
ವಿಶ್ವ ಮಾನವ ಹಕ್ಕು ದಿನ ಪ್ರತಿ ವರ್ಷ ಡಿಸೆಂಬರ್ 10ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. 1948ರಲ್ಲಿ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಅಂಗೀಕರಿಸಿದ ದಿನದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಸಾಮಾಜಿಕ ಜೀವನದಲ್ಲಿ ತನ್ನದೇ ಆದ ಹಕ್ಕುಗಳನ್ನು ಹೊಂದಿರುತ್ತಾನೆ. ಎಲ್ಲರೂ ತಾರತಮ್ಯವಿಲ್ಲದೆ, ಶಾಂತಿ ಮತ್ತು ಸುರಕ್ಷತೆಯಲ್ಲಿ ಬದುಕುವ ಮತ್ತು ಅಭಿವೃದ್ಧಿ ಹೊಂದುವ ಹಕ್ಕನ್ನು ಪಡೆಯಬೇಕು. ಆಹಾರ, ಉಡುಪು, ವಸತಿ ಮನುಷ್ಯನಿಗೆ ಬೇಕಾಗಿರುವ ಮೂಲಭೂತ ಸೌಕರ್ಯ. ಅವುಗಳನ್ನು ಪಡೆಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ.
ಇತ್ತೀಚಿನ ದಿನಗಳಲ್ಲಿ ಮಾನವ ಹಕ್ಕುಗಳನ್ನು ಧಮನಿಸುವ ಪ್ರಯತ್ನಗಳು ನಡೆಯುತ್ತಿವೆ. ಇತರರ ಬದುಕಿನ ಹಕ್ಕನ್ನು ಕಸಿದುಕೊಳ್ಳುವ, ಸಾಮಾಜಿಕ ಬದುಕಿನಲ್ಲಿ ಅಸ್ಪೃಶ್ಯತೆಯಂತಹ ಪಿಡುಗನ್ನು ಆಚರಿಸುವ, ಜಾತಿ, ಬಣ್ಣ ಮತ್ತು ದೈಹಿಕ ನ್ಯೂನ್ಯತೆಗಳ ಆಧಾರಿತ ತಾರತಮ್ಯ, ಬಡತನದ ಕಾರಣಕ್ಕೆ ಹಿಂಸೆ ನೀಡುವ ಚಟುವಟಿಕೆಗಳು ಇಂದಿಗೂನಿಂತಿಲ್ಲ. ಹೀಗಾಗಿ ಪ್ರತಿಯೊಬ್ಬ ಮನುಷ್ಯರಿಗೂ ಕನಿಷ್ಠ ಅಗತ್ಯತೆಗಳು ಸಿಗಬೇಕು, ಅವರ ಹಕ್ಕುಗಳಿಗೆ ಗೌರವ ಸಿಗಬೇಕು ಎಂಬ ಉದ್ದೇಶದಿಂದ ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ವಿಶ್ವ ಮಾನವ ಹಕ್ಕು ದಿನ ಥೀಮ್ “Our Rights, Our Future, Right Now”.
ಮಾನವ ಹಕ್ಕುಗಳು
ಜೀವಿಸುವ ಹಕ್ಕು, ಸ್ವಾತಂತ್ರ್ಯ ಮತ್ತು ಭದ್ರತೆಯ ಹಕ್ಕು, ಸಮಾನತೆ ಮತ್ತು ತಾರತಮ್ಯವಿಲ್ಲದ ಹಕ್ಕು, ಕಾನೂನಿನ ಮುಂದೆ ಒಬ್ಬ ವ್ಯಕ್ತಿಯಾಗಿ ಗುರುತಿಸುವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು, ಶಿಕ್ಷಣದ ಹಕ್ಕು, ನ್ಯಾಯಯುತ ಮತ್ತು ಅನುಕೂಲಕರ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ಹಕ್ಕು, ಚಿಂತನೆ, ಆತ್ಮಸಾಕ್ಷಿ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು.
ಇತಿಹಾಸ
ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ವಿಶ್ವಸಂಸ್ಥೆಯು ಡಿಸೆಂಬರ್ 10, 1948ರಲ್ಲಿ ಮಾನವ ಹಕ್ಕುಗಳನ್ನು ಅಂಗೀಕರಿಸಿತು. ಇದು ಎರಡನೇ ಮಹಾಯುದ್ಧದ ನಂತರ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಪ್ರತಿ ವರ್ಷ ಡಿಸೆಂಬರ್ 10 ರಂದು ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತಿದೆ.
ಮಹತ್ವ
• ತಾರತಮ್ಯ ಮಾಡದೆ ಪ್ರತಿಯೊಬ್ಬರನ್ನೂ ಸಮಾನತೆಯಿಂದ ಕಾಣಬೇಕು ಎಂಬುದರ ಬಗ್ಗೆ ಸಾರ್ವಜನಿಕರಿಗೆ ತಿಳಿಸಿಕೊಡಲು ಈ ದಿನ ಸೂಕ್ತವಾಗಿದೆ.
• ಎಲ್ಲರೂ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ ಎಂಬುದನ್ನು ಸೂಚಿಸಲು ಮಾನವ ಹಕ್ಕು ದಿನ ಸಹಾಯಕವಾಗಿದೆ.
• ಮಾನವ ಹಕ್ಕುಗಳ ಸಾರ್ವತ್ರಿಕತೆ ಮತ್ತು ಅವಿಭಾಜ್ಯತೆಯ ಬಗ್ಗೆ ಜ್ಞಾನವನ್ನು ಹೆಚ್ಚಿಸಲು ಈ ದಿನ ವೇದಿಕೆ ಕಲ್ಪಿಸಲಾಗುತ್ತದೆ.
• ಮಾನವ ಹಕ್ಕುಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತದೆ.
• ಎಲ್ಲರಿಗೂ ನ್ಯಾಯ, ಸಮಾನತೆ, ಶಾಂತಿ ಮತ್ತು ಸ್ವಾತಂತ್ರ್ಯವನ್ನು ಅನುಸರಿಸಲು ಅವಕಾಶ ಕಲ್ಪಿಸಲಾಗುತ್ತದೆ
.