S GURUMURTHY

ಹಿಂದುತ್ವ ಮತ್ತು ಆಧುನಿಕ ಆರ್ಥಿಕ ಸವಾಲುಗಳು

ಇಂಗ್ಲಿಷ್ ಮೂಲ: ಎಸ್. ಗುರುಮೂರ್ತಿ  ಅನುವಾದ : ವಿದ್ವಾನ್ ಉದಯನ ಹೆಗಡೆ

S GURUMURTHY

ಪ್ರಾರಂಭದಲ್ಲೇ ಪ್ರಶ್ನೆ

ಈ ಲೇಖನದ ತಲೆಬರಹವೇ ಆಸಕ್ತಿದಾಯಕ ಮತ್ತು ಪ್ರಾಜ್ಞ ಪ್ರಶ್ನೆಗಳನ್ನು ಆರಂಭದಲ್ಲೇ ಮುಂದಿಡುತ್ತದೆ. ಪ್ರಾಚೀನತೆಯಲ್ಲಿ ಹುದುಗಿರುವ ಭಾರತದ ಹಿಂದುತ್ವಕ್ಕೂ ಜಗತ್ತಿನ ಭವಿಷ್ಯತ್ತಿಗೂ ಎತ್ತಣಿಂದೆತ್ತ ಸಂಬಂಧ?ಸಾಂಪ್ರದಾಯಿಕ ಹಿಂದುತ್ವವು ಆಧುನಿಕ ಮತ್ತು ಆಧುನಿಕೋತ್ತರ ಜಗತ್ತಿನ ಜೊತೆಗೆ ಹಾಗೂ ಆಧುನಿಕ ಆರ್ಥಿಕ ಬೆಳವಣಿಗೆ ಮತ್ತದರ ಆಧುನಿಕೋತ್ತರ ಶೈಲಿಗೆ ಹೊಂದಿಕೊಳ್ಳುವುದೇ? ಮೊದಲಿಗೆ ಮತ್ತು ಅತ್ಯಂತ ಪ್ರಮುಖವಾಗಿ ಆಲೋಚಿಸಬೇಕಾದ ವಿಷಯವೆಂದರೆ, ಹಿಂದುತ್ವದಲ್ಲಿ ವ್ಯಾವಹಾರಿಕವಾಗಿ ಕೆಲಸ ಮಾಡಬಲ್ಲ ಭೌತಿಕ ತತ್ತ ವಿದೆಯೇ? ಸಮಗ್ರ ಅರ್ಥಶಾಸ್ತ್ರವನ್ನು ಅದು ವ್ಯಕ್ತಗೊಳಿಸಬಲ್ಲುದೇ? ಹಿಂದುತ್ವವು ಯಶಸ್ವೀ ಪ್ರಾಪಂಚಿಕ ಜೀವನಪದ್ಧತಿಯೆ?

ಪಾರಂಪರಿಕ ಅರ್ಥಶಾಸ್ತ್ರಕ್ಕೆ ಹೊಂದುವುದೆಂದು ಸಾಬೀತಾಗಿರುವ

ಪ್ರಾಚೀನ ಹಿಂದುತ್ವ

ಕೊನೆಯ ಪ್ರಶ್ನೆಯನ್ನು ಮೊದಲು ತೆಗೆದುಕೊಳ್ಳೋಣ. ಅದಕ್ಕೆ ಸಿಗುವ ಉತ್ತರ ಸಕಾರಾತ್ಮಕವಾದುದು. ಪ್ರಾಚೀನ ಇತಿಹಾಸವನ್ನು ಸಂಕ್ಷೇಪವಾಗಿಯಾದರೂ ಅವಲೋಕಿಸಿದಾಗ ಇದು ತಿಳಿಯುತ್ತದೆ. ಕಲ್ಪಿತ ಸಿದ್ಧಾಂತವನ್ನೇ ಹಬ್ಬಿಸುವ ಪ್ರವೃತ್ತಿಯುಳ್ಳ-ಭಾರತವನ್ನು ನೋಡದೆಯೇ ತೀರ್ಪನ್ನು ನೀಡಿರುವ-ಮ್ಯಾಕ್ಸ್ ವೇಬರ್ ಮುಂತಾದ ಪಾಶ್ಚಾತ್ಯ ವಿದ್ವಾಂಸರು ವ್ಯಕ್ತಪಡಿಸಿರುವ ಅಭಿಪ್ರಾಯವೆಂದರೆ – ‘ಕರ್ಮಗಳಿಂದಲೇ ಪುನರ್ಜನ್ಮ ಉಂಟಾಗುವುದೆಂಬ ತನ್ನದೇ ಸಿದ್ಧಾಂತವನ್ನು ನಂಬಿದ ಮತ್ತು ಜಾತಿವ್ಯವಸ್ಥೆಯನ್ನು ಪ್ರಧಾನವಾಗಿ ಹೊಂದಿರುವ ಹಿಂದುತ್ವವು ಗತಿಶೀಲತೆಗೆ ಸಹಾಯಕವಾಗಲಾರದು ಮತ್ತು ಅಭಿವೃದ್ಧಿಯನ್ನು ಬೆಳೆಸದು’ ಎಂಬುದು. ಆದರೆ ಅವರಿಗೆ ತಿಳಿಯದಿರುವ ಸತ್ಯವೆಂದರೆ ಕರ್ಮಗಳನ್ನು ಮತ್ತು ಪುನರ್ಜನ್ಮವನ್ನು ಯಾವಾಗಲೂ ನಂಬುವ ಮತ್ತು ಅದರೊಡನೆಯೇ ಜೀವಿಸುವ ಹಿಂದೂ ಭಾರತವು ಜಾಗತಿಕ ಅರ್ಥವ್ಯವಸ್ಥೆಯ ಪ್ರಶ್ನಾತೀತ ನಾಯಕನಾಗಿ ಕ್ರಿಸ್ತಶಕದ ಆರಂಭದಿಂದ ೧೭ನೇ ಶತಮಾನದವರೆಗೆ ಕಂಗೊಳಿಸುತ್ತಿತ್ತು. ಈ ಹೇಳಿಕೆ ಅನೇಕರನ್ನು ಆಶ್ಚರ್ಯಕ್ಕೀಡುಮಾಡಬಹುದು. ಹೆಚ್ಚೇಕೆ? ಅನೇಕ ಹಿಂದೂಗಳೂ ಇದನ್ನು ಕೇಳಿ ಅಚ್ಚರಿಗೊಂಡಾರು. ಹಿಂದೂ ಭಾರತವು ಶ್ರೀಮಂತ ರಾಷ್ಟ್ರವಾಗಿತ್ತು – ‘ಚಿನ್ನದ ಗೂಡಾಗಿತ್ತು’ ಎಂಬುದು ಇಲ್ಲಿಯವರೆಗೆ ದಂತಕಥೆಯಾಗಿಯೇ ಉಳಿದಿತ್ತು. ಇದೀಗ ಈ ವಿಷಯವು ಜಾಗತಿಕ ಆರ್ಥಿಕ ಇತಿಹಾಸದಲ್ಲಿ ವಿವಾದಾತೀತವಾಗಿ ಸಾಬೀತಾಗಿದೆ. ಪ್ರಮುಖ ಆರ್ಥಿಕ ಇತಿಹಾಸಕಾರರಾದ ಆಂಗಸ್ ಮ್ಯಾಡಿಸನ್‌ರವರು ಬರೆದ ೨೦೦೧ರಲ್ಲಿ ಪ್ರಕಟವಾದ (೨೦೦೭ರಲ್ಲಿ ಮರುಮುದ್ರಣಗೊಂಡ) ಜಾಗತಿಕ ಆರ್ಥಿಕ ಇತಿಹಾಸದ ಬಗೆಗಿನ ಕೃತಿಯು ಈ ಅಂಶವನ್ನು ಜಾಹೀರುಗೊಳಿಸುತ್ತದೆ. ೨೦೧೦ರ ಮೊದಲ ಭಾಗದಲ್ಲಿ ತೀರಿಕೊಂಡ ಮ್ಯಾಡಿಸನ್, ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಒಕ್ಕೂಟವಾದ ‘ಆರ್ಗನೈಸೇಷನ್ ಆಫ್ ಇಕನಾಮಿಕ್ ಡೆವಲಪ್‌ಮೆಂಟ್ ಅಂಡ್ ಕೋ-ಆಪರೇಷನ್’ (ಓ.ಇ.ಡಿ.ಸಿ)ನ ಸಲಹೆಗಾರರಾಗಿದ್ದರು. ಮ್ಯಾಡಿಸನ್‌ರ ಕೃತಿಯು ವ್ಯಕ್ತಪಡಿಸುವ ಅಭಿಪ್ರಾಯವೆಂದರೆ ಹಿಂದೂ ಭಾರತವು ಕ್ರಿ.ಶ. ಮೊದಲನೆಯ ಶತಮಾನದಿಂದ ೧೭ನೇ ಶತಮಾನದವರೆಗೂ ವೈಶ್ವಿಕ ಆರ್ಥಿಕತೆಯ ಪ್ರಮುಖ ಶಕ್ತಿಕೇಂದ್ರವಾಗಿತ್ತು; ಮತ್ತು, ಶತಮಾನಗಳವರೆಗೂ ಜಾಗತಿಕ ಜಿ.ಡಿ.ಪಿ.ಯ ಮೂರನೇ ಒಂದರಷ್ಟು ಭಾಗವನ್ನು ಉತ್ಪಾದಿಸಲು ಸಮರ್ಥವಾಗಿತ್ತು. ಹಿಂದೂ ಭಾರತದ ಪ್ರತಿ ವ್ಯಕ್ತಿಯ ಗಳಿಕೆಯು ಅನೇಕ ದೇಶಗಳ ಜನರ ಗಳಿಕೆಗೆ ಸಮಾನವಾಗಿತ್ತು. ವೈಶ್ವಿಕ ಆರ್ಥಿಕತೆಯ ಮೇಲಿನ ೧೭೦೦ ವರ್ಷಗಳ ಭಾರತದ ಪ್ರಭುತ್ವವನ್ನು ಅನಂತರ ಚೈನಾ ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಯಾವಾಗಲೂ ಎರಡನೇ ಸ್ಥಾನದಲ್ಲಿದ್ದ ಚೈನಾ ಕ್ರಿ.ಶ. ೧೬೦೦ರ ಹೊತ್ತಿಗೆ ಭಾರತವನ್ನು ಹಿಂದಿಕ್ಕಿ ಮೆರೆಯತೊಡಗಿತು. ಆದರೆ ೧೭೦೦ರ ಹೊತ್ತಿಗೆ ಮತ್ತೆ ಭಾರತವು ನಾಯಕನಾಗಿ ಪ್ರಜ್ವಲಿಸಿತು. ಅದಾದ ಮೇಲೆ ವಸಾಹತುಶಾಹಿಯ ಕಾರಣದಿಂದ ಭಾರತವು ೧೯ ಮತ್ತು ೨೦ನೇ ಶತಮಾನಗಳಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡಿತು. ಚೈನಾಕ್ಕೂ ಇದೇ ಗತಿಯಾಯಿತು. ಆದರೆ ಆಂಗಸ್ ಮ್ಯಾಡಿಸನ್‌ರ ಸಂಶೋಧನೆಯ ಪ್ರಕಾರ ಸಾಬೀತಾದ ವಿಷಯವೆಂದರೆ ದೃಗ್ಗೋಚರ ಕಾಲದುದ್ದಕ್ಕೂ ನಿಸ್ಸಂದೇಹವಾಗಿ ಆರ್ಥಿಕತೆಯ ವಿಷಯದಲ್ಲಿ ಹಿಂದೂ ಭಾರತವು ಬೇರೆಲ್ಲ ದೇಶಗಳಿಗಿಂತ ಮುಂಚೂಣಿಯಲ್ಲಿತ್ತು.

ಗಾಢಾಂಧಕಾರದಲ್ಲಿ ಮುಳುಗಿ ಯಾರಿಂದಲೂ ಗಣನೆಗೇ ಒಳಗಾಗದ, ಎಲ್ಲಿಯೂ ಕಾಣಸಿಗದ ಪಾಶ್ಚಾತ್ಯ-ಯೂರೋಪ್-ದೇಶಗಳು ಕ್ರಿ.ಶ. ೧೫೦೦ರ ನಂತರದ ಧಾರ್ಮಿಕ ಪ್ರಸಾರದಿಂದ ಮತ್ತು ಆರ್ಥಿಕ ಜಾಗತೀಕರಣದ ಕಾರಣದಿಂದ ಜಗತ್ತನ್ನು ಶೋಷಣೆ ಮಾಡಲು ತೊಡಗಿದವು. ಮತ್ತು ಮುಂದಿನ ನೂರು ವರ್ಷಗಳಲ್ಲಿ ಭಾರತ ಮತ್ತು ಚೈನಾ ಸೇರಿದಂತೆ ಬೇರೆ ದೇಶಗಳ ಮೇಲೆ ಪ್ರಭುತ್ವವನ್ನು ಸ್ಥಾಪಿಸಿದವು. ಆದ್ದರಿಂದ, ಹಿಂದುತ್ವವು ಮೂಲಭೂತ ಹೊಂದಾಣಿಕೆ ಮತ್ತು ಭೌತಿಕ ಜೀವನದ ಪೋಷಕವಾಗಿರದ ಪಕ್ಷದಲ್ಲಿ,ಭಾರತವು ೧೭ ಶತಮಾನಗಳವರೆಗೆ ಅಂತಹ ಶ್ರೇಷ್ಠವಾದ ವಿಕಾಸವನ್ನು ಹೊಂದಿ ಜಗತ್ತಿನ ಉಳಿದೆಲ್ಲ ದೇಶಗಳಿಗಿಂತ ಹೆಚ್ಚು ಸ್ಥಿರವಾದ ಬೆಳವಣಿಗೆಯನ್ನು ಸಾಧಿಸುವುದು ಅಸಂಭವವಾಗುತ್ತಿತ್ತು. ಹಿಂದು ಭಾರತವನ್ನು ಕುರಿತಂತೆ ತಮ್ಮ ಕ್ಷುಲ್ಲಕ ದೃಷ್ಟಿಯ ಮೂಲಕ ‘ಹಿಂದೂ ಬೆಳವಣಿಗೆ ದರ’ ಎಂಬ ಹೊಸದಾದ ಅವಮಾನಕಾರಿಯಾದ ಪದಗುಚ್ಚವನ್ನೂ ಬಳಸುವ ಭಾರತದ ಸೆಕ್ಯುಲರ್ ಆರ್ಥಿಕ ಚಿಂತಕರು ಒಂದೆಡೆಯಾದರೆ, ಇನ್ನೊಂದೆಡೆ ಹಿಂದೂ ತತ್ತ ಶಾಸ್ತ್ರವು ಭೌತಿಕ ಬೆಳವಣಿಗೆಯನ್ನು ಶ್ರೀಮಂತವಾಗಿಸುವಲ್ಲಿ ಸಹಕಾರಿಯಾಗಿದೆ ಎಂಬುದು ಸತ್ಯವಲ್ಲ ಎಂಬ ಅಸಂಬದ್ಧ ಮತ್ತು ಕಲ್ಪಿತ ವಾದ ಮಂಡಿಸಿದವರು ವಿಶ್ವಬ್ಯಾಂಕ್‌ನ ಮುಖ್ಯಸ್ಥರಾಗಿದ್ದ ರಾಬರ್ಟ್ ಮೆಕ್‌ನೆಮಾರಾರವರು. ದೈವಶರಣಾಗತಿ ಮತ್ತು ಸಂತೃಪ್ತಿಯನ್ನು ಸಮೀಕರಿಸಲು ಮ್ಯಾಕ್ಸ್ ವೇಬರ್ ಪುನರುಚ್ಚರಿಸಿದ್ದೂ ಇದನ್ನೇ. ಆದರೆ ಇಂತಹ ಅವಮಾನಕಾರಿಯಾದ ಪದಗುಚ್ಚಬಳಕೆ ಅರ್ಥಹೀನವೆಂದು ಆಂಗಸ್ ಮ್ಯಾಡಿಸನ್‌ರ ಸಂಶೋಧನೆಯಿಂದ ಸಾಬೀತಾಗಿದೆ. ಹಿಂದೂ ಭಾರತದ ಅಭಿವೃದ್ಧಿಯು ಸರಿಯಾದ ರೀತಿಯಲ್ಲೇ ಮುನ್ನಡೆಯುತ್ತಿತ್ತು ಎಂಬುದಕ್ಕೆ ಮತ್ತಾವುದೇ ಪುರಾವೆಯ ಅಗತ್ಯವಿಲ್ಲ. ಭಾರತವು ಪಾಶ್ಚಾತ್ಯರ ವಸಾಹತುಶಾಹಿಗೆ ಈಡಾಗಿತ್ತು ಮತ್ತು ಅನಂತರದ ಕಾಲದಲ್ಲಿ ರಶಿಯನ್ ಸಮಾಜವಾದವನ್ನು ಅನುಸರಿಸಿ ಅಧಃಪತನಕ್ಕೀಡಾಯಿತು.

ಸಾಂದರ್ಭಿಕವಾಗಿ ಹೇಳುವುದಾದರೆ ಸಮಾಜವಾದದ ಆಧಿಪತ್ಯವನ್ನು ತೊಡೆದುಹಾಕಿದಮೇಲೆ, ಹಿಂದೂ ಭಾರತವು ಈಗೀಗ ಅಭಿವೃದ್ಧಿಪಥದಲ್ಲಿ ಚೆನ್ನಾಗಿ ಸಾಗುತ್ತಿದೆ. ಮತ್ತು ಅಭಿವೃದ್ಧಿ ಅಂಕದಲ್ಲಿ ಚೈನಾದ ನಂತರದ ಸ್ಥಾನದಲ್ಲಿದ್ದು ಮುಂದಿನ ಎರಡು ದಶಕಗಳಲ್ಲಿ ಅಮೆರಿಕಾ ಮತ್ತು ಚೈನಾದ ಜೊತೆಗೆ ವಿಶ್ವಶಕ್ತಿಯಾಗಿ ನಿಲ್ಲಲಿದೆ. ಆದ್ದರಿಂದ ೧೯ ಮತ್ತು ೨೦ನೇ ಶತಮಾನದಲ್ಲಿ ಭಾರತ ತನಗಿಂತ ಹಿಂದುಳಿದಿದ್ದ ಬೇರೆ ದೇಶಗಳಿಗಿಂತಲೂ ಅಭಿವೃದ್ಧಿಯಲ್ಲೇಕೆ ಹಿಂದುಳಿಯಿತು ಎಂಬ ಪ್ರಶ್ನೆಗೆ ತಾರ್ಕಿಕವಾಗಿ ಉತ್ತರ ಬಯಸುವುದಾದರೆ ಹೀಗೆ ಹೇಳಬಹುದು: ಹಿಂದೂ ಭಾರತದ ಅಭಿವೃದ್ಧಿಯು ಮೊದಲು ವಸಾಹತುಶಾಹಿಯಿಂದ ಮತ್ತು ತದನಂತರ ಸಮಾಜವಾದದಿಂದ ಕುಂಠಿತವಾಯಿತು. ಈ ಎರಡೂ ಮಧ್ಯಪ್ರವೇಶಗಳನ್ನು ದೂರಮಾಡಿದ ಮೇಲೆ ಅದೇ ಹಿಂದೂ ಭಾರತವು ವಿಜೃಂಭಣೆಯಿಂದ ಅಭಿವೃದ್ಧಿಯನ್ನು ಕಾಣತೊಡಗಿ ೨೦೦೪ರ ಹೊತ್ತಿಗೆ ಸುಮಾರು ಶೇಕಡಾ ೮ರ ದರದಲ್ಲಿ ಬೆಳವಣಿಗೆ ಹೊಂದತೊಡಗಿತು. ಗಾಬರಿ ಹುಟ್ಟಿಸುವ ಅಂಶವೆಂದರೆ ಸೆಕ್ಯುಲರ್ ಭಾರತದ ಬೊಬ್ಬೆಯ ಪ್ರಕಾರ ಹೆಚ್ಚಾದ ಆಂಶಿಕ ಬೆಳವಣಿಗೆ ದರದ ಕೊಡುಗೆ ಹಿಂದೂಗಳದ್ದಲ್ಲ. ಆದರೆ ಹಳೆಯ ಕಾಲದ ಕಡಮೆ ಆಂಶಿಕ ಬೆಳವಣಿಗೆಗೆ ಮಾತ್ರ ಹಿಂದೂಗಳೇ ಕಾರಣರೆಂದು ಹೇಳಲಾಗುತ್ತಿದೆ! ಇದರಿಂದ ಜಾಹೀರಾಗುವ ಅಂಶವೆಂದರೆ, ಭಾರತದ ಸ್ವಾತಂತ್ರ್ಯೋತ್ತರ ಕಾಲದ ಬೌದ್ಧಿಕ, ರಾಜಕೀಯ,ಸಾಮಾಜಿಕ ಮತ್ತು ಆರ್ಥಿಕ ಬೊಬ್ಬೆಯ ಹಿಂದಿರುವುದು ವಾಮಪಂಥೀಯ ಮತ್ತು ಸೆಕ್ಯುಲರ್ ಆರ್ಥಿಕ ಚಿಂತಕರು.

ಹಿಂದೂ ಭಾರತದ ಅಭಿವೃದ್ಧಿಯು ೧೭೦೦ ವರ್ಷಗಳ ಕಾಲ ಅನವರತವಾಗಿ ವಿಜೃಂಭಿಸಿದುದು ಹೇಗೆ?

ಹಿಂದಿನ ಕಾಲಘಟ್ಟದಲ್ಲಿ ಹಿಂದೂ ಭಾರತದ ಅಭಿವೃದ್ಧಿ ಹೆಚ್ಚಾಗಲು ಕಾರಣವೇನು? ಅಂದಿನ ಕಾಲದಲ್ಲಿ ಪಶ್ಚಿಮದೇಶಗಳು, ಅದರಲ್ಲೂ ವಿಶೇಷವಾಗಿ ಯೂರೋಪ್ ಮೊದಲಾದ ಪಾಶ್ಚಾತ್ಯ ದೇಶಗಳು ಧಾರ್ಮಿಕ ಮತ್ತು ಸೆಕ್ಯುಲರ್ ಗಲಭೆಯಿಂದ ನಶಿಸಿಹೋದವು ಎಂಬುದು ದಿಟ. ಆದರೆ ಹಿಂದೂ ಭಾರತವು ೧೪ನೇ ಶತಮಾನದವರೆಗೆ ಅಂದರೆ ಪಶ್ಚಿಮದ ಗಡಿಯ ಮೂಲಕ ತುರ್ಕರು ಮತ್ತು ಪರ್ಷಿಯನ್ನರ ಆಕ್ರಮಣದವರೆಗೂ ಶಾಂತಿಯುತವಾದ ಸಾಮಾಜಿಕ ಮತ್ತು ರಾಜಕೀಯ ಬದುಕನ್ನು ಸಾಗಿಸಿತ್ತು. ಇದರೊಂದಿಗೆ ಅದು ವ್ಯಾವಹಾರಿಕವಾದ ಸಾಮಾಜಿಕ-ಆರ್ಥಿಕ ತತ್ತ ಜ್ಞಾನವನ್ನು ಮತ್ತು ಕ್ರಿಯಾತ್ಮಕವೂ ಪ್ರಸ್ತುತವೂ ಕಾಲೋಚಿತವೂ ಆದ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿತ್ತು. ತಾತ್ತಿ ಕ ವ್ಯವಸ್ಥೆ ಮತ್ತು ಸಾಮಾಜಿಕ ಸಂಪ್ರದಾಯಗಳು ಒಗ್ಗೂಡಿ ಸಾಮಾಜಿಕ-ಆರ್ಥಿಕ ಶಾಸನವ್ಯವಸ್ಥೆಯನ್ನು ನಿರ್ಮಿಸಿದವು. ಹಾಗಾದರೆ ಅಂತಹ ವಿಶಿಷ್ಟವಾದ ಭಾರತದ ಸಾಮಾಜಿಕ-ಆರ್ಥಿಕ ತತ್ತ ಜ್ಞಾನವೆಂತಹುದು? ಈಗ ಜೀವಿಸಿರುವ ಎಲ್ಲ ಪ್ರಾಚೀನ ಸಂಪ್ರದಾಯಗಳಲ್ಲಿ, ಹಿಂದುತ್ವವೊಂದೇ ಅಂತಹ ವಿಶಿಷ್ಟವಾದ ಸಾಮಾಜಿಕ-ಆರ್ಥಿಕ ತತ್ತ ಜ್ಞಾನ ಮತ್ತು ಶಾಸನವ್ಯವಸ್ಥೆಯನ್ನು ಹೊಂದಿತ್ತು. ಆದ್ದರಿಂದಲೇ ಹಿಂದು ಭಾರತವು ಅಂತಹ ಸಾಮಾಜಿಕ-ಆರ್ಥಿಕ ಸಂಘಟನೆಗಳನ್ನು ಕಟ್ಟಿ, ಸಾಮಾಜಿಕ, ಆರ್ಥಿಕ ಹಾಗೂ ಬೌದ್ಧಿಕ ಬಂಡವಾಳವನ್ನು ಸೃಷ್ಟಿಸಿ, ಸ್ವದೇಶದ ಬಳಕೆಯನ್ನು ನಿಯಂತ್ರಿಸಿ, ರಫ್ತಿಗೂ ಆದ್ಯತೆ ನೀಡುತ್ತಿತ್ತು. ಮೊದಲಿಗೆ ನಾವು ಹಿಂದೂ ಭಾರತವು ಸ್ವದೇಶದ ಬಳಕೆಯನ್ನು ನಿಯಂತ್ರಿಸಿ ರಫ್ತಿಗೆ ಆದ್ಯತೆ ಒದಗಿಸುವ ವಿಕಾಸವ್ಯವಸ್ಥೆಯನ್ನು ಹೇಗೆ ಹೊಂದಿತ್ತು ಎಂಬುದನ್ನು ಪ್ರಮುಖವಾಗಿ ಗಮನಿಸೋಣ. ಭಾರತವು ವಿಶ್ವದಲ್ಲೇ ರಫ್ತನ್ನು ಆಧರಿಸಿದ ವಿಕಾಸವ್ಯವಸ್ಥೆಯನ್ನು ಹೊಂದಿದ್ದು ಆ ಮೂಲಕ ನಿವ್ವಳ ಲಾಭ ಗಳಿಸಿ ಸಂಪದ್ಭರಿತವಾದ ಏಕೈಕ ದೇಶ. ಭಾರತದ ಸಂತೃಪ್ತ ಸಂಸ್ಕೃತಿಯಲ್ಲಿಯೇ ಅಡಗಿರುವ ಬಳಕೆಯ ನಿಯಂತ್ರಣವ್ಯವಸ್ಥೆಯನ್ನು ಟೀಕಿಸಿರುವ ರಾಬರ್ಟ್ ಮೆಕ್‌ನೆಮಾರಾರವರು ಸ್ವದೇಶೀ ಗತಿಶೀಲತೆಗೆ ವಿರೋಧ ವ್ಯಕ್ತಪಡಿಸಲಿಲ್ಲ. ಏಕೆಂದರೆ ಅದು ರಫ್ತಿಗೆ ಪೂರಕವಾದುದು. ಚೈನಾ ಈಗ ಮಾಡುತ್ತಿರುವ ಕೆಲಸವನ್ನು ಭಾರತವು ಆ ಕಾಲದಲ್ಲೇ ನಿರ್ವಹಿಸಿತ್ತು. ಚೈನಾ ದೇಶದ ಜಿ.ಡಿ.ಪಿ.ಯ ಶೇ. ೩೨ರಷ್ಟು ಆ ದೇಶದೊಳಗೆ ಬಳಕೆಯಾಗುತ್ತಿತ್ತು. ಜಗತ್ತಿನಲ್ಲಿಯೇ ಇದು ಅತ್ಯಂತ ಕಡಮೆ ದರ. ಆದರೂ ಚೈನಾದ ಕಾರ್ಯವಂತಿಕೆ ಜಗತ್ಪ್ರಸಿದ್ಧ ಹಾಗೂ ದಕ್ಷ.

ರಫ್ತನ್ನು ಆಧರಿಸಿ ವಿಕಾಸವನ್ನು ಹೊಂದಿದ ಭಾರತದ ಶ್ರೇಷ್ಠ ವಿಕಾಸಗಾಥೆ ಆರಂಭವಾಗುವುದು ಪ್ರಾಯಶಃ ಮೌರ್ಯ ಸಾಮ್ರಾಜ್ಯದಿಂದ(ಕ್ರಿ.ಪೂ. ೩೨೫ರಿಂದ ಕ್ರಿ.ಪೂ. ೧೮೫). ಅದು ಎಲ್ಲ ದೇಶಗಳಿಗಿಂತ ಮುಂದಿತ್ತು.‘ಭಾರತದಲ್ಲಿ ಮತ ಮತ್ತು ಆರ್ಥಿಕ ಚಟುವಟಿಕೆ; ಚಾರಿತ್ರಿಕ ಪರಿಪ್ರೇಕ್ಷ್ಯ’ ಎಂಬ ಸಂಶೋಧನ ಲೇಖನದಲ್ಲಿ ರಾಜೀವ್ ದಹೇಜಿಯಾ ಮತ್ತು ವಿವೇಕ್ ದಹೇಜಿಯಾರವರು ಹೀಗೆ ಹೇಳುತ್ತಾರೆ: ‘ಮೌರ್ಯ ಸಾಮ್ರಾಜ್ಯದ ಸಂಪತ್ತಿಗೆ ಕಾರಣ ಅದರ ಶ್ರೀಮಂತ ಭೂಮಿ ಮತ್ತು ಪೂರ್ವದಲ್ಲಿ ಚೈನಾ ಹಾಗೂ ಸುಮಾತ್ರಾದ ಜೊತೆಗೆ,ದಕ್ಷಿಣದಲ್ಲಿ ಸಿಲೋನ್‌ನ ಜೊತೆಗೆ, ಪಶ್ಚಿಮದಲ್ಲಿ ಪರ್ಷಿಯಾ ಮತ್ತು ಮೆಡಿಟರೇನಿಯನ್‌ಗಳ ಜೊತೆಗಿನ ಸಮುದ್ರದ ವಾಣಿಜ್ಯ.’ ಯೂರೋಪ್ ಮತ್ತು ಚೈನಾದವರೆಗಿನ ರೇಶಿಮೆ ವಾಣಿಜ್ಯದ ಹಾದಿಯು ಭಾರತದ ಮುಖಾಂತರ ಹಾದುಹೋಗುವ ಮೂಲಕ ಭಾರತ ಬೃಹತ್ ವಾಣಿಜ್ಯದ ಹಾದಿಯ ಮಧ್ಯವರ್ತಿಯಾಯಿತು. ಅದಕ್ಕೆ ಕಾರಣ ಮೌರ್ಯರ ಸುಸಜ್ಜಿತ ವಾಣಿಜ್ಯಿಕ ನೌಕಾಸೇನೆ ಮತ್ತು ಆ ಸಾಮ್ರಾಜ್ಯದ ಎಲ್ಲ ನೌಕಾನೆಲೆಗಳನ್ನೂ ಸೇರುವ ಸುವ್ಯವಸ್ಥಿತ ರಾಜಮಾರ್ಗಗಳು. ಈ ವಾಣಿಜ್ಯ ರಾಜಮಾರ್ಗಗಳ ಇಕ್ಕೆಲಗಳಲ್ಲಿ ಮಾರುಕಟ್ಟೆಗಳು ಅಥವಾ ವಿವಿಧ ನಾಗರಿಕ ಪ್ರದೇಶಗಳಿಂದ ಒಟ್ಟುಸೇರುವ ವಾಣಿಜ್ಯ ಸಾಮಗ್ರಿಗಳ ಕೇಂದ್ರಗಳಿದ್ದವು. ಅಂತಹ ವಾಣಿಜ್ಯ ಸಾಮಗ್ರಿಗಳೆಂದರೆ ರೇಶಿಮೆ, ಉಡುಪು, ರತ್ನಗಂಬಳಿ, ಸುವಾಸನಾ ದ್ರವ್ಯಗಳು, ಅಮೂಲ್ಯ ಕಲ್ಲುಗಳು, ದಂತ ಮತ್ತು ಚಿನ್ನ. ಆಂತರಿಕ ಮಾರ್ಗವ್ಯವಸ್ಥೆಯು ಹೆದ್ದಾರಿಗಳಿಂದ ಕೂಡಿ ಇಡೀ ಸಾಮ್ರಾಜ್ಯವು ವಿದೇಶೀ ವಾಣಿಜ್ಯದಲ್ಲಿ ಭಾಗಿಯಾಗುವಂತಾಗಿ ಅದರಿಂದ ಲಾಭಾನ್ವಿತವಾಗುತ್ತಿತ್ತು. ಈಗಿನ ಕಾಲದ ನವ-ಔದ್ಯೋಗಿಕ ದೇಶಗಳಂತೆ (‘ನ್ಯೂಲಿ ಇಂಡಸ್ಟ್ರಿಯಲೈಸ್ಡ್ ಕಂಟ್ರೀಸ್’ -ಎನ್.ಐ.ಸಿ.ಗಳಂತೆ) ಮೌರ್ಯ ಸಾಮ್ರಾಜ್ಯಕ್ಕೆ ರಫ್ತಿನಿಂದ ಸಮೃದ್ಧ ಬೆಳವಣಿಗೆಯನ್ನು ಸಾಧಿಸಿದ ಸಂತೃಪ್ತಿಯಿತ್ತು. ಭಾರತದ ಸಮೃದ್ಧ ರಫ್ತುವಾಣಿಜ್ಯಕ್ಕೆ ಪುರಾವೆ ದೊರಕುವುದು ರೋಮ್‌ನ ರಾಷ್ಟ್ರೀಯ ಪರಿಷತ್ತಿನ (ಸೆನೆಟ್) ದಾಖಲೆಗಳಲ್ಲಿ. ಅದರಲ್ಲಿರುವುದು ಪ್ಲೈನಿ ಮತ್ತು ರಾಜ ಟೈಬೀರಿಯಸ್‌ನ ನಡುವೆ ನಡೆದ,ಭಾರತದಿಂದ ರೋಮ್ ದೇಶಕ್ಕೆ ಆಮದು ಮಾಡಿಕೊಂಡ ಪದಾರ್ಥಗಳಿಗೆ ಪ್ರತಿಯಾಗಿ ನೀಡಬೇಕಾದ ಹಣದ ಬಗೆಗಿನ ದೂರಿನ ಸಂವಾದ. ಆದ್ದರಿಂದ, ತೃಪ್ತ ಸಂಸ್ಕೃತಿಯು ಸ್ವದೇಶೀ ಬಳಕೆಯನ್ನು ಕಡಮೆ ಮಾಡಿತು. ಆದರೆ, ಅದರಿಂದ ಉತ್ಪಾದನೆ ಮತ್ತು ಸಂಪತ್ತಿನ ಅನ್ವೇಷಣೆಯೇನೂ ಕಡಮೆಯಾಗಲಿಲ್ಲ. ಭಾರತದ ಪೂಜಾಪದ್ಧತಿಯಲ್ಲಿ ಸಂಪತ್ತನ್ನು ‘ಲಕ್ಷ್ಮೀದೇವಿ’ಯೆಂದು ಪೂಜಿಸುವುದು ಇದಕ್ಕೆ ದೊರೆಯುವ ಸೂಕ್ತ ಪುರಾವೆ. ವಾಸ್ತವವಾಗಿ ಬಳಕೆಯ ನಿಯಂತ್ರಣವು ಸ್ವದೇಶೀ ಬಳಕೆಯ ತೂಕವನ್ನು ಸಮಗೊಳಿಸಿ, ಮುಂಬರುವ ಕಾಲದ ಸ್ವದೇಶೀ ಕೂಡಿಡುವಿಕೆಗೆ ಕಾರಣವಾಯಿತು. ಅದು ಸ್ವದೇಶೀ ಪುರೋವೃದ್ಧಿಗೆ ಇಂಬು ನೀಡಲಿಲ್ಲ. ಅದಕ್ಕೆ ಕಾರಣ ಸಂಪತ್ತಿನ ದೈವೀ ಆರಾಧನೆ ಮತ್ತು ಅದರ ತಾತ್ತಿ ಕ ಸೃಷ್ಟಿಯ ಅಭ್ಯಾಸ. ಇದೇ ಕಾರಣದಿಂದ ಅದ್ಭುತವಾದ ರಾಷ್ಟ್ರೀಯ ಬಂಡವಾಳ ನಿರ್ಮಾಣವಾಯಿತು. ಅದು ರಫ್ತು-ಆಧಾರಿತ ವಿಕಾಸಕ್ಕೆ ನಾಂದಿಹಾಡಿತು.

ಈಗ ನಾವು ತತ್ತ ಜ್ಞಾನದ ಕಡೆ ಹೊರಳೋಣ. ಈ ತತ್ತ ಜ್ಞಾನವೇ ಹಿಂದೂ ಭಾರತಕ್ಕೆ ಸಾಮಾಜಿಕ-ಆರ್ಥಿಕ ಶಾಸನ ಪ್ರಾರೂಪವನ್ನು ನೀಡಿ ಸ್ವದೇಶೀ ಬಳಕೆಯನ್ನು ನಿಯಂತ್ರಿಸಿ ರಫ್ತಿಗೆ ಹೆಚ್ಚು ಒತ್ತು ನೀಡಿದ್ದು. ಯಾವ ತಾತ್ತಿ ಕ ಪದ್ಧತಿಯ ಆಚರಣೆಯಿಂದ (ಜೀವನ ಪದ್ಧತಿಯ ಕಾರಣದಿಂದ) ಹಿಂದೂಗಳು ಯೋಗ್ಯ ಜೀವನವನ್ನು ರೂಢಿಸಿಕೊಂಡರೋ, ಯಾವುದರ ಕಾರಣದಿಂದ ಚೈನಾಕ್ಕೂ ಭಾರತವನ್ನು ಮೀರಿಸಲು ಸಾಧ್ಯವಾಗದಾಗಿತ್ತೋ, ಅದಕ್ಕೆಲ್ಲ ಕಾರಣವಾದುದು ಪ್ರಾಚೀನ ಭಾರತೀಯ ಪುರುಷಾರ್ಥದ ಕಲ್ಪನೆ. ಪುರುಷಾರ್ಥದ ಕಲ್ಪನೆಯ ಪ್ರಕಾರ ‘ಅರ್ಥ’ (ಭೌತಿಕ ವಸ್ತುಗಳು/ಹಣ) ಮತ್ತು ‘ಕಾಮ’ಗಳು (ಭೌತಿಕ ವಸ್ತುಗಳಿಂದ ಉಂಟಾದ ಪ್ರಾಪಂಚಿಕ ಸುಖ) ‘ಧರ್ಮ’ದ ನಿಯಮಕ್ಕೆ ಒಳಪಡುತ್ತವೆ. ಇಂತಹ ತಳಹದಿಯಿಂದ ಕೂಡಿದ ಅನುಶಾಸಿತ ಮತ್ತು ಪ್ರಾಮಾಣಿಕ ಜೀವನವು ‘ಮೋಕ್ಷ’ಕ್ಕೆ (ದೈವ-ಸಾಕ್ಷಾತ್ಕಾರಕ್ಕೆ) ದಾರಿಮಾಡುವುದು. ಆದ್ದರಿಂದ ಧರ್ಮದ ಕರ್ತವ್ಯದ ಪರಿಕಲ್ಪನೆಯು ಭೌತಿಕ ಸುಖದ ಮೇಲೆ ಆಧಾರಿತವಾಗಿದ್ದು ಸಂಪತ್ತಿನ ಉತ್ಪತ್ತಿ, ಸ್ಥಿತಿ, ಉಪಯೋಗ ಮತ್ತು ಖರ್ಚಿಗೂ ಕಾರಣವಾಗುತ್ತಿತ್ತು. ಆದ್ದರಿಂದ ಕರ್ತವ್ಯದ ಸಾರ್ವತ್ರಿಕ ಪ್ರಜ್ಞೆಯು ಹಕ್ಕಿಗಿಂತ ಪೂರ್ತಿಯಾಗಿ ಬೇರೆಯಾದುದು. ಈ ದಿನಗಳ ಆರ್ಥಿಕ ಪ್ರಾರೂಪದಲ್ಲಿರುವಂತೆ ಸಂಪತ್ತು ಅತ್ಯಂತ ವೈಯಕ್ತಿಕವಾದುದಾಗಿರಲಿಲ್ಲ. ಸಂಪತ್ತಿನೆಡೆಗಿನ ಕರ್ತವ್ಯವು ಸಂಪತ್ತಿನ ಸಂಚಯಕ್ಕೆ ಒತ್ತುನೀಡುವ ಮೂಲಕ ಭಾರತೀಯ ಸಂಚಯಾಭ್ಯಾಸವನ್ನು ವೈಯಕ್ತಿಕವಾಗಿಸದೇ ರಾಜವಂಶೀಯಗೊಳಿಸಿತು. ಅದರರ್ಥ ಯಾವುದೇ ಸ್ವತ್ತು ರಾಜನ ಸ್ವಂತಕ್ಕೇ ಸೇರಿದ್ದು ಅಲ್ಲ – ಎಂಬ ಅಂಶ ದೃಢವಾಗಿತ್ತು. ಪ್ರಮುಖ ಉಪನಿಷತ್ತಾದ ‘ಈಶಾವಾಸ್ಯ’ದಲ್ಲಿ, ಸಂಪಾದಿಸಿದ ಸಂಪತ್ತಿನ ಹೆಚ್ಚು ಭಾಗ ಸಮಾಜಕ್ಕೆ, ಮತ್ತು ಅದರ ಸ್ವಲ್ಪಭಾಗವನ್ನು ಮಾತ್ರ ಸ್ವಂತ ಬಳಕೆಗೆ ವಿನಿಯೋಗಿಸಬೇಕೆಂಬ ಆಶಯವಿದೆ. ಇತ್ತೀಚೆಗೂ ಭಾರತದ ಬಹುತೇಕ ಕುಟುಂಬಗಳ ಜೀವನಪದ್ಧತಿಯು ಪುರುಷಾರ್ಥದ ಕಲ್ಪನೆಯಿಂದ ಮಿಳಿತವಾಗಿದ್ದರಿಂದಲೇ ಗೃಹಬಳಕೆಯ ಸಂಪತ್ತಿನ ಸಂಚಯ ಅತ್ಯಂತ ಹೆಚ್ಚು ಅಂದರೆ ಜಿ.ಡಿ.ಪಿ.ಯ ೩೫ಶೇಕಡ. ಬೆಳೆಯುತ್ತಿರುವ ಕೌಟುಂಬಿಕ ಸಂಚಯದ ಕಾರಣದಿಂದ ‘ಗೋಲ್ಡ್‌ಮನ್’ ತನ್ನ ೧೮೭ನೇ ಸಂಚಿಕೆಯಲ್ಲಿ ಭಾರತದ ಅಡಿಗಟ್ಟಿನ ಬಗೆಗೆ-ಭಾರತದ ಅಡಿಗಟ್ಟನ್ನು ದೃಢಗೊಳಿಸಲು ವಿದೇಶೀ ಬಂಡವಾಳಕ್ಕಿಂತ ಭಾರತದ ಕೌಟುಂಬಿಕ ಸಂಚಯವೇ ಹೆಚ್ಚು ಉಪಯುಕ್ತ ಎಂಬುದನ್ನು ಗಮನಿಸಿ ಹೇಳಿದೆ.

ಪೋಲು ಮಾಡುವುದು ಅಥವಾ ಖರ್ಚು ಮಾಡುವುದಕ್ಕಿಂತ ಸಂಪತ್ತಿನ ಸಂಚಯಕ್ಕೆ ಪ್ರಾಧಾನ್ಯ ನೀಡಲಾಗಿದೆ. ಏಕೆಂದರೆ ಹಿಂದೂಗಳು, ಜೀವನದ ಚರಮ ಉದ್ದೇಶ ಭಕ್ತಿ, ಜ್ಞಾನ ಅಥವಾ ಕರ್ಮಮಾರ್ಗದಿಂದ ದೈವ ಸಾಕ್ಷಾತ್ಕಾರವೆಂದೇ ನಂಬಿದ್ದಾರೆ. ಒಂದೆಡೆ ಪುರುಷಾರ್ಥದ ಕಲ್ಪನೆಯು ಸಂಪತ್ತನ್ನು ಹೊಂದುವುದನ್ನು ಸ್ವಂತ ಕರ್ತವ್ಯವೆಂದು ತಿಳಿಸಿದರೆ, ಇನ್ನೊಂದೆಡೆ ಸಂಪಾದಿಸಿದ ಸಂಪತ್ತಿನಿಂದ ದೂರವಿರುವ ಅಂತಹ ವೈರಾಗ್ಯಭಾವನೆಯನ್ನೂ ಉಂಟುಮಾಡುತ್ತದೆ. ಆದ್ದರಿಂದ ಸಂಪತ್ತನ್ನು ಗಳಿಸುವುದೂ ಅದನ್ನು ತನ್ನದಲ್ಲವೆಂದು ಭಾವಿಸುವುದೂ ಪರಸ್ಪರ ಪೂರಕವಾಗಿಯೇ ಇತ್ತು. ಅದರಿಂದ ಸಂಪತ್ತು ಸೃಷ್ಟಿಯಾಗಿ ದ್ವಿಗುಣ, ತ್ರಿಗುಣವಾಯಿತೇ ವಿನಾ ವ್ಯರ್ಥವಾಗಿ ಪೋಲಾಗಲಿಲ್ಲ. ಸಮಸ್ತ ಸೃಷ್ಟಿಯೂ ಜಾತ್ಯತೀತ ಎಂಬ ಅಬ್ರಹಾಮೀ ಮತದೃಷ್ಟಿಯ ಪ್ರಕಾರ ಪ್ರಕೃತಿಯು ಮನುಷ್ಯನಿಂದ ಹಾನಿಗೀಡಾಗುವಂತಾದರೆ, ಶ್ರೇಷ್ಠ ಚಿಂತನೆಯನ್ನು ಹೊಂದಿದ ಹಿಂದೂ ಭಾರತವು ಪರಿಸರವನ್ನು ಕಾಪಾಡಿತು ಮತ್ತು ಸೈದ್ಧಾಂತಿಕವಾಗಿ ಸಮಸ್ತ ಸೃಷ್ಟಿಯನ್ನು ಪೂಜ್ಯವೆಂದು ಭಾವಿಸುವ ಮೂಲಕ ಪ್ರಕೃತಿಯನ್ನು ಮನುಷ್ಯರಿಂದ ರಕ್ಷಿತವಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಸಂಪತ್ತಿನ ಸೃಷ್ಟಿ ಉಪಭೋಗಕ್ಕೆ ಮಾತ್ರ ಸೀಮಿತ ಮತ್ತು ಅದುವೇ ಬೆಳವಣಿಗೆಯ ಸಾರಥಿ ಎಂದು ಭಾವಿಸಲಾಯಿತು. ಆಧುನಿಕ ಬಂಡವಾಳಶಾಹೀ ಪ್ರಾರೂಪಕ್ಕಿಂತ ಇದು ನೇರವಾದ ವೈದೃಶ್ಯವುಳ್ಳದ್ದು.

ಈ ತಾತ್ತಿ ಕ ಪ್ರಾರೂಪವನ್ನು ಅನುಷ್ಠಾನಕ್ಕೆ ತರಲು ಸಕ್ರಿಯ ಭೌತಿಕ ಜೀವನದಿಂದ ದೈವಸಾಕ್ಷಾತ್ಕಾರವಾಗುವ ಹಂತದ ಮಧ್ಯೆ ವಾನಪ್ರಸ್ಥ(ಏಕಾಂತವಾಸದ ನಿವೃತ್ತ ಜೀವನ)ವೆಂಬ ಸಂಕ್ರಮಣ ಬಿಂದುವಿನ ಕಲ್ಪನೆಯನ್ನೂ ಮಾಡಲಾಯಿತು. ಆದ್ದರಿಂದ, ಪುರುಷಾರ್ಥದ ತಾತ್ತಿ ಕ ಕಲ್ಪನೆಯು ಆಧುನಿಕ ಮಾದರಿಯಂತೆ ಸಂಪತ್ತನ್ನು ಹಕ್ಕೆಂದು ಹೇಳದೆಯೇ, ಕರ್ತವ್ಯವೆಂದು ತಿಳಿಸುವುದೇ ಹಿಂದೂ ಭಾರತದ ಭೌತಿಕ ಶಾಸನದ ಮೂಲ ಹಾಗೂ ಪ್ರಾಥಮಿಕ ಮಾದರಿಯಾಗಿತ್ತು. ಒಂದೆಡೆ ಕರ್ತವ್ಯದ ಕಲ್ಪನೆಯು ಸ್ವಯಂಪ್ರೇರಿತವಾದ ದೃಢವಾದ ಸಾಮಾಜಿಕ ಕಾರ್ಯವಿಧಾನದಿಂದ ಕೂಡಿದ್ದರೆ, ಇನ್ನೊಂದೆಡೆ ಹಕ್ಕಿನ ಕಲ್ಪನೆಯು ಶಾಸನಿಕವಾಗಿದ್ದು ಒತ್ತಾಯಪೂರ್ವಕವಾದ ಕಠಿಣ ಕಾರ್ಯವಿಧಾನದಿಂದ ಕೂಡಿದ್ದಾಗಿದೆ. ಆಧುನಿಕ ಪರಿಪ್ರೇಕ್ಷ್ಯದಿಂದ ಹೇಳುವುದಾದರೆ, ಪುರುಷಾರ್ಥದ ಕಲ್ಪನೆಯು ಸ್ವಯಂಪ್ರೇರಿತವಾದ ಮತ್ತು ಪ್ರಮಾಣಬದ್ಧವಾದ ಸಾಮಾಜಿಕ ವ್ಯವಸ್ಥೆಯ ಸೃಷ್ಟಿಗೆ ಹಾಗೂ ಕಾರ್ಯಶೀಲ ಮತ್ತು ಸಾಂಸ್ಕೃತಿಕ ವ್ಯಾಖ್ಯಾನದ ಶಿಸ್ತಿನ ನಿಯಮಾವಳಿಯಿಂದ ಉಂಟಾದ ನಿಯಂತ್ರಿತ ಅರ್ಥಶಾಸ್ತ್ರಕ್ಕೆ ಕಾರಣವಾಯಿತು. ಅದರಿಂದ ಅಂತಿಮವಾಗಿ ಸಮತೋಲಿತವಾದ ಬೃಹದರ್ಥಶಾಸ್ತ್ರ ವ್ಯವಸ್ಥೆಗೆ ನಾಂದಿಯಾಯಿತು.

ಸಂಪತ್ತಿನೆಡೆಗಿನ ಕರ್ತವ್ಯಕ್ಕೂ, ಹಕ್ಕಿಗೂ ದಾರ್ಷ್ಟ್ಯಾಂತಿಕ ವ್ಯತ್ಯಾಸವಿದೆ. ಈ ವ್ಯತ್ಯಾಸವು ಜೀವನದ ಸಾಮಾಜಿಕ, ಆರ್ಥಿಕ ಮತ್ತು ಪಾರಿಸರಿಕ ಅಂಶಗಳ ಮೇಲೆ ದೊಡ್ಡ ಪ್ರಭಾವವನ್ನು ಬೀರಿದೆ. ಕರ್ತವ್ಯಪ್ರಜ್ಞೆಯು ಪರಿಸರದೊಂದಿಗೆ ಸಮನ್ವಯ ಸಾಧಿಸುವಂತದ್ದಾದರೆ, ಹಕ್ಕಿನ ಚಿಂತನೆಯು ಮೂಲತಃ ಸ್ವಾರ್ಥದಿಂದ ಕೂಡಿದ್ದಾಗಿದೆ. ಕರ್ತವ್ಯಪ್ರಜ್ಞೆಗೆ ಬಲನೀಡುವ ಮೂಲಕ ಹಿಂದುತ್ವವು ಮನುಷ್ಯನ ಸ್ವಭಾವವನ್ನು ನಿಯಂತ್ರಿಸಿತು, ವಿಶೇಷವಾಗಿ ಸಂಪತ್ತಿನ ವಿಷಯದಲ್ಲಿ.

ಇದೇ ಕಾರಣದಿಂದ ಬೇರೆಲ್ಲ ಸಂಸ್ಕೃತಿಗಳಿಗಿಂತ ಹಿಂದುತ್ವವು ವಿಶೇಷ ಆರ್ಥಿಕ ಬೆಳವಣಿಗೆಯೆಡೆಗೆ ತನ್ನ ಪ್ರವೃತ್ತಿಯನ್ನು ಪ್ರದರ್ಶಿಸಿ ಮತ್ತದನ್ನು ಏಕರೂಪವಾಗಿ ಸಾಧಿಸುತ್ತಾ ಬಂದಿದೆ. ಆದರೆ ಹಿಂದೂ ಭಾರತದ ಈ ಹಿಂದಿನ ನಿರ್ವಹಣೆಯು ಇನ್ನು ಮುಂದೆಯೂ ಮುಂದುವರಿಯುವುದೆಂದು ಹೇಗೆ ನಿಶ್ಚಯವಾಗಿ ಹೇಳುವುದು?ಏಕೆಂದರೆ ಅಷ್ಟು ಬೆಳವಣಿಗೆಯನ್ನು ಹೊಂದಿದ್ದ ಭಾರತವು ೧೮ ಮತ್ತು ೧೯ನೇ ಶತಮಾನಗಳಲ್ಲಿ ಕುಸಿದುದೇಕೆ? ಜಗತ್ತು ತೀವ್ರವಾಗಿ ಬದಲಾಗಿದೆ. ಈ ಮೂರು ಶತಮಾನಗಳಲ್ಲಿ ಯಾವುದೇ ದೇಶದ ಈ ಹಿಂದಿನ ವಿಕಾಸವೇ ಬೇರೆಲ್ಲದಕ್ಕಿಂತ ಮುಂದಿನ ಭವಿಷ್ಯತ್ತಿಗೆ ದೊಡ್ಡ ಆಶಾಕಿರಣ. ಚಿಂತನೀಯ ಅಂಶವೆಂದರೆ ಹಿಂದೂ ಭಾರತವು ತನ್ನ ಭೂತಕಾಲವನ್ನು ಭವಿಷ್ಯತ್ತಿನಲ್ಲಿ ಮರುಕಳಿಸಬಲ್ಲುದೇ? – ಎಂಬುದು.

ಪಾರಂಪರಿಕ ಹಿಂದುತ್ವವು ಆಧುನಿಕ ಅರ್ಥಶಾಸ್ತ್ರಕ್ಕೆ ಹೊಂದುವುದೇ?

ಈಗಿನ ಕಾಲದ ಪಶ್ಚಿಮಪ್ರೇರಿತವಾದ ಆಧುನಿಕತೆಯ ಬೀಜಾವಾಪವಾಗಿದ್ದು, ಯೂರೋಪ್‌ನ ಪುನರುತ್ಥಾನದ ಆಂದೋಲನದ ಕಾರಣದಿಂದ. ಇಂತಹ ಆಧುನಿಕತೆಯ ಪರಿಣಾಮವು ವಾಣಿಜ್ಯದ ಮೇಲಷ್ಟೇ ಅಲ್ಲದೇ ಭೂ-ರಾಜಕೀಯ ಮತ್ತು ಸೇನೆಯಲ್ಲಿಯೂ ಆಯಿತು. ವೈಶ್ವಿಕ ತುಲನೆಯ ಪಾರಂಪರಿಕ ರೀತಿಯು ಒಮ್ಮೆಗೇ ಬದಲಾಯಿತು ಮತ್ತು ಪಶ್ಚಿಮಪ್ರೇರಿತವಾದ ಆಧುನಿಕತೆಯು ತನ್ನ ಚಿಂತನೆ, ಜೀವನಪದ್ಧತಿ ಮತ್ತು ಶಿಕ್ಷಣಸಂಸ್ಥೆಗಳ ಮೂಲಕ ವಿಶ್ವವನ್ನು ಏಕರೂಪಗೊಳಿಸಲು ಹೆಣಗಿತು. ಅಲ್ಲಿನ ಲಂಗುಲಗಾಮಿಲ್ಲದ ವ್ಯಕ್ತಿಸ್ವಾತಂತ್ರ್ಯ ಮತ್ತು ವೈಯಕ್ತಿಕ ಹಕ್ಕುಪ್ರಜ್ಞೆಯು ಭೌತಿಕ ಜಗತ್ತಿಗೆ ಅಸೀಮ ಶಕ್ತಿಯನ್ನು ವಿಮುಕ್ತಗೊಳಿಸಿತು. ಈ ಕಾರಣದಿಂದ ವಿಭಿನ್ನವಾದ ಜೀವನಪದ್ಧತಿಗಳು ಮತ್ತು ಆರ್ಥಿಕತೆಗಳು ಹುಟ್ಟಿಕೊಂಡವು. ಅದರಿಂದ ಸಾಂಪ್ರದಾಯಿಕ ಬಂಡವಾಳಶಾಹಿ ಅಥವಾ ಅದರ ಪರಿಣಾಮ, ಮಾರ್ಕ್ಸಿಸಂ ಅಥವಾ ನವಸಂಪ್ರದಾಯ ಅಥವಾ ಆಧುನಿಕ ಅರ್ಥಶಾಸ್ತ್ರಗಳು ಹುಟ್ಟಿದವು. ಮತ್ತು ಈ ಸರಪಳಿಯು ಮುಂದುವರಿದು ಕಾಲಕಾಲಕ್ಕೆ ಅನೇಕ ಸವಾಲುಗಳನ್ನು ಒಡ್ಡುತ್ತಿವೆ. ಭೌತಿಕ ಜೀವನಪದ್ಧತಿಯು ತೀವ್ರವಾದಂತೆಲ್ಲ ಆಧುನಿಕ ಮತ್ತು ಸಾಂಪ್ರದಾಯಿಕ ರಾಷ್ಟ್ರಗಳೆರಡಕ್ಕೂ ಆರ್ಥಿಕ ಸವಾಲುಗಳು ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿವೆ. ವಾಸ್ತವವಾಗಿ, ಪಶ್ಚಿಮದ ಅಭಿಪ್ರಾಯದ ಪ್ರಕಾರ ಆಧುನಿಕೀಕರಣವೊಂದೇ ಹಿಂದುಳಿದ ರಾಷ್ಟ್ರಗಳ ಈ ಆರ್ಥಿಕ ಸಮಸ್ಯೆಗಳಿಗೆ ಉತ್ತರ. ಮತ್ತದರ ಮೂಲ ಸಿದ್ಧಾಂತ, ಆಧುನಿಕೀಕರಣಗೊಳ್ಳದ ಸಮಾಜಗಳು ಆಧುನಿಕೀಕರಣಗೊಳ್ಳದಿದ್ದರೆ ಬೆಳವಣಿಗೆ ಹೊಂದಲಾರವು. ಪಶ್ಚಿಮದ ಆಧುನಿಕೀಕರಣದ ಕಲ್ಪನೆಯ ಪ್ರಕಾರ ಭಾರತವಿನ್ನೂ ಆಧುನಿಕೀಕರಣಗೊಂಡಿಲ್ಲ, ಅಥವಾ ಪಶ್ಚಿಮದ ಕಲ್ಪನೆಯ ಪ್ರಕಾರ ಆಧುನಿಕೀಕರಣಗೊಳ್ಳದಿರಬಹುದು. ಆದರೆ, ಅದು ಎಲ್ಲ ಆಧುನಿಕ ಆರ್ಥಿಕ ಬೆಳವಣಿಗೆಯ ಸವಾಲುಗಳನ್ನು ಎದುರಿಸುತ್ತದೆ. ಸಾಮಾನ್ಯದೃಷ್ಟಿಯಿಂದ ಹೇಳುವುದಾದರೆ ಜಪಾನ್ ಮತ್ತು ಚೈನಾವನ್ನೂ ಸೇರಿಸಿ ಏಷಿಯನ್ ರಾಷ್ಟ್ರಗಳು ಪಶ್ಚಿಮದ ಕಲ್ಪನೆಗಿಂತ ಭಿನ್ನವಾಗಿ ತಮ್ಮದೇ ರೀತಿಯಲ್ಲಿ ಆಧುನಿಕೀಕರಣಗೊಳ್ಳುತ್ತಿವೆ; ಅದರಂತೆ ಭಾರತವೂ ಕೂಡ ಪಶ್ಚಿಮದ ಕಲ್ಪನೆಗೆ ಮೊರೆಹೋಗದೆ ತನ್ನದೇ ರೀತಿಯಲ್ಲಿ ಆಧುನಿಕೀಕರಣಗೊಳ್ಳುತ್ತಿದೆ. ಆದರೆ ಆಧುನಿಕ ಆರ್ಥಿಕ ಸವಾಲುಗಳು ಮಾತ್ರ ರಾಷ್ಟ್ರೀಯ ಮತ್ತು ವೈಶ್ವಿಕ.

ಆದ್ದರಿಂದ ಈಗ ಮೇಲೇಳುವ ಪ್ರಶ್ನೆಯೆಂದರೆ: ಹಿಂದುತ್ವವು ಆಧುನಿಕ ಆರ್ಥಿಕ ಬೆಳವಣಿಗೆಯ ಸವಾಲುಗಳಿಗೆ ಉತ್ತರ ನೀಡಬಲ್ಲದೇ? ಇನ್ನೂ ಮುಂದುವರಿದು ಈ ಪ್ರಶ್ನೆಗಳು ಹೆಚ್ಚಾಗುತ್ತವೆ ಮತ್ತು ಒಗಟಾಗುತ್ತವೆ,ರಾಷ್ಟ್ರೀಯ ಮತ್ತು ವೈಶ್ವಿಕಸ್ತರದಲ್ಲಿ. ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ಮೊದಲು ಹಿಂದುತ್ವ ಎಂದರೇನೆಂದು ತಿಳಿಯಬೇಕು. ತದನಂತರ ಅದು ಆಧುನಿಕ ಆರ್ಥಿಕ ಪರಿಕಲ್ಪನೆ ಮತ್ತು ಸಂಸ್ಥೆಗಳಿಗೆ ಹೊಂದುವುದೋ ಇಲ್ಲವೋ ಎಂಬುದನ್ನು ತಿಳಿಯಬಹುದು. ಹಿಂದುತ್ವದ ಪರಿಕಲ್ಪನೆಯು ಆಧುನಿಕ ಜಗತ್ತಿಗೆ ಹೊಂದಿಕೆಯಾಗದ ಹೊರತು ಮತ್ತು ಅದರ ವಿಕಾಸಕ್ಕೆ ಕೊಡುಗೆ ನೀಡದ ಹೊರತು, ಮತ್ತು ಬೆಳವಣಿಗೆಗೆ ಸಹಕಾರಿಯಾಗದ ಹೊರತು, ಭೌತಿಕ ಜಗತ್ತಿಗೆ ಅದರ ಸಾಂದರ್ಭಿಕತೆ ಅರಿವಾಗುವುದಿಲ್ಲ. ಹೀಗಾಗದಿದ್ದಲ್ಲಿ ಇಸ್ಲಾಮೀ ದೇವತಾಶಾಸ್ತ್ರಜ್ಞರು ಮತ್ತು ಉಗ್ರವಾದಿಗಳಿಗಾದಂತೆ ಆಧುನಿಕತೆಯ ವಿರೋಧಿಯೆಂಬ ಹಣೆಪಟ್ಟಿ ಬೀಳಬಹುದು. ಈ ಆಧುನಿಕತೆಯಲ್ಲಿ ಆಧುನಿಕ ಆರ್ಥಿಕ ಬೆಳವಣಿಗೆ ಮತ್ತು ಆಧುನಿಕ ಆರ್ಥಿಕ ಸವಾಲುಗಳು ಕೂಡಾ ಸೇರಿವೆ. ಈ ಸಂವಾದವು ಮುಂದುವರಿದು ಆಧುನಿಕ ಸಂದರ್ಭದಲ್ಲಿ, ವಿಶೇಷವಾಗಿ ಬೇರೆ ಮತಗಳಿಗೆ ಸಂಬದ್ಧವಾಗಿ ಹಿಂದುತ್ವವೆಂದರೇನೆಂಬ ಪ್ರತ್ಯೇಕ ಸಂವಾದಕ್ಕೆ ಎಡೆಮಾಡಿಕೊಟ್ಟಿದೆ.

ವಿಶ್ವ ವಾಣಿಜ್ಯಕೇಂದ್ರ ಹೇಳುವಂತೆ ಹಿಂದುತ್ವವೊಂದೇ ಮುಕ್ತ ವೈಶ್ವಿಕ ವಾಣಿಜ್ಯಕ್ಕೆ ಭರವಸೆ ನೀಡುತ್ತದೆ.

ಇಲ್ಲಿಯವರೆಗಿನ ಸಂವಾದವು ಹಿಂದುತ್ವದ ನೈಜ ಸಾಮರ್ಥ್ಯವನ್ನು ಪ್ರಕಾಶಪಡಿಸಿದೆ. ಅದು, ಪಶ್ಚಿಮದಲ್ಲಿ ಜನಿಸಿದ ಸಾಂವಿಧಾನಿಕ ರಾಜ್ಯತಂತ್ರ, ಜಾತ್ಯತೀತ (ಸೆಕ್ಯುಲರ್) ಆಧುನಿಕೀಕರಣ ಮತ್ತು ಧಾರ್ಮಿಕ ದೃಷ್ಟಿಕೋನದೊಂದಿಗೆ ಸಂಘರ್ಷಕ್ಕಿಳಿಯದೇ, ಅವುಗಳಿಗೆ ಬೆಂಬಲ ಮತ್ತು ಪೋಷಣೆ ನೀಡುವುದು; ಮತ್ತು ಮುಂದುವರಿದು ಹಿಂದುತ್ವದ ಯೋಗ್ಯ ಸಾಮರ್ಥ್ಯವು ವೈಶ್ವಿಕ ನಾಗರಿಕ ಸಮಾಜದ ಸಾಂಪ್ರದಾಯಿಕ ಉತ್ಪತ್ತಿಗೆ ನಾಂದಿಹಾಡಿ ಅದರ ಮೂಲಕ ಏಕರೂಪವಾಗಿ ಎಲ್ಲ ರಾಷ್ಟ್ರಗಳ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುವಂತೆ ಕಾಣುತ್ತಿದೆ. ಹಿಂದುತ್ವದ ಈ ಅಂತರ್ನಿಹಿತ ಸಾಮರ್ಥ್ಯ ಯಾವುದೇ ಹಿಂದೂ ನಾಯಕನೋ ಅಥವಾ ತತ್ತ ಜ್ಞಾನಿಯೋ ಅಥವಾ ಯಾವುದೇ ಭಾರತೀಯನೋ ಸಂಶೋಧಿಸಿ ಹೊರತೆಗೆದದ್ದಲ್ಲ. ಬದಲಾಗಿ ದೈವವನ್ನು ನಂಬದ ಸ್ವೋಪಜ್ಞ ಅರ್ಥಶಾಸ್ತ್ರಜ್ಞರಾದ ಮತ್ತು ವೈಶ್ವಿಕ ವಾಣಿಜ್ಯ ತಜ್ಞರಾದ ಪ್ರೊ. ಜೀನ್ ಪಿಯರ್ ಲೇಮನ್‌ರವರು ಈ ಸಂಶೋಧನೆ ನಡೆಸಿದವರು. ಅವರು ಐಎಂಡಿ(IMD)ಎಂಬ ಸ್ವಿಡ್ಜರ್‌ಲ್ಯಾಂಡ್‌ನ ಪ್ರಸಿದ್ಧವಾದ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿದ್ದಾರೆ, ಮತ್ತು ಅವರು ವಿಶ್ವ ವಾಣಿಜ್ಯ ಕೇಂದ್ರ(ಡಬ್ಲ್ಯೂ.ಟಿ.ಓ.)ದಲ್ಲಿ ಪ್ರಮುಖ ಆರ್ಥಿಕ ಸಲಹೆಗಾರರಾಗಿದ್ದಾರೆ. ಅವರಿಂದ ಸಂಸ್ಥಾಪಿಸಲ್ಪಟ್ಟ ಮತ್ತು ಅವರ ನಾಯಕತ್ವದ ವೈಶ್ವಿಕ ಯೋಜನೆ – ‘ಇವಿಯನ್ ಗ್ರೂಪ್’ನಲ್ಲಿ ಯೂರೋಪ್,ಏಷಿಯಾ ಮತ್ತು ಅಮೆರಿಕಾದ ಉನ್ನತ ಶ್ರೇಣಿಯ ಅಧಿಕಾರಿಗಳು, ಸ್ವತಂತ್ರ ಆರ್ಥಿಕ ತಜ್ಞರು ಮತ್ತು ನಾಯಕರಿದ್ದಾರೆ. ಇವಿಯನ್ ಗ್ರೂಪ್ ತನ್ನ ಚಿಂತನೆಯನ್ನು ಕೇಂದ್ರೀಕರಿಸಿರುವುದು ವೈಶ್ವಿಕ ಯುಗದಲ್ಲಿ ಅಂತರರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯ ಬಗೆಗೆ. ಅದರಲ್ಲೂ ವಿಶೇಷವಾಗಿ ಅಂತರರಾಷ್ಟ್ರೀಯ ವಾಣಿಜ್ಯ ಮತ್ತು ವಿಶ್ವ ವಾಣಿಜ್ಯ ಕೇಂದ್ರದ ನಿರ್ಣಯಗಳ ವ್ಯತಿರಿಕ್ತ ಪರಿಣಾಮಗಳ ಮೇಲೆ. ಆದ್ದರಿಂದ, ಪ್ರೊ. ಲೇಮನ್‌ರು,ಮತ ಮತ್ತು ವೇದಾಂತಕ್ಕಿಂತ ವಾಣಿಜ್ಯ ಮತ್ತು ಆರ್ಥಿಕತೆಗೆ ಹೆಚ್ಚು ಒತ್ತು ನೀಡಿದ್ದಾರೆ.

ಪ್ರೊ. ಲೇಮನ್‌ರ ಪ್ರಕಾರ ವೈಶ್ವಿಕ ವಾಣಿಜ್ಯ ಮತ್ತು ಜಾಗತೀಕರಣದ ಸುಗಮ ನಡೆಗೆ ಶಾಂತಿಯುತವಾದ ವೈಶ್ವಿಕ ವ್ಯವಸ್ಥೆ ಅತ್ಯಂತ ಅಪೇಕ್ಷಿತ. ಮತ್ತು ವಿಶ್ವಶಾಂತಿಗಾಗಿ ಅದಕ್ಕೆ ಸಹಾಯಕವಾಗುವ ಮತ ಮತ್ತು ತತ್ತ ಜ್ಞಾನ ಇರಲೇಬೇಕು. ಮತದ ಹೆಸರಿನಲ್ಲಿ ಜಗತ್ತಿನಲ್ಲಿ ನಡೆಯುತ್ತಿರುವ ಗಲಭೆಗಳು ಮತ್ತು ಅದರಿಂದ ಜಾಗತಿಕ ವ್ಯವಸ್ಥೆ ಹಾಳಾಗಿರುವುದು ಏಕದೈವವಾದಿ ಮತಗಳಿಂದ. ಜಾಗತೀಕರಣಕ್ಕೆ ಹೊಂದುವ ಮತದ ಅನ್ವೇಷಣೆಯಲ್ಲಿ ಪ್ರೊ. ಲೇಮನ್‌ರು ಅದಕ್ಕುತ್ತರವಾಗಿ ಹಿಂದುತ್ವವನ್ನು ಕಾಣುತ್ತಾರೆ. ಯಾವ ರೀತಿಯ ಮತವು ಇತರೆ ಮತನಿಷ್ಠರೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಲರ್ಹವಾದುದು ಎಂಬುದನ್ನು ಯೋಚಿಸಿ ಅವರು ಹೇಳುವುದು, ‘ಅಂತಹ ಮತವು ವಿಶೇಷವಾಗಿ, ಒಳ್ಳೆಯ ಆರ್ಥಿಕ ಬೆಳವಣಿಗೆಗೆ ಪೋಷಕವಾಗಿರಬೇಕು’ಎಂದು. ಅದಕ್ಕಾಗಿ ಅವರು ಭಾರತವನ್ನು ಸಮರ್ಥ ಅಭ್ಯರ್ಥಿಯಾಗಿ ಭಾವಿಸುತ್ತಾರೆ. ಮತ್ತು ಹಿಂದುತ್ವವನ್ನು ವಿಶ್ವಶಾಂತಿಯ ಮತ್ತು ಅಭಿವೃದ್ಧಿಯ ಮಾರ್ಗದ ವಾಹಕವೆಂದು ಕಂಡಿದ್ದಾರೆ. ಏಕೆಂದರೆ ಹಿಂದುತ್ವವು ಆಧುನಿಕ ಜಾತ್ಯತೀತತೆಯನ್ನು ಶಿಥಿಲಗೊಳಿಸದೆಯೇ ಅದಕ್ಕೂ ಸ್ಥಾನ ನೀಡಿದೆ. ‘ಜಾಗತೀಕರಣದ ಯುಗದಲ್ಲಿ ಏಕದೈವವಾದ’ ಎಂಬ ತಮ್ಮ ಪ್ರಬಂಧದಲ್ಲಿ ಪ್ರೊ. ಲೇಮನ್‌ರು ಹೇಳುವುದು – “ಅಸಂಖ್ಯ ದೇವತೆಗಳನ್ನು ಪೂಜಿಸಿ ಒಪ್ಪಿಕೊಳ್ಳುವ ಹಿಂದುತ್ವದ ಮಹಾನತೆಯ ಕಾರಣದಿಂದಲೇ ತಮ್ಮ ದೇವರನ್ನೇ ಶ್ರೇಷ್ಠವೆಂದು ಭಾವಿಸುವ ಏಕದೈವವಾದಿ ಮತಗಳನ್ನೂ ಅದು ಸಹಿಸಿಕೊಂಡಿದೆ.” ಅವರು ಮುಂದೆ ಹೀಗೆ ಬರೆಯುತ್ತಾರೆ:

“ನಿಮ್ಮಲ್ಲಿ ಒಬ್ಬನೇ ದೇವರಿದ್ದರೆ ಮತ್ತು ದೇವರನ್ನು ಸರ್ವಜ್ಞ ಮತ್ತು ಸರ್ವಶಕ್ತ ಎಂದು ನೀವು ಭಾವಿಸಿದರೆ,ನಿಮ್ಮೆದುರು ಅದನ್ನೊಪ್ಪದ ವ್ಯಕ್ತಿ ಇದ್ದರೆ, ಅವನನ್ನು ಕೊಲ್ಲುವುದು ನಿಮ್ಮ ಕರ್ತವ್ಯವೆಂದು ಅನ್ನಿಸಬಹುದು. ಮತ್ತೊಂದು ಕಡೆ ನೀವು ನೂರಾರು ಅಥವಾ ಸಾವಿರಾರು ದೇವರ ಅಸ್ತಿತ್ವವನ್ನು ನಂಬುವುದಾದರೆ ಯಾರೂ ಸರ್ವಜ್ಞ ಅಥವಾ ಸರ್ವಶಕ್ತನಾಗಲಾರ. ಅದರಿಂದ ನೀವು ಅತ್ಯಂತ ಹೆಚ್ಚು ಸಹಿಷ್ಣುಗಳಾಗುತ್ತೀರಿ.”

ಸಂಕ್ಷೇಪವಾಗಿ ಹೇಳುವುದಾದರೆ, ಹಿಂದುತ್ವವು ಅಂತಿಮವಾಗಿ ವಿಶ್ವಾಸವಿರಿಸುವುದು ‘ಬ್ರಹ್ಮ’ವೆಂಬ ಐಕ್ಯದ ಕಲ್ಪನೆಯಲ್ಲಾದರೂ ಕೂಡ, ಹಿಂದುತ್ವದಲ್ಲಿರುವ ಅಸಂಖ್ಯ ದೇವತಾತತ್ತ ಗಳು ಅದನ್ನು ಹೆಚ್ಚು ಸಹಿಷ್ಣುವನ್ನಾಗಿ ಮಾಡುತ್ತವೆ. ಇಂತಹ ಸಹಿಷ್ಣುತೆಯನ್ನು ಏಕದೈವವಾದಿ ನಿಷ್ಠೆಗಳಲ್ಲಿ ಕಾಣಲು ಸಾಧ್ಯವಿಲ್ಲ. ಸ್ವತಃ ದೈವವನ್ನು ನಂಬದ ಲೇಮನ್, ‘ಅಂತಹ ಮತಗಳು ಬಯಸುವ ಎಲ್ಲ ಮತಗಳ ಅಪಾಕರಣೆ ಎಂದಿಗೂ ಅಸಾಧ್ಯವೆಂದು’ಅಭಿಪ್ರಾಯಪಡುತ್ತಾರೆ:

“….. ಯಹೂದ್ಯ, ಕೆಸ್ತ, ಇಸ್ಲಾಂ ಎಂಬ ಈ ಮೂರು ಏಕದೈವವಾದಿ ಮತಗಳು ತಮ್ಮ ಮತದ ಮೂಲಭೂತವಾದಿಗಳಿಂದ ಅಪಹೃತವಾಗಿವೆ. ನಾನು ದೃಢವಾಗಿ ನಂಬುವುದು, ನಾಗರಿಕತೆಯ ವಿಕಾಸಕ್ಕೆ ಎಲ್ಲ ರೀತಿಯ ಸ್ಥಾಪಿತ ಮತಗಳ ಕ್ರಮಬದ್ಧ ಅಪಾಕರಣವಾಗಬೇಕು. ಅದು ಶಕ್ತಿಯ ಪ್ರಯೋಗದಿಂದಲ್ಲ,ಬದಲಾಗಿ ಇತಿಹಾಸದ ಪುರಾವೆಯಿಂದ, ಮಾನವ ತರ್ಕದಿಂದ ಮತ್ತು ಮಾನವ ಜಾತ್ಯತೀತತೆಯ ಪರಿಗ್ರಹದಿಂದ.

“ಪಶ್ಚಿಮ ಯೂರೋಪ್‌ನಲ್ಲಿನ ಹೆಚ್ಚಿನ ಜನಸಂಖ್ಯೆ ಹೆಸರಿನಿಂದ ಮಾತ್ರ ಕೆಸ್ತರನ್ನು ಹೊಂದಿದೆ. ಆದರೆ, ಖೇದದ ಸಂಗತಿಯೆಂದರೆ, ಅಲ್ಲಿ ಮನುಷ್ಯತ್ವವಿನ್ನೂ ತನ್ನ ಆಧಿಪತ್ಯವನ್ನು ಸ್ಥಾಪಿಸಿಲ್ಲ.”

Leave a Reply

Your email address will not be published.

This site uses Akismet to reduce spam. Learn how your comment data is processed.