ಗೋವಾ ವಿಮೋಚನೆಯು ಇತಿಹಾಸದ ಪ್ರಮುಖ ಘಟನೆಗಳಲ್ಲೊಂದು. ಪೋರ್ಚುಗೀಸರ ಪ್ರಭುತ್ವದಲ್ಲಿದ್ದ ಗೋವಾವನ್ನು ಭಾರತೀಯ ನೌಕಾಪಡೆಯ ಸಾಹಸದೊಂದಿಗೆ ಬಿಡುಗಡೆಗೊಳಿಸಿದ ದಿನ. ಹೀಗಾಗಿ ಪ್ರತಿ ವರ್ಷ ಈ ಶೌರ್ಯ ಮೆರೆದ ದಿನದ ಸ್ಮರಣೆಗಾಗಿ ಡಿಸೆಂಬರ್ 19 ರಂದು ಗೋವಾ ವಿಮೋಚನೆ ದಿನವನ್ನಾಗಿ ಆಚರಿಸಲಾಗುತ್ತದೆ.
ಗೋವಾ ವಿಮೋಚನಾ ದಿನದ ಇತಿಹಾಸ:
ಭಾರತವು ಪೋರ್ಚುಗೀಸ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ನಂತರ ಗೋವಾ ಸ್ವತಂತ್ರವಾಗಲು 14 ವರ್ಷಗಳನ್ನು ತೆಗೆದುಕೊಂಡಿತು. 1946ರ ಜೂನ್ 18ರಂದು ಡಾ.ರಾಮ್ ಮನೋಹರ್ ಲೋಹಿಯಾ ಅವರು ಗೋವಾ ವಿಮೋಚನಾ ಚಳುವಳಿಯ ನೇತೃತ್ವವಹಿಸಿದರು. ಸ್ವಾತಂತ್ರ್ಯ ನಂತರವೂ ವಿದೇಶಿಗರ ಕಪಿಮುಷ್ಟಿಯಲ್ಲಿದ್ದ ಗೋವಾವನ್ನು ಹಲವು ಹಂತದ ಸಂಧಿ ಮಾತುಕತೆಗಳ ಮೂಲಕ, ಪ್ರತಿಭಟನೆ, ಹೋರಾಟಗಳ ಮೂಲಕ ಸ್ವದೇಶಕ್ಕೆ ಮರಳಿ ಸೇರಿಸಿಕೊಳ್ಳುವ ಪ್ರಯತ್ನಗಳು ನಡೆದವು. ಡಿಸೆಂಬರ್ 19, 1961ರಂದು ಸಶಸ್ತ್ರ ಪಡೆಗಳ ಶೌರ್ಯದ ಕಾರಣ ಪೋರ್ಚುಗೀಸರು ಶರಣಾಗಿದ್ದು, ರಾಜ್ಯವನ್ನು ಮುಕ್ತಗೊಳಿಸಲಾಯಿತು. ಇದರ ಪರಿಣಾಮವಾಗಿ, ಗೋವಾ, ದಮನ್ ಮತ್ತು ದಿಯು ಭಾರತದ ಕೇಂದ್ರಾಡಳಿತ ಪ್ರದೇಶಗಳಾದವು. ಗೋವಾ 1987 ರವರೆಗೆ ಕೇಂದ್ರಾಡಳಿತ ಪ್ರದೇಶವಾಗಿ ಮುಂದುವರಿಯಿತು. ನಂತರ ಭಾರತದ 25 ನೇ ರಾಜ್ಯವಾಗುವ ಮೂಲಕ ಗೋವಾಕ್ಕೆ ರಾಜ್ಯದ ಸ್ಥಾನಮಾನವನ್ನು ನೀಡಲಾಯಿತು.
ಗೋವಾ ಸ್ವಾತಂತ್ರ್ಯ ಹೋರಾಟ:
ಬ್ರಿಟಿಷರು ಭಾರತ ಬಿಟ್ಟು ಹೋದರೂ ಪೋರ್ಚುಗೀಸರು ಭಾರತ ಬಿಡಲಿಲ್ಲ. ಗೋವಾದಿಂದ ಪೋರ್ಚುಗೀಸರನ್ನು ಅವರ ಮಾತೃ ದೇಶಕ್ಕೆ ಕಳುಹಿಸಲು ಸಾಕಷ್ಟು ಹೋರಾಟಗಳು ನಡೆದಿದ್ದವು. ದಮನ್ ದಿಯು, ಅಂಜದೀಪ್ ಪ್ರದೇಶಗಳೂ ಇವರ ವಶದಲ್ಲಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರು ಪೋರ್ಚುಗಲ್ ಜತೆ ಹಲವು ಸಂಧಾನ ಸಭೆಗಳನ್ನು ನಡೆಸಿದ್ದರು. ಆದರೆ, ಪೋರ್ಚುಗೀಸರು ಇಂತಹ ಸಭೆಗಳಿಗೆ ಮಣಿಯಲಿಲ್ಲ. ಅಂತಿಮವಾಗಿ ಮಿಲಿಟರಿ ಕಾರ್ಯಾಚರಣೆ ಮೂಲಕ ಗೋವಾವನ್ನು ವಶಪಡಿಸಿಕೊಳ್ಳಲು ಭಾರತ ಮುಂದಾಯಿತು.
ಆಪರೇಷನ್ ವಿಜಯ್
ಗೋವಾದಲ್ಲಿ ಪೋರ್ಚುಗೀಸರ ಸೇನೆಯಲ್ಲಿ 3,300 ಸೈನಿಕರಿದ್ದರು. ಪೋರ್ಚುಗೀಸರ ವಿರುದ್ಧ ಭಾರತ ಆಪರೇಷನ್ ವಿಜಯ್ ನಡೆಸಿತ್ತು. ಭೂಸೇನೆ, ನೌಕಾಪಡೆ, ವಾಯುಪಡೆ ಒಟ್ಟಾಗಿ ಗೋವಾದಲ್ಲಿದ್ದ ಪೋರ್ಚುಗೀಸರ ವಿರುದ್ಧ ಯುದ್ಧ ಸಾರಿತ್ತು. ಭಾರತದ ಸೇನೆಯನ್ನು ಎದುರಿಸುವ ಸೇನಾ ಶಕ್ತಿ ಅವರಿಗೆ ಇರಲಿಲ್ಲ. ನಂತರ ಗವರ್ನರ್ ಜನರಲ್ ಮ್ಯಾನುಯಲ್ ಆಂಟೋನಿಯೋ ವಾಸಲೋ-ಇ-ಸಿಲ್ವಾ ಅವರು ಭಾರತಕ್ಕೆ ಶರಣಾದರು. ಡಿಸೆಂಬರ್ 18ರಂದು ಪೋರ್ಚುಗೀಸ್ ಧ್ವಜವನ್ನು ಇಳಿಸಿ ಶಾಂತಿಯ ಕುರುಹಾಗಿ ಬಿಳಿ ಬಾವುಟ ಹಾರಿಸಲಾಯಿತು. ಮರುದಿನ ಅಂದರೆ, ಡಿಸೆಂಬರ್ 19ರಂದು ಭಾರತದ ರಾಷ್ಟ್ರಧ್ವಜವನ್ನು ಹಾರಿಸಿ ಗೋವಾವನ್ನು ಅಧಿಕೃತವಾಗಿ ಭಾರತಕ್ಕೆ ಸೇರಿಸಲಾಯಿತು.
ಯುದ್ಧ ಸ್ಮಾರಕ
ಕಾರ್ಯಾಚರಣೆ ಪ್ರಾರಂಭವಾಗಿ ಮೂರು ದಿನಗಳ ನಂತರ ಗೋವಾ ಭಾರತದ ವಶವಾಯಿತು. ಕೇವಲ 36 ಗಂಟೆಗಳ ಯುದ್ಧ ನಡೆದಿತ್ತು. ಈ ಯುದ್ಧದಲ್ಲಿ ಭಾರತದ ಸುಮಾರು 22 ಸೈನಿಕರು ಹುತಾತ್ಮರಾಗಿದ್ದರು. ಕೆಲವು ಸಿಬ್ಬಂದಿಗಳೂ ಬಲಿದಾನ ಗೈದಿದ್ದಾರೆ. ಇವರ ಸ್ಮರಣೆಗಾಗಿ ಗೋವಾದಲ್ಲಿ ಯುದ್ಧ ಸ್ಮಾರಕ ರಚಿಸಲಾಗಿದೆ. ಇಂದು ಗೋವಾ ವಿಮೋಚನೆಗಾಗಿ ಬಲಿದಾನಗೈದ ಎಲ್ಲರಿಗೂ ಇಲ್ಲಿ ಗೌರವ ನಮನ ಸಲ್ಲಿಸಲಾಗುತ್ತದೆ.