ಭಾರತೀಯ ರಾಜಕಾರಣದಲ್ಲಿ ಜಾರ್ಜ್ ಫರ್ನಾಂಡಿಸ್ ಅವರ ಪಾತ್ರ ಪ್ರಮುಖವಾದ್ದುದು. ಭಾರತದ ರಕ್ಷಣಾ ಸಚಿವರಾಗಿ ಅವರು ನೀಡಿದ ಕೊಡುಗೆ ಅದ್ಭುತವಾದದ್ದು. ಪ್ರತಿಕೋದ್ಯಮದಲ್ಲೂ ತಮ್ಮದೇಯಾದ ಛಾಫು ಮೂಡಿಸಿದವರು. ಇಂದು ಅವರ ಪುಣ್ಯಸ್ಮರಣೆ.
ಪರಿಚಯ
ಜಾರ್ಜ್ ಫರ್ನಾಂಡಿಸ್ ಅವರು ಜೂನ್ 3 , 1930 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಜಾನ್ ಜೋಸೆಫ್ ಫರ್ನಾಂಡಿಸ್, ತಾಯಿ ಅಲಿಸ್ ಮಾರ್ಥ ಫರ್ನಾಂಡಿಸ್. ಅವರು ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲಿ ಮುಗಿಸಿದರು. ನಂತರ ಅವರು ಪ್ರೌಢ ಶಿಕ್ಷಣವನ್ನು ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು.
ವೃತ್ತಿ
1946 ರಲ್ಲಿ ಪಾದ್ರಿಯಾಗಲೆಂದು ತರಬೇತಿಗಾಗಿ ಬೆಂಗಳೂರಿಗೆ ಬಂದಿದ್ದರು. ನಂತರ ಅವರು ಮುಂಬೈಗೆ ಹೋಗಿ ಸಾಮಾಜಿಕ ವ್ಯಾಪಾರ ಸಂಘಟನೆ ಚಳವಳಿಗೆ ಸೇರಿಕೊಂಡರು. ಬಳಿಕ ಭಾರತೀಯ ರೈಲ್ವೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ವ್ಯಾಪಾರ ಸಂಘಟನೆಯಲ್ಲಿದ್ದುಕೊಂಡು ಮುಂದಾಳತ್ವ ವಹಿಸಿ1950 ಮತ್ತು 1960ರ ದಶಕದಲ್ಲಿ ಹಲವು ಮುಷ್ಕರ ಮತ್ತು ಬಂದ್ ಗಳನ್ನು ನಡೆಸಿದ್ದರು. ನಂತರ ರಾಜಕೀಯಕ್ಕೆ ಪ್ರವೇಶಿಸಿದರು.
ರಾಜಕೀಯ ಜೀವನ
ಜಾರ್ಜ್ ಫರ್ನಾಂಡಿಸ್ ಅವರು 1967ರಿಂದ 2004ರವರೆಗೆ 9 ಬಾರಿ ಲೋಕಸಭೆ ಚುನಾವಣೆ ಸ್ಪರ್ಧಿಸಿ ಗೆದ್ದಿದ್ದರು.
ಜಾರ್ಜ್ ಫರ್ನಾಂಡಿಸ್ ಅವರು 1967ರ ಸಂಸತ್ ಚುನಾವಣೆಯಲ್ಲಿ ದಕ್ಷಿಣ ಮುಂಬೈ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ ನ ಎಸ್ ಕೆ ಪಾಟೀಲ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. 1974ರಲ್ಲಿ ರೈಲ್ವೆ ಸ್ಟ್ರೈಕ್ ಮಾಡಿದಾಗ ಅವರು ಆಲ್ ಇಂಡಿಯಾ ರೈಲ್ವೆ ಮೆನ್ಸ್ ಫೆಡರೇಷನ್ ನ ಅಧ್ಯಕ್ಷರಾಗಿದ್ದರು. 1975ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾಗ ಅದರ ವಿರುದ್ಧ ಪ್ರತಿಭಟನೆ ಮಾಡಿದರು. 1976ರಲ್ಲಿ ಅವರನ್ನು ಬಂಧಿಸಲಾಗಿತ್ತು. 1977ರಲ್ಲಿ ತುರ್ತು ಪರಿಸ್ಥಿತಿ ಹಿಂತೆಗೆದುಕೊಂಡ ನಂತರ ಬಿಹಾರದ ಮುಜಾಫರ್ ಪುರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದು ಕೇಂದ್ರ ಕೈಗಾರಿಕಾ ಸಚಿವರಾದರು. 1989ರಿಂದ 1990ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಕೊಂಕಣ ರೈಲ್ವೆ ಯೋಜನೆಯಲ್ಲಿ ಉತ್ತಮ ಕೆಲಸ ಮಾಡಿದ್ದರು. 1998ರಿಂದ 2004ರವರೆಗೆ ಎನ್ ಡಿಎ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತ ಜಯಗಳಿಸುವಲ್ಲಿ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫೆರ್ನಾಂಡಿಸ್ ಅವರ ತುರ್ತು ನಿರ್ಧಾರಗಳು ಸಹಕಾರಿಯಾಗಿತ್ತು.
ಪತ್ರಿಕಾ ಕ್ಷೇತ್ರಕ್ಕೆ ಕೊಡುಗೆ
ಜಾರ್ಜ್ ಫರ್ನಾಂಡಿಸ್ ಅವರು ರಾಜಕೀಯ ಕ್ಷೇತ್ರವಲ್ಲದೆ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. 1949ರಲ್ಲಿ ಕೊಂಕಣಿ ಭಾಷೆಯ ‘ಕೊಂಕಣಿ ಯುವಕ್’ ಎಂಬ ಪತ್ರಿಕೆಯ ಸಂಪಾದಕಾಗಿದ್ದರು. ಕನ್ನಡದಲ್ಲಿ ‘ರೈತವಾಣಿ’ ಸಪ್ತಾಹಿಕದ ಸಂಪಾದಕರಾಗಿದ್ದರು. ಮುಂಬೈಗೆ ಹೋದ ಮೇಲೆ ಕೂಡ ಜೀವನ ಸಾಗಿಸಲು ಪ್ರೂಫ್ ರೀಡರ್ ಆಗಿ ಕೆಲಸ ಮಾಡಿದ್ದರು. ರಾಜಕೀಯ ಕುರಿತು What Ails the Socialists (1972), Socialist Communist Interaction in India, In the year of the disabled: India’s disabled government (1981), Dignity for All: Essays in Socialism and Democracy (1991) ಅನೇಕ ಪುಸ್ತಕಗಳನ್ನು ಕೂಡ ಬರೆದಿದ್ದಾರೆ.
ಅನಾರೋಗ್ಯದ ಸಮಸ್ಯೆಯಿಂದ ಜಾರ್ಜ್ ಫರ್ನಾಂಡಿಸ್ ಅವರು ಜನವರಿ 29 , 2019 ರಂದು ವಿಧಿವಶರಾದರು.