ಇತ್ತೀಚೆಗಷ್ಟೆ ರಾಜ್ಯದಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ತರುವಾಯು ಶಿಕ್ಷಣ ಸಂಸ್ಥೆಗಳು ಆರಂಭವಾಗಿದೆ.ಆದರೆ ಆರಂಭವಾಗುತ್ತಿರುವ ಕಾಲೇಜಿನ ಜತೆಗೆ ಹೊಸದೊಂದು ವಿವಾದವೂ ಆರಂಭವಾಗಿದೆ.
ಮುಸ್ಲಿಮ್ ಹೆಣ್ಣುಮಕ್ಕಳು ಕಾಲೇಜಿನ ಸಮವಸ್ತ್ರದ ಮೇಲೆ ಹಿಜಾಬ್ ಧರಿಸುವ ಕುರಿತಾಗಿ ಕರ್ನಾಟಕದ ಅನೇಕ ಕಡೆಗಳಲ್ಲಿ ವಿವಾದ ಆರಂಭವಾಗಿದೆ.ಇದೀಗ ಕುಂದಾಪುರದ ಸರಕಾರಿ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರು ಕಾಲೇಜಿನ ಗೇಟಿನಲ್ಲಿ ನಿಂತು ಹಿಜಾಬ್ಗೆ ಅವಕಾಶ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.ಆದರೆ ಸಮವಸ್ತ್ರವನ್ನು ಕಡ್ಡಾಯಗೊಳಿಸಿದ ನಂತರ ಬೇರೆ ಯಾವುದೇ ರೀತಿಯ ತಾರತಮ್ಯಕ್ಕೆ ಅವಕಾಶವಿಲ್ಲದಿದ್ದಾಗಿಯೂ ಮುಸಲ್ಮಾನ ವಿದ್ಯಾರ್ಥಿನಿಯರು ಅನವಶ್ಯಕವಾದ ವಿವಾದ ಎಬ್ಬಿಸುತ್ತಿದ್ದಾರೆ.ಅವರಿಗೆ ಅವಕಾಶ ಕೊಟ್ಟರೆ ಹಿಂದೂ ವಿದ್ಯಾರ್ಥಿಗಳೂ ಕೇಸರಿ ಶಾಲು ಹಾಕಿ ಕಾಲೇಜಿಗೆ ಬರುವ ಅವಕಾಶ ಮಾಡಿದ್ದಾರೆ.
ಕಾಲೇಜಿನಲ್ಲಿ ಅಗತ್ಯವಾದ ಶಿಕ್ಷಣ,ಕೋವಿಡ್ನಿಂದ ಅನಿಯಮಿತವಾದ ಪಠ್ಯ ಚಟುವಟಿಕೆಗಳಿಗೆ ತಲೆ ಕೊಡಬೇಕಾಗಿದ್ದ ಕಾಲೇಜುಗಳು ಈಗ ಸಮವಸ್ತ್ರದ ವಿವಾದದಲ್ಲಿ ಸಿಲುಕಿದೆ.
ಈ ನಡುವೆ ಆ ವಿದ್ಯಾರ್ಥಿನಿಯರು ಕಾಲೇಜಿಗೆ ಹಿಜಾಬ್ ಧರಿಸಲು ಅವಕಾಶ ನೀಡಿ, ಶಿಕ್ಷಣವನ್ನು ಮುಂದುವರೆಸಲು ಕೇಳಿಕೊಂಡಿದ್ದಾರೆ.ಆದರೆ ಈ ರೀತಿಯ ತಾರತಮ್ಯದಿಂದ ಮುಂದೆ ವಿದ್ಯಾರ್ಥಿ ಸಮುದಾಯದ ಒಳಗೆ ಬಹುದೊಡ್ಡ ಸಾಮಾಜಿಕ ಕಂದಕವನ್ನು ನಿರ್ಮಾಣ ಮಾಡುವ ಸಾಧ್ಯತೆಯಿದೆ.
ಕಾಲೇಜುಗಳಲ್ಲಿ ಯಾವ ಯಾವ ವಿವಿಧ ಮತಪಂಥದ ವಿದ್ಯಾರ್ಥಿಗಳೆಲ್ಲಾ ಆಯಾ ಮತಪಂಥದ ಧಾರ್ಮಿಕ ಉಡುಗೆಗಳಿಗೆ ಅನುಮತಿ ಬೇಡುತ್ತಾ ಹೋದರೆ ಕಾಲೇಜಿನಲ್ಲಿ ಶಿಕ್ಷಣಕ್ಕಿಂತ ಹೆಚ್ಚಾಗಿ ಸಾಮಾಜಿಕ ಅಸಮತೋಲನ ಆರಂಭವಾಗಿ ಸಾಮಸರಸ್ಯದಿಂದ ಸಹಬಾಳ್ವೆಯಿಂದ ಕಲಿಯುವ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಾಗುವುದೇ ಇಲ್ಲ.
ಇನ್ನು ಕಾಲೇಜಿನಲ್ಲಿ ಸರಸ್ವತಿ ಪೂಜೆ,ಗಣಪತಿ ಪ್ರಾರ್ಥನೆಗೆ ಅವಕಾಶ ಮಾಡಿಕೊಡುವುದಾದರೆ ನಮಗೂ ಹಿಜಾಬ್ಗೆ ಅವಕಾಶ ಮಾಡಿಕೊಡಬೇಕು ಎನ್ನುವ ವಾದ ಅತ್ಯಂತ ಹಾಸ್ಯಾಸ್ಪದ.
ಹಿಂದೆ 1938ರಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲೂ ವಿಶ್ವವಿದ್ಯಾನಿಲಯದ ಲಾಂಛನದಲ್ಲಿದ್ದ ‘ಶ್ರೀ’ ಚಿಹ್ನೆಯನ್ನು ಬದಲಾಯಿಸಲು ಮುಸ್ಲಿಂ ವಿದ್ಯಾರ್ಥಿಗಳು ಅಂದಿನ ಕಲ್ಕತ್ತಾ ವಿಶ್ವವಿದ್ಯಾನಿಲಯದ ಡಾ.ಶ್ಯಾಮಪ್ರಸಾದ್ಮುಖರ್ಜಿಯವರ ವಿರುದ್ಧ ಹರತಾಳ ನಡೆಸಿದರು.ಆ ಕುರಿತಾಗಿ ಪ್ರತಿಕ್ರಿಯಿಸುವಾಗ ಡಾ.ಮುಖರ್ಜಿಯವರು – “ಈ ದೇಶದ ಮೂಲಸಂಸ್ಕೃತಿಯಲ್ಲಿ ‘ಶ್ರೀ’ ಗೆ,’ಓಂ’ ಗೆ ವಿಶೇಷವಾದ ಸ್ಥಾನವಿದೆ.ಅದು ಕೇವಲ ಹಿಂದೂ ಅಥವಾ ಯಾವುದೊ ಜಾತಿಗೆ ಸೀಮಿತವಾದುದಲ್ಲ ಬದಲಾಗಿ ಅದೊಂದು ವಿಚಾರ.That is an idea towards enlightenment and harmony.ಯಾವುದೇ ಒಳ್ಳೆಯ ವಿಚಾರಗಳಿಗೆ ತಮ್ಮ ಮನಸ್ಸನ್ನು ತೆರೆದುಕೊಂಡು,ಮತ್ತು ಅನುಚಿತವಾದ ಯಾವುದೇ ಸಂಪ್ರದಾಯಗಳನ್ನು ಪ್ರಶ್ನೆ ಮಾಡದೆ ಒಪ್ಪಿಕೊಳ್ಳದೆ ಇರುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು” ಎಂದಿದ್ದರು.
ಈ ನಿಟ್ಟಿನಲ್ಲಿ ನೋಡುವುದಾದರೆ ಹಿಜಾಬ್ ಧರಿಸುವ ಇಸ್ಲಾಮಿನ ಸಂಪ್ರದಾಯ ಶತಮಾನಗಳಷ್ಟು ಹಿಂದೆ ಹೋಗುತ್ತದೆ.ಆದರೆ ಇವತ್ತಿನ ಆಧುನಿಕ ಯುಗದಲ್ಲಿ ಹಿಜಾಬ್ ಎಷ್ಟು ಉಚಿತ? ಧಾರ್ಮಿಕ ಸಂಪ್ರದಾಯವೇ ಇದ್ದರೂ ಅದರ ವೈಜ್ಞಾನಿಕ ಹಿನ್ನೆಲೆ ಏನು? ಹಿಜಾಬ್ ಇಂದಿನ ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಮುಕ್ತವಾಗಿ ಬೆರೆಯುವ,ಮುಖ್ಯವಾಹಿನಿಯಿಂದ ಬೇರ್ಪಡಿಸಿ ಕೇವಲ ತಮ್ಮ ಧಾರ್ಮಿಕ ಕಾರಣದ ಮುನ್ನೆಲೆ ನೀಡುತ್ತಾ ಆಧುನಿಕ ಜಗತ್ತಿನ ಎಲ್ಲ ಓಟಗಳಿಂದ ಹೊರ ದೂಡುತ್ತಿದೆ.
ಉದಾಹರಣೆಗೆ ಕಾಲೇಜಿಗೆ ಬರುವ ಹೆಣ್ಣುಮಕ್ಕಳು ಕೇವಲ ವಿದ್ಯೆಯ ಕುರಿತಾಗಿ ತಮ್ಮ ಧ್ಯಾನವನ್ನು ನೀಡಬೇಕಿತ್ತು ಆದರೆ ಹಿಜಾಬ್ನ ಕಾರಣದಿಂದಾಗಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳ ನಡುವೆ ಬೇರೆಯಾಗಿ ನಿಲ್ಲಬೆಕಾಯಿತು.ಹೀಗೆ ತಮ್ಮ ಧಾರ್ಮಿಕ ನಡವಳಿಕೆಗಳಿಂದ ಕಾಲೇಜಿನ ವಿದ್ಯಾಭ್ಯಾಸದ ಜೊತೆಗೆ ಸಾಮಾಜಿಕವಾಗಿ ‘left out’ಆಗುವ ಮಾನಸಿಕ ಅಭದ್ರತೆಯೂ ಸಹ ದೂರಗಾಮಿ ಪರಿಣಾಮ ಬೀರಬಹುದು.ಇದು ಉಳಿದ ವಿದ್ಯಾರ್ಥಿಗಳಿಗೂ ಅವರ ಮೇಲೆ ಸದಭಿಪ್ರಾಯ ಮೂಡದಿರುವಂತೆ ಮಾಡಬಹುದು.ವಿದ್ಯಾರ್ಥಿ ಸಮುದಾಯ ಭವಿಷ್ಯತ್ತಿನಲ್ಲಿ ಮಹಾನ್ ಕನಸುಗಳನ್ನು ಕಾಣಬೇಕು ಆ ಕುರಿತಾಗಿ ತಮ್ಮ ಪ್ರಯತ್ನ ನಡೆಸಬೇಕು ಎನ್ನುವಾಗ ಈ ಧಾರ್ಮಿಕ ಆಚರಣೆಗಳು ಅಡ್ಡಿಯಾಗುತ್ತಿದೆ.
ಇನ್ನು ಹಿಜಾಬ್ ಧರಿಸದೆ ಕಾಲೇಜಿಗೆ ಬಂದರೆ ಅನ್ಯ ಪುರುಷರ ಕೆಟ್ಟ ದೃಷ್ಟಿ ಹಾಗು ಬೇರೆ ರೀತಿಯ ಭಾವನೆ ಕೆರಳಬಹುದು ಎಂಬ ಕಾರಣ ನೀಡುತ್ತಿದ್ದಾರೆ.ಆದರೆ ಕೇವಲ ಮುಸಲ್ಮಾನ ಹುಡುಗಿಯರೇ ಯಾಕೆ ಹಾಗೆ ಯೋಚಿಸುತ್ತಿದ್ದಾರೆ? ಹಿಂದೂ ಕ್ರಿಶ್ಚಿಯನ್ ಹೆಣ್ಣುಮಕ್ಕಳಿಗೆ ಅನ್ನಿಸದೆ ಇರುವ ಅಭದ್ರತೆಯ ಭಾವನೆಗಳು ಮುಸಲ್ಮಾನ ಸಮುದಾಯದ ಹೆಣ್ಣುಮಕ್ಕಳಿಗೆ ಯಾಕೆ ಅನ್ನಿಸುತ್ತಿದೆ? ತಮ್ಮ ಹೆಣ್ಣುಮಕ್ಕಳಿಗೆ ಆರೋಗ್ಯಪೂರ್ಣವಾದ ವಾತಾವರಣ ನೀಡುವಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯದಿರುವಂತೆ ಮಾಡುವಲ್ಲಿ ಮುಸಲ್ಮಾನ ಸಮುದಾಯ ಹಿಂದೆ ಬಿದ್ದಿದೆಯಾ?
ಈಹಿಂದೆ ಮುಸಲ್ಮಾನ ಹೆಣ್ಣುಮಕ್ಕಳ ತ್ರಿವಳಿ ತಲಾಖ್ ವಿಚಾರ ಬಂದಾಗಲೂ ಕಟ್ಟಾ ಮುಸಲ್ಮಾನ ಸಮುದಾಯ ಹಿಂದೆ ಸರಿದಿತ್ತು.ಆದರೆ ಆಧುನಿಕ ಭಾರತದಲ್ಲಿ ಎಲ್ಲ ಸಮುದಾಯದ ಹೆಣ್ಣುಮಕ್ಕಳೂ ತಮ್ಮ ವಿದ್ಯಾಭ್ಯಾಸ ಕೆರಿಯರ್ ಎಂದು ನಾಗಾಲೋಟದಿಂದ ಓಡುತ್ತಿರುವಾಗ ಮುಸಲ್ಮಾನ ಸಮುದಾಯದ ಹೆಣ್ಣುಮಕ್ಕಳಿಗೆ ತಮ್ಮ ಹಿಜಾಬ್ ಧರಿಸುವಿಕೆಯಷ್ಟೇ ಯಾಕೆ ಮುಖ್ಯವಾಗುತ್ತಿದೆ?
ಕೇವಲ ಕುಂದಾಪುರ, ಕೊಪ್ಪ , ಶಿವಮೊಗ್ಗದಂತಹ ಊರುಗಳಲ್ಲಿ ಮಾತ್ರವಲ್ಲ ಅನೇಕ ಕಡೆಗಳಲ್ಲಿ ಹಿಜಾಬ್ನ ವಿವಾದಗಳು ಹುಟ್ಟಿಕೊಳ್ಳತೊಡಗಿದೆ. ಅದನ್ನು ಮುಸಲ್ಮಾನ ಸಮುದಾಯ ಧಾರ್ಮಿಕ ಕಾರಣಗಳನ್ನು ಕೊಟ್ಟು ಸಮರ್ಥಿಸಿಕೊಳ್ಳಲೂಬಹುದು ಆದರೆ ದೇಶದ ನಾಗರೀಕರಾಗಿ,ಸಮಾಜದ ಮುಖ್ಯವಾಹಿನಿಯ ಜತೆಗೆ ಬೆರೆತು ನಡೆಯುವುದು ಅಷ್ಟೇ ಮುಖ್ಯ.ಇಲ್ಲದಿದ್ದರೆ ಆ ಸಮುದಾಯವನ್ನು ಸಮಾಜವೇ ಪ್ರತ್ಯೇಕವಾಗಿ ನೋಡುವ ಸಮಯವೂ ವಿದ್ಯಾರ್ಥಿ ಸಮುದಾಯದಲ್ಲಿ ಆರಂಭವಾಗಬಹುದು.
ಸಮಾನ ನಾಗರೀಕ ಸಂಹಿತೆಯನ್ನು ತರುವುದರಿಂದ ಮಾತ್ರವೇ ಈ ಎಲ್ಲ ವಿವಾದಗಳಿಂದ ಮುಕ್ತವಾಗಲು ಸಾಧ್ಯವಿದೆ.ಮತೀಯ ಚಿಂತನೆಗಳಿಂದ ಕೂಡಿದ ಯುವ ಮನಸ್ಸುಗಳು ಸಮಾಜದ ಪರಿವರ್ತನೆಗೆ ಸುಧಾರಣೆಗೆ ನಿಜಕ್ಕೂ ತಮ್ಮ ಕೊಡುಗೆ ನೀಡಲು ಸಾಧ್ಯವಿದೆಯೆ? ಹೀಗೆ ಮತೀಯ ಭಾವನೆಗಳನ್ನು ಅಭಿವ್ಯಕ್ತಿಸುವ ವಿದ್ಯಾರ್ಥಿ ಸಮುದಾಯದಿಂದ ಸಾಮರಸ್ಯದ ಹೆಜ್ಜೆಗಳನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ.
ಸಮಾನವಾದ ಹಕ್ಕುಗಳಿಗೆ ಬಾಧ್ಯತೆಯಿರುವಾಗ ಸಮಾನವಾದ ಕರ್ತವ್ಯಗಳಿಗೂ ಒಡ್ಡಿಕೊಂಡು ನಡೆಯುವುದೂ ಅತ್ಯಂತ ಅವಶ್ಯಕವಾಗಿದೆ.ಹಿಜಾಬ್ನ ಈ ವಿವಾದ ಇಂದು ನಾಳೆ ತಣ್ಣಗಾಗಬಹುದು ಆದರೆ ವಿದ್ಯಾರ್ಥಿ ದೆಸೆಯಲ್ಲಿ ಈ ರೀತಿಯ ಸಾಮರಸ್ಯ ಕದಡುವ ಭಾವನೆಗಳು ನೆಲೆಯೂರದಿದ್ದರೆ ಸಮಾಜದ ಸಾಮರಸ್ಯಕ್ಕೂ ಒಳಿತು.