ಇಂದು ಜಯಂತಿ
ಪ್ರೊ. ಗಂಜಾಂ ವೆಂಕಟಸುಬ್ಬಯ್ಯ ಅವರು ಕನ್ನಡದ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ತಮ್ಮದೇಯಾದ ಛಾಪು ಮೂಡಿಸಿದವರು. ಅವರು ನಿಘಂಟು ರಚನೆ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ತಮ್ಮ ಇಡೀ ಜೀವನವನ್ನು ಸಾಹಿತ್ಯದ ಏಳಿಗೆಗಾಗಿ ಶ್ರಮಿಸಿದ ಇವರು 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಇಂದು ವೆಂಕಟಸುಬ್ಬಯ್ಯನವರ ಜಯಂತಿ.


ಪರಿಚಯ
ವೆಂಕಟಸುಬ್ಬಯ್ಯ ಅವರು ಆಗಸ್ಟ್‌ 23, 1913ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂ ಎಂಬ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಗಂಜಾಂ ತಿಮ್ಮಣ್ಣಯ್ಯ ಅವರು ಕನ್ನಡ ಮತ್ತು ಸಂಸ್ಕೃತ ಪಂಡಿತರಾಗಿದ್ದರು. ಹಾಗಾಗಿ ಬಾಲಕನಾಗಿದ್ದಾಗಲೇ ವೆಂಕಟಸುಬ್ಬಯ್ಯನವರಿಗೆ ಸಾಹಿತ್ಯದಲ್ಲಿ ಒಲವು ಬೆಳೆಯಿತು.
ಅವರ ತಂದೆ ಸರ್ಕಾರಿ ಉದ್ಯೋಗದಲ್ಲಿ ಇದ್ದ ಕಾರಣ ಸ್ಥಳಾಂತರಗೊಳ್ಳುತ್ತಿದ್ದರು. ವೆಂಕಟಸುಬ್ಬಯ್ಯ ಅವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಮೈಸೂರು ಜಿಲ್ಲೆಯ ಬನ್ನೂರು ಮತ್ತು ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಮುಗಿಸಿದರು. ನಂತರ ವೆಂಕಟಸುಬ್ಬಯ್ಯ ಅವರ ಕುಟುಂಬವು ಮೈಸೂರು ನಗರಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿ ವ್ಯಾಸಂಗ ಮಾಡಿದರು.ನಂತರ ಅವರು ಅದೇ ಕಾಲೇಜಿನಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆದರು. 1939ರಿಂದ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಪ್ರಾರಂಭಿಸಿ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಕನ್ನಡ ಸಾರಸ್ವತ ಲೋಕದಲ್ಲಿ ಅವರು ಜಿ.ವಿ.ಎಂದೇ ಪ್ರಸಿದ್ಧರಾದರು.


ವೃತ್ತಿ
ವೆಂಕಟಸುಬ್ಬಯ್ಯ ಅವರು ಮಂಡ್ಯದ ಮುನ್ಸಿಪಲ್‌ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿಯನ್ನು ಆರಂಭಿಸಿದರು. ನಂತರ ಅವರು ಬೆಂಗಳೂರಿನ ಹೈಸ್ಕೂಲಿನಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ನೇಮಕಗೊಂಡರು. ಜಯನಗರದ ವಿಜಯ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿಕೊಂಡರು. ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದರು. ಆ ಸಮಯದಲ್ಲಿ ಅವರು ಕಾಲೇಜಿನ ‘ಉತ್ಸಾಹ’ ಎಂಬ ವಾರ್ಷಿಕ ಸಂಚಿಕೆಯನ್ನು ಹೊರತಂದರು. ಮೈಸೂರು ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್ ಮತ್ತು ಖಾಸಗಿ ಕಾಲೇಜು ಶಿಕ್ಷಕರ ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.


ಬೆಂಗಳೂರಿನ ವಿಶ್ವೇಶ್ವರಪುರದಲ್ಲಿದ್ದ ರಾಮಕೃಷ್ಣ ವಿದ್ಯಾರ್ಥಿ ವಸತಿನಿಲಯಕ್ಕೆ ವಾರ್ಡನ್’ ಆಗಿ ಕೆಲಸ ನಿರ್ವಹಿಸಿದರು. ಆ ಸಮಯದಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಹೇಳಿಕೊಡುತ್ತಿದ್ದರು. ಜಯನಗರದಲ್ಲಿ ‘ಜಯರಾಮ ಸೇವಾ ಮಂಡಳಿ ಎಂಬ ಸಾರ್ವಜನಿಕ ಸಂಸ್ಥೆ’ಯನ್ನು ಕಟ್ಟಿ ಬೆಳಸಿದರು.


ಸಾಹಿತ್ಯ ಕ್ಷೇತ್ರದ ಕೊಡುಗೆ
ವೆಂಕಟಸುಬ್ಬಯ್ಯ ಅವರು ಸಾಹಿತ್ಯ ಕ್ಷೇತ್ರದಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಅವರು ಬಾಲ ಕರ್ನಾಟಕ ಸಂಘ ಸ್ಥಾಪನೆ ಮಾಡಿದರು. ಮಹಾರಾಜಾ ಕಾಲೇಜಿನ ಪ್ರಚಾರೋಪನ್ಯಾಸ ಪುಸ್ತಕ ಮಾಲೆಯಲ್ಲಿ ಅವರು ಹಲವಾರು ಕೃತಿಗಳನ್ನು ರಚಿಸಿದ್ದರು.  ಎಚ್.ಎಂ. ಶಂಕರ ನಾರಾಯಣರಾಯರು ಹೊರತಂದ ‘ರೋಹಿಣಿ’ ಕೈಬರಹದ ಪತ್ರಿಕೆಗೆ ಸಹಾಯ ನೀಡಿದ್ದರು. 1954-56ರ ವರೆಗೆ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, 1965-69ರವರೆಗೆ ಅಧ್ಯಕ್ಷರಾಗಿ, ಪರಿಷತ್ತಿನ ನಿಘಂಟು ಸಮಿತಿಯ ಸದಸ್ಯರಾಗಿ, 1965-67ರವರೆಗೆ ಕನ್ನಡ ವಿಶ್ವಕೋಶ ಸಮಿತಿಯ ಸದಸ್ಯರಾಗಿ, ವಿಶ್ವವಿದ್ಯಾಲಯದ ಅಕೆಡೆಮಿಕ್ ಕೌನ್ಸಿಲ್, ಸೆನೆಟ್, ಪಠ್ಯಪುಸ್ತಕ ಸಮಿತಿ, ಪರೀಕ್ಷಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಕನ್ನಡ ನಿಘಂಟು ತಯಾರು ಮಾಡಬೇಕು ಎಂದು ಅವರಿಗೆ ಮೊದಲಿನಿಂದಲೂ ಆಸಕ್ತಿ ಇತ್ತು. 1943ರ ವರ್ಷದಲ್ಲಿ ಡಿ. ಎಲ್. ನರಸಿಂಹಾಚಾರ್ಯರು ನಿಘಂಟಿಗೆ ಶಬ್ದಗಳನ್ನು ಆರಿಸುವುದಕ್ಕೆ ಆಯೋಜಿಸಿದ್ದ ಕೆಲವರಲ್ಲಿ ಪ್ರೊ. ಜಿ. ವಿ. ಅವರೂ ಒಬ್ಬರು. ಜಿ. ವಿ. ಅವರಿಗೆ ಪ್ರೊಫೆಸರ್ ಆಗಿದ್ದ ಎ. ಆರ್. ಕೃಷ್ಣಶಾಸ್ತ್ರಿಗಳು ಪರಿಷತ್ತಿನ ನಿಘಂಟಿಗೆ ಪ್ರಧಾನ ಸಂಪಾದಕರಾದಾಗ, ಜಿ.ವಿ. ಅವರಲ್ಲಿ ನಿಘಂಟಿನ ಕುರಿತಾಗಿದ್ದ ಪ್ರೀತಿಯನ್ನು ಗಮನಿಸಿ ಅವರನ್ನು ವೈಯಕ್ತಿಕವಾಗಿ ಮನೆಗೆ ಕರೆಸಿಕೊಂಡು ಸಂಸ್ಕೃತ ನಿಘಂಟನ್ನು, ವೈದಿಕ ನಿಘಂಟನ್ನು, ಯಾಸ್ಕನ ನಿರುಕ್ತವನ್ನು ಪಾಠ ಮಾಡಿದರು. ಹಾಗಾಗಿ ಪ್ರೊ. ಜಿ. ವಿ. ಅವರಿಗೆ ಅದರ ಮೇಲೆ ಅಪಾರ ಪ್ರೀತಿ. ಮುಂದೆ ಜಿ.ವಿ. ಅವರೇ ಪರಿಷತ್ತಿನಿಂದ ಹೊರತಂದ ನಿಘಂಟಿಗೆ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು.


ಪ್ರಶಸ್ತಿ
ಭಾಷಾ ಸಮ್ಮಾನ್ ಪ್ರಶಸ್ತಿ, ವಿದ್ಯಾಲಂಕಾರ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಂಬಾ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಕಾಯಕ ಪ್ರಶಸ್ತಿ, ಪತ್ರಿಕಾ ಅಕಾಡೆಮಿ ವಿಶೇಷ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಹಂಪಿ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿಗಳು ವೆಂಕಟಸುಬ್ಬಯ್ಯ ಅವರಿಗೆ ನೀಡಲಾಗಿದೆ.


ವೆಂಕಟಸುಬ್ಬಯ್ಯ ಅವರು ಏಪ್ರಿಲ್ 18, 2021‌ ರಂದು ತಮ್ಮ 108ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.