ದಕ್ಷಿಣಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ಕಾಲಘಟ್ಟಕ್ಕೆ ತಿಲಾಂಜಲಿಯಿಟ್ಟು ಹೊಸ ಪರ್ವಕಾಲಕ್ಕೆ ಸಾಕ್ಷಿಯಾದ ದಿನ ಸೆಪ್ಟೆಂಬರ್‌ 17. ಡೆಕ್ಕನ್‌ ಪ್ರಸ್ಥಭೂಮಿಗೆ ಹಿಡಿದಿದ್ದ ಗ್ರಹಣ ಅತ್ಯಗೊಂಡು ಹೈದರಾಬಾದ್‌ ನಿಜಾಮನ ದುರಾಡಳಿತದಿಂದ ಮುಕ್ತರಾದ ದಿನ.
ಇಡೀ ದೇಶ ಆಗಸ್ಟ್‌ 15, 1947ರಂದು ಬ್ರಿಟಿಷ್‌ ಸರ್ಕಾರದ ಕಪಿಮುಷ್ಟಿಯಿಂದ ಹೋರಾಟದ ಮೂಲಕ ಸ್ವಾತಂತ್ರ್ಯವನ್ನು ಪಡೆದು ಅದರ ಸಂಭ್ರಮದಲ್ಲಿದ್ದರೆ, ಇತ್ತ ಹೈದರಾಬಾದ್‌ ಸಂಸ್ಥಾನದ ಆಡಳಿತದಡಿಯಲ್ಲಿದ್ದ ಜನರಿಗೆ ಮಾತ್ರ ಸ್ವಾತಂತ್ರ್ಯ ಪ್ರಾಪ್ತಿಯಾಗಿದ್ದು ಒಂದು ವರ್ಷದ ನಂತರ. ಹೀಗಾಗಿ ಇಲ್ಲಿನ ಜನರು ಸೆಪ್ಟೆಂಬರ್‌ 17, 1948ರಂದು ತಾವು ಪಡೆದ ಸ್ವಾತಂತ್ರ್ಯ ದಿನವನ್ನು ಹೈದರಾಬಾದ್‌ ವಿಮೋಚನಾ ದಿನವೆಂದು ಆಚರಿಸುತ್ತಾರೆ.


ಕರ್ನಾಟಕದ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಆಚರಿಸಲಾಗುವ ಒಂದು ಹಬ್ಬವೂ ಇದಾಗಿದೆ. ಭಾರತದ ವಿಭಜನೆ ಮತ್ತು ಹೈದರಾಬಾದ್‌ ರಾಜ್ಯದಲ್ಲಿನ ದಂಗೆಗಳ ನಂತರ 1948ರಲ್ಲಿ ಭಾರತವು ಹೈದರಾಬಾದ್‌ ಅನ್ನು ಅಧಿಕೃತವಾಗಿ ಮರಳಿ ತನ್ನ ಭೂಭಾಗವಾಗಿಸಿಕೊಂಡ ದಿನ ಇದಾಗಿದೆ.


ಇತಿಹಾಸ
1947ರಲ್ಲಿ ವಿಭಜನೆಯ ಸಂದರ್ಭದಲ್ಲಿ ಕೆಲ ಪ್ರಾಂತ್ಯಗಳಲ್ಲಿ ಸ್ವ-ಸರ್ಕಾರವನ್ನು ಹೊಂದಿದ್ದ ಭಾರತದ ರಾಜಪ್ರಭುತ್ವದ ರಾಜ್ಯಗಳು ಬ್ರಿಟಿಷರೊಂದಿಗೆ ಸಹಾಯಕ ಮೈತ್ರಿಗಳಿಗೆ ಒಳಪಟ್ಟಿದ್ದವು. ಆದರೆ ಬಿಟ್ರಿಷರು ಭಾರತೀಯ ಸ್ವಾತಂತ್ರ್ಯ ಕಾಯಿದೆ 1947 ರೊಂದಿಗೆ ಈ ಎಲ್ಲಾ ಮೈತ್ರಿಗಳನ್ನು ಧಿಕ್ಕರಿಸಿದರು. ಹೀಗಾಗಿ ಸಂಪೂರ್ಣ ಸ್ವಾತಂತ್ರ್ಯವನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ರಾಜ್ಯಗಳಿಗೆ ಬಿಟ್ಟುಕೊಟ್ಟರು.


1947ರ ಹೊತ್ತಿಗೆ ಭಾರತ ಸ್ವಾತಂತ್ರ್ಯ ಪಡೆದುಕೊಂಡಾಗ ಅನೇಕ ಪ್ರಾಂತ್ಯಗಳು ಭಾರತದೊಂದಿಗೆ ಸೇರಿಕೊಂಡಿತು. ಆದರೆ ಬೀದರ್‌ , ಗುಲ್ಬರ್ಗಾ(ಈಗಿನ ಕಲಬುರಗಿ) ಹಾಗೂ ರಾಯಚೂರು ಈಶಾನ್ಯ ಜಿಲ್ಲೆಗಳ ದೊಡ್ಡ ಭಾಗಗಳನ್ನು ಒಳಗೊಂಡಿದ್ದ ಹೈದರಾಬಾದ್‌ ಭಾರತದೊಂದಿಗೆ ಸೇರಲು ಒಪ್ಪಿಕೊಳ್ಳದೆ ಪಾಕಿಸ್ತಾನದೊಂದಿಗೆ ಸೇರಲು ಬಯಸಿತ್ತು. ಹೈದರಾಬಾದ್ ಅನ್ನು ಆಳುತ್ತಿದ್ದ ನಿಜಾಮನು ಭಾರತಕ್ಕೆ ಸೇರಲು ನಿರಾಕರಿಸಿದ್ದನು. ನಿಜಾಮನು ತನ್ನ ರಾಜ್ಯವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವ ಸಲುವಾಗಿ ತನ್ನ ಖಾಸಗಿ ಸೈನ್ಯ ರಜಾಕಾರಪಡೆಯನ್ನು ನೇಮಿಸಿದನು. ವಿಮೋಚನಾ ಹೋರಾಟ ಹತ್ತಿಕ್ಕಲು ತನ್ನ ಬಲಗೈ ಬಂಟ ಖಾಸಿಂ ರಜ್ವಿ ಎಂಬಾತನಿಗೆ ನಿಜಾಮ‌‌ ಸಂಪೂರ್ಣ ಅಧಿಕಾರ ಕೊಟ್ಟನು.

ರಜಾಕಾರರನ ದೌರ್ಜನ್ಯ
ಹಿಂದೂ ಸಮುದಾಯದ ಮೇಲೆ ಸಾಕಷ್ಟು ದಾಳಿ ನಡೆಸಿದ್ದಾರೆ. ಮನೆ ಹಾಗೂ ದೇವಸ್ಥಾನಗಳಲ್ಲಿ ಲೂಟಿ ಮಾಡುವುದು ಮಹಿಳೆಯರ ಮೇಲೆ ಅತ್ಯಾಚಾರ, ,ರಾಷ್ಟ್ರೀಯ ವಿದ್ಯಾಲಯಗಳ ಮೇಲೆ ದಾಳಿ ಮಾಡುವುದು ಇವೆಲ್ಲ ಪ್ರಜಾ ಚಳುವಳಿಯನ್ನು ಹತ್ತಿಕ್ಕಲು ರಜಾಕಾರರು ಕಂಡುಕೊಂಡ ತಂತ್ರವಾಗಿದೆ.


ಆಪರೇಷನ್ ಪೋಲೋ

ಬಂಡುಕೋರರು ಹೈದರಾಬಾದ್‌ ನಲ್ಲಿ ಕಮ್ಯುನಿಸ್ಟ್‌ ರಾಜ್ಯವನ್ನು ಸ್ಥಾಪಿಸುವ ಆತಂಕದಿಂದ ಮತ್ತು ಮುಸ್ಲಿಂ ಮೂಲಭೂತವಾದಿ ರಜಾಕರ್‌ ಸೇನೆಯಿಂದ ಆಗುವಂತಹ ದೌರ್ಜನ್ಯವನ್ನು ತಪ್ಪಿಸುವ ಸಲುವಾಗಿ ಭಾರತ ಸರ್ಕಾರ ಹೈದರಾಬಾದ್‌ ನಿಜಾಮನಿಗೆ ಆರ್ಥಿಕವಾಗಿ ದಿಗ್ಬಂಧನವನ್ನು ಹೇರಿತು. ಯಾವುದೇ ಬಾಹ್ಯ ವ್ಯವಹಾರಕ್ಕೆ ಕಡಿವಾಣ ಹಾಕಿತು.


ನಂತರ ಭಾರತದಲ್ಲಿ ಅಂದಿನ ಗೃಹಮಂತ್ರಿಯಾಗಿದ್ದ ಸರ್ದರ್‌ ವಲ್ಲಭಭಾಯ್‌ ಪಟೇಲರು ನಿಜಾಮನ ವಿರುದ್ಧ ಆಪರೇಷನ್‌ ಪೋಲೋ ಎಂಬ ಕಾರ್ಯಾಚರಣೆ ನಡೆಸಿತು. ಭಾರತದ ಸೈನ್ಯ ಹೈದರಾಬಾದ್‌ ನ ಪ್ರಾಂತವನ್ನು ಸುತ್ತುವರಿಯಿತು. ದಕ್ಷಿಣ ಭಾರತದ ಪ್ರಧಾನ ದಂಡನಾಯಕ ಲೆಫ್ಟಿನೆಂಟ್‌ ಜನರಲ್‌ ಮಹಾರಾಜ ಸಿಂಗ್‌ ನೇತೃತ್ವದಲ್ಲಿ ಸೈನ್ಯ ಮುನ್ನಡೆಯಿತು. ಈ ವೇಳೆ ನಿಜಾಮ ಮತ್ತು ಆತನ ಸೈನ್ಯವು ಭಾರತಕ್ಕೆ ಶರಣಾಯಿತು. ಅಂದಿನಿಂದ ಇಂದಿನವೆರೆಗೂ ಸ್ಥಳೀಯರು ಈ ದಿನವನ್ನು ಪ್ರಾದೇಶಿಕ ಸ್ವಾತಂತ್ರ್ಯ ದಿನವಾಗಿ ಸ್ಮರಿಸಲಾಗುತ್ತಿದೆ.


ಹೈದರಾಬಾದ್ ಮುಕ್ತಿಗಾಗಿ ಇನ್ನಿತರ ಪ್ರಯತ್ನಗಳು
ಭಾರತಕ್ಕೆ ಸ್ವಾತಂತ್ರ್ಯ ದೊರೆತ ತಕ್ಷಣ ಹೈದರಾಬಾದ್ ಸಂಸ್ಥಾನದಲ್ಲಿ ಅಹಿಂಸಾತ್ಮಕ ಚಳುವಳಿಯ ನೇತಾರರಾದ ಸ್ವಾಮಿ ರಾಮಾನಂದ ತೀರ್ಥರು, ಡಾ. ಮೇಲ್ಕೋಟೆಯವರು ಹಾಗೂ ಇತರ ಕೆಲವು ಚಳುವಳಿಗಾರರು ಆಗಸ್ಟ್‌ 15, 1947ರ ಬೆಳಗಿನ ಜಾವ ಮೂರು ಗಂಟೆಯ ಸಮಯಕ್ಕೆ ಹೈದರಾಬಾದಿನ ಸುಲ್ತಾನ ಬಜಾರ ಎಂಬ ಸಾರ್ವಜನಿಕ ಸ್ಥಳದಲ್ಲಿ ಭಾರತದ ತ್ರಿವರ್ಣಧ್ವಜ ಹಾರಿಸಿದರು.
ರಾಯಚೂರಿನಲ್ಲಿ ಆಗಸ್ಟ್ 14ರ ನಟ್ಟಿರುಳಿನಲ್ಲಿ ಮಟಮಾರಿ ನಾಗಪ್ಪ, ಚಂದ್ರಯ್ಯ, ಶರಭಯ್ಯ ಮತ್ತು ಬಸಣ್ಣ ಎನ್ನುವ ವಿದ್ಯಾರ್ಥಿಗಳು ಪೊಲೀಸ್‌ ಕಾವಲನ್ನು ಭೇದಿಸಿ ಜಿಲ್ಲಾಧಿಕಾರಿಯ ಕಚೇರಿಯ ಮೇಲೆ ತ್ರಿವರ್ಣಧ್ವಜ ಹಾರಿಸಿದರು. 1948 ಫೆಬ್ರುವರಿ 15ರಂದು ಮರಡಿ ಆಶ್ರಮದ ತಪಸ್ವಿ ಭೀಮಜ್ಜನವರು ಸಾರ್ವಜನಿಕ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಈ ಸತ್ಯಾಗ್ರಹದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಈ ಸತ್ಯಾಗ್ರಹಕ್ಕೆ ಏಕಾಏಕಿ ದಾಳಿ ಮಾಡಿದ ಪೊಲೀಸರು ಹಾಗೂ ರಜಾಕಾರರು ಸತ್ಯಾಗ್ರಹಿಗಳ ಮೇಲೆ ಲಾಠಿ ಪ್ರಹಾರ ಮಾಡಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.