
ಹಿರಿಯ ಪ್ರಚಾರಕರಾದ ಸು. ರಾಮಣ್ಣ ಅವರ ‘ಸ್ವಾತಂತ್ರ್ಯ ಹೋರಾಟ: ಹಿನ್ನೋಟ ಮುನ್ನೋಟ’ ಪುಸ್ತಕ ಲೋಕಾರ್ಪಣೆ
ಹುಬ್ಬಳ್ಳಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಇವರುಗಳ ಜನ್ಮ ದಿನಾಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಡಿ ಶುಕ್ರವಾರ ಹುಬ್ಬಳ್ಳಿಯ ಆರ್‍ಎಸ್‍ಎಸ್ ನ ಕೇಶವಕುಂಜದಲ್ಲಿ ಹಮ್ಮಿಕೊಂಡಿದ್ದ ಜೇಷ್ಠ ಪ್ರಚಾರಕರಾದ ಸು. ರಾಮಣ್ಣನವರಿಂದ ರಚಿತವಾದ ಸ್ವಾತಂತ್ರ ಹೋರಾಟ ‘ಹಿನ್ನೋಟ ಮುನ್ನೋಟ’ ಪುಸ್ತಕದ ಬಿಡುಗಡೆ ಸಮಾರಂಭ ನೆರವೇರಿತು.

ಜೆಎನ್‍ಯು ವಿಶ್ವವಿದ್ಯಾಲಯ ನವದೆಹಲಿಯ ಪ್ರಾಧ್ಯಾಪಕರಾದ ಡಾ. ವಿಶ್ವನಾಥ ಸ್ವತಂತ್ರ ಹೋರಾಟ ‘ಹಿನ್ನೋಟ ಮುನ್ನೋಟ’ ಪುಸ್ತಕದ ಪ್ರಮುಖ ಅಂಶಗಳ ಪರಿಚಯ ಮಾಡಿದರು. ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿಗಳಾದ ಶ್ರೀ ಅನೀಲಕುಮಾರ ಚೌಗಲಾ ಪುಸ್ತಕ ಬಿಡುಗಡೆ ಮಾಡಿ ಮುಂದುವರೆದು ಮಾತನಾಡಿ, ದೇಶಭಕ್ತಿ ಅನ್ನುವುದು ಪ್ರಕಟಿತವಾಗಬೇಕಾದರೆ ಜೀಜಾಬಾಯಿ ಶಿವಾಜಿಗೆ ಶಿಕ್ಷಣ ನೀಡಿದಂತೆ ಶಾಲೆಗಳಲ್ಲಿ ಮಕ್ಕಳಿಗೆ ದೇಶಭಕ್ತಿ ಪ್ರಕಟಿತವಾಗಬೇಕು ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಹಾಪುರುಷರ ವಿಷಯವಸ್ತು ಈಗಿನ ಮಕ್ಕಳ ಪಠ್ಯಕ್ರಮದಲ್ಲಿ ಬರುವಂತೆ ಸರ್ಕಾರ ಗಮನಹರಿಸಬೇಕು ಮತ್ತು ಸು. ರಾಮಣ್ಣರವರು 80ನೇ ವಯಸ್ಸಿನಲ್ಲಿ ಬರೆದ ಈ ಪುಸ್ತಕ ಹೊರತರುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ ಎಂದು, ರಾಷ್ಟ್ರ ರಾಷ್ಟ್ರೀಯತೆ, ದೇಶಭಕ್ತಿ ಸ್ವಾತಂತ್ರದ ಕುರಿತು ಹಲವಾರು ವಿಚಾರ ತಿಳಿಸಿದರು.
ಆರೆಸ್ಸೆಸ್ ನ ಜೇಷ್ಠ ಪ್ರಚಾರಕ ಸು. ರಾಮಣ್ಣ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಪುಸ್ತಕ ರಚನೆಯ ಹಿನ್ನಲೆಯನ್ನು ವಿವರಿಸುತ್ತ, ಭಾರತದ ಸ್ವಾತಂತ್ರ್ಯಕ್ಕಾಗಿ ಅಗಣಿತ ಹೋರಾಟಗಾರರು ಜೀವ ತೆತ್ತಿರುವ ಬೆಲೆಯನ್ನ ತಿಳಿಯಬೇಕು ಎಂದು ಹೇಳಿದರು.

ಸ್ವಾತಂತ್ರ ಹೋರಾಟಗಾರರ ಜೀವನ ಪರಿಚಯವಾದಾಗ ಮಾತ್ರ ರಾಷ್ಟ್ರವನ್ನು ಉಳಿಸಿ ಬೆಳೆಸುವ ಗಂಭೀರತೆ ಮತ್ತು ಪ್ರೇರಣೆ ಹೊಸ ಪೀಳಿಗೆಗೆ ದೊರೆಯುತ್ತದೆ ಎಂದು ಹೇಳಿದರು. ನಾವೆಲ್ಲಾ ಹಕ್ಕುಗಳಿಗಾಗಿ ಹೋರಾಡುವವರಾಗಿದ್ದೇವೆಯೇ ಹೊರತು ಕರ್ತವ್ಯಗಳನ್ನು ಮರೆತಿದ್ದೇವೆ, ಕರ್ತವ್ಯ ಮತ್ತು ಧನ್ಯತೆ ನಮ್ಮ ಜೀವನದ ಅವಿಭಾಜ್ಯ ಅಂಗವಾದಾಗ ಮಾತ್ರ ರಾಷ್ಟ್ರ ಮುನ್ನಡೆಯಲು ಸಾಧ್ಯ ಎಂದು ಹೇಳಿದರು.
ಆರ್‍ಎಸ್‍ಎಸ್ ನ ಪ್ರಾಂತ ಪ್ರಚಾರಕ ಸುಧಾಕರ, ಆರ್‍ಎಸ್‍ಎಸ್ ನ ಸಹ ಪ್ರಾಂತ ಪ್ರಚಾರಕ ನರೇಂದ್ರ, ಗೋವರ್ಧನರಾವ್, ಶ್ರೀ ಸತೀಶ ಮುರೂರ, ಕೆಆರ್‍ಎಂಎಸ್‍ಎಸ್ ನ ರಾಜ್ಯಾಧ್ಯಕ್ಷರಾದ ಸಂದೀಪ ಬೂದಿಹಾಳ ಉಪಸ್ಥಿತರಿದ್ದರು.
ಪುಸ್ತಕ ಬಿಡುಗಡೆಯ ಆನ್‍ಲೈನ್ ಲೈವ್ ಕಾರ್ಯಕ್ರಮದಲ್ಲಿ ಎಬಿಆರ್‍ಎಸ್‍ಎಂ ನ ಸಂರಕ್ಷಕರಾದ ಕೃ. ನರಹರಿಯವರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರೊ. ಶಿವಾನಂದ ಶಿಂಧನಕೆರಾ, ಎಚ್ ನಾಗಭೂಷಣ್ ರಾವ್, ಕೆ. ಬಾಲಕೃಷ್ಣ ಭಟ್, ಅರುಣ ಶಹಾಪೂರ, ಚಿದಾನಂದ ಪಾಟೀಲ, ಗಂಗಾಧಾರಾಚಾರಿ, ಶ್ರೀಮತಿ ಮಮತಾ ಡಿ.ಕೆ, ಶ್ರೀಮತಿ ಸೀತಾ ಲಕ್ಷ್ಮೀ ಅಮ್ಮನವರು ಹಾಗೂ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಪದಾಧಿಕಾರಿಗಳು ಮತ್ತು ಕರ್ನಾಟಕ ರಾಜ್ಯದಿಂದ ಎಲ್ಲಾ ಜಿಲ್ಲೆಗಳ ಶಿಕ್ಷಕ ಬಂಧುಗಳು ಪುಸ್ತಕ ಬಿಡುಗಡೆ ಲೈವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಅನುಸೂಯಾ ಸಜ್ಜನಶೆಟ್ಟರ ಮತ್ತು ಶ್ರೀಮತಿ ಜ್ಯೋತಿ ಕದಮ ಸರಸ್ವತಿ ವಂದನೆ ಮಾಡಿದರು, ಶ್ರೀ ಸೋಮಶೇಖರ ಒಣರೊಟ್ಟಿ ದೇಶಭಕ್ತಿಗೀತೆ ಹೇಳಿದರು, ಶ್ರೀಧರ ಪಾಟೀಲ ಕುಲಕರ್ಣಿ ಸ್ವಾಗತ ಮತ್ತು ಪರಿಚಯ ಮಾಡಿದರು. ಶಿವಾನಂದ ನಾಗೂರ ವಂದಿಸಿದರು. ಡಾ. ರಾಜಕುಮಾರ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

