ಇಂದು ಅವರ ಜಯಂತಿ
ಹುಯಿಲಗೋಳ ನಾರಾಯಣರಾವ್ ಅವರು ಕವಿ, ಸಾಹಿತಿ, ನಾಟಕ ರಚನೆಯ ಮೂಲಕ ನಾಡಿನಾದ್ಯಂತ ಗುರುತಿಸಿಕೊಂಡವರು. ಇಂದಿಗೂ ಕನ್ನಡ ಸಾಹಿತ್ಯ ಲೋಕದ ಪ್ರಾತಸ್ಮರಣೀಯರಲ್ಲಿ ಒಬ್ಬರು. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಗೀತೆಯನ್ನು ರಚಿಸಿದಂತಹ ಪ್ರಸಿದ್ಧ ಕವಿಯಾದ ಗದುಗಿನ ವೀರನಾರಾಯಣ. ಹುಯಿಲಗೋಳ ನಾರಾಯಣರಾವ್ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಇಂದು ಅವರ ಜಯಂತಿ.
ಪರಿಚಯ
ಹುಯಿಲಗೋಳ ನಾರಾಯಣರಾವ್ ಅವರು ಅಕ್ಟೋಬರ್ 4, 1884 ರಂದು ಗದಗಿನ ಹುಯಿಲಗೋಳ ಎಂಬಲ್ಲಿ ಜನಿಸಿದರು. ಇವರ ತಂದೆ ಕೃಷ್ಣರಾಯರು ಹಾಗೂ ತಾಯಿ ರಾಧಾಬಾಯಿ. ಹುಯಿಲಗೋಳ ನಾರಾಯಣರಾವ್ ಅವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಗದಗ, ಗೋಕಾಕ, ಧಾರವಾಡದಲ್ಲಿ ಪೂರೈಸಿದರು. ಇವರಿಗೆ ಬಾಲ್ಯದಿಂದಲೂ ನಾಟಕಗಳನ್ನು ನೋಡುವ ಹವ್ಯಾಸವಿತ್ತು. ಹೀಗಾಗಿ ಅವರು ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೇ ಸ್ನೇಹಿತರ ಜೊತೆಗೂಡಿ ಇಂದ್ರಜೀತವಧೆ, ಗರುಡ ಗರ್ವಭಂಗ ಎಂಬ ನಾಟಕಗಳನ್ನು ತಾವೇ ರಚಿಸಿ ನಟಿಸುತ್ತಿದ್ದರು.
ಧಾರವಾಡದಲ್ಲಿ 1902ರಲ್ಲಿ ಮೆಟ್ರಿಕ್ ಪರೀಕ್ಷೆ ಪೂರ್ಣಗೊಳಿಸಿದ ನಂತರ ಉನ್ನತ ಶಿಕ್ಷಣಕ್ಕಾಗಿ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆದರು. ನಂತರ ಅವರು ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು. ಅಲ್ಲಿ ದ.ರಾ.ಬೇಂದ್ರೆಯವರು ವಿದ್ಯಾರ್ಥಿಯಾಗಿದ್ದರು. 1908ರಲ್ಲಿ ಬೆಂಗಳೂರಿನಲ್ಲಿ ನಡೆದ ಮೊದಲ ಸಾಹಿತ್ಯ ಸಮ್ಮೇಳನಕ್ಕೆ ನಾರಾಯಣರು ಭಾಗವಹಿಸಿದ್ದರು. ನಂತರ ಅವರು 1910ರಲ್ಲಿ ವಜ್ರಮುಕುಟ ನಾಟಕ ಬರೆದರು. ಕೆಲ ಸಮಯದ ನಂತರ ಅವರು ಶಿಕ್ಷಕ ವೃತ್ತಿಯನ್ನು ತ್ಯಜಿಸಿ, ಮುಂಬೈಗೆ ತೆರಳಿ, ಕಾನೂನು ಪದವಿಯನ್ನು ಪಡೆದರು. 1911ರಲ್ಲಿ ವಕೀಲ ವೃತ್ತಿಯನ್ನು ಗದಗದಲ್ಲಿ ಆರಂಭಿಸಿದರು.
ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ
ಹುಯಿಲಗೋಳ ನಾರಾಯಣರಾವ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದರು. ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು. ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ ಜೈ ಕರ್ನಾಟಕ ವೃತ್ತ , ಪ್ರಭಾತ , ಧನಂಜಯ ಸೇರಿದಂತೆ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. ಜೊತೆಗೆ ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನೂ ರಚಿಸುತ್ತಿದ್ದರು. ನಾರಾಯಣರಾಯರು ‘ಮೂಡಲು ಹರಿಯಿತು’ ಎಂಬ ಕಾದಂಬರಿಯನ್ನೂ ಬರೆದಿದ್ದರು. ‘ಕನಕ ವಿಲಾಸ’, ‘ಪ್ರೇಮಾರ್ಜುನ’, ‘ಮೋಹಹರಿ’, ‘ಅಜ್ಞಾತವಾಸ’, ‘ಪ್ರೇಮ ವಿಜಯ’, ‘ಸಂಗೀತ’, ‘ಕುಮಾರರಾಮ ಚರಿತ’, ‘ವಿದ್ಯಾರಣ್ಯ’, ‘ಭಾರತ ಸಂಧಾನ’, ‘ಉತ್ತರ ಗೋಗ್ರಹಣ’, ‘ಸ್ತ್ರೀಧರ್ಮ ರಹಸ್ಯ’, ’ಶಿಕ್ಷಣ ಸಂಭ್ರಮ’, ‘ಪತಿತೋದ್ಧಾರ’ ಮತ್ತು ಪುನರಾಗಮನ ಹಾಗೂ ಶ್ರೀ ಕನಕದಾಸ ಎಂಬ ಪ್ರಮುಖ ನಾಟಕಗಳನ್ನು ರಚಿಸಿದ್ದರು.
ಹುಯಿಲಗೋಳ ನಾರಾಯಣರಾವ್ ಅವರು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಗೀತೆಯನ್ನು ರಚಿಸಿದ್ದರು. ಈ ಗೀತೆ ಅಂದು ಕರ್ನಾಟಕ ರಾಜ್ಯದ ನಾಡಗೀತೆಯೆಂದು ಖ್ಯಾತಿ ಪಡೆದಿತ್ತು. ಬೆಳಗಾವಿ ಜಿಲ್ಲಾ ಟಿಳಕವಾಡಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಉದಯವಾಗಲಿ ಚೆಲುವ ಕನ್ನಡನಾಡು ಗೀತೆಯನ್ನು ಪ್ರಸಿದ್ಧ ಗಾಯಕಿ ಗಂಗೂಬಾಯಿ ಹಾನಗಲ್ ಹಾಡಿದ್ದರು.
ಸಾಧನೆಗಳು
ಹುಯಿಲಗೋಳ ನಾರಾಯಣರಾವ್ ಅವರು ನಾಟ್ಯ ವಿಲಾಸಿ ಮಿತ್ರರ ಸಹಕಾರದೊಂದಿಗೆ ಗದಗಿನ ವಿದ್ಯಾದಾನ ಸಮಿತಿಯ ಪ್ರೌಢಶಾಲೆ ಸ್ಥಾಪನೆ ಮಾಡಿದ್ದರು. ಜೊತೆಗೆ ಅವರು ಗದಗಿನ ಎರಡು ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದ್ದು, ಯಂಗ್ ಮೆನ್ಸ್ ಫುಟ್ಬಾಲ್ ಕ್ಲಬ್ ಅನ್ನು ಸ್ಥಾಪಿಸಿದರು.
ಪ್ರಶಸ್ತಿ
ಹುಯಿಲಗೋಳ ನಾರಾಯಣರಾವ್ ಅವರಿಗೆ 1925ರಲ್ಲಿ ಗದಗ-ಬೆಟಗೇರಿ ನಾಗರಿಕರಿಂದ ಸನ್ಮಾನ ಮಾಡಲಾಯಿತು. 1956 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹುಯಿಲಗೋಳ ನಾರಾಯಣರಾವ್ ಅವರು ಜುಲೈ 4, 1971 ರಂದು ಗದಗಿನಲ್ಲಿ ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು. ಇವರು ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಇಂದಿಗೂ ಸ್ಮರಣೀಯ.