ಹುಬ್ಬಳ್ಳಿ: ಸಂಘ ಸ್ಥಾಪಕ ಡಾ. ಹೆಡಗೆವಾರರಿಂದ ಪ್ರಭಾವಿತರಾದ ಅಜಿತ ಕುಮಾರ ಅವರು ಹಿಂದೂ ಸೇವಾ ಪ್ರತಿಷ್ಠಾನದ ಮೂಲಕ ತಮ್ಮ ಜೀವನವನ್ನು ಸಮಾಜಕ್ಕೆ ಅರ್ಪಿಸಿದರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.
ನಗರದ ಕೇಶವಕುಂಜ ಸಂಘ ಕಾರ್ಯಾಲಯದಲ್ಲಿ ಲೋಕಹಿತ ಟ್ರಸ್ಟ್ ವತಿಯಿಂದ ದಿ. ಅಜಿತ ಕುಮಾರ ಸ್ಮರಣಾರ್ಥ ನಡೆದ ಪೌರ ಕಾರ್ಮಿಕರಿಗಾಗಿ ಸೇವಾ ಗೌರವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದೂ ಸೇವಾ ಪ್ರತಿಷ್ಠಾನ ಅನೇಕ ವಿದ್ಯಾವಂತ ಯುವತಿಯರಲ್ಲಿ ರಾಷ್ಟ್ರ ಭಾವ ಮೂಡಿಸಿ ಸಮಾಜ ಕಾರ್ಯದಲ್ಲಿ ಧುಮುಕುವಂತೆ ಮಾಡುತ್ತಿದೆ. ನಗರಗಳ ಹಿಂದುಳಿದ ಪ್ರದೇಶಗಳಲ್ಲಿ ಹಾಗೂ ವನವಾಸಿಗಳಿರುವ ಪರ್ವತ ಪ್ರದೇಶಗಳಲ್ಲಿ ಈ ಯುವತಿಯರು ದೃಢ ಮನಸ್ಸಿನಿಂದ ಮಕ್ಕಳಿಗೆ ಸಂಸ್ಕಾರ ಶಿಕ್ಷಣ ನೀಡುವಲ್ಲಿ ನಿರತರಾಗಿದ್ದಾರೆ ಎಂದರು.
ಅಜಿತ ಕುಮಾರರು ಒಂದು ಪ್ರೇರಕ ಶಕ್ತಿಯಾಗಿದ್ದಾರೆ. ಅವರ ಕಾರ್ಯ ಶೈಲಿ ಹಾಗೂ ಸಮಾಜದ ಉನ್ನತಿಗೆ ನೀಡಿದೆ ಕೊಡುಗೆ ಸದಾ ಸ್ಮರಣೀಯ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಲೋಕಹಿತ ಟ್ರಸ್ಟ್ ಅವರ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸುತ್ತದೆ ಎಂದರು.
ಪರಕೀಯರ ಆಕ್ರಮಣದಿಂದ ಜರ್ಜರಿತವಾದ ಹಿಂದು ಸಮಾಜದಲ್ಲಿ ಆಲಕ್ಷ್ಯಕ್ಕೆ ಒಳಗಾದ ಬಂಧುಗಳು ಆ ದಿನಗಳಲ್ಲಿ ಯಾವುದೇ ಆಸೆ -ಆಮಿಷ, ಬಲಾತ್ಕಾರಕ್ಕೆ ಬಲಿಯಾಗದೇ ಹಿಂದುಗಳಾಗಿ ಉಳಿದಿದ್ದು ಐತಿಹಾಸಿಕ ಸತ್ಯ. ಆದರೆ ಇಂಥ ತ್ಯಾಗ ಮಾಡಿದ ನಮ್ಮವರನ್ನೇ ಯಾವುದೋ ಕಾಲದಲ್ಲಿ ಹಿಂದು ಸಮಾಜ ಕೀಳಾಗಿ ನೋಡುವ ವಿಕೃತಿ ಆರಂಭವಾಯಿತು. ಸಂಘ ಇಂತಹ ವಿಕೃತಿ ಕೊನೆಗಾಣಿಸುವ ಪ್ರಯತ್ನದಲ್ಲಿ ನಿರಂತರವಾಗಿ ಪರಿಶ್ರಮಪಡುತ್ತಿದೆ. ಅದ್ದರಿಂದ ನಾವು ಹಿಂದುಳಿದವರು ಎಂಬ ಭ್ರಮೆಯಿಂದ ಹೊರಬಂದು ನಮ್ಮಲ್ಲಿ ಹಾಗೂ ನಮ್ಮ ಮಕ್ಕಳಲ್ಲಿ ಸಂಸ್ಕಾರ ಕೊಡುವ ಯತ್ನ ಎಲ್ಲರ ಕರ್ತವ್ಯವಾಗಬೇಕು ಎಂದು ಹೇಳಿದರು.
ಕೇಂದ್ರ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾಗಿದ್ದ ಶ್ರೀ ಜಗದೀಶ ಹಿರೇಮನಿಯವರು ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತನ ಒಡನಾಟ ವಿದ್ಯಾರ್ಥಿ ದೆಸೆಯಿಂದ ನನಗೆ ದೊರೆತಿದ್ದು, ನನ್ನನ್ನು ಯೋಗ್ಯ ನಾಗರಿಕನನ್ನಾಗಿ ರೂಪಿಸಿದೆ. ಈ ಸಂಘಟನೆಗಳ ಕಾರಣದಿಂದ ಸಮಾಜದಲ್ಲಿ ಉನ್ನತ ಸ್ಥಾನ ದೊರಕಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ಪೌರ ಕಾರ್ಮಿಕರಿಗೆ ಹೆಚ್ಚಿನ ಗೌರವ ಹಾಗೂ ಮನ್ನಣೆ ದೊರಕುತ್ತಿರುವುದು ಹರ್ಷದಾಯಕ. ರಾ.ಸ್ವ. ಸಂಘದ ಸಾಮರಸ್ಯ ವೇದಿಕೆ ಸಮಾಜದಲ್ಲಿ ಅಸಮಾನತೆ ತೊಲಗಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮ ನಿಮಿತ್ತ ಸ್ವಯಂಸೇವಕರು ಪೌರ ಕಾರ್ಮಿಕರ ಮನೆ ಸಂಪರ್ಕಿಸಿ ಪರಿವಾರ ಸಮೇತ ಆಹ್ವಾನಿಸಿದ್ದರು. ಪೌರ ಕಾರ್ಮಿಕ ಮಾತೆಯರಿಗೆ ಅರಿಷಣ ಕುಂಕುಮ , ಪುಷ್ಪ ಮತ್ತು ವಸ್ತ್ರಗಳನ್ನಿತ್ತು ಸ್ವಯಂಸೇವಕ ಪರಿವಾರದವರು ಸ್ವಾಗತ ಕೋರಿದರು. ಲೋಕಹಿತ ಟ್ರಸ್ಟ್ ಕಾರ್ಯದರ್ಶಿ ಶ್ರೀಧರ ನಾಡಗೀರ, ನಿವೃತ್ತನಾಥ ಕಾಟಕರ್, ಪ್ರಕಾಶ ಜಪಾಟೆ, ಸುನೀಲ ಚಿಲ್ಲಾಳ ಇತರರು ಪಾಲ್ಗೊಂಡಿದ್ದರು.