ಇಂದು ಜಯಂತಿ

-ಲೇಖನ : ಬ್ರಿಜೇಶ್  ಭಗತ್, ಚಿತ್ರದುರ್ಗ

ಭಾರತೀಯ ಸೇನಾ ಇತಿಹಾಸದ ಪುಟಗಳಲ್ಲಿ ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ ಅವರ ಹೆಸರು ಕೇವಲ ಒಬ್ಬ ದಂಡನಾಯಕನಾಗಿ ಮಾತ್ರವಲ್ಲದೆ, ಶೌರ್ಯ, ಕಾರ್ಯತಂತ್ರ, ಚತುರತೆ ಮತ್ತು ಅಚಲವಾದ ವೃತ್ತಿಪರತೆಯ ಸಾಕಾರರೂಪವಾಗಿ ಅಚ್ಚೊತ್ತಿದೆ. ಕರ್ನಾಟಕದ ಕೊಡಗಿನ ವೀರ ಪರಂಪರೆಯಿಂದ ಬಂದ ಇವರು, ಬ್ರಿಟಿಷ್ ಭಾರತೀಯ ಸೇನೆಯಿಂದ ಹಿಡಿದು ಸ್ವತಂತ್ರ ಭಾರತದ ಭೂಸೇನಾ ಮುಖ್ಯಸ್ಥರವರೆಗೆ ಕ್ರಮಿಸಿದ ಹಾದಿಯು ಅಪ್ರತಿಮ ಸಾಹಸಗಾಥೆಗಳಿಂದ ಕೂಡಿದೆ. ಎರಡನೇ ಮಹಾಯುದ್ಧದಲ್ಲಿ ಬ್ರಿಗೇಡ್ ಒಂದನ್ನು ಯುದ್ಧಭೂಮಿಯಲ್ಲಿ ಮುನ್ನಡೆಸಿದ ಏಕೈಕ ಭಾರತೀಯ ಅಧಿಕಾರಿ ಎಂಬ ಹೆಗ್ಗಳಿಕೆಯಿಂದ ಹಿಡಿದು, ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳ ಅಂತರಾಷ್ಟ್ರೀಯ ರಾಯಭಾರಿಯವರೆಗೆ ಅವರು ನಿರ್ವಹಿಸಿದ ಪಾತ್ರಗಳು ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಿವೆ.

ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ ಅವರು ಮಾರ್ಚ್ 31, 1906 ರಂದು ಅಂದಿನ ಕೊಡಗು ಪ್ರಾಂತ್ಯದ (ಈಗಿನ ಕರ್ನಾಟಕದ ಕೊಡಗು ಜಿಲ್ಲೆ) ಮಡಿಕೇರಿಯಲ್ಲಿ ಜನಿಸಿದರು. ಕೊಡವ ಸಮುದಾಯದ ಪ್ರತಿಷ್ಠಿತ ‘ಕೊಡಂದೆರ’ ವಂಶಕ್ಕೆ ಸೇರಿದ ಇವರ ಕುಟುಂಬವು ಆ ಭಾಗದ ಪ್ರಮುಖ ಕಾಫಿ ಬೆಳೆಗಾರರಾಗಿದ್ದರು. ಇವರ ತಂದೆ ಸುಬ್ಬಯ್ಯ ಮತ್ತು ತಾಯಿ ಸೀತಮ್ಮ. ಇವರ ತಾಯಿ ಸೀತಮ್ಮ ಅವರು ಅತ್ಯಂತ ಸುಶಿಕ್ಷಿತರಾಗಿದ್ದು, ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ಸಾರ್ವಜನಿಕ ಸೇವೆಯನ್ನು ಗುರುತಿಸಿ ಬ್ರಿಟಿಷ್ ಸರ್ಕಾರವು ಅವರಿಗೆ ಪ್ರತಿಷ್ಠಿತ ‘ಕೈಸರ್-ಎ-ಹಿಂದ್’ ಪದಕವನ್ನು ನೀಡಿ ಗೌರವಿಸಿತ್ತು.


ತಿಮ್ಮಯ್ಯನವರು ತಮ್ಮ ಪೋಷಕರಿಗೆ ಜನಿಸಿದ ಆರು ಮಕ್ಕಳಲ್ಲಿ ಎರಡನೆಯವರು. ಇವರ ಕುಟುಂಬವು ಸೈನಿಕ ಪರಂಪರೆಯೊಂದಿಗೆ ಆಳವಾದ ಸಂಬಂಧವನ್ನು ಹೊಂದಿತ್ತು. ಇವರ ತಾಯಿಯ ಕಡೆಯ ಸಂಬಂಧಿಯಾದ ಸಿ.ಬಿ. ಪೊನ್ನಪ್ಪ ಅವರು ಭಾರತೀಯ ಅಧಿಕಾರಿಗಳ ಮೊದಲ ಬ್ಯಾಚ್‌ನಲ್ಲಿ ತರಬೇತಿ ಪಡೆದವರಾಗಿದ್ದರು ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಸಹಪಾಠಿಯಾಗಿದ್ದರು. ತಿಮ್ಮಯ್ಯನವರ ಇಬ್ಬರು ಸಹೋದರರಾದ ಪೊನ್ನಪ್ಪ ಮತ್ತು ಸೋಮಯ್ಯ ಕೂಡ ಭಾರತೀಯ ಸೇನೆಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದರು. ಈ ಕೌಟುಂಬಿಕ ವಾತಾವರಣವು ತಿಮ್ಮಯ್ಯ ಅವರಲ್ಲಿ ಬಾಲ್ಯದಿಂದಲೇ ಶಿಸ್ತು, ದೇಶಪ್ರೇಮ ಮತ್ತು ಸವಾಲುಗಳನ್ನು ಎದುರಿಸುವ ಧೈರ್ಯವನ್ನು ಬೆಳೆಸಿತು.


ತಿಮ್ಮಯ್ಯ ಅವರ ಶೈಕ್ಷಣಿಕ ಜೀವನವು ಅಂದಿನ ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾರಂಭವಾಯಿತು. ಅವರ ಎಂಟನೇ ವಯಸ್ಸಿನಲ್ಲಿ, ಅವರನ್ನು ಮತ್ತು ಅವರ ಅಣ್ಣ ಪೊನ್ನಪ್ಪ ಅವರನ್ನು ತಮಿಳುನಾಡಿನ ಕೂನೂರಿನಲ್ಲಿರುವ ಸೇಂಟ್ ಜೋಸೆಫ್ ಕಾಲೇಜಿಗೆ ಸೇರಿಸಿದರು. ತಿಮ್ಮಯ್ಯ ಮತ್ತು ಪೊನ್ನಪ್ಪ ಇಲ್ಲಿ ಪ್ರವೇಶ ಪಡೆದ ಮೊದಲ ಭಾರತೀಯ ಮಕ್ಕಳಾಗಿದ್ದರು. ನಂತರ ಅವರ ಶಿಕ್ಷಣವು ಬೆಂಗಳೂರಿನ ಬಿಷಪ್ ಕಾಟನ್ ಬಾಯ್ಸ್ ಶಾಲೆಯಲ್ಲಿ ಮುಂದುವರೆಯಿತು. ತಿಮ್ಮಯ್ಯ ಅವರು ಕ್ರೀಡೆಗಳಲ್ಲಿ ಅತ್ಯಂತ ಆಸಕ್ತಿ ಹೊಂದಿದ್ದರು ಮತ್ತು ಹಾಕಿ, ಫುಟ್‌ಬಾಲ್ ಹಾಗೂ ಟೆನಿಸ್ ಪಂದ್ಯಗಳಲ್ಲಿ ಮಿಂಚುತ್ತಿದ್ದರು. ಶಾಲೆಯ ಆಕ್ಸಿಲರಿ ಫೋರ್ಸ್‌ಗೆ ಸೇರಿದ ನಂತರವೇ ಅವರಿಗೆ ಸೈನ್ಯದ ಬಗ್ಗೆ ಆಕರ್ಷಣೆ ಉಂಟಾಯಿತು.


1922 ರಲ್ಲಿ, ತಮ್ಮ 15ನೇ ವಯಸ್ಸಿನಲ್ಲಿ, ತಿಮ್ಮಯ್ಯ ಅವರು ಡೆಹ್ರಾಡೂನ್‌ನಲ್ಲಿ ಹೊಸದಾಗಿ ಸ್ಥಾಪಿಸಲಾದ ‘ಪ್ರಿನ್ಸ್ ಆಫ್ ವೇಲ್ಸ್ ರಾಯಲ್ ಇಂಡಿಯನ್ ಮಿಲಿಟರಿ ಕಾಲೇಜ್’ (ಈಗಿನ RIMC) ನ ಮೊದಲ ಬ್ಯಾಚ್‌ನ 32 ಕೆಡೆಟ್‌ಗಳಲ್ಲಿ ಒಬ್ಬರಾಗಿ ಆಯ್ಕೆಯಾದರು.
1924 ರಲ್ಲಿ, ಅತ್ಯಂತ ಕಠಿಣವಾದ ಲಿಖಿತ ಪರೀಕ್ಷೆ ಮತ್ತು ವೈಸರಾಯ್ ಅವರೊಂದಿಗಿನ ಸಂದರ್ಶನದ ನಂತರ, ಬ್ರಿಟನ್‌ನ ಪ್ರತಿಷ್ಠಿತ ರಾಯಲ್ ಮಿಲಿಟರಿ ಅಕಾಡೆಮಿ ಸ್ಯಾಂಡ್ಹರ್ಸ್ಟ್‌ನಲ್ಲಿ ತರಬೇತಿ ಪಡೆಯಲು ಆಯ್ಕೆಯಾದ ಆರು ಭಾರತೀಯ ಕೆಡೆಟ್‌ಗಳಲ್ಲಿ ತಿಮ್ಮಯ್ಯ ಒಬ್ಬರಾಗಿದ್ದರು.


ಫೆಬ್ರವರಿ 4, 1926 ರಂದು ತಿಮ್ಮಯ್ಯ ಅವರು ಭಾರತೀಯ ಸೇನೆಯಲ್ಲಿ ಸೆಕೆಂಡ್ ಲೆಫ್ಟಿನೆಂಟ್ ಆಗಿ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ನಂತರ ಅವರು ಪ್ಯಾರಿಸ್‌ಗೆ ಪ್ರವಾಸ ಕೈಗೊಂಡಿದ್ದರು.


ಭಾರತಕ್ಕೆ ಮರಳಿದ ನಂತರ, ಆ ಕಾಲದ ಸಂಪ್ರದಾಯದಂತೆ ತಿಮ್ಮಯ್ಯ ಅವರನ್ನು ಮೊದಲು ಬ್ರಿಟಿಷ್ ಯುನಿಟ್ ಆದ ‘ಹೈಲ್ಯಾಂಡ್ ಲೈಟ್ ಇನ್ಫಾಂಟ್ರಿ’ಗೆ ನಿಯೋಜಿಸಲಾಯಿತು. ನಂತರ ಮೇ 28, 1927 ರಂದು ಅವರು ಶಾಶ್ವತವಾಗಿ 19ನೇ ಹೈದರಾಬಾದ್ ರೆಜಿಮೆಂಟ್‌ಗೆ ವರ್ಗಾವಣೆಗೊಂಡರು. ವಾಯುವ್ಯ ಗಡಿನಾಡಿನ ಕಠಿಣ ಭೂಪ್ರದೇಶಗಳಲ್ಲಿ ಪಠಾಣ್ ಬುಡಕಟ್ಟು ಜನಾಂಗದವರ ವಿರುದ್ಧದ ಕಾರ್ಯಾಚರಣೆಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಯುದ್ಧ ಕೌಶಲ್ಯವನ್ನು ಹದಗೊಳಿಸಿಕೊಂಡರು.


ಜನವರಿ 1935 ರಲ್ಲಿ ಅವರು ಬೆಂಗಳೂರಿನ ನೀನಾ ಕಾರ್ಯಪ್ಪ ಅವರನ್ನು ವಿವಾಹವಾದರು. ವಿವಾಹದ ನಂತರ ಅವರು ಕ್ವೆಟ್ಟಾಕ್ಕೆ (ಈಗಿನ ಪಾಕಿಸ್ತಾನದಲ್ಲಿದೆ) ತೆರಳಿದರು. ಅದೇ ವರ್ಷ ಕ್ವೆಟ್ಟಾದಲ್ಲಿ ಸಂಭವಿಸಿದ ಭೀಕರ ಭೂಕಂಪದ ಸಮಯದಲ್ಲಿ, ನವದಂಪತಿಗಳಾದ ತಿಮ್ಮಯ್ಯ ಮತ್ತು ನೀನಾ ಅವರು ಹಗಲಿರುಳು ಶ್ರಮಿಸಿ ಸಂತ್ರಸ್ತರಿಗೆ ನೆರವು ನೀಡಿದರು.


ಎರಡನೇ ಮಹಾಯುದ್ಧದ ಸಮಯದಲ್ಲಿ ತಿಮ್ಮಯ್ಯ ಅವರ ನಾಯಕತ್ವವು ಹೊಸ ಎತ್ತರಕ್ಕೆ ಏರಿತು. 1941 ರಲ್ಲಿ ಮೇಜರ್ ಆಗಿ ಬಡ್ತಿ ಪಡೆದ ಅವರು ಸಿಂಗಾಪುರದಲ್ಲಿ ದಂಗೆಯೊಂದನ್ನು ಯಶಸ್ವಿಯಾಗಿ ಅಡಗಿಸಿದರು. ನಂತರ ಅವರು ಬರ್ಮಾದಲ್ಲಿ ಜಪಾನಿ ಪಡೆಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. 1944 ರಲ್ಲಿ ಅವರು 8/19 ಹೈದರಾಬಾದ್ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಆಗಿ ನೇಮಕಗೊಂಡರು. ಬರ್ಮಾದ ಕಾಡುಗಳಲ್ಲಿ ಅವರು ನಡೆಸಿದ ‘ಕಾಂಗಾವ್ ಯುದ್ಧ’ (Battle of Kangaw) ಅತ್ಯಂತ ಕಠಿಣವಾದುದಾಗಿತ್ತು. ಶತ್ರುಗಳ ತೀವ್ರ ಗುಂಡಿನ ದಾಳಿಯ ನಡುವೆಯೂ ಅವರು ತಮ್ಮ ಪಡೆಯನ್ನು ಮುನ್ನಡೆಸಿದರು.
1945 ರಲ್ಲಿ ಅವರು 268ನೇ ಇಂಡಿಯನ್ ಇನ್ಫಾಂಟ್ರಿ ಬ್ರಿಗೇಡ್‌ನ ಕಮಾಂಡರ್ ಆಗಿ ನಿಯೋಜನೆಗೊಂಡರು. ಇದು ಭಾರತೀಯ ಸೇನಾ ಇತಿಹಾಸದಲ್ಲಿ ಒಂದು ಮೈಲಿಗಲ್ಲು, ಏಕೆಂದರೆ ಯುದ್ಧಭೂಮಿಯಲ್ಲಿ ಇನ್ಫಾಂಟ್ರಿ ಬ್ರಿಗೇಡ್ ಅನ್ನು ಮುನ್ನಡೆಸಿದ ಮೊದಲ ಭಾರತೀಯ ಅಧಿಕಾರಿ ಇವರಾಗಿದ್ದರು. ಅವರ ಈ ಸಾಹಸವನ್ನು ಗುರುತಿಸಿ ಬ್ರಿಟಿಷ್ ಸರ್ಕಾರವು ‘ಡಿಸ್ಟಿಂಗ್ವಿಶ್ಡ್ ಸರ್ವಿಸ್ ಆರ್ಡರ್’ (DSO) ಪ್ರಶಸ್ತಿಯನ್ನು ನೀಡಿತು. ಯುದ್ಧ ಮುಗಿದ ನಂತರ, ಸಿಂಗಾಪುರ ಮತ್ತು ಫಿಲಿಪೈನ್ಸ್‌ನಲ್ಲಿ ಜಪಾನಿನ ಶರಣಾಗತಿ ಒಪ್ಪಂದಕ್ಕೆ ಭಾರತದ ಪರವಾಗಿ ಸಹಿ ಹಾಕುವ ಐತಿಹಾಸಿಕ ಅವಕಾಶ ಅವರಿಗೆ ದೊರೆಯಿತು. ಫಿಲಿಪೈನ್ಸ್ ಸರ್ಕಾರವು ಅವರಿಗೆ ‘ಕೀಸ್ ಟು ಮನಿಲಾ’ (Keys to Manila) ಹಸ್ತಾಂತರಿಸಿ ಗೌರವಿಸಿತು.


1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ತಿಮ್ಮಯ್ಯ ಅವರು ಮೇಜರ್ ಜನರಲ್ ಆಗಿ ಬಡ್ತಿ ಪಡೆದರು. ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಭಜನೆಯ ಸಮಯದಲ್ಲಿ ಪಂಜಾಬ್‌ನಲ್ಲಿ ಉಂಟಾದ ಭೀಕರ ಹಿಂಸಾಚಾರದ ನಡುವೆ ನಿರಾಶ್ರಿತರ ರಕ್ಷಣೆಯ ಜವಾಬ್ದಾರಿಯನ್ನು ಅವರು ಹೊತ್ತಿದ್ದರು. ಸ್ವತಃ ತಿಮ್ಮಯ್ಯ ಅವರ ಅಣ್ಣ ಪೊನ್ನಪ್ಪ ಅವರು ಸುಭಾಷ್ ಚಂದ್ರ ಬೋಸ್ ಅವರ ಆಜಾದ್ ಹಿಂದ್ ಫೌಜ್‌ನಲ್ಲಿ (INA) ಸೇವೆ ಸಲ್ಲಿಸಿ ಸೆರೆಯಾಳಾಗಿದ್ದರು, ಅವರನ್ನು ಬಿಡುಗಡೆಗೊಳಿಸುವಲ್ಲಿಯೂ ತಿಮ್ಮಯ್ಯ ಪಾತ್ರವಹಿಸಿದ್ದರು.
1948ರಲ್ಲಿ ಪಾಕಿಸ್ತಾನಿ ಬೆಂಬಲಿತ ಬುಡಕಟ್ಟು ಆಕ್ರಮಣಕಾರರು ಮತ್ತು ಪಾಕಿಸ್ತಾನಿ ಸೈನ್ಯವು ಕಾಶ್ಮೀರವನ್ನು ಆಕ್ರಮಿಸಿದಾಗ, ತಿಮ್ಮಯ್ಯ ಅವರು 19ನೇ ಇನ್ಫಾಂಟ್ರಿ ಡಿವಿಷನ್‌ನ ನೇತೃತ್ವ ವಹಿಸಿದರು. ಆ ಸಮಯದಲ್ಲಿ ಕಾರ್ಗಿಲ್, ಡ್ರಾಸ್ ಮತ್ತು ಲೇಹ್ ಪ್ರದೇಶಗಳು ಶತ್ರುಗಳ ವಶವಾಗುವ ಅಪಾಯದಲ್ಲಿದ್ದವು. ಜೊಜಿಲಾ ಕಣಿವೆಯು ಸಮುದ್ರ ಮಟ್ಟದಿಂದ ಸುಮಾರು 11,500 ಅಡಿಗಳಿಗಿಂತಲೂ ಹೆಚ್ಚು ಎತ್ತರದಲ್ಲಿದ್ದು ಅಲ್ಲಿ ಟ್ಯಾಂಕರ್ಗಳನ್ನು ಬಳಸುವುದು ಅಸಾಧ್ಯವೆಂದು ಭಾವಿಸಲಾಗಿತ್ತು.
ಆದರೆ ಛಲಬಿಡದ ತಿಮ್ಮಯ್ಯ ಅವರು 7ನೇ ಕ್ಯಾವಲ್ರಿಯ ಸ್ಟುವರ್ಟ್ ಟ್ಯಾಂಕರ್ಗಳನ್ನು ಪರ್ವತದ ಮೇಲಕ್ಕೆ ಸಾಗಿಸಲು ಆದೇಶಿಸಿದರು. ಟ್ಯಾಂಕರ್ಗಳ ತೂಕವನ್ನು ಕಡಿಮೆ ಮಾಡಲು ಮತ್ತು ತಿರುವುಗಳಲ್ಲಿ ಸಾಗಿಸಲು ಅನುಕೂಲವಾಗುವಂತೆ ಅವುಗಳ ಮೇಲ್ಭಾಗದ ಗುಮ್ಮಟಗಳನ್ನು ಬಿಚ್ಚಿಸಲಾಯಿತು ಮತ್ತು ಕ್ಯಾಮಫ್ಲಾಜ್ ಮಾಡಲಾಯಿತು. ನವೆಂಬರ್ 1, 1948 ರಂದು ಹಿಮಪಾತದ ನಡುವೆಯೇ ಟ್ಯಾಂಕರ್ ಗಳು ಶತ್ರುಗಳ ಮೇಲೆ ಆಕ್ರಮಣ ಮಾಡಿದವು. ಈ ರೀತಿಯ ಅನಿರೀಕ್ಷಿತ ದಾಳಿಯಿಂದ ಬೆಚ್ಚಿಬಿದ್ದ ಶತ್ರುಗಳು ತಮ್ಮ ನೆಲೆಗಳನ್ನು ಬಿಟ್ಟು ಪಲಾಯನ ಮಾಡಿದರು. ಇದು ವಿಶ್ವದ ಯುದ್ಧ ಇತಿಹಾಸದಲ್ಲಿ ಅತಿ ಎತ್ತರದ ಪ್ರದೇಶದಲ್ಲಿ ನಡೆದ ಟ್ಯಾಂಕರ್ ಕಾರ್ಯಾಚರಣೆಯೆಂದು ದಾಖಲಾಗಿದೆ. ಈ ವಿಜಯದ ನಂತರ ಭಾರತೀಯ ಸೇನೆಯು ಕಾರ್ಗಿಲ್ ಮತ್ತು ಡ್ರಾಸ್ ಅನ್ನು ಮರಳಿ ಪಡೆಯಿತು. ಲಡಾಖ್ ಅನ್ನು ರಕ್ಷಿಸಲು ಅವರು ವೈಯಕ್ತಿಕವಾಗಿ ಮೊದಲ ಮಿಲಿಟರಿ ಡಕೋಟಾ ವಿಮಾನದಲ್ಲಿ ಲೇಹ್‌ನಲ್ಲಿ ಇಳಿದು ಸಾಹಸ ಮೆರೆದಿದ್ದರು.


ಜನರಲ್ ತಿಮ್ಮಯ್ಯ ಅವರ ಖ್ಯಾತಿಯು ಕೇವಲ ಭಾರತಕ್ಕೆ ಸೀಮಿತವಾಗಿರಲಿಲ್ಲ. ವಿಶ್ವಸಂಸ್ಥೆಯು ಸಂಕೀರ್ಣವಾದ ಅಂತರಾಷ್ಟ್ರೀಯ ಸಮಸ್ಯೆಗಳನ್ನು ಬಗೆಹರಿಸಲು ಅವರ ನೆರವು ಕೋರಿತ್ತು.
ಕೊರಿಯಾ ಯುದ್ಧದ ನಂತರ (1950-53), ಯುದ್ಧ ಖೈದಿಗಳ ಹಸ್ತಾಂತರ ಪ್ರಕ್ರಿಯೆಯು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಸುಮಾರು 20,000 ಯುದ್ಧ ಖೈದಿಗಳು ತಮ್ಮ ಮೂಲ ದೇಶಗಳಿಗೆ ಮರಳಲು ನಿರಾಕರಿಸುತ್ತಿದ್ದರು. ಈ ಪರಿಸ್ಥಿತಿಯನ್ನು ನಿಭಾಯಿಸಲು ಸ್ಥಾಪಿಸಲಾದ ‘ನ್ಯೂಟ್ರೆಲ್ ನೇಷನ್ಸ್ ರಿಪ್ಯಾಟ್ರಿಯೇಷನ್ ಕಮಿಷನ್’ (NNRC) ನ ಅಧ್ಯಕ್ಷರಾಗಿ ತಿಮ್ಮಯ್ಯ ನೇಮಕಗೊಂಡರು. ಅಮೆರಿಕ ನೇತೃತ್ವದ ಪಶ್ಚಿಮ ದೇಶಗಳು ಮತ್ತು ಸೋವಿಯತ್ ಒಕ್ಕೂಟ ನೇತೃತ್ವದ ಕಮ್ಯುನಿಸ್ಟ್ ಬಣದ ನಡುವೆ ತೀವ್ರ ಶೀತಲ ಸಮರ ನಡೆಯುತ್ತಿದ್ದ ಕಾಲವದು. ಚೀನಾ ಮತ್ತು ಉತ್ತರ ಕೊರಿಯಾದ ಕಮ್ಯುನಿಸ್ಟ್ ಅಧಿಕಾರಿಗಳು ತಿಮ್ಮಯ್ಯ ಅವರ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರೂ, ಅವರು ತಮ್ಮ ನಿಷ್ಪಕ್ಷಪಾತ ಧೋರಣೆಯನ್ನು ಬಿಟ್ಟುಕೊಡಲಿಲ್ಲ. ಅವರ ಈ ಅದ್ಭುತ ಕಾರ್ಯವನ್ನು ಮೆಚ್ಚಿ ಭಾರತ ಸರ್ಕಾರವು ಅವರಿಗೆ 1954 ರಲ್ಲಿ ‘ಪದ್ಮವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಿತು.


ಮೇ 7, 1957 ರಂದು ಜನರಲ್ ಕೆ.ಎಸ್. ತಿಮ್ಮಯ್ಯ ಅವರು ಭಾರತೀಯ ಭೂಸೇನೆಯ 6ನೇ ಮುಖ್ಯಸ್ಥರಾಗಿ (COAS) ಅಧಿಕಾರ ವಹಿಸಿಕೊಂಡರು. ಅವರ ಅಧಿಕಾರಾವಧಿಯು ಚೀನಾದೊಂದಿಗೆ ಗಡಿ ವಿವಾದಗಳು ಹೆಚ್ಚಾಗುತ್ತಿದ್ದ ಕಾಲವಾಗಿತ್ತು. ತಿಮ್ಮಯ್ಯ ಅವರು ದಕ್ಷಿಣ, ಪೂರ್ವ ಮತ್ತು ಪಶ್ಚಿಮದ ಮೂರೂ ಕಮಾಂಡ್‌ಗಳ ಮುಖ್ಯಸ್ಥರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದ ಏಕೈಕ ಅಧಿಕಾರಿಯಾಗಿದ್ದರು.
ಸೇನೆಯಿಂದ ನಿವೃತ್ತರಾದ ನಂತರ, 1964 ರಲ್ಲಿ ಸೈಪ್ರಸ್ ದೇಶದಲ್ಲಿ ಗ್ರೀಕ್ ಮತ್ತು ಟರ್ಕಿ ಸಮುದಾಯಗಳ ನಡುವೆ ಸಿವಿಲ್ ಯುದ್ಧ ಆರಂಭವಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ವಿಶ್ವಸಂಸ್ಥೆಯ ಶಾಂತಿ ಸೈನ್ಯದ ಕಮಾಂಡರ್ ಆಗಿ ತಿಮ್ಮಯ್ಯ ಅವರನ್ನು ನೇಮಿಸಲಾಯಿತು. ಅಲ್ಲಿ ಅವರು ಎರಡೂ ಸಮುದಾಯಗಳ ನಡುವೆ ವಿಶ್ವಾಸ ಮೂಡಿಸಲು ಶ್ರಮಿಸಿದರು. ಎರಡೂ ಕಡೆಯವರು ನಿರ್ಮಿಸಿದ್ದ ರಕ್ಷಣಾ ಕೋಟೆಗಳನ್ನು ಕಿತ್ತುಹಾಕಿಸಿ, ಜನರ ದೈನಂದಿನ ಜೀವನ ಸುಗಮವಾಗುವಂತೆ ಮಾಡಿದರು. ಸೈಪ್ರಸ್‌ನಲ್ಲಿ ಸೇವೆಯಲ್ಲಿರುವಾಗಲೇ ಡಿಸೆಂಬರ್ 18, 1965 ರಂದು ಅವರು ಹೃದಯಾಘಾತದಿಂದ ನಿಧನರಾದರು. ಸೈಪ್ರಸ್ ಸರ್ಕಾರವು ಅವರ ಸ್ಮರಣಾರ್ಥವಾಗಿ ಲಾರ್ನಾಕಾ ನಗರದ ಒಂದು ರಸ್ತೆಗೆ ‘ಜನರಲ್ ತಿಮ್ಮಯ್ಯ ರಸ್ತೆ’ ಎಂದು ಹೆಸರಿಟ್ಟಿದೆ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ.


ಜನರಲ್ ತಿಮ್ಮಯ್ಯ ಅವರ ನಿವೃತ್ತ ಜೀವನವು ಮಡಿಕೇರಿಯ ಅವರ ನಿವಾಸವಾದ ‘ಸನ್ನಿ ಸೈಡ್’ನಲ್ಲಿ ಕಳೆಯಿತು. ಇಂದು ಈ ಮನೆಯನ್ನು ಕರ್ನಾಟಕ ಸರ್ಕಾರವು ಒಂದು ಸುಂದರವಾದ ಯುದ್ಧ ಸ್ಮಾರಕ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಿದೆ. ಮಡಿಕೇರಿಯ ಪ್ರವಾಸಿ ತಾಣಗಳಲ್ಲಿ ಇದು ಅತ್ಯಂತ ಪ್ರಮುಖವಾದುದು. 1971 ರ ಯುದ್ಧದಲ್ಲಿ ಬಳಿಸಿದ MiG-21 ಫೈಟರ್ ಜೆಟ್, ಯುದ್ಧ ಟ್ಯಾಂಕ್ (T-55), ಶಸ್ತ್ರಾಸ್ತ್ರಗಳು ಹಾಗೂ ತಿಮ್ಮಯ್ಯ ಅವರು ಧರಿಸುತ್ತಿದ್ದ ಸಮವಸ್ತ್ರಗಳು, ಪಡೆದ ಪದಕಗಳನೆಲ್ಲ ಅತ್ಯಂತ ಜಾಗರೂಕತೆಯಿಂದ ಸಂರಕ್ಷಿಸಲಾಗಿದೆ. ಈ ವಸ್ತುಸಂಗ್ರಹಾಲಯವನ್ನು 2021 ರ ಫೆಬ್ರವರಿಯಲ್ಲಿ ಅಂದಿನ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು ಉದ್ಘಾಟಿಸಿದರು. ಇದು ಕೊಡಗಿನ ವೀರ ಪರಂಪರೆಯನ್ನು ಮುಂದಿನ ಯುವ ಪೀಳಿಗೆಗೆ ಪರಿಚಯಿಸುವ ಒಂದು ಉತ್ತಮ ಪ್ರಯತ್ನವಾಗಿದೆ.

ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ ಅವರ ಜೀವನವು ಒಬ್ಬ ಸೈನಿಕನಿಗೆ ಇರಬೇಕಾದ ಅಪ್ರತಿಮ ಧೈರ್ಯ, ಶಿಸ್ತು ಮತ್ತು ದೇಶಭಕ್ತಿಯ ಸಾಕಾರರೂಪವಾಗಿದೆ. ಅವರು ಕೇವಲ ರಣರಂಗದಲ್ಲಿ ಶತ್ರುಗಳನ್ನು ಗೆಲ್ಲಲಿಲ್ಲ, ಬದಲಾಗಿ ತಮ್ಮ ಪ್ರೀತಿ ಮತ್ತು ನಿಷ್ಪಕ್ಷಪಾತ ನಿಲುವಿನಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಜನರ ಹೃದಯಗಳನ್ನು ಗೆದ್ದರು. ಇಂದಿಗೂ ಸೈನಿಕರ ಪಾಲಿನ ‘ಮಾಡಲ್ ಜನರಲ್’ ಆಗಿರುವ ತಿಮ್ಮಯ್ಯ ಅವರ ಜೀವನವು ಈ ಪೀಳಿಗೆಯ ಯುವಕರಿಗೆ ಸೇನೆಗೆ ಸೇರಲು ಮತ್ತು ದೇಶಸೇವೆ ಮಾಡಲು ಸ್ಪೂರ್ತಿಯ ಚಿಲುಮೆಯಾಗಿದೆ. ಕೊಡಗಿನ ಈ ವೀರ ಪುತ್ರ ಕೇವಲ ಕರ್ನಾಟಕದವರಲ್ಲ, ಅವರು ಇಡೀ ವಿಶ್ವವೇ ಮೆಚ್ಚಿದ ‘ವಿಶ್ವಮಾನ್ಯ’ ಸೇನಾನಿ.

Leave a Reply

Your email address will not be published.

This site uses Akismet to reduce spam. Learn how your comment data is processed.