ಯಾವುದೇ ಒಬ್ಬ ವ್ಯಕ್ತಿ ಯಶಸ್ಸನ್ನು ಸಾಧಿಸಬೇಕು ಎಂದರೆ ಅವರ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಎಂಬ ಪ್ರಾಜ್ಞರ ನುಡಿ ಗುರುವಿನ‌ ಮಹತ್ವವನ್ನು ತಿಳಿಸುತ್ತದೆ. ಪ್ರತಿಯೊಬ್ಬರಿಗೂ ಮೊದಲ ಗುರುವೆಂದರೆ ತಾಯಿ. ತನ್ನ ಅನುಭವದ ಆಧಾರಿತವಾಗಿ ಆಕೆ ತನ್ನ ಮಕ್ಕಳ ಆರೈಕೆ ಮಾಡುತ್ತಾಳೆ. ಗುರು ಜೀವನಕ್ಕೆ ಅಗತ್ಯವಾದ ಜ್ಞಾನವನ್ನು  ಬೋಧಿಸುತ್ತಾರೆ. ಗುರು ಎಂಬ ಪದವೇ ಅತ್ಯುತ್ತಮ ಅರ್ಥವನ್ನು ನೀಡುತ್ತದೆ. ಸಂಸ್ಕೃತದಲ್ಲಿ ‘ಗು’ ಎಂದರೆ ಕತ್ತಲೆ, ‘ರು’ ಎಂದರೆ ನಿರ್ಮೂಲನೆ. ಗುರು ಎಂದರೆ ಬದುಕಿನ ಅಂಧಕಾರವನ್ನು ಹೋಗಲಾಡಿಸುವವನು ಎಂದರ್ಥ. ಅಜ್ಞಾನವನ್ನು ಹೋಗಲಾಡಿಸಿ ಜ್ಞಾನ ಎಂಬ ಬೆಳಕನ್ನು ನೀಡುವವರೇ ಗುರು.

ವ್ಯಾಸಪೂರ್ಣಿಮೆ:
ಆಷಾಢ ಮಾಸದ ಹುಣ್ಣಿಮೆಯ ದಿನದಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಗುರು ಪೂರ್ಣಿಮಾ ದಿನದಂದು ಹಿಂದೂಗಳು ತಮ್ಮ ಎಲ್ಲಾ ಗುರುಗಳಿಗೆ ಕೃತಜ್ಞತೆ ಮತ್ತು ಗೌರವವನ್ನು ಸಲ್ಲಿಸುತ್ತಾರೆ. ಗುರುಪೂರ್ಣಿಮೆಯನ್ನು ವ್ಯಾಸಪೂರ್ಣಿಮೆಯೆಂದೂ ಕರೆಯುತ್ತಾರೆ. ವೇದಗಳನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ವೇದವ್ಯಾಸರೆನಿಸಿಕೊಂಡ, ಮಹಾಭಾರತವನ್ನು ಭಗವಾನ್ ಶ್ರೀಗಣೇಶನಿಂದ ಬರೆಸಿದ ಮಹಾನ್ ಗುರು ಕೃಷ್ಣದ್ವೈಪಾಯನ ವೇದವ್ಯಾಸರು ಜನಿಸಿದ ದಿನವೇ ಗುರುಪೂರ್ಣಿಮೆ. ಭಾರತೀಯ ಸಾಹಿತ್ಯಕ್ಕೆ, ಸಂಸ್ಕೃತಿಯ ಹಿರಿಮೆ ಗರಿಮೆಯನ್ನು ಉಳಿಸುವುದಕ್ಕೆ, ಇಲ್ಲಿನ ಮೌಲ್ಯಗಳನ್ನು ರಕ್ಷಿಸುವುದಕ್ಕೆ ಇವರು ನೀಡಿದ ಕೊಡುಗೆ ಅಪಾರ. ಪುರಾಣಗಳನ್ನು ಬ್ರಹ್ಮಸೂತ್ರಗಳನ್ನು ರಚಿಸಿ, ಅವುಗಳನ್ನು ನಾಡಿನ ಜ್ಞಾನಸಂಪತ್ತಾಗಿ, ಮೌಲ್ಯಗಳ ಸಂಪತ್ತಾಗಿ ಕೊಡುಗೆ ನೀಡಿದವರು. ಸಪ್ತಚಿರಂಜೀವಿಗಳಲ್ಲೂ ಒಬ್ಬರಾದ ವ್ಯಾಸ ಮಹರ್ಷಿಗಳು ಈ ನಾಡಿನ ಸ್ವ-ತ್ವವನ್ನು ತಮ್ಮ ಶಿಷ್ಯಂದಿರಾದ ಸುಮಂತು, ವೈಶಂಪಾಯನ, ಜೈಮಿನಿ ಹಾಗೂ ಪೈಲರಿಗೆ ಬೋಧಿಸುವ ಮೂಲಕ ಮಹತ್ತರವಾದ ಸೇವೆಮಾಡಿದರು. ಆದ್ದರಿಂದ ವ್ಯಾಸಪೂರ್ಣಿಮೆಯ ದಿನ ಶ್ರೇಷ್ಠಗುರು ವ್ಯಾಸರನ್ನು ಸ್ಮರಿಸಲಾಗುತ್ತದೆ.

ವಿವಿಧ ಆಚರಣೆಗಳು:
ಬೌದ್ಧರು ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ. ಈ ದಿನವು ಗೌತಮ ಬುದ್ಧನು ಉತ್ತರಪ್ರದೇಶದ ಸಾರನಾಥದಲ್ಲಿ ಮೊದಲ ಬಾರಿಗೆ ಧರ್ಮೋಪದೇಶ ನೀಡಿದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಯೋಗ ಸಂಪ್ರದಾಯದಲ್ಲಿ ಈ ದಿನವನ್ನು ಶಿವನು ಸಪ್ತ ಋಷಿಗಳಿಗೆ ಯೋಗ, ವಿದ್ಯೆಯನ್ನು ಧಾರೆಯೆರೆದು ಪ್ರಥಮ ಗುರುವೆಂದು ಗುರುತಿಸಲ್ಪಡುತ್ತಾನೆ.


ಆರ್ ಎಸ್ ಎಸ್ ಮತ್ತು ಭಗವಾಧ್ವಜ
1925ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಿಂದೂ ಸಂಘಟನೆ ಮತ್ತು ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರನಿರ್ಮಾಣ ಎನ್ನುವುದನ್ನು ಧೈಯವಾಗಿಸಿಕೊಂಡು ಸಮಾಜದ ನಡುವೆ ಒಂದು ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇಂದು ಅತೀ ಹೆಚ್ಚು ಸ್ವಯಂಸೇವಕರನ್ನೊಳಗೊಂಡ ಸಂಘಟನೆಯಾಗಿರುವ ಆರ್‌ಎಸ್ಎಸ್ ತನ್ನ ಗುರುವಾಗಿ ಭಗವಾಧ್ವಜವನ್ನು ಸ್ವೀಕರಿಸಿದೆ. ‘ಭಗವಾ’ – ಕೇಸರಿ ಬಣ್ಣದ ಧ್ವಜ, ಅದು ಈ ನೆಲದ ಅಸ್ಮಿತೆ. ಮಹಾಭಾರತದಲ್ಲಿ ಧರ್ಮದ ಪರ ಇದ್ದ ಅರ್ಜುನನಿಂದ ಹಿಡಿದು ಹಿಂದವೀ ಸಾಮ್ರಾಜ್ಯದ ಸಂಸ್ಥಾಪಕ ಶಿವಾಜಿಯವರೆಗೂ ಬಳಸಲಾದ ಧ್ವಜದ ಬಣ್ಣ ಕೇಸರಿಯೇ ಆಗಿದೆ. ಕೇಸರಿ ಬಣ್ಣ ತ್ಯಾಗ, ಶೌರ್ಯ ಮುಂತಾದ ಮೌಲ್ಯಗಳ ಪ್ರತೀಕವೂ ಹೌದು. ಹೀಗೆ ಈ ನಾಡಿನ ತ್ಯಾಗ, ಶೌರ್ಯದ ಪ್ರತೀಕವಾದ ಭಗವಾಧ್ವಜವನ್ನು ಗುರುವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ವೀಕರಿಸಿದೆ. ಯಾವುದೇ ವ್ಯಕ್ತಿ ಶಾಶ್ವತವಲ್ಲ. ತತ್ತ್ವಗಳು ಶಾಶ್ವತ. ಹಾಗಾಗಿ ತತ್ತ್ವಕೇಂದ್ರಿತ ವಿಚಾರಗಳು ದೀರ್ಘಕಾಲ ಉಳಿಯುತ್ತವೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾರಂಭವಾದ ಮೂರು ವರ್ಷಗಳ ನಂತರ 1928 ರಲ್ಲಿ ಸಂಘವು ಮೊದಲ ಬಾರಿಗೆ ಗುರು ಪೂಜೆಯನ್ನು ಆಚರಿಸಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರ ಹೇಳಿಕೆಯಂತೆ “ನಾವು ಯಾರನ್ನು ಸಕಲ ಸದ್ಗುಣಗಳ ಸಾಕಾರ ಸ್ವರೂಪನೆಂದೂ, ಸರ್ವಥಾ ಪ್ರಮಾದಾತೀತನೆಂದೂ ಭಾವಿಸುವೆವೋ ಆ ವ್ಯಕ್ತಿಯೇ ನಮ್ಮ ಆದರ್ಶವಾಗಬೇಕು. ಇಲ್ಲವಾದಲ್ಲಿ ಆದರ್ಶವೆಂದು ಭಾವಿಸಲ್ಪಟ್ಟ ವ್ಯಕ್ತಿಯಿಂದ ಏನಾದರೂ ತಪ್ಪಾದರೆ ನಾವು ಬೇರೊಬ್ಬನನ್ನು ಹುಡುಕಬೇಕಾಗುತ್ತದೆ. ಆ ಎರಡನೆಯವನಲ್ಲಿ ದೋಷ ಕಂಡುಬಂದರೆ, ಅವನ ಬಗ್ಗೆ ಇರುವ ಶ್ರದ್ದೆ ಸಹ ಹಾರಿಹೋಗುವುದು ಸ್ವಾಭಾವಿಕ. ಆಗ ಪುನಃ ನಾವು ಮೂರನೆಯ ವ್ಯಕ್ತಿಯನ್ನು ಹುಡುಕುವಂತೆ ಆದೀತು. ಹೀಗಾದರೆ ನಿತ್ಯವೂ ಹೊಸ ಹೊಸ ವ್ಯಕ್ತಿಯನ್ನು ಆದರ್ಶಕ್ಕಾಗಿ ಹುಡುಕುತ್ತ ಹೊರಡಬೇಕಾಗುತ್ತದೆ. ಆದ್ದರಿಂದ ಆದರ್ಶ ವ್ಯಕ್ತಿಯನ್ನು ಕುರಿತು ಯೋಚಿಸುವಾಗ ದೋಷರಹಿತ ವ್ಯಕ್ತಿಯನ್ನಾರಿಸುವುದೇ ಯೋಗ್ಯ ಅಷ್ಟೇ ಅಲ್ಲ, ನಾವು ಆದರ್ಶವೆಂದು ಭಾವಿಸುವ ಎಲ್ಲ ಗುಣಗಳೂ ಆ ವ್ಯಕ್ತಿಯಲ್ಲಿ ನಮಗೆ ಎದ್ದು ಕಾಣಬೇಕು. ನಾವು ಧ್ವಜವನ್ನೇ ಗುರುವೆಂದು ಭಾವಿಸಿ ಗುರುಪೂರ್ಣಿಮಾ ದಿನದಂದು ಅದನ್ನು ಪೂಜಿಸುತ್ತೇವೆ. ನಾವು ಯಾವ ವ್ಯಕ್ತಿಯನ್ನೂ ಪೂಜಿಸುವುದಿಲ್ಲ. ಏಕೆಂದರೆ ಯಾರೇ ಆಗಲಿ ಅವರು ತಮ್ಮ ಮಾರ್ಗದಲ್ಲಿ ಅಚಲರಾಗಿಯೇ ಇದ್ದಾರು ಎಂಬ ಭರವಸೆಯಾದರೂ ಏನು? ಕೇವಲ ತತ್ತ್ವ ಒಂದೇ ಆ ಅಚಲ ಪದವಿಯಲ್ಲಿ ಇರಬಲ್ಲದು. ಅದನ್ನು ಧ್ವಜವು ಸಾಂಕೇತಿಸುವುದು. ಯಾವ ಧ್ವಜವನ್ನು ನೋಡಿದೊಡನೆ ನಮ್ಮ ರಾಷ್ಟ್ರದ ಸಮಸ್ತ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಗಳು ನಮ್ಮ ಕಣ್ಣಿಗೆ ಕಟ್ಟುತ್ತವೆಯೋ, ಯಾವುದನ್ನು ಕಂಡ ಕೂಡಲೇ ಹೃದಯದ ಭಾವನೆಗಳು ಉಕ್ಕಿ ಬರುತ್ತವೆಯೋ, ಹೃದಯದಲ್ಲಿ ಅಪೂರ್ವ ಸ್ಫೂರ್ತಿಯ ಸಂಚಾರವಾಗುತ್ತದೆಯೋ ಅಂತಹ ಧ್ವಜವನ್ನೇ ನಾವು ನಮ್ಮ ಗುರುವೆಂದು ಭಾವಿಸುತ್ತೇವೆ” ಈ ಅಂಶಗಳು ಗುರುವಾಗಬಲ್ಲ ತತ್ತ್ವವನ್ನು ಸಾರುತ್ತವೆ.

Leave a Reply

Your email address will not be published.

This site uses Akismet to reduce spam. Learn how your comment data is processed.