ಲೇಖನ: ಅಪೂರ್ವ ಎನ್ ಹಳವೂರ, ಹುಬ್ಬಳ್ಳಿ


ಭಾರತವು ಹಬ್ಬಗಳ ನಾಡು. ಇಲ್ಲಿನ ಪ್ರತಿಯೊಂದು ಆಚರಣೆಯೂ ಪ್ರಕೃತಿ, ಧರ್ಮ ಮತ್ತು ವಿಜ್ಞಾನದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಇಂತಹ ಹಬ್ಬಗಳಲ್ಲಿ ಅತ್ಯಂತ ಪ್ರಮುಖವಾದುದು ಮತ್ತು ಕನ್ನಡಿಗರ ಪಾಲಿನ ಹೊಸ ವರ್ಷದ ಆರಂಭವೇ ‘ಯುಗಾದಿ’. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದ ರಾಜ್ಯಗಳಲ್ಲಿ ಈ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ‘ಯುಗಾದಿ’ ಎಂಬ ಪದವು ಸಂಸ್ಕೃತದ ‘ಯುಗ’ (ಕಾಲ) ಮತ್ತು ‘ಆದಿ’ (ಆರಂಭ) ಎಂಬ ಎರಡು ಪದಗಳ ಸಂಯೋಜನೆಯಿಂದ ಬಂದಿದೆ. ಇದರರ್ಥ ‘ಹೊಸ ಕಾಲದ ಆರಂಭ’ ಅಥವಾ ‘ಹೊಸ ವರ್ಷದ ಮುನ್ನುಡಿ’.

ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆ
ಯುಗಾದಿ ಹಬ್ಬಕ್ಕೆ ದೀರ್ಘವಾದ ಇತಿಹಾಸವಿದೆ. ಹಿಂದೂ ಪುರಾಣಗಳ ಪ್ರಕಾರ, ಬ್ರಹ್ಮದೇವನು ಈ ಸೃಷ್ಟಿಯನ್ನು ಆರಂಭಿಸಿದ್ದು ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯಮಿಯಂದು. ಅಂದರೆ, ಕಾಲಗಣನೆಗೆ ಮೊದಲ ಬಾರಿಗೆ ಚಾಲನೆ ಸಿಕ್ಕ ದಿನವಿದು. ಆದ್ದರಿಂದ ಇದನ್ನು ‘ಕಲ್ಪಾದಿ’ ಅಥವಾ ಸೃಷ್ಟಿಯ ಆರಂಭದ ದಿನವೆಂದು ಪೂಜಿಸಲಾಗುತ್ತದೆ. ಕೆಲವು ಮೂಲಗಳ ಪ್ರಕಾರ ಯುಗಾದಿಯಂದೇ ವಿಷ್ಣುವಿನ ಮೊದಲನೇ ಅವತಾರ ಮತ್ಸ್ಯಾವತಾರವೂ  ಅವತರಿಸಿದ್ದು ಎನ್ನಲಾಗುತ್ತದೆ.
ಮತ್ತೊಂದು ನಂಬಿಕೆಯ ಪ್ರಕಾರ, ಶ್ರೀರಾಮಚಂದ್ರನು ರಾವಣ ಸಂಹಾರದ ನಂತರ ಅಯೋಧ್ಯೆಗೆ ಮರಳಿ ಪಟ್ಟಾಭಿಷಿಕ್ತನಾದ ಸಂಭ್ರಮದ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಾಗೆಯೇ, ಶಕಪುರುಷ ಶಾಲಿವಾಹನನು ವಿಕ್ರಮಾದಿತ್ಯನನ್ನು ಸೋಲಿಸಿ ಹೊಸ ಶಕೆಯನ್ನು ಆರಂಭಿಸಿದ ದಿನವೂ ಇದೇ ಆಗಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ದಿನದಂದೇ ‘ಶಾಲಿವಾಹನ ಶಕೆ’ಯ ಆರಂಭವನ್ನೂ ಗುರುತಿಸಲಾಗುತ್ತದೆ.

ಪ್ರಕೃತಿಯೂ ಹೊಸತನವನ್ನು ಸೂಚಿಸುವ ಹಬ್ಬ
ಯುಗಾದಿಯು ಕೇವಲ ಕ್ಯಾಲೆಂಡರ್ ಬದಲಾವಣೆಯಲ್ಲ, ಇದು ಪ್ರಕೃತಿಯಲ್ಲಿ ಸಂಭವಿಸುವ ಮಹತ್ತರ ಬದಲಾವಣೆಯ ಸಂಕೇತ. ಶಿಶಿರ ಋತುವಿನಲ್ಲಿ ಎಲೆಗಳನ್ನು ಉದುರಿಸಿದ್ದ ಮರಗಿಡಗಳು, ವಸಂತ ಋತುವಿನ ಆಗಮನದೊಂದಿಗೆ ಚಿಗುರೊಡೆಯುತ್ತವೆ. ಪರಿಸರವೆಲ್ಲವೂ ಹಸಿರಿನಿಂದ ಕಂಗೊಳಿಸುತ್ತದೆ. ಮಾವಿನ ಮರಗಳು ಹೂ ಬಿಟ್ಟು ಘಮಘಮಿಸುತ್ತವೆ, ಕೋಗಿಲೆಯ ಮಧುರ ಗಾಯನ ಕಿವಿಗಳಿಗೆ ಆನಂದ ನೀಡುತ್ತದೆ. ಬಿಸಿಲಿನ ತಾಪ ಹೆಚ್ಚಾಗುತ್ತಿದ್ದರೂ, ಪ್ರಕೃತಿಯಲ್ಲಿ ಒಂದು ರೀತಿಯ ಹೊಸ ಚೈತನ್ಯ ಕಂಡುಬರುತ್ತದೆ. ರೈತರಿಗೆ ಇದು ಸುಗ್ಗಿಯ ಕಾಲ ಮುಗಿದು ಮುಂದಿನ ಕೃಷಿ ಚಟುವಟಿಕೆಗಳಿಗೆ ಸಿದ್ಧವಾಗುವ ಸಮಯ. ಈ ಎಲ್ಲ ನೈಸರ್ಗಿಕ ಬದಲಾವಣೆಗಳು ಮನುಷ್ಯನ ಮನಸ್ಸಿನಲ್ಲೂ ಹೊಸ ಉತ್ಸಾಹವನ್ನು ತುಂಬುತ್ತವೆ.

ಬೇವು-ಬೆಲ್ಲದ ಸಂದೇಶ
ಯುಗಾದಿಯ ಆಚರಣೆಗೆ ಸಾಂಕೇತಿಕ ಮೆರುಗನ್ನು ನೀಡುವುದು ‘ಬೇವು-ಬೆಲ್ಲ’. ಇದು ಬದುಕಿನ ಸತ್ಯವನ್ನು ಸಾರುವ ಅದ್ಭುತ ಸಂಕೇತ. ಬೇವಿನ ಎಲೆ ಕಹಿಯಾಗಿದ್ದರೆ, ಬೆಲ್ಲ ಸಿಹಿಯಾಗಿರುತ್ತದೆ. ಜೀವನ ಎನ್ನುವುದು ಈ ಕಹಿ ಮತ್ತು ಸಿಹಿಗಳ ಮಿಶ್ರಣ. ನಾವು ಜೀವನದಲ್ಲಿ ಎದುರಾಗುವ ಸುಖ-ದುಃಖಗಳನ್ನು, ಗೆಲುವು-ಸೋಲುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಗೂಢಾರ್ಥವನ್ನು ಇದು ನೀಡುತ್ತದೆ. “ಬೇವು ಬೆಲ್ಲವ ಸವಿದು ಸಾಗಲಿ ಬದುಕು,
ನೋವು ನಲಿವುಗಳ ಹಂಚುತ ಸಾಗಲಿ ಪ್ರೀತಿ.”
ಆರೋಗ್ಯದ ದೃಷ್ಟಿಯಿಂದಲೂ ಬೇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದರೆ, ಬೆಲ್ಲ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದರೊಂದಿಗೆ ಮಾವಿನ ಕಾಯಿ (ಹುಳಿ), ಮೆಣಸು (ಖಾರ), ಉಪ್ಪು ಮತ್ತು ಹುಣಸೆ ಹಣ್ಣನ್ನು ಬೆರೆಸಿ ‘ಯುಗಾದಿ ಪಚಡಿ’ ತಯಾರಿಸುವ ಪದ್ಧತಿಯೂ ಇದೆ. ಇದು ಜೀವನದ ಆರು ವಿಭಿನ್ನ ಭಾವನೆಗಳನ್ನು ಪ್ರತಿನಿಧಿಸುತ್ತದೆ.

ಸಾಮಾಜಿಕ ವ್ಯವಸ್ಥೆಯ ಬದಲಾವಣೆಗೂ ಮುನ್ನುಡಿ
ಹೊಸ ವರ್ಷದ ಭವಿಷ್ಯವನ್ನು ‘ಪಂಚಾಂಗ ಶ್ರವಣ’ದ ಮೂಲಕ ತಿಳಿಯುವುದು ಯುಗಾದಿಯ ಮತ್ತೊಂದು ವೈಶಿಷ್ಟ್ಯ. ಸಂಜೆ ದೇವಸ್ಥಾನಗಳಲ್ಲಿ ಅಥವಾ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಂಗ ಶ್ರವಣ ಮಾಡಲಾಗುತ್ತದೆ. ಅಂದು ಆ ವರ್ಷದ ರಾಜಾ, ಮಂತ್ರಿ ಯಾರು? ಮಳೆ-ಬೆಳೆ ಹೇಗಿರಲಿದೆ? ಯಾವ ರಾಶಿಯವರಿಗೆ ಲಾಭ-ನಷ್ಟದ ಪ್ರಮಾಣ ಎಷ್ಟಿದೆ? ಎಂಬುದನ್ನು ಜ್ಯೋತಿಷ್ಯಶಾಸ್ತ್ರದ ಪ್ರಕಾರ ವಿಶ್ಲೇಷಿಸಲಾಗುತ್ತದೆ. ಇದು ಜನರಲ್ಲಿ ಮುನ್ನೆಚ್ಚರಿಕೆ ಮತ್ತು ಹೊಸ ವರ್ಷದ ಬಗ್ಗೆ ಕುತೂಹಲವನ್ನು ಮೂಡಿಸುತ್ತದೆ.

ವರ್ಷದ ತೊಡಕು
ಯುಗಾದಿಯ ಮರುದಿನವನ್ನು ‘ವರ್ಷ ತೊಡಕು’ ಎಂದು ಕರೆಯಲಾಗುತ್ತದೆ. ಅಂದು ಮಲೆನಾಡು ಮತ್ತು ಹಳೆಯ ಮೈಸೂರು ಭಾಗದಲ್ಲಿ ವಿಶೇಷವಾಗಿ ಮಾಂಸಾಹಾರಿ ಭೋಜನವನ್ನು ತಯಾರಿಸಿ ನೆಂಟರಿಷ್ಟರನ್ನು ಆಹ್ವಾನಿಸುತ್ತಾರೆ. ಅಂದು ಕೆಲಸ ಮಾಡದೆ ವಿಶ್ರಾಂತಿ ಪಡೆದು, ವರ್ಷದ ಆರಂಭವನ್ನು ಸಂತೋಷದಿಂದ ಕಳೆಯುವುದು ಇದರ ಉದ್ದೇಶ. ಗ್ರಾಮೀಣ ಪ್ರದೇಶಗಳಲ್ಲಿ ಗಾಳಿಪಟ ಹಾರಿಸುವುದು, ಕುಸ್ತಿ ಪಂದ್ಯಗಳು ಮತ್ತು ಜಾನಪದ ಕ್ರೀಡೆಗಳು ನಡೆಯುತ್ತವೆ.


ಸಾಮಾಜಿಕ ಮತ್ತು ಆರ್ಥಿಕ ಮಹತ್ವ
ಯುಗಾದಿ ಹಬ್ಬವು ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸುತ್ತದೆ. ಈ ದಿನದಂದು ಜನರು ದ್ವೇಷ-ಅಸೂಯೆಗಳನ್ನು ಮರೆತು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಆರ್ಥಿಕವಾಗಿ ರೈತರಿಗೆ ಮತ್ತು ವ್ಯಾಪಾರಸ್ಥರಿಗೆ ಇದು ಹೊಸ ಲೆಕ್ಕಾಚಾರಗಳ ಆರಂಭದ ದಿನ. ಹೊಸ ಉದ್ದಿಮೆಗಳನ್ನು ಪ್ರಾರಂಭಿಸಲು, ವಾಹನ ಅಥವಾ ಆಸ್ತಿ ಖರೀದಿಸಲು ಜನರು ಯುಗಾದಿಯನ್ನು ಮಂಗಳಕರ ದಿನವೆಂದು ಪರಿಗಣಿಸುತ್ತಾರೆ.

ಯುಗಾದಿ ಹಬ್ಬವು ನಮಗೆ ನಮ್ಮ ಮೂಲ ಸಂಸ್ಕೃತಿಯನ್ನು ನೆನಪಿಸುತ್ತದೆ. ಆಧುನಿಕತೆಯ ಈ ಕಾಲದಲ್ಲಿಯೂ ಯುಗಾದಿಯ ಆಚರಣೆ ತನ್ನ ಮಹತ್ವವನ್ನು ಕಳೆದುಕೊಂಡಿಲ್ಲ. ಇದು ಕೇವಲ ಒಂದು ದಿನದ ಆಚರಣೆಯಾಗದೆ, ಇಡೀ ವರ್ಷಕ್ಕೆ ಬೇಕಾದ ಸಕಾರಾತ್ಮಕ ಶಕ್ತಿಯನ್ನು ನೀಡುವ ಪ್ರಕ್ರಿಯೆ. ಕಹಿ ನೆನಪುಗಳನ್ನು ಮರೆತು, ಸಿಹಿಯಾದ ಭವಿಷ್ಯದತ್ತ ಹೆಜ್ಜೆ ಹಾಕಲು ಯುಗಾದಿ ಪ್ರೇರಣೆ ನೀಡುತ್ತದೆ.
ಬದುಕು ಬೇವು-ಬೆಲ್ಲದಂತೆ ಸುಂದರವಾಗಿರಲಿ, ನಾಡು ಸುಭಿಕ್ಷವಾಗಿರಲಿ ಮತ್ತು ಪ್ರತಿಯೊಬ್ಬರ ಜೀವನದಲ್ಲೂ ಯುಗಾದಿ ಸುಖ-ಶಾಂತಿಯನ್ನು ತರಲಿ ಎಂದು ಹಾರೈಸೋಣ.

Leave a Reply

Your email address will not be published.

This site uses Akismet to reduce spam. Learn how your comment data is processed.