ಲೇಖಕರು: ರೋಹಿತ್ ಚಕ್ರತೀರ್ಥ
ಪ್ರಕಾಶಕರು: ಅಯೋಧ್ಯೆ ಪ್ರಕಾಶನ
ಪುಸ್ತಕಗಳಿಗಾಗಿ ಸಂಪರ್ಕಿಸಿ: 9620916996
ಪುಸ್ತಕ ಪರಿಚಯ : ಸಚಿನ್ ಪಾರ್ಶ್ವನಾಥ್

ಈ ಪುಸ್ತಕದ ಕರ್ತೃ ರೋಹಿತ್ ಚಕ್ರತೀರ್ಥ. ರಾಶಿ ರಾಶಿ ಮಾಹಿತಿಗಳ ಆಸ್ಥೆಯಿಂದ ಆರಿಸಿ ತಂದು ತಂದು ಚಂದದ ಮಾಲೆ ಕಟ್ಟುವುದು ರೋಹಿತರಿಗೆ ಸಿದ್ಧಿಸಿದ ವಿದ್ಯೆ. ಅವರ ಅಂಕಣಗಳ ಗುಚ್ಛವೇ ಈ ಗಂಧದ ಮಾಲೆ. ಬದುಕಿನಲ್ಲಿ ಎಷ್ಟೇ ವೈರುಧ್ಯವಿರಲಿ, ವ್ಯಸ್ತತೆಯಿರಲಿ ಎಲ್ಲವನ್ನೂ ಬದಿಗೆ ಸರಿಸಿ ಒಮ್ಮೆ ಅವರ ಯಾವುದಾದರೊಂದು ಪುಸ್ತಕ ತೆರೆಯಿರಿ. ತುಟಿಯ ಮೇಲೆ ಒಂದು ಪುಟ್ಟ ನಗು, ಕಣ್ಣುಗಳಲ್ಲಿ ನಿಲ್ಲದೇ ಓಡುವ ಕಾತುರ ಎಲ್ಲಿಯಾದರೂ ನಿಂತಿತು ಎಂದರೆ ಕೇಳಿ. ಮಿಗಿಲಾಗಿ ಈ ಸಾಲುಗಳು ನನ್ನ ವಿಮರ್ಶೆಯಲ್ಲ, ನನ್ನ ಅನುಭವ.

ಶ್ರೀ ರೋಹಿತ್ ಚಕ್ರತೀರ್ಥ ಅವರು ದಿನಪತ್ರಿಕೆಗೆ‌ ಬರೆಯುತ್ತಿದ್ದ ವ್ಯಕ್ತಿಚಿತ್ರಗಳ ಸಂಗ್ರಹ ಈ ಗಂಧದ ಮಾಲೆ. ಇನ್ನಷ್ಟು ಬೇಕೆನಿಸುವ ರುಚಿ ಹುಟ್ಟಿಸುವ ಹಲವು ವಿಶಿಷ್ಟತೆಗಳ ಸಂಗ್ರಹ. ನಿಮ್ಮ ಮೇಜಿನ ಮೇಲಿನ ಕಾಫಿ ಹಾಗೇ‌ ಇರುತ್ತದೆ, ಆದರೆ ಪುಸ್ತಕದೊಳಗಿನ ನಿಮ್ಮ ತಲೆಯನ್ನು ಹೊರ ಜಗತ್ತಿಗೆ ಬಿಡದಷ್ಟು ಕುತೂಹಲ ಕಟ್ಟುವ ಪುಸ್ತಕ. ಓದಲು ಕುಳಿತಿರೆಂದರೆ ಪದಗಳ ಪರ್ಯಟನೆಗೆ ಕುಳಿತಂತೆ. ಅಮೆರಿಕೆಯ ಈಸಿ ಎಡ್ಡಿಯಿಂದ ಹಿಡಿದು ವಿರಾಟ್ ಕೊಹ್ಲಿ, ಕಲ್ಪನಾ ಚಾವ್ಲಾ ಹೀಗೆ ಹಲವರು ತಮ್ಮ ಬಗ್ಗೆ ಹೇಳುತ್ತಾರೆ. ಬದುಕು ಕಟ್ಟಿಕೊಂಡವನ ಕತೆಯಿಂದ ಹಿಡಿದು ನಾಡು ಕಟ್ಟಿದವ, ದೇಶ ಕಟ್ಟಿದವ, ಜಗತ್ತು ಗೆದ್ದವ ಕೊನೆಗೆ ಸಾವಿಗೂ ‌ತೊಡೆ ತಟ್ಟಿದವರ ಜೀವಂತ ಬದುಕುಗಳಿದೆ. ಎಲ್ಲಿಯ ತನಕ ಎಂದರೆ ಅಕ್ಷರಮತ್ತನಾದ ಓದುಗನ ಪಾತ್ರಗಳು ಬಂದು ತೋಳುಗಳಿಗೆ ಭುಜ ಕೊಟ್ಟು ದೂರ ಒಯ್ದಂತೆ.

ಗಂಧದ ಮಾಲೆ ಹೊತ್ತಿಗೆಯ ಒಂದೆರಡು ತುಣುಕುಗಳ ಹಂಚಿಕೊಳ್ಳುವೆ. ಪುಟ್ಟ ಕಂದಮ್ಮಗಳ ಚಂದದ ಕಿರು ಪದ್ಯಗಳ ಹೆಕ್ಕಿ ತಂದು ಗಂಧದ ಮಾಲೆಗೆ ಘಮ್ಮೆನ್ನುವ ಗುಲಾಬಿ ಬಣ್ಣದ ಹೂಗಳ ಪೊಣಿಸಿದ್ದಾರೆ.

ಈ ಒಂದು ಮನೆಯನ್ನು

ನಾವು ಬಿಡುತ್ತಿದ್ದೇವೆ

ಆ ಮನೆಗೆ ಬೇರೆಯವರು

ಬರುತ್ತಾರೆ

ಇದು ಅಕಾಲಿಕ ಮರಣ ಹೊಂದಿದ ಹತ್ತರ ಹರೆಯದ ಪೂರ್ಣನ ಕವಿತೆ ಎಂದರೆ ನೀವು ನಂಬಲೇಬೇಕು. ಇನ್ನೊಂದು ಘಟನೆ. ತನ್ನ ನಾಯಿಯ ಕಳೆದುಕೊಂಡ ಪುಟ್ಟ ಬಾಲಕನ ಕುರಿತು.

ಕ್ಯಾನ್ಸರ್ ಪೀಡಿತ ಕೊನೆಯ ಹಂತದಲ್ಲಿದ್ದ ಸಾಕು ನಾಯಿ ಬೇಲ್ಕರ್‌ಗೆ ದಯಾಮರಣದ ಚುಚ್ಚುಮದ್ದು ಕೊಟ್ಟ ಡಾಕ್ಟರ್ ಮೈಕ್ ಶಿಷ್ಟಾಚಾರ ಪಾಲಿಸಿ, ರಾನ್ ಕುಟುಂಬದೊಂದಿಗೆ ಕೆಲವು ನಿಮಿಷಗಳನ್ನು ಕಳೆದರು. ಬೆಕ್ಕು ನಾಯಿಗಳಿಗೆಲ್ಲ ಹೆಚ್ಚೆಂದರೆ 12 ವರ್ಷ ಬದುಕುತ್ತವೆ. ಪಾಪ ಅಷ್ಟು ಚಿಕ್ಕ ಆಯುಸ್ಸನ್ನು ದೇವರು ಯಾಕೆ ಕೊಟ್ಟನೋ ಏನೋ – ಎಂಬ ಮಾತು ಬಂತು. ಅದುವರೆಗೆ ಆ ಎಲ್ಲ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ರಾನ್ ಮಗ ಶೇನ್ ಥಟ್ಟನೆ “ಯಾಕೆ ಅನ್ನೋದು ನನಗೆ ಗೊತ್ತು ಡಾಕ್ಟರ್” ಎಂದ.

“ಹೌದ?”

“ಹೌದು” ಎನ್ನುತ್ತಾ ಎಲ್ಲರ ಮಧ್ಯೆ ಜಿಗಿದು ಡಾಕ್ಟರ್ ಮೈಕ್ ರನ್ನು ನೋಡುತ್ತ ಹೇಳಿದ “ನೋಡಿ ಡಾಕ್ಟರ್, ಈಗ ಮನುಷ್ಯ 100 ವರ್ಷ ಬದುಕ್ತಾ‌ನೆ. ಯಾಕೆ ಅಷ್ಟು ದೊಡ್ಡ ಲೈಫ್ ಕೊಟ್ಟಿದ್ದಾನೆ ದೇವರು ಹೇಳಿ. ಯಾಕೇ ಅಂದ್ರೆ ಮನುಷ್ಯ ಹುಟ್ಟಿದ ಮೇಲೆ ಬೇರೆಯವರ ಜೊತೆ ಹೊಂದಿಕೊಂಡು ಹೋಗೋದನ್ನು ಕಲೀಬೇಕು. ಎಲ್ಲರನ್ನೂ ಪ್ರೀತಿಯಿಂದ ನೋಡೋದನ್ನು ಕಲೀಬೇಕು. ಮನೆಯವರ ಜೊತೆ ಯಾವತ್ತೂ ಖುಷಿಯಾಗಿರೋದು ಹೇಗೆ ಅನ್ನೋದನ್ನು ಕಲೀಬೇಕು. ಪ್ರಾಮಾಣಿಕನಾಗಿರುವುದನ್ನು ಕಲೀಬೇಕು. ಇಷ್ಟೆಲ್ಲಾ ವಿಷಯ ಕಲಿತು ಅಳವಡಿಸಿಕೊಂಡು ಬದುಕಬೇಕು ಅಂದ್ರೆ ನೂರು ವರ್ಷ ಬೇಕು. ಆದ್ರೆ ನಾಯಿಗೆ ಅದೆಲ್ಲ ವಿಷಯ ಕಲೀಬೇಕಾದ ಅಗತ್ಯವೇ ಇರೋದಿಲ್ಲ. ಯಾಕೇಂದ್ರೆ ಹೊಂದಿಕೊಂಡು ಹೋಗೋದು, ಪ್ರೀತಿ ಮಾಡೋದು, ಪ್ರಾಮಾಣಿಕನಾಗಿರೋದು ಇವನ್ನೆಲ್ಲ ಅದು ಹುಟ್ತಾನೇ ಕಲ್ತೇ ಬಂದಿರೋದ್ರಿಂದ, ಇಲ್ಲಿ ಈ ಜಗತ್ತಲ್ಲಿ ಕೇವಲ ಬದುಕಿಹೋದ್ರೆ ಆಯ್ತು ನೋಡಿ! ಅದಕ್ಕೆ ದೇವರು ನಾಯಿಗೆ 12 ವರ್ಷ ಬದುಕೋದಕ್ಕೆ ಅಂತ ಮಾತ್ರ ಕೊಟ್ಟಿದ್ದಾನೆ.”

ಎಂತಹ ಘಟನೆ. ಇಂತಹ ನೂರಾರು ಘಟನೆಗಳ ಸಂಗ್ರಹ ರೋಹಿತ್‌ಚಕ್ರತೀರ್ಥ ಅವರ ಗಂಧದಮಾಲೆ. ಓದಲೇಬೇಕಾದ ಪುಸ್ತಕ.

ಯಾವುದೇ ವಿಷಯವನ್ನು ಈಚೆಯಿಂದ ಆಚೆಗೆ ಯಾರಾದರೂ ಮುಟ್ಟಿಸಿ ಬಿಡುತ್ತಾರೆ. ಆದರೆ ತನ್ನತನವನ್ನು ಬೆರೆಸುವುದು ಆ ವಿಷಯವನ್ನು ಅರ್ಥೈಸಿಕೊಂಡವರಿಗೆ ಮಾತ್ರ ಸಾಧ್ಯ. ಅನವರತ ಮಮತೆಯಿಂದ ಚಕ್ರತೀರ್ಥ ಅವರು ಪುಟ್ಟ ಪುಟ್ಟ ವೈಶಿಷ್ಟ್ಯತೆಗಳನ್ನು ಹೆಕ್ಕಿ ಪೋಣಿಸಿದ್ದಾರೆ. ಮೂಲ ವಸ್ತುವಿಗೆ ಧಕ್ಕೆ ಬಾರದಂತೆ ಆಪ್ತತೆಯ ಹೆಣೆಯುವ ಕೆಲಸ ಅವರಿಗೆ ಸಿದ್ಧಿಸಿದೆ. ಒಮ್ಮೆಯಾದರೂ ಗಂಧದ ಮಾಲೆ ಆಸ್ವಾದಿಸಿ ಬಿಡಿ.

ಪುಸ್ತಕ ಪರಿಚಯ : ಸಚಿನ್ ಪಾರ್ಶ್ವನಾಥ್
ಬ್ಯಾಂಕ್ ಉದ್ಯೋಗಿ ಮತ್ತು ಹವ್ಯಾಸಿ ಬರಹಗಾರ, ಸಾಗರ, ಶಿವಮೊಗ್ಗ

Leave a Reply

Your email address will not be published.

This site uses Akismet to reduce spam. Learn how your comment data is processed.