
ವಿಶ್ವದ ಶಾಂತಿ ಮತ್ತು ಸಮೃದ್ಧಿಗಾಗಿ ಸಮರಸ ಹಾಗೂ ಸಂಘಟಿತ ಹಿಂದೂ ಸಮಾಜದ ನಿರ್ಮಾಣ
ಅನಾದಿ ಕಾಲದಿಂದಲೂ, ಹಿಂದೂ ಸಮಾಜವು ಮಾನವ ಏಕತೆ ಮತ್ತು ಸಾರ್ವತ್ರಿಕ ಕಲ್ಯಾಣವನ್ನು ಸಾಧಿಸುವ ಮಹಾನ್ ಧ್ಯೇಯವನ್ನು ನೆರವೇಸಲು ಬಹಳ ದೀರ್ಘವಾದ ಹಾಗೂ ಅಸಾಮಾನ್ಯ ಯಾತ್ರೆಯಲ್ಲಿ ತೊಡಗಿಕೊಂಡಿದೆ. ಸಂತರು, ಋಷಿಗಳು ಹಾಗೂ ಶ್ರೇಷ್ಠ ಮಹಿಳೆಯರು ಸೇರಿದಂತೆ ಮಹಾನ್ ವ್ಯಕ್ತಿಗಳ ಆಶೀರ್ವಾದ ಮತ್ತು ಪ್ರಯತ್ನಗಳಿಂದ, ನಮ್ಮ ರಾಷ್ಟçವು ಹಲವಾರು ಏರುಪೇರುಗಳ ಹೊರತಾಗಿಯೂ ತನ್ನ ಈ ಪ್ರಯಾಣದಲ್ಲಿ ಮುನ್ನಡೆಯಲು ಸಾಧ್ಯವಾಗಿದೆ.
ನಮ್ಮ ರಾಷ್ಟ್ರೀಯ ಜೀವನದಲ್ಲಿ ಕಾಲಕ್ರಮೇಣ ನುಸುಳಿದ್ದ ದೌರ್ಬಲ್ಯಗಳನ್ನು ನಿರ್ಮೂಲನೆ ಮಾಡಲು ಮತ್ತು ಭಾರತವನ್ನು ಒಂದು ಸಂಘಟಿತ, ಸದ್ಗುಣಶೀಲ ಮತ್ತು ಶಕ್ತಿಶಾಲಿ ರಾಷ್ಟ್ರವಾಗಿ ವೈಭವದ ಶಿಖರಕ್ಕೆ (ಪರಮವೈಭವ) ಕೊಂಡೊಯ್ಯಲು 1925ರಲ್ಲಿ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಪ್ರಾರಂಭಿಸಿದರು. ಸಂಘಕಾರ್ಯದ ಬೀಜವನ್ನು ಬಿತ್ತಿದ ಡಾಕ್ಟರ್‌ಜೀ ದೈನಂದಿನ ಶಾಖೆಯ ರೂಪದಲ್ಲಿ ವಿಶಿಷ್ಟವಾದ ವ್ಯಕ್ತಿನಿರ್ಮಾಣದ ವಿಧಾನವನ್ನು ವಿಕಸನಗೊಳಿಸಿದರು. ಇದು ನಮ್ಮ ಶಾಶ್ವತ ಪರಂಪರಾಗತ ಮೌಲ್ಯಗಳು ಮತ್ತು ನೀತಿಗಳಿಗೆ ಅನುಗುಣವಾಗಿ ರಾಷ್ಟ್ರವನ್ನು ನಿರ್ಮಿಸುವ ನಿಸ್ವಾರ್ಥ ತಪಸ್ಸಾಯಿತು.
ಈ ಉಪಕ್ರಮವು ಡಾ. ಹೆಡಗೇವಾರ್ ಅವರ ಜೀವಿತಾವಧಿಯಲ್ಲಿಯೇ ದೇಶಾದ್ಯಂತ ಹರಡಿತ್ತು. ಸನಾತನ ಶಾಶ್ವತ ಚಿಂತನೆಗಳ ಬೆಳಕಿನಲ್ಲಿ, ರಾಷ್ಟ್ರೀಯ ಜೀವನದ ವಿವಿಧ ಹಂತಗಳಲ್ಲಿ ಸಮಕಾಲೀನ ಸಂದರ್ಭಕ್ಕನುಸಾರವಾದ ವ್ಯವಸ್ಥೆಗಳನ್ನು ರೂಪಿಸುವ ಪ್ರಕ್ರಿಯೆಯು ಎರಡನೇ ಸರಸಂಘಚಾಲಕ ಪೂಜನೀಯ ಶ್ರೀ ಗುರೂಜಿ (ಮಾಧವ ಸದಾಶಿವ ಗೋಳ್ವಾಲ್ಕರ್) ಅವರ ದಾರ್ಶನಿಕ ನಾಯಕತ್ವದಲ್ಲಿ ಪ್ರಾರಂಭವಾಯಿತು.
ನೂರು ವರ್ಷಗಳ ಈ ಯಾತ್ರೆಯಲ್ಲಿ, ದೈನಂದಿನ ಶಾಖೆಯಲ್ಲಿ ಕಲಿತ ಮೌಲ್ಯಗಳೊಂದಿಗೆ, ಸಂಘವು ಸಮಾಜದ ಅಚಲ ನಂಬಿಕೆ ಮತ್ತು ಪ್ರೀತಿಯನ್ನು ಗಳಿಸಿದೆ. ಈ ಅವಧಿಯಲ್ಲಿ, ಸಂಘದ ಸ್ವಯಂಸೇವಕರು ಗೌರವ ಮತ್ತು ಅವಮಾನಗಳು, ಒಪ್ಪಿಗೆ ಮತ್ತು ಅನಾದರಗಳನ್ನು ಮೀರಿ ಪ್ರೀತಿ ಮತ್ತು ವಿಶ್ವಾಸಗಳ ಬಲದಿಂದ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಲು ಶ್ರಮಿಸಿದ್ದಾರೆ. ಸಂಘದ ಶತಾಬ್ದಿಯ ಈ ಸಂದರ್ಭದಲ್ಲಿ, ಯಾರ ಆಶೀರ್ವಾದ ಮತ್ತು ಸಹಕಾರವು ಎಲ್ಲಾ ಪ್ರತಿಕೂಲತೆಗಳ ನಡುವೆ ಸದ್ದಿಲ್ಲದ ಸಮರ್ಪಣೆಯಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕಾರ್ಯಕರ್ತರು ಮತ್ತು ಸ್ವಯಂಸೇವಕರ ಕುಟುಂಬಗಳಿಗೆ ಪ್ರಬಲ ಶಕ್ತಿಯನ್ನು ನೀಡಿದೆಯೋ ಅಂತಹ ಪೂಜ್ಯ ಸಂತರು ಮತ್ತು ಸಮಾಜದ ಸಜ್ಜನ ಶಕ್ತಿಯನ್ನು ನೆನೆಯುವುದು ನಮ್ಮ ಕರ್ತವ್ಯವಾಗಿದೆ.
ಭಾರತವು ಶ್ರೀಮಂತ ಸಂಪ್ರದಾಯಗಳನ್ನು ಹೊಂದಿರುವ ಒಂದು ಪ್ರಾಚೀನ ಸಂಸ್ಕೃತಿಯಾಗಿರುವುದರಿAದ ಸಾಮರಸ್ಯದ ಜಗತ್ತನ್ನು ಸೃಷ್ಟಿಸುವ ಅನುಭವಾತ್ಮಕ ಕೌಶಲವನ್ನು ಹೊಂದಿದೆ. ನಮ್ಮ ಚಿಂತನೆಯು ವಿಭಜಕ ಮತ್ತು ಸ್ವಯಂ-ವಿನಾಶಕಾರಿ ಪ್ರವೃತ್ತಿಗಳಿಂದ ಇಡೀ ಮಾನವಕುಲವನ್ನು ರಕ್ಷಿಸುತ್ತದೆ ಹಾಗೂ ಸಜೀವ ಮತ್ತು ಜಡ ಘಟಕಗಳ ನಡುವೆ ಶಾಂತಿ ಹಾಗೂ ಏಕತೆಯ ಭಾವನೆಯನ್ನು ಮೂಡಿಸುತ್ತದೆ.
ಧರ್ಮದ ಅಡಿಪಾಯದ ಮೇಲೆ ನಿರ್ಮಿತವಾದ ಸ್ವ-ವಿಶ್ವಾಸದಿಂದ ತುಂಬಿದ ಸಂಘಟಿತ ಮತ್ತು ಸಾಮೂಹಿಕ ಜೀವನದ ಆಧಾರದ ಮೇಲೆ ಮಾತ್ರ ಹಿಂದೂ ಸಮಾಜವು ತನ್ನ ಜಾಗತಿಕ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ಈಡೇರಿಸಲು ಸಾಧ್ಯ ಎಂದು ಸಂಘವು ನಂಬುತ್ತದೆ. ಆದ್ದರಿಂದ, ಎಲ್ಲಾ ರೀತಿಯ ಬೇಧಭಾವಗಳನ್ನು ತಿರಸ್ಕರಿಸಿ ಸಾಮರಸ್ಯಪೂರ್ಣವಾಗಿ ವ್ಯವಹರಿಸುವ, ಪರಿಸರಸ್ನೇಹಿ ಜೀವನಶೈಲಿಯನ್ನು ಅನುಸರಿಸುವ, ಸ್ವತ್ವದ ಅಭಿಮಾನದಿಂದ ತುಂಬಿದ, ನಾಗರಿಕ ಕರ್ತವ್ಯಗಳಿಗೆ ಬದ್ಧರಾದ, ಮೌಲ್ಯಾಧಾರಿತ ಕುಟುಂಬಗಳ ಮಾದರಿ ಸಮಾಜವನ್ನು ನಿರ್ಮಿಸುವ ಸಂಕಲ್ಪ ಮಾಡುವುದು ನಮ್ಮ ಕರ್ತವ್ಯವಾಗಿದೆ. ಇದು ಸಮಾಜ ಎದುರಿಸುತ್ತಿರುವ ಎಲ್ಲ ಸವಾಲುಗಳನ್ನು ಹಾಗೂ ಸಮಸ್ಯೆಗಳನ್ನು ಶಮನಗೊಳಿಸಿ ಒಂದು ಶಕ್ತಿಯುತ, ಭೌತಿಕವಾಗಿ ಸಮೃದ್ಧ ಮತ್ತು ಆಧ್ಯಾತ್ಮಿಕತೆಯಿಂದ ತುಂಬಿದ ರಾಷ್ಟ್ರೀಯ ಜೀವನವನ್ನು ನಿರ್ಮಿಸಲು ಸಮರ್ಥರನ್ನಾಗಿಸುತ್ತದೆ.
ಇಡೀ ಸಮಾಜವನ್ನು ಸಜ್ಜನ ಶಕ್ತಿಯ ನಾಯಕತ್ವದಲ್ಲಿ ಒಟ್ಟಿಗೆ ಮುನ್ನಡಿಸಿ, ಸಮರಸ ಮತ್ತು ಸಂಘಟಿತ ಭಾರತವನ್ನು ವಿಶ್ವದ ಮುಂದೆ ಮಾದರಿಯಾಗಿ ನಿಲ್ಲಿಸಲು ಎಲ್ಲಾ ಸ್ವಯಂಸೇವಕರು ಕಟಿಬದ್ಧರಾಗಬೇಕೆಂದು ಅಖಿಲ ಭಾರತೀಯ ಪ್ರತಿನಿಧಿ ಸಭಾ ಕರೆ ನೀಡುತ್ತದೆ.