ಬೆಂಗಳೂರು: 20-11-2022ರ ಭಾನುವಾರದಂದು ಬೆಂಗಳೂರಿನ ಖ್ಯಾತ ಯೋಗ ತರಬೇತುದಾರರೂ, ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ ಯೋಗ ಸಾಧಕರೂ ಆದ ಶ್ರೀ ವಿರೂಪಾಕ್ಷ ಬೆಳವಾಡಿಯವರ ನೇತೃತ್ವದಲ್ಲಿ “ಯೋಗಕ್ಷೇಮ ಯೋಗ ಕೇಂದ್ರ (ರಿ)” ಅರಿವು (ಮಾಸಕ್ಕೊಂದು ಉಪನ್ಯಾಸ) ಕಾರ್ಯಕ್ರಮದ ಅಂಗವಾಗಿ “ಗುರುಕುಲ ಪರಿಚಯ ಕಾರ್ಯಕ್ರಮ” ನೆರವೇರಿತು.
ಬೆಂಗಳೂರಿನ ನಾಗರಭಾವಿಯಲ್ಲಿರುವ N.G.E.F. ಬಡಾವಣೆಯಲ್ಲಿ ಅಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಪ್ರಬೋಧಿನೀ ಗುರುಕುಲದ ವ್ಯವಸ್ಥಾಪಕರಾದ ಶ್ರೀ ಉಮೇಶ್ ರಾವ್ ರವರು ಗುರುಕುಲ ಶಿಕ್ಷಣದ ಪ್ರಸ್ತುತತೆಯ ಬಗ್ಗೆ ಹಾಗೂ ಪ್ರಬೋಧಿನೀ ಗುರುಕುಲವು ನಡೆದುಬಂದ ಹಾದಿಯ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಶ್ರೀ ವಿರೂಪಾಕ್ಷ ಬೆಳವಾಡಿಯವರು ಮಾತನಾಡಿ ಯೋಗಕ್ಷೇಮ ಯೋಗ ಕೇಂದ್ರ ನಡೆಸುತ್ತಿರುವ ವಿವಿಧ ಚಟುವಟಿಕೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು ಹಾಗೆಯೇ ಪ್ರಬೋಧಿನೀ ಗುರುಕುಲದ ಚಟುವಟಿಕೆಗಳಿಗೆ ಸದಾ ಸಹಾಕಾರ ನೀಡಬೇಕೆಂದು ಸಭಿಕರಲ್ಲಿ ಮನವಿ ಮಾಡಿಕೊಂಡರು.
ಪ್ರಬೋಧಿನೀ ಗುರುಕುಲದಲ್ಲಿ ಅಧ್ಯಯನ ಪೂರೈಸಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ಪ್ರವೃತ್ತರಾಗಿರುವ ಶ್ರೀ ತಿಲಕ್ ರಾವ್, ಶ್ರೀ ಚಿದ್ರೂಪ ಶರ್ಮ, ಡಾ|| ಕಿಶನ್ ಹಾಗೂ ಶ್ರೀ ಚಿನ್ಮಯ ರವರುಗಳು ತಮ್ಮ ಗುರುಕುಲ ಶಿಕ್ಷಣದ ಅನುಭವವನ್ನು ಹಂಚಿಕೊಂಡರು.
ಪ್ರಬೋಧಿನೀ ಟ್ರಸ್ಟ್ ನ ವಿಶ್ವಸ್ತರಾದ ಶ್ರೀ ಸುಮಂತ ಶೆಟ್ಟಿ ಯವರು ಉಪಸ್ಥಿತರಿದ್ದು ಹಿತನುಡಿಗಳನ್ನಾಡಿದರು.
“ಯೋಗಕ್ಷೇಮ ಯೋಗ ಕೇಂದ್ರದ ಸಂಸ್ಥಾಪಕರಾದ ಶ್ರೀ ವಿರೂಪಾಕ್ಷ ಬೆಳವಾಡಿ ಯವರ ಆಯೋಜನೆ ಹಾಗೂ ನೇತೃತ್ವದಲ್ಲಿ ನಡೆದ ಈ ಸುಂದರ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಆಸಕ್ತರು ಪಾಲ್ಗೊಂಡು ವಾರಾಂತ್ಯವನ್ನು ಅರ್ಥಪೂರ್ಣವಾಗಿ ಉಪಯೋಗಿಸಿಕೊಂಡರು.
ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಬೆಂಗಳೂರಿನ ಬೇರೆ ಬೇರೆ ಭಾಗಗಳಲ್ಲಿ ಆಯೋಜಿಸುವ ಸಂಕಲ್ಪದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು