ಕರ್ನಾಟಕದಲ್ಲಿ ನಡೆದ ಹಿಜಾಬ್ ವಿವಾದದ ತೀರ್ಪು ಇಂದು ಹೈಕೋರ್ಟಿನ ತ್ರಿಸದಸ್ಯ ಪೀಠ ಪ್ರಕಟಿಸಿದೆ.ಹಿಜಾಬ್ಅನ್ನು ಶಾಲಾ ಕಾಲೇಜುಗಳ ಒಳಗೆ ಧರಿಸಲು ಅನುಮತಿ ಕೋರಿ ಆರು ಮಂದಿ ಮುಸಲ್ಮಾನ ಹೆಣ್ಣುಮಕ್ಕಳ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಇಂದು ತೀರ್ಪು ಪ್ರಕಟಿಸಿದ್ದು ಹಿಜಾಬ್ ಎನ್ನುವುದು ಇಸ್ಲಾಂ ಫೇಯ್ತ್ನ ಪ್ರಕಾರ ‘ಎಸೆನ್ಷಿಯಲ್ ರಿಲಿಜಿಯಸ್ ಪ್ರಾಕ್ಟೀಸ್ ಅಲ್ಲ’ ಅಂದರೆ ಹಿಜಾಬ್ ಅನ್ನುವುದು ಮುಸಲ್ಮಾನ ಹೆಣ್ಣುಮಕ್ಕಳಿಗೆ ಕಡ್ಡಾಯವಲ್ಲ,ಹೀಗಾಗಿ ಈ ಅರ್ಜಿಯನ್ನು ಪುರಸ್ಕರಿಸಲಾಗುವುದಿಲ್ಲ ಎಂದಿದೆ.
ಸಮವಸ್ತ್ರವನ್ನು ಎತ್ತಿ ಹಿಡಿದ ಹೈಕೋರ್ಟ್ ಸಮವಸ್ತ್ರವನ್ನು ಶಾಲಾ ಕಾಲೇಜುಗಳಲ್ಲಿ ಧರಿಸುವಂತೆ ನೀತಿಯನ್ನು ರೂಪಿಸಿರುವುದು ಸಾಂವಿಧಾನಿಕವಾಗಿ ಒಪ್ಪುವಂಥದ್ದು ಅದರಲ್ಲಿ ಯಾವುದೇ ಪ್ರಶ್ನೆಯಿಲ್ಲ,ಹಾಗಾಗಿ ವಿದ್ಯಾರ್ಥಿಗಳು ಇದನ್ನು ಪಾಲನೆ ಮಾಡುವುದನ್ನು ಪ್ರಶ್ನಿಸುವಂತಿಲ್ಲ ಎಂದಿದೆ.
ಇನ್ನು ಸಮವಸ್ತ್ರವನ್ನು ಮಾತ್ರವೇ ಧರಿಸಿ ಬರುವಂತೆ ಸರಕಾರ 5/2/2022ರಂದು ಹೊರಡಿಸಿರುವ ಸುತ್ತೋಲೆಯನ್ನು ಕುರಿತು ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಅಥವಾ ಅದನ್ನು ಅಸಿಂಧುಗೊಳಿಸಲು ಯಾವುದೇ ಅರ್ಜಿ ಸ್ವೀಕೃತಗೊಂಡಿಲ್ಲ ಎಂದಿದೆ.
ಫೆಬ್ರವರಿ 14ರಿಂದ-25ರವರೆಗೆ ನಡೆದ ವಾದ- ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ಇಂದು ಸಮವಸ್ತ್ರದ ಪರವಾಗಿ ತೀರ್ಪು ನೀಡಿದೆ.ಹಿಜಾಬ್ ಪರವಾಗಿ 8 ವಕೀಲರು ಮತ್ತು ಸರಕಾರದ ಪರವಾಗಿ 5ಮಂದಿ ವಕೀಲರು ಸತತ 11ದಿನಗಳ ಮೊಕದ್ದಮೆಯನ್ನು ನಡೆಸಿದ್ದು ಇಂದು ಹೈಕೋರ್ಟ್ ತನ್ನ ತೀರ್ಪು ಪ್ರಕಟಿಸಿದೆ.
ತೀರ್ಪಿನ ನಂತರ ಹಿಜಾಬ್ಪರ ವಕೀಲ ಅನಾಸ್ ತನ್ವೀರ್ ಟ್ವೀಟ್ ಮಾಡಿದ್ದು ಅರ್ಜಿಯನ್ನು ಸುಪ್ರಿಂ ಕೋರ್ಟಿಗೆ ತೆಗೆದುಕೊಂಡು ಹೋಗುವುದಾಗಿ ಬರೆದುಕೊಂಡಿದ್ದಾರೆ.