಿಕೆತ್ಸೆಗೆ ಒಪ್ಪದ ದೆಹಲಿಯ ತುರ್ಕ್ಮನ್ ಗೇಟ್ ಬಳಿಯ ಜೋಪಡಿವಾಸಿಗಳ ವಸತಿಗಳನ್ನು ಧ್ವಂಸಗೊಳಿಸಿದ ಸುದ್ದಿ,ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ನಡೆಯುತ್ತಿದ್ದ ಕಿತ್ತಾಟಗಳು,ಪತ್ರಿಕಾ ಸೆನ್ಸಾರ್ ಗೆ ಸಂಬಂಧಿಸಿದ ನ್ಯಾಯಾಲಯದ ನಿರ್ಭೀಕ ತೀರ್ಪುಗಳು ಇತ್ಯಾದಿ ಯಾವುದೂ ಪ್ರಕಟವಾಗದಂತೆ ಕಠಿಣ ಸೆನ್ಸಾರ್ ಹೇರಲಾಗಿತ್ತು. ಸರ್ಕಾರದ ಕೃಪಾಪೋಷಿತ ಸುದ್ದಿ ಸಂಸ್ಥೆ ‘ಸಮಾಚಾರ್’ ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಮೊದಲೇ ತೇಲಿ ಬಿಡುತ್ತಿತ್ತು.ಅಂತಹ ಸುದ್ದಿಗಳನ್ನಷ್ಟೇ ಪತ್ರಿಕೆಗಳು ಪ್ರಕಟಿಸಬೇಕಿತ್ತು.
ಆದರೆ ಸರ್ಕಾರದ ಸೆನ್ಸಾರ್ ನೀತಿಗೆ ತೀಕ್ಷ್ಣ ಪ್ರತಿರೋಧ ತೋರಿದ್ದು ಹಲವಾರು ಸಣ್ಣ ಪತ್ರಿಕೆಗಳು.ಯಾವುದೇ ಆರ್ಥಿಕ ಏರುಪೇರನ್ನು ಸಹಿಸುವ ಕಿಂಚಿತ್ ತಾಕ ತ್ ಇಲ್ಲದಿದ್ದರೂ ಸರ್ಕಾರದ ವಿರುದ್ಧ ಅವು ಸೆಟೆದು ನಿಂತಿದ್ದು ಮಾತ್ರ ಸೋಜಿಗವೇ ಸರಿ. ಚೋ. ರಾಮಸ್ವಾಮಿಯವರ ‘ತುಘಲಕ್’ ಸೆನ್ಸಾರ್ ನೀತಿ ವಿರೋಧಿಸಿ, ಪ್ರಕಟಣೆ ಸ್ಥಗಿತಗೊಳಿಸಿತು.’ಫ್ರೀಡಂ ಫಸ್ಟ್’ ಪತ್ರಿಕೆಯ ಸಂಪಾದಕ ಮೀನೂ ಮಸಾನಿ ಮತ್ತು ‘ಭೂಮಿಪುತ್ರ’ದ ಸಂಪಾದಕ ಚುನಿ ಬಾಯಿ ವೈದ್ಯ ನ್ಯಾಯಾಲಯದ ಮೆಟ್ಟಿಲು ಹತ್ತಿ ಜಯ ಪಡೆದರು.ರಾಜ್ಮೋಹನ್ ಗಾಂಧಿ ಸಾರಥ್ಯದ ‘ಹಿಮ್ಮತ್’ ಪತ್ರಿಕೆ ಹೆಸರಿಗೆ ತಕ್ಕಂತೆ ಸರ್ವಾಧಿಕಾರ ಖಂಡಿಸಿ ಬರೆದು ಸಾಕಷ್ಟು ತೊಂದರೆಗಳನ್ನೂ ಮೈಮೇಲೆ ಎಳೆದುಕೊಂಡಿತು.ಎ. ಡಿ.ಗೋರವಾಲಾ ಅವರ ಪುಟ್ಟ ಪತ್ರಿಕೆ “ಒಪಿನಿಯನ್” ತೋರಿದ ದಿಟ್ಟತನ ಪ್ರಶಂಸಾರ್ಹ.ಆ ಪತ್ರಿಕೆಯನ್ನು ಮುದ್ರಿಸದಂತೆ ಸರ್ಕಾರ ಬೆದರಿಕೆ ಹಾಕಿದಾಗ,ಅದಕ್ಕೆ ಬಗ್ಗದ ಗೋರವಾಲಾ ಸೈಕ್ಲೋಸ್ಟೈಲ್ ಮಾಡಿ ಸಂಚಿಕೆಗಳನ್ನು ಹೊರ ತಂದರು.ಗೋರವಾಲಾರ ಪತ್ರಿಕೆಯನ್ನು ರವಾನಿಸಬಾರದೆಂದು ಅಂಚೆಕಚೇರಿಗೆ ಫರ್ಮಾನು ಹೊರಡಿಸಿದಾಗ,ಕೊನೆಯ ಸಂಚಿಕೆಯಲ್ಲಿ ಗೋರವಾಲಾ ಬರೆದಿದ್ದು:”ಇಂದಿರಾ ಆಳ್ವಿಕೆ ಹುಟ್ಟಿದ್ದು ಸುಳ್ಳಿನಲ್ಲಿ. ಬೆಳೆದಿದ್ದು ಸುಳ್ಳುಗಳಿಂದಲೇ…ಒಪಿನಿಯನ್ ಓದುಗರು ಬೀದಿಗಿಳಿಯುವವರಲ್ಲ.ಅವರು ಓದುತ್ತಾರೆ.ಯೋಚಿಸುತ್ತಾರೆ.ತೂಗಿ ನೋಡಿ ನಿರ್ಧಾರಕ್ಕೆ ಬರುತ್ತಾರೆ.ಈ ನಿರ್ಧಾರಗಳೇ ಸರ್ಕಾರಕ್ಕೆ ಗಾಬರಿ ಉಂಟು ಮಾಡುತ್ತವೆ.ಇಂತಹ ಸುರಕ್ಷಿತ ಓದುಗರನ್ನು ಕಂಡೇ ಸರ್ಕಾರ ಭಯಗೊಂಡಿದೆ..”
ಹಿಂದಿ ಸಾಪ್ತಾಹಿಕ “ಪಾಂಚಜನ್ಯ”,ಇಂಗ್ಲಿಷಿನ “ಜನತಾ”,ಮರಾಠಿಯ “ಸಾಧನಾ”,ಇಂದೋರ್ ನ ದಿನಪತ್ರಿಕೆ “ಸ್ವದೇಶ್”,ಕನ್ನಡ ವಾರ ಪತ್ರಿಕೆ “ವಿಕ್ರಮ”,ಮಳೆಯಾಳಂನ “ಕೇಸರಿ” ಮೊದಲಾದ ಪತ್ರಿಕೆಗಳ ಮುದ್ರನಾಲಯಗಳಿಗೆ ಬೀಗ ಜಡಿದು,ಆ ಪತ್ರಿಕೆಗಳ ಸಂಪಾದಕರನ್ನು ಬಂಧಿಸಲಾಯಿತು.”ವಿಕ್ರಮ”ಸಂಪಾದಕ ಬೆ.ಸು.ನಾ .ಮಲ್ಯ 20 ತಿಂಗಳ ಕಾಲ ಮೀಸಾ ಕಾಯ್ದೆಯಡಿ ಬಂಧನಕ್ಕೊಳಗಾಗಿ ಜೈಲು ಸೇರಬೇಕಾಯಿತು.
ಆಗ ಭಾರತದಲ್ಲಿದ್ದ ಅತ್ಯಂತ ಲೋಕಪ್ರಿಯ ವ್ಯಂಗ್ಯಚಿತ್ರ ಪತ್ರಿಕೆ “ಶಂಕರ್ಸ್ ವೀಕ್ಲಿ”.ಅದು 1975ರ ಆಕ್ಟೊಬರ್ ನಲ್ಲಿ ಕಣ್ಮುಚ್ಚಿತು.ಅದು ಕಣ್ಮುಚ್ಚಿದ್ದು ಹಣದ ತೊಂದರೆ ಯಿಂದಲ್ಲ.ಆದರೆ ಹಾಸ್ಯವೇ ಸತ್ತುಹೋಗಿದ್ದರಿಂದ! ಕೊನೆಯ ಬೀಳ್ಕೊಡುಗೆಯ ಸಂಪಾದಕೀಯದಲ್ಲಿ ಪತ್ರಿಕೆಯ ಸ್ಥಾಪಕ ಎಸ್. ಕೆ. ಪಿಳ್ಳೆ ಬರೆದಿದ್ದು ಹೀಗೆ:”ಜಗತ್ತು ,ಜಬರ್ದಸ್ತಿನ ನಾಯಕರು,ಕಪಟ-ಮೋಸಗಳು, ಕುಂದುಕೊರತೆಗಳನ್ನು ನೋಡಿ ಓದುಗರು ನಗುವಂತೆ ಮಾಡುವುದೇ ನಮ್ಮ ಉದ್ದೇಶವಾಗಿತ್ತು.ಆದರೆ ಸರ್ವಾಧಿಕಾರದಲ್ಲಿ ಹಾಸ್ಯಕ್ಕೆ ಜಾಗವಿಲ್ಲ.ಏಕೆಂದರೆ ಜನರು ಸರ್ವಾಧಿಕಾರಿಯನ್ನೇ ನೋಡಿ ನಗಬಹುದು.ಹಿಟ್ಲರ್ ಕಾಲದಲ್ಲಿ ಹಾಸ್ಯವಾಗಲಿ ಒಳ್ಳೆಯ ವ್ಯಂಗ್ಯಚಿತ್ರವಾಗಲಿ ಅಥವಾ ಕುತೂಹಲಜನಕ ಸುದ್ದಿಗಳಾಗಲಿ ಇರಲಿಲ್ಲ..”
ಕರ್ನಾಟಕದಲ್ಲಿ ಆಗ ಸರ್ವಾಧಿಕಾರದ ವಿರುದ್ಧ ನಡೆದ ಹೋರಾಟದ ಭಾಗವಾಗಿ “ಕಹಳೆ”ಎಂಬ ಭೂಗತ ಪತ್ರಿಕೆ ಸುಳ್ಯ ಸಮೀಪ ಆರಂತೋಡು ಗ್ರಾಮದ ಶ್ರೀಧರ ಭಟ್ ಎಂಬುವವರ ಮನೆಯಲ್ಲಿ ಮುದ್ರಣ ಆಗುತ್ತಿತ್ತು.ಕೆಲವು ಕಾಲ ನಾನೂ ಆ ಪತ್ರಿಕೆಯ ಸಂಪಾದಕನಾಗಿದ್ದೆ.ಆದರೆ ಒಂದು ದಿನ ಅಲ್ಲಿಗೆ ಪೊಲೀಸ್ ದಾಳಿಯಾಗಿ ನಾನು ಮತ್ತು ಇನ್ನೊಬ್ಬರು ಬಂಧನಕ್ಕೊಳಗಾಗಬೇಕಾಯಿತು.3 ತಿಂಗಳು ಮಡಿಕೇರಿ ಜೈಲು ವಾಸ.ಪತ್ರಿಕಾ ಸಂಪಾದಕನಾಗಿ 3 ತಿಂಗಳಲ್ಲೆ ನಾನು ಸರ್ಕಾರದ ದೃಷ್ಟಿಯಲ್ಲಿ” ದೇಶದ್ರೋಹಿ “ಯಾಗಿದ್ದೆ!ಅದಕ್ಕೆ ತಕ್ಕ “ಸನ್ಮಾನ”ವೂ ದೊರೆತಿತ್ತು!ಅದಾದ ಮೇಲೆ ಇದುವರೆಗೆ ಅದೆಷ್ಟೋ ಪ್ರಶಸ್ತಿಗಳು,ಸನ್ಮಾನಗಳು ಬೇಡವೆಂದರೂ ದೊರಕಿವೆ.ಆದರೆ 3 ತಿಂಗಳ ಆ ಸೆರೆವಾಸದ” ಸನ್ಮಾನ”ವನ್ನು ನಾನೆಂದೂ ಮರೆಯಲಾರೆ!ಆಗ ನನಗೆ 23ರ ಹರೆಯ.
ಮಂಗಳೂರಿನ “ದಿವ್ಯವಾಣಿ”ಪತ್ರಿಕೆಯ ಬಿಸಿರಕ್ತದ ತರುಣ ಸಂಪಾದಕ ರಾಘವೇಂದ್ರ ಎಂ.ನಾಗೋರಿಯವರದು ಕೆಚ್ಚೆದೆಯ ಸಾಹಸ.ನಿರ್ಭಯವಾಗಿ ಸರ್ಕಾರದ ಉಗ್ರ ಖಂಡನೆ.ಡಿ ಐ ಆರ್ ಕಾಯ್ದೆ ಅನ್ವಯ ನಾಗೋರಿಯವರಿಗೆ 100 ದಿನಗಳ ಸಜೆ.ಸೆರೆವಾಸ ಮುಗಿಸಿ ಬಂದ ಬಳಿಕ “ಪುನಶ್ಚ ಹರಿಃ ಓಂ”ಶೀರ್ಷಿಕೆ ಅಡಿಯಲ್ಲಿ ಮತ್ತೆ ಉಗ್ರ ಬರವಣಿಗೆ ಪ್ರಾರಂಭಿಸಿದರು.ಪರಿಣಾಮವಾಗಿ ಮತ್ತೆ ಮೀಸಾ ದಡಿ ಬಂಧನ.ಬೆಳಗಾವಿಯ ಹಿಂಡಲ
ಗಾ ಜೈಲಿಗೆ ರವಾನೆ.ಅಲ್ಲೂ ಈತ ಸುಮ್ಮನಿರಲಿಲ್ಲ.”ಕ್ರಾಂತಿ”ಎಂಬ ಕೈಬರಹದ ಪತ್ರಿಕೆ ಹೊರಡಿಸಿ ತಮ್ಮ ಮೊನಚು ಲೇಖನಿ ಝಳಪಿಸಿದರು.ಬಿಡುಗಡೆಯಾದ ಬಳಿಕ “ದಿವ್ಯ ವಾಣಿ”ಯನ್ನು ದಿನಪತ್ರಿಕೆಯಾಗಿ ರೂಪಿಸಿದರು.15 ಸಾವಿರದವರೆಗೆ ಪ್ರಸಾರ ಸಂಖ್ಯೆ ಏರಿತು.
ಆದರೆ ನಾಗೋರಿಯವರ ಖಾರವಾದ ಬರಹಗಳು ಜಿಲ್ಲೆಯ ಆಳರಸ ಪಕ್ಷದ ಪುಢಾರಿಗಳಿಗೆ,ಕಳ್ಳ ಸಾಗಣೆದಾರರಿಗೆ,ಭ್ರಷ್ಟ ಪೊಲೀಸ್ ಅಧಿಕಾರಿಗಳಿಗೆ ಅಪಥ್ಯ ಎನಿಸಿತು.ಹಿರಿಯ ಪತ್ರಕರ್ತರೊಬ್ಬರು ನಾಗೋರಿಯವರಿಗೆ “ನಿನಗೆ ಬದುಕುವ ಆಸೆ ಇಲ್ವಾ?ದುಷ್ಟಶಕ್ತಿಗಳನ್ನು ನೀನಾಗಿ ಮೈಮೇಲೆ ಏಕೆ ಎಳೆದುಕೊಳ್ತೀಯಾ?ಸಾವಿರ ಬಾರಿ ಯೋಚಿಸಿ ಬರಿ’ಎಂದು ಬುದ್ಧಿವಾದ ಹೇಳಿದಾಗ,ಆತನ ತಣ್ಣನೆಯ ಪ್ರತಿಕ್ರಿಯೆ:”ಅವರು ನನ್ನನ್ನು ಏನು ಮಾಡಿಯಾರು?ಕೊಲ್ಲ ಬಹುದು.ಅಷ್ಟೇ ತಾನೇ?ಹೇಡಿಗಳು ಸಾವಿರ ಬಾರಿ ಸಾಯುತ್ತಾರೆ.ವೀರನಂತೆ ನಾನು ಒಂದೇ ಬಾರಿ ಸಾಯುತ್ತೇನೆ’.
ಹಾಗೆಯೇ ಆಯಿತು.1977ರ ಸೆಪ್ಟೆಂಬರ್ 2ರಂದು ತಮ್ಮ ಕಚೇರಿಯಲ್ಲಿ ಬೆಳಿಗ್ಗೆ ದೀಪ ಹಚ್ಚಿ ದೇವರಿಗೆ ಕೈ ಮುಗಿಯು ತ್ತಿದ್ದಾಗ ಹಂತಕರ ಚೂರಿ ಇರಿತಕ್ಕೆ ನಾಗೋರಿ ಬಲಿಯಾದರು.ನಿರ್ಭೀತ ಪತ್ರಕರ್ತನೊಬ್ಬನ ಧ್ವನಿ ಉಡುಗಿತು. ಇಂತಹ ಬೆರಳೆಣಿಕೆಯ ಕೆಲವು ಪತ್ರಕರ್ತರನ್ನು ಹೊರತು ಪಡಿಸಿದರೆ, ಬಹುತೇಕ ಖ್ಯಾತ ನಾಮ ಪತ್ರಕರ್ತರು,ಪ್ರಗತಿಪರರೆಂದು ಬಿಂಬಿಸಿಕೊಳ್ಳುತ್ತಿದ್ದವರು ಸರ್ಕಾರದ ಪರಾಕುಪಂಪು ಒತ್ತುವು ದರಲ್ಲೇ ತಮ್ಮ ಬದುಕಿನ ಸಾರ್ಥಕ್ಯ ಕಂಡುಕೊಂಡಿದ್ದರು!ಇಂದಿರಾಗಾಂಧಿಯ ಕೃಪೆಗೆ ಪಾತ್ರ ರಾಗಲು ನಾ ಮುಂದು ತಾ ಮುಂದು ಎಂದು ಕ್ಯೂ ಹಚ್ಚಿದ್ದರು.ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ವಿರುದ್ಧ ದನಿಯೆತ್ತದೆ ನರಸತ್ತ ನಾಮರ್ದಗಳಾಗಿದ್ದರು.
ಇಂಥವರನ್ನು ಗಮನಿಸಿಯೇ ,ತುರ್ತುಪರಿಸ್ಥಿತಿ ಬಳಿಕ ಕೇಂದ್ರ ಸರ್ಕಾರದ ವಾರ್ತಾ ಸಚಿವರಾಗಿದ್ದ ಎಲ್.ಕೆ.ಆಡ್ವಾಣಿ ಅವರು ಒಮ್ಮೆ ಪತ್ರಿಕಾಗೋಷ್ಠಿ ಯಲ್ಲಿ ಮಾರ್ಮಿಕವಾಗಿ ಪ್ರಶ್ನಿಸಿದ್ದರು:”ಇಂದಿರಾಗಾಂಧಿ ನಿಮಗೆ ಬಗ್ಗಿ ಎಂದಷ್ಟೇ ಹೇಳಿದ್ದರು. ಆದರೆ ನೀವೇಕೆ ತೆವಳಿದ್ದು?”( Indiragandhi only asked to bend, but why did you crawled?)
ಜುಲೈ 1ರ ಪತ್ರಿಕಾ ದಿನಾಚರಣೆ ಹಿನ್ನೆಲೆಯಲ್ಲಿ ಇವೆಲ್ಲ ಸಂಗತಿ ಗಳನ್ನು ಮಾಧ್ಯಮಮಿತ್ರರು ಹಾಗೂ ಆಸಕ್ತ ಓದುಗ ರೊಡನೆ ಹಂಚಿಕೊಳ್ಳಬೇಕೆನಿಸಿತು.