ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಗ್ಯಾನವಾಪಿ ಮಸೀದಿಯ ವೀಡಿಯೋ ಸರ್ವೇ ಇಂದು ಆರಂಭಗೊಂಡಿದೆ. ಸರ್ವೇ ಕಾರ್ಯ ಆರಂಭಗೊಂಡಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಉತ್ತರಪ್ರದೇಶ ಪೋಲೀಸ್ ಇಲಾಖೆ ಬಿಗಿ ಬಂದೋಬಸ್ತ್ ನೀಡಿದೆ.
ಗ್ಯಾನವಾಪಿ ಮಸೀದಿಯು ಮೂಲದಲ್ಲಿ ಪುರಾತನ ಕಾಶಿ ವಿಶ್ವನಾಥನ ದೇಗುಲವಾಗಿದ್ದು ರಾಜಾ ತೋದರಮಲ್ಲ ಕಟ್ಟಿಸಿದ್ದು ಎನ್ನಲಾಗಿದೆ.1669ರ ಆಸುಪಾಸಿನಲ್ಲಿ ಆಕ್ರಮಣಕಾರಿ ಮೊಘಲ್ ಸಾಮ್ರಾಜ್ಯದ ಔರಂಗಜೇಬ್ ಅಲ್ಲಿನ ಪುರಾತನ ವಿಶ್ವನಾಥನ ದೇಗುಲವನ್ನು ಕೆಡವಿ ಅಲ್ಲೇ ಮಸೀದಿಯನ್ನು ನಿರ್ಮಾಣ ಮಾಡುವಂತೆ ಆಜ್ಞೆ ಮಾಡಿದ.
ದೇವಸ್ಥಾನದ ಅಡಿಪಾಯ ಮತ್ತು ಇತರ ಕೆಲವು ಭಾಗಗಳನ್ನು ಉಳಿಸಿಕೊಂಡು ಅದರ ಮೇಲೆ ಗ್ಯಾನವಾಪಿ ಮಸೀದಿಯನ್ನು ನಿರ್ಮಾಣ ಮಾಡಲಾಯಿತು.ನಂತರದಲ್ಲಿ ಹದಿನೆಂಟನೆಯ ಶತಮಾನದಲ್ಲಿ ರಾಣಿ ಅಹಲ್ಯಾಬಾಯಿ ಹೋಳ್ಕರ್ ಪ್ರಸ್ತುತವಿರುವ ಕಾಶಿ ವಿಶ್ವನಾಥನ ದೇವಾಲಯವನ್ನು ಮಸೀದಿಯ ದಕ್ಷಿಣಕ್ಕೆ ನಿರ್ಮಾಣ ಮಾಡಿದರು.
ಇತ್ತೀಚೆಗೆ ನ್ಯಾಯಾಲಯವು ಆ ವಿವಾದಿತ ಕಟ್ಟಡದ ಸರ್ವೆ ನಡೆಸಲು ತಜ್ಞರನ್ನೊಳಗೊಂಡ ಸಮಿತಿಯೊಂದನ್ನು ರಚಿಸಿ ವೀಡಿಯೋಗ್ರಫಿಯ ಮೂಲಕ ಸರ್ವೆ ನಡೆಸಲು ಆದೇಶಿಸಿದೆ.
ಕೆಳ ಅಂತಸ್ತಿನ ನಾಲ್ಕು ಕೋಣೆಗಳಲ್ಲಿ ಒಂದು ಹಿಂದೂ ಕಡೆಯದ್ದಾಗಿದ್ದು ಅದಕ್ಕೆ ಯಾವುದೇ ಬಾಗಿಲುಗಳಿಲ್ಲದ ಕಾರಣ ಅದರ ಸರ್ವೆಯನ್ನು ಮುಗಿಸಲಾಗಿದೆ, ಉಳಿದ ಮೂರು ಕೋಣೆಗಳು ಮುಸಲ್ಮಾನ ಸಮುದಾಯಕ್ಕೆ ಸೇರಿದ್ದು ಅದಕ್ಕೆ ಬೀಗ ಹಾಕಲಾಗಿತ್ತು.ಸರ್ವೆ ಪ್ರಕ್ರಿಯೆಯು ಆರಂಭಗೊಂಡಿದ್ದು ಮಸೀದಿಯ ಆಡಳಿತ ಮಂಡಳಿಯು ಸೀಲ್ ಮಾಡಿದ್ದ ಕೊಠಡಿಗಳ ಬೀಗ ತೆಗೆದು ಸರ್ವೆ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ.
ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದ ಮಸೀದಿ ಆಡಳಿತ ಮಂಡಳಿಯು ನ್ಯಾಯಾಲಯವು ನೇಮಿಸಿದ್ದ ಅಡ್ವೋಕೇಟ್ ಕಮೀಶನರ್ ಅವರ ಬಳಿ ಆವರಣದಲ್ಲಿ ವೀಡಿಯೋಗ್ರಫಿ ನಡೆಸಲು ಅನುಮತಿ ಇಲ್ಲವೆಂದೂ, ಅಲ್ಲದೆ ಅವರು ನಡೆಸುತ್ತಿರುವ ಸರ್ವೆಯು ಪಕ್ಷಪಾತದಿಂದ ಕೂಡಿದೆ ಎಂದು ಆರೋಪಿಸಿ ಅವರ ಜಾಗಕ್ಕೆ ಬದಲಿ ವ್ಯಕ್ತಿಯನ್ನು ನೇಮಕ ಮಾಡಲು ಕೋರ್ಟಿನ ಮೊರೆ ಹೋಗಿತ್ತು.
ಆದರೆ ಅಲ್ಲಿನ ಜಿಲ್ಲಾ ನ್ಯಾಯಾಲಯವು ಮಸೀದಿಯ ಆಡಳಿತ ಮಂಡಳಿಯ ಈ ಮನವಿಯನ್ನು ತಿರಸ್ಕರಿಸಿದ್ದು ಸರ್ವೇಯನ್ನು ಮೇ 17ರ ಒಳಗಾಗಿ ಪೂರ್ಣಗೊಳಿಸಿ ವರದಿ ನೀಡಲು ಹಾಗು ಮಸೀದಿಯ ಆವರಣದ ಮುಸಲ್ಮಾನ ಸಮುದಾಯದ ಕೋಣೆಗಳನ್ನೂ ಸರ್ವೇಗಾಗಿ ತೆರೆಯುವಂತೆ ಆಡಳಿತ ಮಂಡಳಿಗೆ ಆದೇಶ ನೀಡಿತು.
ನ್ಯಾಯಾಲಯದ ಆದೇಶವನ್ನು ಮಸೀದಿಯ ಆಡಳಿತ ಮಂಡಳಿಯು ಮಾನ್ಯ ಮಾಡದೆ ಚಾವಿಯನ್ನು ತೆರೆಯದಿದ್ದಲ್ಲಿ ಅವುಗಳನ್ನು ಒಡೆದು ಸರ್ವೆಗೆ ಅನುಕೂಲ ಮಾಡಿಕೊಡಬೇಕು ಅಲ್ಲದೆ ಇದಕ್ಕೆ ವಿರೋಧ ವ್ಯಕ್ತವಾದಲ್ಲಿ ಜಿಲ್ಲಾಡಳಿತವು ಅಗತ್ಯವಾದ ಕ್ರಮವನ್ನು ಕೈಗೊಂಡು ಎಫ್ಐಆರ್ ದಾಖಲು ಮಾಡಬೇಕೆಂದು ಆದೇಶ ನೀಡಿದೆ.
ಹೀಗಾಗಿ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿದ್ದು,ದೇಗುಲದ ದರ್ಶನಕ್ಕೆ ಬರುವ ಭಕ್ತರಿಗೂ ಯಾವುದೇ ತೊಂದರೆಯಾಗದಂತೆ ರಕ್ಷಣಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.ಹಾಗು ಸುತ್ತಮುತ್ತಲಿನ 500ಮೀಟರ್ವರೆಗಿನ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಲಾಗಿದೆ.
ನಾಲ್ಕು ಮಂದಿ ಮಹಿಳೆಯರು ಕಾಶಿ ವಿಶ್ವನಾಥ ಮಂದಿರ ಆವರಣದ ಗ್ಯಾನವಾಪಿ ಮಸೀದಿಯ ಆವರಣದಲ್ಲಿರುವ ಶೃಂಗಾರ ಗೌರಿ ದೇಗುಲದಲ್ಲಿ ದಿನವೂ ಪೂಜೆ ನಡೆಸಲು ಅನುಮತಿ ಕೋರಿ ಕೋರ್ಟಿನ ಮೊರೆ ಹೋದ ಕಾರಣಕ್ಕೆ ಈ ಪ್ರಕರಣವು ಮತ್ತೆ ಮುನ್ನೆಲೆಗೆ ಬಂದಿದೆ